ಒಳ ಮೀಸಲಾತಿ ಸಾಂವಿಧಾನಿಕ ಅನುಷ್ಠಾನ ಬಗೆಹರಿಯದ ಗೊಂದಲದ ಗೂಡಾಗಿದೆಯೇ?

ಈ ಹಿಂದೆ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸರಕಾರಗಳು ತಮ್ಮ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಧಾರಗಳನ್ನು ಸಾಂವಿಧಾನಿಕವಾಗಿ ಪಾಲಿಸಿ ಒಳ ಮೀಸಲಾತಿ ಜಾರಿಯಲ್ಲಿ ಬದ್ಧತೆಯನ್ನು ತೋರಿಸಿವೆ. ಆದರೆ, ಈ ರಾಜ್ಯದಲ್ಲಿ ಈ ಮಾದರಿಗಳು ಮಂಗರಮಾಯವಾದ ಕಾರಣ ಅದರ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳುವ ವ್ಯಕ್ತಿಗಳು ಮತ್ತು ಸಂಘಟನೆಗಳು ಹೊಂಚುಹಾಕಿ ದುರ್ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಈ ವಿಚಾರಗಳೆಲ್ಲವೂ ರಾಜ್ಯದ ಮುಖ್ಯವಾಹಿನಿಗಳಲ್ಲಿ ಮಾತಿನ ಖಡ್ಗಗಳಂತೆ ಮೆರೆದಾಡುತ್ತಿವೆ.
ಒಳ ಮೀಸಲಾತಿಯ ಗೊಂದಲವಿನ್ನೂ ಬಗೆಹರಿಯದ ಕಾರಣ ಅದರ ಕಿಚ್ಚಿನ ಕೂಗಾಟ ಕೊನೆಗೆ ದಿಲ್ಲಿಗೂ ತಲುಪಿದೆ. ಮುಂದೇನೂ ತಿಳಿಯದಂತಾಗಿದೆ. ನ್ಯಾಯಮೂರ್ತಿ ದಾಸ್ ಆಯೋಗ ಶೇ.1ರ ಮೀಸಲಾತಿಗೆ 59 ಸೂಕ್ಷ್ಮ ಜಾತಿಗಳನ್ನು ಒಂದು ಪ್ರವರ್ಗವನ್ನಾಗಿಸಿತ್ತು. ಆದರೆ, ಪರೆಯನ್ ಮತ್ತು ಪರೆಯ ಸಮುದಾಯಗಳನ್ನು ಮಾದಿಗ ಸಂಬಂಧಿತ ಸಮೂಹಗಳೊಳಗೆ ಸೇರಿದ ಕಾರಣವೊಡ್ಡಿ ಬಲಗೈ ಸಮುದಾಯ ಹೂಡಿದ ಸಂಫು ಒಳ ಮೀಸಲಾತಿಯ ಆಯೋಗ ತಾಳಿದ್ದ ನಿಲುವುಗಳೆಲ್ಲವೂ ಬುಡಮೇಲಾದವು. ಪರಿಶಿಷ್ಟ ಜಾತಿ ಸಚಿವರೆಲ್ಲರೂ ಡಾ. ಜಿ. ಪರಮೇಶ್ವರ್ ಮನೆಯಲ್ಲಿ ಸೇರಿದ್ದ ಪೂರ್ವಭಾವಿ ಸಭೆಯಲ್ಲಿ ಒಂದು ಅಲಿಖಿತ ತೀರ್ಮಾನವಾಗಿತ್ತು. ಏನೆಂದರೆ, ನೇರವಾಗಿ ಮೂಲ ಜಾತಿಗಳನ್ನು ಹೇಳದಿದ್ದ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಜಾತಿಗಳ ಜನಸಂಖ್ಯೆಯನ್ನು ಎಡ-ಬಲಗಳಿಗೆ ಸಮನಾಗಿ ಹಂಚುವುದು. ಮೀಸಲಾತಿಯನ್ನು ಎಡಗೈ ಬಲಗೈ ಸಮಾಜಗಳು 6:6 ಅನುಪಾತದಲ್ಲಿ ಪಡೆಯುವುದು. ಅಲೆಮಾರಿಗಳ ಮೀಸಲಾತಿಯನ್ನು ಯಥಾವತ್ತಾಗಿ ಎತ್ತಿಹಿಡಿಯುವುದು ಎಂದು ತೀರ್ಮಾನವಾಗಿತ್ತು.
