ಅಮೆರಿಕಕ್ಕೆ ತಾನೇ ಸಾಕಿದ ಗಿಣಿ ಹದ್ದಾಗಿ ಕುಕ್ಕುತ್ತಿದೆಯೇ?

ಸಿರಿಯಾ ಮೇಲೆ ನೆತನ್ಯಾಹು ದಾಳಿ ಮಾಡುವಾಗ ಟ್ರಂಪ್‌ಗೆ ಮಾಹಿತಿಯನ್ನೇ ನೀಡಿರಲಿಲ್ಲ ಎಂಬುದು ಶ್ವೇತಭವನದ ಹೇಳಿಕೆಯಿಂದ ಬಹಿರಂಗವಾಗಿದೆ.
ಗಾಝಾದಲ್ಲಿ ಕೆಥೊಲಿಕ್ ಚರ್ಚ್ ಮೇಲೆ ಇಸ್ರೇಲ್ ದಾಳಿ ನಡೆಸಿತು. ದಾಳಿಯಲ್ಲಿ ಅನೇಕ ಜನರು ಸಾವನ್ನಪ್ಪಿದರು. ಇದು ಎರಡೂ ದೇಶಗಳ ನಡುವಿನ ಉದ್ವಿಗ್ನತೆಗೆ ಕಾರಣವಾಗಿದೆ. ಚರ್ಚ್ ಮೇಲಿನ ಶೆಲ್ ದಾಳಿ ಮತ್ತು ಸಿರಿಯಾದಲ್ಲಿನ ಇಸ್ರೇಲ್‌ನ ಬಾಂಬ್ ದಾಳಿಯನ್ನು ಅಮೆರಿಕ ವಿರೋಧಿಸಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶಾಂತಿ ಪ್ರಯತ್ನಗಳನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಾಳುಗೆಡವುತ್ತಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಟೀಕಿಸಿದ್ದಾರೆ.
ವರದಿಯ ಪ್ರಕಾರ, ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ‘‘ನೆತನ್ಯಾಹು ಹುಚ್ಚನಂತೆ ವರ್ತಿಸುತ್ತಿದ್ದಾರೆ, ಸದಾ ಎಲ್ಲರ ಮೇಲೂ ಬಾಂಬ್‌ಹಾಕುತ್ತಿದ್ದಾರೆ’’ ಎಂದು ಹೇಳಿದ್ದಾರೆ.
ಮತ್ತೊಬ್ಬ ಅಧಿಕಾರಿ ‘‘ನೆತನ್ಯಾಹು ಕೆಲವೊಮ್ಮೆ ಸರಿಪಡಿಸಲಾಗದ ಮಗುವಿನಂತೆ’’ ಎಂದು ಹೇಳಿದ್ದಾರೆ.
ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮದ ನಂತರವೂ ಇಸ್ರೇಲ್ ಬಾಂಬ್ ದಾಳಿ ಮುಂದುವರಿಸಿರುವ ಬಗ್ಗೆ ಶ್ವೇತಭವನ ಕಳವಳಗೊಂಡಿದೆ ಎಂದು ಅಮೆರಿಕದ ಆರು ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಂಪ್ ಮತ್ತು ನೆತನ್ಯಾಹು ನಡುವಿನ ಸ್ನೇಹದ ಅಂತ್ಯಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ ಎಂದು ಹೇಳಲಾಗುತ್ತಿದೆ.
ಟ್ರಂಪ್ ಮತ್ತು ನೆತನ್ಯಾಹು ನಡುವಿನ ದ್ವೇಷಕ್ಕೆ ಸಿರಿಯಾ, ಗಾಝಾ ಮತ್ತು ಇರಾನ್ ವಿಷಯ ಪ್ರಮುಖ ಕಾರಣವೆ?
