ಉಗ್ರ ಪ್ರತಾಪವೋ...! ವಂಚನೆಯೋ...!

ಸದ್ಯದ ರಾಜಕೀಯ ಸಂದರ್ಭದಲ್ಲಿ ಇಲ್ಲಿ ಮಾಸ್ ಪಾರ್ಟಿ ಕಾಂಗ್ರೆಸ್ ಆಗಿರುವುದರಿಂದ ಮಾಸ್ಕ್ ಪಾರ್ಟಿ ಬಿಜೆಪಿಗೆ ಕುಮಾರಸ್ವಾಮಿಯವರು ಥೇಟ್ ಅರ್ಜುನನಂತೆಯೇ (ಆದರೆ ಪಾಂಡುವಿನ ಮಗನಲ್ಲ) ಸರಿ. ಇನ್ನು ಇವರಿಗೆ ದೇವೇಗೌಡರು ಭೀಷ್ಮನಂತೆ ಕಂಡರೂ ( ಭೀಷ್ಮ ಅಪ್ಪಟವಾಗಿ ಕುರು-ಪಾಂಡವರಿಬ್ಬರನ್ನೂ ತಿರಸ್ಕರಿಸಿದವನಲ್ಲ) ಬಿಜೆಪಿಗರಿಗೆ ನಂಬದೇ ವಿಧಿಯಿಲ್ಲ. ಹೇಗಾದರೂ ಸರಿ ಅಧಿಕಾರದ ತುಪ್ಪ ತಿಂದರೆ ಸಾಕು ಎಂಬುದೇ ವೈದಿಕ ನೆಲೆಯ ಸನಾತನ ಆಢಳಿತ ಸೂತ್ರ. ಈ ಸೂತ್ರಕ್ಕೆ ತಕ್ಕಂತೆಯೇ ಹೆಣೆದಿದ್ದ ಉರಿಗೌಡ - ನಂಜೇ ಗೌಡರಂತಹ ಸುಳ್ಳು ಪಾತ್ರಗಳು ಮೈಸೂರು ಪ್ರಾಂತದ ಮಣ್ಣಲ್ಲಿ ರಸಾತಳ ಕಚ್ಚಿದ ನಂತರ ಬಿಜೆಪಿಗೆ ಈ ತಂದೆ-ಮಕ್ಕಳಿಬ್ಬರೂ ವಿಚಿತ್ರವಾದ ಕಾಂಬಿನೇಷನ್ ಎಂಬಂತೆ ಆಸರೆಯಾಗಿದ್ದಾರೆ.
ಇಡೀ ದೇಶದಲ್ಲಿ ಬಿಜೆಪಿ ಬಸವಳಿದಿದೆ. ಅದರ ಸುಳ್ಳಿನ ಕಾರ್ಖಾನೆಗಳು ಜನರ ಪ್ರತಿರೋಧದ ಎದುರು ಬಟಾಬಯಲಾಗಿವೆ. ಹೊಸ ಸುಳ್ಳು ಹೇಳಲು ಶತಪ್ರಯತ್ನ ನಡೆಸುತ್ತಿದೆ. ಇವರ ಪ್ರಯತ್ನಗಳನ್ನು ದೇಶದ ಯುವಕರು, ಅನಕ್ಷರಸ್ಥರು, ದೇವರನ್ನು ನಂಬುವವರು, ನಂಬದವರು, ಅಬಾಲರಿಂದ ವೃದ್ಧರ ತನಕ ಎಲ್ಲರೂ ಗೇಲಿ ಮಾಡುತ್ತಿದ್ದಾರೆ.
ಎಸ್ಐಆರ್ ನಿಂದ ರಾಮ ಮಂದಿರದ ತನಕ, ಚೀನಾ ಪಾಕಿಸ್ಥಾನದಿಂದ ವಿದೇಶಿ ಸೊಸೆಯ ತನಕ, ಬುಲೆಟ್ ಟ್ರೈನ್ನಿಂದ ಎರಡು ಕೋಟಿ ವರ್ಷಕ್ಕೆ ಉದ್ಯೋಗ, ಮನೆಮನೆಗೆ ಹದಿನೈದು ಲಕ್ಷ ಕಪ್ಪು ಹಣದ ಗಿಫ್ಟ್ ತನಕ ಎಲ್ಲವೂ ಸುಳ್ಳು ಎಂಬುದು ಜನರಿಗೆ ತಿಳಿದಿದೆ.
