Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಹೆಗ್ಡೆ ವರದಿ ಸ್ವೀಕಾರ ಯೋಗ್ಯವೇ?

ಹೆಗ್ಡೆ ವರದಿ ಸ್ವೀಕಾರ ಯೋಗ್ಯವೇ?

ಕೆ.ಎನ್. ಲಿಂಗಪ್ಪಕೆ.ಎನ್. ಲಿಂಗಪ್ಪ8 July 2025 12:06 PM IST
share
ಹೆಗ್ಡೆ ವರದಿ ಸ್ವೀಕಾರ ಯೋಗ್ಯವೇ?
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ‘ದತ್ತಾಂಶಗಳ ಅಧ್ಯಯನ ವರದಿ- 2024’ರಲ್ಲಿ ಶಿಫಾರಸು ಮಾಡಿರುವ, ಹಿಂದುಳಿದ ವರ್ಗಗಳ ಮೀಸಲಾತಿಯ ಹೊಸ ಪಟ್ಟಿ ಅಥವಾ ಜಾತಿ-ಸಮುದಾಯಗಳ ಮರು ವರ್ಗೀಕರಣವನ್ನು ಪರಾಮರ್ಶೆಯಲ್ಲಿ ಪರ್ಯಾವಲೋಚಿಸಿದಂತೆ ಸಾಂವಿಧಾನಿಕವಾಗಿ ಸಿಂಧುತ್ವಗೊಳಿಸುವುದು ಸುಲಭ ಸಾಧ್ಯವಲ್ಲ.

ಭಾಗ - 2

ಪ್ರವರ್ಗ-3ಎ ಮತ್ತು 3ಬಿಯನ್ನು ವಿಂಗಡಿಸುವಾಗ 20 ರಿಂದ 49 ಅಂಕಗಳನ್ನು ಪಡೆದ ಜಾತಿಗಳನ್ನು ಹಿಂದುಳಿದ(?) ಸಮುದಾಯಗಳೆಂದು ಹೇಳಲಾಗಿದೆ. ಇಲ್ಲಿ ಕಂಡು ಬರುವ ಸಂಶಯವೆಂದರೆ, 200 ಅಂಕಗಳಿಗೆ ಕೇವಲ 20 ಅಂಕಗಳನ್ನು ಪಡೆದ ಜಾತಿಗಳು ‘ಹಿಂದುಳಿದವು’ ಎಂದು ಪರಿಗಣಿಸಲಾಗಿದೆ. ಅಂದರೆ ಶೇ.10ರಷ್ಟು ಮಾತ್ರ ಅಂಕಗಳನ್ನು ಪಡೆದ ಜಾತಿಗಳು ಹಿಂದುಳಿದವು ಎಂದು ಲಕ್ಷಿಸಲಾಗಿದೆ ಎಂದಂತಾಯಿತು. ಇದು ಪರಮಾಶ್ಚರ್ಯ ಉಂಟು ಮಾಡುವ ಕ್ರಿಯೆಯಾಗಿದೆ. ಈ ಕ್ರಿಯೆಗೆ ಯಾವ ಅಳತೆಗೋಲನ್ನು ಹಿಡಿಯಲಾಗಿದೆ ಎಂಬುದೂ ಖಚಿತವಾಗಿ ಅತಾರ್ಕಿಕ. ಅಂದರೆ ಯಾವುದೋ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ತರಲೇ ಬೇಕೆಂಬ ಉದ್ದೇಶ ಆಯೋಗಕ್ಕೆ ಖಂಡಿತ ಇರಲೇಬೇಕು ಎಂದು ಸ್ಪಷ್ಟವಾಗಿ ಎದ್ದು ಕಾಣುತ್ತದೆ.

