ಸಾಮಾಜಿಕ ಮನೋವಿಕಾಸಕ್ಕೆ ಸವಾಲಾಗುತ್ತಿದೆಯೇ ಆಧುನಿಕ ತಂತ್ರಜ್ಞಾನ?

ಅತ್ಯಾಧುನಿಕ ತಂತ್ರಜ್ಞಾನ ಕೆಲವರಿಗೆ ಅತಿ ಉಪಯುಕ್ತವಾಗಿರುವುದರಲ್ಲಿ ಸಂದೇಹವಿಲ್ಲ. ಹಾಗೆಯೇ ಕೆಲವರಿಗೆ ಮಾರಕವಾಗಿರಬಹುದೇ ಎನ್ನುವ ಪ್ರಶ್ನೆಯೂ ಇದೆ. ಇಂದು ವ್ಯಕ್ತಿ ಜೀವನದ ಆಯಾಮಗಳೆಲ್ಲದರಲ್ಲಿಯೂ ಸಂಪರ್ಕವನ್ನು ಉತ್ತಮಗೊಳಿಸಿರುವ ವಿನೂತನ ಸಾಧನ, ಪರಿಕರಗಳು ಬಹಳ ಸುಲಭವಾಗಿ ಲಭ್ಯವಿದೆ. ಕಾಸಿಗೆ ತಕ್ಕಂತೆ ಕಜ್ಜಾಯ ಎನ್ನುವ ಜಾಣ ನುಡಿಯಂತೆ, ವ್ಯಕ್ತಿ ಬಳಕೆಯ ಅಗತ್ಯಗಳಿಗೆ ಅನುಗುಣವಾದ ಬೆಲೆಯಲ್ಲಿ ಕಂಪ್ಯೂಟರ್, ಮೊಬೈಲ್ ಸಲಕರಣೆಗಳಿಂದು ಹೇರಳವಾಗಿ ಲಭ್ಯ. ಇವುಗಳ ನಿರ್ವಹಣೆ ಕೂಡ ಕಷ್ಟಕರವಲ್ಲ. ಇನ್ನು ಇವುಗಳ ಕಾರ್ಯಸಾಮರ್ಥ್ಯ ಹೆಚ್ಚಿಸಿ ಸುಗಮವಾಗಿ ಸಾಗುವಂತೆ ಮಾಡುವ ಅಂತರ್ಜಾಲದ ವಿತರಣಾ ಕಂಪೆನಿಗಳು ಪೈಪೋಟಿ ಬೆಲೆಯಲ್ಲಿ ಗ್ರಾಹಕರ ಅಗತ್ಯಗಳನ್ನು ಪೂರೈಸಬಲ್ಲದ್ದಾಗಿವೆ. ಈ ಸೌಲಭ್ಯಗಳು ದಿನನಿತ್ಯದ ಬಯಕೆ, ಬೇಡಿಕೆಗಳಿಗೆ ಪರಿಹಾರ ನೀಡುವಲ್ಲಿ ನೆರವಾಗಿದ್ದರೂ ಮನೋವಿಕಾಸ, ಮನೋಭಾವಗಳನ್ನು ಬಲಪಡಿಸುವಲ್ಲಿ ಎಡವಟ್ಟುಗಳನ್ನು ತಂದೊಡ್ಡುತ್ತಿರುವುದು ಸ್ಪಷ್ಟ. ತಂತ್ರಜ್ಞಾನದ ಪ್ರತಿಯೊಬ್ಬ ಬಳಕೆದಾರರಿಗೂ ಇದೊಂದು ಸಮಸ್ಯೆ ಎನಿಸದಿದ್ದರೂ ಬಾಲ್ಯದಲ್ಲಿ ಎದುರಾಗುವ ಹತಾಶೆ, ಸೋಲುಗಳನ್ನು ನೇರವಾಗಿ ಎದುರಿಸುವ ಸಾಮರ್ಥ್ಯಗಳನ್ನಿದು ಕಸಿದುಕೊಳ್ಳುತ್ತಿರುವುದರ ಬಗ್ಗೆ ಮನೋವೈಜ್ಞಾನಿಕ ಪುರಾವೆಗಳಿವೆ. ಮನುಷ್ಯರಲ್ಲಿ ಹಸಿವು, ನೀರಡಿಕೆ, ನಿದ್ರೆ ಎಷ್ಟು ಸಹಜವೋ ಅಷ್ಟೇ ಸಹಜವಾಗಿರುತ್ತವೆ ಸಮಸ್ಯೆಗಳು. ಕೆಲವರು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಾರೆ, ಮತ್ತೆ ಕೆಲವರು ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ ಇಲ್ಲವೇ ಪ್ರಯತ್ನಗಳ ಮೂಲಕವೇ ಪರಿಹಾರದ ಶಮನವನ್ನು ಅನುಭವಿಸುತ್ತಾರೆ. ಅಂದಮೇಲೆ ಪರಿಹಾರ ಕಂಡುಕೊಳ್ಳುವ ರೀತಿಯಲ್ಲಿ ಪ್ರಯತ್ನ, ಸೋಲು, ನಂತರದಲ್ಲಿ ಅರಿವು ಇದ್ದೇ ಇರುವುದು. ಈ ಪರಿಯಲ್ಲಿ ಸಾಗುವ ಸಮಸ್ಯಾ ಪರಿಹಾರದ ಪ್ರಕ್ರಿಯೆಯೇ ಬುದ್ಧಿಶಕ್ತಿ ಇರುವದರ ಸೂಚಿ. ಸಮಸ್ಯೆಗಳು ಇರುವುದೇ ಬುದ್ಧಿಶಕ್ತಿಯ ಪ್ರಕಟಣೆಗಾಗಿ ಎನ್ನುವ ಮನೋವಿಜ್ಞಾನಿಗಳೂ ಇದ್ದಾರೆ. ಈ ಪ್ರತಿಯೊಂದು ಹಂತದಲ್ಲಿಯೂ ಒಂದಿಲ್ಲೊಂದು ಮನೋಬಲ ಚಿಗುರುತ್ತಲೇ ಮುಂದುವರಿಯುವುದು ಸಹಜ ಪಕ್ವತೆಯ (ಮೆಚ್ಯುರೇಷನ್ ಎನ್ನುವ ಮನೋವಿಜ್ಞಾನ ಪದ) ರೀತಿ.
ಆದರಿಂದು ಸಮಸ್ಯೆಗಳು ಎದುರಾದಾಗ ಮೊಬೈಲ್, ಅಂತರ್ಜಾಲದ ಸೌಲಭ್ಯಗಳ ಮೂಲಕ ತಪ್ಪಿಸಿಕೊಳ್ಳುವ ಪ್ರಯತ್ನಗಳು ಕಿರಿಯರಲ್ಲಿಯೇ ಹೆಚ್ಚಾಗಿ ಕಂಡುಬರುತ್ತಿವೆ. ಹಾಗೆಂದ ಮಾತ್ರಕ್ಕೆ ವಯಸ್ಕರಲ್ಲಿ ಇಲ್ಲವೆಂದೆಲ್ಲಾ. ಅವರಲ್ಲಿಯೂ ಮೊಬೈಲ್, ಅಂತರ್ಜಾಲದ ಅನಗತ್ಯ ಅವಲಂಬನೆಗಳು ಹೆಚ್ಚಾಗುತ್ತಿರುವುದು ಬಲ್ಲ ಸಂಗತಿ. ಮನರಂಜನೆಯ ಹೆಸರಲ್ಲಿ ಮೈಮರೆಯುವಿಕೆಯು ಮೈಗಳ್ಳತನದ ರೂಪ ತಾಳುತ್ತಿರುವುದು ಹೆಚ್ಚಾಗುತ್ತಿದೆ. ಪೋಷಕರಲ್ಲಿ ಇದು ಪ್ರಬಲವಾದಾಗ ಮನೆಯಲ್ಲಿರುವ ಮಕ್ಕಳ ಹೊಂದಾಣಿಕೆಯ ಸಮಸ್ಯೆಗಳು ಉಲ್ಬಣಗೊಳ್ಳದಿರುವುದು ಅಪರೂಪ.