ಬಿಜೆಪಿ ಹೇಳಿಕೇಳಿ ದೇವರ ಹೆಸರಿನ ಮಾಸ್ಕ್ (ಮುಖವಾಡದ) ಪಕ್ಷ. ಈ ಪಕ್ಷದ ಹಿಂದೆ ಇದಕ್ಕಿಂತ ಗಟ್ಟಿಯಾದ, ದೊಡ್ಡ ವ್ಯಾಪ್ತಿಯನ್ನು ಹೊಂದಿರುವ ಮಾಸ್ಕ್ ಹಾಕಿಕೊಂಡು ತಾತ್ವಿಕತೆಯನ್ನು ಒದಗಿಸುತ್ತಿರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇವುಗಳು ಎರಡು ವರ್ಷಗಳಿಂದ ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುತ್ತಿವೆ. ಇದಕ್ಕೆ ಇರುವ ಕಾರಣಗಳು ಸ್ಪಷ್ಟ; ದೇವರ ಹೆಸರಲ್ಲಿ ರಾಜಕಾರಣ ಮಾಡುವ ಇವರು ನಿಜದೇವರ ಹುಡುಕಾಟದಲ್ಲಿ ತಿಳಿವು ಮತ್ತು ಬೆಳಕನ್ನು ನೆಚ್ಚಿಲ್ಲ. ಇದಕ್ಕೆ ದೊಡ್ಡ ನಿದರ್ಶನ ರಾಮಮಂದಿರದ ಲೂಟಿ. ವೈದಿಕ ಧರ್ಮದ ತಾತ್ವಿಕ ನೆಲೆಗಟ್ಟು ತಾರತಮ್ಯದ್ದು ಎಂದು ತಮ್ಮ ಬದುಕಿನಿಂದ ಅರ್ಥ ಮಾಡಿಕೊಂಡಿರುವ; ಅಂಧಕಾರ, ಅಜ್ಞಾನದ ಕೂಪಕ್ಕೆ ತಳ್ಳಲ್ಪಟ್ಟಿದ್ದ ಆದರೂ ದೇವರ ಮೇಲಿನ ತಮ್ಮ ಅಗಾಧ ಭಕ್ತಿಗೆ ಬದ್ಧರಾಗಿದ್ದ ದೇಶದ ಉದ್ದಗಲಕ್ಕೆ ಇರುವ ಜನರು ಬಿಜೆಪಿ ರಾಮದ್ರೋಹಿ; ಇವರ ರಾಮನ ಭಜನೆ ಮತ್ತು ಆಚರಣೆಗಳೆಲ್ಲಾ ರಾಜಕೀಯ ಅಧಿಕಾರ ಮತ್ತು ಲೂಟಿಗೆ ಸೀಮಿತ ಎಂಬ ತಿಳಿವಳಿಕೆಯನ್ನು ಕೊನೆಗಾದರೂ ಪಡೆದವರಂತೆ ಗೊಣಗುತ್ತಿದ್ದಾರೆ. ಅದರಲ್ಲೂ ಉತ್ತರ ಭಾರತದ ದುಡಿಯುವ ಜನತೆ ಇದನ್ನು ಫೀಲ್ ಮಾಡುತ್ತಿರುವುದು ಈ ಮಾಸ್ಕ್ ಮಂದಿಗೆ ಬಿಸಿ ತುಪ್ಪವಾಗಿದೆ.
ಇದನ್ನು ಗ್ರಹಿಸಿಯೇ ಸೇವೆಯ ಹೆಸರಿನ ಹಿಡನ್ ಅಜೆಂಡಾಗಾರರಾದ ಸಂಘ ಪರಿವಾರದವರು ಎಸ್ಐಆರ್ (ಮತದಾರರ ವಿಶೇಷ ತೀವ್ರ ಪರಿಷ್ಕರಣೆ) ಹೆಸರಲ್ಲಿ ತಮ್ಮ ಕತ್ತಲೆಯುಗದ ವೈದಿಕ ತಾತ್ವಿಕತೆಗೆ ಮತ್ತೆ ಆಡಳಿತಾತ್ಮಕ ಶಕ್ತಿ ಪಡೆಯಲು ಮುಂದಾಗಿದ್ದು. ಈ ವಂಚನೆಯ ದಾರಿಯಲ್ಲಿ ಅಧಿಕಾರ ಪಡೆದು ಪ್ರಜಾಪ್ರಭುತ್ವದ ಬುಡ ಮುರಿಯಲು ಪ್ರಯತ್ನಿಸಿದ್ದು. ವಾಸ್ತವ ಏನೆಂದರೆ ಈಗ ಇವರ ತಂತ್ರ ಇವರಿಗೇ ತಿರುಗುಬಾಣವಾಗಿದೆ’ ದೇಶದ ಉದ್ದಗಲಕ್ಕೆ ಎಸ್ಐಆರ್ ವಿರುದ್ಧ, ಅದರ ಹಿಂದಿರುವ ಕುತಂತ್ರದ ವಿರುದ್ಧ ವಿದ್ಯಾರ್ಥಿ ಯುವ ಜನರು, ರೈತರು, ಕಾರ್ಮಿಕರು, ಮಹಿಳೆಯರು, ಅಸಂಘಟಿತ ವಲಯದ ಕೂಲಿಕಾರರು...; ಹೀಗೆ ಎಲ್ಲರೂ, ಎಲ್ಲಾ ರಾಜ್ಯಗಳಲ್ಲೂ ತಿರುಗಿ ಬಿದ್ದಿದ್ದಾರೆ. ಎಸ್ಐಆರ್ ನಡೆದ ರಾಜ್ಯಗಳಲ್ಲಿ ಅರುವತ್ತು ಲಕ್ಷ, ಎಂಭತ್ತು ಲಕ್ಷ, ತೊಂಭತ್ತು ಲಕ್ಷ ಮತದಾರರು ಅನರ್ಹರಾಗುವುದಾದರೆ 2014 ರಿಂದ 2026 ತನಕ ಮೋದಿ ಸರಕಾರ ಏಕೆ ಕಣ್ಣು ಮುಚ್ಚಿ ಕುಳಿತಿತ್ತು? ಎಂದು ವಿದ್ಯಾರ್ಥಿ - ಯುವಜನರು ಪ್ರಶ್ನೆ ಎತ್ತಿದ್ದಾರೆ.
ಸುಪ್ರೀಂ ಕೋರ್ಟ್ ಹಾಲಿ ಹಾಗೂ ನಿವೃತ್ತ ನ್ಯಾಯಾಧೀಶರು ತಮ್ಮ ಅಸಹನೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣಾ ಆಯೋಗದ ಮುಖ್ಯ ಆಯುಕ್ತರ ವರ್ತನೆ ಮತ್ತು ಕಾನೂನು ಮೀರಿದ ಆದೇಶಗಳಿಗೆ ಉಳಿದ ಇಬ್ಬರು ಚುನಾವಣಾ ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿರುವ ನೋಟ್ ಶೀಟ್ಗಳು, ವಿವರಣೆಗಳು ಬಹಿರಂಗಗೊಂಡಿವೆ. ದೇಶದ ಪ್ರಜ್ಞಾವಂತ ಜನರು ಬೆಚ್ಚಿಬಿದ್ದಿದ್ದಾರೆ. ಹಿಂದೆಲ್ಲಾ ಸಿಬಿಐ, ಈ.ಡಿ., ಎಂಬ ವಾಶಿಂಗ್ ಮೆಷಿನ್ ಒತ್ತಡದ ರಾಜಕೀಯ ಮಾಡುತ್ತಿದ್ದ ಬಿಜೆಪಿ, ಆರೆಸ್ಸೆಸ್ ತಮ್ಮ ಅನಾದಿಕಾಲದ ಅಜೆಂಡಾಕ್ಕೆ ತಕ್ಕಂತೆ ( ಆರೆಸ್ಸೆಸ್ ಕೇಂದ್ರ ಕಚೇರಿಯ ಮೇಲೆ ಕಳೆದೆರಡು ದಶಕಗಳ ಹಿಂದಿನ ತನಕ ಭಾರತದ ಬಾವುಟವನ್ನೇ ಹಾರಿಸಿರಲಿಲ್ಲ) ಪ್ರಜಾಪ್ರಬುತ್ವದ ಬುಡವನ್ನೇ ಅಡಿಮೇಲು ಮಾಡಲು ಹೊರಟಿವೆ.