ಕಳೆದ ೮೦ ವರ್ಷಗಳಿಂದ, ಯುಎಸ್ ಆಡಳಿತದಲ್ಲಿ ಯಹೂದಿ ಲಾಬಿ ತುಂಬಾ ಪ್ರಬಲವಾಗಿದೆ. ಹಾಗಾಗಿ, ಇಬ್ಬರ ನಡುವಿನ ಸ್ನೇಹ ಕೊನೆಗೊಳ್ಳುತ್ತದೆ ಎಂದು ಹೇಳುವುದು ಕಷ್ಟ. ಆದರೆ ಈ ಸಮಯದಲ್ಲಿ ಇಸ್ರೇಲ್ ಅನ್ನು ಆಳುತ್ತಿರುವುದು ತನ್ನ ಜೀವವನ್ನು ಉಳಿಸಿಕೊಳ್ಳಲು ಎಲ್ಲಾ ದೇಶಗಳ ಮೇಲೆ ದಾಳಿ ಮಾಡುತ್ತಿರುವ ವ್ಯಕ್ತಿ.
ಎಲ್ಲಾ ನೆರೆಯ ದೇಶಗಳ ಮೇಲೆ ನೆತನ್ಯಾಹು ಪಡೆಯಿಂದ ದಾಳಿ ನಡೆಯುತ್ತಿದೆ. ಗಾಝಾದಲ್ಲಿ ನರಮೇಧವೇ ನಡೆದಿದೆ. ಲೆಬನಾನ್ ಮೇಲೆ ದಾಳಿ ಮಾಡಲಾಗಿದೆ. ಇರಾನ್, ಸಿರಿಯಾ ಮೇಲೆಯೂ ದಾಳಿ ಮಾಡಲಾಗಿವೆ.
ತೀರಾ ಇತ್ತೀಚಿನವರೆಗೂ ಅಮೆರಿಕ ಎಲ್ಲವನ್ನೂ ಸಹಿಸಿಕೊಳ್ಳುತ್ತಲೇ ಇತ್ತು. ನೆತನ್ಯಾಹು ತನ್ನ ಜೀವವನ್ನು ಉಳಿಸಿಕೊಳ್ಳಲು ಇಷ್ಟೆಲ್ಲಾ ಮಾಡುತ್ತಿದ್ದರೆ, ಇದು ಈಗ ಅಮೆರಿಕಕ್ಕೆ ತೊಂದರೆ ಉಂಟುಮಾಡುತ್ತಿದೆ. ಇದು ಮುಜುಗರಕ್ಕೆ ಕಾರಣವಾಗುತ್ತಿದೆ.
ಡೊನಾಲ್ಡ್ ಟ್ರಂಪ್ ತುಂಬಾ ಸ್ವಾರ್ಥಿ ಮತ್ತು ಬಹಳ ವ್ಯಾವಹಾರಿಕ ವ್ಯಕ್ತಿ. ಅವರು ಹಣವನ್ನು, ಲಾಭವನ್ನು ಮಾತ್ರ ನೋಡುತ್ತಾರೆ. ಟ್ರಂಪ್ ಈಗ ನೆತನ್ಯಾಹು ಮಧ್ಯಪ್ರಾಚ್ಯದಲ್ಲಿ ಅಮೆರಿಕದ ವ್ಯಾಪಾರ ಹಿತಾಸಕ್ತಿಗಳನ್ನು ಹೇಗೆ ನಾಶಪಡಿಸುತ್ತಿದ್ದಾರೆ ಎಂಬುದನ್ನು ನಿರಂತರವಾಗಿ ನೋಡುತ್ತಿದ್ದಾರೆ. ಹೀಗಿರುವಾಗ, ಈಗ ಟ್ರಂಪ್ ಅವರನ್ನು ಇಸ್ರೇಲ್ ಜೊತೆಗಿನ ಸ್ನೇಹ ಅಥವಾ ವ್ಯವಹಾರದಲ್ಲಿ ಒಂದನ್ನು ಆಯ್ಕೆ ಮಾಡಲು ಕೇಳಿದರೆ ಟ್ರಂಪ್ ಯಾವುದನ್ನು ಆಯ್ಕೆ ಮಾಡಬಹುದು?
