ನೂತನ ಸಾಮಾಜಿಕ ಸಮೀಕ್ಷೆಯಲ್ಲಿ ಉಪ ಜಾತಿ/ಪಂಗಡಗಳ ಜೋಡಣೆ ಪೀಕಲಾಟ?

ಜಾತಿಗಳ ನಾಡಾಗಿರುವ ಭಾರತೀಯ ಸಮಾಜದಲ್ಲಿ ‘ಜಾತಿ-ಪಂಗಡಗಳ’ ಸಮೀಕ್ಷೆಗಳು ಅಂದಾಗ ಆರೋಪ- ಪ್ರತ್ಯಾರೋಪಗಳು ಬರುವುದು ಸಹಜ. ಇತ್ತೀಚೆಗೆ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗದ ವರದಿಯನ್ನು ಕೆಲವರು ಟೀಕಿಸುವ ಭರದಲ್ಲಿ ಅವರು ಹಣ ಪಡೆದು ಒಂದು ಗುಂಪಿಗೆ ಸಹಾಯ ಮಾಡಿದ್ದಾರೆನ್ನುವ ಪರಮ ನೀಚತನದ ಆರೋಪಗಳನ್ನು ಮಾಡಿದ್ದಾರೆ. ಹಾವನೂರು ಆಯೋಗದ ಬಗ್ಗೆಯೂ ಇಂದಿಗೂ ಅಧಿಕವಾದ ಟೀಕೆ-ಟಿಪ್ಪಣಿಗಳಿವೆ. ಒಟ್ಟಾರೆಯಾಗಿ ಯಾವುದೇ ಜಾತಿ-ಉಪಜಾತಿಯೂ ಸಂಖ್ಯಾಬಲ ದಲ್ಲಿ ಕಡಿಮೆಯಿಲ್ಲ ಎಂಬ ಅಭಿಮತಗಳನ್ನು ಒಪ್ಪುವುದಿಲ್ಲ. ಭಾರತದಲ್ಲಿ 1,931 ಜನಗಣತಿ ಇನ್ನಿಲ್ಲದ ಬಿರುಗಾಳಿಯನ್ನು ಎಬ್ಬಿಸಿತ್ತು. ಸ್ವಾತಂತ್ರ್ಯಾನಂತರ ಪರಿಶಿಷ್ಟ ಜಾತಿ/ಪಂಗಡ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಇನ್ನುಳಿದವರನ್ನು ಜಾತಿಗಣತಿ ವ್ಯಾಪ್ತಿಗೆ ತರಲಿಲ್ಲ. ಆದುದರಿಂದ ರಾಷ್ಟ್ರೀಯ ಕಾಕಾ ಕಾಳೇಕರ್ ಮತ್ತು ಮಂಡಲ ಆಯೋಗಗಳು ಅತಿ ಹಿಂದುಳಿದವರನ್ನು ಗುರುತಿಸಲು ಹಿಂದಿನ ಪ್ರಾಂತೀಯ ಜನಗಣತಿಗಳನ್ನೇ ಅಶ್ರಯಿಸಿದವು. ಕರ್ನಾಟಕದಲ್ಲಿ ಡಾ. ನಾಗನ ಗೌಡ ಆಯೋಗದಿಂದ ನ್ಯಾ. ಚಿನ್ನಪ್ಪ ರೆಡ್ಡಿ ಆಯೋಗಗಳ ತನಕವೂ ಪ್ರಾತಿನಿಧಿಕ ಮಾದರಿಗಳ (Representative Samples) ಮೂಲಕ ಹಿಂದುಳಿದ ವರ್ಗಗಳ ಜನಸಂಖ್ಯೆಯನ್ನು ಅಂದಾಜಿಸಲಾಗಿತ್ತು. ಈ ಕೊರತೆ ನೀಗಲು 2015ರಲ್ಲಿ ಸಮಗ್ರ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಮಾಡಲಾಗಿತ್ತು. ಅದರ ಮೇಲೆ ಹಿಮಾಲಯಕ್ಕಿಂತಲೂ ಭಾರವಾದ ಟೀಕೆ-ಟಿಪ್ಪಣಿಗಳನ್ನು ಸುರಿದ ಕಾರಣ ಅದು ಭದ್ರಕೋಣೆಯಿಂದ ಹೊರಗೂ ಬಾರದೆ ನಿದ್ರಿಸುತ್ತಿದೆ? ಅದು ಹಳೆಯದೆಂದು ಈಗ ಹೊಸ ಸಮೀಕ್ಷೆಯನ್ನು ರಾಜ್ಯ ಸರಕಾರ ಆಯೋಜಿಸಿದೆ: ಸ್ವಾಗತಾರ್ಹವಾಗಿದೆ. ಪರಿಶಿಷ್ಟ ಜಾತಿ(101) ಮತ್ತು ಪಂಗಡಗಳನ್ನು(50) ಹೊರತುಪಡಿಸಿ, ಹಿಂದುಳಿದ ವರ್ಗಗಳ ಉಪ ಪಂಗಡಗಳನ್ನು ಗುರುತಿಸಿ ಅವುಗಳಿಗೆ 1,561 ತನಕ ಪ್ರತ್ಯೇಕ ಕೋಡ್ ನೀಡಲಾಗಿದೆ.