ದಕ್ಷಿಣದ ರಾಜ್ಯಗಳ ಮಟ್ಟಿಗೆ ತನ್ನ ಎಲ್ಲ ಬಲವನ್ನೂ ಪೂರ್ಣ ಆಡಳಿತಾತ್ಮಕ ಭಾಗವಾಗುವಷ್ಟು ಬೆಳೆಸಿಕೊಳ್ಳಲು ಬಿಜೆಪಿಗೆ ಈ ತನಕ ಸಾಧ್ಯವಾಗಿಲ್ಲ. ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅಧಿಕಾರದ ಸಂಧುಗಳನ್ನು ತಡಕಾಡುತ್ತಿರುವ ಇವರಿಗೆ ಚಂದ್ರಬಾಬು ನಾಯ್ಡು - ಕುಮಾರಸ್ವಾಮಿಯವರು ಕೈಲ್ಯಾಂಪುಗಳಂತೆ ಕಾಣುತ್ತಿದ್ದಾರೆ. ಇವರಿಬ್ಬರ ಜೊತೆಗೆ ಇವರಂತೆಯೇ ಚೌಕಾಸಿ ಅಧಿಕಾರಕ್ಕಾಗಿ ಜನರನ್ನ್ನು, ನೆಲದ ಸಂಸ್ಕೃತಿಯನ್ನು, ನ್ಯಾಯವನ್ನು, ಧರ್ಮವನ್ನು, ಭಾಷೆಯನ್ನು... ಹೀಗೆ ಯಾವುದನ್ನಾದರೂ ಬಲಿ ಕೊಡಬಲ್ಲೆವು ಎಂಬಂತಹ ಹಲವಾರು
ರಾಜಕೀಯ ಪ್ರಭಾವದ ಕುಟುಂಬಗಳು, ವ್ಯಕ್ತಿಗಳು ದಕ್ಷಿಣದಲ್ಲಿ ಅಧಿಕಾರ ಹಿಡಿಯುವ ಆಸೆಯನ್ನು ಇವರಿಗೆ ಹುಟ್ಟಿಸಿರುವಂತೆ ಕಾಣುತ್ತಿದೆ.
ಕರ್ನಾಟಕದ ಮಟ್ಟಿಗೆ ಬಿಜೆಪಿಗರ ಆಸೆಗಿರುವ ಪ್ರಬಲ ಅಸ್ತ್ರ ಕುಮಾರಸ್ವಾಮಿ ಮತ್ತು ದೇವೇಗೌಡರು. ಸದ್ಯದ ರಾಜಕೀಯ ಸಂದರ್ಭದಲ್ಲಿ ಇಲ್ಲಿ ಮಾಸ್ ಪಾರ್ಟಿ ಕಾಂಗ್ರೆಸ್ ಆಗಿರುವುದರಿಂದ ಮಾಸ್ಕ್ ಪಾರ್ಟಿ ಬಿಜೆಪಿಗೆ ಕುಮಾರಸ್ವಾಮಿಯವರು ಥೇಟ್ ಅರ್ಜುನನಂತೆಯೇ (ಆದರೆ ಪಾಂಡುವಿನ ಮಗನಲ್ಲ) ಸರಿ. ಇನ್ನು ಇವರಿಗೆ ದೇವೇಗೌಡರು ಭೀಷ್ಮನಂತೆ ಕಂಡರೂ ( ಭೀಷ್ಮ ಅಪ್ಪಟವಾಗಿ ಕುರು-ಪಾಂಡವರಿಬ್ಬರನ್ನೂ ತಿರಸ್ಕರಿಸಿದವನಲ್ಲ) ಬಿಜೆಪಿಗರಿಗೆ ನಂಬದೇ ವಿಧಿಯಿಲ್ಲ. ಹೇಗಾದರೂ ಸರಿ ಅಧಿಕಾರದ ತುಪ್ಪ ತಿಂದರೆ ಸಾಕು ಎಂಬುದೇ ವೈದಿಕ ನೆಲೆಯ ಸನಾತನ ಆಡಳಿತ ಸೂತ್ರ. ಈ ಸೂತ್ರಕ್ಕೆ ತಕ್ಕಂತೆಯೇ ಹೆಣೆದಿದ್ದ ಉರಿಗೌಡ-ನಂಜುಗೌಡರಂತಹ ಸುಳ್ಳು ಪಾತ್ರಗಳು ಮೈಸೂರು ಪ್ರಾಂತದ ಮಣ್ಣಲ್ಲಿ ರಸಾತಳ ಕಚ್ಚಿದ ನಂತರ ಬಿಜೆಪಿಗೆ ಈ ತಂದೆ-ಮಕ್ಕಳಿಬ್ಬರೂ ವಿಚಿತ್ರವಾದ ಕಾಂಬಿನೇಷನ್ ಎಂಬಂತೆ ಆಸರೆಯಾಗಿದ್ದಾರೆ.
