ಹೆಗ್ಡೆ ವರದಿ ಸ್ವೀಕಾರ ಯೋಗ್ಯವೇ?

ಭಾಗ- 1
ನಾಡಿನ ದಿನ ಪತ್ರಿಕೆಯೊಂದರಲ್ಲಿ ಕೆ. ಜಯಪ್ರಕಾಶ್ ಹೆಗ್ಡೆ ಆಯೋಗದ ‘ದತ್ತಾಂಶಗಳ ಅಧ್ಯಯನ ವರದಿ-2024’ರ ಮುಖ್ಯಾಂಶಗಳು ಬಹಿರಂಗಗೊಂಡಿದ್ದವು. ಹಾಗೆಯೇ, ಸಾಮಾಜಿಕ ಜಾಲತಾಣದಲ್ಲಿ, ಸಂಪೂರ್ಣ ವರದಿಯೇ ಹರಿದಾಡ ತೊಡಗಿತ್ತು. ಅಂತೆಯೇ, ಜಾಲತಾಣದಲ್ಲಿದ್ದ ವರದಿಯನ್ನೇ ಅನುಸರಿಸಿ ಅದರ ಪರಾಮರ್ಶೆ ಮೂಡಿ ಬಂದಿದೆ.
ಸಾಂವಿಧಾನಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವುದು ವಿಧಿ 15(4) ಮತ್ತು ವಿಧಿ 16(4) ರ ಅನುಸಾರ. ಈ ಎರಡೂ ವಿಧಿಗಳು ಹಿಂದುಳಿದ ವರ್ಗಗಳನ್ನು ಗುರುತಿಸುವ ಸಂದರ್ಭದಲ್ಲಿ ಒಟ್ಟಿಗೆ ಸಾಗುತ್ತವೆ. ಒಂದನ್ನು ಬಿಟ್ಟು ಮತ್ತೊಂದಿಲ್ಲ. ಈ ದೇಶದ ಅತ್ಯುನ್ನತ ನ್ಯಾಯಾಸ್ಥಾನ ಸರ್ವೋಚ್ಚ ನ್ಯಾಯಾಲಯವೂ ಕೂಡ ಇದನ್ನೇ ಪುನರುಚ್ಚರಿಸಿದೆ (ತ್ರಿಲೋಕೀನಾಥ್ ಟಿಕು vs ಜಮ್ಮು ಮತ್ತು ಕಾಶ್ಮೀರ ರಾಜ್ಯ).
‘‘ರಾಜ್ಯದ ಉದ್ಯೋಗದಲ್ಲಿ ಪ್ರಾತಿನಿಧ್ಯದ ಕೊರತೆಯೊಂದೇ ಹಿಂದುಳಿದ ವರ್ಗಗಳನ್ನು ನಿರ್ಧರಿಸುವ ಏಕೈಕ ಅಂಶವಾಗಿರ ಬಾರದು’’ ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಳಿರುವ ಮಾತಿದು. ಇದರ ಹಿನ್ನೆಲೆಯನ್ನು ಗಮನಿಸಿದಾಗ ಕಂಡುಬರುವ ಅಂಶ: ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ, ಹಿಂದುಳಿದ ವರ್ಗಗಳನ್ನು ಮೀಸಲಾತಿಗೆ ಪರಿಗಣಿಸುವಾಗ ಶೇ.50ರಷ್ಟನ್ನು ಮುಸ್ಲಿಮರಿಗೂ, ಶೇ.30 ರಷ್ಟನ್ನು ಹಿಂದೂಗಳಿಗೂ, ಶೇ.20ರಷ್ಟನ್ನು ಕಾಶ್ಮೀರಿ ಪಂಡಿತರಿಗೂ ಮತ್ತು ಶೇ.1 ಅಥವಾ 2ರಷ್ಟನ್ನು ಸಿಖ್ಖರಿಗೂ ಮೀಸಲಾತಿ ನೀಡಿ ಸರಕಾರ ಆದೇಶ ಹೊರಡಿಸುತ್ತದೆ. ಈ ಆದೇಶವನ್ನು ಪ್ರಶ್ನಿಸಲಾಗಿ, ವಿಚಾರಣೆಗಾಗಿ ಸರ್ವೋಚ್ಚ ನ್ಯಾಯಾಲಯದ ಮುಂದೆ ಬರುತ್ತದೆ. ಆ ಸಂದರ್ಭದಲ್ಲಿ ಕಾಶ್ಮೀರ ರಾಜ್ಯ, 16(4) ನೇ ವಿಧಿಯ ಅಡಿಯಲ್ಲಿ ಹಿಂದುಳಿದಿರುವಿಕೆಯನ್ನು ಗುರುತಿಸಲು ಏಕೈಕ ಪರೀಕ್ಷಾ ವಿಧಾನವೆಂದರೆ ರಾಜ್ಯಸೇವೆಗಳಲ್ಲಿ ಪ್ರಾತಿನಿಧ್ಯದ ಕೊರತೆ ಎಂದು ವಾದಿಸಿತು. ಅಂದರೆ ಒಂದು ನಿರ್ದಿಷ್ಟ ವರ್ಗದ ನಾಗರಿಕರು ಎಷ್ಟೇ ಮುಂದುವರಿದಿದ್ದರೂ ಆ ವರ್ಗವು ರಾಜ್ಯದ ಅಡಿಯಲ್ಲಿ ಬರುವ ಸೇವೆಗಳಲ್ಲಿ ಸಮರ್ಪಕವಾದ ಪ್ರಾತಿನಿಧ್ಯ ಹೊಂದಿಲ್ಲದಿದ್ದರೆ ಅಂತಹದು ಹಿಂದುಳಿದ ವರ್ಗ. ಈ ಮೀಸಲಾತಿಯಿಂದ ಅನರ್ಹ ಅಥವಾ ಯುಕ್ತವಲ್ಲದ ವರ್ಗಗಳು ಪ್ರಯೋಜನ ಪಡೆಯುತ್ತವೆ ಎಂಬ ನೆಲೆಯ ಮೇಲಿನ ಈ ವಾದವನ್ನು ತಿರಸ್ಕರಿಸಿ, 2 ಗೊತ್ತುಪಾಡುಗಳನ್ನು ಪೂರೈಸಬೇಕಾಗಿದೆ ಎಂದು ನ್ಯಾಯಾಲಯ ನಿರ್ಣಯಿಸಿತು.
1. ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ.
2. ರಾಜ್ಯಸೇವೆಗಳಲ್ಲಿ ಪ್ರಾತಿನಿಧ್ಯದ ಕೊರತೆ.
ಹಿಂದುಳಿದಿರುವಿಕೆಯನ್ನು ಗುರುತಿಸಲು ಇವೆರಡೂ ಅವಲಂಬನೆಗಳು ಅನ್ವಯಿಸುತ್ತವೆ. ಮಿಗಿಲಾಗಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ, 1995ರ ಪರಿಭಾಷೆಯ ಉಪಬಂಧ ‘ಸಿ’ಯಲ್ಲಿ ಹೇಳಿರುವಂತೆ ‘ಪಟ್ಟಿಗಳು’ ಎಂದರೆ ‘ಸಂವಿಧಾನದ 15(4) ಮತ್ತು 16(4)ನೇ ವಿಧಿಗಳ ಅಡಿಯಲ್ಲಿ ನಾಗರಿಕರ ಹಿಂದುಳಿದ ವರ್ಗಗಳ ಪರವಾಗಿ ಮೀಸಲಾತಿಗೆ ಉಪಬಂಧ ಕಲ್ಪಿಸುವ ಉದ್ದೇಶದಿಂದ ಕಾಲಕಾಲಕ್ಕೆ ರಾಜ್ಯ ಸರಕಾರವು ಸಿದ್ಧಪಡಿಸಿದ ಪಟ್ಟಿಗಳು’.
