Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಿಬಿ-ಜಿ ರಾಮ್ ಜಿ ಹೆಚ್ಚಿನ ಉದ್ಯೋಗದ...

ವಿಬಿ-ಜಿ ರಾಮ್ ಜಿ ಹೆಚ್ಚಿನ ಉದ್ಯೋಗದ ಹಕ್ಕೋ ಗೊಂದಲಗಳ ಗ್ಯಾರಂಟಿಯೋ?

ಶ್ಯಾಮ್ ಎನ್. ಕಶ್ಯಪ್ಶ್ಯಾಮ್ ಎನ್. ಕಶ್ಯಪ್17 July 2026 10:34 AM IST
share
ವಿಬಿ-ಜಿ ರಾಮ್ ಜಿ ಹೆಚ್ಚಿನ ಉದ್ಯೋಗದ ಹಕ್ಕೋ ಗೊಂದಲಗಳ ಗ್ಯಾರಂಟಿಯೋ?

ಗಂಭೀರ ಸಾರ್ವಜನಿಕ ಚರ್ಚೆಯಿಲ್ಲದೆ ಈ ಕಾಯ್ದೆಯನ್ನು ಚಾಲನೆಗೆ ತಂದ ರೀತಿ ಮತ್ತು ನೀತಿನಿಯಮಗಳಲ್ಲಿರುವ ತಾಂತ್ರಿಕ ಅಂಶಗಳನ್ನು ಗಮನಿಸಿದರೆ, ಇದರ ಉದ್ದೇಶ ತಾಂತ್ರಿಕತೆಯ ಮೂಲಕ ಅಧಿಕಾರ ಕೇಂದ್ರೀಕರಣ ಮತ್ತು ಉದ್ಯೋಗದ ಹೆಸರಿನಲ್ಲಿ ತಾಂತ್ರಿಕ ಮೂಲಸೌಕರ್ಯಗಳಿಗೆ ಆದ್ಯತೆ ಕೊಡುವುದೇ ಎನ್ನುವ ಸಂದೇಹ ಗಾಢವಾಗುತ್ತದೆ. ಉದ್ಯೋಗದ ಭರವಸೆ ತಾಂತ್ರಿಕ ಮರೀಚಿಕೆಯಾಗದೆ, ಶ್ರಮಿಕರ ಕೈಹಿಡಿಯುವುದು ಇಂದಿನ ತುರ್ತು. ಇದು ಈಡೇರದಿದ್ದರೆ ವಿಬಿ-ಜಿ ರಾಮ್ ಜಿಯು ಈಗಾಗಲೇ ತೊಂದರೆಯಲ್ಲಿರುವ ಬಡ ಕಾರ್ಮಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವುದರಲ್ಲಿ ಸಂಶಯವಿಲ್ಲ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಬದಲಿಗೆ ಘೋಷಿಸಲಾಗಿರುವ ’ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜ್‌ಗಾರ್ ಆಂಡ್ ಆಜೀವಿಕ ಮಿಷನ್ (ಗ್ರಾಮೀಣ್)’ (ವಿಬಿ-ಜಿ ರಾಮ್ ಜಿ) ಕಾಯ್ದೆಯು ಜುಲೈ 1ರಿಂದ ಅಧಿಕೃತವಾಗಿ ಚಾಲನೆಗೆ ಬರಲಿದೆ. 26 ಕೋಟಿಗೂ ಹೆಚ್ಚು ನೋಂದಾಯಿತ ಗ್ರಾಮೀಣ ಕಾರ್ಮಿಕರ ಜೀವನೋಪಾಯಕ್ಕೆ ಸಂಬಂಧಿಸಿದ ಈ ಹೊಸ ಕಾಯ್ದೆಯ ಕರಡು ನಿಯಮಗಳನ್ನು ಮೇ 22, 2026ರಂದು ಪ್ರಕಟಿಸಲಾಗಿದೆ. ಮೇಲ್ನೋಟಕ್ಕೆ ವಿಬಿ-ಜಿ ರಾಮ್ ಜಿ, ಉದ್ಯೋಗಖಾತ್ರಿ ಯೋಜನೆಯ ಚೌಕಟ್ಟನ್ನೇ ಉಳಿಸಿಕೊಂಡಿದೆ. ಗ್ರಾಮಸಭೆಯಲ್ಲಿ ಯೋಜನೆಯ ಕ್ರಿಯಾಯೋಜನೆಯ ಅನುಮೋದನೆ, ಗ್ರಾಮಪಂಚಾಯತ್ ಮೂಲಕ ಅನುಷ್ಠಾನ, ಬ್ಯಾಂಕ್ ಖಾತೆಗೆ ನೇರ ವೇತನ ಪಾವತಿ, ಇವು ವಿಬಿ-ಜಿ ರಾಮ್ ಜಿಯಲ್ಲೂ ಮುಂದುವರಿಯುತ್ತದೆ. ಹಿಂದೆಯೇ ಉದ್ಯೋಗ ಚೀಟಿಗಳನ್ನು ಪಡೆದ, ಇ-ಕೈವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದ ಕಾರ್ಮಿಕರು ಸಹಜವಾಗಿಯೇ ವಿಬಿ-ಜಿ ರಾಮ್ ಜಿಯಲ್ಲಿ ಕೆಲಸ ಪಡೆದುಕೊಳ್ಳಬಹುದು ಎಂದೂ ಸರಕಾರ ಹೇಳಿದೆ. ಆದರೆ ವಿಬಿ-ಜಿ ರಾಮ್ ಜಿಯ ಕೆಲವು ಅಂಶಗಳು ಹಿಂದಿನ ಯೋಜನೆಗಿಂತ ಮೂಲಭೂತವಾಗಿ ಭಿನ್ನವಾಗಿದೆ.

