ಎಸ್. ಜೈಶಂಕರ್ ಜಾಗಕ್ಕೆ ಶಶಿ ತರೂರ್ ತರುವ ಸಾಧ್ಯತೆ ಇದೆಯೆ!?

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಬದಲಾಯಿಸಬಹುದು ಮತ್ತು ಶಶಿ ತರೂರ್ ಅವರನ್ನು ವಿದೇಶಾಂಗ ಸಚಿವರನ್ನಾಗಿ ಮಾಡಬಹುದು ಎಂಬ ಮಾತು ಕೆಳಿಬರುತ್ತಿದೆ. ಅದು ಸಾಧ್ಯವೇ?
ರಾಜಕೀಯದಲ್ಲಿ ಏನು ಬೇಕಾದರೂ ಸಾಧ್ಯವಿದೆ. ಆದರೆ ಈ ವಿಷಯದಲ್ಲಿ ನಿಜವಾಗಿಯೂ ಏನಾಗಬಹುದು?
ಮುಖ್ಯವಾಗಿ ನೋಡಬೇಕಾದದ್ದೆಂದರೆ, ಬಿಜೆಪಿ ಸರಕಾರದಲ್ಲಿ ಪ್ರತಿಭೆಗಳ ಕೊರತೆ ಜಾಸ್ತಿಯೇ ಇದೆ. ಮೋದಿಯವರ ಬಳಿ ಸರಿಯಾದ ಕೆಲಸಕ್ಕೆ ಸರಿಯಾದ ವ್ಯಕ್ತಿ ಕಾಣುತ್ತಿಲ್ಲ.
ಈಚೆಗಂತೂ ಶಶಿ ತರೂರ್ ನಮ್ಮಲ್ಲಿನ ಮಡಿಲ ಮಾಧ್ಯಮದಲ್ಲಿ ದಿನವೂ ಮಿಂಚುತ್ತಿದ್ದಾರೆ. ಬಹುಶಃ ನರೇಂದ್ರ ಮೋದಿ ಅವರಂತೆಯೇ ತರೂರ್ ಕೂಡ ನಿತ್ಯ ಕಾಣಿಸುತ್ತಾರೆ. ಹಾಗಾಗಿಯೇ, ಜೈಶಂಕರ್ ಅವರನ್ನು ಬದಲಾಯಿಸಲಾಗುತ್ತದೆಯೇ ಮತ್ತು ಶಶಿ ತರೂರ್ ಅವರನ್ನು ವಿದೇಶಾಂಗ ಸಚಿವರನ್ನಾಗಿ ನೇಮಿಸಲಾಗುತ್ತದೆಯೇ ಎಂಬ ಅನುಮಾನವೂ ಶುರುವಾಗಿದೆ.
ಆದರೆ ಹಾಗಾಗಲು ಸಾಧ್ಯವಿದೆಯೆ?
ಮೋದಿ ಅವರು 11 ವರ್ಷಗಳ ಆಡಳಿತದಲ್ಲಿ ಭಾರತವನ್ನು ವಿಶ್ವಗುರು ಎಂದು ಕರೆದಿದ್ದಾರೆ. ತಾನು ಭಾರತವನ್ನು ವಿಶ್ವಗುರು ಮಟ್ಟಕ್ಕೆ ಏರಿಸಿರುವುದಾಗಿ ಅವರು ಬಿಂಬಿಸಿದ್ದಾರೆ. ಆದರೆ, ಪಾಕಿಸ್ತಾನದೊಂದಿಗೆ ಯುದ್ಧ ಮಾಡುವಾಗ ನಮಗೆ ಏನಾಯಿತು? ಅದನ್ನು ಗಮನಿಸಿದರೆ, ವಿಶ್ವಗುರು ಸ್ಥಾನಮಾನ ಕುಸಿಯುತ್ತಿದೆ ಎಂಬಂತೆ ಕಾಣುತ್ತಿದೆ.
ಎಷ್ಟು ದೇಶಗಳು ನಮ್ಮನ್ನು ಬೆಂಬಲಿಸಿದವು, ಎಷ್ಟು ದೇಶಗಳು ನಮ್ಮ ಸಹಾಯಕ್ಕೆ ಬಂದವು ಎಂಬುದನ್ನು ನಾವು ನೋಡಿದ್ದೇವೆ.ಎಷ್ಟು ದೇಶಗಳು ನಮ್ಮ ಬಗ್ಗೆ ತಲೆಕೆಡಿಸಿಕೊಂಡಿವೆ ಎಂಬುದು ಅರ್ಥವಾಗಿಬಿಟ್ಟಿದೆ.
