ಟಿಆರ್‌ಪಿಗಾಗಿ ಈ ನಿರ್ಲಜ್ಜ ಪ್ರದರ್ಶನ ಸರಿಯೇ?

ಒಬ್ಬರ ಮನೆಗೆ ಬೆಂಕಿ ಬಿದ್ದಾಗ ಬೇರೆಯವರು ಯಾರೋ ಚಳಿ ಕಾಯಿಸಿಕೊಂಡರು ಎಂಬ ಮಾತಿದೆ. ಇವತ್ತಿನ ಮಡಿಲ ಮಾಧ್ಯಮದ ಅತ್ಯಂತ ನಾಚಿಕೆಗೇಡಿನ ಮತ್ತು ಅತ್ಯಂತ ನೀಚ ಮಟ್ಟದ ನಡವಳಿಕೆ ಇದಕ್ಕಿಂತಲೂ ಬೇರೆಯಲ್ಲ.
ಅತಿ ದೊಡ್ಡ ದುರಂತವೊಂದು ಜನರ ಬದುಕನ್ನೇ ಸರ್ವನಾಶ ಮಾಡಿರುವ ಹೊತ್ತಲ್ಲೂ, ಸಾವಿರಾರು ಜನರ ಸಾವಿನ ಹೊತ್ತಲ್ಲೂ, ಜೀವನ ಅತಂತ್ರವಾಗಿರುವ ಹೊತ್ತಲ್ಲೂ ಈ ಮಡಿಲ ಮಾಧ್ಯಮದ ಜನ ತಮ್ಮ ಲಾಭ ನೋಡುವುದಕ್ಕಿಂತ ಹೀನವಾದದ್ದು ಇನ್ನೇನೂ ಇರಲಿಕ್ಕಿಲ್ಲ. ಶವಗಳ ನಡುವೆಯೂ ಟಿಆರ್‌ಪಿ ಹುಡುಕುವ ಇದು ಎಂಥ ಪತ್ರಿಕೋದ್ಯಮ?
ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ನೇಪಾಳ ಪ್ರವಾಹ ಸೃಷ್ಟಿಸಿರುವ ತಲ್ಲಣ ಘೋರವಾದದ್ದು.
4 ಸಾವಿರಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವಾಗ, ಎಷ್ಟೋ ಕುಟುಂಬಗಳೇ ಇಲ್ಲವಾಗಿರುವಾಗ, ಊರಿಗೆ ಊರೇ ಕೊಚ್ಚಿಹೋಗಿರುವಾಗ, ತಮ್ಮವರಿಗಾಗಿ ಎಷ್ಟೋ ಜೀವಗಳು ಕಾಯುತ್ತಿರುವಾಗ ಮೀಡಿಯಾ ಬಹಳ ಜವಾಬ್ದಾರಿಯಿಂದ, ಸಂವೇದನಾಶೀಲವಾಗಿ ವರ್ತಿಸುವ ಅಗತ್ಯವಿರುತ್ತದೆ.
ಆದರೆ ಆಗುತ್ತಿರುವುದೇನು?
ನೇಪಾಳ ಈಗ ಕಷ್ಟಪಡುತ್ತಿದೆ. ತನ್ನ ಪಾಳುಬಿದ್ದ ಜೀವನವನ್ನು ಮರಳಿ ಕಟ್ಟಿಕೊಳ್ಳಲು ಅದು ಈಗ ಸಂಕಟದ ನಡುವೆಯೂ ಶ್ರಮಿಸಬೇಕಾಗಿದೆ. ಆದರೆ ಮಡಿಲ ಮಾಧ್ಯಮ ಈ ವಿನಾಶವನ್ನು ಸಂಭ್ರಮಿಸುತ್ತಿರುವ ಹಾಗಿದೆ.
ಇಲ್ಲಿಯೂ ಅದು ಟಿಆರ್‌ಪಿ ಗಳಿಸಲು ನೋಡುತ್ತಿದೆ.
