ಮಡಿಲ ಮಾಧ್ಯಮಗಳಿಗೆ ‘ದೊಡ್ಡವರ’ ಹೆಸರನ್ನು ಉಲ್ಲೇಖಿಸಲು ಭಯವೇ?

ಮಡಿಲ ಮಾಧ್ಯಮಗಳು ತಮಗೆ ಬೇಕೆಂದರೆ ಯಾವುದಾದರೂ ವಿಷಯವನ್ನು ವಿವಾದವಾಗಿಸಿ ಅಬ್ಬರ ಮಾಡುತ್ತವೆ. ವಿಷಯವೇ ಅಲ್ಲದ್ದನ್ನೂ ಪ್ರೈಮ್ ಟೈಮ್ ಸ್ಟೋರಿ ಮಾಡಿ ಬಿಡುತ್ತವೆ. ಒಂದು ಧರ್ಮದ ವಿರುದ್ಧ, ಒಂದು ಧರ್ಮೀಯರ ವಿರುದ್ಧ, ವಿಪಕ್ಷದ ವಿರುದ್ಧ ಅಜೆಂಡಾ ರೂಪಿಸಲು ಗಂಟೆಗಟ್ಟಲೆ, ದಿನಗಟ್ಟಲೆ ಒಂದೇ ವಿಷಯದ ಬಗ್ಗೆ ಮಾತಾಡುತ್ತವೆ. ತಮಗೆ ಬೇಕಾದ ನರೇಟಿವ್ ರೂಪಿಸಲು ಎಷ್ಟು ಬೇಕಾದರೂ ಹಸಿ ಹಸಿ ಸುಳ್ಳನ್ನು ಹೇಳುತ್ತವೆ. ಆದರೆ ಯಾವುದನ್ನಾದರೂ ವರದಿ ಮಾಡಕೂಡದೆಂದು ಅವಕ್ಕೆ ಅನ್ನಿಸಿದರೆ ಯಾವುದೂ ಗೊತ್ತೇ ಇಲ್ಲದಂತೆ ಇರುತ್ತವೆ.
ಇದರ ಹಿಂದೊಂದು ರಾಜಕೀಯ ಇದೆ.
ಇವತ್ತಿನ ಟಿ.ವಿ. ಚಾನೆಲ್‌ಗಳು ವಿಪಕ್ಷಗಳ ವಿಷಯದಲ್ಲಿ ದೊಡ್ಡ ಸ್ವರದೊಂದಿಗೆ ಮುಗಿಬೀಳುತ್ತವೆ. ಆದರೆ ಅದೇ ಅಬ್ಬರವನ್ನು ಅಧಿಕಾರದಲ್ಲಿರು ವವರ ಎದುರು ತೋರಿಸುವುದಿಲ್ಲ.
ರಾಮ ಮಂದಿರದಲ್ಲಿ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಕಾಣಿಕೆ ಲೂಟಿ ನಡೆದಿರುವುದು ಕೋಲಾಹಲಕ್ಕೆ ಕಾರಣವಾಗಿದೆ. ಆದರೆ, ಮಡಿಲ ಮಾಧ್ಯಮಗಳಿಗೆ ಆ ವಿಷಯವೇ ಗೊತ್ತಿದ್ದ ಹಾಗಿಲ್ಲ. ಅಬ್ಬರಿಸುವ ಎಲ್ಲರೂ ಬಾಯಿ ಹೊಲಿದುಕೊಂಡು ಕೂತಿದ್ದಾರೆ. ಹಾಗಾದರೆ ಇವರದು ಯಾವ ರೀತಿಯ ಪತ್ರಿಕೋದ್ಯಮ?
ಕಾಣಿಕೆ ಲೂಟಿ ವಿಷಯದಲ್ಲಿ ಸಣ್ಣ ಮೀನುಗಳು ಮಾತ್ರ ಸಿಕ್ಕಿಬಿದ್ದಿವೆ. ಯಾರೂ ದೊಡ್ಡ ಹೆಸರುಗಳನ್ನು ಉಲ್ಲೇಖಿಸುತ್ತಿಲ್ಲ.