ಈ ಎರಡೂ ದೇಶಗಳ ನಡುವಿನ ವೈಮನಸ್ಯಕ್ಕೆ ಕಾರಣ ಸಿರಿಯಾ ಮೇಲೆ ಇಸ್ರೇಲ್ ದಾಳಿ ಮಾಡಿದ ರೀತಿ. ಟ್ರಂಪ್ ಇದಕ್ಕೆ ಸಿದ್ಧವಾಗಿರಲಿಲ್ಲ. ಇಸ್ರೇಲ್ ಸಿರಿಯಾ ಮೇಲೆ ದಾಳಿ ಮಾಡಿದ ತಕ್ಷಣ ಟ್ರಂಪ್ ವಾಸ್ತವವಾಗಿ ಕೋಪಗೊಂಡರು ಎನ್ನಲಾಗಿದೆ.
ಇಲ್ಲಿಯವರೆಗೆ ಇಸ್ರೇಲ್ ಏನು ಮಾಡಿದರೂ, ಅದು ಯಾವುದೇ ಹೆಜ್ಜೆ ಇಟ್ಟರೂ, ಮೊದಲು ಅಮೆರಿಕದಿಂದ ಅನುಮತಿ ಪಡೆಯುತ್ತಿತ್ತು. ಆದರೆ ಈಗ ಹಾಗೆ ಮಾಡುತ್ತಿಲ್ಲ. ಏಕೆ?
ಇಸ್ರೇಲ್ ಪ್ರಧಾನಿ ನೆತನ್ಯಾಹು, ತಮ್ಮ ದೇಶದ ಜನರು ತನ್ನನ್ನು ಹೀರೋ ಎಂದು ಪರಿಗಣಿಸಬೇಕೆಂದು ಬಯಸುತ್ತಾರೆ.ಆದರೆ ಅವರ ದೇಶದ ಜನರು ಈಗ ಬೀದಿಗಳಲ್ಲಿದ್ದಾರೆ.ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ನೆತನ್ಯಾಹು ಬಗ್ಗೆ ಅಲ್ಲಿನ ಜನರಲ್ಲಿ ವ್ಯಾಪಕ ಆಕ್ರೋಶವಿದೆ. ಆದರೆ ಈಗ ಚುನಾವಣೆಗಳು ನಡೆಯಬಾರದು ಎಂದು ನೆತನ್ಯಾಹು ಬಯಸುತ್ತಾರೆ. ತಮ್ಮ ವಿರುದ್ಧ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣವನ್ನು ವಜಾಗೊಳಿಸಬೇಕೆಂದು ಅವರು ಬಯಸುತ್ತಾರೆ.
ಅದರ ನಡುವೆಯೇ ಈಗ ಅಮೆರಿಕ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯಿದೆ.
ಕಳೆದ ವಾರ ಗಾಝಾ ಮತ್ತು ಸಿರಿಯಾದಲ್ಲಿ ಇಸ್ರೇಲ್ ನಡೆಸಿದ ದಾಳಿಯಿಂದ ಟ್ರಂಪ್‌ಗೆ ಅಚ್ಚರಿಯಾಗಿದೆ.
ನೆತನ್ಯಾಹು ಪಾತ್ರದ ಬಗ್ಗೆ ಶ್ವೇತಭವನದೊಳಗೆ ಅನುಮಾನದ ವಾತಾವರಣವಿದೆ. ಇಸ್ರೇಲ್ ಗಾಝಾ ಮತ್ತು ಸಿರಿಯಾದಲ್ಲಿ ದಾಳಿ ನಡೆಸಿದಾಗ, ಟ್ರಂಪ್‌ಗೆ ಅದರ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಅವರು ಆಘಾತಕ್ಕೊಳಗಾದರು. ಶ್ವೇತಭವನ ಹೇಳುವುದು ಇದನ್ನೇ.