ರಾಜ್ಯದ ರಾಜಕೀಯ ಸನ್ನಿವೇಷದಲ್ಲಿ ಸದ್ಯ ಕುಮಾರಸ್ವಾಮಿಯವರು ಕುರುಕ್ಷೇತ್ರದ ಯುದ್ಧ ಮುಗಿದ ನಂತರ ಬದಲಾಗಿ ಜಡ್ಡು ಹಿಡಿದ ಉಗ್ರಪ್ರತಾಪಿ ಅರ್ಜುನನೇ ಸರಿ. ಒಂದು ಕೂದಲೆಳೆಯಷ್ಟು ವ್ಯತ್ಯಾಸವಾಗಿದ್ದರೆ ಕೇಂದ್ರ ಮಂತ್ರಿಯಾಗುವುದು ಇರಲಿ; ರಾಜಕೀಯ ಅಸ್ತಿತ್ವವನ್ನೇ ಕಳೆದುಕೊಂಡು ಹಳವಂಡ ಹಿಡಿಯುತ್ತಿದ್ದೆ ಎಂಬ ವಾಸ್ತವ ಇವರಿಗೂ ಅರ್ಥವಾದಂತಿದೆ. ಇದೇ ಕಾರಣಕ್ಕೆ ಇವರೂ ಸಹಾ ಜೆಡಿಎಸ್ ಕಾರ್ಯಕರ್ತರ ಸ್ವಾಭಿಮಾನ, ವೈಚಾರಿಕತೆ, ಸಾಂಸ್ಕೃತಿಕ ಗ್ರಹಿಕೆಗಳನ್ನು ಗಾಳಿಗೆ ತೂರಿ ಕುಟುಂಬಕ್ಕೆ ರಾಜಕೀಯ ಭದ್ರತೆಯ ಉಕ್ಕಿನ ಕವಚವನ್ನು ಭದ್ರಪಡಿಸಲು ಮುಂದಾಗಿದ್ದಾರೆ. ವೀರಾವೇಶದಿಂದ ಅಬ್ಬರಿಸಲು ಮುಂದಾಗಿ ರಾಜಕೀಯ ಮೌಲ್ಯಗಳನ್ನು, ಪ್ರಾದೇಶಿಕ ಹಿತಾಸಕ್ತಿಯನ್ನು ನಾಯಕನಿಗೆ ಇರಬೇಕಾದ ಕನಿಷ್ಠ ತರ್ಕ ಬದ್ಧತೆಯನ್ನು ಧೂಳೀಪಟ ಮಾಡುತ್ತಿರುವುದನ್ನು ಜೆಡಿಎಸ್ನ ಕಾರ್ಯಕರ್ತರು, ನಾಯಕರು ಗಮನಿಸುತ್ತಿದ್ದಾರೆ. ಇವರ ಸಾಂಪ್ರದಾಯಿಕ ವೋಟ್ ಬೇಸ್ ಆಗಿರುವ ಮೈಸೂರು ಪ್ರಾಂತದ ಒಕ್ಕಲಿಗ ಸಮುದಾಯವು ಕುವೆಂಪು-ನಾಲ್ವಡಿ ವಿವೇಕದ ದೃಷ್ಟಿಯಿಂದ ಎಚ್ಡಿಕೆಯನ್ನು ಬೆರಗು ಕಣ್ಣುಗಳಿಂದ ನೋಡುತ್ತಿದೆ. ಕುಮಾರಣ್ಣನ ರಾಜಕೀಯ ಸಖ್ಯ ನಿಜವೇ ಆಗಿದ್ದರೆ ಇವರೇ ಹೇಳಿದ ಪ್ರಹ್ಲಾದ್ ಜೋಷಿಯವರ ಜಿನಿಟಿಕಲ್ ಪ್ರಾಬ್ಲಮ್, ಸಾಕಪ್ಪಾ ಸಾಕು ಈ ಆರೆಸ್ಸೆಸ್ ನವರ ಸಹವಾಸ. ಮೋದಿ-ಅಮಿತ್ ಶಾ ಸರಕಾರ ರೈತರ ಪಾಲಿನ ಸೆರೆಮನೆ. ಇವೆಲ್ಲಾ ಮಾತು ಹೋರಾಟಗಳು ನಡೆದಿದ್ದು ಏಕೆ? ಕುಮಾರಣ್ಣನವರಿಗೆ ರಾಜಕೀಯ ವಿಚಾರಗಳ ನರಿಬುದ್ಧಿ ಪ್ರತೀ ಚುನಾವಣೆಗೆ ಒಮ್ಮೆ ಬದಲಾಗುತ್ತದೆಯೇ? ನೈಸ್, ಟೌನ್ಶಿಪ್ ಗಳೆಲ್ಲಾ ಇವರ ಬಾಯಿಗೆ ಬೆಣ್ಣೆ ಬಿದ್ದಾಗ ಸರಿಯೇ? ಬೇರೆ ಆಡಳಿತ ಬಂದಾಗ ತಪ್ಪೇ? ಇಂಥಾ ವಿಚಾರಗಳಲ್ಲಿ ಇವರು ಒಕ್ಕಲಿಗ ಸಮುದಾಯವನ್ನು ಗುತ್ತಿಗೆಯ ಜೀತದಾಳುಗಳಂತೆ ಭಾವಿಸಿರುವುದು ಎಷ್ಟು ಸರಿ? ಇವರ ಈ ಧೋರಣೆಯಿಂದ ಸಿ.