ತನಗರಿವಿಲ್ಲದಂತೆಯೇ ಭಾರತವು ಅಮೆರಿಕ, ರಶ್ಯ, ಮ್ಯಾನ್ಮಾರ್ ಒಳಗೊಂಡ ಪ್ರಾಕ್ಸಿ ಯುದ್ಧಗಳಿಗೆ ನೆಲವಾಗಿದೆಯೇ?

ಮ್ಯಾಥ್ಯೂ ವ್ಯಾನ್ಡೈಕ್
ಭಾರತದ ಬೇಹು ಹಾಗೂ ಇತರ ವ್ಯವಸ್ಥೆಯ ಗಮನಕ್ಕೆ ಬಾರದೆ ನಮ್ಮ ಪ್ರದೇಶಗಳು ವಿದೇಶಿ ಡ್ರೋನ್ಗಳು ಮತ್ತು ಮಾದಕವಸ್ತುಗಳ ಸಾಗಣೆಗೆ ನೆಲೆಯಾದದ್ದು ಹೇಗೆ?
ಭಾರತ ಗೊತ್ತಿಲ್ಲದಂತೆಯೇ ಅಮೆರಿಕ, ರಶ್ಯ, ಮ್ಯಾನ್ಮಾರ್ ಒಳಗೊಂಡ ಪ್ರಾಕ್ಸಿ ಯುದ್ಧಗಳಿಗೆ ನೆಲವಾಗಿದೆಯೇ?
ಭಾರತದೊಳಗೆ ಈ ಜಾಲವನ್ನು ನಿಜವಾಗಿಯೂ ಸಕ್ರಿಯಗೊಳಿಸಿದವರು ಯಾರು? ಮತ್ತಿದು ಗುಪ್ತಚರ ವೈಫಲ್ಯವೇ? ರಶ್ಯದ ಇಂಟಲಿಜೆನ್ಸ್ ಸುಳಿವು ನೀಡುತ್ತಿದೆ ಎಂದಾದರೆ, ಅದು ಭಾರತದ ಆಂತರಿಕ ಭದ್ರತಾ ಸಾಮರ್ಥ್ಯದ ಬಗ್ಗೆ ಏನು ಹೇಳುತ್ತದೆ? ಸಶಸ್ತ್ರ ಸಂಘರ್ಷಕ್ಕೆ ಹಣಕಾಸು ಒದಗಿಸಲು ಮತ್ತು ಇಲ್ಲಿ ಅಸ್ಥಿರತೆ ತರಲು ಮಾನವೀಯ ಮತ್ತು ಧಾರ್ಮಿಕ ಜಾಲಗಳನ್ನು ಬಳಸಲಾಗುತ್ತಿದೆಯೇ?
ಇತ್ತೀಚೆಗೆ ಅಮೆರಿಕನ್ ಮರ್ಸಿನರಿ ಮ್ಯಾಥ್ಯೂ ವ್ಯಾನ್ಡೈಕ್ ಮತ್ತು ಆರು ಉಕ್ರೇನಿಯನ್ನರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ. ಮ್ಯಾನ್ಮಾರ್ ಬಂಡುಕೋರರಿಗೆ ಸಹಾಯ ಮಾಡಿದ ಮತ್ತು ಡ್ರೋನ್ ತರಬೇತಿ ನೀಡಿದ್ದಾರೆ ಎಂಬ ಆರೋಪ ಈ ಬಂಧಿತರ ಮೇಲಿದೆ.
ಇದರೊಂದಿಗೆ, ಚಿನ್ ಮಾದಕವಸ್ತು ಕಾರ್ಯಾಚರಣೆ, ಯುಎಸ್ ಇವಾಂಜೆಲಿಕಲ್ ಫಂಡಿಂಗ್, ಉಕ್ರೇನಿಯನ್ ಯೋಧರು, ರಶ್ಯದ ಗುಪ್ತಚರ ಮತ್ತು ಮಣಿಪುರಕ್ಕೆ ಮಾದಕವಸ್ತು ಸಾಗಾಟ ಜಾಲದ ಸಂಪರ್ಕ ಬಯಲಿಗೆ ಬಂದಿದೆ.
ಆದರೆ, ಈ ಅಂತರ್ರಾಷ್ಟ್ರೀಯ ಕೈವಾಡ ಇಷ್ಟು ದಿನ ಹೇಗೆ ಪತ್ತೆಯಾಗದೆ ಉಳಿದಿತ್ತು ಎಂಬ ಗಂಭೀರ ಪ್ರಶ್ನೆ ಎದ್ದಿದೆ.