ವಿಶ್ವಗುರು ಎಂಬ ತೋರಿಕೆ ಮಾಧ್ಯಮಗಳ ಸೃಷ್ಟಿಯೇ ಹೊರತು, ಇದು ನಿಜವಾಗಿಯೂ ರಾಷ್ಟ್ರೀಯ ಸತ್ಯವಲ್ಲ. ವಾಸ್ತವ ಬೇರೆಯೇ ಇದೆ. ಈಗ ಮೋದಿ ಜೈಶಂಕರ್ ಅವರನ್ನು ವಜಾಗೊಳಿಸಿದರೆ ಈ ಸತ್ಯವನ್ನು ಅವರು ಕೂಡ ಒಪ್ಪಿಕೊಂಡಂತೆ ಆಗುತ್ತದೆ. ಹಾಗಾಗಿ, ಜೈಶಂಕರ್ ಅವರನ್ನು ಹುದ್ದೆಯಿಂದ ತೆಗೆಯುವ ಸಾಧ್ಯತೆ ಕಡಿಮೆ ಎನ್ನಬಹುದು.
ಎರಡನೆಯದಾಗಿ, ಜೈಶಂಕರ್ ಅವರನ್ನು ವಜಾಗೊಳಿಸಿ ಕಾಂಗ್ರೆಸ್‌ನಿಂದ ಶಶಿ ತರೂರ್ ಅವರನ್ನು ಕರೆತಂದು ಕೂರಿಸಿದರೆ, ಬಿಜೆಪಿಯೊಳಗೆ ಆ ಸ್ಥಾನಕ್ಕಾಗಿ ಯಾವ ಅರ್ಹರೂ ಇಲ್ಲ ಎಂದು ಅವರೇ ಒಪ್ಪಿಕೊಂಡಂತೆ ಆಗುತ್ತದೆ. ಕಷ್ಟದ ಕಾಲದಲ್ಲಿ ಮೋದಿ ಕಾಂಗ್ರೆಸ್ ಜನರ ಕಡೆಗೆ ನೋಡಬೇಕಾಗಿ ಬಂತು ಎನ್ನುವ ಸ್ಥಿತಿ ತಲೆದೋರುತ್ತದೆ. ಅವರಿಗೆ ತಮ್ಮದೇ ಪಕ್ಷದಲ್ಲಿ ಯಾರೂ ಸಿಗದೆ, ಅದಕ್ಕಾಗಿ ಕಾಂಗ್ರೆಸ್ ಕಡೆಗೆ ನೋಡಬೇಕಾಯಿತು ಎನ್ನುವ ಮಾತು ಬರುವಂತಾಗುತ್ತದೆ. ಇದರಿಂದಾಗಿಯೂ ಮೋದಿ ಇಂಥದೊಂದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ.
ಹಾಗೆ ತರೂರ್ ಅವರನ್ನು ತಂದರೆ, ತಮ್ಮ ಆಡಳಿತದ 11ನೇ ವರ್ಷದಲ್ಲಿ ಮೋದಿ ಅತ್ಯಂತ ತಪ್ಪು ಸಂದೇಶ ನೀಡಿದಂತಾಗುತ್ತದೆ.
ಆದ್ದರಿಂದ ತಾರ್ಕಿಕವಾಗಿ ಹೇಳುವುದಾದರೆ, ನರೇಂದ್ರ ಮೋದಿ ಅವರು ಶಶಿ ತರೂರ್ ಅವರನ್ನು ಜೈಶಂಕರ್ ಜಾಗಕ್ಕೆ ತರಲಾರರು.
ಇನ್ನು, ನಿಜವಾಗಿಯೂ ಬಿಜೆಪಿ ಪ್ರತಿಭೆಗಳ ಕೊರತೆ ಎದುರಿಸುತ್ತಿದೆಯೇ? ಇಡೀ ಬಿಜೆಪಿಯೇ, ತನ್ನಲ್ಲಿ ಇರುವವರಿಗಿಂತ ದಕ್ಷರಲ್ಲದವರನ್ನು ನೇಮಿಸಿಕೊಳ್ಳದ ವಿಚಿತ್ರ ವ್ಯೆಹದಲ್ಲಿ ಸಿಕ್ಕಿಹಾಕಿಕೊಂಡಿದೆಯೆ?
