‘ವನತಾರಾ’ ನಿಜವಾಗಿಯೂ ಅಭಯಾರಣ್ಯವೇ ಅಥವಾ ಅಂಬಾನಿಗಳ ಜಾಗತಿಕ ಪ್ರತಿಷ್ಠೆ ಬೆಳೆಸುವ ಕೇಂದ್ರವೇ?

ಪ್ರಧಾನಿ ಮೋದಿ ಈ ವರ್ಷ ಮಾರ್ಚ್‌ನಲ್ಲಿ ವನತಾರಾ ಉದ್ಘಾಟಿಸಿ ವನ್ಯಜೀವಿ ಸಂರಕ್ಷಣೆಗಾಗಿ ಅಂಬಾನಿಗಳು ಪ್ರಯತ್ನಿಸುತ್ತಿರುವುದಾಗಿ ಹೊಗಳಿದ್ದರು. ಮಡಿಲ ಮೀಡಿಯಾಗಳು ಅದನ್ನು ಇನ್ನೂ ವಿಜೃಂಭಿಸಿ ತೋರಿಸಿದವು. ಆದರೆ, ಅಂತರ್‌ರಾಷ್ಟ್ರೀಯ ಮಾಧ್ಯಮಗಳು ಮತ್ತು ಪರಿಸರವಾದಿಗಳು ‘ವನತಾರಾ’ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದು ನಿಜವಾಗಿಯೂ ಅಭಯಾರಣ್ಯವೇ ಅಥವಾ ಅಂಬಾನಿಗಳ ಖಾಸಗಿ ಮೃಗಾಲಯವೇ ಎಂಬ ಪ್ರಶ್ನೆ ಎದ್ದಿದೆ.
ಈವರ್ಷ ಮಾರ್ಚ್ 13ರಂದು ಜರ್ಮನ್ ಪತ್ರಿಕೆ ‘ಸುಡ್ಯೂಷ್ ಜೈಟಂಗ್’ ‘ವಿಶ್ವದ ಅತಿದೊಡ್ಡ ಮೃಗಾಲಯ’ ಎಂಬ ಶೀರ್ಷಿಕೆಯ ಕವರ್ ಪೇಜ್ ಸ್ಟೋರಿ ಪ್ರಕಟಿಸಿತು. ಆದರೆ ಅದು ಯಾವುದೋ ಮೃಗಾಲಯದ ಕುರಿತ ವರದಿಯಾಗಿರಲಿಲ್ಲ. ಬದಲಿಗೆ, ಗುಜರಾತಿನ ಜಾಮ್‌ನಗರದಲ್ಲಿನ ಅನಂತ್ ಅಂಬಾನಿಯ ‘ವನತಾರಾ’ ಕುರಿತದ್ದಾಗಿತ್ತು.
ಸುಡ್ಯೂಷ್ ಜೈಟಂಗ್ ಮತ್ತು ವೆನೆಝುವೆಲಾದ Armando.info ನಡೆಸಿದ ಜಂಟಿ ತನಿಖೆ 32 ದೇಶಗಳಿಂದ 53 ರಫ್ತುದಾರರ ಮೂಲಕ 39,000ಕ್ಕೂ ಹೆಚ್ಚು ಕಾಡು ಪ್ರಾಣಿಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆ ಎಂಬುದನ್ನು ಬಯಲು ಮಾಡಿದೆ.
ಅವುಗಳಲ್ಲಿ ಒರಾಂಗುಟನ್‌ಗಳು ಮತ್ತು ಪರ್ವತ ಗೊರಿಲ್ಲಾಗಳಂಥ 11,000 ಅಳಿವಿನಂಚಿನಲ್ಲಿರುವ ಪ್ರಭೇದಗಳು ಕೂಡ ಸೇರಿವೆ.
ಇದು ರಕ್ಷಣೆ ಮತ್ತು ಪುನರ್ವಸತಿ ಕೇಂದ್ರದ ಸೋಗಿನಲ್ಲಿ ನಡೆಯುತ್ತಿರುವ ಅತಿದೊಡ್ಡ ಅಕ್ರಮ ವನ್ಯಜೀವಿ ವ್ಯಾಪಾರವಾಗಿರಬಹುದು ಎಂಬ ಅನುಮಾನಗಳು ಎದ್ದಿವೆ.