ಸಮಸ್ಯೆಗಳನ್ನು ಮರೆಯಲು ಮಕ್ಕಳನ್ನು ಕಾಡಿಸುವ ಪೋಷಕರು
ಮಕ್ಕಳ ಅಳು, ತುಂಟಾಟ, ಕಣ್ತಪ್ಪಿಸುವ ಚಟುವಟಿಕೆಗಳನ್ನು ಇಂತಹ ಪೋಷಕರು ಸಹಿಸಿಕೊಳ್ಳಲಾರರು. ಆದರೆ ಈ ನಮೂನೆಯ ವರ್ತನೆಗಳು ಇರದ ಬಾಲ್ಯ ಅನಾರೋಗ್ಯದ ಸೂಚಿಯೂ ಆಗಿರಬಲ್ಲದು. ಹೀಗಾಗಿ ಇವೆಲ್ಲವು ಬಾಲ್ಯವಿಕಾಸದ ಅಗತ್ಯ ಸ್ಥಿತಿಗಳು. ನಾನಾ ಕಾರಣಗಳಿಂದ ಮಕ್ಕಳ ತುಂಟಾಟ, ಮೊಂಡುತನದ ವರ್ತನೆಗಳನ್ನು ಸಹಿಸಿಕೊಳ್ಳಲಾಗದ ಪೋಷಕರು ಶಿಕ್ಷೆಯ ಬದಲಿಗೆ ಅಂಗೈಹಿಡಿತದ ಮೊಬೈಲ್ ಕೊಡುವುದೀಗ ಹೊಸ ವಾಡಿಕೆ. ಇದರಿಂದ ಸಿಗುವ ಪೋಷಕರ ತೃಪ್ತಿ ಹೆಚ್ಚು ದಿನ ಇರಲಾರದು ಎನ್ನುವುದರ ಬಗ್ಗೆ ಅವರ ಯೋಚನೆ ಇರದು. ದಿನ ಕಳೆದಂತೆ ಮಕ್ಕಳು ಬೆಳೆಯುತ್ತಾರೆ. ಅದರೊಂದಿಗೆ ಅವರ ಆಸಕ್ತಿ, ಆಕರ್ಷಣೆಗಳೂ ಬದಲಾಗುವುದು ಪ್ರಕೃತಿಯ ವಿಧಿ. ಆದರೆ ಅತಿ ಎಳೆಯತನದಿಂದಲೇ ಮೊಬೈಲಿನ ತೆರೆಗಳಿಗೆ ಮನಸೋಲುವ ಮಕ್ಕಳ ಮನಸ್ಸು ನಂತರದಲ್ಲಿ ಸರಾಗವಾಗಿ ಬದಲಾಗದು. ಮಕ್ಕಳ ಕೈಯಲ್ಲಿರುವ ಮೊಬೈಲನ್ನು ಕಸಿದುಕೊಳ್ಳಬಹುದು, ಆದರೆ ಅವರ ಮನದಾಳವನ್ನು ಪ್ರವೇಶಿಸಿರುವ ಮೊಬೈಲ್ ಬಯಕೆಯನ್ನು ಹೇಗೆ ಕಸಿದುಕೊಳ್ಳುವುದು? ಮೊಬೈಲಿನಿಂದ ಮಕ್ಕಳ ಮನಸ್ಸನ್ನು ಕಿತ್ತುಕೊಳ್ಳುವುದು ಸುಲಭವಲ್ಲವೆನ್ನುವುದೇ ನನ್ನ ಅನುಭವ. ಪೋಷಕರು ಕಳಕಳಿಯಿಂದ ಹೇಳುವ ಓದು, ಬರೀ ಆಟವಾಡು ಎನ್ನುವ ಮಾತುಗಳೆಲ್ಲದಕ್ಕೂ ಉದಾಸೀನ, ವಿರೋಧ ಅಥವಾ ಆಕ್ರೋಶವಷ್ಟೇ ಪ್ರತಿಕ್ರಿಯೆಯಾಗಿ ಹೊರಬಂದಾಗ ಏನಾಗುತ್ತದೆ ಎನ್ನುವುದನ್ನು ಒತ್ತಿಹೇಳುವ ಅಗತ್ಯವಿಲ್ಲ. ತಮ್ಮ ಮಕ್ಕಳ ಈ ನಮೂನೆಯ ವರ್ತನೆಯನ್ನು ಸಹಿಸಿಕೊಂಡು ಸುಮ್ಮನಿರುವ ಪೋಷಕರ ಸಂಕಟ ಹೇಗೆ ಇರಬಲ್ಲದು ಎನ್ನುವುದು ನಿಮ್ಮ ಅನುಭವಕ್ಕೆ ಬಿಟ್ಟಿದ್ದು. ಸರಳವಾಗಿ ಹೇಳುವುದಾದರೆ ಇಂತಹ ನಡೆನುಡಿಗಳ ನೇರ ಪರಿಣಾಮ ಮನೆಯ ವಾತಾವರಣ ಮತ್ತು ಮಗುವಿನ ಶೈಕ್ಷಣಿಕ, ಸಾಮಾಜಿಕ ಹೊಂದಾಣಿಕೆಗಳ ಮೇಲೆ ಆಗುವುದಂತೂ ಖಂಡಿತ. ಬಾಲ್ಯದ ಮನೋವಿಕಾಸದ ನಿಯಮಗಳು ಬಹುಸೂಕ್ಷ್ಮವಾಗಿರುವುದರೊಂದಿಗೆ ಅತಿ ಕ್ಷಿಪ್ರವಾಗಿ ಬದಲಾಗಿ ಬಿಡುತ್ತದೆ ಎನ್ನುತ್ತವೆ ಮನೋವೈಜ್ಞಾನಿಕ ತತ್ವಗಳು. ಅಂತೆಯೇ ವಯೋಮಾನಕ್ಕೆ ಅನುಗುಣವಾಗಿ ಕಾಣಿಸಿಕೊಳ್ಳುವ ಬೆಳವಣಿಗೆಗಳು ಸಮಪರ್ಕವಾಗಿ ಮುಂದುವರಿಯದಿದ್ದಾಗ ಆ ಹಂತಕ್ಕೆ ಅನುರೂಪವಾದ ವಿಕಾಸವನ್ನು ಮತ್ತೆ ತರುವುದು ಅಸಾಧ್ಯ. ಅದೆಷ್ಟೋ ಮಕ್ಕಳಲ್ಲಿ ಇಂತಹ ಸ್ಥಿತಿಗಳು ಉಂಟಾಗುವುದರ ಪರಿಣಾಮವು ನಂತರದ ವಿಕಾಸದ ಹಾದಿಯಲ್ಲಿ ಗೋಚರಿಸುತ್ತವೆ. ಹದಿಹರೆಯ ಮತ್ತು ಹೊಸ ವಯಸ್ಕತನದ ಆರಂಭದಲ್ಲಿ ಕಾಣಿಸಿಕೊಳ್ಳುವ ರೂಢಿಗತ (ಮನೋವಿಜ್ಞಾನದಲ್ಲಿ ಸ್ಟೀರಿಯೊ ಟೈಪ್ ಎನ್ನುತ್ತಾರೆ) ವರ್ತನೆ, ಪೂರ್ವಾಗ್ರಹ ಪೀಡಿತ ಸ್ವಭಾವಗಳು ಇವುಗಳ ಉದಾಹರಣೆ.