ಮೂಲಭೂತ ಸಮಸ್ಯೆ ಇರುವುದು ಸಮೀಕ್ಷೆ ಕೈಪಿಡಿಯಲ್ಲಿರುವ ಕೋಡ್‌ನಲ್ಲಿ ಅಲ್ಲ. ಅವುಗಳನ್ನು ಗಣತಿದಾರ ಹೇಗೆ ಗುರುತಿಸಿ ದಾಖಲಿಸಬಲ್ಲರೆಂಬ ಸಾಮರ್ಥ್ಯಗಳ ಸುತ್ತಲೂ ತರ್ಕಗಳೇ ತುಂಬಿವೆ. ಈಗಾಗಲೇ ರಾಜ್ಯದಲ್ಲಿ ಪ್ರಧಾನ ಜಾತಿಗಳು ಮತ್ತು ಅವುಗಳ ಉಪ ಪಂಗಡಗಳು ಯಾರೆಂಬ ಸಾಮಾನ್ಯ ಅರಿವುಗಳಿವೆ. ಆಂಗ್ಲ ಅಕ್ಷರಾಂಕದಲ್ಲಿ ಜಾತಿಗಳನ್ನು ನೀಡುವುದಕ್ಕಿಂತ ಮಧಸೂದನ್ ಆಯೋಗ ಪ್ರಧಾನ ಜಾತಿಗಳು ಮತ್ತು ಅವುಗಳ ಉಪ ಪಂಗಡಗಳನ್ನು ಅಂತರ್ಗತಿಸಿ/ಕ್ರೋಡೀಕರಿಸಿ (Intertwine/Consolidations) ಆ ಮೂಲಕ ಗಣತಿ ಮಾಡಿದ್ದರೆ ಉತ್ತಮವಾಗಿರುತ್ತಿತ್ತು ಎಂಬ ಅಭಿಮತಗಳು ಜನವಾಹಿನಿಯಲ್ಲಿವೆ. ಈಗ ಸೂಚಿಸಿರುವ ಕೆಲವು ಉಪ ಜಾತಿಗಳಲ್ಲಿ ಆರಾಧನಾ ಕುಲಸಂಬಂಧಗಳನ್ನೇ ಹೊಸ ಜಾತಿಗಳಂತೆ ದಾಖಲಾಗಿವೆ. ಇಂತಹ ನಿರೂಪಗಳು ಮೈಸೂರು ಮತ್ತು ಮದ್ರಾಸು 1891 ಜನಗಣತಿ ಜಾತಿ ಪಟ್ಟಿಯಲ್ಲಿ ತುಂಬಿವೆ. ಉದಾಹರಣೆಗೆ ಮೈಸೂರು ಪ್ರಾಂತಕ್ಕಿಂತ ಉತ್ತರ ಕರ್ನಾಟಕ ಮತ್ತು ಕಡಲ ತೀರದ ಜಾತಿ-ಪಂಗಡಗಳಲ್ಲಿ ಅನೇಕ ಸಾಮಾಜಿಕ ವೈರುಧ್ಯಗಳಿವೆ. ಲಿಂಗಾಯತ ಧರ್ಮದಲ್ಲಿರುವ ವೃತ್ತಿ ಆಧಾರಿತ ಉಪಪಂಗಡಗಳು ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದಲ್ಲಿ ಅಧಿಕವಾಗಿವೆ. ಮೈಸೂರು ಭಾಗದಲ್ಲಿ ಅಂತಹ ಉಪ ಪಂಗಡಗಳು ಯಾವುದೇ ಪರಿವರ್ತನೆಗಳಿಲ್ಲದೆ ಯಥಾಸ್ಥಿತಿಯಲ್ಲಿ ಬದುಕುತ್ತಿವೆ. ಆದುದರಿಂದ, 1954ರಲ್ಲಿ ಶೈಕ್ಷಣಿಕ ಸವಲತ್ತಿಗಾಗಿ ಸಿದ್ಧಪಡಿಸಿದ್ದ ಕೇಂದ್ರ ಹಿಂದುಳಿದ ವರ್ಗಗಳ ಪೈಕಿ ಲಿಂಗಾಯತ ಮತ್ತು ಒಕ್ಕಲಿಗರ ಉಪ ವರ್ಗಗಳಿಗೆ ಮನ್ನಣೆ ನೀಡದೆ ಈ ಪದಗಳನ್ನು ಸಂಯುಕ್ತಾಕ್ಷರ ರೂಪದಲ್ಲಿ ನೀಡಲಾಗಿತ್ತು. ಆದರೆ, ನಾಗನಗೌಡ ವರದಿಯಲ್ಲಿ ಉತ್ತರ-ದಕ್ಷಿಣ ಭೂಪ್ರದೇಶಗಳ ಹೊಸ ಜಾತಿ-ಉಪ ಜಾತಿಗಳ ಸಮಾಗಮ ವಿಶೇಷವಾಗಿ ಸಾದರವಾದವು.
ಒಟ್ಟಾರೆ, ಲಿಂಗಾಯತ ಸಮುದಾಯದೊಳಗೆ ವೃತ್ತಿ ಆಧಾರಿತ ಗುಂಪುಗಳಿವೆ ಹಾಗೂ ನಾಲ್ಕು ಒಳಸುತ್ತಿನ ಸಾಮಾಜಿಕ ಸ್ವಗೋತ್ರ ಗುಂಪುಗಳು ಅಷ್ಟಾವರಣ ಆಚರಣೆ ಮೇಲೆ ವರ್ಗೀಕರಣಗಳಾಗಿವೆ. ಹಿಂದಿನಿಂದಲೂ ವೀರಶೈವ ಪದ ಲಿಂಗಾಯತರೊಳಗೆ ಉಪ ಸ್ಥಾನಮಾನ ಹೊಂದಿತ್ತು. ಎಸ್.ಎಂ. ಕೃಷ್ಣ ಆಡಳಿತಾವಧಿಯಲ್ಲಿ ‘ವೀರಶೈವ’ ಪದ ಲೋಕ ಮಾನ್ಯತೆಯ ಪದವಾಗಿ ಪ್ರಕಟವಾಯಿತು. ಅಲ್ಲಿಂದ ಲಿಂಗಾಯತರ ಒಳಗಿದ್ದ ವಚನಕಾರ ಬಸವಣ್ಣ ಮತ್ತು ಪಂಚಾಚಾರ್ಯರ ನಡುವಿನ ಶೀತಲ ಸಮರ ಮತ್ತಷ್ಟು ಬೀದಿಗೆ ಬಿತ್ತು. ಸ್ವತಂತ್ರ ಧರ್ಮ ಹೋರಾಟಕ್ಕೆ ಇದು ಹಿನ್ನಡೆಯಾಯಿತು. ಪಂಚಪೀಠಗಳಲ್ಲಿ ಅನೇಕ ಸಾಮಾಜಿಕ ದ್ವಂದ್ವಗಳಿವೆ: ಒಂದು ಕಡೆ ‘ನಾವು ಬೇಡುವ ಜಂಗಮರಾಗಿದ್ದೇವೆ. ಆದ ಕಾರಣ ಪರಿಶಿಷ್ಟ ಜಾತಿಯ ಬೇಡ (ಬುಡ್ಗ) ಜಂಗಮ’ರೆಂದು ಒಕ್ಕಣೆ ಸಾರುತ್ತಾ ಮೀಸಲಾತಿಯನ್ನು ಕಬಳಿಸುತ್ತಾ ಬಂದಿದ್ದಾರೆ. ಅಂತರಂಗ-ಬಹಿರಂಗದಲ್ಲಿ ಬಸವಾದಿ ಶರಣರು ನಮ್ಮ ಶಿಷ್ಯಗಣವೆಂದು ಅಭಿಮತಿಸಿ ಸನಾತನ ವೈದಿಕತೆಯನ್ನು ಬ್ರಾಹ್ಮಣರನ್ನೇ ಮೀರಿಸುವಷ್ಟು ಆರಾಧಿಸುವ ಕಾರಣಕ್ಕೆ ಪ್ರತ್ಯೇಕತೆ ಬಯಸುತ್ತಿದ್ದಾರೆ. ಇವರನ್ನು