ಏಕೆಂದರೆ ಮೋದಿಯವರು ಸ್ಪರ್ಧೆಯನ್ನು ಬಯಸುವುದಿಲ್ಲ. ಅವರಷ್ಟು ದಕ್ಷನಲ್ಲದ ವ್ಯಕ್ತಿಯನ್ನು ತಂದು ಕೂರಿಸಿಕೊಳ್ಳುತ್ತಾರೆ.
ಹೀಗೆ ಒಬ್ಬರು ತನಗಿಂತ ಅದಕ್ಷರನ್ನು, ಆ ಅದಕ್ಷ ತನಗಿಂತ ಅದಕ್ಷರನ್ನು, ಅವರು ಇನ್ನೂ ಹದಗೆಟ್ಟವರನ್ನು ನೇಮಿಸಿಕೊಳ್ಳುತ್ತ, ಇಡೀ ಬಿಜೆಪಿಯೇ ಅದಕ್ಷರ ಕೂಟವಾಗಿಬಿಟ್ಟಿದೆ.
ಇಡೀ ಬಿಜೆಪಿ ಸರಕಾರವೇ ಅದಕ್ಷರ ಸರಕಾರವಾಗಿ ಮಾರ್ಪಟ್ಟಿದೆ ಎನ್ನುತ್ತಾರೆ ಹಿರಿಯ ಪತ್ರಕರ್ತ ಸುಜಿತ್ ನಾಯರ್.
2024ರ ಚುನಾವಣೆಗೆ ಮೋದಿಯವರು ‘ಮೋದಿ ಕಿ ಗ್ಯಾರಂಟಿ’ ಎಂಬ ಘೋಷಣೆಯ ಪ್ರಚಾರ ಮಾಡಿದರು. ಅದರ ಅರ್ಥವೇನು?
ತಾನು ಮಾತ್ರವೇ ಗ್ಯಾರಂಟಿ ನೀಡಬಲ್ಲ ಮತ್ತು ಜನರು ನಂಬಬಲ್ಲ ಏಕೈಕ ವ್ಯಕ್ತಿಯಾಗಿದ್ದೇನೆ ಎಂದು ಅವರೇ ತಮ್ಮ ಬಗ್ಗೆ ಭಾವಿಸಿಕೊಂಡುಬಿಟ್ಟಿದ್ದಾರೆ ಎಂಬುದನ್ನೇ ಅದು ಸೂಚಿಸುತ್ತದೆ.
ಅಂದರೆ, ತನಗಿಂತ ದೊಡ್ಡವರು ಯಾರೂ ಇಲ್ಲ ಎಂದು ಅವರೇ ನಂಬಿಬಿಟ್ಟಿದ್ದಾರೆ. ಉಳಿದವರೆಲ್ಲ ತನಗಿಂತಲೂ ಕಡಿಮೆ ಎಂದು ಅವರೇ ಭಾವಿಸಿಬಿಟ್ಟಿದ್ದಾರೆ ಮತ್ತು ಅದೇ ಅವರ ಪಕ್ಷದ ಮತ್ತು ಅವರ ಸರಕಾರದ ವಾಸ್ತವತೆ ಆಗಿರಬಹುದೆ?
ಅದೇ ನಿಜವಾಗಿದ್ದರೆ, ಪತನದ ರೇಖೆಗಳು ಮುಂದಿನ ಐದಾರು ವರ್ಷಗಳಲ್ಲಿ ಕಾಣುತ್ತವೆ.
ಹೊಸಬರಾಗಿದ್ದಾಗ, ಆಗಷ್ಟೇ ಕೆಲಸ ಶುರು ಮಾಡಿದಾಗ, ಮೊದಲ ಕೆಲ ವರ್ಷಗಳು ಅದ್ಭುತವಾಗಿರುತ್ತವೆ. ಎಲ್ಲವೂ ಅನುಕೂಲಕರವಾಗಿಯೇ ಇರುತ್ತವೆ.
ಬಿಜೆಪಿ ಈ ದೇಶದಲ್ಲಿ ತನಗೆ ಪೂರಕವಾದ, ಪರವಾದ ಮಾಧ್ಯಮವನ್ನು ಹೊಂದಿರುವುದರಿಂದ, ಅವರು ಮಾಡಿದ ಎಲ್ಲವನ್ನೂ ಪ್ರಶಂಸಿಸಲಾಗಿದೆ, ಪ್ರಶಂಸಿಸಲಾಗುತ್ತಿದೆ.