ಮಾರ್ಚ್ 13ರ ರಾತ್ರಿ ಎನ್ಐಎ ಮೂರು ವಿಮಾನ ನಿಲ್ದಾಣಗಳಲ್ಲಿ ಅಮೆರಿಕನ್ ಪ್ರಜೆ ಮ್ಯಾಥ್ಯೂ ವ್ಯಾನ್ಡೈಕ್ ಮತ್ತು ಆರು ಉಕ್ರೇನಿಯನ್ನರನ್ನು ಬಂಧಿಸಿದಾಗ, ಅದನ್ನು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಎನ್ನಲಾಯಿತು.
ವಿದೇಶಿ ಪ್ರಜೆಗಳು ಮಿಜೋರಾಂಗೆ ಅಕ್ರಮವಾಗಿ ಪ್ರವೇಶಿಸಿ, ಮ್ಯಾನ್ಮಾರ್ಗೆ ದಾಟಿ, ಜನಾಂಗೀಯ ಸಶಸ್ತ್ರ ಗುಂಪುಗಳಿಗೆ ಡ್ರೋನ್ ಯುದ್ಧದ ತರಬೇತಿ ನೀಡಿದ್ದಾರೆ. ಅಲ್ಲದೆ, ಯುರೋಪಿಯನ್ ಡ್ರೋನ್ಗಳನ್ನು ಕಳ್ಳಸಾಗಣೆ ಮಾಡಿದ್ದಾರೆ.
ಯುಎಪಿಎ ಕಾಯ್ದೆಯಡಿಯಲ್ಲಿ ಆ ಏಳು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ವ್ಯಾನ್ಡೈಕ್ನನ್ನು ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಆರು ಉಕ್ರೇನಿಯನ್ನರಲ್ಲಿ ಸ್ಟೆಫನ್ಕಿವ್ ಮರಿಯನ್, ಹೊಂಚರುಕ್ ಮ್ಯಾಕ್ಸಿಮ್ ಮತ್ತು ಕಾಮಿನ್ಸ್ಕಿ ವಿಕ್ಟರ್ ಈ ಮೂವರನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಹರ್ಬಾ ಪೆಟ್ರೋ, ಸ್ಲೈವಿಯಾಕ್ ತಾರಸ್, ಇವಾನ್ ಸುಕ್ಮನೋವ್ಸ್ಕಿ ಎಂಬ ಇತರ ಮೂವರನ್ನು ಲಕ್ನೊ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ದಿಲ್ಲಿ ನ್ಯಾಯಾಲಯ ಎಲ್ಲಾ ಏಳು ಜನರನ್ನು ಮಾರ್ಚ್ 27ರವರೆಗೆ ಎನ್ಐಎ ಕಸ್ಟಡಿಗೆ ನೀಡಿದೆ.
ಆದರೆ, ಇಲ್ಲಿ ವಿಷಯದ ಗಂಭೀರತೆ ಎಂಥದು ಎಂಬುದನ್ನು ‘ದಿ ಕ್ವಿಂಟ್’ ತನಿಖಾ ವರದಿ ತೋರಿಸುತ್ತಿದೆ.
ಅದರ ಪ್ರಕಾರ, ಇದೆಲ್ಲದರ ಹಿಂದೆ ಚಿನ್ ಬಂಡುಕೋರರ ಡ್ರಗ್ ಸಾಮ್ರಾಜ್ಯ, ಅಮೆರಿಕನ್ ಇವಾಂಜೆಲಿಕಲ್ ಚರ್ಚ್ ಫಂಡಿಂಗ್, ರಶ್ಯದ ಯೋಧರು, ಮ್ಯಾನ್ಮಾರ್ನೊಳಗಿನ ರಶ್ಯದ ಗುಪ್ತಚರ ಕೇಂದ್ರಗಳು ಮತ್ತು ಚಿನ್ ರಾಜ್ಯದಿಂದ ಮಣಿಪುರದ ಮೂಲಕ ಭಾರತಕ್ಕೆ ಹರಿಯುವ ಮಾದಕವಸ್ತು ಪೈಪ್ಲೈನ್ ಅನ್ನು ಸಂಪರ್ಕಿಸುವ ಜಾಲದ ಸಂಪರ್ಕ ಇದೆ.
