ಲಡಾಖ್‌ನ ಬಿಕ್ಕಟ್ಟು ಯಾರಿಗೆ ಎಚ್ಚರಿಕೆಯ ಗಂಟೆ?

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ನಡೆದ ಲೇಹ್ ಬಂದ್ ಸೆಪ್ಟಂಬರ್ 24ರಂದು ಹಿಂಸಾಚಾರಕ್ಕೆ ತಿರುಗಿದೆ. ಬಿಜೆಪಿ ಕಚೇರಿಯ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಬೆಂಕಿ ಹಚ್ಚಲಾಯಿತು. ವಾಹನಗಳು ಉರಿದುಹೋದವು. ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದರು.
ಈ ಸನ್ನಿವೇಶ ಪ್ರತಿಭಟನೆಯ ಸ್ವರೂಪವನ್ನೂ ಮೀರಿ, ಕೇಂದ್ರ ಸರಕಾರಕ್ಕೆ ಎಚ್ಚರಿಕೆಯ ಗಂಟೆಯಂತಿದೆ ಎಂಬುದು ಸ್ಪಷ್ಟ. ಇದು ಬರೀ ಗಲಭೆಯಲ್ಲ. ಬದಲಾಗಿ, ದ್ರೋಹಕ್ಕೆ ಒಳಗಾದವರ ಆಕ್ರೋಶ ಸ್ಫೋಟಗೊಂಡಿರುವ ರೀತಿಯಾಗಿದೆ.
2019ರಲ್ಲಿ ಜಮ್ಮು-ಕಾಶ್ಮೀರದಿಂದ ಬೇರ್ಪಡಿಸಿ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿ, ಬಹಳ ದೊಡ್ಡ ದೊಡ್ಡ ಭರವಸೆಗಳನ್ನು ನೀಡಲಾಯಿತು.ಅಲ್ಲಿ ಕ್ರಾಂತಿಕಾರಿ ಅಭಿವೃದ್ಧಿಯ ಮಾತಾಡಲಾಯಿತು.
ಅದಾಗಿ ಬರೀ ಐದು ವರ್ಷಗಳ ನಂತರ ಅಲ್ಲಿ ಎಲ್ಲವೂ ಹುಸಿಯಾದ ಹತಾಶೆಯಲ್ಲಿ ಹಿಂಸೆ ತಲೆಯೆತ್ತಿದೆ. ಲಡಾಖ್ ಮತ್ತೊಂದು ಮಣಿಪುರದಂತೆ ಕಾಣುತ್ತಿದೆ. ತನ್ನದೇ ಭರವಸೆಗಳನ್ನು ಪೂರೈಸಲಾರದ ಬಿಜೆಪಿ ಸರಕಾರದ ಅತ್ಯಂತ ಕೆಟ್ಟ ವೈಫಲ್ಯಕ್ಕೆ ಇದು ಮತ್ತೊಂದು ಹೃದಯವಿದ್ರಾವಕ ಉದಾಹರಣೆಯಾಗಿದೆ.
ಈವರೆಗೆ ಶಾಂತಿಯುತ ಮತ್ತು ವಿಶಿಷ್ಟ ಪ್ರದೇಶವಾಗಿದ್ದ ಲಡಾಖ್ ಅನ್ನು ಈ ಸ್ಥಿತಿಗೆ ತಂದಿಡಲಾಗಿದೆ. ಅಲ್ಲಿನ ಜನರನ್ನು ಕಡೆಗಣಿಸಲಾಗಿದೆ. ಕಡೆಗೆ ಅವರ ಸಿಟ್ಟು ಹಿಂಸಾಚಾರಕ್ಕೆ ತಿರುಗಿದೆ.
ಲೇಹ್‌ನಲ್ಲಿನ ಬಿಜೆಪಿ ಕಚೇರಿಯನ್ನು ಆವರಿಸಿದ ಬೆಂಕಿ, ಜನಸಮೂಹದ ಕೋಪ ಎಂಬುದಕ್ಕಿಂತ ಹೆಚ್ಚಾಗಿ, ಬಿಜೆಪಿ ಭರವಸೆ ಈಡೇರಿಸದೇ ಹೋದುದರ ಸ್ಪಷ್ಟ ಪರಿಣಾಮವಾಗಿದೆ.