ಆದ್ದರಿಂದ ನಾವು ವಿಶ್ವಗುರುವೂ ಆಗಿದ್ದೇವೆ, ವಿಶ್ವದ ಅತ್ಯಂತ ಜನಪ್ರಿಯ ರಾಷ್ಟ್ರಗಳಲ್ಲಿ ಒಂದೆಂದು ಕೂಡ ಬಿಂಬಿತವಾಗಿದ್ದೇವೆ.
ಎಲ್ಲವೂ ಬಹಳ ಅಚ್ಚುಕಟ್ಟಾಗಿ ಹೆಣೆಯಲಾದ ಕಥೆಗಳೇ ಆಗಿವೆ ಮತ್ತು ಜನರು ಅದನ್ನೆಲ್ಲ ನಂಬುವಂತೆ ಮಾಡಲಾಗಿದೆ. ನಂಬದವರನ್ನು, ಪ್ರಶ್ನಿಸುವವರನ್ನು ಹಣಿಯಲಾಗಿದೆ, ಹಣಿಯಲಾಗುತ್ತಿದೆ. ದೊಡ್ಡ ಪ್ರಭಾವಲಯ ಸೃಷ್ಟಿಸಿಕೊಳ್ಳಲಾಗಿದೆ.
ಮೊನ್ನೆ ಪ್ರಧಾನಿ ಘಾನಾಕ್ಕೆ ಹೋದರು. ಆದರೆ ಅಲ್ಲಿಂದ ಬಂದಿದ್ದೇನು?
ಘಾನಾದ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಭೇಟಿ ಅಲ್ಲಿನ ಸಂಸದರು ಭಾರತೀಯ ಉಡುಪುಗಳಲ್ಲಿ ಮಿಂಚುತ್ತಿದ್ದರು. ಈ ಮೂಲಕ ಅವರೆಲ್ಲರೂ ಭಾರತಕ್ಕೆ, ಪ್ರಧಾನಿ ಮೋದಿಗೆ ಗೌರವ ಸೂಚಿಸಿದರು, ಪ್ರಧಾನಿ ಮೋದಿ ಅವರನ್ನೆಲ್ಲ ನಗಿಸಿದರು ಎಂದು ಇಲ್ಲಿ ದೊಡ್ಡದಾಗಿ ಪ್ರಚಾರ ಮಾಡಲಾಯಿತು. ಆದರೆ ನಮ್ಮ ಪ್ರಧಾನಿ ಘಾನಾಕ್ಕೆ ಹೋದರೆ ಅಲ್ಲಿ ಮುಖ್ಯ ಆಗಬೇಕಾದ್ದು ಈ ರೀತಿಯ ವಿಷಯಗಳೇ?
ಅಲ್ಲಿನ ಸಂಸದರು ನಮ್ಮ ದೇಶದ ಶೈಲಿಯ ಉಡುಪು ಧರಿಸಿದರು ಎಂಬುದು ನಮ್ಮ ದೇಶದ ಪಾಲಿಗೆ ರಾಜತಾಂತ್ರಿಕ ಗೆಲುವು ಆಗುತ್ತಾ? ಭಾರತದಂತಹ ದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿ ಇನ್ನೊಂದು ದೇಶಕ್ಕೆ ಹೋದರೆ ಇಂತಹ ವಿಷಯಗಳು ಚರ್ಚೆ ಆಗಬೇಕೇ?
ತಿಂಗಳಿಗೊಂದರಂತೆ ಪ್ರಧಾನಿ ವಿದೇಶ ಪ್ರವಾಸ ಮಾಡುತ್ತಾ ಇದ್ದಾರೆ. ವಿದೇಶಾಂಗ ಸಚಿವರಿಗೆ ಕೆಲಸವೇ ಇಲ್ಲ ಎಂಬಂತೆ ಪ್ರಧಾನಿ ಒಂದಾದ ಮೇಲೊಂದು ದೇಶಕ್ಕೆ ಹೋಗುತ್ತಲೇ ಇದ್ದಾರೆ. ಆದರೆ ಏನು ಪ್ರಯೋಜನ? ಅದರಿಂದ ಭಾರತಕ್ಕೆ ಸಿಗುತ್ತಾ ಇರುವುದೇನು? ನಿರ್ಣಾಯಕ ಸಂದರ್ಭಗಳಲ್ಲಿ ಯಾವ ದೇಶ ನಮ್ಮ ಜೊತೆ ನಿಲ್ಲುತ್ತಾ ಇದೆ? ಈ ಡ್ರೆಸ್ಸು, ನಗು, ಫೋಟೊ, ತಮಾಷೆ ಇವೆಲ್ಲವನ್ನೂ ಮೀರಿ ನಿಜವಾದ ರಾಜತಾಂತ್ರಿಕ ಕೆಲಸ ಆಗುವುದು ಯಾವಾಗ?