ಅದರಲ್ಲೂ, ಬರ್ಮಾದ ಚಿನ್ ರಾಷ್ಟ್ರೀಯ ರಕ್ಷಣಾ ಪಡೆ ಸಿಎನ್ಡಿಎಫ್ನ ಉಪಾಧ್ಯಕ್ಷ ಪೀಟರ್ ಥಾಂಗ್ ಈ ಜಾಲದ ಕೇಂದ್ರ ವ್ಯಕ್ತಿಯಾಗಿದ್ದಾನೆ ಎಂಬುದನ್ನು ತನಿಖೆಗೆ ನಿಕಟವಾಗಿರುವ ಹಲವು ಮೂಲಗಳು ಹೇಳುತ್ತಿರುವುದಾಗಿ ತನಿಖಾ ಪತ್ರಕರ್ತ ವಿ.ಕೆ. ಶಶಿಕುಮಾರ್ ಅವರ ವರದಿ ಹೇಳುತ್ತಿದೆ.
ಸಿಎನ್ಡಿಎಫ್ 2021ರಲ್ಲಿ ಬರ್ಮಾದ ಚಿನ್ ರಾಜ್ಯದ ಫಾಲಂನಲ್ಲಿ ಸ್ಥಾಪಿಸಲಾದ ಚಿನ್ ರಾಷ್ಟ್ರೀಯ ಸಂಘಟನೆಯ (ಸಿಎನ್ಒ) ಸಶಸ್ತ್ರ ವಿಭಾಗ. ಇದು ಪಶ್ಚಿಮ ಚಿನ್ ರಾಜ್ಯದಲ್ಲಿ ಮ್ಯಾನ್ಮಾರ್ನ ಮಿಲಿಟರಿ ಆಡಳಿತದ ವಿರುದ್ಧ ಹೋರಾಡುವ ಪ್ರಮುಖ ಬಣಗಳಲ್ಲಿ ಒಂದಾಗಿದೆ.
2021ರ ದಂಗೆಗೆ ಮೊದಲು ಯಾಂಗೋನ್ನಲ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದ ಪೀಟರ್ ಥಾಂಗ್, ಈಗ ಸಿಎನ್ಡಿಎಫ್ನ ಮಾದಕವಸ್ತು ಸ್ಮಗ್ಲಿಂಗ್ನಲ್ಲಿ ತೊಡಗಿದ್ದಾನೆ. ಇದು ಮ್ಯಾನ್ಮಾರ್ ಸೇನೆ ವಿರುದ್ಧದ ಸಶಸ್ತ್ರ ಹೋರಾಟಕ್ಕೆ ಹಣಕಾಸು ಒದಗಿಸುತ್ತದೆ. ಈಗ ಭಾರತದಲ್ಲಿ ಬಂಧಿತರಾಗಿರುವ ವ್ಯಾನ್ಡೈಕ್ ಮತ್ತು ಆರು ಉಕ್ರೇನಿಯನ್ನರು ಭಾಗಿಯಾಗಿದ್ದ ಡ್ರೋನ್ ಕಳ್ಳಸಾಗಣೆ ಕಾರ್ಯಾಚರಣೆಯ ವ್ಯವಸ್ಥೆ ಮಾಡಿದ್ದವನು ಕೂಡ ಇದೇ ಥಾಂಗ್ ಎನ್ನಲಾಗಿದೆ.
ಸಿಎನ್ಡಿಎಫ್ ಸೇರಿದಂತೆ ಚಿನ್ ರೆಸಿಸ್ಟೆನ್ಸ್ ಪಡೆಗಳು, ಚಿನ್ ರಾಜ್ಯದ ಹೆಚ್ಚಿನ ಗ್ರಾಮೀಣ ಭಾಗ ಮತ್ತು ಅದರ ಅರ್ಧಕ್ಕಿಂತ ಹೆಚ್ಚು ಪಟ್ಟಣಗಳಿಂದ ಅಲ್ಲಿನ ಮಿಲಿಟರಿಯನ್ನು ಹೊರಹಾಕಿವೆ.
2024ರ ಕೊನೆಯಲ್ಲಿ ಸಿಎನ್ಡಿಎಫ್ ಚಿನ್ ರಾಜ್ಯದ ಹಿಂದಿನ ರಾಜಧಾನಿಯಾದ ಫಾಲಂ ಪಟ್ಟಣ ವಶಪಡಿಸಿಕೊಳ್ಳಲು ‘ಮಿಷನ್ ಜೆರುಸಲೆಮ್’ ಅನ್ನು ಶುರುಮಾಡಿತು. ಆದರೆ ರಶ್ಯ ಮತ್ತು ಚೀನೀ ಜೆಟ್ಗಳ ದಾಳಿಯಿಂದ ಸಿಎನ್ಡಿಎಫ್ ಹೋರಾಟಗಾರರಲ್ಲಿ ಹಲವು ಸತ್ತರು.