ಮಡಿಲ ಮಾಧ್ಯಮಗಳಿಗಂತೂ ಅವರ ಬಗ್ಗೆ ಮಾತಾಡುವುದಕ್ಕೇ ಭಯ. ಅವರು ಕೋಪಗೊಂಡರೆ, ತಮ್ಮ ಆದಾಯ ನಿಲ್ಲುತ್ತದೆ ಎಂದು ಯೋಚಿಸುತ್ತಾ ಎಲ್ಲರೂ ಮೌನವಾಗಿದ್ದಾರೆ.
ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ದಿನಗಟ್ಟಲೆ ಮೋದಿಯವರ ಬಗ್ಗೆ ಮಡಿಲ ಮೀಡಿಯಾಗಳು ಪ್ರಚಾರ ಮಾಡಿದವು. ಆದರೆ ಈಗ, ಮೋದಿಯವರಿಂದ ಉದ್ಘಾಟನೆಯಾದ ರಾಮ ಮಂದಿರದಲ್ಲಿ, ಅವರದೇ ಜನರು ತುಂಬಿರುವ ಟ್ರಸ್ಟ್ ನಲ್ಲಿ ದೊಡ್ಡ ಲೂಟಿ ಮಾಡಿದವರ ಬಗ್ಗೆ ಮಡಿಲ ಮೀಡಿಯಾಗಳು ಬಾಯಿಗೆ ಬೀಗ ಹಾಕಿಕೊಂಡಿವೆ.
ದೊಡ್ಡ ದೊಡ್ಡ ತಿಮಿಂಗಿಲಗಳನ್ನು ಕೈ ಬಿಟ್ಟು, ಸಣ್ಣ ಪುಟ್ಟ ಮೀನುಗಳನ್ನು ಹಿಡಿಯಲಾಗಿದೆ. ಇಡೀ ರಾಮ ಮಂದಿರದ ಉಸ್ತುವಾರಿ ಹೊತ್ತಿದ್ದ ಪ್ರಭಾವಿಗಳನ್ನು ಮುಟ್ಟದೆ, ಸಣ್ಣ ಪುಟ್ಟ ಉದ್ಯೋಗಿಗಳನ್ನು ಮಾತ್ರ ಗುರಿಯಾಗಿಸಲಾಗಿದೆ. ಎಲ್ಲದಕ್ಕೂ ಅವರನ್ನು ದೂಷಿಸುವುದರೊಂದಿಗೆ, ಒಂದು ಬಗೆಯ ಪರಿಹಾರ ಕಂಡುಕೊಂಡಂತಿದೆ.
ಈ ನಡುವೆ ಮಾಧ್ಯಮದ ಕೆಲವರು ಹೋರಾಟಕ್ಕಿಳಿದಿದ್ದಾರೆ. ಅವರ ಹೋರಾಟ ಕಳ್ಳತನದ ವಿರುದ್ಧ ಅಲ್ಲ, ರಾಮನ ಪರ ಅಲ್ಲ. ಆದರೆ ಪ್ರಭಾವಿ ಆರೋಪಿಗಳ ಪರ ಹೋರಾಡಲು ನಿಂತಿದ್ದಾರೆ.
ಅಪರಾಧ ಸಾಬೀತಾಗುವವರೆಗೂ ನಿರಪರಾಧಿ ಎಂಬುದು ನಿಜ. ತೀರ್ಪು ಹೊರಬೀಳುವವರೆಗೂ ಯಾರ ಬಗ್ಗೆಯೂ ತೀರ್ಮಾನ ಕೊಡಬಾರದು ಎಂಬುದು ಸರಿ.