ಜಯಪ್ರಕಾಶ್ ಹೆಗ್ಡೆ ಆಯೋಗವು ಸಿದ್ಧಪಡಿಸಿರುವ ಪಟ್ಟಿಯಲ್ಲಿರುವ ಒಟ್ಟು ಜನಸಂಖ್ಯೆಯು 4,16,30,153 ಆಗಿದೆ. ಅಂದರೆ ಕರ್ನಾಟಕದಲ್ಲಿ ಸಿದ್ಧಪಡಿಸಿರುವ ‘ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು’ ವರದಿಯಂತೆ ಶೇ. 70ರಷ್ಟಿದ್ದಾರೆ. ಇದು ಎಚ್.ಕಾಂತರಾಜು ಆಯೋಗದ ಸಮೀಕ್ಷೆಯ ದತ್ತಾಂಶದ ಪ್ರಕಾರ ರಾಜ್ಯದ ಜನಸಂಖ್ಯೆ 5,98,14,942ಕ್ಕೆ ಅನುಸಾರವಾಗಿದೆ.

ಆಯೋಗ ವಿಂಗಡಿಸಿರುವ ಎಲ್ಲಾ ಪ್ರವರ್ಗಗಳ ಮೀಸಲಾತಿ ಪಟ್ಟಿಯನ್ನು ಒಮ್ಮೆ ಸೂಕ್ಷ್ಮವಾಗಿ ಅವಲೋಕಿಸಿದಾಗ, ಸದ್ಯ ಜಾರಿಯಲ್ಲಿರುವ(ಸಂಖ್ಯೆ: ಸಕಇ 225 ಬಿಸಿಎ 2000, ದಿನಾಂಕ 30.3.2022) ಮೀಸಲಾತಿಯ ಪಟ್ಟಿಯ ಯಾವೊಂದು ಜಾತಿಗಳನ್ನು ಬಿಟ್ಟು ಕೊಟ್ಟಿಲ್ಲ. ಈಗಿನ ಜಾತಿಗಳ ಪಟ್ಟಿಯು ನ್ಯಾ.ಚಿನ್ನಪ್ಪರೆಡ್ಡಿ ಅವರ ವರದಿಯನ್ನು ಆಧರಿಸಿ 1994ರಲ್ಲಿ ಜಾರಿಗೊಂಡುದುದಾಗಿದೆ. ಜಾರಿಗೊಂಡು 30 ವರ್ಷಗಳೇ ಕಳೆದರೂ ಯಾವುದೇ ಒಂದು ಜಾತಿಯೂ ಮೀಸಲಾತಿಗೊಳಪಡಲು ಅನರ್ಹತೆ ಪಡೆದೇ ಇಲ್ಲವೇ? (ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದಿಲ್ಲವೇ ಅಥವಾ ಸಾಕಷ್ಟು ಪ್ರಾತಿನಿಧ್ಯ ಪಡೆದಿಲ್ಲವೇ). ಆಯೋಗ ಈ ಮೇಲೆ ಹೇಳಿರುವ ಹಾಗೂ ಹಿಂದುಳಿದವರೆಂದು ಗುರುತಿಸಿರುವ ಪಟ್ಟಿಯು ಕೇವಲ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವುದೇ ಆಗಿದೆ. ನಾಗರಿಕ ವರ್ಗಗಳಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಲು ವಿಧಿ 15 (4) ಅನ್ನು ಮಾತ್ರ ಗಮನಿಸಿದೆ. ಇಷ್ಟರಿಂದಲೇ ಮೀಸಲಾತಿ ಪಟ್ಟಿ ಪರಿಪೂರ್ಣಗೊಳ್ಳುವುದಿಲ್ಲ. ಆಯೋಗ ಸಂಪೂರ್ಣ ಇಲ್ಲಿ ಎಡವಿದೆ.

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಪಟ್ಟಿಯಲ್ಲಿ ಬರುವ ಜಾತಿಗಳು ವಿಧಿ 16 (4)ರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲೇಬೇಕು. ವಿಧಿ ಹೀಗಿದೆ: ‘‘ಈ ಅನುಚ್ಚೇದದಲ್ಲಿ ಇರುವುದು ಯಾವುದೂ, ಯಾವುದೇ ಹಿಂದುಳಿದ ವರ್ಗದ ನಾಗರಿಕರು ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿಲ್ಲವೆಂದು ರಾಜ್ಯವು ಅಭಿಪ್ರಾಯ ಪಟ್ಟಲ್ಲಿ ಅಂಥವರಿಗಾಗಿ ನೇಮಕಗಳನ್ನು ಅಥವಾ ಹುದ್ದೆಗಳನ್ನು ಮೀಸಲಿಡುವುದಕ್ಕಾಗಿ ಯಾವುದೇ ಉಪಬಂಧವನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ’’.