ಈ ಕಾಯ್ದೆ ಪ್ರಕಾರ ಹಿಂದುಳಿದ ವರ್ಗಗಳ ಪಟ್ಟಿ ಎಂದರೆ, ಸಂವಿಧಾನದ ವಿಧಿ 15(4) ಮತ್ತು ವಿಧಿ16(4)ರ ಅಡಿಯಲ್ಲಿ ಸಿದ್ಧಪಡಿಸಿದ ಹಿಂದುಳಿದ ವರ್ಗಗಳ ಪಟ್ಟಿ. ಆದ್ದರಿಂದ ಹಿಂದುಳಿದ ವರ್ಗಗಳ ಪಟ್ಟಿ ಸಿದ್ಧಪಡಿಸಬೇಕೆಂದರೆ, ಸಂವಿಧಾನದ ವಿಧಿ 15(4) ಮತ್ತು ವಿಧಿ 16(4)ರಲ್ಲಿನ ವಿವರಣೆಗಳನ್ವಯ ಮೀಸಲಾತಿಗಾಗಿ ಹಿಂದುಳಿದ ವರ್ಗಗಳ ಪಟ್ಟಿ ಸಿದ್ಧಪಡಿಸಲು ಈ ಎರಡೂ ವಿಧಿಗಳು ಪ್ರಾಧಾನ್ಯತೆ ಪಡೆದುಕೊಳ್ಳುತ್ತವೆ ಎಂಬುದು ಕಾಯ್ದೆ ಪ್ರಕಾರ ವಿಧಿತವಾಯಿತು.
ಈಗ, ಕೆ. ಜಯಪ್ರಕಾಶ್ ಹೆಗ್ಡೆ ಆಯೋಗ ಸರಕಾರಕ್ಕೆ ಅರ್ಪಿಸಿರುವ ದತ್ತಾಂಶಗಳ ಅಧ್ಯಯನ ವರದಿ 2024 ರಲ್ಲಿ ಹೇಳಲಾಗಿರುವ ಅಂಶಗಳತ್ತ ಗಮನಹರಿಸೋಣ. ಅಧ್ಯಯನದ ವರದಿ 295 ಪುಟಗಳನ್ನು ಒಳಗೊಂಡಿದೆ. ವರದಿಯತ್ತ ದೃಷ್ಟಿ ಹರಿಸಿದಾಗ ಕಂಡ ಅಂಶಗಳಿವು-ಪುಟ ಸಂಖ್ಯೆ 96ರಿಂದ 176ರವರೆಗೆ ಯಥಾರ್ಥ ಅಧ್ಯಯನ ವರದಿ ಮುದ್ರಿತವಾಗಿದೆ. ಒಟ್ಟು 295 ಪುಟಗಳಲ್ಲಿ, ವಾಸ್ತವವಾಗಿ ಅಧ್ಯಯನ ವರದಿ ಇರುವುದು 80 ಪುಟಗಳಲ್ಲಿ ಮಾತ್ರ. ಉಳಿದ ಪುಟಗಳಲ್ಲಿ ದತ್ತಾಂಶಗಳೇ ತುಂಬಿಹೋಗಿವೆ (ಕೆಲವು ಅನಗತ್ಯ ದತ್ತಾಂಶಗಳು ಕೂಡಾ ಇವೆ). 80 ಪುಟಗಳ ಅಧ್ಯಯನದ ವರದಿಯಲ್ಲಿ 6 ಅಧ್ಯಾಯಗಳಿವೆ. ಅವೆಂದರೆ- 1. ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ನಿರ್ಧರಿಸುವ ಮಾನದಂಡಗಳು. 2. ಸೂಚಕಗಳು ಮತ್ತು ಮೌಲ್ಯಾಂಕಗಳು 3. ಜಾತಿ/ಸಮುದಾಯಗಳ ಪ್ರವರ್ಗವಾರು ವರ್ಗೀಕರಣ 4. ಹೆಚ್ಚುವರಿಯಾಗಿ ಜಾತಿ/ ಸಮುದಾಯಗಳನ್ನು ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿರುವ ಬಗ್ಗೆ ಸ್ಪಷ್ಟೀಕರಣ 5. ಶೇಕಡಾವಾರು ಮೀಸಲಾತಿ ಪ್ರಮಾಣದ ಹಂಚಿಕೆ 6. ಶಿಫಾರಸುಗಳು.