ಮೋದಿ ಈ ವರ್ಷ ಮಾರ್ಚ್‌ನಲ್ಲಿ ವನತಾರಾ ಉದ್ಘಾಟಿಸಿದರು. ವನ್ಯಜೀವಿ ಸಂರಕ್ಷಣೆಗಾಗಿ ಅಂಬಾನಿಗಳು ಪ್ರಯತ್ನಿಸುತ್ತಿರುವುದಾಗಿ ಅವರು ಹೊಗಳಿದರು. ಮಡಿಲ ಮೀಡಿಯಾಗಳು ಅದನ್ನು ಇನ್ನೂ ವಿಜೃಂಭಿಸಿ ತೋರಿಸಿದವು.ಆದರೆ, ಅಂತರ್‌ರಾಷ್ಟ್ರೀಯ ಮಾಧ್ಯಮಗಳು ಮತ್ತು ಪರಿಸರವಾದಿಗಳು ಅದನ್ನು ಪ್ರಶ್ನಿಸಿದ್ದಾರೆ.
ಇದು ನಿಜವಾಗಿಯೂ ಅಭಯಾರಣ್ಯವೇ ಅಥವಾ ಅಂಬಾನಿಗಳ ಖಾಸಗಿ ಮೃಗಾಲಯವೇ ಎಂಬ ಪ್ರಶ್ನೆ ಎದ್ದಿದೆ.
ಅಕ್ರಮ ವನ್ಯಜೀವಿ ವ್ಯಾಪಾರದ ತಾಣಗಳಾದ ಕಾಂಗೋ, ವೆನೆಝುವೆಲಾ ಮತ್ತು ಆಗ್ನೇಯ ಏಶ್ಯದಿಂದ ಪ್ರಾಣಿಗಳನ್ನು ತರಲಾಗಿದೆ ಎಂದು ವರದಿಗಳು ಹೇಳುತ್ತಿವೆ.
ಸುಪ್ರೀಂ ಕೋರ್ಟ್ ನೇಮಿಸಿದ ಎಸ್‌ಐಟಿ, ಅಳಿವಿನಂಚಿನಲ್ಲಿರುವ ಪ್ರಭೇದಗಳ ಅಂತರ್‌ರಾಷ್ಟ್ರೀಯ ವ್ಯಾಪಾರ ಕಾನ್ಫರೆನ್ಸ್‌ನ (CITES) ನಿಯಮಗಳು ಮತ್ತು ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಲಾಗಿರುವ ಆರೋಪಗಳ ತನಿಖೆ ಮಾಡುತ್ತಿದೆ.
ಗೌರಿ ಆನೆಯ ಕಥೆಯಿಂದ ಹಿಡಿದು, ಅಸ್ಸಾಂ, ತ್ರಿಪುರಾ ಮತ್ತು ಕೊಲ್ಲಾಪುರದಿಂದ ಆನೆಗಳ ವಿವಾದಾತ್ಮಕ ಸ್ಥಳಾಂತರದವರೆಗೆ ವನತಾರಾ ವಿವಾದಗಳಿಗೆ ತುತ್ತಾಗಿದೆ.
ಅದು ಅಡ್ಡಹಾದಿಯಲ್ಲಿ ಸಾಗಿದೆಯೇ ಎಂಬ ಸಂಶಯಗಳಿವೆ.
34 ವರ್ಷಗಳಿಂದ ಕೊಲ್ಲಾಪುರದ ಮಠದಲ್ಲಿದ್ದ ಆನೆ ಮಹಾದೇವಿಯನ್ನು ಚಿಕಿತ್ಸೆಗೆಂದು ವನತಾರಾಕ್ಕೆ ಕರೆದೊಯ್ಯಲಾಯಿತು. ಅದು ಮತ್ತೆ ಹಿಂದಿರುಗಲಿಲ್ಲ.
ವನತಾರಾಕ್ಕೆ ಹೋಗುವ ದಾರಿಯಲ್ಲಿ ತ್ರಿಪುರಾ ಆನೆ ಪ್ರತಿಮಾ ಎಲ್ಲಿಗೆ ಹೋಯಿತೆಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ವನತಾರಾದಲ್ಲಿದ್ದ 200 ಆನೆಗಳನ್ನು ಎಲ್ಲಿಂದ ತರಲಾಯಿತು ಎಂಬ ಪ್ರಶ್ನೆ ಕೂಡ ಸಣ್ಣದಲ್ಲ.
ಜರ್ಮನ್ ಪತ್ರಿಕೆಯ ತನಿಖಾ ವರದಿ ಪ್ರಪಂಚದಾದ್ಯಂತದ ಪರಿಸರವಾದಿಗಳನ್ನು ದಿಗ್ಭ್ರಮೆಗೊಳಿಸಿದೆ.
ಜಾಗತಿಕ ಮೀಡಿಯಾಗಳು ವನತಾರಾವನ್ನು ಬಿಲಿಯನೇರ್‌ಗಳ ಖಾಸಗಿ ಮೃಗಾಲಯ ಎಂದು ಟೀಕಿಸತೊಡಗಿವೆ.
ಗೌರಿ ಎಂಬ ಆನೆಯ ಬಗ್ಗೆ ಪ್ರಶ್ನೆಯೆದ್ದಿದೆ. ವನತಾರಾ ವೆಬ್‌ಸೈಟ್ ಪ್ರಕಾರ, ಗೌರಿ ಎಂಬ ಆನೆಯನ್ನು ರಾಜಸ್ಥಾನದ ನಗರ ಪ್ರದೇಶದ ಬೀದಿಗಳಲ್ಲಿ ಭಿಕ್ಷಾಟನೆಗೆ ಬಳಸಲಾಗುತ್ತಿತ್ತು.
ಚಿಕಿತ್ಸೆಗಾಗಿ ಜಾಮ್‌ನಗರಕ್ಕೆ ಕರೆತಂದಾಗ ಅದು ಸಂಧಿವಾತಕ್ಕೆ ತುತ್ತಾಗಿತ್ತು ಮತ್ತು ದೃಷ್ಟಿ ಕಳೆದುಕೊಳ್ಳುವ ಹಂತದಲ್ಲಿತ್ತು. ಅದಕ್ಕೆ ಚಿಕಿತ್ಸೆ ಮಾಡಬೇಕು ಎಂಬುದರಿಂದ ಆನೆಗಳ ರಕ್ಷಣೆ ಮತ್ತು ಪುನರ್ವಸತಿ ಆಲೋಚನೆ ಹುಟ್ಟಿತು ಎಂಬುದು ಆ ವೆಬ್‌ಸೈಟ್ ಹೇಳುವ ಕಥೆ.
2015-16ರಲ್ಲಿ ಜಾಮ್‌ನಗರದಲ್ಲಿ ರಾಧಾ ಕೃಷ್ಣ ದೇವಾಲಯ ಆನೆ ಕಲ್ಯಾಣ ಟ್ರಸ್ಟ್ ಶುರು ಮಾಡಲಾಯಿತು.ಅದು ವಿಶ್ವದ ಅತಿದೊಡ್ಡ ಆನೆ ಆಸ್ಪತ್ರೆ ಎಂದು ಹೆಸರಾಯಿತು. 2020ರಲ್ಲಿ ರಾಧಾ ಕೃಷ್ಣ ದೇವಾಲಯ ಆನೆ ಕಲ್ಯಾಣ ಟ್ರಸ್ಟ್ ಜೊತೆಗೆ, ಜಾಮ್‌ನಗರದಲ್ಲಿ ಮತ್ತೊಂದು ಸಂಸ್ಥೆ ತೆರೆಯಲಾಯಿತು. ಅದು ಪ್ರಾಣಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರ. ನಂತರ, ರಾಧಾ ಕೃಷ್ಣ ದೇವಾಲಯ ಆನೆ ಕಲ್ಯಾಣ ಟ್ರಸ್ಟ್ ಅನ್ನು ಈ ಪುನರ್ವಸತಿ ಕೇಂದ್ರದೊಂದಿಗೆ ವಿಲೀನಗೊಳಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ, 2.7 ಚದರ ಕಿ.ಮೀ. ವಿಸ್ತೀರ್ಣದಲ್ಲಿ ಹರಡಿರುವ ವನತಾರಾ ರಿಲಯನ್ಸ್‌ನ ಜಾಮ್‌ನಗರ ಸಂಸ್ಕರಣಾಗಾರದ ಬಳಿಯ ಬಫರ್ ವಲಯದ ಒಂದು ಭಾಗವಾಗಿದೆ. ಇದನ್ನು ಕ್ರಮೇಣ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರವಾಗಿ ಪರಿವರ್ತಿಸಲಾಗಿದೆ.
ಈ ಯೋಜನೆಯ ಸ್ಥಳದ ಬಗ್ಗೆ ಅನೇಕ ತಜ್ಞರು ಪ್ರಶ್ನೆಗಳನ್ನು ಎತ್ತುತ್ತಾರೆ.
