Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಡಿಎಸ್ಸೆಸ್ ಎಂಬ ಮರ ಮತ್ತೆ ಚಿಗುರಲು...

ಡಿಎಸ್ಸೆಸ್ ಎಂಬ ಮರ ಮತ್ತೆ ಚಿಗುರಲು ಸಾಧ್ಯವೇ?

ಬಿ. ಶ್ರೀನಿವಾಸ, ದಾವಣಗೆರೆಬಿ. ಶ್ರೀನಿವಾಸ, ದಾವಣಗೆರೆ9 Dec 2023 10:54 AM IST
share
ಡಿಎಸ್ಸೆಸ್ ಎಂಬ ಮರ ಮತ್ತೆ ಚಿಗುರಲು ಸಾಧ್ಯವೇ?

ಒಂದು ಕಾಲದ ದಲಿತ ಲೋಕದ ಜನರಲ್ಲಿ ಅವಮಾನ, ಬಡತನದ ಸಂಕಟಗಳ ವಿರುದ್ಧ ಹುಟ್ಟಿದ ಹೋರಾಟಗಳೆಲ್ಲ ಇಂದು ತಣ್ಣಗಾಗಿವೆ. ದಲಿತ ಸಂವೇದನೆ ಎಂದರೆ ಮಾನವೀಯ ಸಂವೇದನೆ ಎಂದು ಭಾವಿಸಿದ್ದವರೆಲ್ಲ ಇಂದು ಬದಲಾಗಿದ್ದಾರೆ. ದಲಿತರ ರಕ್ಷಣೆಗಾಗಿಯೇ ಹುಟ್ಟಿಕೊಂಡ ಹೋರಾಟದ ದನಿಗಳಿಂದು ಕೇವಲ ಸರ್ಕಲ್‌ಗಳು, ರಸ್ತೆಗಳ ಮೇಲಿನ ಘೋಷಣೆಗಳಿಗೆ ಮಾತ್ರವೇ ಸೀಮಿತವಾಗಿವೆ. ಹೋರಾಟದ ಗಟ್ಟಿಯಾದ ಧ್ವನಿಯಲ್ಲಿ ಹಾಡುತ್ತಿದ್ದ ಕ್ರಾಂತಿಗೀತೆಗಳೆಲ್ಲ ಇಂದು ಭಾವಗೀತೆಗೆ ತಿರುಗಿವೆ. ಅಸಿಸ್ಟೆಂಟ್ ಕಮಿಷನರ್, ಡಿಸ್ಟ್ರಿಕ್ಟ್ ಕಮಿಷನರ್ ಆಫೀಸುಗಳಿಗೆ ಮೆಮೊರಾಂಡಮ್ ಕೊಟ್ಟು ನಿಟ್ಟುಸಿರು ಬಿಡುವುದಕ್ಕೆ ಮಾತ್ರ ಹೋರಾಟಗಳು ಸೀಮಿತವಾಗಿಬಿಟ್ಟಿವೆ.