ಈ ಪೊಳ್ಳುತನದ ಹಿಂದಿನ ವಾಸ್ತವ ಇದ್ದಕ್ಕಿದ್ದಂತೆ ನಮಗೆ ಅದರ ಕೊಳಕು ಸತ್ಯವನ್ನು ತೋರಿಸಿದೆ. ಆರ್ಥಿಕ ಬಿಕ್ಕಟ್ಟು ಸಂಭವಿಸುತ್ತದೆ, ವ್ಯಾಪಾರ ಬಿಕ್ಕಟ್ಟು ಸಂಭವಿಸುತ್ತದೆ, ಕೈಗಾರಿಕಾ ಬಿಕ್ಕಟ್ಟು ಸಂಭವಿಸುತ್ತದೆ.
ಮೂಲಸೌಕರ್ಯದ ವಿಷಯಕ್ಕೆ ಬಂದರೆ ಬಣ್ಣ ಬಯಲಾಗುವಷ್ಟಿದೆ. ನಾವು ಬಿಕ್ಕಟ್ಟನ್ನು ಕಂಡಾಗ, ಬಿಕ್ಕಟ್ಟನ್ನು ಎದುರಿಸಿದಾಗ, ಬಿರುಕುಗಳು ಕಾಣುತ್ತವೆ.
ಆದರೆ ದುರದೃಷ್ಟಕರ ಸಂಗತಿಯೆಂದರೆ, ಈ ಜನರ ಗುಂಪಿನ ಬದಲಿಗೆ ಹೆಚ್ಚು ದಕ್ಷರಾಗಿರುವ ಬೇರೆಯವರನ್ನು ತರಲು ನಮ್ಮಲ್ಲಿ ಸಾಕಷ್ಟು ಪ್ರತಿಭೆಗಳಿವೆಯೇ ಎಂಬುದು.
ಒಂದು ಕಾಲದಲ್ಲಿ ದಿವಂಗತ ಅರುಣ್ ಜೇಟ್ಲಿ ಎರಡಕ್ಕಿಂತ ಹೆಚ್ಚು ಸಚಿವಾಲಯಗಳನ್ನು, ಎರಡು ಪ್ರಮುಖ ಸಚಿವಾಲಯಗಳಾದ ಹಣಕಾಸು ಮತ್ತು ರಕ್ಷಣೆಯನ್ನು ನಿರ್ವಹಿಸುತ್ತಿದ್ದರು.
ಪ್ರಮುಖ ಖಾತೆಗಳಿಗೆ ಬಹು ಮಂತ್ರಿಗಳನ್ನು ನೇಮಿಸುವ ಬಗ್ಗೆ ಬಿಜೆಪಿಗೆ ಏಕೆ ಮನಸ್ಸಿರಲಿಲ್ಲ? ಏಕೆ ಅದು ಸಂಪ್ರದಾಯವಾದಿಯಾಗಿತ್ತು? ಮೋದಿಯವರು ಈ ಖಾತೆಗಳನ್ನು ಬೇರೆ ಯಾರೂ ನಿರ್ವಹಿಸಬಾರದು ಎಂದು ಬಯಸಿದ್ದರೆ ಅಥವಾ ಈ ಖಾತೆಗಳನ್ನು ನಿರ್ವಹಿಸಲು ಬೇರೆ ಯಾರೂ ಇಲ್ಲ ಎಂಬುದು ಕಾರಣವಾಗಿತ್ತೆ?
ಇನ್ನೊಂದು ಪ್ರಮುಖ ಅಂಶವನ್ನು ಗಮನಿಸಬೇಕು.
