ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಕ್ಕೆ ಸಮರ್ಥನೆ ಸರಿಯೇ?

ಮೊನ್ನೆ (ದಿನಾಂಕ 5.7.2025)ನಮ್ಮ ‘ವಾರ್ತಾ ಭಾರತಿ’ಯ ಸಂಪಾದಕೀಯ ನೋಡಿದೆ.
ಕ್ಷಮಿಸಿ, ಇಲ್ಲಿ ಕಲಿಕಾ ಮಾಧ್ಯಮ ಮತ್ತು ಭಾಷಾ ಕಲಿಕೆಯ ಬಗ್ಗೆ ಗೊಂದಲವಿದ್ದಂತಿದೆ.
ಸಂಪಾದಕೀಯದಲ್ಲಿನ ತರ್ಕ ನೋಡಿದರೆ, ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತೆರೆಯುವುದರಿಂದ ಸರಕಾರಿ ಶಾಲೆಗಳಿಗೆ ಮಕ್ಕಳು ಹೆಚ್ಚಾಗಿ ಅವು ಉಳಿಯುತ್ತವೆ ಎಂಬುದಾಗಿದೆ. ಇದು ಸತ್ಯವೇ ಎಂದಾದರೆ, ದ್ವಿಭಾಷಾ ಮಾಧ್ಯಮದ ಬದಲು, ಎಲ್ಲಾ ಸರಕಾರಿ ಹಾಗೂ ಅನುದಾನಿತ ಕನ್ನಡ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಬದಲಾಯಿಸಬಹುದಲ್ಲವೇ!?
ಈ ಆತ್ಮ ವಂಚನೆ ನೀತಿಯಿಂದ ಸರಕಾರ ಒಂದು ಬಗೆಯಲ್ಲಿ ಬಡಜನರಿಗೆ ಅದರಲ್ಲೂ ವಿಶೇಷವಾಗಿ, ತಾವು ಉಲ್ಲೇಖಿಸಿರುವ ಸಮುದಾಯಗಳಿಗೆ ಆಂಗ್ಲ ಭಾಷಾ ಮಾಧ್ಯಮದ ಹೆಸರಿನಲ್ಲಿ ದ್ರೋಹವೆಸಗುತ್ತಿದೆ.
ಮೂಲ ತಪ್ಪನ್ನು ಸರಿ ಪಡಿಸುವ ಬದಲು ಬಣ್ಣ ಹೊಡೆದು ಸಮಸ್ಯೆಯನ್ನು ಕಾಣಿಸದಂತೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಈ ಸತ್ಯವನ್ನು ಅರಿಯದೆ ಬರೆದರೆ, ಜಾತ್ರೆಯಲ್ಲಿ ನಾವೂ ಒಬ್ಬರು ಎಂದಂತಾಗುತ್ತದೆ. ನೀವು ಹೇಗೆ ಎಂದು ಕೇಳಬಹುದು?
ಆಂಗ್ಲ ಮಾಧ್ಯಮ ತೆರೆದು ಸರಕಾರಿ ಶಾಲೆಗಳನ್ನು ಉಳಿಸುವ ನಾಟಕ ಮಾಡುತ್ತಿರುವ ಸರಕಾರ, ಇದರ ಭಾಗವಾಗಿ ಎಲ್ಲಾ ವಿಷಯಗಳನ್ನು ಕಲಿಸಲು ನುರಿತ ಆಂಗ್ಲಭಾಷೆ ಬಲ್ಲ ಮತ್ತು ವಿಜ್ಞಾನ, ಗಣಿತ, ಸಮಾಜ ವಿಜ್ಞಾನವನ್ನು ಆಂಗ್ಲ ಭಾಷೆಯಲ್ಲಿ ಕಲಿಸಬಲ್ಲ ಶಿಕ್ಷಕರ ನೇಮಕ ಮಾಡುತ್ತದೆಯೇ? ಇಲ್ಲ!
ಹೋಗಲಿ, ಹಾಲಿ ಇರುವ ಶಿಕ್ಷಕರಿಗೆ ಈ ಬಗೆಯ ತರಬೇತಿ ಆಗಿದೆಯೇ? ಇಲ್ಲ!
ಕನ್ನಡ-ಆಂಗ್ಲ ಮಧ್ಯಮಗಳಲ್ಲಿ ಪ್ರತ್ಯೇಕ ಪಾಠ ಮಾಡಲು ಅಗತ್ಯ ಸಂಖ್ಯೆಯ ಶಿಕ್ಷಕರಿದ್ದಾರೆಯೇ? ಇಲ್ಲ !