ಚಿನ್ ಬ್ರದರ್ಹುಡ್ ಎಂಬುದರ ಅಡಿಯಲ್ಲಿ ಕೆಲಸ ಮಾಡುವ ಸಿಎನ್ಡಿಎಫ್ ಮತ್ತು ಚಿನ್ ನ್ಯಾಷನಲ್ ಆರ್ಮಿ (ಸಿಎನ್ಎ) ಎರಡೂ ಮಿಲಿಟರಿ ಆಡಳಿತದ ವಿರುದ್ಧ ಹೋರಾಡುತ್ತವೆ. ಆದರೆ ಎರಡೂ ಸಂಘಟನೆಗಳಿಗೆ ಹಣ ಹೋಗುವುದು ಮಾತ್ರ ಬೇರೆ ಬೇರೆ ರೀತಿಯಲ್ಲಿ ಎಂದು ಹೇಳಲಾಗುತ್ತದೆ.
ಸಿಎನ್ಡಿಎಫ್ ಬೆಂಬಲಕ್ಕೆ ಅಮೆರಿಕನ್ ಮಿಷನರಿ ಜಾಲಗಳು ನಿಂತಿವೆ ಎನ್ನಲಾಗಿದೆ. ಸಿಎನ್ಡಿಎಫ್ನ ಸಶಸ್ತ್ರ ಹೋರಾಟಕ್ಕೆ ಮುಖ್ಯವಾಗಿ ಡ್ರಗ್ಸ್ ವ್ಯವಹಾರದ ಮೂಲಕ ಹಣಕಾಸು ಒದಗಿಸಲಾಗುತ್ತದೆ.
ಚಿನ್ ಸ್ಟೇಟ್ ಮತ್ತು ಮಣಿಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಂಡುಕೋರ ಗುಂಪುಗಳು ಭಾರತದೊಳಕ್ಕೆ ಡ್ರಗ್ಸ್ ಸಾಗಿಸುವಲ್ಲಿ ಕೆಲಸ ಮಾಡುತ್ತವೆ.
ಜೊಮಿ, ಚಿನ್ ಮತ್ತು ಮಿಜೊ ಸಮುದಾಯಗಳು ವಸಾಹತುಶಾಹಿ ಯುಗಕ್ಕಿಂತ ಮುಂಚಿಂದಲೂ ಉತ್ತಮ ಜನಾಂಗೀಯ ಮತ್ತು ರಕ್ತಸಂಬಂಧಗಳನ್ನು ಹೊಂದಿವೆ. ಈ ಬಾಂಧವ್ಯದಿಂದಾಗಿಯೇ, ದಕ್ಷಿಣ ಏಶ್ಯದ ಕಾಡು ಪ್ರದೇಶದ ಮೂಲಕ ಹಾದುಹೋಗುವ 510 ಕಿ.ಮೀ. ಗಡಿಯುದ್ದಕ್ಕೂ ಶಸ್ತ್ರಾಸ್ತ್ರ, ಮಾದಕ ವಸ್ತು ಮತ್ತು ಈಗ ಡ್ರೋನ್ಗಳ ಸಾಗಾಟ ಜಾಲಗಳಿಗೆ ಬೆಂಬಲ ಸಿಗುತ್ತಿದೆ.
ಯುರೋಪಿಯನ್ ಡ್ರೋನ್ಗಳನ್ನು ಚಿನ್ ರಾಜ್ಯಕ್ಕೆ ಸಾಗಿಸುವ ಅದೇ ಜಾಲಗಳು ಡ್ರಗ್ಸ್ ಅನ್ನೂ ಸಾಗಿಸುತ್ತಿವೆ.
ಇನ್ನು, ಮ್ಯಾಥ್ಯೂ ವ್ಯಾನ್ಡೈಕ್ ಬಾಲ್ಟಿಮೋರ್ನಲ್ಲಿ ಜನಿಸಿದವನು.