ಎಸ್ ಜೈಶಂಕರ್ ಅವರು ಅಮೆರಿಕಕ್ಕೆ ಹೋದರು. ಅವರ ಭೇಟಿಯ ಉದ್ದೇಶ ಮುಖ್ಯವಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ತರಲು ವ್ಯಾಪಾರ ಬೆದರಿಕೆ ಹಾಕಲಾಯಿತು ಎಂಬ ಹೇಳಿಕೆಯನ್ನು ನಿರಾಕರಿಸುವುದಾಗಿತ್ತು.
ಟ್ರಂಪ್ ಮೇನಿಂದ ಜುಲೈವರೆಗೆ ಅದನ್ನು ಹೇಳುತ್ತಲೇ ಇದ್ದರು. ನಾವು ಮೇ ತಿಂಗಳಲ್ಲಿ ಅಲ್ಲಿಗೆ ಹೋಗಿ ಇದು ಸರಿಯಲ್ಲ ಎಂದು ಜಗತ್ತಿಗೆ ಹೇಳಬೇಕಿತ್ತು. ಟ್ರಂಪ್ ಹೇಳುತ್ತಿರುವುದು ಸುಳ್ಳು ಎಂಬುದನ್ನು ಹೇಳಬೇಕಿತ್ತು.
ಟ್ರಂಪ್ ಇದನ್ನು ಜಗತ್ತಿಗೆ ಹೇಳಿದಾಗಲೆಲ್ಲಾ, ನಾವು ನಮ್ಮ ನಿಲುವನ್ನು ಅಷ್ಟೇ ಒತ್ತಿ ಹೇಳಬೇಕಿತ್ತೇ ಹೊರತು, ಎಲ್ಲಾ ಪಕ್ಷದ ಪ್ರತಿನಿಧಿಗಳ ನಿಯೋಗ ಕಳಿಸುವ ಮೂಲಕ ಅಲ್ಲ. ಆದರೆ, ಈಗ ನಾವು ಎಲ್ಲ ಮುಗಿದ ಮೇಲೆ ಮಾತನಾಡುತ್ತಿದ್ದೇವೆ. ಇದು ನಿಜವಾಗಿಯೂ ಅರ್ಥಪೂರ್ಣವಾಗಿದೆಯೇ? ಇದು ಸಂವಹನ ದೋಷವಲ್ಲವೇ? ಪಿಆರ್ ಲೋಪವಲ್ಲವೇ?
ಟ್ರಂಪ್ ಏನು ಹೇಳಬೇಕಾಗಿತ್ತೋ ಅದನ್ನು ಹೇಳಿ ಮುಗಿಸಿಬಿಟ್ಟರು. ಅದರ ಅಚ್ಚೊತ್ತಿಬಿಟ್ಟರು. ಆದರೆ ನಾವು ಈಗ ಕುಳಿತುಕೊಂಡು, ವ್ಯಾಪಾರ ಒಪ್ಪಂದಗಳಿಂದಾಗಿ ಯಾವುದೇ ಕದನ ವಿರಾಮ ನಡೆಯಲಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದೇವೆ. ಈ ಯಾವ ಮಾತುಗಳನ್ನೂ ಜಗತ್ತು ಈಗ ಕೇಳಿಸಿಕೊಳ್ಳುವುದಿಲ್ಲ. ಏಕೆಂದರೆ, ಟ್ರಂಪ್ ಪ್ರಪಂಚದ ಮುಂದೆ ಆಗಲೇ ಎಲ್ಲವನ್ನು ಹೇಳಿ, ಅದರ ಕಿವಿ ತುಂಬಿಬಿಟ್ಟಿದ್ದಾರೆ. ಈಗಾಗಲೇ ಜಗತ್ತು ಅದನ್ನು ನಂಬಿದೆ. ನಾವು ತುಂಬಾ ತಡವಾಗಿ ಎಚ್ಚರಗೊಂಡಿದ್ದೇವೆ.