2019ರ ಆಗಸ್ಟ್‌ನಲ್ಲಿ ಮೋದಿ ಸರಕಾರ 370ನೇ ವಿಧಿ ರದ್ದುಗೊಳಿಸಿ ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಿದಾಗ, ಯಥಾ ಪ್ರಕಾರ ಅದನ್ನು ಮಾಸ್ಟರ್‌ಸ್ಟ್ರೋಕ್ ಎಂದು ಹೊಗಳಲಾಯಿತು. ಲೇಹ್‌ನ ಬೀದಿಗಳಲ್ಲಿ ಸಂಭ್ರಮಾಚರಣೆ ನಡೆಯಿತು. ಲಡಾಖ್‌ನ ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಸಂಸತ್ತಿನಲ್ಲಿ ಅಬ್ಬರದ ಭಾಷಣ ಮಾಡಿದ್ದರು. ಕಾಶ್ಮೀರದ ಪ್ರಾಬಲ್ಯದಿಂದ ಮುಕ್ತವಾಗುವ ಲಡಾಖ್‌ನ ದಶಕಗಳ ಆಕಾಂಕ್ಷೆಗೆ ಅವರು ಧ್ವನಿಯಾದವರಂತೆ ಕಂಡಿದ್ದರು.
ಅವರು ಹೊಸ ಯುಗದ ಬಗ್ಗೆ ಮಾತನಾಡಿದರು. ಲಡಾಖ್‌ನ ವಿಶಿಷ್ಟ ಬುಡಕಟ್ಟು ಗುರುತು, ಅದರ ಸಂಸ್ಕೃತಿ ಮತ್ತು ಅದರ ದುರ್ಬಲ ಪರಿಸರವನ್ನು ರಕ್ಷಿಸಲು ಇನ್ನು ಕೇಂದ್ರ ಸರಕಾರ ನಿಲ್ಲಲಿದೆ ಎಂದರು.
ಮೋದಿ ಬಗ್ಗೆ ಆ ಬಿಜೆಪಿ ಸಂಸದ ಗುಣಗಾನ ಮಾಡಿದ್ದೇ ಮಾಡಿದ್ದು. ಅವರಿಂದಾಗಿ ಲಡಾಖ್‌ನಲ್ಲಿ ಕ್ರಾಂತಿಯೇ ಬಂದು ಬಿಟ್ಟಿದೆ ಎಂಬಂತೆ ಆ ಬಿಜೆಪಿ ಸಂಸದ ಬಣ್ಣಿಸಿದರು. ಅಭಿವೃದ್ಧಿಯ ಬಗ್ಗೆ, ಪ್ರದೇಶಕ್ಕೆ ನೇರವಾಗಿ ಹರಿಯುವ ಹಣದ ಬಗ್ಗೆ, ಯುವಕರಿಗೆ ಉದ್ಯೋಗಗಳು ಸಿಗಲಿರುವ ಬಗ್ಗೆ ಅವರು ಹೇಳಿಯೇ ಹೇಳಿದರು.
ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ತಾತ್ಕಾಲಿಕ ವ್ಯವಸ್ಥೆಯಾಗಿದ್ದು ಅದು ಸಮೃದ್ಧಿ ಮತ್ತು ಸಬಲೀಕರಣಕ್ಕೆ ಕಾರಣವಾಗಲಿದೆ ಎನ್ನಲಾಯಿತು.
ಆ ಭಾಷಣ ಇಡೀ ದೇಶದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಐಟಿ ಸೆಲ್ ಮೂಲಕ ಹಾಗೂ ಮಡಿಲ ಮೀಡಿಯಾಗಳ ಮೂಲಕ ತಲುಪಿತು. ಲಡಾಖ್ ನಲ್ಲಿ ಮೋದಿ ಈವರೆಗೆ ಯಾವುದೇ ಪ್ರಧಾನಿ ಮಾಡದ ಕ್ರಾಂತಿ ಮಾಡಿಬಿಟ್ಟಿದ್ದಾರೆ ಎನ್ನಲಾಯಿತು. ಶ್ರೀನಗರದ ಸಂಕೀರ್ಣ ರಾಜಕೀಯದಿಂದ ಲಡಾಖ್ ಅನ್ನು ಮುಕ್ತಗೊಳಿಸುವ ಭರವಸೆಯನ್ನು ಮೋದಿ ಸರಕಾರ ನೀಡಿತ್ತು.