ಪ್ರಸ್ತುತ, ಒಂದೊಂದೇ ಅಧ್ಯಾಯಗಳನ್ನು ನೋಡೋಣ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಅಥವಾ ಜೀವನೋಪಾಯ ಸ್ಥಿತಿಗಳನ್ನು ಮಾನದಂಡವಾಗಿ ಇಟ್ಟುಕೊಂಡಿರುವುದು ಕಂಡು ಬಂದಿದೆ. ಈ ಮೂರು ಮಾನದಂಡಗಳಿಗೂ ಒಟ್ಟು 200 ಅಂಕಗಳನ್ನು ಕೊಡಲಾಗಿದೆ. 200 ಅಂಕಗಳನ್ನು 3:2:1ರ ಅನುಪಾತದ ಆಧಾರದ ಮೇಲೆ, ಕ್ರಮವಾಗಿ ಸಾಮಾಜಿಕ ಮಾನದಂಡಕ್ಕೆ-100, ಶೈಕ್ಷಣಿಕ ಮಾನದಂಡಕ್ಕೆ- 68 ಮತ್ತು ಆರ್ಥಿಕ ಅಥವಾ ಜೀವನೋಪಾಯಕ್ಕೆ -32 ಅಂಕಗಳನ್ನು ಕೊಡಲಾಗಿದೆ.
ಸಾಮಾಜಿಕ ಮಾನದಂಡವನ್ನು ಮತ್ತೆ 10 ವಿಭಾಗಗಳಾಗಿ ವಿಂಗಡಿಸಲಾಗಿದೆ. (ಆವರಣದಲ್ಲಿ ಅಂಕಗಳು) 1. ಸಾಮಾಜಿಕ ಸೂಚಕಗಳು (16), 2. ಸಾಂಪ್ರದಾಯಿಕ ಕಸುಬುಗಳು (15), 3. ವಾಸ ಸ್ಥಳ (14), 4. ವಸತಿ ಸೌಕರ್ಯಗಳು (13), 5. ಅಸಂಘಟಿತ ವಲಯಗಳ ಕೆಲಸದಲ್ಲಿ ಭಾಗವಹಿಸುವಿಕೆ (9), 6. ವಿವಾಹದ ಸಮಯದ ವಯಸ್ಸು (8), 7. ಅಡುಗೆಗೆ ಬಳಸಲಾಗುವ ಇಂಧನ (8), 8. ಶೌಚಾಲಯ (8), 9. ಬೆಳಕಿನ ವ್ಯವಸ್ಥೆ (4), 10. ಅಲೆಮಾರಿ ಅಥವಾ ಅರೆ ಅಲೆಮಾರಿ (5). ಪ್ರತಿಯೊಂದು ವಿಭಾಗಗಳನ್ನು ಮತ್ತೆ ಉಪ ವಿಭಾಗಗಳಾಗಿ ವಿಂಗಡಿಸಿ ಅಂಕಗಳನ್ನು ಪುನಃ ಹಂಚಿಕೆ ಮಾಡಲಾಗಿದೆ.
ಶೈಕ್ಷಣಿಕ ಮಾನದಂಡವನ್ನು 5 ವಿಭಾಗಗಳಾಗಿ ವಿಂಗಡಿಸಲಾಗಿದೆ. 1. ಸಾಕ್ಷರತಾ ಪ್ರಮಾಣ (16), 2. ಶಿಕ್ಷಣ ಸಂಸ್ಥೆ (15), 3. ಶಾಲೆ ಬಿಟ್ಟಿರುವವರ ಪ್ರಮಾಣ (14), 4. ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣ (13), 5. ಸಾಮಾನ್ಯ ಶಿಕ್ಷಣ (10). ಮತ್ತೆ ಇವುಗಳನ್ನು ಉಪವಿಭಾಗಗಳಾಗಿ ವಿಂಗಡಿಸಿ ಅಂಕಗಳನ್ನು ಕೊಡಲಾಗಿದೆ.