ಆದರೆ, ಸಂಪುಟ ಸಭೆಗೂ ಮುನ್ನ ಅನೇಕ ಬೆಳವಣಿಗೆಗಳಾದವು. ಸ್ಪಶ್ಯ ಜಾತಿಗಳು ಶೇ. 5ರಷ್ಟು ಮೀಸಲಾತಿಗೆ ಪಟ್ಟು ಹಿಡಿದವು. ಮಾಧುಸ್ವಾಮಿ ಸಮಿತಿ ಶೇ.4.5 ನೀಡಿತ್ತು; ಶೇ. 5ರಷ್ಟು ಬೇಡಿಕೆಯಿಟ್ಟಿದ್ದರು. ಮಾಧುಸ್ವಾಮಿ ಸಮಿತಿ ಯಾವುದೇ ಜಾತಿಯ ಹಿಂದುಳಿದಿರುವಿಕೆಯನ್ನು ದತ್ತಾಂಶಗಳಡಿ ನಿರ್ಧರಿಸಿರಲಿಲ್ಲ. ದಾಸ್ ಆಯೋಗ ದ್ವಿತೀಯ ಮೂಲದ ಔದ್ಯೋಗಿಕ ವಲಯಗಳ ದತ್ತಾಂಶಗಳ ಕೊರತೆ ನಡುವೆ ಒಂದಷ್ಟು ಒಪ್ಪುವ ಕೆಲಸ ಮಾಡಿದೆ. ಅಲೆಮಾರಿಗಳ ಪವಿತ್ರ ಹಕ್ಕುಗಳನ್ನು (Sacrosanct) ಎತ್ತಿಹಿಡಿಯಬೇಕಾದವರೆ ಅವರನ್ನು 4 ಸಮುದಾಯಗಳ ಜೊತೆ ಸೇರಿಸಿ ದಿಕ್ಕೆಟ್ಟವರಂತೆ ಮಾಡಿದರು. ಮಾದಿಗ ಸಮುದಾಯ ಹಿಂದಿನಿಂದಲೂ ಅವುಗಳ ಪರವಾಗಿ ವಕಾಲತ್ತು ವಹಿಸುತ್ತಾ ಬಂದಿದೆ.
ಒತ್ತಡಗಳ ನಡುವೆಯೂ ಒಳ ಮೀಸಲಾತಿ ಜಾರಿಗೆ ಹಸಿರು ನಿಶಾನೆ ನೀಡಿದ್ದರೂ ಸಾಂವಿಧಾನಿಕವಾಗಿ ಅದರ ತಾರ್ಕಿಕ ಅಂತ್ಯವಾಗಿಲ್ಲವೆಂಬ ಕೊರಗು ಇಂದಿಗೂ ಮನೆಮಾಡಿದೆ. ಎಲ್ಲಾ ಘಟನೆಗಳನ್ನು ಒಮ್ಮೆ ಅವಲೋಕಿಸಿದಾಗ ಈ ವಿಚಾರಗಳೆಲ್ಲವೂ ಕೇವಲ ಮುಖ್ಯ ಮಂತ್ರಿಗಳಷ್ಟೇ ಹೊಣೆಗಾರರೆನ್ನುವ ಮನೋಭಾವನೆಗಳು ಬಹುತೇಕ ಮಂತ್ರಿ ಮಂಡಲದ ಸಚಿವರಲ್ಲಿ ಮನೆಮಾಡಿವೆ. ಇದಕ್ಕೆ ಪೂರಕವೆಂಬಂತೆ ಸಮಾಜ ಕಲ್ಯಾಣ ಇಲಾಖೆ ಸಚಿವರು ಸಹ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವಾಗ ದಿವ್ಯ ನಿರ್ಲಕ್ಷ್ಯವನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂಬ ನೇರ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ಹೈಕಮಾಂಡ್ ಮುಂದೆಯೂ ದೂರುಗಳೂ ದಾಖಲಾಗಿವೆ.