ಲಂಡನ್ ಮೂಲದ ‘ದಿ ಟೈಮ್ಸ್’ ವರದಿಯ ಪ್ರಕಾರ, ವನತಾರಾ ತೈಲ ಸಂಸ್ಕರಣಾಗಾರ ಸಂಕೀರ್ಣದ ಬಳಿ ಇದ್ದು, ಇದು ಶುಷ್ಕ ಮತ್ತು ಬಿಸಿ ಪ್ರದೇಶವಾಗಿದೆ. ಇಲ್ಲಿ ಪ್ರಾಣಿಗಳ ನೈಸರ್ಗಿಕ ಪುನರ್ವಸತಿಗೆ ಯಾವುದೇ ವ್ಯವಸ್ಥಿತ ಪರಿಸರ ಇಲ್ಲ. ಅದು ತೈಲ ಸಂಸ್ಕರಣಾಗಾರಕ್ಕೆ ಹತ್ತಿರದಲ್ಲಿರುವ ಬಗ್ಗೆ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ವನತಾರಾ ಬಗ್ಗೆ ಇದರ ಹೊರತಾಗಿ ಇನ್ನೂ ಹಲವು ವಿವಾದಗಳಿವೆ.
ಭಾರತಕ್ಕೆ ಅದು ಅಕ್ರಮವಾಗಿ ವನ್ಯಜೀವಿಗಳನ್ನು ತಂದಿದೆ ಎಂಬ ಆರೋಪಗಳೆದ್ದಿವೆ. ನಿಯಮಗಳ ಉಲ್ಲಂಘನೆ ಬಗ್ಗೆ ಆರೋಪಿಸಲಾಗಿದೆ.
1973ರಲ್ಲಿ ವಾಶಿಂಗ್ಟನ್‌ನಲ್ಲಿ ನಡೆದ ಅಳಿವಿನಂಚಿನಲ್ಲಿರುವ ಪ್ರಭೇದಗಳ ಅಂತರ್‌ರಾಷ್ಟ್ರೀಯ ವ್ಯಾಪಾರ ಕಾನ್ಫರೆನ್ಸ್‌ನಲ್ಲಿ ವಿವಿಧ ದೇಶಗಳು ಭಾಗವಹಿಸಿದ್ದವು.
ಅಳಿವಿನಂಚಿನಲ್ಲಿರುವ ಪ್ರಾಣಿಗಳ ಅಕ್ರಮ ಬೇಟೆ ಮತ್ತು ಕಳ್ಳಸಾಗಣೆಯಿಂದ ತಡೆಯುವುದು ಈ ಸಮಾವೇಶದ ಉದ್ದೇಶವಾಗಿತ್ತು. ಅದರಲ್ಲಿ ವನ್ಯಜೀವಿಗಳಿಗೆ ಸಂಬಂಧಿಸಿ ಮೂರು ಅನುಬಂಧಗಳನ್ನು ರಚಿಸಲಾಯಿತು.
ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಅನುಬಂಧ ಒಂದರಲ್ಲಿ ಸೇರಿಸಲಾಗಿದ್ದು, ಅವುಗಳ ವ್ಯಾಪಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಅನುಬಂಧ ಎರಡರಲ್ಲಿ ಅಳಿವಿನ ಅಂಚಿನಲ್ಲಿಲ್ಲದ ಪ್ರಾಣಿಗಳ ದೊಡ್ಡ ಪ್ರಮಾಣದ ವ್ಯಾಪಾರ, ಅವುಗಳ ಅಳಿವಿನ ಅಪಾಯದ ಬಗ್ಗೆ ಎಚ್ಚರಿಸಲಾಗಿದೆ.
ಮೂರನೇ ಅನುಬಂಧ, ಒಂದು ನಿರ್ದಿಷ್ಟ ದೇಶದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಬಗ್ಗೆ ಹೇಳಿದೆ. ಅಂಥ ಪ್ರಭೇದಗಳನ್ನು ಉಳಿಸಲು ಒಂದು ದೇಶ ಇತರ ದೇಶಗಳಿಂದ ಸಹಾಯ ಕೇಳಬಹುದು.
ಇದೆಲ್ಲವನ್ನೂ ವನತಾರಾ ಉಲ್ಲಂಘಿಸಿದೆಯೇ ಎಂಬುದರ ತನಿಖೆ ನಡೆಯುತ್ತಿದೆ.