ಈ ಮಡಿಲ ಮಾಧ್ಯಮ ನೇಪಾಳದ ವಿನಾಶವನ್ನು, ಅದರ ತೀವ್ರ ದುಃಖವನ್ನು, ಯಾತನೆಯನ್ನು, ಗೋಳನ್ನು, ತ್ಲಲಣವನ್ನು, ತಳಮಳವನ್ನು ತೋರಿಸುತ್ತಿಲ್ಲ. ಬದಲಿಗೆ, ನಾವೇ ಮೊದಲು ಬಂದಿದ್ದೇವೆ ಎಂದು ತೋರಿಸಿಕೊಳ್ಳುವುದು ನಡೆದಿದೆ.
ಪ್ರವಾಹದಿಂದ ಕೊಚ್ಚಿಹೋದ ನೇಪಾಳದಲ್ಲಿ ಕಷ್ಟಪಟ್ಟು ವರದಿಗಾರಿಕೆ ಮಾಡುತ್ತಿದ್ದೇವೆ, ಕೆಸರಲ್ಲಿ ನಮ್ಮ ಕಾಲು ಹೂತುಹೋಗುತ್ತಿದೆ ಎಂದು ಡ್ರಾಮಾ ಮಾಡಲಾಗುತ್ತಿದೆ.
ಇದು ಎಂಥ ವರದಿಗಾರಿಕೆ? ಇದು ಪ್ರವಾಹದಲ್ಲಿ ಕೊಚ್ಚಿಹೋದವರ, ಪ್ರಾಣ ಕಳೆದುಕೊಂಡವರ ಕುರಿತ ಅಣಕು ಪ್ರದರ್ಶನದಂತೆ ಕಾಣುತ್ತಿರುವುದು ಕೂಡ ಟಿಆರ್‌ಪಿ ಮತ್ತಲ್ಲಿರುವ ಈ ಜನರಿಗೆ ತಿಳಿಯುತ್ತಿಲ್ಲವೆ?
ಭಾರತೀಯ ಮಾಧ್ಯಮಗಳು ದುರಂತವನ್ನು ಆನಂದಿಸುತ್ತಿರುವುದು ಇದೇ ಮೊದಲಲ್ಲ. ಯಾವುದೇ ರೀತಿಯ ದುರಂತ ಸಂಭವಿಸಿದಾಗ ಲೆಲ್ಲಾ ಅವರ ಈ ಹೊಲಸು ಆಟವನ್ನು ನೋಡುವಂತಾಗುತ್ತದೆ.
ಅದು ಯುದ್ಧವಾಗಲಿ ಅಥವಾ ನೈಸರ್ಗಿಕ ವಿಕೋಪವಾಗಲಿ, ಈ ಮಡಿಲ ಮಾಧ್ಯಮಗಳು ಬಲಿಪಶುಗಳು ಮತ್ತು ಬದುಕುಳಿದವರ ಗಾಯಗಳಿಗೆ ಉಪ್ಪು ಸವರಲು ಧಾವಿಸುತ್ತವೆ.
ಶವಗಳ ಎದುರಲ್ಲಿ ಲಾಭ ಹುಡುಕುವ, ಶವಗಳನ್ನು ತೋರಿಸಿ ತಮ್ಮ ಆಟವಾಡುವ ಅಸಭ್ಯತನ ಇದು.
ಇದು ವರದಿಗಾರಿಕೆಯಲ್ಲ. ನೋಡಿದವರಿಗೇ ಅಸಹ್ಯವೆನ್ನಿಸುವಂಥ ನಟನಾ ಪ್ರದರ್ಶನ.
ಇವರಾರಿಗೂ ಜನರ ಅವಸ್ಥೆಯೇನಾಗಿದೆ, ಯುದ್ಧದ ಹೊತ್ತಲ್ಲಿನ, ಪ್ರವಾಹದ ಹೊತ್ತಲ್ಲಿನ ಪರಿಸ್ಥಿತಿ ಏನು, ಸಾವಿರಾರು ಸಾವುಗಳ ನಂತರದ ಕಳವಳ ಎಂಥದು ಇವಾವುದೂ ಮುಖ್ಯವಲ್ಲವೇ ಅಲ್ಲ.