ಎಸ್. ಜೈಶಂಕರ್ ಅವರು ತಮ್ಮ ಮಾತಿನ ಮೂಲಕ ಅವರನ್ನು ಸುಮ್ಮನಾಗಿಸಿದರು, ಇವರಿಗೆ ತಿರುಗೇಟು ಕೊಟ್ಟರು ಎಂದು ಬಿಜೆಪಿ ನಾಯಕರು, ಬೆಂಬಲಿಗರು ಹಾಗೂ ಅದರ ಐಟಿ ಸೆಲ್ ಸಣ್ಣ ಪುಟ್ಟ ವೀಡಿಯೊ ತುಣುಕುಗಳನ್ನು ಪ್ರಚಾರ ಮಾಡುತ್ತಲೇ ಇರುತ್ತದೆ. ಟ್ರಂಪ್ ಪ್ರಮಾಣ ವಚನಕ್ಕೆ ಜೈಶಂಕರ್ ಅವರಿಗೆ ಮೊದಲ ಸಾಲಿನಲ್ಲೇ ಆಸನ ನೀಡಲಾಯಿತು ಎಂಬುದೇ ಭಾರತದ ಮಡಿಲ ಮೀಡಿಯಾಗಳಲ್ಲಿ ದೊಡ್ಡ ಸುದ್ದಿಯಾಯಿತು
ಜೈಶಂಕರ್ ಅವರು ಭಯಂಕರ ಚಾಣಾಕ್ಷ ಎಂದು ಬಿಂಬಿಸಲಾಗುತ್ತಿತ್ತು. ಅವರು ಬುದ್ಧಿವಂತ, ಚಾಣಾಕ್ಷ ಎಲ್ಲವೂ ಆಗಿರಲೇಬೇಕು. ಇಲ್ಲದಿದ್ದರೆ ಅವರು ಮೊದಲು ದೇಶದ ವಿದೇಶಾಂಗ ಕಾರ್ಯದರ್ಶಿ ಆಗುತ್ತಿರಲಿಲ್ಲ. ಆದರೆ ಪ್ರಶ್ನೆ ಇರುವುದು ಅವರ ಬುದ್ಧಿವಂತಿಕೆ, ಚಾಣಾಕ್ಷತನ ದೇಶಕ್ಕೆ ಎಷ್ಟು ಪ್ರಯೋಜನಕ್ಕೆ ಬರುತ್ತಾ ಇದೆ ಎಂಬುದು.
ಅದು ನಿರ್ಣಾಯಕ ಸಂದರ್ಭಗಳಲ್ಲಿ ಇತರ ಬಲಾಢ್ಯ ದೇಶಗಳು ನಮ್ಮ ಜೊತೆ ನಿಲ್ಲುವ ಹಾಗೆ ಮಾಡುವಲ್ಲಿ ಯಾಕೆ ಯಶಸ್ವಿ ಆಗುತ್ತಿಲ್ಲ ಎಂಬುದು ಇಲ್ಲಿ ಮುಖ್ಯ.
ಜೈಶಂಕರ್ ಅವರನ್ನು ಹಾಡಿ ಹೊಗಳುತ್ತಿದ್ದ ಬಿಜೆಪಿ ಐಟಿ ಸೆಲ್ ಈಗ ಕಾಂಗ್ರೆಸ್‌ನ ಶಶಿ ತರೂರ್ ಅವರನ್ನು ಹಾಡಿ ಹೊಗಳಬೇಕಾದ ಪರಿಸ್ಥಿತಿ ಯಾಕೆ ಬಂದಿದೆ?
ಮೋದಿ ತಮ್ಮ ರಾಜಕೀಯ ಜೀವನದುದ್ದಕ್ಕೂ, ಪ್ರಧಾನಿಯಾಗಿ ಇಷ್ಟು ವರ್ಷದುದ್ದಕ್ಕೂ ದೂರುತ್ತಾ ಬಂದಿದ್ದ ಕಾಂಗ್ರೆಸ್‌ನ ನಾಯಕನ ಮಾತುಗಳ ವಿಡಿಯೋಗಳನ್ನು ಈಗ ಬಿಜೆಪಿ ನಾಯಕರು ಹಾಗೂ ಐಟಿ ಸೆಲ್ ಶೇರ್ ಮಾಡಬೇಕಾಗಿ ಬಂದಿದ್ದು ಯಾಕೆ?
ಅಂದರೆ, ನಮ್ಮ ದೇಶದ ಸಂವಹನದ ವಿಷಯದಲ್ಲಿ ನಾವು ವಿಫಲರಾಗಿದ್ದೇವೆ. ಆದ್ದರಿಂದ ಈ ನಿರ್ದಿಷ್ಟ ವೈಫಲ್ಯಕ್ಕೆ ವಿದೇಶಾಂಗ ಸಚಿವಾಲಯವನ್ನೇ ಹೊಣೆ ಮಾಡಬೇಕು.