ಆಂಗ್ಲ ಮಾಧ್ಯಮದಲ್ಲಿ ಕಲಿಸಲು ಅಗತ್ಯ ಕಲಿಕಾ ಸಂಪನ್ಮೂಲ ಒದಗಿಸಲಾಗಿದೆಯೇ? ಇಲ್ಲ !
ಖಾಲಿ ಇರುವ ಸರಿ ಸುಮಾರು 60,000 ಶಿಕ್ಷಕರ ಹುದ್ದೆಗಳಿಗೆ ಖಾಯಂ ನೇಮಕಾತಿ ಮಾಡುತ್ತದೆಯೇ? ಇಲ್ಲ !
ಹಾಗಾದರೆ, ಆಂಗ್ಲ ಮಾಧ್ಯಮ ಯಾವ ಪುರುಷಾರ್ಥಕ್ಕಾಗಿ !
ಅದೂ ಇರಲಿ, ತಮ್ಮ ತರ್ಕವನ್ನು ಸಂಶೋಧನೆ ಬೆಂಬಲಿಸುತ್ತವೆಯೇ ನೋಡೋಣ.
ಇದಕ್ಕೆ ಸಂಬಂಧಿಸಿದಂತೆ ನಾನು ಎರಡು ಸಂಶೋಧನಾಧಾರಿತ ಉದಾಹರಣೆಗಳನ್ನು ತಮ್ಮ ಮುಂದೆ ಮಂಡಿಸ ಬಯಸುತ್ತೇನೆ. ಒಂದು, ಯುನೆಸ್ಕೋ ವಿಶ್ವಾದ್ಯಂತ ನಡೆಸಿರುವ ಅಧ್ಯಯನಗಳು ಹೀಗೆ ಹೇಳುತ್ತವೆ: ‘‘ಭಾಷೆ ಮತ್ತು ಕಲಿಕೆಯ ಬಗ್ಗೆ ನಮಗೆ ಹಲವು ಬಗೆಯ ತಪ್ಪು ಕಲ್ಪನೆಗಳಿವೆ ಮತ್ತು ಅವು ನಮ್ಮ ನಿರ್ಧಾರಗಳಿಗೆ ಅಡ್ಡನಿಂತಿವೆ. ಈ ತಪ್ಪು ಕಲ್ಪನೆಗಳನ್ನು ಬಹಿರಂಗಪಡಿಸಿದಾಗ ಮಾತ್ರ ಜನಸಾಮಾನ್ಯರ ಕಣ್ಣು ತೆರೆಸಲು ಸಾಧ್ಯವಾಗುತ್ತದೆ. ಅಂತಹ ಕೆಲವು ಬಹು ದೊಡ್ಡ ಮಿಥ್ಯೆಗಳೆಂದರೆ, ಯಾವುದೇ ವಿದೇಶಿ ಭಾಷೆಯನ್ನು (ನಮ್ಮ ಸಂದರ್ಭದಲ್ಲಿ ಆಂಗ್ಲ ಭಾಷೆ) ಕಲಿಯಲು ಉತ್ತಮ ಮಾರ್ಗವೆಂದರೆ ಅದನ್ನು ಬೋಧನಾ ಮಾಧ್ಯಮವಾಗಿ ಬಳಸಬೇಕೆಂಬುದು. ಇನ್ನೊಂದು, ವಿದೇಶಿ ಭಾಷೆಯನ್ನು ಕಲಿಯಲೇಬೇಕಾದರೆ ಸಾಧ್ಯವಾದಷ್ಟು ಬೇಗ ಪ್ರಾರಂಭಿಸಬೇಕು. ಮೂರನೆಯದು, ವಿದೇಶಿ ಭಾಷೆಯನ್ನು ಕಲಿಯಲು ಮಾತೃ ಭಾಷೆಯು ಅಡ್ಡಿಯಾಗುತ್ತದೆ. ಸ್ಪಷ್ಟವಾಗಿ, ಈ ಎಲ್ಲಾ ಮಿಥ್ಯೆಗಳು ಸತ್ಯಕ್ಕಿಂತ ಹೆಚ್ಚು ಸುಳ್ಳು ಮತ್ತು ತಪ್ಪು ಕಲ್ಪನೆಯಿಂದ ಕೂಡಿವೆ. ಆದರೂ, ಈ ಮಿಥ್ಯೆಗಳ ಆಧಾರದಲ್ಲಿಯೇ ನಮ್ಮ ನೀತಿ ನಿರೂಪಕರು ತೀರ್ಮಾನ ಕೈಗೊಳ್ಳುತ್ತಿದ್ದಾರೆ. (UNESCO, 2008, Improving the Quality of Mother Tongue-Based Literacy and Learning, pp.2, https://unesdoc.unesco.org/ark:/48223/pf0000177738) ಇದರಿಂದ ಭಾಷೆಗಳ ಜೊತೆಗೆ ಸಮುದಾಯಗಳಿಂದ ನಶಿಸುತ್ತವೆ.