ಬದಲಿಗೆ, ನಾವೇ ಇಲ್ಲಿ ಮೊದಲು ಬಂದಿದ್ದೇವೆ ಎನ್ನುತ್ತ, ಭಯಾನಕ ಗ್ರಾಫಿಕ್ಸ್, ಜೋರಾದ ಹಿನ್ನೆಲೆ ಸಂಗೀತ, ಎಐ ದೃಶ್ಯಗಳು, ಕಿರುಚುವುದು ಹೀಗೆ ಜನರ ಮುಂದೆ ಅಗ್ಗದ ಪ್ರದರ್ಶನ ಮಾಡಲಾಗುತ್ತದೆ.
ನೇಪಾಳದಲ್ಲಿ ನಡೆದ ದುರಂತದ ನಂತರ, ಹಲವಾರು ಚಾನೆಲ್‌ಗಳ ವರದಿಗಾರರು ಬಂದರು.
ಆದರೆ, ಬಂದ ನಂತರ ಮಾಡಿದ್ದೇನು? ಅದೇ ನಾಟಕ, ಸಂವೇದನೆಯೇ ಇಲ್ಲದ ಅದೇ ಗಿಮಿಕ್.
ಇದು ವರದಿಗಾರಿಕೆ ಖಂಡಿತ ಅಲ್ಲ. ಬದಲಾಗಿ ಜನರ ಸಾವುಗಳನ್ನು ಮಾರಿಕೊಳ್ಳುವ ಅತ್ಯಂತ ಹೊಲಸು ದಂಧೆ.
ಇದು ಈ ದೇಶದ ಪತ್ರಿಕೋದ್ಯಮ ಮುಟ್ಟಿರುವ ದುರವಸ್ಥೆ.
ಇಂಥ ನಾಟಕವಾಡುವಾಗ ಇವರಿಗೆ ಕಿಂಚಿತ್ತೂ ನಾಚಿಕೆಯಾಗುವುದಿಲ್ಲವೆ? ಪಶ್ಚಾತ್ತಾಪವಾಗುವುದಿಲ್ಲವೆ?
ದುರಂತದಲ್ಲಿ ಜೀವ ಕಳೆದುಕೊಂಡವರನ್ನು ಅಣಕಿಸುವುದರಿಂದ ಮಾತ್ರ ಟಿಆರ್‌ಪಿ ಬರುವಷ್ಟು ಈ ಚಾನೆಲ್‌ಗಳು ಬರಗೆಟ್ಟು ಹೋಗಿವೆಯೇ?
ಮಡಿಲ ಮಾಧ್ಯಮದ ಈ ಜನರಿಗೆ ವಿಪತ್ತಿನಿಂದ ಸತ್ತವರು ಕಾಣಿಸುವುದಿಲ್ಲ, ನಿರಾಶ್ರಿತ ಮಕ್ಕಳು ಕಾಣಿಸುವುದಿಲ್ಲ. ತಮ್ಮ ಮಕ್ಕಳನ್ನು ಹುಡುಕುತ್ತಿರುವ ತಾಯಂದಿರು ಕಾಣಿಸುವುದಿಲ್ಲ.
ಛಿದ್ರ ಛಿದ್ರವಾಗಿ ಹೋಗಿರುವ ಬದುಕು ಕಾಣಿಸುವುದಿಲ್ಲ.
ಆದರೆ, ಅಲ್ಲೆಲ್ಲೋ ಕಲ್ಲಿನಲ್ಲಿ ಶಿವನ ಚಿತ್ರ ಕಾಣಿಸುತ್ತದೆ ಮತ್ತು ಅದು ಅವರಿಗೆ ದೊಡ್ಡ ಮತ್ತು ಅತ್ಯಂತ ವಿಶೇಷ ಸುದ್ದಿಯಾಗುತ್ತದೆ.