ಬೈರೇಗೌಡ, ವೈ.ಕೆ.ರಾಮಯ್ಯ, ನಾಗೇಗೌಡ, ಬಿ.ಎಲ್.ಶಂಕರ್ರಂಥ ಪ್ರಾಮಾಣಿಕ, ಘನವೆತ್ತ ಗುಣವಿದ್ದ, ಮಹತ್ತರ ಕೊಡುಗೆ ನೀಡಬಹುದಾಗಿದ್ದ ಒಕ್ಕಲಿಗ ನಾಯಕರೆಲ್ಲಾ ಬದಿಗೆ ಸರಿದರು. ಇವರ ಜೊತೆಗೆ ಜೆಡಿಎಸ್ನ ಪಿಲ್ಲರ್ಗಳಂತಿದ್ದ ಸಿದ್ದರಾಮಯ್ಯ, ಎಂ.ಪಿ.ಪ್ರಕಾಶ್, ಪಿಜಿಆರ್ ಸಿಂಧ್ಯಾ, ಹೊರಟ್ಟಿ, ಬೊಮ್ಮಾಯಿಯವರೆಲ್ಲಾ ಹೊರದೂಡಲ್ಪಟ್ಟು ಬೇರೆ ಬೇರೆ ಪಕ್ಷಗಳ ಪಾಲಾಗಿ ಅಲ್ಲಿ ಉನ್ನತ ಹುದ್ದೆ ಪಡೆದರು. ಇದೆಲ್ಲಾ ನಡೆದದ್ದು ಕುಮಾರಸ್ವಾಮಿಯವರ ರಾಜಕೀಯ ತೀರ್ಮಾನಗಳ ಪರಿಣಾಮಗಳಿಂದಲೇ ಎಂಬ ಗೊಣಗಾಟ ಒಕ್ಕಲಿಗ ಸಮುದಾಯದ ಪ್ರಜ್ಞಾವಂತರಲ್ಲಿ ಮತ್ತೆ ಪ್ರಸ್ತುತತೆ ಪಡೆದುಕೊಂಡಿದೆ.
ಇವರೇನ್ರಿ? ಜನರ ನಡುವಿರುವ ಈ ವಿಚಾರ ವರ್ತುಲವು ಬೆಂಗಳೂರಿನಿಂದ ಮೈಸೂರಿನ ತನಕ, ಹಾಸನದಿಂದ ತುಮಕೂರಿನ ತನಕ ಕಳೆದ ನಾಲ್ಕೈದು ತಿಂಗಳುಗಳಿಂದ ವಿವಿಧ ಬಗೆಯಲ್ಲಿ ಧ್ವನಿ ಪಡೆಯುತ್ತಿದೆ. ಎಚ್ಡಿಕೆಯ ಮತಕೋಟೆ ಎಂದೂ ವ್ಯಾಖ್ಯಾನಿಸಲಾಗುವ ಈ ಭಾಗದ ಒಕ್ಕಲಿಗರ ಸಮುದಾಯದ ಜೆಡಿಎಸ್ ನಾಯಕರೇ ಚೆಲುವರಾಯಸ್ವಾಮಿ, ಶಿವಲಿಂಗೇಗೌಡ, ಬಾಲಕೃಷ್ಣ, ಝಮೀರ್ ಎಲ್ಲರನ್ನೂ ದೂರ ತಳ್ಳಿದರು. ಈಗ ಅವರು ಎಲ್ಲೋ ಎದ್ದುಬಿದ್ದು ಮಂತ್ರಿಗಳಾದರೆ ಅದನ್ನೂ ಸಹಿಸೊಲ್ಲ. ಈಗ ಶಿವಕುಮಾರ್ ಯಾರಪ್ಪಾ? ಅವರೂ ಒಕ್ಕಲಿಗರೇ ತಾನೆ? ಒಕ್ಕಲಿಗರಲ್ಲಿ ಬೇರೆ ಯಾರೂ ಇವರಿಗೆ ಮುಖ್ಯಮಂತ್ರಿ ಆಗೋದು ಬೇಡ! ಯಾವಾಗಲೂ ಇವರ ಕುಟುಂಬದವರನ್ನೇ ಮುಖ್ಯಮಂತ್ರಿ ಮಾಡಲಿಕ್ಕೆ ನಾವೆಲ್ಲಾ ಗುತ್ತಿಗೆ ಕಾರ್ಮಿಕರಾ? ಎಂಬ ಆಂತರಿಕ ತಳಮಳವೂ ಒಕ್ಕಲಿಗ ಮತದಾರರಲ್ಲಿ ತಲೆ ಎತ್ತಿದೆ.