ಈ ಹಿಂದೆ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸರಕಾರಗಳು ತಮ್ಮ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಧಾರಗಳನ್ನು ಸಾಂವಿಧಾನಿಕವಾಗಿ ಪಾಲಿಸಿ ಒಳ ಮೀಸಲಾತಿ ಜಾರಿಯಲ್ಲಿ ಬದ್ಧತೆಯನ್ನು ತೋರಿಸಿವೆ. ಆದರೆ, ಈ ರಾಜ್ಯದಲ್ಲಿ ಈ ಮಾದರಿಗಳು ಮಂಗರಮಾಯವಾದ ಕಾರಣ ಅದರ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳುವ ವ್ಯಕ್ತಿಗಳು ಮತ್ತು ಸಂಘಟನೆಗಳು ಹೊಂಚುಹಾಕಿ ದುರ್ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಈ ವಿಚಾರಗಳೆಲ್ಲವೂ ರಾಜ್ಯದ ಮುಖ್ಯವಾಹಿನಿಗಳಲ್ಲಿ ಮಾತಿನ ಖಡ್ಗಗಳಂತೆ ಮೆರೆದಾಡುತ್ತಿವೆ.
ಪ್ರಸ್ತುತ ಒಳ ಮೀಸಲಾತಿ ಆದೇಶ ಕೇವಲ ಸಾಮಾನ್ಯ ಸರಕಾರಿ ಆದೇಶ ಮೂಲಕ ಜಾರಿ ಆಗಿದೆ ಅಷ್ಟೇ. ಅಧಿಕೃತವಾಗಿ ರಾಜ್ಯ ಪತ್ರದಲ್ಲಿ ಪ್ರಕಟಣೆಯಾಗದ ಕಾರಣ ಅಧಿಕೃತವೆಂದು ಒಪ್ಪಲು ಜನರಲ್ಲಿಯೂ ಅನೇಕ ಸಂಶಯ/ತಕರಾರುಗಳು ಸಹಜವಾಗಿ ಮೂಡಿವೆ. ಈಗಾಗಲೇ ಒಳ ಮೀಸಲಾತಿ ಜಾರಿ ವಿರುದ್ಧ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ತಕರಾರು ಅರ್ಜಿಗಳು ದಾಖಲಾಗಿವೆ. ಅಧಿಕೃತ ರಾಜ್ಯ ಪತ್ರದ ಮೂಲಕ ಉದ್ದೇಶಗಳನ್ನು ಪ್ರಚುರಪಡಿಸದಿದ್ದರೆ ಅಂತಹ ಸಾಂವಿಧಾನಿಕ ವಿಷಯಗಳನ್ನು ನ್ಯಾಯಾಲಯದಲ್ಲಿ ಸಮರ್ಥನೆ ಮಾಡಲು ಸರಕಾರಕ್ಕೂ ಎಲ್ಲಿಲ್ಲದ ಮುಜುಗರ ಆಗಬಹುದು. ಒಳ ಮೀಸಲಾತಿ ವಿರೋಧಿಗಳು ಮತ್ತು ಅಲೆಮಾರಿಗಳು ಈ ಬಗ್ಗೆ ಚೆನ್ನಾಗಿಯೇ ತಾಲೀಮು ನಡೆಸಿ ನ್ಯಾಯಾಲಯದ ಮುಂದೆ ನಿಂತಿದ್ದಾರೆ.