ಭದ್ರಾವತಿಯ ವಿಶ್ವೇಶ್ವರಯ್ಯ ಕಾರ್ಖಾನೆಯ ಆಡಳಿತಕ್ಕೊಳಪಟ್ಟಿದ್ದ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ.ಬಿ.ಕೃಷ್ಣಪ್ಪ ಮೊತ್ತಮೊದಲು ದಲಿತ ಸಂಘಟನೆಗಳನ್ನು ಕಟ್ಟುವಾಗ ಬೆರಳೆಣಿಕೆಯಷ್ಟು ಮಂದಿ ಮಾತ್ರವೇ ಅವರೊಂದಿಗೆ ಇದ್ದರು. ಕೆಲವು ಬಾರಿ ಇಬ್ಬರೋ ಮೂವರೋ ಇದ್ದರೂ ಅವರ ಪಾಠಗಳು ನಿಲ್ಲುತ್ತಿರಲಿಲ್ಲ. ಕೃಷ್ಣಪ್ಪನವರ ಸಮಾನತೆಯ ಪಾಠಗಳು ಬರೀ ಪಾಠಗಳಿಗಷ್ಟೆ ಸೀಮಿತವಾಗಿರಲಿಲ್ಲ. ಅವರು ಕೇವಲ ಮೇಷ್ಟ್ರಾಗಿರಲಿಲ್ಲ, ದಲಿತರ ಹಸಿದ ಹೊಟ್ಟೆಗಳಿಗೆ ಸ್ವತಃ ತಾವೇ ಅಡುಗೆ ಮಾಡಿ ಅನ್ನ ಬಡಿಸುವ ತಾಯಿಯಾಗಿದ್ದರು ಎಂದು ದಾವಣಗೆರೆಯ ದಲಿತ ಚಿಂತಕ ಬಿ.ಎಂ.ಹನುಮಂತಪ್ಪ ಇಂದಿಗೂ ಅಭಿಮಾನ, ಗೌರವದಿಂದ ನೆನಪಿಸಿಕೊಳ್ಳುತ್ತಾರೆ. ಕನ್ನಡ ಪ್ರಾಥಮಿಕ ಶಾಲೆಯ ಧ್ವಜದ ಕಟ್ಟೆ, ರವಿವಾರದ ರಜಾ ದಿನಗಳಂದು ಊರಿನ ಗ್ರಾಮಚಾವಡಿಯ ಪಡಸಾಲೆ, ಊರಿನ ತಟ್ಟಿಹೋಟೆಲುಗಳಲ್ಲಿ ಸುರುವಾದ ಚರ್ಚೆಗಳು ಹರಿಯುತ್ತಾ ಬೃಹತ್ ಸಂಘಟನೆಯೊಂದಿಗೆ ಬೆಳೆದಿದ್ದು ಇತಿಹಾಸ. ಇಂತಹ ಸಣ್ಣ ಸಣ್ಣ ತೊರೆಗಳು ನಾಡಿನ ಉದ್ದಕ್ಕೂ ಸಾವಿರಾರು ನದಿಗಳಾಗಿ ಹರಿಯುವಂತೆ ಮಾಡುವಲ್ಲಿ ಸಾವಿರಾರು ದಲಿತ ಚಿಂತಕರು, ಸಾಹಿತಿಗಳು ಶ್ರಮವಹಿಸಿದರು. ಹತ್ತು, ಇಪ್ಪತ್ತರಷ್ಟಿದ್ದ ಕಾರ್ಯಕರ್ತರು ನೂರು, ಸಾವಿರಕ್ಕೇರಿ ರಾಜ್ಯಾದ್ಯಂತ ಲಕ್ಷಾಂತರ ದಲಿತ ಕಾರ್ಯಕರ್ತರ ಸಾಕ್ಷಿಪ್ರಜ್ಞೆಯಾಗಿ ತಾವು ಬೆಳೆದಿದ್ದಲ್ಲದೆ ಲಕ್ಷಾಂತರ ಕಾರ್ಯಕರ್ತರನ್ನೂ ಬೆಳೆಸಿದರು.