ಗ್ಯಾರಂಟಿಯ ದ್ವಂದ್ವ

ಉದ್ಯೋಗ ಖಾತರಿಯಲ್ಲಿದ್ದ ಪ್ರಮುಖ ಅಂಶವೆಂದರೆ ವರ್ಷದ ಯಾವ ದಿನವಾದರೂ ಕೆಲಸವನ್ನು ಕೇಳುವ ಕಾರ್ಮಿಕರ ಅಧಿಕಾರ, 15 ದಿನಗಳಲ್ಲಿ ಕೆಲಸ ಒದಗಿಸುವ ಸರಕಾರದ ಜವಾಬ್ದಾರಿ. ವಿಬಿ-ಜಿ ರಾಮ್‌ಜಿ ಅಡಿಯಲ್ಲಿ ಈ ಅಧಿಕಾರ ಸಡಿಲಗೊಳ್ಳಲಿದೆ, ಹೊಣೆಗಾರಿಕೆಯಲ್ಲಿ ದ್ವಂದ್ವವಿದೆ. ಮೊದಲಿಗೆ ಕೇಂದ್ರ ಸರಕಾರ ನಿಗದಿಪಡಿಸುವ ಬಜೆಟ್ ಮಿತಿಯ ಒಳಗೇ ರಾಜ್ಯಗಳು ಯೋಜನೆಗಳನ್ನು ರೂಪಿಸಬೇಕು ಎನ್ನುವ ಕಟ್ಟುಪಾಡು. ಎರಡನೆಯದು: ಕೇಂದ್ರಸರಕಾರ ಸಂಪೂರ್ಣವಾಗಿ ಭರಿಸುತ್ತಿದ್ದ ಅಕುಶಲ-ಕೂಲಿ ವೆಚ್ಚದ ಶೇ. 40ರಷ್ಟು ಹೊರೆ ರಾಜ್ಯಗಳ ಮೇಲೆ (ಹಿಮಾಲಯ, ಈಶಾನ್ಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಬಿಟ್ಟು). ಕರ್ನಾಟಕಕ್ಕೆ ಈ ಹೊರೆ ಸುಮಾರು 3,200 ಕೋಟಿ ರೂ.ಗಳಾಗಬಹುದು. ಈಗಾಗಲೇ ಆರ್ಥಿಕ ಒತ್ತಡದಲ್ಲಿರುವ ಕರ್ನಾಟಕದಂತಹ ರಾಜ್ಯಗಳು ಇದನ್ನು ನಿಭಾಯಿಸುವುದು ಹೇಗೆ? ವೇತನ ಪಾವತಿಯ ಹೊಣೆ ಯಾರ ಮೇಲೆ? ಬಜೆಟ್ ಮೀರಿ ಕೆಲಸದ ಬೇಡಿಕೆ ಬಂದರೆ ಹೊಣೆಗಾರಿಕೆ ಯಾರದ್ದು? ಈ ಪ್ರಶ್ನೆಗಳಿಗೆ ಸದ್ಯಕ್ಕೆ ನೇರವಾದ ಉತ್ತರ ಕರಡು ನೀತಿನಿಯಮಗಳಲ್ಲಿಲ್ಲ. ಮೇಲಾಗಿ ರಾಜ್ಯ ಸರಕಾರಗಳು ನಿಗದಿಪಡಿಸುವ ಕೃಷಿ ಚಟುವಟಿಕೆಗಳ 60 ದಿನಗಳಲ್ಲಿ ಯೋಜನೆ ಚಾಲ್ತಿಯಲ್ಲಿರುವುದಿಲ್ಲ. ಕೃಷಿ ಚಟುವಟಿಕೆ ಇದ್ದ ಸಂದರ್ಭದಲ್ಲಿ ಎಲ್ಲರಿಗೂ ಕೆಲಸ ಸಿಗುತ್ತದೆ ಎಂಬ ಅನುಮಾನಾಸ್ಪದ ಊಹೆಯ ಮೇಲೆ ಈ ನಿಯಮ ನಿಂತಿದೆ. ಬರ, ಬೆಳೆನಾಶ ಅಥವಾ ಕೃಷಿಯಲ್ಲಿ ವೇತನ ಕುಸಿದಾಗ ಕಾರ್ಮಿಕರಿಗೆ ಆಗಬಹುದಾದ ವಿಪತ್ತುಗಳಿಗೆ ಹೇಗೆ ಸ್ಪಂದಿಸಬೇಕು ಎಂಬುದು ಕಾಯ್ದೆಯಲ್ಲಿ ಸ್ಪಷ್ಟವಿಲ್ಲ. ಹೆಸರಿನಲ್ಲೇ ಗ್ಯಾರಂಟಿ ಇದ್ದರೂ ಹೊಣೆಗಾರಿಕೆಯಲ್ಲಿ ದ್ವಂದ್ವವಿದೆ.