ಜಾರ್ಜ್ಟೌನ್ ವಿಶ್ವವಿದ್ಯಾನಿಲಯದಿಂದ ಸೆಕ್ಯೂರಿಟಿ ಸ್ಟಡೀಸ್ನಲ್ಲಿ ಮತ್ತು ಲಂಡನ್ನ ಕಿಂಗ್ಸ್ ಕಾಲೇಜಿನಿಂದ ಯುದ್ಧ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾನೆ.
ಆತ ಸ್ಥಾಪಿಸಿರುವ ಸನ್ಸ್ ಆಫ್ ಲಿಬರ್ಟಿ ಇಂಟರ್ನ್ಯಾಷನಲ್ (SOLI) ಒಂದು ಭದ್ರತಾ ಗುತ್ತಿಗೆ ಸಂಸ್ಥೆ. ಅದು ಸರ್ವಾಧಿಕಾರಿಗಳ ವಿರುದ್ಧ ಹೋರಾಡುವ ಪಡೆಗಳಿಗೆ ಮಿಲಿಟರಿ ತರಬೇತಿ ನೀಡುತ್ತದೆ.
ವ್ಯಾನ್ಡೈಕ್ 2011ರ ಲಿಬಿಯಾದ ಅಂತರ್ಯುದ್ಧದಲ್ಲಿ ಹೋರಾಡಿದ್ದ. ಮುಅಮ್ಮರ್ ಗದ್ದಾಫಿಯ ಜೈಲುಗಳಲ್ಲಿ ಯುದ್ಧ ಕೈದಿಯಾಗಿ 6 ತಿಂಗಳು ಕಳೆದಿದ್ದ. ಸಿರಿಯಾದಲ್ಲಿ ಡಾಕ್ಯೂಮೆಂಟರಿ ಮಾಡಿ ಪ್ರಶಸ್ತಿಯನ್ನೂ ಪಡೆದಿದ್ದಾನೆ.
ತನ್ನ ಪತ್ರಕರ್ತ ಸ್ನೇಹಿತರಾದ ಜೇಮ್ಸ್ ಫೋಲಿ ಮತ್ತು ಸ್ಟೀವನ್ ಸಾಟ್ಲಾಫ್ ಅವರನ್ನು ಐಸಿಸ್ ಕೊಂದ ಬಳಿಕ ಆತ SOLI ಅನ್ನು ಸ್ಥಾಪಿಸಿದ. ಐಸಿಸ್ ವಿರುದ್ಧ ಹೋರಾಡಲು ಇರಾಕಿ ಕ್ರಿಶ್ಚಿಯನ್ನರಿಗೆ ತರಬೇತಿ ನೀಡಿದ ಮತ್ತು 2022ರಿಂದ ರಶ್ಯ ವಿರುದ್ಧ ಉಕ್ರೇನಿಯನ್ ನಾಗರಿಕರಿಗೆ ತರಬೇತಿ ನೀಡಿದ.
ಲಿಬಿಯಾ, ಸಿರಿಯಾ, ಇರಾಕ್, ಅಫ್ಘಾನಿಸ್ತಾನ, ಉಕ್ರೇನ್, ಫಿಲಿಪ್ಪೀನ್ಸ್, ವೆನೆಝುವೆಲಾ ಬಳಿಕ ಈಗ ಮ್ಯಾನ್ಮಾರ್ನಲ್ಲಿ ಆತನ ಕಾರ್ಯಚಾರಣೆ ಶುರುವಾಗಿತ್ತು.
ಚಿನ್ ಸ್ಟೇಟ್ಗೆ ಉಕ್ರೇನಿಯನ್ ಯುದ್ಧ ಯೋಧರನ್ನು ನೇಮಿಸಿಕೊಳ್ಳುವುದರ ಹಿಂದೆ ಈತ ಇದ್ದಾನೆ ಎಂದು ಎನ್ಐಎ ಅನುಮಾನಿಸಿದೆ.
ಯುಎಸ್ನಲ್ಲಿನ ಇವಾಂಜೆಲಿಕಲ್ ಚರ್ಚ್ ಗುಂಪುಗಳೊಂದಿಗೆ ಕೂಡ ವ್ಯಾನ್ಡೈಕ್ನ ಸಂಪರ್ಕವಿದೆ ಎಂಬುದು ಈಗ ಬಯಲಾಗಿರುವ ವಿಷಯವಾಗಿದೆ.
ಮೂಲಗಳ ಪ್ರಕಾರ, ಈ ಚರ್ಚ್ ನೆಟ್ವರ್ಕ್ಗಳು ಸಿಎನ್ಡಿಎಫ್ಗೆ ಹಣಕಾಸು ಒದಗಿಸುತ್ತವೆ.