ಅಡ್ಡಪಲ್ಲಕ್ಕಿ ಉತ್ಸವ ವ್ಯಾಮೋಹಿಗಳೆಂದು ಜರಿಯುವ ಲಿಂಗಾಯತರಿಗೇನು ಕೊರತೆಯಿಲ್ಲ. ಇತ್ತೀಚೆಗೆ ಜಂಗಮ ಸಮಾಜದಲ್ಲಿ ಬೇಡುವ ಜಂಗಮ ಜಾತಿಯಿಲ್ಲ ಎಂದು ಕೆಲವು ಮುತ್ಸದ್ದಿಗಳು ಹೇಳಿಕೆ ನೀಡಿ, ಅದರ ಉಪ ಪಂಗಡಗಳನ್ನು ನಮೂದಿಸಲು ಕರೆ ನೀಡಿದ್ದಾರೆ. ಹಾಗೆಯೇ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎನ್. ಲಿಂಗಪ್ಪ ಅವರು ಬೇಡ (ಬುಡ್ಗ) ಜಂಗಮ ಜಾತಿ ಪ್ರಜಾ ಸಂಖ್ಯೆಯನ್ನು 2021-25 ಸಾಲಿಗೆ ಅಂದಾಜಿಸಿದಂತೆ 13,532; ನಾಗಮೋಹನ ದಾಸ್ ಆಯೋಗದಲ್ಲಿ ದಾಖಲಾಗಿರುವುದು 3,22,049. ಅಂದರೆ ಸಾಮಾಜಿಕ ಸತ್ಯಗಳನ್ನು ಸಮಾಧಿ ಮಾಡಿ ಸುಳ್ಳಾಡಿದ ನಕಲಿ ಬೇಡ (ಬುಡ್ಗ) ಜಂಗಮರೇ ಹೆಚ್ಚಾದರು. ಇಂತಹ ಹತ್ತಾರು ಗೊಂದಲ ಗೋಜಲುಗಳು ನೂತನ ಜಾತಿ ಸಮೀಕ್ಷೆಯಲ್ಲಿ ಅಂದರೆ ಹಿಂದುಳಿದ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಮತ್ತು ಪಂಗಡದವರೊಳಗೆ ಭಾರೀ ಸದ್ದು ಮಾಡದೆ ಇರಲಾರವು.
ಇಲ್ಲಿಯ ತನಕ ಪರಿಶಿಷ್ಟ ಜಾತಿಗಳಿಂದ ಕ್ರೈಸ್ತರಾದವರನ್ನು ಪ್ರತ್ಯೇಕವಾಗಿ ಒಬಿಸಿ ಮೀಸಲಾತಿಯಲ್ಲಿ ಇಡಲಾಗಿದೆ. 1954ರಿಂದಲೂ ಎಲ್ಲಾ ರಾಜ್ಯಗಳೂ ಇದೇ ಕ್ರಮ ಅನುಸರಿಸುತ್ತಿವೆ. ಆದರೆ ನೂತನ ಸಮೀಕ್ಷೆಯ ಕೋಡ್ ಪಟ್ಟಿಯಲ್ಲಿರುವ 53ಕ್ಕೂ ಅಧಿಕ ಜಾತಿ ಆಧಾರಿತ ಕ್ರೈಸ್ತರನ್ನು ಹೆಸರಿಸಿದೆ. ಇವುಗಳ ಅನ್ವೇಷಣೆ ಆಶ್ಚರ್ಯಕರವಾಗಿಲ್ಲ. ಇವುಗಳ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ಮಾಡಿದವರನ್ನು