ನಗರದಲ್ಲಿ ಜಾತಿ ಇಲ್ಲವೇ?

‘‘ಸಿಟಿಯಲ್ಲಿ ಜಾತಿ ಎಲ್ಲಿದೆ ರೀ?’’
ಬಹುತೇಕ ಮೇಲ್ವರ್ಗದಲ್ಲಿ ಹುಟ್ಟಿರುವ ಜಾತಿಯ ಶ್ರೇಷ್ಠತೆಯನ್ನು ಅನುಭವಿಸುತ್ತಿರುವವರ ಅಹಂಕಾರದ ನುಡಿಗಳಿವು. ಯಾರೋ ಹೊಲೆಯನೋ, ಮಾದಿಗನೋ ತಮಗಾದ ಜಾತಿ ತಾರತಮ್ಯ, ಅವಮಾನ, ಅನುಭವದ ನುಡಿಗಳನ್ನು ನೊಂದ ಮನಸ್ಸಿನಿಂದ ಹೇಳಿಕೊಂಡಾಗ ಮೇಲ್ವರ್ಗದವರಿಂದ ಬರುವ ನುಡಿಮುತ್ತುಗಳೇ ಇವು. ನೊಂದುಕೊಂಡು ಮಾತನಾಡಿದ ಹೊಲೆಯನನ್ನೋ, ಮಾದಿಗನನ್ನೋ ಸಮಾಧಾನಪಡಿಸಲು ಹೇಳುವ ಬರೀ ನಾಲಿಗೆಯ ಒಣ ಮಾತುಗಳಿವು. ಈ ಮಾತನ್ನಾಡುವ ವ್ಯಕ್ತಿಗೆ ಗೊತ್ತಿರುತ್ತದೆ ತಾನು ಹೇಳುತ್ತಿರುವ ಮಾತುಗಳು ಆತ್ಮವಂಚನೆಯ ಬರಿ ಸುಳ್ಳುಗಳೆಂದು...
ಇತ್ತೀಚೆಗೆ ತಮ್ಮ ಇಹಲೋಕದ ಪಯಣ ಮುಗಿಸಿ ಹೋದ ಕನ್ನಡ ಸಾಹಿತ್ಯದ, ಕಥಾಲೋೀಕದ ಅದ್ಭುತ ಲೇಖಕರೊಬ್ಬರಾದ ಮೊಗಳ್ಳಿ ಗಣೇಶ್‌ರವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಅವರ ಸಮಕಾಲಿನ ಸ್ನೇಹಿತರಾದ ರಾಜಪ್ಪ ದಳವಾಯಿ, ಬಂಜಗೆರೆ ಜಯಪ್ರಕಾಶ್, ಸ್ವಾಮಿ ಆನಂದ್, ಶ್ರೀಮತಿ ಲೋಲಾಕ್ಷಿ ಮೇಡಂ, ಸಿ. ಬಸವಲಿಂಗಯ್ಯ, ಕಾಳೇಗೌಡ ನಾಗವಾರ ಮುಂತಾದವರು ಸೇರಿ ಆಯೋಜಿಸಿದ್ದರು. ಆ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ.
ಅದಾಗಲೇ ಮೊಗಳ್ಳಿ ಗಣೇಶ್‌ರವರ ಆತ್ಮಕಥೆ ‘ನಾನೆಂಬುದು ಕಿಂಚಿತ್ತು’ ಓದಿಕೊಂಡಿದ್ದೆ. ಅಲ್ಲಿ ಮಾತನಾಡಿದ ಬಹುತೇಕ ಸ್ನೇಹಿತರು ಆತ್ಮಕಥೆಯಲ್ಲಿರುವ ಪ್ರಸಂಗಗಳನ್ನೇ ಸ್ವಾರಸ್ಯಮಯವಾಗಿ ಮನ ಮಿಡಿಯುವಂತೆ ಕಟ್ಟಿಕೊಟ್ಟರು. ಯಾಕೆಂದರೆ ಅವಕ್ಕೆಲ್ಲ ಅವರೇ ಪ್ರತ್ಯಕ್ಷ ಸಾಕ್ಷಿಗಳು. ಇದರ ಮಧ್ಯೆ ಮನಸ್ಸಿಗೆ ಖಿನ್ನತೆಯನ್ನುಂಟುಮಾಡಿದ್ದು, ಮೊಗಳ್ಳಿ ಗಣೇಶ್‌ರ ಕೊನೆಯ ದಿನಗಳ ಈಡೇರದ ಆಸೆ.