ಹಾಗೆಂದು, ನಮ್ಮ ಮುಂದೆಯೇ ಅಪರಾಧ ನಡೆದಾಗಲೂ ನಾವು ಅಪರಾಧಿಗಳ ಜೊತೆ ನಿಲ್ಲುತ್ತೇವೆ ಎನ್ನಲು ಸಾಧ್ಯವೇ? ಆದರೆ, ಮಡಿಲ ಮಾಧ್ಯಮದವರು ಅಪರಾಧಿಗಳ ಪರ ನಿಲ್ಲಲು ಬಯಸುತ್ತಾರೆ.
ಅವರನ್ನು ತಮ್ಮದೇ ಶೈಲಿಯ ನಿರೂಪಣೆ ಮೂಲಕ, ರಾಮ-ಸೀತೆಯಂತೆ ನೋಡಲು ಯತ್ನಿಸುತ್ತಾರೆ.
ಯಾರದೋ ತಪ್ಪಿನಿಂದಾಗಿ ಅವರು ಆರೋಪ ಹೊರಬೇಕಾಗಿದೆ ಎಂದು ಹೇಳಲು ನೋಡುತ್ತಾರೆ.
ರಾಮ ಸೀತೆಯನ್ನು ಕಾಡಿಗಟ್ಟಿದಾಗ, ಆಕೆ ಗರ್ಭಿಣಿಯಾಗಿದ್ದಳು ಮತ್ತು ವಾಲ್ಮೀಕಿ ಆಶ್ರಮದಲ್ಲಿ ಲವ ಮತ್ತು ಕುಶರಿಗೆ ಜನ್ಮ ನೀಡಿದಳು. ಸೀತೆಯ ತಪ್ಪಿರಲಿಲ್ಲ. ಆದರೆ ಸಮಾಜ ಅವಳದು ತಪ್ಪು ಎಂದು ಸಾಬೀತುಪಡಿಸಲು ಸಿಕ್ಕ ಯಾವುದೇ ಅವಕಾಶವನ್ನು ಬಿಡಲಿಲ್ಲ ಎನ್ನುವ ಮೂಲಕ, ರಾಮ ಮಂದಿರದಲ್ಲಿ ಕಾಣಿಕೆ ಲೂಟಿ ಮಾಡಿದ ದೊಡ್ಡ ಜನರ ಪರ ನಿಲ್ಲುವುದು ನಡೆದಿದೆ.
ದುರಾಸೆ ಕೈಕೇಯಿ ಮತ್ತು ಮಂಥರೆಯ ಮನಸ್ಸಿನಲ್ಲಿತ್ತು. ಶ್ರೀರಾಮನಿಗೂ ಇದಕ್ಕೂ ಯಾವುದೇ ಸಂಬಂಧವಿರಲಿಲ್ಲ. ಅವನು ತನ್ನ ತಂದೆಯ ಆದೇಶಗಳನ್ನು ಪಾಲಿಸುತ್ತಿದ್ದ.
ತನ್ನ ಯಾವುದೇ ತಪ್ಪಿಲ್ಲದೆ 14 ವರ್ಷಗಳ ವನವಾಸ ಸಹಿಸಿದ ಎನ್ನುವ ಮೂಲಕ, ಈಗ ಅಪರಾಧಿಗಳನ್ನು ನಿರಪರಾಧಿಗಳು ಎಂದು ಹೇಳುವ ಆಟ ನಡೆದಿದೆ.
ಚಂಪತ್ ರಾಯ್ ತಪ್ಪಿತಸ್ಥರಲ್ಲ ಎಂದು ಹೇಳುವುದಕ್ಕೆ ಇಷ್ಟೆಲ್ಲ ಕಸರತ್ತು ಮಾಡಲಾಗುತ್ತಿದೆ.