ಆರ್ಥಿಕ ಅಥವಾ ಜೀವನೋಪಾಯ ಸ್ಥಿತಿಯ ಮಾನದಂಡವನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. 1.ಭೂರಹಿತ ಕುಟುಂಬಗಳು(10), 2. ಜೀವನೋಪಾಯ (10), 3.ಸರಕಾರಿ ಉದ್ಯೋಗ (9), 4. ಸಂಘಟಿತ ಖಾಸಗಿ ವಲಯದಲ್ಲಿ ಉದ್ಯೋಗ (3).
ಎಲ್ಲಾ ಮೂರೂ ಸೂಚಕಗಳ ಮೌಲ್ಯಾಂಕದ ಅನುಪಾತ ಹೀಗಿದೆ: ಸಾಮಾಜಿಕ-3, ಶೈಕ್ಷಣಿಕ-2, ಜೀವನೋಪಾಯ -1 = 3:2:1. ಸಾಮಾಜಿಕ ಹಿಂದುಳಿದಿರುವಿಕೆ, ಶಿಕ್ಷಣದಲ್ಲಿ ಹಿಂದುಳಿದಿರುವಿಕೆ ಮತ್ತು ಜೀವನೋಪಾಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮೌಲ್ಯಾಂಕಗಳನ್ನು ನೀಡಲಾಗಿದೆ ಎಂದು ಹೇಳಲಾಗಿದೆ.
ಪ್ರತೀ ಜಾತಿಯ ಸರಾಸರಿ ಅಂಕಗಳ ಅಂದಾಜು ಲೆಕ್ಕಾಚಾರ ಎಂದು 5 ಹಂತಗಳಲ್ಲಿ ಅಂಕಗಳನ್ನು ನಿಗದಿ ಮಾಡಿರುವುದನ್ನು ಹೇಳಲಾಗಿದೆ. ಆದರೆ, ಉದಾಹರಣೆ ಕೊಡುವುದರ ಮೂಲಕ ವಿವರಿಸಿಲ್ಲದಿರುವುದು ಯಾರಿಗಾದರೂ ಸಂಶಯ ಹುಟ್ಟು ಹಾಕದಿರದು. ಇದನ್ನು ಗಮನಿಸಿದರೆ ಆಯೋಗದ ಕಸರತ್ತಿನ ಹಿಂದೆ ಯಾವುದೋ ನಿಗೂಢ ಉದ್ದೇಶ ಇದ್ದಂತಿದೆ ಎಂಬ ಅನುಮಾನ ಸಾರ್ವಜನಿಕರಿಗೆ ವ್ಯಕ್ತವಾಗುತ್ತದೆ.
ಆಯೋಗ ಹಾಕಿಕೊಂಡಿರುವ ಮಾನದಂಡಗಳ ಅನ್ವಯ, ಪ್ರವರ್ಗವಾರು ಜಾತಿಗಳನ್ನು ವರ್ಗೀಕರಣ ಮಾಡಬೇಕಾಗಿದೆ. ಆದರೆ ಆಯೋಗವು ಪ್ರಸ್ತುತ ಅಸ್ತಿತ್ವದಲ್ಲಿರುವ ಆದೇಶ ಸಂಖ್ಯೆ SWD 225 BCA 2000 ದಿನಾಂಕ 30.03.2022ರಲ್ಲಿ ಇರುವಂತೆ ವಿವಿಧ ಪ್ರವರ್ಗಗಳಲ್ಲಿರುವ ಜಾತಿಗಳು ಮತ್ತು ಸಮುದಾಯಗಳ ವರ್ಗೀಕರಣ ಮಾಡಲು ಉದಾಹರಣೆಯಾಗಿ ಪರಿಗಣಿಸಲಾಗಿದೆ. ರೂಪಿಸಿಕೊಂಡ ಮಾನದಂಡಗಳ ಅನ್ವಯ, ಪ್ರವರ್ಗಗಳು ಇರಬೇಕೇ ವಿನಾ, ಪ್ರಸ್ತುತ ಸರಕಾರ ವಿಂಗಡಿಸಿರುವ ಪ್ರವರ್ಗಗಳಂತೆಯೇ ಇರಬೇಕು ಎಂಬುದು ಅಗತ್ಯವಲ್ಲ. ಜಾತಿಗಳ ವರ್ಗೀಕರಣಕ್ಕಾಗಿ cut-off pointಗಳನ್ನು ಪಡೆಯಲು ಕೆಲವು ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಆಯೋಗ ಹೇಳಿಕೊಂಡು, 5 ಹಂತಗಳಲ್ಲಿ ವಿವರಿಸಿದೆ. ಆದೇಶ ಸಂಖ್ಯೆ: ಪಿಎಚ್‌ಎಸ್ 262 ಎಸ್‌ಇಡಬ್ಲ್ಯೂ 65 ದಿನಾಂಕ 1966ರಲ್ಲಿ ಸರಕಾರ 46 ಅಲೆಮಾರಿ ಮತ್ತು ಅರೆ ಅಲೆಮಾರಿ ಜಾತಿಗಳನ್ನು ಪಟ್ಟಿ ಮಾಡಿದೆ. ಆಯೋಗ ಹೇಳಿಕೊಂಡಿರುವಂತೆ ಅವುಗಳನ್ನು ಯಾವ ಆಯೋಗವೂ ಶಿಫಾರಸು ಮಾಡಿರಲಿಲ್ಲ. ಆದರೆ ಆಯೋಗ ಈ ಬುಡಕಟ್ಟು ಜಾತಿಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಲಾಗಿದೆ ಎಂದು ಹೇಳಿರುವುದು ವರದಿಯಲ್ಲಿ ಕಂಡು ಬಂದಿದೆ. ಆದರೆ ಅವುಗಳನ್ನು ಪ್ರತ್ಯೇಕವಾಗಿ ಚದುರಿದಂತೆ ಉಪ-ವರ್ಗಗಳಲ್ಲಿ ವಿಂಗಡಿಸಿರುವುದು ಕಂಡು ಬಂದಿದೆ (1ಎ ಮತ್ತು1ಬಿ). ವಾಸ್ತವವಾಗಿ ಈ 46 ಅಲೆಮಾರಿ ಮತ್ತು ಅರೆ ಅಲೆಮಾರಿ ಜಾತಿಗಳನ್ನು ಒಂದು ಪ್ರವರ್ಗದ ಒಂದು ಭಾಗವಾಗಿ ಪರಿಗಣಿಸಬೇಕಾಗಿತ್ತು. ಉದಾಹರಣೆಗೆ 1ಎ ಉಪ -ಪ್ರವರ್ಗದಲ್ಲಿ ಈ ಮುಂದೆ ಹೇಳಿರುವ ಅಲೆಮಾರಿಗಳಿವೆ - ಬೈರಾಗಿ, ಬಾಲಸಂತೋಷಿ, ಬಾಜಿಗರ್, ಬಾರ್ ಡಿ, ಚಾರ, ಚಿತ್ರಕಥಿ ಜೋಶಿ, ದೊಂಬರಿ, ಸಾರನಿಯ, ತಿರುಮಲಿ, ವಾಯ್ದು, ವಾಸುದೇವ, ವಾಡಿ, ವಾಗ್ರಿ, ವೀರ್ ಮುಂತಾದವು. ಹಾಗೆಯೇ 1ಬಿಯಲ್ಲಿ ಹಾವಾಡಿಗ, ನಾಥಪಂತಿ, ಡವರಿ, ಬಜೇನಿಯ, ಗೊಂದಲಿಗ ಮುಂತಾದವು. ಅಂತೆಯೇ ಜಾತಿ ಮತ್ತು ಉಪಜಾತಿಗಳು ಬೇರೆ ಬೇರೆ ಉಪವರ್ಗಗಳಲ್ಲಿ ಕಾಣಿಸಿಕೊಂಡಿವೆ. ಉದಾಹರಣೆಗೆ: ಹೆಳವ, ಗೊಲ್ಲ ಮುಂತಾದವು ಒಂದು ಉಪವರ್ಗದಲ್ಲಿದ್ದರೆ ಅವುಗಳ ಉಪಜಾತಿಗಳಾದ ಪಿಚಗುಂಟಲ, ಯಾದವ ಹೀಗೆ ಇನ್ನು ಅನೇಕ ಜಾತಿ ಮತ್ತು ಉಪಜಾತಿಗಳು ಪ್ರತ್ಯೇಕಗೊಂಡು ಮತ್ತೊಂದು ಉಪವರ್ಗದಲ್ಲಿವೆ. ಮುಖ್ಯ ಜಾತಿಯಿಂದ ಅದರ ಉಪಜಾತಿಗಳನ್ನು ಬೇರ್ಪಡಿಸುವುದು ನಿಯಮಬಾಹಿರ (ವಿ. ವಿ. ಸ್ವಾಮಿನಾಥನ್ vs ತಮಿಳುನಾಡು W. P. NO 15679 oಜಿ 2021, T. N). ಸರ್ವೋಚ್ಚ ನ್ಯಾಯಾಲಯವೂ ಕೂಡಾ ಉಚ್ಚ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ಮುಂದುವರಿದು ಹಂತ -3ರಲ್ಲಿ, ಮೌಲ್ಯಾಂಕಗಳ ವ್ಯಾಪ್ತಿಯು 12- 147 ಆಗಿದ್ದು ಇದರ ಸರಾಸರಿ ಮತ್ತು ಮಧ್ಯಾಂಕ ಸಂಖ್ಯೆಯು 90 ಆಗಿದೆ; ಎಂದು ಆಯೋಗ ಹೇಳಿಕೊಂಡಿದೆ. 90, ಈ ಸಂಖ್ಯೆ ಸರಾಸರಿಯೋ ಅಥವಾ ಮಧ್ಯಾಂಕವೋ ಯಾವುದೊಂದೂ ತಿಳಿಯುವುದಿಲ್ಲ. 90 ಸಂಖ್ಯೆಯ ಆಧಾರದ ಮೇಲೆ 90 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದವುಗಳನ್ನು ಅತ್ಯಂತ ಹಿಂದುಳಿದ ಪ್ರವರ್ಗ- 1, 50- 89 - ಅತಿ ಹಿಂದುಳಿದ ಪ್ರವರ್ಗ -2, 20-49 - ಹಿಂದುಳಿದ ಪ್ರವರ್ಗ- 3, 20ಕ್ಕಿಂತ ಕಡಿಮೆ ಸಾಮಾನ್ಯ ಎಂದು ನಿರ್ಧರಿಸಲಾಗಿದೆ.
ಪ್ರವರ್ಗಗಳಲ್ಲಿ ಮತ್ತೆ (ಎ)ಮತ್ತು( ಬಿ) ಎಂಬೆರಡು ಉಪವರ್ಗಗಳನ್ನು ಮಾಡಿಕೊಳ್ಳಲಾಗಿದೆ.
ಪ್ರವರ್ಗ- 1ಎಯಲ್ಲಿ 125 ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಜಾತಿಗಳನ್ನು ಪಟ್ಟಿ ಮಾಡಲಾಗಿದೆ. ಪ್ರವರ್ಗ- 1ಬಿಯಲ್ಲಿ 90 ರಿಂದ 124 ಅಂಕಗಳನ್ನು ಪಡೆದ ಜಾತಿಗಳನ್ನು ಸೇರಿಸಲಾಗಿದೆ. ಪ್ರವರ್ಗ -2ಎ ಗೆ 50ರಿಂದ 89 ಅಂಕಗಳನ್ನು ಪಡೆದವುಗಳು ಮತ್ತು ಪ್ರವರ್ಗ - 2 ಬಿ ಗೆ ಮುಸ್ಲಿಮ್ ಮತ್ತು ಅದರ ಉಪ ಜಾತಿಗಳನ್ನು ಸೇರಿಸಲಾಗಿದೆ.