ಈ ದಾಳಿಗಳ ಬಗ್ಗೆ ತಮಗೆ ಯಾವುದೇ ಮಾಹಿತಿ ನೀಡದ ನೆತನ್ಯಾಹು ವಿರುದ್ಧ ಟ್ರಂಪ್ ಅಸಮಾಧಾನಗೊಂಡಿದ್ದಾರೆ ಎಂಬುದಕ್ಕೆ, ಶ್ವೇತಭವನ ನೀಡಿರುವ ಹೇಳಿಕೆಯೇ ಸಾಕ್ಷಿ.
ಪರಿಸ್ಥಿತಿಯನ್ನು ಸರಿಪಡಿಸಲು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರಿಗೆ ಸೂಚಿಸಲಾಗಿದೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.
‘‘ಸಿರಿಯಾದಲ್ಲಿ ನಡೆದ ಬಾಂಬ್ ದಾಳಿ ಮತ್ತು ಗಾಝಾದಲ್ಲಿ ನಡೆದ ಕೆಥೊಲಿಕ್ ಚರ್ಚ್ ಮೇಲಿನ ಬಾಂಬ್ ದಾಳಿಗಳಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಶ್ಚರ್ಯಗೊಂಡಿದ್ದಾರೆ. ಆ ಪರಿಸ್ಥಿತಿ ಸರಿಪಡಿಸಲು ನೆತನ್ಯಾಹು ಅವರಿಗೆ ಟ್ರಂಪ್ ದೂರವಾಣಿ ಮೂಲಕ ಸ್ಪಷ್ಟ ನಿರ್ದೇಶನ ನೀಡಿದ್ದಾರೆ’’ ಎಂದು ಶ್ವೇತಭವನದ ವಕ್ತಾರೆ ಕ್ಯಾರೋಲಿನ್ ಲೀವಿಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗಾಝಾದಲ್ಲಿ ಇಸ್ರೇಲ್ ರಕ್ಷಣಾ ಪಡೆಗಳು ಪರಿಹಾರ ಶಿಬಿರಗಳ ಮೇಲೆ ದಾಳಿ ಮಾಡುತ್ತಿವೆ. ಈಚಿನ ದಿನಗಳಲ್ಲಿ ನೂರಾರು ಜನರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಬಡ ಫೆಲೆಸ್ತೀನಿಯರು ಆಹಾರ, ಸಹಾಯ, ಪಡಿತರಕ್ಕಾಗಿ ಹೋಗುತ್ತಿರುವಲ್ಲಿ ಈ ದಾಳಿಗಳು ನಡೆಯುತ್ತಿದೆ.
ಮಾಧ್ಯಮ ವರದಿಗಳು ಹೇಳುತ್ತಿರುವ ಪ್ರಕಾರ, ಕಳೆದ ಗುರುವಾರ ಗಾಝಾದಲ್ಲಿರುವ ಏಕೈಕ ಕೆಥೊಲಿಕ್ ಚರ್ಚ್ ಮೇಲೆ ಇಸ್ರೇಲ್ ದಾಳಿ ನಡೆಸಿದಾಗ ಅದರ ಬಗ್ಗೆ ಟ್ರಂಪ್ ಕೂಡಲೇ ನೆತನ್ಯಾಹುಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು. ಮಾತ್ರವಲ್ಲದೆ, ಈ ದಾಳಿಯ ಬಗ್ಗೆ ಇಸ್ರೇಲ್ ಕ್ಷಮೆ ಕೇಳಿ ಹೇಳಿಕೆ ನೀಡಬೇಕು ಎಂದು ಸೂಚಿಸಿದರು. ಕಳೆದ ವಾರ ಡಮಾಸ್ಕಸ್‌ನಲ್ಲಿ ಇಸ್ರೇಲ್ ಸರಕಾರಿ ಕಟ್ಟಡಗಳ ಮೇಲೆ ವೈಮಾನಿಕ ದಾಳಿ ನಡೆಸಿದಾಗ, ಟ್ರಂಪ್‌ಗೆ ಮತ್ತೆ ಆಘಾತವಾಯಿತು. ಟ್ರಂಪ್ ಅವರು ಸಿರಿಯಾ ಮತ್ತು ಗಾಝಾ ದಾಳಿಗಳನ್ನು ನಿಲ್ಲಿಸುವಂತೆ ನೆತನ್ಯಾಹು ಅವರಿಗೆ ಸೂಚಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮಧ್ಯಪ್ರಾಚ್ಯದಲ್ಲಿನ ನಿರಂತರ ಸಂಘರ್ಷಗಳಿಂದ ಟ್ರಂಪ್ ಬೇಸತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.