ಆದರೆ ಇಂತಹವನ್ನೆಲ್ಲ ಅವರು ಮುಸ್ಲಿಮರ ವಿಷಯಕ್ಕೆ ಅನ್ವಯಿಸಲು ಸಾಧ್ಯವಿಲ್ಲ. ಮುಸ್ಲಿಮರಾಗಿದ್ದರೆ ತೀರ್ಪು ಬರುವ ಮೊದಲೇ ಇವರೇ ತೀರ್ಮಾನಿಸಬಹುದು. ಅವರನ್ನು ಎಷ್ಟು ಬೇಕೊ ಅಷ್ಟು ಜರೆಯಬಹುದು.
ಆದರೆ ಅಪರಾಧಿ ಸ್ಥಾನದಲ್ಲಿ ಹಿಂದುತ್ವ ನಾಯಕರು ಇದ್ದೊಡನೆ ಇವರಿಗೆ ಇದ್ದಬದ್ದ ತತ್ವಗಳೆಲ್ಲ ನೆನಪಾಗುತ್ತವೆ.
ಆದರೆ ರಾಮ ಮಂದಿರ ಲೂಟಿ ಪ್ರಕರಣದಲ್ಲಿ ಈ ಮಡಿಲ ಮಾಧ್ಯಮಗಳಿಗೆ ಎದುರಾಗಿರುವ ದೊಡ್ಡ ಬಿಕ್ಕಟ್ಟೆಂದರೆ, ಇಲ್ಲಿ ಮುಸ್ಲಿಮರ ವಿರುದ್ಧ ಮಾತಾಡಲು ಏನೂ ಇಲ್ಲ. ಹಿಂದುತ್ವದ ಸರಕಾರ, ಹಿಂದುತ್ವ ನಾಯಕರ ಬಗ್ಗೆಯೇ ಮಾತಾಡಬೇಕಿದೆ.
ಹಾಗಾಗಿ ಕಡೆಗೆ ಇಲ್ಲಿ ತಪ್ಪು ಚಂಪತ್ ರಾಯ್ ಅವರದಲ್ಲ, ಬದಲಾಗಿ ಟಿನ್ನು ಯಾದವ್ ಅವರದು ಎಂದು ನಿರೂಪಿಸುವ ಯತ್ನ ನಡೆದಂತಿದೆ.
ಲೂಟಿ ಪ್ರಕರಣ ಗೊತ್ತಾದ ನಂತರ ಚಂಪತ್ ರಾಯ್ ಸ್ವತಃ ಎಫ್‌ಐಆರ್ ದಾಖಲಿಸಲು ಹೋಗಿದ್ದರು ಎನ್ನಲಾಗುತ್ತದೆ. ಆದರೆ ನಡುವೆ, ಯಾರೋ ಅವರಿಗೆ ಕರೆ ಮಾಡಿ ತಡೆದರು ಎನ್ನಲಾಗುತ್ತದೆ.
ಚಂಪತ್ ರಾಯ್ ಮಾಡಿದ ದೊಡ್ಡ ತಪ್ಪು ಏನೆಂದರೆ, ಇದೆಲ್ಲವೂ ಅವರ ಕೆಳಗೇ ನಡೆದಿದ್ದರೂ ಅವರಿಗೆ ತಿಳಿದಿರಲಿಲ್ಲ. ಟಿನ್ನು ಯಾದವ್ ಅವರನ್ನು ಕುರುಡಾಗಿ ನಂಬಿದ್ದರಿಂದ ಚಂಪತ್ ರಾಯ್‌ಗೆ ತುಂಬಾ ನಷ್ಟವಾಯಿತು ಎಂದು ಮೂಲವೊಂದು ಬಹಿರಂಗಪಡಿಸಿದೆ ಎಂದು ಹೇಳಿಬಿಡಲಾಗುತ್ತದೆ.
ಚಂಪತ್ ರಾಯ್ ರಕ್ಷಣೆಗಾಗಿ ಒಬ್ಬ ಹಿಂದುಳಿದ ವರ್ಗದ ವ್ಯಕ್ತಿಯನ್ನು ಮುಂದೆ ಮಾಡಲು ನೋಡಲಾಗುತ್ತದೆ.