ಈ ಲೇಖನದ ಪ್ರಾರಂಭದಲ್ಲಿ ನ್ಯಾಯಾಲಯಗಳ ಪ್ರಕರಣಗಳನ್ನು ಉದಾಹರಿಸಿ ವಿಧಿ 16(4)ರಲ್ಲಿರುವ ಅಂಶಗಳನ್ನು ಹೇಳಿದೆ. ಯಾವುದೇ ಹಿಂದುಳಿದ ನಾಗರಿಕರು ಅಥವಾ ಜಾತಿಯು ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ಹೊಂದಿದೆ ಎಂದು ಪರಿಗಣಿಸಲ್ಪಟ್ಟಲ್ಲಿ ಅಂಥ ಜಾತಿಯು ಮೀಸಲಾತಿಗಾಗಿ ಹಿಂದುಳಿದ ಪಟ್ಟಿಗೆ ಸೇರಲು ಅರ್ಹತೆ ಪಡೆಯುವುದಿಲ್ಲ.

ಆಯೋಗವೇ ವರದಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪೊಂದನ್ನು ಕೋಟ್ ಮಾಡಿದೆ. ಅದರಲ್ಲಿ ಹೀಗೆ ಹೇಳಿದೆ: -ವಿಧಿ 16(4)ರಲ್ಲಿ ನಾಗರಿಕರ ‘ಹಿಂದುಳಿದ ವರ್ಗ’ ಎಂಬ ಪದವು ಎಲ್ಲಾ ದುರ್ಬಲ ವರ್ಗಗಳನ್ನು ಒಳಗೊಂಡಿಲ್ಲ, ಆದರೆ ಸಾಮಾಜಿಕವಾಗಿ ಮತ್ತು ಅದರಿಂದಾಗಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಸೇವೆಗಳಲ್ಲಿ ಅಸಮರ್ಪಕವಾಗಿ ಪ್ರತಿನಿಧಿಸಲ್ಪಟ್ಟವರನ್ನು ಮಾತ್ರ ಒಳಗೊಂಡಿದೆ ಎಂಬ ಅಭಿಪ್ರಾಯವನ್ನು (ಪು-97) ನ್ಯಾ.ಪಿ. ಬಿ. ಸಾವಂತ್ ಅವರು ವ್ಯಕ್ತಪಡಿಸಿರುತ್ತಾರೆ (ಜಾನಕಿ ಪ್ರಸಾದ್ ಪರಿಮು vs ಜಮ್ಮು ಮತ್ತು ಕಾಶ್ಮೀರ ರಾಜ್ಯ, AIR 1973 Sಅ 930)

ಆಯೋಗವೇ ಹೇಳುವಂತೆ, ಮಂಡಲ್ ಆಯೋಗದ ವರದಿಯ ಪ್ರಕಾರ ಹಿಂದುಳಿದ ವರ್ಗಗಳು ಈ ಕೆಳಗಿನ ಪರೀಕ್ಷೆಗಳನ್ನು ಪೂರೈಸಿದರೆ ಮಾತ್ರ ಮೀಸಲಾತಿ ಉದ್ದೇಶಕ್ಕಾಗಿ ಅವರನ್ನು ಪರಿಗಣಿಸುವಲ್ಲಿ ಜಾತಿಯು ಪ್ರಬಲ ಅಂಶವಾಗಬಹುದು.