ಆದರೆ ಈಗ, ಆ ಭಾಷಣ ಮತ್ತು ಆ ಭರವಸೆಗಳು ಟೊಳ್ಳಾಗಿರುವುದು ಸ್ಪಷ್ಟವಾಗಿದೆ. ಮತ್ತದು ಹಿಂಸೆ ಮತ್ತು ಅಪನಂಬಿಕೆಯಿಂದ ಸೋತಂತಿರುವ ಲಡಾಖ್ ನೆಲದಲ್ಲಿ ಕಾಣಿಸಿದೆ. ಅದೇ ಸಂಸದ ನಮ್ಗ್ಯಾಲ್ ಆವತ್ತಿನಿಂದಲೂ ತಮ್ಮ ಕ್ಷೇತ್ರದಲ್ಲಿ ಕೇಂದ್ರ ಸರಕಾರದ ನೀತಿಗಳ ಬಗ್ಗೆ ತೀವ್ರವಾಗಿ ಟೀಕಿಸುತ್ತಿದ್ದಾರೆ. ಕೇಂದ್ರದ ನದರಿನಡಿ ಎಲ್ಲವೂ ಉತ್ತಮಗೊಳ್ಳಲಿದೆ ಎಂದು ಅಂದು ನಂಬಿದ್ದ ಅವರು ಈಗಲೂ ಅದಕ್ಕಾಗಿ ಒತ್ತಾಯಿಸುತ್ತಲೇ ಇರುವಂತಾಗಿದೆ.
ಲಡಾಖ್‌ನ ಜನರು ತಮ್ಮನ್ನು ಆವರಿಸಿದ್ದ ಭ್ರಮೆಯಿಂದ ಹೊರಬಂದಿದ್ದಾರೆ. ತಮ್ಮ ಮೈಮರೆವಿಗೆ ಕಾರಣವಾಗಿದ್ದ ಕಪಟತನಗಳು ಅವರಿಗೆ ಅರ್ಥವಾಗಿವೆ. ತಮಗೆ ನೀಡಲಾಗಿದ್ದ ಸ್ವಾಯತ್ತೆಯ ಭರವಸೆ, ಭೂಮಿ ಮತ್ತು ಗುರುತಿಗೆ ರಕ್ಷಣೆ ನೀಡುವ ಭರವಸೆ ಎಲ್ಲವೂ ಹಾಗೆಯೇ ಉಳಿದಿರುವುದು, ಯಾವುದೂ ಏನನ್ನು ತರದೇ ಇರುವುದು ಅವರಿಗೆ ಅರ್ಥವಾಗಿದೆ. ಬದಲಾಗಿ, ಕಾರ್ಪೊರೇಟ್ ದೈತ್ಯರ ಹಿತಾಸಕ್ತಿಗಳಿಗೆ ತಾವು ಗುರಿಯಾಗಬೇಕಾಗಿ ಬಂದದ್ದು ಅವರಿಗೆ ಗೊತ್ತಾಗಿದೆ.
ಸಂವಿಧಾನದ ಆರನೇ ಷೆಡ್ಯೂಲ್‌ನಲ್ಲಿ ಸೇರಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆ. ಅದು ಬರೀ ರಾಜಕೀಯ ಘೋಷಣೆಯಾಗಿರದೆ, ಅಸ್ತಿತ್ವಕ್ಕಾಗಿ ಎದ್ದಿರುವ ಕೂಗು.
ಶೇ. 97ಕ್ಕಿಂತ ಹೆಚ್ಚು ಬುಡಕಟ್ಟು ಜನಸಂಖ್ಯೆಯಿರುವ ಭೂಮಿ, ಸಂಪನ್ಮೂಲಗಳು ಮತ್ತು ಸ್ಥಳೀಯ ಆಡಳಿತದ ಮೇಲೆ ಸ್ವಾಯತ್ತೆ ಒದಗಿಸುವ ಆರನೇ ಷೆಡ್ಯೂಲ್ ಇಲ್ಲದೆ ತಮ್ಮ ಬದುಕು ಅಪಾಯದಲ್ಲಿದೆ ಎಂದು ಲಡಾಖ್ ಜನರು ಅರ್ಥ ಮಾಡಿಕೊಂಡಿದ್ದಾರೆ. ತಮ್ಮ ಪ್ರಾಚೀನ ಭೂಮಿಯನ್ನು ಗಣಿಗಾರಿಕೆ ಮತ್ತು ವಾಣಿಜ್ಯ ಯೋಜನೆಗಳಿಗಾಗಿ ಅತಿ ಹೆಚ್ಚು ಬಿಡ್ ಮಾಡಿದವರಿಗೆ ಹರಾಜು ಹಾಕಲಾಗುತ್ತದೆ, ತಮ್ಮ ಸಂಸ್ಕೃತಿ ದುರ್ಬಲಗೊಳ್ಳುತ್ತದೆ ಮತ್ತು ತಾವೆಲ್ಲ ಧ್ವನಿ ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಅವರ ಭಯ.
2019ರ ಭರವಸೆ ಈಡೇರಿದರೆ ಈ ಭಯ ಇಲ್ಲವಾಗುತ್ತಿತ್ತು. ಆದರೆ ಈಗ, ಸರಕಾರದ ನಿಷ್ಕ್ರಿಯತೆಯ ಪರಿಣಾಮವಾಗಿ ಈ ಭಯ ಮೊದಲಿದ್ದುದಕ್ಕಿಂತ ಸಾವಿರ ಪಟ್ಟು ಹೆಚ್ಚಿದೆ. ಸೆಪ್ಟಂಬರ್ 24ರ ಹಿಂಸಾಚಾರ, ಹಲವು ಸಮಯದ ಪ್ರತಿಭಟನೆಯ ನಂತರದ ಕೊನೆಯ, ಹತಾಶ ತಿರುವಾಗಿತ್ತು.
ತಿಂಗಳುಗಳಿಂದಲೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ನೇತೃತ್ವದಲ್ಲಿ ಲಡಾಖ್ ಜನರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಅವರು ಉಪವಾಸ ಸತ್ಯಾಗ್ರಹಗಳನ್ನು ಕೈಗೊಂಡಿದ್ದರು. ಈ ವರ್ಷದ ಆರಂಭದಲ್ಲಿ ವಾಂಗ್ಚುಕ್ ಸ್ವತಃ 21 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅವರದು ಗಾಂಧಿವಾದಿ ವಿಧಾನವಾಗಿತ್ತು. ಅವರು ಕೇಳುತ್ತಿದ್ದ ರೀತಿ ಪ್ರಜಾಸತ್ತಾತ್ಮಕವಾಗಿತ್ತು ಮತ್ತು ಅವರ ಬೇಡಿಕೆಗಳು ಸಾಂವಿಧಾನಿಕವಾಗಿದ್ದವು.
ಆದರೆ ಸರಕಾರ ಕಡೆಗಣಿಸಿತು, ಮೌನವಹಿಸಿತು. ಭರವಸೆ ನೀಡಿ, ಮುಂದೂಡಲಾಯಿತು.
ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಯಿತು. ಆದರೆ ಯಾವುದರಿಂದಲೂ ಏನೂ ಆಗಲಿಲ್ಲ. ಕೊನೆಯ ಸುತ್ತಿನ ಮಾತುಕತೆಗಳು ಮಾರ್ಚ್ 2024ರಲ್ಲಿ ಮುರಿದುಬಿದ್ದವು. ಹಸಿವಿನಿಂದ ಸತ್ಯಾಗ್ರಹಿಗಳ ಆರೋಗ್ಯ ಹದಗೆಡಲು ಪ್ರಾರಂಭಿಸಿತ್ತು. ಸರಕಾರ ಅಕ್ಟೋಬರ್ 6ರಂದು ಸಭೆಯ ದಿನಾಂಕ ನೀಡಿತು. ಈ ವಿಳಂಬವನ್ನು ಅವಮಾನವೆಂದು ಗ್ರಹಿಸಲಾಯಿತು. ಲಡಾಖ್ ಜನರ ಜೀವನ ಮತ್ತು ಶಾಂತಿಯುತ ಮನವಿಗಳು ಆದ್ಯತೆಯಾಗಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು.
ಇದು ಮಣಿಪುರದಂಥದೇ ಸ್ಥಿತಿ.
ಅಲ್ಲಿಯೂ ಮೋದಿ ಸರಕಾರ ಸಂಪೂರ್ಣ ನಿರ್ಲಕ್ಷ್ಯ ತೋರಿ, ಪರಿಸ್ಥಿತಿ ಕೈಮೀರುವಂತೆ ಮಾಡಿಕೊಂಡಿತ್ತು. ಎಲ್ಲ ಎಚ್ಚರಿಕೆಗಳನ್ನು ಸರಕಾರ ನಿರ್ಲಕ್ಷಿಸಿತು. ಸ್ಥಳೀಯ ನಾಯಕರನ್ನು ವಜಾಗೊಳಿಸಿತು. ಮತ್ತು ಮಾತುಕತೆಗೆ ನಿರಾಕರಿಸಿತು.
ಒಂದು ಸರಕಾರ ಸುದೀರ್ಘ ಶಾಂತಿಯುತ ಪ್ರತಿಭಟನೆಗೆ ಸ್ಪಂದಿಸುವುದಿಲ್ಲ ಎಂದಾದಾಗ, ಅದು ಹಿಂಸೆಗೆ ದಾರಿ ಮಾಡಿಕೊಡುತ್ತದೆ ಎಂಬುದು ಇಲ್ಲಿಯೂ ನಿಜವಾಗಿದೆ.