ಈ ಮೊದಲು ರಾಮ ಮಂದಿರವೆಂದರೆ, ಅದರ ಜೊತೆಗೇ ಮೋದಿ ಹೆಸರು ಹೇಳದಿದ್ದರೆ ಮಡಿಲ ಮಾಧ್ಯಮಗಳ ಪತ್ರಿಕೋದ್ಯಮವೇ ಪೂರ್ಣಗೊಳ್ಳುತ್ತಿರಲಿಲ್ಲ. ರಾಮ ಮಂದಿರದ ಎಲ್ಲ ವಿಷಯದಲ್ಲೂ ಮೋದಿ ಮೋದಿ ಎನ್ನಲಾಗುತ್ತಿತ್ತು.
ಆದರೆ ಈಗ ಕಳೆದ ಕೆಲವು ದಿನಗಳಲ್ಲಿ ಒಮ್ಮೆಯೂ ಮೋದಿ ಹೆಸರನ್ನು ರಾಮ ಮಂದಿರದ ಜೊತೆ ಪ್ರಸ್ತಾಪಿಸುತ್ತಲೇ ಇಲ್ಲ. ರಾಮ ಮಂದಿರದಲ್ಲಿ ಕಳ್ಳತನ ಪತ್ತೆಯಾದ ತಕ್ಷಣ, ಮೋದಿ ಹೆಸರು ಏಕೆ ಕಣ್ಮರೆಯಾಯಿತು?
ಮಡಿಲ ಮಾಧ್ಯಮದ ಮತ್ತೊಬ್ಬ ಪತ್ರಕರ್ತನ ಬಗ್ಗೆ ಒಂದು ವೀಡಿಯೊ ಕ್ಲಿಪ್ ಬಂತು.
ಆತ ರಾಮ ಮಂದಿರ ಲೂಟಿ ವಿಷಯದಲ್ಲಿ ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ ಎಂದು ಹೇಳುವ ವೀಡಿಯೊ ಪ್ರಸಾರ ಮಾಡಲಾಯಿತು.
ಬಿಜೆಪಿಯೊಂದಿಗೆ ಆರೆಸ್ಸೆಸ್‌ನ ಸಂಬಂಧದಿಂದಾಗಿ, ಪ್ರಮುಖ ಆರೋಪಿಗಳು ಮುಕ್ತವಾಗಿ ತಿರುಗಾಡುವಂತಾಗಿದೆ ಎಂದು ಹೇಳಿದ್ದಾರೆ ಎಂಬಂತೆ ಬಿಂಬಿಸಲಾಯಿತು.
‘‘ಬಿಜೆಪಿ ಸರಕಾರ ಕಳ್ಳರನ್ನು ರಕ್ಷಿಸುವಲ್ಲಿ ಮತ್ತು ಪ್ರಕರಣವನ್ನು ನಿಗ್ರಹಿಸುವಲ್ಲಿ ನಿರತವಾಗಿದೆ. ರಾಮ ಮಂದಿರದ ಈ ದರೋಡೆಯಲ್ಲಿ ಅಪರಾಧಿಗಳನ್ನು ರಕ್ಷಿಸಿದವರು ಸಹ ಸಂಪೂರ್ಣವಾಗಿ ತಪ್ಪಿತಸ್ಥರು. ಈ ಹೇಯ ಕೃತ್ಯಕ್ಕಾಗಿ ಶ್ರೀ ರಾಮ ಖಂಡಿತವಾಗಿಯೂ ನಿಮ್ಮನ್ನು ಶಿಕ್ಷಿಸುತ್ತಾನೆ. ದೇಶದ ಜನರು ಸಹ ನಿಮ್ಮನ್ನು ಶಿಕ್ಷಿಸುತ್ತಾರೆ’’ ಎಂದೆಲ್ಲ ಹೇಳುವುದು ವೀಡಿಯೊದಲ್ಲಿದೆ.