ಎರಡು, ವಿಶ್ವಾದ್ಯಂತ ಇಂಗ್ಲಿಷ್ ಕಲಿಸಲು ಕಾರ್ಯನಿರ್ವಹಿಸುವ ಬ್ರಿಟಿಷ್ ಸಂಸ್ಥೆ ಬ್ರಿಟಿಷ್ ಕೌನ್ಸಿಲ್, ಈ ವಿಷಯದ ಕುರಿತು ಹೀಗೆ ಹೇಳುತ್ತದೆ: ‘‘ಆಂಗ್ಲ ಭಾಷೆಯಲ್ಲಿ ಪರಿಣತಿ ಸಾಧಿಸಲು ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಕಲಿಸುವುದಕ್ಕಿಂತ ಬೋಧನಾ ಮಾಧ್ಯಮವಾಗಿ ಕಲಿಸುವುದು ಖಚಿತವಾದ ಮಾರ್ಗ ಎಂಬ ಅಭಿಪ್ರಾಯವನ್ನು ಬೆಂಬಲಿಸಲು ಅತ್ಯಂತ ಕಡಿಮೆ ಅಥವಾ ಯಾವುದೇ ಪುರಾವೆಗಳಿಲ್ಲ. ಇಂಗ್ಲಿಷನ್ನು ಒಂದು ಭಾಷಾ ವಿಷಯವನ್ನಾಗಿ ಕಲಿಸಿದಾಗ ಮಾತ್ರ ನಾವು ಆಂಗ್ಲ ಭಾಷೆಯ ಗುಣಮಟ್ಟ ಹಾಗೂ ನಿರರ್ಗಳತೆಯನ್ನು ಸಾಧಿಸಲು ಸಾಧ್ಯ. ತಜ್ಞರ ಅಂದಾಜಿನ ಪ್ರಕಾರ, ಎಲ್ಲಾ ಪಠ್ಯಕ್ರಮದಾದ್ಯಂತ (ಎಲ್ಲಾ ವಿಷಯಗಳ) ಕಲಿಕೆಯನ್ನು ಬೆಂಬಲಿಸಲು ಅಗತ್ಯವಿರುವ ಅರಿವಿನ ಮತ್ತು ಶೈಕ್ಷಣಿಕ ಭಾಷಾ ಪ್ರಾವೀಣ್ಯತೆಯನ್ನು (Cognitive and Academic Language Proficiency -CALP) ಅಭಿವೃದ್ಧಿಪಡಿಸಲು ಕನಿಷ್ಠ ವಿದ್ಯಾರ್ಥಿಗಳಿಗೆ ಆರರಿಂದ ಎಂಟು ವರ್ಷಗಳು ಬೇಕಾಗುತ್ತವೆ. ಆರಂಭಿಕ ಹಂತದಲ್ಲಿಯೇ ಆಂಗ್ಲ ಮಾಧ್ಯಮದ ಶಿಕ್ಷಣವು ಮಕ್ಕಳ ಕಲಿಕೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಶೈಕ್ಷಣಿಕ ಸಾಧನೆಯನ್ನು ಸೀಮಿತಗೊಳಿಸುತ್ತದೆ.’’(English Language and the Medium of Instruction in Basic Education..., 2017, p.3
https://www.teachingenglish.org.uk/sites/teacheng/files/K068_EMI_position_low-and_middle-income_countries_Final.pdf)
ಜೊತೆಗೆ, ಪ್ರಾರಂಭಿಕವಾಗಿ ತಾಯ್ನುಡಿಯನ್ನು ಪ್ರಭುತ್ವ ಸಾಧಿಸುವ ಮಟ್ಟಕ್ಕೆ ಕಲಿಸುವುದು ಮತ್ತು ಕಲಿಯುವುದು ಜ್ಞಾನಾರ್ಜನೆಯ ದೃಷ್ಟಿಯಿಂದ ಬುನಾದಿಯೆಂಬುದನ್ನು ಭಾರತವೂ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಲ್ಲಿನ ಭಾಷಾ ಸಂಶೋಧನೆಗಳು ನಿರೂಪಿಸಿವೆ. ಜೊತೆಗೆ, ತಾಯ್ನುಡಿ ಭಾಷೆಯ ಭದ್ರ ಬುನಾದಿ ಜ್ಞಾನಾರ್ಜನೆಗೆ ಮಾತ್ರವಲ್ಲದೆ ಅನನ್ಯತೆ, ಸಾಂಸ್ಕೃತಿಕ ಗುರುತು, ಸ್ವಾಭಿಮಾನ, ಸ್ವಂತಿಕೆ, ಸೃಜನಶೀಲತೆ, ತಾರ್ಕಿಕ ಪ್ರಕ್ರಿಯೆ, ವಿಮರ್ಶಾತ್ಮಕ ಚಿಂತನೆ, ಸ್ವತಂತ್ರ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ ಇತ್ಯಾದಿಗಳನ್ನು ಬಾಲ್ಯದಿಂದಲೇ ಮಕ್ಕಳಲ್ಲಿ ಬೆಳೆಸಲು ಸಹಾಯಕವಾಗುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ನಿರೂಪಿಸಿವೆ.