ಅವರ ಸ್ನೇಹಿತರೇ ಹೇಳಿದಂತೆ ಮೊಗಳ್ಳಿ ಗಣೇಶ್ ಅವರು ನೆಲೆಸಿದ್ದು ಬಳ್ಳಾರಿ ಜಿಲ್ಲೆಯ ವಿಜಯನಗರದಲ್ಲಿ. ಅವರಿಗೆ ಅಲ್ಲಿ ಹೇಳಿಕೊಳ್ಳುವಂತಹ ಆತ್ಮೀಯ ಸ್ನೇಹಿತರು ಯಾರೂ ಇರಲಿಲ್ಲವಂತೆ. ಹಾಗಾಗಿ ಅವರ ಕೊನೆಯ ದಿನಗಳನ್ನು ಮೈಸೂರಿನಲ್ಲಿ ಆತ್ಮೀಯ ಸ್ನೇಹಿತರ ಮಧ್ಯೆ ಕಳೆಯಬೇಕೆಂಬ ಆಸೆ. ಅದಕ್ಕಾಗಿ ಅವರಿಗೆ ಮೈಸೂರಿನಲ್ಲಿ ಒಂದು ಬಾಡಿಗೆ ಮನೆಯನ್ನು ಹುಡುಕಿಕೊಡಲು ಮೈಸೂರಿನ ಸ್ನೇಹಿತರಿಗೆ ಕೇಳಿಕೊಂಡಿದ್ದರಂತೆ. ಅದರಂತೆ ಮೈಸೂರಿನ ಗೆಳೆಯರು ಸಾಕಷ್ಟು ಕಡೆ ಬಾಡಿಗೆ ಮನೆಗಾಗಿ ಪ್ರಯತ್ನಪಟ್ಟರು. ಆ ಪ್ರಯತ್ನವೆಲ್ಲ ವ್ಯರ್ಥವಾಗಿದೆ. ಕಾರಣ ಮೊಗಳ್ಳಿ ಗಣೇಶ್ ಅವರು ಹೊಲೆಯ ಜಾತಿಗೆ ಸೇರಿದವರಾಗಿದ್ದು. ಸುಳ್ಳು ಜಾತಿ ಹೇಳಿಕೊಂಡು ಮನೆ ಪಡೆಯಲಾಗದಷ್ಟು ಸಾಹಿತ್ಯ ಲೋಕದ ಜನಪ್ರಿಯತೆಯ ಭಾರ.
ಒಂದು ತಿಂಗಳ ಹಿಂದೆಯಷ್ಟೇ ಗೆಳೆಯ ಸುಬ್ಬು ಹೊಲೆಯಾರ್ ಜೊತೆ ಮೊಗಳ್ಳಿ ಗಣೇಶ್‌ರವರ ಸಾಹಿತ್ಯದ ಬಗ್ಗೆ ಮಾತನಾಡುತ್ತಿದ್ದಾಗ ಸುಬ್ಬು ಕೂಡ ಇದೇ ಮಾತನ್ನು ಹೇಳಿದ್ದರು. ಗಣೇಶ್‌ರವರು ಮೈಸೂರಿಗೆ ಬಂದು ನೆಲೆಸಿ ಹಳೇ ಗೆಳೆಯರ ಒಡನಾಟ ಸಿಕ್ಕರೆ ಆ ಒಡನಾಟದಿಂದ ಅವರ ಆರೋಗ್ಯ ವೃದ್ಧಿಸಬಹುದೆಂಬ ಆಶಯ ವ್ಯಕ್ತಪಡಿಸಿದ್ದರು. ಮೊಗಳ್ಳಿಯವರ ಕೊನೆಯ ಆಸೆಯನ್ನು ಈಡೇರಿಸಲಾಗದ ಸ್ನೇಹಿತರ ಸಂಕಟ, ತೊಳಲಾಟ ಅವರ ಮಾತುಗಳಲ್ಲೇ ವ್ಯಕ್ತವಾಗುತ್ತಿತ್ತು. ಇದು ಕಟು ಸತ್ಯ. ‘‘ನಗರದಲ್ಲಿ ಜಾತಿ ಎಲ್ಲಿದೆ ರೀ?’’ ಎಂದು ಕೇಳುವ ಮೇಲ್ವರ್ಗದ ಜಾತಿಯ ಗೋಸುಂಬೆಗಳಿಗೆ ಏನೆಂದು ಹೇಳುವುದು? ಜಾತಿಯ ತಾರತಮ್ಯ, ಮಾನಸಿಕ ಹಿಂಸಾಚಾರ ನಗರಗಳಲ್ಲಿ ಅಗೋಚರವಾಗಿ ಹೇಗೆಲ್ಲಾ ಕುಣಿಯುತ್ತಿದೆ ಎಂದೇ?
ಹಳ್ಳಿಗಳು ದಲಿತರ ಪಾಲಿಗೆ ಕೊಳಚೆ ಗುಂಡಿಗಳಂತೆ. ನಗರಗಳು ಜಾತಿಯ ಸಂಕೋಲೆಯಿಂದ ಬಂಧಿತರಾದವರಿಗೆ ವಿಮೋಚನೆಯ ತಾಣವಾಗಬೇಕಿತ್ತು. ಇದು ಡಾ. ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್‌ರವರ ಆಶಯವಾಗಿತ್ತು. ಆದರೆ ಆಗಿರುವುದೇನು..? ದಲಿತರಿಗೆ ವಿಮೋಚನೆಯ ತಾಣಗಳಾದೆ ಜಾತಿ ತಾರತಮ್ಯ, ಅಸಮಾನತೆಗಳು ಹೊಸ ರೂಪಗಳಲ್ಲಿ ಆಗೋಚರವಾಗಿ ಮರುಸಂಘಟಿತವಾಗಿವೆ. ಇದು ತಿಳಿಯುವುದು ಅನುಭವಿಸುವವರಿಗೆ ಮಾತ್ರ.