* ಹಿಂದುಳಿದಿರುವಿಕೆಯ ಪರೀಕ್ಷೆ

* ಅಸಮರ್ಪಕ ಪ್ರಾತಿನಿಧ್ಯದ ಪರೀಕ್ಷೆ

ಹಾವನೂರು ವರದಿಯ ಉದಾಹರಣೆ

ಆಯೋಗದ ಕಟ್ಟುನಿಟ್ಟಿನ ನಿರ್ಧಾರಕ್ಕೆ ಸಾಕ್ಷಿ ಆಗುವಂತೆ ಕೆಲವು ವರ್ಗಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದರೂ ಸೇವೆಯಲ್ಲಿ ಸಾಕಷ್ಟು ಪ್ರಾತಿನಿಧ್ಯ ಪಡೆದಿವೆ ಎಂದು ವಿಧಿ 16(4)ಕ್ಕೆ ಅನುಗುಣವಾಗಿ ಮೀಸಲಾತಿ ಪಟ್ಟಿಯಿಂದ ಅವನ್ನು ಆಯೋಗ ಹೊರಗುಳಿಸಿದೆ. ಅವೆಂದರೆ: ಅರಸು, ಬಲಿಜ, ದೇವಾಡಿಗ, ಗಾಣಿಗ, ನಾಯಿಂದ, ರಜಪೂತ್, ಸತಾನಿ ಮುಂತಾದವು.

ಮೇಲೆ ಹೇಳಿರುವ ಕಾರಣಗಳಿಂದಾಗಿ, ವಿಧಿ 16(4)ರಲ್ಲಿ ಹೇಳಿರುವ ವಿಷಯಗಳನ್ನು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಕೆ.ಜಯಪ್ರಕಾಶ್ ಹೆಗ್ಡೆ ಆಯೋಗ ಪರಿಪಾಲಿಸದಿರುವುದು ಸಾಂವಿಧಾನಿಕ ವಿರೋಧಿ ಕ್ರಿಯೆ ಆಗುತ್ತದೆ. ಆದುದರಿಂದ ಈ ವರದಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.

ಕೆಲವೊಂದು ಜಾತಿ-ಉಪಜಾತಿಗಳನ್ನು ಹಿಂದಿನ ಆಯೋಗಗಳು, ಪುರಾವೆ ಸಹಿತ ವಿಚಾರಣೆ ನಡೆಸಿ ಕಾಯ್ದೆಯ ಉಪಬಂಧ 9(1)ರ ಪ್ರಕಾರ ಸರಕಾರಕ್ಕೆ ಅಂಗೀಕರಿಸಲು ಕಳುಹಿಸಿ ಕೊಟ್ಟಿರುವ ಸಲಹೆಗಳನ್ನು ಸರಕಾರ ಅಂಗೀಕರಿಸಿ ಅಧಿಸೂಚನೆ ಹೊರಡಿಸುವ ಮುನ್ನವೇ ಮೀಸಲಾತಿ ಪಟ್ಟಿಗೆ ಸೇರಿಸಿಕೊಂಡಿರುವುದು ಅಧಿಕಾರ ವ್ಯಾಪ್ತಿ ಮೀರಿದಂತಾಗಿದೆ.

ಕಾಯ್ದೆಯ ಉಪಬಂಧ 11ನ್ನು ಪರಿಪಾಲಿಸುವು ದಕ್ಕಾಗಿಯೇ ಉಪಬಂಧ 9(2)ರ ಅನ್ವಯ, ಪ್ರತೀ 10 ವರ್ಷಕ್ಕೊಮ್ಮೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮಾಡಬೇಕು. ಆ ಪ್ರಕಾರವೇ ವಿಳಂಬವಾದರೂ 2015ರಲ್ಲಿ ಕಾಂತರಾಜು ಆಯೋಗ ಸಮೀಕ್ಷೆ ನಡೆಸಿದೆ. ಸಮೀಕ್ಷೆಯ ದತ್ತಾಂಶ ಮತ್ತು ದ್ವಿತೀಯ ಮೂಲದ ಮಾಹಿತಿ(secondary source of information)ಯನ್ನು ಆಧರಿಸಿ, ಉಪ ಬಂಧ 11ರಲ್ಲಿ ಹೇಳಿರುವಂತೆ ಪರಿಷ್ಕರಣ ಕಾರ್ಯ ಕೈಗೊಳ್ಳಬೇಕು. ಇದು ಸರಕಾರ ಮಾಡಲೇಬೇಕಾದ ಕಾರ್ಯ. ಆ ಕಾರ್ಯವನ್ನು ಕೂಡ ಪೂರೈಸಿರುವುದಿಲ್ಲ. ವಿಧಿ16(4)ರಂತೆ ಕ್ರಮ ಕೈಗೊಳ್ಳಲೂ ಸಹ, ದ್ವಿತೀಯ ಮೂಲದ ಮಾಹಿತಿ ಬೇಕೇ ಬೇಕು.