ಪ್ರಶಂಸಿಸಲೇ ಬೇಕು. ಕ್ರೈಸ್ತರಲ್ಲಿ ಜಾಗತಿಕ ಆರಾಧನಾ ವಿಧಾನಗಳಿಗೆ ಅನುಗುಣವಾಗಿ ಗುಂಪುಗಳಿವೆ. ಕ್ರೈಸ್ತಧರ್ಮದಲ್ಲಿ ಪ್ರಮುಖ ಪಂಗಡಗಳೆಂದರೆ ಕೆಥೊಲಿಕ್, ಪೂರ್ವ ಸಾಂಪ್ರದಾಯಿಕತೆ (ಈಸ್ಟರ್ನ್ ಆರ್ಥೊಡಾಕ್ಸ್) ಮತ್ತು ಪ್ರೊಟೆಸ್ಟಾಂಟಿಸಂಗಳಿವೆ. ಪ್ರೊಟೆಸ್ಟಾಂಟಿಸಂನಲ್ಲಿ ಲೂಥೆರನಿಸಂ, ಬ್ಯಾಪ್ಟಿಸ್ಟ್‌ಗಳು, ಮೆಥೋಡಿಸ್ಟ್‌ಗಳು, ಪೆಂಟೆಕೋಸ್ಟಲ್‌ಗಳು ಮುಂತಾದ ಹಲವಾರು ಉಪವಿಭಾಗವಾಗಿವೆ. ಇವುಗಳಲ್ಲದೆ, ಓರಿಯಂಟಲ್ ಆರ್ಥೊಡಾಕ್ಸ್ ಚರ್ಚುಗಳು ಮತ್ತು ಇತ್ತೀಚೆಗೆ ಬೆಳೆಯುತ್ತಿರುವ ಪಂಗಡೇತರ ಹೊಸ ಚರ್ಚಗಳಿವೆ. ಹಿಂದೂ ಧರ್ಮದಿಂದ ಹೋದವರ ಸಂಕಷ್ಟವೆಂದರೆ; ‘‘ರಾಮೇಶ್ವರಕ್ಕೆ ಹೋದರೂ ಶನೀಶ್ವರನ ಕಾಟ ತಪ್ಪಿದ್ದಲ್ಲ’’ ಎಂಬಂತಾಗಿದೆ ಮತಾಂತರವಾದವರ ಜಾತಿಯ ಕಾಟ. ಅದರಲ್ಲೂ ಬುಡ್ಗ ಜಂಗಮರಲ್ಲಿ ಮತಾಂತರ ಕ್ರೈಸ್ತರು ಎಷ್ಟಿರಬಹುದೆಂದು ನಮ್ಮಂತಹವರನ್ನು ಕಾಯುವಂತೆ ಮಾಡಿದೆ. ಮುಸ್ಲಿಮ್‌ಸಮುದಾಯದೊಳಗೂ ಇಂತಹ ಉಪ ಪಂಗಡಗಳ ಕಾಟವಿದ್ದರೂ ಒಂದಷ್ಟು ಅಂತರ್ಗತವಾಗಿವೆ. ಮೂಲ ಜಾತಿ ವ್ಯಾಮೋಹವನ್ನು ಬಿಡದ ಮತಾಂತರಿಗಳನ್ನು ನೂತನ ಸಮೀಕ್ಷೆ ಗಣತಿದಾರರು ಮನೆ-ಮನೆ ಮಾಹಿತಿ ಸಂಗ್ರಹದಲ್ಲಿ ಆಯೋಗದ ಪ್ರಶ್ನಾವಳಿಗೆ ಉತ್ತರ ಬರುವ ದಾಟಿಗಳು ಯಕ್ಷಪ್ರಶ್ನೆ ಆಗಬಾರದು. ಒಟ್ಟಾರೆ, ಸಮೀಕ್ಷೆಯ ಸಾಮಾಜಿಕ ಜೋಡಣೆಯ ನಕಾಶೆಯಲ್ಲಿ (Social Mapping) ಜಾತಿ-ಉಪ ಜಾತಿಗಳು ಹೇಗೆ ಹೊರಬರುತ್ತವೆ ಎಂಬ ಕೌತುಕದ ಪ್ರಶ್ನೆಯಾಗಿದೆ.