ಬಡತನದಲ್ಲಿ ಹುಟ್ಟಿ ಬೆಳೆದ ಹೋರಾಟಗಳು ಬಡವನನ್ನೇ ಬಲಿತೆಗೆದುಕೊಳ್ಳುವ ಕಾಲವೊಂದರಲ್ಲಿ ಅಂಬೇಡ್ಕರ್ ಬೆಳಕಿನಲ್ಲಿ, ಕೃಷ್ಣಪ್ಪನವರ ಕೂಗಿನಲ್ಲಿ ಹೊಸ ಭರವಸೆಯನ್ನು ಕಂಡ ಹುಡುಗ ಬಿ.ಎಂ.ಹನುಮಂತಪ್ಪ. ದಲಿತರ ಸಾಮಾಜಿಕ ಸ್ಥಿತಿಗತಿಗಳನ್ನೂ ಸಂವಿಧಾನದತ್ತ ಹಕ್ಕುಗಳನ್ನೂ, ಸರಕಾರದ ಕರ್ತವ್ಯಗಳನ್ನೂ ಆಳವಾಗಿ ಅಧ್ಯಯನ ಮಾಡಿ ಅಂಬೇಡ್ಕರ್ ಪ್ರತಿಪಾದಿಸಿದ ಭೂಮಿಯ ರಾಷ್ಟ್ರೀಕರಣದ ಕನಸನ್ನೂ ಕಾಣತೊಡಗಿದವರು. ಅದೊಂದು ದಿನ ಭೂಮಿಗಾಗಿ ಹೋರಾಟವೊಂದನ್ನು ರೂಪಿಸಿದ ಈ ಹುಡುಗನ ವಿಷಯ ಅದು ಹೇಗೋ ಪತ್ರಿಕೆಗಳ ಮೂಲಕ ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸುರವರ ಗಮನ ಸೆಳೆದು, ತನ್ನ ಸರಕಾರದ ಮಂತ್ರಿಯಾಗಿದ್ದ ಬಸವಲಿಂಗಪ್ಪನವರನ್ನು ಚಳ್ಳಕೆರೆಯ ಆ ಹುಡುಗ ಮತ್ತವನ ಹೋರಾಟದ ಸಂಗಾತಿಗಳ ಹತ್ತಿರ ಕಳಿಸಿದರು. ಆಗ ದಲಿತ ಸಂಘರ್ಷ ಸಮಿತಿಯ ಈ ಹುಡುಗನ ಹತ್ತಿರವಿದ್ದ ಮಾಹಿತಿ ಮತ್ತು ದಲಿತರ ಭೂಮಿ ಕುರಿತಾದ ಸಲಹೆಗಳನ್ನೂ ಕೇಳಿ ಜನಪರವಾಗಿ ಆಲೋಚಿಸುತ್ತಿದ್ದ, ದೀನ ದಲಿತರಿಗೆ ಆಸರೆಯಾಗಿದ್ದ ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸು ರೋಮಾಂಚಿತರಾದರು. ಹೀಗೆ ಅಂದು ದಲಿತ ಸಂಘರ್ಷ ಸಮಿತಿಯ ಒಬ್ಬ ಸಾಮಾನ್ಯ ಕಾರ್ಯಕರ್ತನೊಬ್ಬನ ಕನಸಾದ ಉಳುವವನೇ ಒಡೆಯ ಕಾನೂನು, ಸರಕಾರಿ ಜಮೀನುಗಳನ್ನು ಭೂರಹಿತರಿಗೆ ಮಂಜೂರು ಮಾಡುವ ಸಲುವಾಗಿ ನಾಡಿನ ಉದ್ದಕ್ಕೂ ಲ್ಯಾಂಡ್ ಗ್ರ್ಯಾಂಟ್ ಕಮಿಟಿಗಳನ್ನು ರಚಿಸುವ ಮೂಲಕ ಕ್ರಾಂತಿಕಾರಕ ನಿರ್ಧಾರಗಳನ್ನು ಅರಸು ಕೈಗೊಂಡರು.ಇಂತಹ ಚಾರಿತ್ರಿಕ ಹಿನ್ನೆಲೆಯುಳ್ಳ ಡಿಎಸ್ಸೆಸ್‌ಗೆ ಇಂದು ಗರ ಬಡಿದಂತಿದೆ.

ದಲಿತರು ತಮ್ಮ ಹಿಂದಿನ ಮುಗ್ಧತೆಯನ್ನು ಕಳದುಕೊಂಡಿರುವುದು ಮೆಚ್ಚಬಲ್ಲ ವಿಷಯವಾದರೂ ಗುಲಾಮಿ ಧರ್ಮಗಳ ವಿಧೇಯತೆಯಿಂದ ಕಪಿಮುಷ್ಟಿಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತಮಿಳು ನಾಡು, ಕೇರಳದಲ್ಲಿ ಬಸವಣ್ಣ, ಪೆರಿಯಾರ್, ಫುಲೆ,ಅಂಬೇಡ್ಕರ್, ನಾರಾಯಣ ಗುರು ಅವರಂತಹ ಹಲವಾರು ದಾರ್ಶನಿಕರು ಹುಟ್ಟಿಬಂದು ಉರಿದೆದ್ದ ದಂಗೆಕೋರರೆನ್ನಿಸಿಕೊಂಡವರು. ಕರ್ನಾಟಕದಲ್ಲಿ ಸಿದ್ದಲಿಂಗಯ್ಯನವರ ಹಾಡುಗಳೇ ಎಷ್ಟೋ ಬಾರಿ ಜನರನ್ನು ಸೇರಿಸುವಲ್ಲಿ ಯಶಸ್ವಿಯಾದವು. ದೇವನೂರರ ಮಾತುಗಳನ್ನು ಕೇಳಲು ಜನ ಹಾತೊರೆದರು. ಇಂತಹ ಕಾಲಘಟ್ಟವೊಂದು ಈಗ ನಿಶ್ಶಬ್ದಕ್ಕೆ ತಿರುಗಿದೆ. ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಹೊಂದಿದ್ದ ದಲಿತ ಸಮುದಾಯಗಳು ವಿಸ್ಮತಿಗೆ ಸರಿದವರಂತೆ ಪೂಜೆ, ಹೋಮಗಳಂತಹ ಆಚರಣೆಗಳಿಗೆ ಬದಲಾದರು. ಮಾರ, ತಿಮ್ಮ, ಹನುಮ,ಬೋರ, ಚೌಡಮ್ಮ, ತಿಪ್ಪಮ್ಮ ಎಂಬ ಹೆಸರುಗಳೆಲ್ಲ ಇಂದು ಚಕ್ರಪಾಣಿ, ಅನಂತ ಪದ್ಮನಾಭ, ಸೂರ್ಯನಾರಾಯಣ, ಭುವನೇಶ್ವರಿ, ಮಾಧವಿ...ಹೀಗೆ ಬದಲಾಗಲಷ್ಟೆ ಸೀಮಿತವಾಗಿಬಿಟ್ಟಿತು.