ಮುಖ್ಯ ವಿಷಯವೆಂದರೆ, ಅದೇ ವೇಳೆ ಅಮೆರಿಕ ಸಿರಿಯಾದಲ್ಲಿಯೂ ಕ್ರಮ ಕೈಗೊಳ್ಳುತ್ತಿದೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅಲ್ಲಿನ ಸರಕಾರದೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದಾರೆ.
ಟ್ರಂಪ್ ಒಂದು ಅವಕಾಶವನ್ನು ನೋಡುತ್ತಾರೆ ಮತ್ತು ಈ ಹೊಸ ಅವಕಾಶದಲ್ಲಿ, ಅಮೆರಿಕನ್ ವ್ಯವಹಾರಗಳು ಸಿರಿಯಾದಲ್ಲಿ ತಮ್ಮ ಬೇರುಗಳನ್ನು ಹರಡಬಹುದು ಎಂದು ಅವರು ನಂಬಿದ್ದಾರೆ. ಆದರೆ ನೆತನ್ಯಾಹು ಅದನ್ನು ಹಾಳು ಮಾಡುತ್ತಿದ್ದಾರೆ.
ಸಿರಿಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ತಗ್ಗಿಸಲು ಮಾರ್ಕೊ ರೂಬಿಯೊ ಅವರ ಪ್ರಯತ್ನಗಳು ನಡೆದಿವೆ.
ಟ್ರಂಪ್ ನಿರ್ಬಂಧಗಳನ್ನು ಸಡಿಲಿಸಿದ್ದಾರೆ ಮತ್ತು ಹಿಂದೆ ಬಂಡಾಯ ನಾಯಕರಾಗಿದ್ದ ಹೊಸ ಅಧ್ಯಕ್ಷರು ಅಹ್ಮದ್ ಅಲ್-ಶರಾ ಅವರನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ.
ಆದ್ದರಿಂದ ಒಂದು ರೀತಿಯಲ್ಲಿ ಟ್ರಂಪ್ ಮತ್ತು ನೆತನ್ಯಾಹು ನಡುವೆ ಸಿರಿಯಾ ಮತ್ತು ಗಾಝಾ ಮೇಲಿನ ದಾಳಿಗೆ ಸಂಬಂಧಿಸಿ ಉದ್ವಿಗ್ನತೆ ಮೂಡಿದೆ.
ಇರಾನ್ ವಿಷಯದಲ್ಲಿ ಏನಾಯಿತು ಎಂಬುದು ಗೊತ್ತಿದೆ. ಅಮೆರಿಕ ಇರಾನ್‌ನೊಂದಿಗೆ ಕದನ ವಿರಾಮವನ್ನು ಘೋಷಿಸುತ್ತದೆ. ಆದರೆ ಏನಾಗುತ್ತದೆ?