ವಾಸ್ತವಿಕತೆ ಹೀಗಿರುವಾಗ, 4,134 ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಆದೇಶ ಹೊರಡಿಸಿರುವುದನ್ನು ತಾವು ವಿಮರ್ಶಾತ್ಮಕವಾಗಿ ನೋಡದೆ ಸರಿ ಎನ್ನುವುದು ಪತ್ರಿಕೆ ಇಲ್ಲಿಯವರೆಗೆ ಪಾಲಿಸಿಕೊಂಡು ಬಂದಿರುವ ಸತ್ಯ ನಿಷ್ಠುರತೆಗೆ ಅಪಚಾರವಾಗುತ್ತದೆ.
ತಮಗೆ ತಿಳಿದಂತೆ, ಇದೇ ಸರಕಾರ ತನ್ನ ಮೊದಲ ಅವಧಿಯಲ್ಲಿ (2013-2018), ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕರಣ 29(ಎಫ್)ಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಎರಡೂ ಸದನಗಳಲ್ಲಿ ಮಂಡಿಸಿ, ರಾಷ್ಟ್ರಪತಿಯವರ ಅಂಗೀಕಾರಕ್ಕೆ ಕಳಿಸಿದೆ.
ಕನಿಷ್ಠ ಎಂಟನೇ ತರಗತಿಯವರೆಗೆ ಶಿಕ್ಷಣ ಮಾಧ್ಯಮ ಮಾತೃ ಭಾಷೆಯಲ್ಲಿರಬೇಕೆಂಬ ಆಶಯವನ್ನು ಎರಡೂ ಸದನಗಳು ಒಪ್ಪಿ ತೀರ್ಮಾನಿಸಿದ ಮಸೂದೆಯನ್ನು ರಾಷ್ಟ್ರಪತಿಯವರಿಂದ ಅಂಗೀಕಾರ ಪಡೆಯುವ ಕೆಲಸದ ಅನುಪಾಲನೆಯನ್ನು ಸ್ವತಃ ಮುಖ್ಯಮಂತ್ರಿಯವರೇ ಕಳೆದ ವಾರ ಮಾಡಿದ್ದಾರೆ.
ಸರಕಾರ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸರಿಪಡಿಸಲು ಈ ಬಗೆಯ ಸಂಕುಚಿತ (kneejerk)ತೀರ್ಮಾನ ಕೈಗೊಳ್ಳುವ ಬದಲು ಕೆಳಗಿನ ದೀರ್ಘಕಾಲಿಕ ಸುಸ್ಥಿರ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ.
1. ಶಿಕ್ಷಣ ಹಕ್ಕು ಕಾಯ್ದೆ 2009ನ್ನು ಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಿಯಾ ಯೋಜನೆ ರೂಪಿಸಬೇಕು. ಈ ಕ್ರಿಯಾ ಯೋಜನೆ ಜಾರಿಗೆ ಸರಕಾರ ಅಗತ್ಯ ಹಣಕಾಸನ್ನು ಒದಗಿಸಬೇಕು.