ಎಷ್ಟು ದಿನದ ಉದ್ಯೋಗ?

ಉದ್ಯೋಗದ ದಿನಗಳನ್ನು ನೂರರಿಂದ ನೂರಇಪ್ಪತ್ತೈದು ದಿನಗಳಿಗೆ ಹೆಚ್ಚಿಸಿರುವುದು ವಿಬಿ-ಜಿ ರಾಮ್ ಜಿಯ ಹೆಗ್ಗಳಿಕೆ. ಇದು ಸ್ವಾಗತಾರ್ಹ, 125 ದಿನಗಳ ಕೆಲಸ ಸಾಕೇ ಅಥವಾ ಇದೂ ಕಡಿಮೆಯೇ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ. ಸಂಸತ್ತಿನ ಸ್ಥಾಯಿ ಸಮಿತಿ ಮಾರ್ಚ್ 2025 ರಲ್ಲಿ ಮಂಡಿಸಿದ ವರದಿಯಲ್ಲಿ ಕೆಲಸದ ದಿನಗಳನ್ನು 150ಕ್ಕೆ ಏರಿಸಬೇಕು, ಹಣದುಬ್ಬರಕ್ಕನುಗುಣವಾಗಿ ವೇತನವನ್ನು ದಿನಕ್ಕೆ 450 ರೂ.ಗಳಿಗೆ ಏರಿಸಬೇಕು ಮತ್ತು ಆಧಾರ್ ಆಧಾರಿತ ಪಾವತಿಗಳನ್ನು ಕಡ್ಡಾಯ ಮಾಡಬಾರದು ಎಂದು ಪ್ರಸ್ತಾವಿಸಲಾಗಿತ್ತು. ಗ್ರಾಮೀಣ ಭಾರತದಲ್ಲಿ ಅಕುಶಲ ಉದ್ಯೋಗದ ಬೇಡಿಕೆ ಹಿಗ್ಗಿದೆಯೇ? ಅರ್ಥಾತ್, ಗ್ರಾಮೀಣ ಭಾರತದಲ್ಲಿ ಆರ್ಥಿಕ ಪ್ರಗತಿ ಕುಂಟಿತವಾಗಿದೆಯೇ? ಅಥವಾ ಉದ್ಯೋಗ ಖಾತರಿ ಯೋಜನೆಯಲ್ಲಿ ಕಾರ್ಮಿಕರಿಗೆ ಇಲ್ಲಿಯವರೆಗೆ ಲಭ್ಯವಾಗಿರುವ ವಾರ್ಷಿಕ ಸರಾಸರಿಯಾದ 50-55 ಕೆಲಸದ ದಿನಗಳು ನೈಜ ಬೇಡಿಕೆಯೇ? ಅಥವಾ ಯೋಜನೆಯ ಆಡಳಿತಾತ್ಮಕ ಅಡಚಣೆಗಳಿಂದ ಬೇಡಿಕೆ ಕೃತಕವಾಗಿ ಕಮ್ಮಿಯಾಯಿತೇ ಎಂಬ ಗಂಭೀರ ಪ್ರಶ್ನೆಗಳಿಗೆ ಕೇಂದ್ರ ಸರಕಾರ ಸ್ಪಷ್ಟ ಉತ್ತರ ನೀಡಿಲ್ಲ. ಇದರ ನಡುವೆ ಹೊಸ ಕಾಯ್ದೆಯಲ್ಲಿ 125 ದಿನಗಳ ಕೆಲಸ ಒದಗಿಸುವ ಘೋಷಣೆ ಇದ್ದರೂ ಅದನ್ನು ಅನುಷ್ಠಾನಕ್ಕೆ ತರುವ ಕಾರ್ಯತಂತ್ರ ಸ್ಪಷ್ಟವಾಗಿಲ್ಲ.