ಈ ಬಗ್ಗೆ ಕಿಂಚಿತ್ತೂ ಯೋಚಿಸದ, ವಿಷಯಾತ್ಮಕ ಪ್ರತಿಧ್ವನಿಯ ಭವಿಷ್ಯದ ಪರಿಣಾಮಗಳ ಅಂದಾಜುಗಳೇ ಇಲ್ಲದ ಎಚ್ಡಿಕೆ ಬಭ್ರುವಾಹನನ ಎದುರು ನಿಂತ ಅರ್ಜುನನಂತೆ ವ್ಯರ್ಥ ಉಗ್ರಪ್ರತಾಪವನ್ನು ಮೆರೆಯುತ್ತಿದ್ದಾರೆ. ಮಾಸ್ಕ್ ಪಾರ್ಟಿಯ ರಿಯಲ್ ಡೈರೆಕ್ಟರ್ಗಳು ಎಚ್ಡಿಕೆಗೆ
ಹಿಂಬಾಲಕ ಸೇನಾನಿಗಳನ್ನೂ ನೇಮಿಸಿದೆ. ಇವುಗಳಿಂದೆಲ್ಲಾ ಕಿಕ್ ಪಡೆದುಕೊಂಡವರಂತೆ ಕುಮಾರಸ್ವಾಮಿಯವರು ತಮ್ಮ ಯಥಾವತ್ತು ಶೈಲಿಯಲ್ಲಿ ಒಂದು ಹೋರಾಟವನ್ನ್ನು ದಡಮುಟ್ಟಿಸಲು ವಾಸ್ತವ ಮತ್ತು ಕಾನೂನಾತ್ಮಕ ಶಕ್ತಿ ಸಾಲದೆ ಎಸ್ ಐ ಆರ್, ಬಿಡದಿ, ಸ್ಟಿಂಗ್...! ಎಂದೆಲ್ಲಾ ದಿನಕ್ಕೊಂದರಂತೆ ಹಿಟ್ ಆಂಡ್ ರನ್ ಹಾರಾಟ ಮಾಡುತ್ತಿದ್ದಾರೆ. ಎಸ್ಐಆರ್ ವಿಚಾರದಲ್ಲಿ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರು ಅರ್ಜಿ ಫಾರಂ 7 ನ್ನು
ಫೇಕಾಗಿ ಹಾಕಿ ಇತರರ ಮತದ ಹಕ್ಕನ್ನು ಕಳ್ಳತನ ಮಾಡಿದ್ದಕ್ಕೆ
ಎಫ್ಐಆರ್ ಹಾಕಿದರೆ ಕೇಂದ್ರ ಮಂತ್ರಿಯಂತಹ ಜವಾಬ್ದಾರಿ ಸ್ಥಾನದಲ್ಲಿ ಇರುವ ಎಚ್ಡಿಕೆ ಪೊಲೀಸ್ ಠಾಣೆಗಳಿಗೆ ನುಗ್ಗುತ್ತೇವೆ ಎಂದು ರಾಜ ಪ್ರಭುತ್ವಗಳು ಸಾಕಿಕೊಂಡಿದ್ದ ಲೂಟಿ ಗ್ಯಾಂಗ್ನ ಬಾಸ್ಗಳು ಹೇಳಿದಂತೆ ಹೇಳಿಕೆ ಕೊಡುತ್ತಾರೆ. ಇದಕ್ಕೆ ಅಶೋಕ್-ವಿಜಯೇಂದ್ರ ಬಹುಪರಾಕ್ ಹೇಳುತ್ತಾರೆ. ಭಾರತ ಈಗ ಪ್ರಜಾಪ್ರಭುತ್ವ ದೇಶ ಎಂಬ ವಿಚಾರವೇ ಇವರಿಗೆ ಜೀರ್ಣವಾಗಿಲ್ಲ. ಆರೆಸ್ಸೆಸ್ ನವರ ನಂಬಿಕೆಗಳಂತೆ ಇವರೆಲ್ಲಾ ಇನ್ನೂ ರಾಜಪ್ರಭುತ್ವವೇ ಇದೆ ಎಂದು ನಂಬಿದಂತಿದೆ.