ಚಿನ್ ಕ್ರಿಶ್ಚಿಯನ್ ಸಮುದಾಯ ಅಮೆರಿಕನ್ ಬ್ಯಾಪ್ಟಿಸ್ಟ್ ಮಿಷನರಿ ಜೊತೆ ಶತಮಾನದಷ್ಟು ಹಳೆಯ ಸಂಪರ್ಕ ಹೊಂದಿದೆ ಮತ್ತು ಈ ಸಂಪರ್ಕವನ್ನು ಸಿಎನ್ಡಿಎಫ್ನ ಸಶಸ್ತ್ರ ಹೋರಾಟಕ್ಕೆ ಆರ್ಥಿಕ ಬೆಂಬಲ ನೀಡಲು ಬಳಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತದೆ.
ಇಲ್ಲಿ ಹಣಕಾಸು ನೆರವಿಗೂ ಮೀರಿದ ಸಂಬಂಧವಿದೆ.
ಸಿಎನ್ಡಿಎಫ್ನ ರಕ್ಷಣಾ ಕಾರ್ಯದರ್ಶಿ, ಮಾಜಿ ರಾಷ್ಟ್ರೀಯ ಕರಾಟೆ ಚಾಂಪಿಯನ್ ಮತ್ತು ಮ್ಯಾನ್ಮಾರ್ನ ಆರೋಗ್ಯ ಮತ್ತು ಕ್ರೀಡಾ ಸಚಿವಾಲಯದ ಹಿಂದಿನ ಸಹಾಯಕ ನಿರ್ದೇಶಕಿ ಒಲಿವಿಯಾ ಥಾಂಗ್ ಲುವಾಯ್ ಅವರು ಅಮೆರಿಕನ್ ಪ್ರಜೆಯನ್ನು ವಿವಾಹವಾಗಿದ್ದಾರೆ. ಇದು ಮಿಷನರಿ ಮತ್ತು ಮಿಲಿಟರಿ ಜಾಲದ ಆಳ ಸಂಬಂಧವನ್ನು ಸೂಚಿಸುತ್ತದೆ.
ವ್ಯಾನ್ಡೈಕ್ ಜನಾಂಗೀಯ ಸಶಸ್ತ್ರ ಗುಂಪುಗಳಿಗೆ ಅನೇಕ ಸಲ ತರಬೇತಿ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಕೋರ್ಟ್ಗೆ ಎನ್ಐಎ ಹೇಳಿದೆ.
ಸಂಘಟಿತ ಬಂಧನಗಳಿಗೆ ಮೊದಲು ಎನ್ಐಎ ತಂಡಗಳು ಹಲವಾರು ತಿಂಗಳುಗಳಿಂದ ಈಶಾನ್ಯದಲ್ಲಿ ಶಂಕಿತರನ್ನು ಪತ್ತೆಹಚ್ಚುತ್ತಿದ್ದವು.
ತನಿಖಾಧಿಕಾರಿಗಳು ಹೇಳುವಂತೆ ಈ ಗುಂಪು 2024ರಿಂದಲೂ ಪದೇ ಪದೇ ಈ ಪ್ರದೇಶಕ್ಕೆ ಬರುತ್ತಿತ್ತು.
ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಪ್ರವೇಶಿಸಿದ 14 ಉಕ್ರೇನಿಯನ್ ಪ್ರಜೆಗಳಲ್ಲಿ ಇನ್ನೂ 8 ಜನರು ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ.
ಇಲ್ಲಿ ಗಮನಿಸಬೇಕಿರುವ ಒಂದು ಸಂಗತಿಯೆಂದರೆ, ಇದೆಲ್ಲದರ ಬಗ್ಗೆ ಎನ್ಐಎ ಎಚ್ಚರಗೊಳ್ಳಲು ಮಾಹಿತಿ ಕೊಟ್ಟದ್ದು ರಶ್ಯದ ಇಂಟಲಿಜೆನ್ಸ್ ಎಂಬುದು.
ಬಂಡುಕೋರ ಗುಂಪುಗಳ ವಿರುದ್ಧ ಮಿಲಿಟರಿಗೆ ಬೆಂಬಲಿಸಲು ಮ್ಯಾನ್ಮಾರ್ ಒಳಗೆ ಮಾಸ್ಕೊ ಹಲವಾರು ಗುಪ್ತಚರ ಕೇಂದ್ರಗಳನ್ನು ಸ್ಥಾಪಿಸಿದೆ.