ಗ್ರಾಮ ಸಭೆಯೋ, ಗತಿ ಶಕ್ತಿಯೋ?

ವಿಬಿ-ಜಿ ರಾಮ್ ಜಿಯಲ್ಲಿ ಗ್ರಾಮಸಭೆಯ ಪಾತ್ರವನ್ನು ಔಪಚಾರಿಕವಾಗಿ ಉಳಿಸಿಕೊಳ್ಳಲಾಗಿದೆ. ಗ್ರಾಮಸಭೆಗಳು ಸ್ಥಳೀಯ ಅವಶ್ಯಕತೆಯ ಆಧಾರದ ಮೇಲೆ ಕಾಮಗಾರಿಗಳನ್ನು ಆಯ್ದುಕೊಳ್ಳಬಹುದು. ಆದರೆ ಈ ಕಾಮಗಾರಿಗಳು ಮತ್ತು ಅವುಗಳಿಂದ ಸೃಜಿಸುವ ಆಸ್ತಿಗಳ ಬಗ್ಗೆ ಕೇಂದ್ರಕ್ಕೆ ನಂಬಿಕೆಯಿದ್ದಂತಿಲ್ಲ. ಹಾಗಾಗಿ ಪಂಚಾಯತ್‌ಗಳ ಕ್ರಿಯಾಯೋಜನೆಗಳು ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯಗಳ ಸ್ಟ್ಯಾಕ್ ಮೂಲಕ ಪಿಎಂ-ಗತಿಶಕ್ತಿ ಯೋಜನೆಯೊಂದಿಗೆ ಕ್ರೋಡೀಕರಿಸಬೇಕು ಎಂದು ವಿಬಿ-ಜಿ ರಾಮ್ ಜಿಯ ಕರಡು ನೀತಿಗಳು ಹೇಳುತ್ತವೆ. ಗ್ರಾಮಸಭೆಯಲ್ಲಿ ಆಯ್ಕೆಗಳಿಗೆ ಹೆಚ್ಚು ಆದ್ಯತೆಯೋ ಅಥವಾ ದೊಡ್ಡ ಮೂಲಸೌಕರ್ಯ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತದೆಯೋ ಎಂಬುದನ್ನು ಕಾದುನೋಡಬೇಕಾಗಿದೆ. ಸ್ಥಳೀಯ ಕಾರ್ಮಿಕರಿಗೆ ಕೆಲಸ ಕೊಡುವ ಅಕುಶಲ ದೈಹಿಕ ಶ್ರಮದ ಕಾಮಗಾರಿಗಳ ಬದಲು ತಾಂತ್ರಿಕ ಕೌಶಲ್ಯ ಮತ್ತು ಸಾಮಗ್ರಿ ವೆಚ್ಚಗಳು ಹೆಚ್ಚಿರುವ ಮೂಲಸೌಕರ್ಯ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿರುವುದು ಗೋಚರವಾಗುತ್ತದೆ.

ತಂತ್ರಜ್ಞಾನವೆಂಬ ಮರೀಚಿಕೆ

ಉದ್ಯೋಗ ಖಾತರಿ ಯೋಜನೆಯಲ್ಲಿ ಹಾಜರಾತಿ, ಕಾಮಗಾರಿ, ಸಾಮಗ್ರಿ ವೆಚ್ಚಗಳಲ್ಲಿ ಅಕ್ರಮ, ಗುತ್ತಿಗೆದಾರರ ಹಸ್ತಕ್ಷೇಪ ಮುಂತಾದ ಭ್ರಷ್ಟಾಚಾರದ ಉದಾಹರಣೆಗಳು ಹಲವಿವೆ. ಇದಕ್ಕೆಲ್ಲ ತಂತ್ರಜ್ಞಾನವೇ ಮದ್ದು ಎಂದು ಭಾವಿಸಿ ಕೇಂದ್ರ ಸರಕಾರವು ಈಗಾಗಲೇ ಜಿಯೋ-ಟ್ಯಾಗಿಂಗ್, ಇ-ಕೆವೈಸಿ, ‘ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್’ (ಎನ್‌ಎಂಎಂಎಸ್) ಮತ್ತು ಆಧಾರ್ ಆಧಾರಿತ ಪಾವತಿ ವ್ಯವಸ್ಥೆಗಳು (ಎಬಿಪಿಎಸ್) ಮುಂತಾದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ವಿಬಿ-ಜಿ ರಾಮ್ ಜಿಯ ಕರಡು ನೀತಿಗಳು ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಕೃತಕ ಬುದ್ಧಿಮತ್ತೆ, ಆಲ್ಗಾರಿದಮ್ ಆಧಾರಿತ ಕಾಮಗಾರಿ/ಮಸ್ಟರ್ ರೋಲ್ ಪರಿಶೀಲನೆಗಳಂತಹ ಹೊಸ ತಂತ್ರಾಂಶಗಳನ್ನು ಅಳವಡಿಸುವುದಾಗಿ ಹೇಳುತ್ತವೆ.