ಜನರು ಹಿಂಸಾಚಾರದಲ್ಲಿ ತೊಡಗಿದ್ದು ಖಂಡನೀಯವೇ, ಆದರೆ ಇಲ್ಲಿ ಸರಕಾರದ ಹೊಣೆಗಾರಿಕೆ ಕೂಡ ಇದೆ ಎಂಬುದೂ ನಿಜ.
ಹಿಂಸಾಚಾರದ ನಂತರವೂ ಕೇಂದ್ರ ಕಳಕಳಿಯಿಂದ ಪ್ರತಿಕ್ರಿಯಿಸಲಿಲ್ಲ. ಅದು ಆತ್ಮಾವಲೋಕನ ಮಾಡಿಕೊಳ್ಳಲಿಲ್ಲ. ಬದಲಾಗಿ, ದಿಕ್ಕು ತಪ್ಪಿಸುವ ಮತ್ತು ದೂಷಿಸುವ ತನ್ನ ಹಳೇ ಚಾಳಿಯನ್ನೇ ತೋರಿಸಿತು. ಸೋನಮ್ ವಾಂಗ್ಚುಕ್ ಅವರನ್ನು ದೂಷಿಸುವ ಹೇಳಿಕೆಯನ್ನು ಗೃಹ ಸಚಿವಾಲಯ ಬಿಡುಗಡೆ ಮಾಡಿತು. ಬಿಜೆಪಿಯ ಐಟಿ ಸೆಲ್ ಕಾಂಗ್ರೆಸ್ ಅನ್ನು ದೂಷಿಸಿತು.
ವಾಂಗ್ಚುಕ್ ಪ್ರಚೋದಕರಲ್ಲ. ಅವರು ಕಲ್ಲಿದ್ದಲು ಗಣಿಯ ವಿಪತ್ತಿನ ಬಗ್ಗೆ ಎಚ್ಚರಿಕೆ ನೀಡುತ್ತಿದ್ದವರು. ಆದರೆ, ನಿಜವಾದ ಪ್ರಚೋದನೆ ನೀಡಿದ್ದು ಸರಕಾರದ ದುರಹಂಕಾರ ಮತ್ತು ಉದಾಸೀನತೆ.
ಹಿಂಸಾಚಾರದ ನಂತರ ಸೋನಮ್ ವಾಂಗ್ಚುಕ್ ನೋವಿನಿಂದಲೇ ಮಾತಾಡಿದರು. ಯುವಜನರನ್ನು ಹಿಂಸಾಚಾರಕ್ಕೆ ಪ್ರಚೋದಿಸುವ ಮೂಲಕ ಸರಕಾರ ಶಾಂತಿಯುತ ಪ್ರತಿಭಟನೆಗಳನ್ನು ಸೋಲಿಸಿದೆ ಎಂದು ಹೇಳಿದರು. ಅವರು ಜೆನ್ ಝಡ್ ಕ್ರಾಂತಿಯ ಬಗ್ಗೆ ಮಾತನಾಡಿದರು. ಇದು ವಂಚಿತ ಯುವ ಪೀಳಿಗೆಯ ಆಕ್ರೋಶದ ಸ್ಫೋಟವಾಗಿದೆ ಎಂದರು. ಐದು ವರ್ಷಗಳಲ್ಲಿ ಯಾವುದೇ ಹೊಸ ಉದ್ಯೋಗಗಳನ್ನು ನೋಡದ, ತಮ್ಮ ಭವಿಷ್ಯದ ಬಗ್ಗೆ ಆತಂಕಗೊಂಡಿರುವ, ತಮ್ಮ ನೆಲಕ್ಕೆ ಅಪಾಯ ಕಾದಿದೆ ಎಂದು ನೋಡುವ ಯುವ ಲಡಾಖಿಗಳ ಆಕ್ರೋಶ ಇದಾಗಿದೆ ಎಂದು ಅವರು ಹೇಳಿದ್ದಾರೆ.
ಲಡಾಖ್‌ನಲ್ಲಿನ ಬಿಕ್ಕಟ್ಟು ಒಂದು ದೊಡ್ಡ ಸಂಕೇತವಾಗಿ ಕಾಣುತ್ತದೆ. ಇಡೀ ಹಿಮಾಲಯ ಪ್ರದೇಶದಾದ್ಯಂತ ಪ್ರಬಲ ಮತ್ತು ಅಪಾಯಕಾರಿ ಸಂದೇಶವನ್ನು ಅದು ರವಾನಿಸುತ್ತಿದೆ.