ಪ್ರವರ್ಗ- 3ಎಗೆ 20ರಿಂದ 49 ಅಂಕಗಳನ್ನು ಪಡೆದವುಗಳು ಮತ್ತು ಪ್ರವರ್ಗ-3ಬಿಗೆ 20ರಿಂದ 49 ಅಂಕಗಳನ್ನು ಪಡೆದವುಗಳು. ಹೀಗೆ ಅವುಗಳು ಪಡೆದ ಅಂಕಗಳ ಆಧಾರದ ಮೇಲೆ ಪ್ರವರ್ಗಗಳನ್ನಾಗಿ ವಿಂಗಡಿಸಲಾಗಿದೆ ಎಂದು ಆಯೋಗ ಹೇಳಿಕೊಂಡಿದೆ. ಪ್ರವರ್ಗ- 3ಎ ಮತ್ತು 3ಬಿ ಗಳನ್ನು ವಿಂಗಡಿಸುವಾಗ, ಪ್ರಸ್ತುತ ಸರಕಾರದ ಆದೇಶದ ಮೀಸಲಾತಿ ಪಟ್ಟಿಯಲ್ಲಿರುವ ಅದೇ ಪ್ರವರ್ಗಗಳ ಜಾತಿಗಳು ಬದಲಾಗಿಲ್ಲ ಎಂಬ ಅಂಶವನ್ನು ಹೇಳಲಾಗಿದೆ. ಹಾಗಾದರೆ ಒಂದು ಪ್ರಶ್ನೆ ಉದ್ಭವಿಸದಿರದು. ಮಾನದಂಡಗಳನ್ನಿಟ್ಟು ಈ ಪರಿಶೀಲಿಸುವ ಕಸರತ್ತಿನ ಅಗತ್ಯವೇನಿತ್ತು?
ಮೇಲೆ ಹೇಳಿರುವ ಪ್ರವರ್ಗ- 1ರಲ್ಲಿ ಎರಡು ಬಗೆಯ ಅಂಕಗಳನ್ನು ಪರಿಗಣನೆಗೆ ತೆಗೆದುಕೊಂಡು 1ಎ ಮತ್ತು 1ಬಿ ಎಂದು ವಿಂಗಡಿಸಲಾಗಿದೆ. ಇದು ಸಾಧುವಲ್ಲ, ಒಂದೇ ಮಾನದಂಡದ ಅಂಕಗಳನ್ನು ತೆಗೆದುಕೊಂಡು, ಅವುಗಳಿಗೆ ಹೊಂದಾಣಿಕೆ ಆಗುವ ಜಾತಿಗಳ ಸಾಮರ್ಥ್ಯದ ಆಧಾರದ ಮೇಲೆ ವಿಂಗಡಿಸಬೇಕು.ಆದರೆ ಇದೇ ಅಂಕಗಳ ಮಾನದಂಡ ಪ್ರವರ್ಗ- 2 ಮತ್ತು ಪ್ರವರ್ಗ - 3ರಲ್ಲಿ ಅನ್ವಯ ಆಗಿರುವುದು ಕಂಡು ಬರುವುದಿಲ್ಲ. ಪ್ರವರ್ಗ - 1 ರಲ್ಲಿ, 1ಎಗೆ 125 ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಜಾತಿಗಳನ್ನು ಒಗ್ಗೂಡಿಸಿದೆ. ಆದರೆ, ಅದೇ ಪ್ರವರ್ಗದ 1ಬಿಗೆ 90ರಿಂದ 124 ಅಂಕಗಳನ್ನು ಪಡೆದುಕೊಂಡಿರುವ ಜಾತಿಗಳನ್ನು ಸೇರಿಸಲಾಗಿದೆ. ಒಂದೇ ಪ್ರವರ್ಗದಲ್ಲಿ ಭಿನ್ನ ಅಂಕಗಳನ್ನು ಪಡೆದವುಗಳನ್ನು ವಿಂಗಡಿಸಿ ಇಡಲಾಗಿದೆ. ಇದು ತರ್ಕಕ್ಕೆ ಸಿಗದ ಸಂಯೋಜನೆಯಾಗಿದೆ. ಯಾವುದೋ ಜಾತಿಯನ್ನು ಸಂರಕ್ಷಿಸುವ ಉದ್ದೇಶ ಆಯೋಗಕ್ಕೆ ಇರಬಹುದು ಎಂಬ ಅನುಮಾನ ಕಾಡದಿರದು.