ಮೀಸಲಾತಿ ಪ್ರಮಾಣ ಹೆಚ್ಚಳ

ತಮಿಳುನಾಡು ಮತ್ತು ಜಾರ್ಖಂಡ್ ರಾಜ್ಯಗಳು ಜನಸಂಖ್ಯೆಯನ್ನಾಧರಿಸಿ ಮೀಸಲಾತಿ ಕೋಟಾವನ್ನು ಕ್ರಮವಾಗಿ ಶೇ. 69 ಮತ್ತು ಶೇ.77ರಷ್ಟನ್ನು ಅಳವಡಿಸಿಕೊಂಡಿರುತ್ತವೆ ಎಂಬ ಮಾನದಂಡವನ್ನೇ ಅವಲಂಬಿಸಿಕೊಂಡು ಆಯೋಗವು ಮೀಸಲಾತಿ ಪ್ರಮಾಣವನ್ನು ಶೇ. 51ಕ್ಕೆ ಹೆಚ್ಚಿಸಿದೆ. ಪರಿಶಿಷ್ಟ ಜಾತಿ(17) ಮತ್ತು ಪರಿಶಿಷ್ಟ ಪಂಗಡದ(7) ಮೀಸಲಾತಿ ಪ್ರಮಾಣವನ್ನು ಸೇರಿಸಿದಲ್ಲಿ ಅದು ಶೇ. 75ರಷ್ಟು ಆಗುತ್ತದೆ.

ತಮಿಳುನಾಡು ಸರಕಾರವು ಅಂದಿನ ಪಿ.ವಿ. ನರಸಿಂಹರಾವ್ ಸರಕಾರದ ಮೇಲೆ ಒತ್ತಡ ತಂದು, ಸಂವಿಧಾನವನ್ನು ತಿದ್ದುಪಡಿಗೊಳಪಡಿಸಿ 9ನೇ ಅನುಸೂಚಿಯಲ್ಲಿ ಸೇರಿಸಿಕೊಳ್ಳುವಲ್ಲಿ ಸಫಲವಾಗಿದೆ ಎಂಬ ಮಾತು ನಿಜ. ಆದರೆ 9ನೇ ಅನುಸೂಚಿ ಇರುವುದು ಭೂ ಸುಧಾರಣೆ ಕಾಯ್ದೆಗಳನ್ನು ಸಂರಕ್ಷಿಸಲು ಮಾತ್ರ. ಮೀಸಲಾತಿ ಕಾಯ್ದೆಗಳನ್ನು ಸೇರಿಸಲು ಅಲ್ಲ. ತಮಿಳುನಾಡು ಕಾಯ್ದೆ ಇಂದಿಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ. ಅದೇ ರೀತಿ ಜಾರ್ಖಂಡ್ ರಾಜ್ಯವು ಕೂಡ ಒಂದು ಕಾಯ್ದೆ ಹೊರಡಿಸಿ ಮೀಸಲಾತಿ ಕೋಟಾವನ್ನು ಶೇ. 77ಕ್ಕೆ ಏರಿಸಿ, ಒಂಭತ್ತನೇ ಅನುಸೂಚಿಗೆ ಸೇರಿಸಲು ಶಿಫಾರಸು ಮಾಡಿದೆ. ಹಾಗೆಯೇ ಇತ್ತೀಚೆಗೆ, ಜನಸಂಖ್ಯೆಗನುಗುಣವಾಗಿಯೇ ಶೇ. 65ಕ್ಕೆ ಮೀಸಲಾತಿ ಕೋಟಾವನ್ನು ಏರಿಸಿದ್ದ ಬಿಹಾರ ಸರಕಾರದ ಆದೇಶವನ್ನು ಪಾಟ್ನಾ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಅಷ್ಟೇ ಅಲ್ಲ ಸರ್ವೋಚ್ಚ ನ್ಯಾಯಾಲಯ ವಿಶೇಷ ಮೇಲ್ಮನವಿಯನ್ನು ಸ್ವೀಕಾರ ಮಾಡಲೇ ಇಲ್ಲ. ಅಂತೆಯೇ ಮಹಾರಾಷ್ಟ್ರ ಸರಕಾರವೂ ಶೇ. 50ರಷ್ಟು ಕೋಟಾವನ್ನು ಮೀರಿ ಹೋಗಿದ್ದ ಪ್ರಕರಣವನ್ನು (ಡಾ. ಜಯಶ್ರೀ ಲಕ್ಷ್ಮಣರಾವ್ ಪಾಟೀಲ್- ಐಐ 2021 Sಅ 243) ಪ್ರಶ್ನಿಸಲಾಗಿ ಸರ್ವೋಚ್ಚ ನ್ಯಾಯಾಲಯ, ಹೆಚ್ಚಿದ ಕೋಟಾ ಮಿತಿಯನ್ನು ತಿರಸ್ಕರಿಸಿತು. ಛತ್ತೀಸ್‌ಗಡದಲ್ಲೂ ಕೂಡ ಮೀಸಲಾತಿಯನ್ನು ಶೇ. 50ಕ್ಕಿಂತ ಹೆಚ್ಚಿಸಿದ್ದನ್ನು ಸರ್ವೋಚ್ಚ ನ್ಯಾಯಾಲಯ ಒಪ್ಪಲಿಲ್ಲ. ಇತ್ತೀಚೆಗೆ ಕರ್ನಾಟಕದಲ್ಲೂ ಕೂಡ ಶೇ. 56ಕ್ಕೆ ಕೋಟಾ ಹೆಚ್ಚಿಸಿರುವುದನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ ರದ್ದುಗೊಳಿಸಿದೆ (ನ್ಯಾಯಮಂಡಳಿಗೆ ಅಧಿಕಾರ ಇದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಬೇರೆ). ಸರ್ವೋಚ್ಚ ನ್ಯಾಯಾಲಯ ವಿಧಿಸಿರುವ ಮಿತಿ ಶೇ. 50ರಷ್ಟನ್ನು ಮೀರಿ ಹೋಗಿರುವ ಯಾವ ರಾಜ್ಯದ ಮೀಸಲಾತಿ ಕೋಟಾವನ್ನು ಈವರೆವಿಗೂ ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿರುವುದಿಲ್ಲ ಎಂಬ ಅಂಶವನ್ನು ಗಮನಿಸಬೇಕು.