ಎಪ್ರಿಲ್ 2025ರಲ್ಲಿ ಆಫ್ರಿಕಾ ಜಿಯಾಗ್ರಫಿಕ್ ಒಂದು ವರದಿ ಪ್ರಕಟಿಸಿತು. ಈ ವರದಿಯಲ್ಲಿ, ಆಫ್ರಿಕನ್ ದೇಶ ಕಾಂಗೋದಿಂದ 9 ಚಿಂಪಾಂಜಿಗಳನ್ನು ವನತಾರಾಕ್ಕೆ ತರಲಾಗಿದೆ ಎಂದು ಹೇಳಲಾಗಿದೆ. ಈ ಚಿಂಪಾಂಜಿಗಳು ಸೆರೆಯಲ್ಲಿಡಲಾಗಿತ್ತು ಮತ್ತು ತಾನು ಅವನ್ನು ರಕ್ಷಿಸಿರುವುದಾಗಿ ವನತಾರಾ ಹೇಳುತ್ತಿದೆ. ಆದರೆ ವನತಾರಾದ ಈ ಹೇಳಿಕೆಯ ಬಗ್ಗೆಯೂ ಆಫ್ರಿಕಾ ಜಿಯಾಗ್ರಫಿಕ್ಸ್ ಪ್ರಶ್ನೆಗಳನ್ನೆತ್ತಿದೆ.
ಈ ವರದಿಯ ಪ್ರಕಾರ, ಡಿಸೆಂಬರ್ 2024 ಮತ್ತು ಜನವರಿ 2025ರ ನಡುವೆ, 9 ಚಿಂಪಾಂಜಿಗಳನ್ನು ಕಾಂಗೋದಲ್ಲಿ ಸೆರೆಹಿಡಿದು ಕಿನ್ಶಾಸಾ ಮೃಗಾಲಯಕ್ಕೆ ಕಳಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಯಾವುದೇ ಪಾರದರ್ಶಕತೆ ಇಲ್ಲವೆಂಬುದು ಅದರ ವಾದ.
ಅಲ್ಲಿಂದ ಈ ಚಿಂಪಾಂಜಿಗಳನ್ನು ವನತಾರಾಕ್ಕೆ ಕಳಿಸಲಾಯಿತು.
ಚಿಂಪಾಂಜಿ ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಭೇದವಾಗಿದ್ದು, ಅದರ ವ್ಯಾಪಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಚಿಂಪಾಂಜಿ ಮಾತ್ರವಲ್ಲದೆ, ಗೊರಿಲ್ಲಾ ಸೇರಿದಂತೆ ವಿವಿಧ ಜಾತಿಗಳ 11,000 ಪ್ರಾಣಿಗಳನ್ನು ಅಕ್ರಮವಾಗಿ ವನತಾರಾಕ್ಕೆ ತರಲಾಗಿದೆ ಎಂಬ ಆರೋಪಗಳಿವೆ.
ಕೊಲ್ಲಾಪುರದ ನಂದಿ ಗ್ರಾಮದಲ್ಲಿನ ಜೈನ ಮಠವಾಗಿರುವ ಸ್ವಸ್ತಿ ಶ್ರೀ ಜಿನೇಶ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿ ಸಂಸ್ಥಾನದಲ್ಲಿ ಕಳೆದ 34 ವರ್ಷಗಳಿಂದ ಮಹಾದೇವಿ ಆನೆ ನೆಲೆಸಿತ್ತು. ಆ ಪ್ರದೇಶದ ಅನೇಕ ದೇವಾಲಯಗಳ ಉತ್ಸವಗಳು ಮತ್ತು ಪೂಜೆಗಳಲ್ಲಿ ಭಾಗವಹಿಸುತ್ತಿದ್ದ ಅದು, ಧಾರ್ಮಿಕ ಮತ್ತು ಸಾಮಾಜಿಕ ಮಹತ್ವ ಹೊಂದಿತ್ತು.
ಮಹಾದೇವಿಯನ್ನು ಚಿಕಿತ್ಸೆಗಾಗಿ ವನತಾರಾಕ್ಕೆ ಕಳುಹಿಸಲಾಯಿತು. ಆದರೆ ಒಂದು ತಿಂಗಳ ನಂತರವೂ ಮಹಾದೇವಿ ಹಿಂದಿರುಗದಿದ್ದಾಗ, ಜನ ಸಿಟ್ಟಾದರು. ಪ್ರತಿಭಟನೆಗಳು ನಡೆದವು. ಕಡೆಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದರು.