ಮತ್ತೊಂದೆಡೆ, ಸಮಾಜ ಕಲ್ಯಾಣ ಇಲಾಖೆ ಮಂತ್ರಿಗಳು, ಅವರ ಸಕ್ಷಮ ಪ್ರಾಧಿಕಾರಿಗಳು ಮತ್ತು ಆಡಳಿತ ಸುಧಾರಣೆ ಇಲಾಖೆಯ, ಕಂದಾಯ ಇಲಾಖೆಗಳ ನಡುವೆ ಹೊಂದಾಣಿಕೆ ಕೊರತೆ ತುಂಬಿವೆ. ಈ ವಿಚಾರಗಳು ಮುಖ್ಯಮಂತ್ರಿಗಳ ಗಮನಕ್ಕೆ ಸಾಕಷ್ಟು ಬಂದಿವೆ. ಒಂದುವೇಳೆ, ಒಳ ಮೀಸಲಾತಿ ಗೊಂದಲಗಳು ನ್ಯಾಯೋಚಿತ ಮಾರ್ಗಗಳಲ್ಲಿ ಬಗೆಹರಿಯದೆ ಹೋದರೆ ಈ ರಾಜ್ಯದಲ್ಲಿ ಅದರ ಪ್ರಜ್ವಾಲೆಯಲ್ಲಿ ಮುಗ್ಧ ಜನರನ್ನು ಇನ್ನಷ್ಟು ಸುಡುವ ನಿಟ್ಟಿನಲ್ಲಿ ಸಮುದಾಯಗಳ ಕೆಲವರು ಭಾಜಪದೊಂದಿಗೆ ಕೈ ಜೋಡಿಸಲು ರಾಜಕೀಯ ಮದ್ದುಗುಂಡುಗಳೊಡನೆ ತಾಲೀಮು ನಡೆಸುತ್ತಿದ್ದಾರೆ. ಸಮೀಕ್ಷೆ ಸಂದರ್ಭದಲ್ಲಿಯೇ ಅಂತಹ ನಡಾವಳಿಕೆಗಳು ಜರುಗಿದವು; ಆವಾಗ ಮಾದಿಗರಲ್ಲೇ ಎಚ್ಚರಿಕೆಯ ಮನಸ್ಕರ ಸಕಾಲಿಕ ಪ್ರವೇಶಗಳಿಂದ ತಣ್ಣಗಾಯಿತು. ಈಗಲೂ ಅದರ ಅಸಿಹಿಷ್ಣುತೆಗಳು ಕಾರುತ್ತಿರುತ್ತದೆ. ಆ ಸಂದರ್ಭದಲ್ಲಿ ಮೇಲೆದ್ದ ಒಳ ರೊಚ್ಚು ರಾಜ್ಯದಲ್ಲಿ ಶಾಂತಿಯನ್ನು ಕದಡುವುದೆಂಬ ಭಯವೂ ಅನೇಕರನ್ನು ಕಾಡುತ್ತಿದೆ. ಆಗ ಮುನ್ನೆಲೆಗೆ ಬಂದ ಎಡ-ಬಲಗಳ, ಸ್ಪಶ್ಯರ ನಡುವೆ ಭಾರೀ ಪ್ರಮಾಣದಲ್ಲಿ ಅಗೋಚರ ಕಂದಕಗಳು ಸೃಷ್ಟಿಯಾದವು. ಬಲಗೈ ಸಮುದಾಯದೊಳಗೆ ಮಾದಿಗ ಸಮುದಾಯದ ಹೋರಾಟಗಳಿಗೆ ಸಣ್ಣದಾಗಿ ಕಿರಿಕಿರಿ ಮಾಡುವವರಿದ್ದರು. ಸಮೀಕ್ಷೆ ವೇಳೆ ಕೆಲವರ ಮಾತುಗಳು ಬಲಗೈ ಸಮಾಜವನ್ನು ಬೀದಿಗಿಳಿಸಿತು; ಒಳ ಮೀಸಲಾತಿಯ ಅರ್ಥ ಮತ್ತು ವ್ಯಾಖ್ಯಾನಗಳನ್ನು ಸಾರಸಗಟಾಗಿ ಅವರ ಹೋರಾಟ ನುಂಗಿಹಾಕಿತು. ಈ ಸಮಸ್ಯೆಗೆ ಕಾರಣರಾದವರಾರೂ ಅದನ್ನು ಒಪ್ಪುವ ಮನಃಸ್ಥಿತಿಯವರಲ್ಲ.