2. ಪೂರ್ವ ಪ್ರಾಥಮಿಕದಿಂದಲೇ ಆಂಗ್ಲ ಮಾಧ್ಯಮ ಜಾರಿಗೊಳಿಸುವುದನ್ನು ಕೈಬಿಟ್ಟು, ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಕನಿಷ್ಠ 8ನೇ ತರಗತಿಯವರೆಗೆ ತಾಯ್ನುಡಿ ಕಲಿಕೆಯನ್ನು ಜಾರಿಗೊಳಿಸಬೇಕು.
3. ರಾಜ್ಯದಲ್ಲಿ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ಸೂತ್ರವನ್ನು ಜಾರಿಗೊಳಿಸಬೇಕು
4. ಆಂಗ್ಲ ಭಾಷೆಯನ್ನು ಒಂದು ಭಾಷೆಯನ್ನಾಗಿ ಪ್ರಭುತ್ವ ಸಾಧಿಸುವ ಮಟ್ಟಕ್ಕೆ ಕಲಿಸಲು ನುರಿತ ಆಂಗ್ಲ ಭಾಷಾ ಶಿಕ್ಷಕರನ್ನು ನೇಮಿಸಬೇಕು. ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸಲು ಅಗತ್ಯ ಸಂಪನ್ಮೂಲ ಮತ್ತು ತರಬೇತಿಯನ್ನು ನೀಡಬೇಕು.
5. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು, ಸರಕಾರಿ ಶಾಲಾ ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗಳನ್ನು ಮೀಸಲಿಡಬೇಕು.
6. ಪದವಿ ಪೂರ್ವ ಶಿಕ್ಷಣದವರೆಗೆ ಸರಕಾರಿ ಶಾಲೆ, ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಎಲ್ಲಾ ವೃತ್ತಿಪರ ಕೋರ್ಸ್‌ಗಳಲ್ಲಿ ಕನಿಷ್ಠ ಶೇ. 25ರಷ್ಟು ಸೀಟುಗಳನ್ನು ಮೀಸಲಿಡಬೇಕು.
7. ಶಿಕ್ಷಕರ ನೇಮಕಾತಿಯನ್ನು ಅವರ ನೇಮಕಾತಿಯ ಸಂದರ್ಭದಲ್ಲಿ ಆಯ್ಕೆಯಾದ ತಾಲೂಕುಗಳಿಗೆ ಸೀಮಿತಗೊಳಿಸಿ, ಆಯಾ ತಾಲೂಕು ಕೇಂದ್ರಗಳಲ್ಲಿಯೇ ವಾಸಿಸುವಂತೆ ಕಡ್ಡಾಯಗೊಳಿಸಬೇಕು.
8. ಶಿಕ್ಷಕರ ತರಬೇತಿಯು ಪೋಷಕರು/ಎಸ್‌ಡಿಎಂಸಿ/ಸಮುದಾಯದ ಹಕ್ಕುಗಳ ವಿಷಯವನ್ನು ಒಳಗೊಂಡಿರಬೇಕು ಹಾಗೂ ಸಮುದಾಯದೊಂದಿಗೆ ಬಾಂಧವ್ಯವನ್ನು ಬೆಳೆಸುವುದು ಶಾಲೆ/ಶಿಕ್ಷಕರ ಕರ್ತವ್ಯ ಎಂಬುದನ್ನು ತರಬೇತಿ ಒಳಗೊಂಡಿರಬೇಕು
9. ಸರಕಾರಿ ಶಾಲೆಗಳ ಬಗ್ಗೆ ಜನ ಸಾಮಾನ್ಯರಲ್ಲಿ ಭರವಸೆ ಮೂಡಿಸಲು ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸಲು, ಎಲ್ಲಾ ಸರಕಾರಿ ನೌಕರರು ಮತ್ತು ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಂತೆ ಸೂಕ್ತ ಕಾನೂನನ್ನು ರೂಪಿಸಬೇಕು.
10. ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ಎಲ್ಲಾ ಶಾಲೆಗಳ ಸ್ಕೂಲ್ ಮ್ಯಾಪಿಂಗ್ ಕೈಗೊಳ್ಳಬೇಕು. ಅದರ ಅನ್ವಯ ಈಗಾಗಲೇ ಸರಕಾರಿ/ಸರಕಾರಿ ಅನುದಾನಿತ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಿದ್ದಲ್ಲಿ, ಎಷ್ಟೇ ಒತ್ತಡವಿದ್ದರೂ ಖಾಸಗಿ ಅನುದಾನರಹಿತ ಶಾಲೆಗಳಿಗೆ ಅನುಮತಿ ನೀಡಬಾರದು. ಬದಲಿಗೆ ಸರಕಾರಿ/ ಸರಕಾರಿ ಅನುದಾನಿತ ಶಾಲೆಗಳನ್ನು ನೆರೆಹೊರೆಯ ಶಾಲೆಯನ್ನಾಗಿ ಅಭಿವೃದ್ಧಿಪಡಿಸಲು ಎಲ್ಲಾ ಬಗೆಯ ಕ್ರಮಗಳನ್ನು ಕೈಗೊಳ್ಳಬೇಕು. ಶಾಲೆಗಳು ಅಗತ್ಯವಿದ್ದಲ್ಲಿ ಹೊಸ ಶಾಲೆಗಳನ್ನು ಸರಕಾರ ತೆರೆಯಬೇಕು
11.ಸರಕಾರ ಕಾಲಕಾಲಕ್ಕೆ ಹೊರಡಿಸುವ ಎಲ್ಲಾ ಸುತ್ತೋಲೆ ಹಾಗೂ ಇತರ ಮಾಹಿತಿಗಳನ್ನು ಶಾಲೆಯ ಮುಖ್ಯ ಶಿಕ್ಷಕರ ಜೊತೆಗೆ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೆ ಮಾಡಲು ಕ್ರಮವಹಿಸಬೇಕು.
13. ಶಾಲೆಯ ಉಳಿತಾಯ ಖಾತೆಯಲ್ಲಿನ ಹಣಕ್ಕೆ ಬ್ಯಾಂಕ್‌ನಿಂದ ಸಿಗುವ ಬಡ್ಡಿಯ ಮೊತ್ತವನ್ನು ಆಯಾ ಶಾಲೆಗಳ ಕೆಲಸ ಕಾರ್ಯಕ್ಕೆ ಬಳಸಲು ಅನುವು ಮಾಡಬೇಕು. ಯಾವುದೇ ಕಾರಣದಿಂದ ಬಡ್ಡಿ ಹಣವನ್ನು ಸರಕಾರ ಹಿಂದಕ್ಕೆ ಪಡೆಯಬಾರದು.
14. ಆಯಾ ಶಾಲೆಗಳ ಮುಖ್ಯ ಗುರುಗಳು ಪ್ರತೀ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರನ್ನು (ತಂದೆ ಮತ್ತು ತಾಯಿ ಇಬ್ಬರೂ) ಒಳಗೊಂಡ ವಾಟ್ಸ್‌ಆ್ಯಪ್ ಗುಂಪನ್ನು ರಚಿಸಿ ಸರಕಾರದಿಂದ ಬರುವ ಮಕ್ಕಳ ಕಲಿಕೆ, ಶಾಲಾ ನಿರ್ವಹಣೆ, ಶಾಲಾ ಅನುದಾನ ಮತ್ತು ಗುಣಮಟ್ಟ ಸುಧಾರಣೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಗುಂಪಿನಲ್ಲಿ ಹಂಚಿಕೊಳ್ಳುವಂತೆ ಆದೇಶಿಸಿಬೇಕು.
15. ಯುಡೈಸ್/ಸ್ಯಾಟ್‌ಗಳ ಮೂಲಕ ಸಂಗ್ರಹಿಸುವ ಶಾಲಾ ಸಂಪನ್ಮೂಲಗಳ ಮಾಹಿತಿ/ಮೂಲಸೌಕರ್ಯ/ವಿದ್ಯಾರ್ಥಿ/ಶಿಕ್ಷಕರ ಇತ್ಯಾದಿ ಮಾಹಿತಿಯು ಈಗಾಗಲೇ ಮುಖ್ಯ ಶಿಕ್ಷಕರಿಗೆ ಲಭ್ಯವಿದ್ದು, ಈ ಎಲ್ಲಾ ಮಾಹಿತಿ ಎಸ್‌ಡಿಎಂಸಿ ಸದಸ್ಯರು, ಪೋಷಕರು ಮತ್ತು ಸಾರ್ವಜನಿಕರಿಗೆ ಲಭ್ಯವಾಗುವಂತೆ ಒಂದು ಆ್ಯಪ್‌ನ್ನು ಅಭಿವೃದ್ಧಿಪಡಿಸಿ ಎಲ್ಲಾ ಎಸ್‌ಡಿಎಂಸಿ ಸದಸ್ಯರಿಗೆ ಮತ್ತು ಪಾಲಕರಿಗೆ ಒದಗಿಸಬೇಕು.







