ಶೌಚಕ್ಕೆ ಕಟ್ಟಡವಿದ್ದರೆ ಸಾಕೇ, ಅಗತ್ಯ ಸೌಲಭ್ಯ ಬೇಡವೇ?

ಬೀದರ್: ಸಾರ್ವಜನಿಕರಿಗೆ ಸದುಪಯೋಗವಾಗ ಬೇಕಿದ್ದ ಶೌಚಾಲಯ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಲ್ಲಿ ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳು ತೋರಿದ ಇಚ್ಛಾಶಕ್ತಿ ಕೊರತೆ ಹಾಗೂ ನಿರ್ಲಕ್ಷ್ಯವು ಜನರಿಗೆ ತೊಂದರೆಯುಂಟು ಮಾಡಬಹುದು ಎಂಬುವುದಕ್ಕೆ ಭಾಲ್ಕಿಯ ವಾರ್ಡ್ ನಂಬರ್ 2ರ ಅಶೋಕ್ ನಗರ್ ಬಡಾವಣೆ ನಿದರ್ಶನವಾಗಿದೆ.
ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಸುಮಾರು 10 ರಿಂದ 12 ವರ್ಷ ಹಿಂದೆ ಶೌಚಾಲಯ ಕಟ್ಟಡ ನಿರ್ಮಿಸಲಾಗಿದ್ದು, ಆದರೆ ಅದಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಇದರಿಂದಾಗಿ ಸಾರ್ವಜನಿಕರು ಶೌಚಕ್ಕಾಗಿ ಪರದಾಡುವ ಪರಿಸ್ಥಿತಿ ತಪ್ಪದಾಗಿದೆ.
ಶೌಚಾಲಯವಿದೆ, ಸೌಕರ್ಯವಿಲ್ಲ :
ಸರಕಾರ ಶೌಚಾಲಯವೇನೋ ನಿರ್ಮಿಸಿದೆ. ಆದರೆ ನೀರಿನ ವ್ಯವಸ್ಥೆ ಮಾಡಿ ಟೈಲ್ಸ್ ಕೂಡಿಸಿಲ್ಲ. ಹೀಗಾಗಿ 10-12 ವರ್ಷಗಳ ಹಿಂದೆ ನಿರ್ಮಿತವಾದ ಈ ಶೌಚಾಲಯವು ಉದ್ಘಾಟನೆ ಭಾಗ್ಯವನ್ನೂ ಕಂಡಿಲ್ಲ. ಅಶೋಕ್ ನಗರ್ ಬಡಾವಣೆಯು ಪಕ್ಕದಲ್ಲಿಯೇ ಹಿರೇಮಠ್ ಸಂಸ್ಥಾನ, ಭಾಲ್ಕಿಯ ಐತಿಹಾಸಿಕ ಕೋಟೆ, ಪುರಸಭೆಯ ಕಾರ್ಯಾಲಯವಿದ್ದು, ಇದೀಗ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ.
ತಪ್ಪದ ಬಯಲು ಶೌಚ ಸಮಸ್ಯೆ :
ಶ್ರಮಿಕರೇ ಹೆಚ್ಚಾಗಿ ವಾಸಿಸುವ ಈ ಬಡಾವಣೆಯಲ್ಲಿ ಸಾರ್ವಜನಿಕ ಶೌಚಾಲಯದ ಅವಶ್ಯಕತೆ ಇದೆ. ಆದರೆ, ಶೌಚಾಲಯದ ಕಟ್ಟಡವಿದ್ದರೂ ಬಳಸದ ಪೀಕಲಾಟದಿಂದ ಅವರು ಶೌಚಕ್ಕಾಗಿ ಬಯಲಿಗೆ ಹೋಗುವ ಪರಿಸ್ಥಿತಿಯಿದೆ.
ಗಬ್ಬೆದ್ದು ನಾರುತ್ತಿದೆ ರಸ್ತೆ :
ಅಶೋಕ್ ನಗರ್ ಬಡಾವಣೆಯ ಸಾರ್ವಜನಿಕರು ಶೌಚಾಲಯ ಇಲ್ಲದ ಪರಿಣಾಮವಾಗಿ ಹತ್ತಿರದ ರಸ್ತೆ ಪಕ್ಕದಲ್ಲಿಯೇ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.