ಆದರೆ, ಆನಂತರ, ‘‘ಹಾಗೆ ಹೇಳಿದ್ದು ನಾನಲ್ಲ. ಅದನ್ನು ಹೇಳಿದ್ದು ಕಾಂಗ್ರೆಸ್ಸಿನವರು. ಅವರು ನನ್ನ ಕ್ಲಿಪ್ ಅನ್ನು ಕತ್ತರಿಸಿ ಪ್ಲೇ ಮಾಡಿದ್ದಾರೆ’’ ಎಂದು ಅದೇ ಪತ್ರಕರ್ತ ಅಹವಾಲು ಹೇಳಿಕೊಳ್ಳುತ್ತಾರೆ.
ಎಂಥ ಸ್ಥಿತಿಯೆಂದರೆ, ತಮ್ಮನ್ನು ತಾವು ಮಹಾ ಪತ್ರಕರ್ತರು ಎಂದು ಕರೆದುಕೊಳ್ಳುವ ಜನರು, ತಾವು ಪತ್ರಿಕೋದ್ಯಮ ಮಾಡುತ್ತಿಲ್ಲ ಎಂದು ಹೇಳಿಕೊಳ್ಳುವ ಹಾಗೆ ಇಂಥ ಸ್ಪಷ್ಟೀಕರಣಗಳು ಕಾಣಿಸುತ್ತವೆ.
ರಾಮ ಮಂದಿರದ ಪ್ರತಿಯೊಂದು ಕ್ರೆಡಿಟ್ಟೂ ಮೋದಿಯವರಿಗೆ ಸಲ್ಲಬೇಕು ಎಂದು ಹಗಲು ರಾತ್ರಿ ಶ್ರಮಿಸುತ್ತಿದ್ದ ಮಡಿಲ ಮೀಡಿಯಾಗಳ ಆ್ಯಂಕರ್‌ಗಳು ಈಗ ಮೋದಿಜಿಗೂ ರಾಮಮಂದಿರಕ್ಕೂ ಸಂಬಂಧವೇ ಇಲ್ಲ ಎಂಬಂತೆ ನಟಿಸುತ್ತಿದ್ದಾರೆ.
ಸಂತರು, ಸ್ವಾಮೀಜಿಗಳು, ಧಾರ್ಮಿಕ ಸಂಘಟನೆಗಳ ಮುಖಂಡರು ಎಲ್ಲರನ್ನೂ ಬದಿಗೊತ್ತಿ ಕೇವಲ ಮೋದಿಜಿ ಒಬ್ಬರನ್ನೇ ಅಯೋಧ್ಯೆಯಲ್ಲಿ ವೈಭವೀಕರಿಸಿದ ಮಡಿಲ ಮೀಡಿಯಾಗಳು ಈಗ ರಾಮ ಮಂದಿರದಲ್ಲಿ ನಡೆದ ಲೂಟಿ ವಿಷಯದಲ್ಲಿ ಅವರ ಹೆಸರನ್ನೇ ಉಲ್ಲೇಖಿಸುತ್ತಿಲ್ಲ ಇದು ಭಯವಲ್ಲದೆ ಮತ್ತಿನ್ನೇನು?
ವೈಯಕ್ತಿಕ ಲಾಭಕ್ಕಾಗಿ ಅಧಿಕಾರಸ್ಥರನ್ನು ಅತಿಯಾಗಿ ಹೊಗಳುವುದು ಮತ್ತು ಅವರ ಗುಲಾಮರಂತೆ ಇರುವುದು ಸೈಕೋಫ್ಯಾನ್ಸಿ ಮನೋಭಾವವಲ್ಲದೆ ಮತ್ತಿನ್ನೇನು?