ನೂತನ ಸಮೀಕ್ಷೆಯನ್ನು ಕೇವಲ ಲಿಂಗಾಯತ, ಒಕ್ಕಲಿಗ ಮತ್ತು ಕುರುಬ, ಇತರ ಪ್ರಬಲ ಸಮುದಾಯಗಳ ಮೂಲಕ ವಿಶ್ಲೇಷಣೆ ಮಾಡುವ ಬದಲು ಉಪ-ಜಾತಿಗಳಿಂದ ಸೀಳೊಡೆದಿರುವ ಅಥವಾ ಸ್ವತಂತ್ರ ಬುಡಕಟ್ಟುಗಳಾಗಿರುವ ಇಲ್ಲವೇ ಬೆಳಕಿಗೆ ಬಾರದಿರುವ ಸೂಕ್ಷ್ಮ ಜಾತಿಗಳ ಅಸ್ತಿತ್ವಗಳನ್ನು ಈ ಸಮೀಕ್ಷೆ ಹೇಗೆ ಸೆರೆ ಹಿಡಿಯಬಲ್ಲದೆಂಬ ಮೂಲ ಪ್ರಶ್ನೆಗಳಿಗೆ ಅದರ ಫಲಿತಾಂಶವೇ ನೈಜ ದಿಕ್ಸೂಚಿಯಾಗುತ್ತದೆ. ನ್ಯಾಯಮೂರ್ತಿ ನಾಗಮೋಹನ ದಾಸ್‌ಆಯೋಗದಲ್ಲಿ ಇಂತಹ ನೂರಾರು ಪ್ರಶ್ನೆಗಳು ಮೇಲೆದ್ದಿದ್ದವು. ಅದು 101 ಜಾತಿಗಳ ಸಮಸ್ಯೆಯಾದ ಕಾರಣ ಬಾಧಕವಾಗಲಿಲ್ಲ. ಆಯೋಗ ಜಾತಿ-ಉಪಜಾತಿಗಳಿಗೆ ದಕ್ಕಿದ್ದ ಶೈಕ್ಷಣಿಕ, ಔದ್ಯೋಗಿಕ ಮತ್ತು ಇತರ ಅಭಿವೃದ್ಧಿ ಸೂಚ್ಯಂಕಗಳ ಮೇಲೆ ಶೋಧನಾ ಕನ್ನಡಿಯಿಟ್ಟು ವರ್ಗೀಕರಣ ಸೂತ್ರ ನೀಡಿತ್ತು. ಆದರೆ ರಾಜಕೀಯ ಕಾರಣಗಳಿಗಾಗಿ ಅದರ ಮೂಲ ತತ್ವಗಳೆಲ್ಲವೂ ನಿರ್ದಯವಾಗಿ ಧ್ವಂಸವಾದವು. 59 ಅಲೆಮಾರಿಗಳ ಅಲೆದಾಟ ಮಾತ್ರ ಶಾಶ್ವತವಾಯಿತು.
ನೂತನ ಸಮೀಕ್ಷೆಯಲ್ಲಿ ಹಿಂದಿನಂತೆಯೇ ಉಪ ಜಾತಿಗಳನ್ನು ಕ್ರಮಾಂಕದಲ್ಲಿ ಇಡುವ ಬದಲು ಪ್ರಧಾನ ಜಾತಿಗಳ ಉಪ ಕ್ರಮಾಂಕದಲ್ಲಿ ಜೋಡಿಸಿದ್ದರೆ, ಬಹುಶಃ ಗಣತಿದಾರರು ಅತಿ ಸುಲಭವಾಗಿ ಜಾತಿ-ಉಪ ಜಾತಿಗಳನ್ನು ಜರೂರಾಗಿ ಗುರುತಿಸಲು ಅವಕಾಶ ಇರುತ್ತಿತ್ತು. ಸರಾಗವಾಗಿ ಅವುಗಳು ತಮ್ಮ ಪ್ರಧಾನ ಜಾತಿಗಳೊಳಗೆ ಸಮೀಕರಣಗೊಳ್ಳುತ್ತಿದ್ದವು. ಇಂತಹ ಸಮಸ್ಯೆಗಳೇ ಕಳೆದ ಸಮೀಕ್ಷೆಯಲ್ಲಿ ಎಲ್ಲಿಲ್ಲದ ತಲೆನೋವಾಗಿ ಪರಿಣಮಿಸಿತ್ತು. ಕಳೆದ ಸಮೀಕ್ಷೆಯಲ್ಲಿಯೂ ಅದೆಷ್ಟೂ ಗಣತಿದಾರರು ಜಾತಿ-ಉಪ ಜಾತಿಗಳನ್ನು ಸರಿಯಾಗಿ ಗುರುತಿಸುವಲ್ಲಿ ಸೋತಿರುವ ಸಾವಿರಾರು ಉದಾಹರಣೆಗಳಿವೆ ಅಥವಾ ತಮ್ಮ ಉಪಜಾತಿಗಳ ಬಗ್ಗೆ ಅರಿವಿಲ್ಲದ ಕುಟುಂಬಗಳ ಮಾಹಿತಿದಾರರು ಸಿಕ್ಕಿದರೆ ಅಧೋಗತಿ. ಹಿಂದಿನ ತಪ್ಪುಗಳು ನೂತನ ಸಮೀಕ್ಷೇಯಲ್ಲಿಯೂ ಯಥಾವತ್ತಾಗಿ ಮುಂದುವರಿದರೆ ಜಾತಿ-ಉಪಜಾತಿಗಳ ಸಂಖ್ಯಾಬಲದ ಯಾದವೀ ಕಲಹಕ್ಕೆ ಕೊನೆಯಂತೂ ಇರುವುದಿಲ್ಲ.
ಸರಕಾರದಲ್ಲಿ ವಿಷಯ ತಜ್ಞರ/ಸಲಹೆಗಾರರ ಹುಡುಕಾಟವೆಂದರೆ ಹಳೆಯ ಕಡತದಲ್ಲಿ ಹೆಸರಿದ್ದವರು ಬದುಕಿದ್ದರೆ ಅವರೇ ಶಾಶ್ವತ ಆಹ್ವಾನಿತರು. ಅದರಾಚೆಗೆ ಹೊಸನೀರು ಹರಿಯಲು ಅಲ್ಲಿ ಅವಕಾಶಗಳಿಲ್ಲ. ಮತ್ತೊಂದು ಕಡೆ ಅಂಕುಶವಿಡಿದ ಆಡಳಿತಶಾಹಿ ಪ್ರಭುತ್ವವಿಂದು ಜನವಾಹಿನಿ ಪರಿವರ್ತನೆಗಳಿಗೆ ಕಿವಿಗೊಡುವುದಿಲ್ಲ. ಕಂಪೆನಿ ಮಾದರಿಯ ಆಡಳಿತವನ್ನು ಸಾರ್ವಜನಿಕ ಆಡಳಿತದಲ್ಲಿ ಕಾಣಬಯಸುವ ಪ್ರವೃತ್ತಿ ಅತಿಯಾಗಿರುವ ಕಾರಣ ಹಸಿವಿನ ಮತ್ತು ಅಪಮಾನಿತ ಜನರ ಸಮೀಕ್ಷೆಗಳು/ಕಾರ್ಯಕ್ರಮಗಳು ಸೋಲುವುದಂತೂ ಗ್ಯಾರಂಟಿ. ಹಿಂದಿನ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಬೆಂಗಳೂರಿನ ಬೀದಿಯಲ್ಲಿ ತಿರುಗಾಡುವ ಮೊದಲು ಬೃಹತ್ ಬೆಂಗಳೂರು ಆಡಳಿತ ಯಂತ್ರ ಸುಖ ನಿದ್ರೆಯಲ್ಲಿತ್ತು. ಅವರೇ ವೈಯಕ್ತಿಕವಾಗಿ ಬೀದಿಗಿಳಿದು ಕಾರ್ಯಚಟುವಟಿಕೆ ಆರಂಭಿಸಿದ ಮೇಲೆ ಅದರ ಕಾವಿನಿಂದ ಉತ್ತಮ ಫಲಿತಾಂಶ ದಾಖಲಾಯಿತು. ಇಲ್ಲಿನ ಜನಸಂಖ್ಯೆ ಕೋಟಿಗಿಂತಲೂ ಅಧಿಕವಾಗಿವೆೆ; ಅದರ 715 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಇರುವವರನ್ನು ಈ ನೂತನ ಸಮೀಕ್ಷೆ ಹೇಗೆ ಸಂಧಿಸಬಲ್ಲದು ಎಂಬುದರ ಮೇಲೆ ಉತ್ತಮ ಅಂಕಿ-ಅಂಶಗಳು ಗೋಚರಿಸುತ್ತವೆ.