ನಾಗರಿಕ ಸಮಾಜದಲ್ಲಿ ಹೋರಾಟ, ಪ್ರತಿಭಟನೆ ಸಹಜ. ಆದರೆ ಒಳ ಮೀಸಲಾತಿ ವಿಚಾರಗಳೇ ದೈನಂದಿನ ಪೂಜೆ ಪುನಸ್ಕಾರಗಳಂತಾದರೆ ಸರಕಾರದ ಆಡಳಿತ ಮೇಲೆ ಸಾರ್ವಜನಿಕರಲ್ಲಿ ವಿಶ್ವಾಸ ಹೋಗುತ್ತದೆ. ನೇರವಾಗಿ ಸರಕಾರದ ಜೊತೆ ನಿರ್ವಹಿಸುವವರನ್ನು ತೇಜೋವಧೆ ಮಾಡುವ ಸಲುವಾಗಿ ಒಂದಷ್ಟು ಮಾದಿಗ ಯುವಕರಿಗೆ ವೈಯಕ್ತಿಕವಾಗಿ ತೇಜೋವಧೆ ಮಾಡುವ ತರಬೇತಿ ನೀಡಿ ಬೀದಿಗೆ ಬಿಟ್ಟಿದ್ದಾರೆ. ಅದರಲ್ಲೂ ಮೈಸೂರು, ಚಾಮರಾಜನಗರ, ಮಂಡ್ಯದಲ್ಲಿ ಅಧಿಕವಾಗುತ್ತಿದ್ದಾರೆ. ಇಂತಹ ಜನರ ತಂಡ ರಾಜ್ಯಾದ್ಯಂತ ನಿಚ್ಚಳವಾಗಿ ಬೆಳೆದಂತೆಲ್ಲಾ ಇನ್ನಿಲ್ಲದ ಅನಾಹುತಗಳು ಸಂಭವಿಸದೆ ಇರದು. ಮತ್ತೊಂದು ಕಡೆ, ಪರಿಶಿಷ್ಟ ಜಾತಿ ಉಪ ಯೋಜನೆ ಜಾರಿ ಕೋಶದ ಸಲಹೆಗಾರರ ನೇರ ಹಸ್ತಕ್ಷೇಪಗಳಿಂದ ಯಾವುದೇ ಒಳ ಮೀಸಲಾತಿ ಆದೇಶಗಳು ಅನುಷ್ಠಾನಕ್ಕೆ ಬರುತ್ತಿಲ್ಲವೆಂಬ ತಕರಾರುಗಳು ಹಾದಿಬೀದಿಯ ಮಾತುಗಳಾಗಿವೆ. ಹೋರಾಟಗಾರರಲ್ಲಿ ಅವರ ಬಗ್ಗೆ ಎಲ್ಲಿಲ್ಲದ ಸಂಶಯಗಳು ಮನೆಮಾಡಿವೆ. ಸಮಾಜ ಕಲ್ಯಾಣ ಇಲಾಖೆಯ ಸಕ್ಷಮ ಪ್ರಾಧಿಕಾರಿಗಳಿಗೆ ಒಳ ಮೀಸಲಾತಿ ಸಮಸ್ಯೆ ಬಗೆಹರಿಸಲು ಅವರಿಂದ ಮುಕ್ತ ಅವಕಾಶ ಸಿಗುತ್ತಿಲ್ಲ ಎಂಬ ಮಾತುಗಳು ವಿಕಾಸ ಸೌಧದಲ್ಲಿ ದನಿಸುತ್ತಿವೆ.