ಮೊಬೈಲ್, ಅಂತರ್ಜಾಲದ ದುರ್ಬಳಕೆಯ ಬಗ್ಗೆ ಅರಿವು ಮುಖ್ಯ
ಮುಖ್ಯವಾಗಿ ಮಕ್ಕಳ ಮನಸ್ಸು ಚಂಚಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇದೇ ಚಂಚಲತೆಯ ಹಿನ್ನೆಲೆಯಲ್ಲಿ ಅಮೋಘ ಎನ್ನಬಹುದಾದ ಗುಣಗಳಿವೆ. ಕೌತುಕ, ಕುತೂಹಲ, ಅನ್ವೇಷಣೆ, ಉಲ್ಲಾಸ ಹೆಚ್ಚಿಸುವ ಮನೋಸ್ಥಿತಿಗೂ ಬಾಲ್ಯದ ಚಂಚಲ ಮಾನಸಿಕ ಕ್ರಿಯೆಗಳಿಗೂ ಅತಿಹತ್ತಿರದ ನಂಟು. ಈ ಮೂಲಕ ಹೊರಜಗತ್ತಿನ ರೀತಿನೀತಿಗಳನ್ನು ನೇರವಾಗಿ ಕಲಿಯುವ ಅವಕಾಶ. ಇಂತಹದೊಂದು ಅವಕಾಶವೇ ನಾಳಿನ ಸಾಮಾಜಿಕ ಪ್ರಜ್ಞೆ ಮತ್ತು ಪಕ್ವತೆಗೆ ಬೇರುಗಳಾಗಿ ನಿಲ್ಲುವುದು. ಅದರಲ್ಲಿಯೂ ನನ್ನಂತೆ ಇತರರು, ನನ್ನ ನೋವಿನಂತೆಯೇ ಇತರರ ನೋವು ಎನ್ನುವ ಪ್ರಜ್ಞೆ ಬಲಗೊಳ್ಳುವುದು ಹೊರಜಗತ್ತಿನೊಂದಿಗಿನ ನೇರ ಸಂಪರ್ಕದ ಮೂಲಕವೇ ಸರಾಗವಾಗಿ ಆಗುವಂತಹದ್ದು. ಇನ್ನೊಂದು ವಿಧದಲ್ಲಿ ಹೇಳುವುದಾದರೆ, ಅತಿ ಸಣ್ಣ ಮಕ್ಕಳ ಮನೋವಿಕಾಸವು ಪೋಷಕರು ಪಾಲಕರಿಂದ ದೊರೆಯುವ ಪ್ರೀತಿ, ವಾತ್ಸಲ್ಯ, ವಿಶ್ವಾಸದಂತಹ ವಯಸ್ಕ ಮಾನಸಿಕ ಸ್ವಭಾವಗಳಿಂದ ಹೆಚ್ಚಾಗಿ ಪ್ರೇರಿತಗೊಳ್ಳುತ್ತವೆ. ಪೋಷಕರ ನಡೆನುಡಿಗಳಲ್ಲಿ ಸೌಮ್ಯತೆ, ಸಹನೆ, ಆದರಣೀಯ ಸ್ವಭಾವಗಳು ಪ್ರಖರವಾಗಿದ್ದಾಗ ಮಕ್ಕಳ ಮನಸ್ಸಿಗೂ ಇದು ಅಂಟಿಕೊಳ್ಳಬಲ್ಲದು. ಹೀಗಾಗುವುದೂ ಸಹ ಮನೋವಿಜ್ಞಾನವು ವಿವರಿಸುವ ಕಲಿಕೆ ಎನ್ನುವ ಲಕ್ಷಣದಿಂದಲೇ. ಪ್ರತಿಯೊಂದು ಜೀವಿಯು ಬದುಕುಳಿಯಲು ಕಲಿಕೆ ಬೇಕಾಗುತ್ತದೆ. ಕಲಿಕೆ ಇದ್ದಲ್ಲಿ ಮಾತ್ರ ಹೊಂದಾಣಿಕೆ ಸಾಧ್ಯ. ಕಾಡಿನಲ್ಲಿರುವ ಪ್ರಾಣಿಗಳು ತಮ್ಮ ಜೀವ ರಕ್ಷಣೆ, ಸಂತತಿಯ ರಕ್ಷಣೆಗಾಗಿ ಸದಾ ಚುರುಕಾಗಿ ಇರಿಸಿಕೊಂಡಿರುತ್ತವೆ ಕಲಿಕೆಯ ಬಲವನ್ನು. ಹಾಗೆಯೇ ಮನುಷ್ಯರಲ್ಲಿಯೂ ಇದರ ಪ್ರಭಾವವಿರುತ್ತದೆ. ಅತಿ ಸಣ್ಣ ವಯಸ್ಸಿನ ಮಕ್ಕಳ ಕಲಿಕೆಯೆಲ್ಲವೂ ಸಾಮಾಜಿಕ ವಾತಾವರಣದ ರೀತಿನೀತಿಗಳಿಂದಲೇ ಪ್ರೇರಿತಗೊಳ್ಳುವುದು. ಮನೆಯ ಹಿರಿಯರು ಆಡುವ ಮಾತುಗಳು, ವರ್ತಿಸುವ ರೀತಿ, ಕೋಪ ತಾಪಗಳನ್ನು ಪ್ರಕಟಿಸುವ ನಮೂನೆಗಳೆಲ್ಲವು ಬೆಳೆಯುವ ಸಣ್ಣ ಮಗುವಿನ ಮನಸ್ಸಿಗೆ ಅರ್ಥವಾಗದಿದ್ದರೂ ಅನುಕರಣೆಗೆ ಅವಕಾಶ ಮಾಡಿಕೊಡಬಲ್ಲದು. ಜೊತೆಯಲ್ಲಿ ಹಿತಕರ, ತೃಪ್ತಿದಾಯಕ ಮನಸ್ಸನ್ನೂ ಮೂಡಿಸಬಲ್ಲದ್ದಾಗಿರುವುದು. ವಯಸ್ಕತನದಲ್ಲಿ ಸಾಮಾಜಿಕ ವರ್ತನೆಗಳಾದ ಸೌಹಾರ್ದ, ಸಹನೆ, ಸಹಕಾರ ಮತ್ತು ಪ್ರಜಾಪ್ರಭತ್ವವಾದಿ ನಿಲುವುಗಳನ್ನು ಗೌರವಿಸಿ ಬೆಂಬಲಿಸುವ ಮನಸ್ಸು ಮೂಡುವುದು ಇವುಗಳಿಂದಾಗಿಯೇ. ಕೋಮು ಬಾಂಧವ್ಯಗಳನ್ನು ಉತ್ತಮಗೊಳಿಸುವುದಕ್ಕೂ ಬಾಲ್ಯದ ಮನೆ ಮತ್ತು ಹೊರಗಿನ ವಾತಾವರಣದ ಸಕಾರಾತ್ಮಕ ಪ್ರೇರಣೆ ಬೇಕೇಬೇಕು.
ಸದಾ ಕಾಲ ಮೊಬೈಲಿನ ತೆರೆಗೆ ಅಂಟಿಕೊಂಡಿರುವ ಕಣ್ಣುಗುಡ್ಡೆಗಳು ತೆರೆಯ ವೇಗದ ಚಟುವಟಿಕೆ, ಕ್ರಿಯೆಗಳಿಗೆ ಮಾತ್ರ ಸ್ಪಂದಿಸುವ ರೀತಿಯನ್ನು ಅಭ್ಯಾಸವಾಗಿಸಿಕೊಂಡಿರುವ ಮಕ್ಕಳು, ಹಿರಿಯರ ಮಾನಸಿಕ ಶಕ್ತಿಗಳು ತಂತ್ರಜ್ಞಾನದ ದಾಸ್ಯಕ್ಕೆ ಒಳಗಾದಾಗ ಅದರ ದುಷ್ಪರಿಣಾಮ ಸಾಮಾಜಿಕ ಅವ್ಯವಸ್ಥೆ ಮತ್ತು ಸಂಕುಚಿತ ಮಾನಸಿಕ ಸ್ಥಿತಿಯನ್ನು ಪೋಷಿಸುತ್ತದೆ. ಇಂದಿರುವ ತಂತ್ರಜ್ಞಾನದ ಸಲಕರಣೆಗಳಲ್ಲಿ ದುರುಪಯೋಗಕ್ಕೂ ಅವಕಾಶಗಳಿವೆ ಎನ್ನುವುದು ಪ್ರತಿಯೊಬ್ಬರ ಅರಿವಿಗೂ ಬರಲೇಬೇಕಾದ ವಿಷಯ.