ಈ ನಂಬಿಕೆಯು ಕುಮಾರಸ್ವಾಮಿಯವರಿಗೂ ಭವಿಷ್ಯದಲ್ಲಿ ಬೆನ್ನು ಬಲವನ್ನು ಮುರಿಯಲಿದೆ ಎಂಬ ಅರಿವಿಲ್ಲದಿರುವುದು ನಿಜದುರಂತ. ಎಸ್ಐಆರ್ ಹೋರಾಟ ರಾಜ್ಯದಲ್ಲಿ, ದೇಶದಲ್ಲಿ ತೀವ್ರಗೊಂಡ ನಂತರ ಈಗ ಮಾಸ್ಕ್ ಪಾರ್ಟಿಯ ಡೈರೆಕ್ಟರ್ಗಳು ಅದನ್ನು ಜನರ ಮನಸ್ಸಿನಿಂದ, ಸುದ್ದಿ ಮಾಧ್ಯಮಗಳಿಂದ ದೂರಕ್ಕೆ ಸರಿಸಲು ಸ್ಟಿಂಗ್ ...!
ಸ್ಟಿಂಗ್ ...!! ಎಂದು ಅಬ್ಬರಿಸಲು ಎಚ್ಡಿಕೆಗೆ ಹೇಳಿದಂತಿದೆ.
ನಮ್ಮ ದಕ್ಷಿಣ ಕರ್ನಾಟಕದ ಬಯಲು ಸೀಮೆಯಲ್ಲಿ ಒಂದು ಗಾದೆ ಮಾತಿದೆ. ತಿರುಗಾಲು ತಿಪ್ಪಾ, ಜಾರುದೋತ್ರದ ಮನೆಯ ಯಜಮಾನರುಗಳಿಗೆ ಅವರ ಹೆಂಡತಿಯರು ಹೇಳುವ ಮಾತು ಅದು. ಹೊತ್ತಲ್ಲದ ಹೊತ್ತಲ್ಲಿ ಗಂಡ ಮನೆ ಬಿಟ್ಟು ಹೊಲಕ್ಕೆ ಹೋದ ಅಂದ್ರೆ ಹೊಲನೂ ಮುಳುಗು ಮನೆನೂ ಮುಳುಗು ಅಂತ. ಸ್ಟಿಂಗ್ ಮಾಡಿದವನು ಮಾಡಿಸಿಕೊಂಡವನು ಇಬ್ಬರ ಮನಸ್ಥಿತಿಯೂ ಒಂದೇ. ಅದು ವಿಕೃತ ಅವಕಾಶವಾದ. ಆದರೆ ಗಂಡು ಹೆಣ್ಣಿನ ಕೂಡಿಕೆಯ ಪಾವಿತ್ರ್ಯವನ್ನು ತನ್ನದೇ ಕ್ಯಾಮರಾದಲ್ಲಿ ಸ್ವಯಂ ಸ್ಟಿಂಗ್ ಮಾಡಿಕೊಂಡವನು ಮಾತ್ರ ಕಡುವಿಕೃತ ಪಾಪಿ. ಇದು ಇಂದು-ನಿನ್ನೆಯದಲ್ಲ.ಮನು-ಚಾಣಾಕ್ಯರ ರಾಜಕೀಯ-ಅರ್ಥಶಾಸ್ತ್ರದ ಕಾಲದ್ದು. ಬದುಕಿನ ಎಲ್ಲಾ ಸೌಂದರ್ಯಗಳ ಜೊತೆಗೆ ಎಚ್ಚರ ಇರಬೇಕಾದದ್ದು ಮಾತ್ರ ನಾಯಕನಾದವನಿಗೆ ಎಲ್ಲಕ್ಕಿಂತ ಮೊದಲು ಇವರೊಳಗೆ ಇರಬೇಕಾದದ್ದು ಪ್ರಜಾಪ್ರಭುತ್ವದ, ಸಂವಿಧಾನದ ಎಚ್ಚರ ಎಂಬುದಷ್ಟೇ ಇಲ್ಲಿ ಮುಖ್ಯ. ಇದಿಲ್ಲವಾದರೆ ಯಾರಾದರೂ ಸರಿ; ಬಭ್ರುವಾಹನನ ಎದುರು ನಿಂತ ನೀತಿಭ್ರಷ್ಟ ಅರ್ಜುನನಂತೆಯೇ ಕೇವಲ ಉಗ್ರ ಪ್ರತಾಪಿಗಳಾ ಗುತ್ತಾರೆ. ಸದ್ಯದ ಸ್ಥಿತಿಯಲ್ಲಿ ಕುಮಾರಸ್ವಾಮಿಯವರು ಇಲ್ಲಿಗೆ ಬಂದು ನಿಂತಿದ್ದಾರೆ.