ಅದರ ನಂತರವೂ ಇಸ್ರೇಲ್ ದಾಳಿಗಳನ್ನು ಮುಂದುವರಿಸುತ್ತದೆ.
ಟ್ರಂಪ್ ಈಗ ಕೋಪಗೊಂಡಿದ್ದಾರೆ. ಟ್ರಂಪ್ ಮತ್ತು ನೆತನ್ಯಾಹು ನಡುವೆ ನಂಬಿಕೆಯ ಸಮಸ್ಯೆಗಳಿವೆ.
ಅವರ ಸಂಬಂಧ ಯಾವಾಗಲೂ ಸ್ವಲ್ಪ ಜಟಿಲವಾಗಿದೆ. ಇಬ್ಬರೂ ಬಲವಾದ ಮಿತ್ರರಾಗಿದ್ದರೂ, ತಜ್ಞರ ಪ್ರಕಾರ, ಅವರ ಪರಸ್ಪರ ಬಾಂಧವ್ಯ ಅಷ್ಟು ಆಪ್ತವಾಗಿಲ್ಲ.
ಎರಡೂ ದೇಶಗಳ ನಡುವೆ ಅಪನಂಬಿಕೆಯ ಭಾವನೆ ಹಲವು ಬಾರಿ ಕಂಡುಬಂದಿದೆ. ನೆತನ್ಯಾಹು ಅವರ ೪ ದಿನಗಳ ವಾಶಿಂಗ್ಟನ್ ಭೇಟಿ ಗಾಝಾದಲ್ಲಿ ಕದನ ವಿರಾಮದ ಕುರಿತು ಕೆಲವು ಸ್ಪಷ್ಟ ಫಲಿತಾಂಶಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಇದರಲ್ಲಿ ಹಮಾಸ್ ಹಿಡಿದಿರುವ ಒತ್ತೆಯಾಳುಗಳ ಬಿಡುಗಡೆ ಮತ್ತು ಗಾಝಾದಲ್ಲಿ ಮಾನವೀಯ ನೆರವಿನ ಪ್ರಮಾಣದಲ್ಲಿ ದೊಡ್ಡ ಹೆಚ್ಚಳ ಕೂಡ ಸೇರಿತ್ತು.
ಭೇಟಿಗೆ ಮೊದಲು ಹಲವಾರು ಬಾರಿ ಆ ವಾರದಲ್ಲೇ ಕದನ ವಿರಾಮ ನಿರೀಕ್ಷಿಸುವುದಾಗಿ ಟ್ರಂಪ್ ಹೇಳಿದ್ದರು. ಆದರೆ ಈಗ, ಒಂದು ವಾರ ಕಳೆದ ನಂತರವೂ, ಮಧ್ಯವರ್ತಿಗಳು ಹಮಾಸ್‌ಗೆ ಇತ್ತೀಚಿನ ಪ್ರಸ್ತಾವ ಹಸ್ತಾಂತರಿಸಿದ ನಂತರವೂ, ಗಾಝಾದಲ್ಲಿರುವ ಹಮಾಸ್ ನಾಯಕರ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ.
ಹಮಾಸ್ ಸೋಮವಾರ ಹೇಳಿಕೆ ನೀಡಿ, ಗಾಝಾದಲ್ಲಿ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಕುರಿತು ಒಪ್ಪಂದಕ್ಕೆ ಬರಲು ಹಗಲಿರುಳು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದೆ.
ಗಾಝಾದಲ್ಲಿ ಸಾಯುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಟ್ರಂಪ್ ಈಗ ಇದರ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆನ್ನಲಾಗುತ್ತಿದೆ. ಆದರೆ ನೆತನ್ಯಾಹು ಏನು ಮಾಡುತ್ತಾರೆ ಎನ್ನುವುದು ಊಹಿಸಲಾಗದೆ ಇರುವ ಸಂಗತಿಯಾಗಿ ಉಳಿದಿಲ್ಲ.