ಕೊಲ್ಲಾಪುರದ ನಂದನಿ ಕಾಡಿನಲ್ಲಿ ಆನೆ ಪುನರ್ವಸತಿ ಕೇಂದ್ರವನ್ನು ತೆರೆಯಲಿದ್ದು, ಅಲ್ಲಿ ಮಹಾದೇವಿಯನ್ನು ಇರಿಸಲಾಗುವುದು ಎಂಬ ಭರವಸೆ ನೀಡಿದರು.
ಉತ್ತಮ ಆರೈಕೆ ಮತ್ತು ಪುನರ್ವಸತಿಗಾಗಿ ವನತಾರಾ ನಿರ್ವಹಿಸುತ್ತಿರುವ ಜಾಮ್‌ನಗರದಲ್ಲಿನ ರಾಧೆ ಕೃಷ್ಣ ದೇವಾಲಯ ಆನೆ ಕಲ್ಯಾಣ ಟ್ರಸ್ಟ್‌ಗೆ ಸ್ಥಳಾಂತರಿಸುವಂತೆ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು.
ವನತಾರಾ ವಿರುದ್ಧ ಆಕ್ರೋಶ ವ್ಯಕ್ತವಾಗಿರುವುದು ಮಹಾದೇವಿಯ ವಿಷಯದಲ್ಲಿ ಮಾತ್ರ ಅಲ್ಲ.
ತ್ರಿಪುರಾ ಮತ್ತು ಅಸ್ಸಾಮಿನ ಆನೆಗಳನ್ನು ವನತಾರಾಕ್ಕೆ ತರಲಾಗಿರುವ ಬಗ್ಗೆಯೂ ಸ್ಥಳೀಯ ಜನರು ಕೋಪಗೊಂಡಿದ್ದರು.
ಜನವರಿ 2025ರಲ್ಲಿ ಅರುಣಾಚಲ ಪ್ರದೇಶದಿಂದ ಇನ್ನೂ 20 ಆನೆಗಳನ್ನು ರಕ್ಷಿಸಿರುವುದಾಗಿ ವನತಾರಾ ಹೇಳಿಕೊಂಡಿದೆ.
ಫೆಬ್ರವರಿ 16, 2025ರಂದು ತ್ರಿಪುರದಿಂದ 12 ಆನೆಗಳನ್ನು ರಕ್ಷಿಸಿ ವನತಾರಾಕ್ಕೆ ಕಳುಹಿಸಲಾಗುತ್ತಿರುವ ಬಗ್ಗೆ ಹೇಳಲಾಯಿತು. ಅವುಗಳಲ್ಲಿ ಒಂದು ಆನೆ ಪ್ರತಿಮಾ ಮತ್ತು ಅದರ ಮರಿಯನ್ನು ಅಸ್ಸಾಮಿನಲ್ಲಿ ಸಾಗಣೆ ವೇಳೆ ತಡೆಯಲಾಯಿತು. ಪ್ರತಿಮಾ ಮಾಲಕತ್ವದ ದಾಖಲೆಗಳು ಪೂರ್ಣಗೊಂಡಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಪ್ರತಿಮಾ ಸ್ಥಿತಿ ತುಂಬಾ ಕೆಟ್ಟದಾಗಿದ್ದು, ಪ್ರಯಾಣಿಸುವ ಸ್ಥಿತಿಯಲ್ಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು.
ಆ ಸಮಯದಲ್ಲಿ ಅನೇಕ ಎನ್‌ಜಿಒ ಕಾರ್ಯಕರ್ತರು, ವನತಾರಾ ಆನೆಗಳನ್ನು ಖರೀದಿಸಿ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು. ಆದರೆ ಈ ಆರೋಪಗಳಿಗೆ ಯಾವುದೇ ದೃಢವಾದ ಪುರಾವೆಗಳನ್ನು ನೀಡಲಾಗಿಲ್ಲ.
ಸದ್ಯ, ವನತಾರಾದಲ್ಲಿ ದೇಶದ ವಿವಿಧ ಕಡೆಗಳಿಂದ ತರಲಾದ 200ಕ್ಕೂ ಹೆಚ್ಚು ಆನೆಗಳಿವೆ ಎನ್ನಲಾಗಿದೆ.