ರಶ್ಯ ಮತ್ತು ಚೀನಾ ಎರಡೂ ಮ್ಯಾನ್ಮಾರ್ ಸೇನೆಯ ಬೆನ್ನಿಗಿವೆ.
ರಶ್ಯ ಹೆಲಿಕಾಪ್ಟರ್ಗಳು, ಫೈಟರ್ ಜೆಟ್ಗಳು, ಶಸ್ತ್ರಸಜ್ಜಿತ ವಾಹನಗಳು ಮತ್ತು ಫಿರಂಗಿಗಳನ್ನು ಪೂರೈಸುತ್ತದೆ.
ಚೀನಾ ಮಿಲಿಟರಿ ಉಪಕರಣಗಳನ್ನು ಒದಗಿಸುತ್ತದೆ ಮತ್ತು ಚೀನಾ-ಮ್ಯಾನ್ಮಾರ್ ಗಡಿಯಲ್ಲಿ ಜನಾಂಗೀಯ ಸಶಸ್ತ್ರ ಗುಂಪುಗಳ ಮೇಲೆ ತನ್ನ ಹತೋಟಿ ಸಾಧಿಸಿದೆ.
ಭಾರತದೊಳಕ್ಕೆ ಡ್ರೋನ್ಗಳ ಸಾಗಣೆ ಮತ್ತು ಮಣಿಪುರಕ್ಕೆ ಡ್ರಗ್ಸ್ ಹರಿದುಬರುತ್ತಿರುವುದು ಭಾರತದ ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಅಪಾಯಕಾರಿ. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ರಶ್ಯ ಗುಪ್ತಚರ ಮಾಹಿತಿ ಸಿಕ್ಕಿದ್ದು ಮಹತ್ವದ ಬೆಳವಣಿಗೆ.
ಇದೇ ಹೊತ್ತಲ್ಲಿ, ಬಂಡುಕೋರರಿಗೆ ಡ್ರೋನ್ ಪೂರೈಕೆ ತಪ್ಪಿಸುವ ಮೂಲಕ ಮಿಲಿಟರಿ ಆಡಳಿತವನ್ನು ರಕ್ಷಿಸುವ ರಶ್ಯದ ಭೌಗೋಳಿಕ ರಾಜಕೀಯ ಹಿತಾಸಕ್ತಿಯೂ ಕೆಲಸ ಮಾಡಿದೆ.
ಇನ್ನು, ಮಿಜೋರಾಂ ಮ್ಯಾನ್ಮಾರ್ ಅಂತರ್ಯುದ್ಧಕ್ಕೆ ಮರ್ಸಿನರಿಗಳನ್ನು ಪೂರೈಸುವ ಕಾರಿಡಾರ್ ಆಗಿದೆ.
ಮಿಲಿಟರಿ ವಿರುದ್ಧ ಹೋರಾಡುವ ಬಂಡಾಯ ಸಂಘಟನೆಗಳಿಗೆ ತರಬೇತಿ ನೀಡಲು ಉಕ್ರೇನ್ ಯೋಧರು ಮಿಜೋರಾಂ ಮೂಲಕ ಮ್ಯಾನ್ಮಾರ್ನ ಚಿನ್ ರಾಜ್ಯಕ್ಕೆ ಹೋಗುವ ವಿಷಯ ಬಯಲಾಗಿದೆ.
2024ರ ಜೂನ್ನಿಂದ ಡಿಸೆಂಬರ್ವರೆಗಿನ ಅವಧಿಯಲ್ಲಿ ಸುಮಾರು 2,000 ವಿದೇಶಿಯರು ಮಿಜೋರಾಂ ಪ್ರವೇಶಿಸಿದರು. ಅವರಲ್ಲಿ ಹಲವರು ಮಿಲಿಟರಿ ತರಬೇತಿಗಾಗಿ ಚಿನ್ ಹಿಲ್ಸ್ಗೆ ಹೋದರು. ಈಗ ಅಂಥವರ ಸಂಖ್ಯೆ ತುಂಬಾ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ನೂರಾರು ಉಕ್ರೇನಿಯನ್ನರು ಮತ್ತು ಅಮೆರಿಕನ್ನರು ಮಿಜೋರಾಂ ಮೂಲಕ ಚಿನ್ ರಾಜ್ಯಕ್ಕೆ ಹೋಗಿದ್ದಾರೆ.