ನೇಪಾಳದಲ್ಲಿ ಒಂದೆಡೆ ಅಂಥ ಪ್ರವಾಹದ ನಡುವೆಯೂ ಅತಿ ವೇಗದ ನೀರು ಮತ್ತು ಕೆಸರನ್ನು ಸಹ ತಡೆದುಕೊಂಡು ಒಂದು ಮನೆ ಉಳಿಯಿತು. ಆ ಮನೆಯೊಳಗಿದ್ದವರ ಪ್ರಾಣಗಳು ಉಳಿದವು.
ಆದರೆ ಈ ಮಡಿಲ ಮಾಧ್ಯಮಗಳು ಹೋಗಿ, ಈ ಮನೆ ಹಾಗೆಯೇ ಉಳಿಯುವಿಕೆಗೆ ಧಾರ್ಮಿಕ ಕಾರಣಗಳನ್ನು ನೀಡಿದವು. ಆ ಮನೆ ಉಳಿಯಲು ಕಾರಣ ಅದನ್ನು ಕಟ್ಟಿದ ರೀತಿ ಎಂದು ಯಾರೂ ಹೇಳಲು ಅವರು ಬಯಸಲಿಲ್ಲ. ಆ ಮನೆಯನ್ನು ಉಳಿಸಿದ್ದು ವಿಜ್ಞಾನ ಎಂದು ಹೇಳಲು ಬಯಸಲಿಲ್ಲ.
ಈ ಮನೆಯನ್ನು ಅಲ್ಲಿನ ಸಾಂಪ್ರದಾಯಿಕ ಮನೆಗಳಿಗಿಂತ ಭಿನ್ನವಾಗಿ, ಉಕ್ಕು ಮತ್ತು ಸಿಮೆಂಟಿನಿಂದ ಕಟ್ಟಲಾಗಿದೆ.ಅದರ ಕಂಬಗಳು, ತೊಲೆಗಳು ಮತ್ತು ಅಡಿಪಾಯ ಹಾಗಿದ್ದುದರಿಂದ, ನೀರು ಮತ್ತು ಮಣ್ಣಿನ ಬಲವಾದ ಹರಿವು ಮನೆಗೆ ಅಪ್ಪಳಿಸಿದಾಗಲೂ, ಮನೆಯ ಗಟ್ಟಿಮುಟ್ಟಾದ ಕಬ್ಬಿಣ ಮತ್ತು ಕಾಂಕ್ರಿಟ್ ರಚನೆ ಅದೆಲ್ಲ ಬಲವನ್ನು ತಡೆದುಕೊಂಡು ಒತ್ತಡವನ್ನು ನೆಲಕ್ಕೆ ವರ್ಗಾಯಿಸುತ್ತದೆ ಎಂಬುದನ್ನು ಹೇಳುವುದು ಅವರಿಗೆ ಬೇಕಿರಲಿಲ್ಲ.
ನೀರು ಮತ್ತು ಶಿಲಾಖಂಡರಾಶಿಗಳು ಹಾದುಹೋಗುವ ಹಾದಿಯಲ್ಲಿರದೆ ಕೊಂಚ ಬದಿಗೆ ಇತ್ತೆಂಬ ಕಾರಣದಿಂದಲು ಆ ಮನೆ ಉಳಿಯುವುದು ಸಾಧ್ಯವಾಯಿತು.
ನೀರು ಮತ್ತು ಶಿಲಾಖಂಡರಾಶಿಗಳು ಅದಕ್ಕೆ ಬಡಿದು ನಂತರ ಕವಲಾಗಿ ಒಡೆದು ಹರಿದವು.
ಅಲ್ಲದೆ, ಆಗಲೇ ಸಂಗ್ರಹವಾಗಿದ್ದ ಮಣ್ಣು ಕೂಡ ಮನೆಯ ಮುಂದೆ ಒಂದು ಸಣ್ಣ ಇಳಿಜಾರನ್ನು ಸೃಷ್ಟಿಸಿ, ಒಳಬರುವ ನೀರನ್ನು ಮನೆಯಿಂದ ಬೇರೆಡೆಗೆ ತಿರುಗಿಸಿತು. ಹೀಗಾಗಿ ಆ ಮನೆ ಉಳಿದಿದೆ. ಆದರೆ ಸತ್ಯ ಹೇಳುವುದು ಈ ಮಾಧ್ಯಮಗಳಿಗೆ ಬೇಕಿರಲಿಲ್ಲ.