ಭಾಜಪ ತನ್ನ ಅಂಗ ಸಂಸ್ಥೆಗಳ ಮೂಲಕ ಸಿದ್ದರಾಮಯ್ಯ ಸರಕಾರಕ್ಕೆ ಗುದ್ದಿ ನೀರು ಕುಡಿಸಲು ಮೂರು ಬಗೆಯ ತಂತ್ರಗಾರಿಕೆ ಹೆಣೆಯುತ್ತಿದೆ. ತನ್ನ ಪಕ್ಷದ ನಾಯಕರ ಮೂಲಕ ಮುಜುಗರವಾಗುವ ಹೇಳಿಕೆ ನೀಡಿಸುವುದು. ಅದರ ಜೊತೆ ಸಲುಗೆ ಬೆಳೆಸಿರುವ ವ್ಯಕ್ತಿಗಳ ಜೊತೆ ಒಳ ಮೀಸಲಾತಿಯ ಮೂಲಕ ಇನ್ನಿಲ್ಲದ ಗೊಂದಲ ಸೃಷ್ಟಿ ಮಾಡುವುದು. ಭಾಜಪಕ್ಕೆ ಹೊಲೆಯ-ಮಾದಿಗರ ಮೇಲಿನ ಅಕ್ಕರೆ ಅಷ್ಟಕ್ಕಷ್ಟೇ; ಅವರ ಮಾನಸ ಸಮುದಾಯಗಳನ್ನು ಆದಷ್ಟೂ ಸಂರಕ್ಷಣೆ ಮಾಡುವ ತಂತ್ರಗಾರಿಕೆ ಹೆಣೆದಿದೆ.
ಒಳ ಮೀಸಲಾತಿ ಬೇಡಿಕೆ ಮೀಸಲಾತಿ ಜಾರಿ ಕಲ್ಪನೆ ಅಥವಾ ಅದರ ಪರಿಭಾವನೆ ವ್ಯಾಪಕವಾಗಿ ಅಳವಡಿಸಬೇಕೆಂಬ ಕೋರಿಕೆಗಳಿವೆ. ಈ ನಿಟ್ಟಿನಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶ ಸರಕಾರಗಳು ಹೊರಡಿಸಿರುವ ರಾಜ್ಯ ಪತ್ರಗಳು ಈ ರಾಜ್ಯಕ್ಕೆ ಮಾದರಿ ಆಗಬೇಕಿತ್ತು. ಈ ಬಗ್ಗೆ ಸಂಘಟಕರಿಂದ ಮುಖ್ಯಮಂತ್ರಿಗಳಿಗೆ/ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿರುವ ಮನವಿಗಳ ರಾಶಿಗಳೇ ಹೇಳುತ್ತವೆ ಸಾಂವಿಧಾನಿಕ ಆಶಯಗಳಂತೆ ಅನುಷ್ಠಾನ ಆಗುತ್ತಿಲ್ಲವೆಂಬ ಅದರ ಕಥೆ-ವ್ಯಥೆಗಳನ್ನು. ಬಸವರಾಜ ಬೊಮ್ಮಾಯಿ ಸರಕಾರ ಮಾಧುಸ್ವಾಮಿ ಸಮಿತಿ ಶಿಫಾರಸು ಜಾರಿಯ ಆದೇಶದ ವಿರುದ್ಧ ವಿರೋಧ ಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ದಲಿತ ನಾಯಕರು ಮಾಡಿದ್ದ ಟೀಕೆಗಳನ್ನು ಸ್ಮರಿಸಿದರೆ ಇಂದಿನ ಅನುಷ್ಠಾನ ಮಾರ್ಗಗಳನ್ನು ಗ್ರಹಿಸಲು ಸಾಧ್ಯವಿದೆ.