ರಾಜಕೀಯ ಅವಕಾಶವಾದಿತನಗಳ ಬೆನ್ನುಬೀಳದೆ, ಸೈದ್ಧಾಂತಿಕ ಬದ್ಧತೆಯಿಂದ ಕಾರ್ಯನಿರ್ವಹಿಸಿದ್ದೇ ಆದಲ್ಲಿ ಡಿಎಸ್ಸೆಸ್ ಎಂಬ ದಲಿತರ ಅಂತರಂಗವು ಇವತ್ತೂ ಮರುಜನ್ಮ ಪಡೆಯಬಲ್ಲುದು. ಒಂದು ಕಾಲದಲ್ಲಿ ಬಹುದೊಡ್ಡ ವೈಚಾರಿಕ ಕ್ರಾಂತಿಯನ್ನುಂಟು ಮಾಡಿದ್ದು ಬಸವಣ್ಣ. ಕರುನಾಡಿನಲ್ಲಿ ಅವರನ್ನು ಮತ್ತೆ ಮತ್ತೆ ನೆನಪಿಸುವ ಹಾಗೆ ಮಾಡಿದ್ದ ಡಿ.ಎಸ್.ಎಸ್., ಇಂದು ವೈಚಾರಿಕವಾಗಿ,ಸಾಮಾಜಿಕವಾಗಿ, ಅಪ್ರಸ್ತುತವಾಗುತ್ತ ಸಾಗಿದೆ. ಒಂದುಕಾಲದಲ್ಲಿ ಸರಕಾರದ ನೀತಿ ನಿರೂಪಕ ಸ್ಥಾನವನ್ನು ಅಲಂಕರಿಸಬಲ್ಲ ತಾಕತ್ತಿದ್ದ, ಡಿಎಸ್ಸೆಸ್‌ನ ಒಬ್ಬೊಬ್ಬ ಸಾಮಾನ್ಯ ಕಾರ್ಯಕರ್ತನೂ ದೇಶದ ಸಂಪನ್ಮೂಲ ವ್ಯಕ್ತಿಯಾಗಬಲ್ಲವನಾಗುವ ಶಕ್ತಿಯಿದ್ದ ದಲಿತ ಸಂಘರ್ಷ ಸಮಿತಿಯು ಇಂದು, ಅದರಲ್ಲಿನ ಯಾರೋ ಕೆಲವರು ಯಾವಾಗ ಹಫ್ತಾ ಹೆಸರಿನಲ್ಲಿ ವಸೂಲಿಗಿಳಿದರೋ ಅಂದಿನಿಂದ ಇಲ್ಲಿಯವರೆಗೂ ದಲಿತ ಸಂಘರ್ಷ ಸಮಿತಿಯ ಧ್ವನಿ ಉಡುಗಿಹೋಯಿತು. ದ.ಸಂ.ಸ. ಆ ಬಣ, ಈ ಬಣಗಳೆಂದು ಬಡಿವಾರದ ಬಡಿದಾಟಗಳಲ್ಲಿ, ಎಡ-ಬಲಗಳೆಂಬ ಬಲಾಬಲ ಪ್ರದರ್ಶನಗಳಿಗೆ ಸಂಘಟನೆ ಆಹುತಿಯಾಗಿಬಿಟ್ಟಿತು. ಅತ್ಯಂತ ಬದ್ಧತೆಯ ಜನ ಧ್ವನಿಯಾಗಬಹುದಾಗಿದ್ದ ಬೃಹತ್ ಚಳವಳಿಯ ಅಂತರಂಗವೊಂದು ಸದ್ದಿಲ್ಲದೆ ಮಲಗಿಬಿಟ್ಟಿತು ಎಂದು ಬಿ.ಎಂ.ಹನುಮಂತಪ್ಪ ಎಂಬ ಎಪ್ಪತ್ತರ ಹೋರಾಟಗಾರ ಹೇಳುವಾಗ ಎದೆಯಲ್ಲಿ ಅಗಾಧ ನೋವು ಸಂಕಟಗಳನ್ನು ಹೊತ್ತವರ ಹಾಗೆ ಕಾಣಿಸುತ್ತಾರೆ.