ಇನ್ನು ಮಹಿಳೆಯರು ಬರೀ ಕತ್ತಲಲ್ಲಿಯೇ ಶೌಚಾಲಯಕ್ಕೆ ಹೋಗಬೇಕಿದ್ದು, ರಸ್ತೆಯಲ್ಲಿ ಯಾರಾದರೂ ಬಂದರೆ ತೊಂದರೆಯಾಗುತ್ತದೆ ಎಂದು ಭಯಪಡುವ ವಾತಾವರಣವಿದೆ. ಹೀಗಾಗಿ ಬಯಲು ಶೌಚದಿಂದ ರಸ್ತೆ ಕೂಡ ಗಬ್ಬೆದ್ದು ನಾರುತ್ತಿದ್ದು, ಜನರಿಗೆ ಮುಜುಗರ ತರುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ನಿಲ್ಲಲಿ :
ನಗರಸಭೆಯ ಅಧಿಕಾರಿಗಳು ಶೌಚಾಲಯ ಕಾಮಗಾರಿ ಪೂರ್ಣಗೊಳಿಸಲು ಸಂಪೂರ್ಣವಾಗಿ ನಿರ್ಲಕ್ಷವಹಿಸಿದ್ದು, ಸಾರ್ವಜನಿಕರ ಸಮಸ್ಯೆಗಳನ್ನು ಕಡೆಗಣಿಸಿದ್ದಾರೆ. ಸ್ಥಳೀಯರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲದಂತಾಗಿದ್ದು, ನಗರಸಭೆಯ ಮುಖ್ಯಾಧಿಕಾರಿ ಸಂಗಮೇಶ್ ಕಾರಬಾರಿಗೆ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಬೇಗ ಕಾಮಗಾರಿ ಮುಗಿಸಲಿ :
ಆದಷ್ಟು ಬೇಗ ಕಾಮಗಾರಿ ಮುಗಿಸಿ ಶೌಚಾಲಯ ವ್ಯವಸ್ಥೆ ಕಲ್ಪಿಸಿ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಭಾಲ್ಕಿ ನಗರಸಭೆಯ ಮುಖ್ಯಾಧಿಕಾರಿ ಸಂಗಮೇಶ್ ಕಾರಬಾರಿ ಅವರಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ.
ಅಶೋಕ್ ನಗರ ಬಡಾವಣೆಯಲ್ಲಿ ಶೌಚಾಲಯ ಕಾಮಗಾರಿ ದಶಕ ಕಳೆದರೂ ಪೂರ್ತಿಯಾಗಿಲ್ಲ. ಇದರಿಂದ ಸಾರ್ವಜನಿಕರು ಶೌಚಾಲಯ ವ್ಯವಸ್ಥೆ ಇಲ್ಲದೆ ಸಮಸ್ಯೆ ಎದುರಿಸುತ್ತಿರುವ ಕುರಿತು ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಉಪಯೋಗವಾಗಿಲ್ಲ. ಇದೀಗ ಇರುವ ಶೌಚಾಲಯವನ್ನಾದರೂ ದುರಸ್ತಿ ಮಾಡಬೇಕು. ಇಲ್ಲವೇ ಹೊಸದಾದರೂ ನಿರ್ಮಾಣ ಮಾಡಬೇಕು.
-ಆದೇಶ, ಭಾವಿಕಟ್ಟೆ ಸ್ಥಳೀಯ ನಿವಾಸಿ
ಅಶೋಕ್ ನಗರದ ಶೌಚಾಲಯದಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಅಲ್ಲಿನ ಸಾರ್ವಜನಿಕರು ರಸ್ತೆ ಮೇಲೆಯೇ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಈ ಬಡಾವಣೆಯ ಶೌಚಾಲಯ ವ್ಯವಸ್ಥೆ ಕಲ್ಪಿಸಿ, ನಿರ್ವಹಣೆಗೆ ಒಬ್ಬರನ್ನು ನೇಮಿಸಬೇಕು.
-ಪ್ರದೀಪ್ ಮೋರೆ, ಭಾಲ್ಕಿ
ವಾರ್ಡ್ ನಂಬರ್ 2 ಹಾಗೂ 8ರಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಎಸ್ಟಿಮೇಟ್ ತಯಾರಿಸಲಾಗಿದೆ. ಯಾವುದಾದರೂ ಅನುದಾನ ಬಂದರೆ ನಿರ್ಮಿಸಲಾಗುವುದು. ಮೊದಲಿದ್ದ ಶೌಚಾಲಯವನ್ನು ಸಾರ್ವಜನಿಕರು ಸರಿಯಾಗಿ ಉಪಯೋಗಿಸಲಿಲ್ಲ. ಎಲ್ಲವೂ ನಗರಸಭೆಯೇ ವ್ಯವಸ್ಥೆಯನ್ನು ಸರಿಪಡಿಸುವುದು ಕಷ್ಟ. ಅದಕ್ಕೆ ಸಾರ್ವಜನಿಕರ ಸಹಕಾರ ಕೂಡ ಮುಖ್ಯ. ಮೊದಲಿದ್ದ ಶೌಚಾಲಯಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಡಲಾಗುವುದು. ಅದನ್ನಾದರೂ ಸಾರ್ವಜನಿಕರು ಮುಂದಿನ ದಿನಗಳಲ್ಲಿ ಸರಿಯಾಗಿ ಉಪಯೋಗಿಸಿಕೊಳ್ಳಬೇಕು.
-ಅಮರ್ ಮಠಪತಿ, ಜೆಇ ಭಾಲ್ಕಿ ನಗರಸಭೆ