ಭೋಜನಾಲಯದ ಪಂಕ್ತಿಯಲ್ಲಿ ಸರ್ವರಿಗೂ ಸಮಾನವಾಗಿ ರುಚಿಕರ ಭಕ್ಷ್ಯಗಳನ್ನು ಬಡಿಸುವ ರೀತಿಯಲ್ಲಿ ಒಳ ಮೀಸಲಾತಿಯ ಸವಿ ಎಲ್ಲಾ ವಲಯಗಳಲ್ಲಿ ದೊರೆತಾಗ ಮಾತ್ರ ಸಮುದಾಯಗಳ ನಡುವಿನ ಅಂತರ ಹಿಂದುಳಿದಿರುವಿಕೆಯನ್ನು ತುಳಿಯಲು ಸಾಧ್ಯ. ಬರಿ ನೇರ ನೇಮಕಾತಿಗಳಿಗೆ ಮಾತ್ರ; ಬ್ಯಾಕ್‌ಲಾಗ್ ಹುದ್ದೆಗಳಿಗಿಲ್ಲ. ಭಡ್ತಿಗೆ ಅನ್ವಯಿಸುವುದಿಲ್ಲ; ಸ್ಥಳೀಯ ಸಂಸ್ಥೆಗಳ ರಾಜಕೀಯ ಮೀಸಲಾತಿಗೆ ಅನ್ವಯಿಸದು. ಆರ್ಥಿಕ ಯೋಜನಾ ಜಾರಿಯಲ್ಲಿ ಅಗತ್ಯವಿಲ್ಲ; ವೃತ್ತಿಪರ ಶಿಕ್ಷಣ ಪ್ರವೇಶದಲ್ಲಿ ಅನಗತ್ಯ ಎಂಬ ವಿರೋಧಾಭಾಸದ ತಕರಾರುಗಳು ಶಕ್ತಿ ಸೌಧಗಳಿಂದ ಮೇಳೈಸಿರುವ ಕಾರಣ ಇನ್ನೊಂದು ಹಂತದ ಮಾಡು-ಮಡಿ ಹೋರಾಟಕ್ಕೆ ಪರೋಕ್ಷವಾಗಿ ಸರಕಾರವೇ ಕರೆನೀಡಿದಂತಿದೆ. ಇವುಗಳ ಜೊತೆ, ಅನುಸೂಚಿತ ಜಾತಿ ಮತ್ತು ಪಂಗಡಗಳ (ತಿದ್ದುಪಡಿ) ಆದೇಶ 1976 (ಸಂ.108/1976, 18 ಸೆಪ್ಟಂಬರ್1976) ಪ್ರಕಾರ 1956ರಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡಗಳ ಮೇಲೆ ವಿಧಿಸಿದ್ದ ಪ್ರಾದೇಶಿಕ ನಿಬಂಧನೆಗಳನ್ನು ತೆಗೆದಿರುವಾಗ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಎಂಬ ಜನರಿಕ್ ಜಾತಿಗಳಡಿ ಗುರುತಿಸಿಕೊಂಡಿರುವವರು ತಮ್ಮ ಮೂಲ ಸಮುದಾಯಗಳ ಜಾತಿ ಪ್ರಮಾಣ ಪತ್ರ ಪಡೆಯಲು ಸಾಂವಿಧಾನಿಕವಾಗಿ ಯಾವುದೇ ಅಡೆತಡೆಗಳಿಲ್ಲ. ಆದರೂ ಈ ಬಗ್ಗೆ ಕಂದಾಯ ಇಲಾಖೆ ಒಂದು ಸ್ಥಾಯಿ ಆದೇಶ ನೀಡಲು ಮೀನಾಮೇಷವೆಣಿಸುತ್ತಿದೆ. ಜಾತಿ ಜನ್ಮವಾಹಿನಿ ಮೂಲಕ ಗುರುತಿಸಬೇಕೆಂಬ ಕೇಂದ್ರ ಸರಕಾರದ ಮಾರ್ಗಸೂಚಿಗಳೇ ಸಾಕಷ್ಟಿವೆ. ಅಲೆಮಾರಿಗಳ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಸಹಾಯಕರನ್ನಾಗಿಸಿದಂತೆಯೇ ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಅವರನ್ನೇ ಬಲಿಪಶು ಮಾಡುವ ಬಲಾಢ್ಯ ಸಮುದಾಯಗಳ ಕೈಚಳಕವಿದೆ ಎಂದು ಅಲ್ಲಲ್ಲಿ ಪಡಸಾಲೆ ಚರ್ಚೆ ನಡೆಯುತ್ತಿವೆ. ಇದೇ ಮಾದರಿಯಲ್ಲಿ ಅತಿ ಹಿಂದುಳಿದ ವರ್ಗಗಳಿಗೂ ಮುಂದೆ ಪಂಗನಾಮ ಬೀಳಬಹುದೆಂದು ಇನ್ನೊಂದು ಮಗ್ಗುಲಲ್ಲಿ ಬಿಸಿಬಿಸಿ ಸಂವಾದಗಳಾಗುತ್ತಿವೆ.