ಮಧುಸೂದನ್ ಆಯೋಗ ಬಹುಶಃ ಒಬಿಸಿ ಉಪಜಾತಿಗಳ ಕ್ರಮಾಂಕದ ಜೋಡಣೆಯಲ್ಲಿ ಒಂದಷ್ಟು ಹೊಸತುಗಳನ್ನು ಅಳವಡಿಸಿದ್ದರೆ ಗಣತಿದಾರರಿಗೆ ಹುಡುಕಾಟದಲ್ಲಿ ವ್ಯರ್ಥವಾಗುವ ಸಮಯ ಉಳಿಯುತ್ತಿತ್ತು. ಈ ಹಿಂದೆ ಆರೋಪಿಸಿದ್ದ ಎಲ್ಲಾ ಗೊಂದಲಗಳಿಗೆ ತೆರೆಎಳೆಯಲು ಸಾಧ್ಯವಾಗುತ್ತಿತ್ತು. ಒಂದುವೇಳೆ, ಸಮೀಕ್ಷೆ ಸಂದರ್ಭದಲ್ಲಿ ಯಾವುದಾದ ರೊಂದು ಜಾತಿಗೆ ಹೊಸ ಸೇರ್ಪಡೆ ಬಂದಾಗ ಅದರೊಳಗೊಂದು ಅವಕಾಶ ನೀಡಿದ್ದರೆ ಸಾಕಿತ್ತು. ಕೆಲವು ಉಪಜಾತಿಗಳ ಆಂಗ್ಲ ಭಾಷಾಂತರವೂ ಸಹ ಅಷ್ಟೊಂದು ಶುದ್ಧತೆಗಳಿಂದ ಕೂಡಿಲ್ಲ. ಅವುಗಳ ಉಚ್ಚಾರಣೆಯಲ್ಲಿ ಬೇರೇನೋ ಧ್ವನಿಸಿದಂತಾಗುತ್ತಿದೆ. ಮತಾಂತರ ಕ್ರೈಸ್ತರ ಜೊತೆ ಅವರ ಮೂಲ ಜಾತಿಗಳ ಜೋಡಣೆ ಇನ್ನಿಲ್ಲದ ವಿವಾದಗಳನ್ನು ಹುಟ್ಟು ಹಾಕಿದೆ. ಯುದ್ಧ ಸಾರುವ ಸಮಯದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಈಗ ಯಾವುದನ್ನೂ ಬದಲಿಸಲು ಸಮಯವಿಲ್ಲ. ಆದರೆ, ಗಣತಿದಾರರು ಹಾಕುವ ಶ್ರದ್ಧೆ ಮತ್ತು ಕಾಳಜಿ ಹಾಗೂ ಅವರನ್ನು ಮಾರ್ಗದರ್ಶನ ಮಾಡುವ ಆಡಳಿತ ತಂಡಗಳು ಅತಿ ಎಚ್ಚರಿಕೆಯಿಂದ ಕಾರ್ಯಕ್ಷಮತೆ ತೋರಿದರೆ ಮಾತ್ರ ಯಶಸ್ಸು ಸರಕಾರಕ್ಕೆ ಸಿಗುತ್ತದೆ. ಉದಾಶೀನತೆಯಲ್ಲಿಯೇ ಸಮೀಕ್ಷೆ ಮಿಂದೆದ್ದರೆ ಇನ್ನೆಂದಿಗೂ ಕರ್ನಾಟಕ ರಾಜ್ಯ ಸ್ವತಂತ್ರ ಜಾತಿ ಸಮೀಕ್ಷೆ ಮಾಡುವ ಮನೋಧರ್ಮವನ್ನು ಹೊಂದಿಲ್ಲವೆಂಬ ಸಂದೇಶವನ್ನು ನೀಡುತ್ತದೆ. ಸ್ವಯಂ ಸೇವಾ ತಂಡಗಳು, ಜನಸಮುದಾಯಗಳು ಈ ಸಮೀಕ್ಷೆಯಲ್ಲಿ ನಿರ್ವಂಚನೆಯಿಂದ ಕೈಜೋಡಿಸಿದಾಗ ಯಶಸ್ಸಿನ ದಾರಿ ಕಾಣುತ್ತದೆ. ಸಮೀಕ್ಷೆಯಿಂದ ಜಾಲತಾಣಕ್ಕೆ ಬರುವ ಅಂಕಿ-ಅಂಶಗಳ/ದತ್ತಾಂಶಗಳ ಕಳವಾಗದಂತೆ ಕಾಯುವ ಹೊಣೆ ಸಹ ಮಹತ್ವದಿಂದ ಕೂಡಿದೆ.