ಡಾ. ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಕೊಡಮಾಡಿರುವ ಸಾಮಾಜಿಕ ಸಾಮರಸ್ಯ, ಸಮಾನತೆ ಮತ್ತು ಭ್ರಾತೃತ್ವ ಇವುಗಳು ಬಿಳಿ ಕಾಗದದ ಮೇಲೆ ಕರಿ ಅಕ್ಷರಗಳಾಗಿ ರಾರಾಜಿಸುತ್ತಿವೆಯೇ ಹೊರತು ಅನುಷ್ಠಾನಗೊಳಿಸಬೇಕಾದ ವ್ಯವಸ್ಥೆ (ಮನಸ್ಸುಗಳು) ಮನುವಿನಲ್ಲಿ ಅಂತರ್ಗತಗೊಂಡಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮಯದಲ್ಲಿ ರಾಜ್ಯದ ನಗರ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದ ಅಧಿಕಾರಿಗಳಿಗೆ ಗೊತ್ತಾದ ಸತ್ಯವೆಂದರೆ ಜಾತಿ ತಾರತಮ್ಯದ ಕುರೂಪದ ದರ್ಶನ. ಈ ವ್ಯವಸ್ಥೆಯಿಂದಾಗಿ ಕೋಟ್ಯಂತರ ಪಂಚಮರ ಬದುಕು ನೆಮ್ಮದಿ ಇಲ್ಲದಂತಾಗಿದೆ. ನಿಜ ಜಾತಿ ಹೆಸರು ಹೇಳಿದರೆ ಯಾರೂ ಬಾಡಿಗೆ ಮನೆ ಕೊಡುವುದಿಲ್ಲವೆಂದು ನಿಜ ಜಾತಿಯನ್ನು ಮರೆಮಾಚಿ ಇತರ ಮೇಲ್ವರ್ಗದ ಜಾತಿಗಳ ಹೆಸರು ಹೇಳಿ ಬದುಕುವುದು ಸುಳ್ಳಿನ ಹಂಗಿನ ಅರಮನೆಯಲ್ಲಿ ವಾಸ ಮಾಡುವಂತಾಗಿದೆ.
ಪತ್ರಿಕೆಗಳಲ್ಲಿ ವರದಿಯಾಗಿರುವ ಅನೇಕ ಘಟನೆಗಳಲ್ಲಿ, ಎರಡನ್ನು ಉದಾಹರಿಸುತ್ತೆನೆ. ಬೆಂಗಳೂರಿನ ದಾಸರಹಳ್ಳಿ ಅಗ್ರಹಾರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಹೆಣ್ಣು ಮಗಳೊಬ್ಬಳು ಸಮೀಕ್ಷೆ ಸಮಯದಲ್ಲಿ ಜಾತಿ ಹೆಸರನ್ನು ಗೌಡರೆಂದು ಬರೆಸಿ, ಮರು ದಿನ ಸಮೀಕ್ಷೆ ಅಧಿಕಾರಿಗಳ ಹತ್ತಿರ ಬಂದು ‘‘ಸರ್ ನಾವು ಮಾದಿಗರು, ಈ ವಿಷಯ ಮನೆ ಮಾಲಕರಿಗೆ ಗೊತ್ತಾದರೆ, ಮನೆ ಖಾಲಿ ಮಾಡಿಸುತ್ತಾರೆ ಅದಕ್ಕೆ ಸುಳ್ಳು ಬರೆಸಿದೆ, ಈಗ ಅದನ್ನು ಸರಿಮಾಡಿ ಸರ್’’ ಅಂತ ಕೇಳಿಕೊಂಡರೆ, ಮತ್ತೊಂದು ಮನೆಯ ಮಾಲಕ ‘‘ಸರ್ ಮೆಲ್ಲಗೆ ಕೇಳಿ ಸರ್, ನಾವು ಗೌಡರೆಂದು ಹೇಳಿಕೊಡಿದ್ದೇವೆ. ಈಗ ನಿಜ ಗೊತ್ತಾದ್ರೆ ನಮ್ಮ ಮನೆಯಲ್ಲಿ ಬಾಡಿಗೆ ಇರುವವರು ಮನೆ ಖಾಲಿ ಮಾಡುತ್ತಾರೆ. ಬೇರೆ ಜಾತಿಯವರು ಬಾಡಿಗೆಗೆ ಬರೋದಿಲ್ಲ ಅನ್ನುವ ಭಯ’’ ನೋಡಿ ಹೇಗಿದೆ ಜಾತಿಯ ಪ್ರಭಾವ. ಈಗ ಹೇಳಿ ಸಿಟಿಯಲ್ಲಿ ಜಾತಿಲ ಇಲ್ಲವೇ?