ಕಾಂಗ್ರೆಸ್ ಸರಕಾರ ಗ್ಯಾರಂಟಿ ಗುಂಗಿನಲ್ಲೇ ಮುಳುಗಿದೆ. ಈ ಹಿಂದೆಯೂ ಭಾಗ್ಯಗಳ ಸುರಿಮಳೆಗೈದಿದ್ದರೂ ಸೋತರು. ಆವಾಗ, ಕಾಂಗ್ರೆಸ್ ಮಾದಿಗ ನಾಯಕರು ಮತ್ತು ಕಾರ್ಯಕರ್ತರನ್ನು ಭಾವನಾತ್ಮಕವಾಗಿ ಒಳ ಮೀಸಲಾತಿ ಅಡಿ ಭಾಜಪ ಕಟ್ಟಿಹಾಕಿ ಸೋಲಿಸಿದಂತೆ, ಅದರ ಜಾರಿಯಲ್ಲಿರುವ ಲೋಪದೋಷಗಳಡಿ ಭಾಜಪ ಸೇಡು ತೀರಿಸಿಕೊಳ್ಳಲು ಮುಂದಾಗಿರುವುದಂತೂ ಸುಳ್ಳಲ್ಲ. ಭಾಜಪ ಯಾವಾಗಲೂ ಪ್ರತಿಯೊಂದು ಸಮುದಾಯಕ್ಕೊಂದು; ಧರ್ಮಕ್ಕೊಂದು ಚುನಾವಣಾ ಸಾಮಾಜಿಕ ತಂತ್ರಗಾರಿಕೆಗಳನ್ನು ಸಿದ್ಧಪಡಿಸಿಕೊಂಡಿರುತ್ತದೆ. ಅವುಗಳನ್ನು ಅವರವರ ನಾಯಕರ ಬಾಯಿಂದಲೇ ಹೇಳಿಸುತ್ತದೆ. ಒಳ ಮೀಸಲಾತಿ ಜಾರಿ ವಿಚಾರದಲ್ಲಿಯೂ ಈಗಂತೂ ಎಲ್ಲಿಲ್ಲದ ಗೊಂದಲ ಗೂಡಾಗಿದೆ. ಅಲೆಮಾರಿಗಳು ದಿಲ್ಲಿ ಯಾತ್ರೆ ಮಾಡಿದಂತೆಯೇ ಒಳ ಮೀಸಲಾತಿ ಹೋರಾಟಗಾರರೂ ಅಲ್ಲಿಗೆ ಹೋದರೆ ಕಾಂಗ್ರೆಸ್ ಹೈಕಮಾಂಡ್ ಖುಷಿಪಡುತ್ತದೆಯೇ? ಹೀಗೆಯೇ ಸಮಸ್ಯೆಗಳು ಮುಂದುವರಿದರೆ ಸಿದ್ದರಾಮಯ್ಯ ಸರಕಾರದ ಮಂತ್ರಿಗಳನ್ನು ಜನರೂ ಸಹ ಅನುಮಾನಿಸಲು ಆರಂಭಿಸುತ್ತಾರೆ.