ವಾಸ್ತವ ಪರಿಸ್ಥಿತಿ ಹೀಗಿರುವಲ್ಲಿ, ಆಯೋಗ ಶಿಫಾರಸು ಮಾಡಿರುವ ಶೇ. 75ರಷ್ಟು ಮೀಸಲಾತಿಯನ್ನು ನ್ಯಾಯೋಚಿತವಾಗಿ ಸಮರ್ಥಿಸಿಕೊಳ್ಳಲು ಕರ್ನಾಟಕ ಸರಕಾರಕ್ಕೆ ಸಾಧ್ಯವೇ ಎಂಬ ಬಲವಾದ ಪ್ರಶ್ನೆ ಉದ್ಭವಿಸದಿರದು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ‘ದತ್ತಾಂಶಗಳ ಅಧ್ಯಯನ ವರದಿ-2024’ರಲ್ಲಿ ಶಿಫಾರಸು ಮಾಡಿರುವ, ಹಿಂದುಳಿದ ವರ್ಗಗಳ ಮೀಸಲಾತಿಯ ಹೊಸ ಪಟ್ಟಿ ಅಥವಾ ಜಾತಿ-ಸಮುದಾಯಗಳ ಮರುವರ್ಗೀಕರಣವನ್ನು ಪರಾಮರ್ಶೆಯಲ್ಲಿ ಪರ್ಯಾವಲೋಚಿಸಿದಂತೆ ಸಾಂವಿಧಾನಿಕವಾಗಿ ಸಿಂಧುತ್ವಗೊಳಿಸುವುದು ಸುಲಭ ಸಾಧ್ಯವಲ್ಲ.

share
ಕೆ.ಎನ್. ಲಿಂಗಪ್ಪ
ಕೆ.ಎನ್. ಲಿಂಗಪ್ಪ
Next Story
X