ಇದಕ್ಕೂ ಹಿಂದೆ 2024ರ ಜೂನ್ ನಲ್ಲಿ ಬ್ರಿಟಿಷ್ ಪ್ರಜೆ ಡೇನಿಯಲ್ ನ್ಯೂಯಿಯನ್ನು ಐಜ್ವಾಲ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಬೆಲ್ಜಿಯಂ ಪ್ರಜೆ ಸೈಮನ್ ಕ್ಲೆಮೆಂಟೆಯನ್ನು ಕೂಡ 2025ರ ಮಾರ್ಚ್ನಲ್ಲಿ ಐಜ್ವಾಲ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಆಗಲೇ ಇಂಥ ಮದ್ದುಗುಂಡು ಸಾಗಾಟದ ಕಾರಿಡಾರ್ ಪತ್ತೆಯಾಗಿದ್ದರೂ, ಅದನ್ನು ಮುಚ್ಚಲಾಗಿಲ್ಲ.
ಎನ್ಐಎ ತನಿಖೆ ಆರಂಭಿಕ ಹಂತದಲ್ಲಿದೆ.
ಆದರೆ ವರ್ಷಗಳಿಂದ ಭಾರತದ ಈಶಾನ್ಯ ಪ್ರದೇಶದಲ್ಲಿ ಇದೆಲ್ಲವೂ ನಡೆಯುತ್ತಿದೆ ಎಂಬುದು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ರಶ್ಯ ಸುಳಿವು ನೀಡುವವರೆಗೂ ಸಾವಿರಾರು ಡ್ರೋನ್ಗಳು ಯುರೋಪ್ನಿಂದ ಭಾರತದ ಭೂಪ್ರದೇಶದ ಮೂಲಕ ಗೊತ್ತೇ ಇಲ್ಲದಂತೆ ಹೇಗೆ ಸಾಗಣೆಯಾದವು?
ಡ್ರಗ್ ಸ್ಮಗ್ಲಿಂಗ್ ಜಾಲ ಸಕ್ರಿಯವಾಗಿರುವುದು ಮಣಿಪುರವನ್ನು ಯಾವ ಮಟ್ಟಿನ ಅಪಾಯಕ್ಕೆ ತಳ್ಳಿರಬಹುದು?
ಇನ್ನೂ ಪತ್ತೆಯಾಗದ 8 ಉಕ್ರೇನಿಯನ್ನರು ಇನ್ನೂ ಮ್ಯಾನ್ಮಾರ್ನಲ್ಲಿದ್ದಾರೆಯೇ? ಅಲ್ಲದೆ, SಔಐI ಸಂಘಟನೆ, ಅಮೆರಿಕದ ಮಿಷನರಿ ಫಂಡಿಂಗ್ ಮತ್ತು ಅಮೆರಿಕ ಸರಕಾರದ ನಡುವಿನ ಸಂಬಂಧ ಏನಿರಬಹುದು?
ಇಂಥ ಹಲವಾರು ಪ್ರಶ್ನೆಗಳು ಈಗ ಎದ್ದಿವೆ.
ಅಮೆರಿಕನ್ ಪ್ರಜೆಯ ಬಂಧನದ ಬಳಿಕ ಯುಎಸ್ ರಾಯಭಾರ ಕಚೇರಿ, ಪರಿಸ್ಥಿತಿ ಬಗ್ಗೆ ತಿಳಿದಿದೆ ಮತ್ತು ಗೌಪ್ಯತೆ ಕಾರಣಗಳಿಗಾಗಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದಷ್ಟೇ ಹೇಳಿದೆ.
ಉಕ್ರೇನ್ ಮಾತ್ರ ತನ್ನ ಪ್ರಜೆಗಳ ತಕ್ಷಣದ ಬಿಡುಗಡೆ ಮತ್ತು ಕಾನ್ಸುಲರ್ ಮಧ್ಯಪ್ರವೇಶಕ್ಕೆ ಒತ್ತಾಯಿಸಿ ಔಪಚಾರಿಕ ಪ್ರತಿಭಟನೆ ಸಲ್ಲಿಸಿದೆ.
ನಿಜವಾಗಿಯೂ ಭಾರತದ ಈಶಾನ್ಯ ಗಡಿಯಲ್ಲಿ ಏನಾಗುತ್ತಿದೆ ಎಂಬುದು ಆತಂಕ ಹೆಚ್ಚಿಸುವ ಪ್ರಶ್ನೆಯಾಗಿದೆ.