ಆನೆಗಳ ಇಷ್ಟು ದೊಡ್ಡ ಪ್ರಮಾಣದ ಸ್ಥಳಾಂತರ ಪರಿಸರ ಕಾರ್ಯಕರ್ತರ ಅಚ್ಚರಿಗೆ ಕಾರಣವಾಗಿದೆ.
ತ್ರಿಪುರಾದ ಪ್ರತಿಮಾ ಆನೆ ಸ್ಥಳಾಂತರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಎರಡು ಪಿಐಎಲ್‌ಗಳನ್ನು ಸಲ್ಲಿಸಲಾಗಿದೆ. ಆನೆಗಳು ಮತ್ತಿತರ ಪ್ರಾಣಿಗಳನ್ನು ವನತಾರಾಕ್ಕೆ ದೊಡ್ಡ ಪ್ರಮಾಣದಲ್ಲಿ ವರ್ಗಾಯಿಸುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಕಾರ್ಬನ್ ಕ್ರೆಡಿಟ್ ಬಗ್ಗೆಯೂ ವನತಾರಾ ವಿರುದ್ಧ ಗಂಭೀರ ಆರೋಪಗಳಿವೆ. ಕಾರ್ಬನ್ ಕ್ರೆಡಿಟ್ ಎಂದರೆ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಿಸಲು ನಿಗದಿಪಡಿಸುವ ಒಂದು ಮಿತಿಯಾಗಿದೆ. ಎಷ್ಟು ಪ್ರಮಾಣದ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಿತು ಎಂಬುದರ ಮೇಲೆ ಒಂದು ಸಂಸ್ಥೆಯ ಕಾರ್ಬನ್ ಕ್ರೆಡಿಟ್ ಲೆಕ್ಕಹಾಕಲಾಗುತ್ತದೆ.
ಅಂದಾಜಿನ ಪ್ರಕಾರ, ವನತಾರಾ ವಾರ್ಷಿಕವಾಗಿ 4,300 ಟನ್ ಕಾರ್ಬನ್ ಕ್ರೆಡಿಟ್ ಅನ್ನು ಗಳಿಸುತ್ತದೆ.
ರಿಲಯನ್ಸ್ ಗ್ರೂಪ್ ತನ್ನ ಇಂಗಾಲದ ಹೊರಸೂಸುವಿಕೆಯನ್ನು ತಟಸ್ಥಗೊಳಿಸಲು ಈ ಕಾರ್ಬನ್ ಕ್ರೆಡಿಟ್ ಅನ್ನು ಬಳಸಬಹುದು. ಅಲ್ಲದೆ, ಈ ಕಾರ್ಬನ್ ಕ್ರೆಡಿಟ್ ಅನ್ನು ಇತರ ಕೈಗಾರಿಕೆಗಳಿಗೆ ಸಹ ಮಾರಾಟ ಮಾಡಬಹುದು.
ಆದರೆ, ವನತಾರಾ ಕಾರ್ಬನ್ ಕ್ರೆಡಿಟ್ ವ್ಯಾಪಾರಕ್ಕೆ ಸಂಬಂಧಿಸಿ ಯಾವುದೇ ಡೇಟಾವನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ ಎಂಬ ಆರೋಪವಿದೆ.
ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ವನತಾರಾ ವಿರುದ್ಧದ ಪಿಐಎಲ್ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎಸ್‌ಐಟಿ ರಚಿಸಿದೆ. ನ್ಯಾಯಮೂರ್ತಿ ಚೆಲಮೇಶ್ವರ್ ನೇತೃತ್ವದ ಈ ಎಸ್‌ಐಟಿಯಲ್ಲಿ ಉತ್ತರಾಖಂಡ ಮತ್ತು ತೆಲಂಗಾಣ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್, ಮುಂಬೈನ ಮಾಜಿ ಪೊಲೀಸ್ ಆಯುಕ್ತ ಹೇಮಂತ್ ನಾಗ್ರಾಲೆ ಮತ್ತು ಕಸ್ಟಮ್ಸ್ ಹೆಚ್ಚುವರಿ ಆಯುಕ್ತ ಅನಿಶ್ ಗುಪ್ತಾ ಇದ್ದಾರೆ.