ದೇಶದ ವಿದ್ಯಮಾನಗಳನ್ನು ಗಮನಿಸುವಾಗ ಹಿಂದೆಂದೂ ಕೇಳದ ಸಂವಿಧಾನ ಬದಲಾವಣೆಯ ವಿಷಯಗಳು ಮುಂಚೂಣಿಗೆ ಬರುತ್ತಿವೆ. ಸಾಮಾಜಿಕ ನ್ಯಾಯದ ಅಪವ್ಯಾಖ್ಯಾನ, ಮೀಸಲಾತಿಯಂತಹ ವಿಚಾರಗಳ ತಿರುಚುವಿಕೆ, ದಲಿತರ ಮೇಲಿನ ದೌರ್ಜನ್ಯಗಳು ಅವ್ಯಾಹತವಾಗಿ ಸಾಗಿವೆ. ಇಂತಹ ಕಾಲಘಟ್ಟದಲ್ಲಿ ಕರ್ನಾಟಕದ ನಿರುದ್ಯೋಗಿ ದಲಿತ ಯುವಕರು ಬೆಳೆಯಬೇಕಾದವರು. ಅವರ ಹಸಿವು, ಅತೃಪ್ತಿ, ಹಂಬಲ, ಅಸಂತೋಷಗಳು ಬೆಳವಣಿಗೆಯ, ಏಳ್ಗೆಯ ಮೂಲವಾಗಬೇಕಿತ್ತು. ಹಸಿದು ಒಳಗಿನ ಕಿಡಿ ನಿಗಿನಿಗಿ ಕೆಂಡವಾಗಬೇಕಿತ್ತು. ಆದರೆ ಕೆಂಡದ ಬಿಸಿಯ ಕಾವು ಒತ್ತಟ್ಟಿಗಿರಲಿ, ಹೊಗೆಯೂ ಸೂಸುತ್ತಿಲ್ಲ.

ಮರ ಒಣಗಿದಾಗ ಅದಕ್ಕೆ ಕೊಡಲಿಯೇಟು ಬೀಳಬೇಕಾಗುತ್ತದೆ. ಆದರೆ ಅದರ ಬೀಜದಿಂದ ಬೇರೆ ಮರಗಳೂ ಹುಟ್ಟಿ ಬೆಳೆಯುತ್ತವೆ. ಹಾಗೆಯೇ ಪರಂಪರೆ ಮುಂದುವರಿಯುತ್ತದೆ.

ಡಿಎಸ್ಸೆಸ್ ಪರಂಪರೆ ಎನ್ನುವುದು ಐತಿಹಾಸಿಕ ಪ್ರಜ್ಞೆ.ಅದು ಎಂದಿಗೂ ಸಾಯುವುದಿಲ್ಲ ಎಂಬ ಆಶಾವಾದದಲ್ಲಿಯೇ ಹನುಮಂತಪ್ಪರಂತಹ ಎಷ್ಟೋ ಹಿರಿಯ ಜೀವಗಳು ಇಂದಿಗೂ ಬದುಕುತ್ತಿದ್ದಾರೆ.

share
ಬಿ. ಶ್ರೀನಿವಾಸ, ದಾವಣಗೆರೆ
ಬಿ. ಶ್ರೀನಿವಾಸ, ದಾವಣಗೆರೆ
Next Story
X