ಒಂದೆಡೆ ಶವಗಳನ್ನು ಬಳಸಿಕೊಂಡು ಟಿಆರ್‌ಪಿ ಗಳಿಸಲು ನೋಡಲಾಗುತ್ತದೆ. ಇನ್ನೊಂದೆಡೆ, ಧಾರ್ಮಿಕ ಅಂಶಗಳನ್ನು ಬಳಸಿ, ಜನರ ಭಾವನೆಗಳ ಜೊತೆ ಆಟವಾಡಿ ಟಿಆರ್‌ಪಿ ಬಾಚಲು ನೋಡಲಾಗುತ್ತದೆ.
ಆದರೆ ಇದು ಅತ್ಯಂತ ಆಘಾತಕಾರಿ ಮತ್ತು ಅಪಾಯಕಾರಿ ವಾಸ್ತವವಾಗಿದೆ.
ನೇಪಾಳದಲ್ಲಿ ಸಾವಿನ ಸಂಖ್ಯೆ ಒಂದು ಸಾವಿರ ಮೀರಿದೆ.
ಹಲವು ಸಾವಿರ ಜನರು ಇನ್ನೂ ಕಾಣೆಯಾಗಿದ್ದಾರೆ ಮತ್ತು ಉಳಿದವರು ಮತ್ತೊಂದು ವಿಪತ್ತಿನ ನಿರೀಕ್ಷೆಯಲ್ಲಿ ಭಯಪಡುತ್ತಿದ್ದಾರೆ.
ಆದರೆ ಇಲ್ಲಿ ಈ ಮತಿಗೇಡಿ, ಲಜ್ಜೆಗೇಡಿ ಮಡಿಲ ಮಾಧ್ಯಮಗಳು ತಮ್ಮ ವರದಿಗಾರಿಕೆಯ ವೀರಾವೇಶದ ಪ್ರದರ್ಶನ ಮಾಡುತ್ತಿವೆ, ಅಸಹ್ಯವಾಗುತ್ತಿವೆ. ಎಲ್ಲವನ್ನೂ ಸೆನ್ಸೇಷನಲ್ ಮಾಡುವ ಹುಚ್ಚು ಆಟದಲ್ಲಿ ತೊಡಗಿವೆ ಮತ್ತು ಅದನ್ನು ಟಿಆರ್‌ಪಿಯ ಮೂಲವಾಗಿ ಬಳಸುತ್ತಿವೆ.
ಮಾಧ್ಯಮ ಜನರ ಬಗ್ಗೆ ಜನರ ಸ್ಥಿತಿಯ ವಾಸ್ತವದ ಬಗ್ಗೆ ಹೇಳುವುದನ್ನು ನಿಲ್ಲಿಸಿ, ಪ್ರದರ್ಶನವಾಗಲು ಶುರುವಾದರೆ ಏನಾಗುತ್ತದೆ ಎಂಬುದು ಇಲ್ಲಿ ಕಾಣುತ್ತಿದೆ.
ಇತರರ ನೋವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ಹೊರತು, ಇಂಥ ವರದಿಗಾರಿಕೆಯಿಂದ ಏನು ಪ್ರಯೋಜನ?
ಜನರ ಬದುಕನ್ನು ಮುಟ್ಟಿ ಮಾತಾಡಿಸಲಾರದ ಅವು ಯಾವ ರೀತಿಯ ಪತ್ರಿಕೋದ್ಯಮ?
ಇವರ ಅಸಹ್ಯ ರೀತಿಗೆ, ಮಾಧ್ಯಮದ ಹೆಸರಲ್ಲಿನ ಇವರ ಅಮಾನವೀಯ ನಾಟಕಕ್ಕೆ ಧಿಕ್ಕಾರ ಹೇಳಬೇಕಿದೆ.