ವನ್ಯಜೀವಿ ರಕ್ಷಣೆ ಕಾಯ್ದೆ 1972 ಮತ್ತು ಅದರ ಅಡಿಯಲ್ಲಿ ಮಾಡಲಾದ ಮೃಗಾಲಯಗಳ ನಿಯಮಗಳ ಅನುಸರಣೆ ಆಗಿದೆಯೇ ಇಲ್ಲವೇ ಎಂಬುದರ ಬಗ್ಗೆ, ಅಳಿವಿನಂಚಿನಲ್ಲಿರುವ ಪ್ರಭೇದಗಳ ಅಂತರ್‌ರಾಷ್ಟ್ರೀಯ ವ್ಯಾಪಾರ ಕಾನ್ಫರೆನ್ಸ್‌ನ (CITES) ನಿಯಮಗಳ ಅನುಸರಣೆ ನಡೆದಿದೆಯೇ ಎಂಬುದರ ಬಗ್ಗೆ, ಪಶುಸಂಗೋಪನೆ, ಪಶುವೈದ್ಯಕೀಯ ಆರೈಕೆ, ಪ್ರಾಣಿ ಕಲ್ಯಾಣದ ಮಾನದಂಡಗಳು, ಮರಣ ಪ್ರಮಾಣ ಮತ್ತು ಅದರ ಕಾರಣಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳ ಅನುಸರಣೆ ಆಗುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ಎಸ್‌ಐಟಿ ಪರಿಶೀಲಿಸಲಿದೆ.
ಹವಾಮಾನ ಪರಿಸ್ಥಿತಿಗಳು ಮತ್ತು ಕೈಗಾರಿಕಾ ವಲಯದ ಬಳಿ ಇರುವ ಸ್ಥಳದ ಬಗ್ಗೆ ಇರುವ ಆರೋಪಗಳು, ಖಾಸಗಿ ಸಂಗ್ರಹ, ಸಂತಾನೋತ್ಪತ್ತಿ, ಸಂರಕ್ಷಣಾ ಕಾರ್ಯಕ್ರಮಗಳು ಮತ್ತು ಜೀವವೈವಿಧ್ಯ ಸಂಪನ್ಮೂಲಗಳ ಬಳಕೆಯ ಬಗ್ಗೆ ಇರುವ ದೂರುಗಳು, ಕಾನೂನಿನ ವಿವಿಧ ನಿಬಂಧನೆಗಳ ಉಲ್ಲಂಘನೆ, ಪ್ರಾಣಿಗಳು ಅಥವಾ ಪ್ರಾಣಿಗಳ ವಸ್ತುಗಳ ವ್ಯಾಪಾರ, ವನ್ಯಜೀವಿ ಕಳ್ಳಸಾಗಣೆ ಇತ್ಯಾದಿಗಳ ಬಗ್ಗೆ ದೂರುಗಳು ಅರ್ಜಿಗಳಲ್ಲಿ ಉಲ್ಲೇಖಿಸಲಾದ ವರದಿಗಳು, ಲೇಖನಗಳನ್ನು ಪರಿಶೀಲಿಸುವಂತೆ ಎಸ್‌ಐಟಿಗೆ ಕೋರ್ಟ್ ಸೂಚಿಸಿದೆ.
ಹಣಕಾಸಿನ ಅಕ್ರಮ, ಹಣ ವರ್ಗಾವಣೆ ಇತ್ಯಾದಿಗಳಿಗೆ ಸಂಬಂಧಿಸಿದ ದೂರುಗಳು ಮತ್ತಿತರ ಆರೋಪಗಳಿಗೆ ಸಂಬಂಧಿಸಿದಂತೆ ಪರಿಶೀಲಿಸುವಂತೆಯೂ ಕೋರ್ಟ್ ಎಸ್‌ಐಟಿಗೆ ನಿರ್ದೇಶನ ನೀಡಿದೆ.
ಸೆಪ್ಟಂಬರ್ 12ರೊಳಗೆ ಎಸ್‌ಐಟಿ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಸುಪ್ರೀಂ ಕೋರ್ಟ್ ಸೆಪ್ಟಂಬರ್ 15ರಂದು ಈ ಪ್ರಕರಣವನ್ನು ವಿಚಾರಣೆ ನಡೆಸಲಿದೆ.
ವನತಾರಾ ವಿರುದ್ಧದ ಆರೋಪಗಳು ಬಹಳ ಗಂಭೀರವಾಗಿವೆ. ಸತ್ಯವೇನು ಎಂಬುದು ಈಗ ಬಯಲಾಗಬೇಕಿದೆ.