ತಂತ್ರಾಂಶಗಳ ಗೊಂದಲ, ಇಂಟರ್ನೆಟ್ ಕೊರತೆ, ಮತ್ತು ಸರ್ವರ್ ಸಮಸ್ಯೆಗಳಿಂದಾಗಿ ಲಕ್ಷಾಂತರ ಕಾರ್ಮಿಕರ ಉದ್ಯೋಗ ಚೀಟಿ ರದ್ದಾಗುವುದು ಮತ್ತು ಸಮಯಕ್ಕೆ ಸರಿಯಾಗಿ ಕಾರ್ಮಿಕರಿಗೆ ಸಿಗದೆ ಪರದಾಡುವುದನ್ನು ಕಂಡಿದ್ದೇವೆ. ಲಿಬ್ಟೆಕ್ ಇಂಡಿಯಾ ಸಂಸ್ಥೆಯ ವರದಿಯ ಪ್ರಕಾರ ಕಳೆದ ಆರ್ಥಿಕ ವರ್ಷದಲ್ಲಿ, ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲಾಗದೆ ಉದ್ಯೋಗ ಖಾತರಿ ಯೋಜನೆಯಡಿ ಸಕ್ರಿಯರಾಗಿದ್ದ ಸುಮಾರು 5 ಕೋಟಿ ಕಾರ್ಮಿಕರು ಉದ್ಯೋಗದಿಂದ ವಂಚಿತರಾಗಿದ್ದಾರೆ. ಈಗ ಜುಲೈನಲ್ಲಿ ಆರಂಭವಾಗುವ ವಿಬಿ-ಜಿ ರಾಮ್ ಜಿಯಲ್ಲಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದವರಿಗಷ್ಟೇ ಕೆಲಸ ಮಾಡುವ ಅರ್ಹತೆಯಿರುತ್ತದೆ. ತಂತ್ರಜ್ಞಾನದ ಅಳವಡಿಕೆ ಒಳ್ಳೆಯ ಉದ್ದೇಶದಿಂದಲೇ ಕೂಡಿದ್ದರೂ, ಬಡಕಾರ್ಮಿಕರ ಪಾಲ್ಗೊಳ್ಳುವಿಕೆ ಸುಗಮಗೊಳಿಸುವ ಬದಲು ಮೊದಲ ದಿನದಿಂದಲೇ ಅವರು ಹೊರಗುಳಿಯುವಂತೆ ಮಾಡುವ ಸಂಭವನೀಯತೆಯೇ ಹೆಚ್ಚಾಗಿದೆ.

ಕಾರ್ಮಿಕರಿಗೆ ದೊರಕದ ಅಧಿಕಾರ

ಸಾಮಾಜಿಕ ಲೆಕ್ಕಪರಿಶೋಧನೆ ಉದ್ಯೋಗ ಖಾತರಿ ಯೋಜನೆಯ ಬೆನ್ನೆಲುಬಾಗಿ ಕೆಲಸ ಮಾಡಿತ್ತು. ಕಾರ್ಮಿಕರೇ ಕಾಮಗಾರಿಗಳು ಮತ್ತು ವೇತನ ಪಾವತಿ ದಾಖಲೆಗಳನ್ನು ಪರಿಶೀಲಿಸಿ, ಭ್ರಷ್ಟಾಚಾರವನ್ನು ಬಯಲಿಗೆ ಎಳೆಯಬಹುದಾದ ಸಾಧನವಾಗಿತ್ತು. ಇಂತಹ ಘಟಕಗಳನ್ನು ಬಲಪಡಿಸಬೇಕು ಮತ್ತು ಅವುಗಳನ್ನು ರಾಜ್ಯಗಳ ಗ್ರಾಮೀಣಾಭಿವೃದ್ಧಿ ಇಲಾಖೆಗಳಿಂದ ಹೊರತಂದು ಸ್ವಾಯತ್ತಗೊಳಿಸಬೇಕು ಎಂಬುದು ಕಾರ್ಮಿಕ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಬೇಡಿಕೆಯಾಗಿತ್ತು. ವಿಬಿ-ಜಿ ರಾಮ್ ಜಿಯಲ್ಲಿ ಸಾಮಾಜಿಕ ಲೆಕ್ಕಪರಿಶೋಧನೆಯನ್ನು ಬಲಪಡಿಸಲಾಗುವುದು ಎಂದು ಹೇಳಿರುವುದು ಬಿಟ್ಟರೆ ಈ ವ್ಯವಸ್ಥೆಯ ಮರುವಿನ್ಯಾಸದ ಬಗ್ಗೆಯಾಗಲೀ ಸ್ವಾಯತ್ತತೆಯ ಬಗ್ಗೆಯಾಗಲೀ ಹೊಸ ಯೋಚನೆ ಇದ್ದಂತಿಲ್ಲ.

ಹೊಸ ಕಾಯ್ದೆ ಹಳೆಯ ಗೊಂದಲಗಳು

ಯುಪಿಎ ಸರಕಾರ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದರೂ, ಎನ್‌ಡಿಎ ಅದಕ್ಕಿಂತ ಹೆಚ್ಚು ಕಾಲ (ಹನ್ನೆರಡು ವರ್ಷಕ್ಕೂ ಮೇಲ್ಪಟ್ಟು) ಯೋಜನೆಯನ್ನು ತಿದ್ದಿ, ತೀಡಿ ನಿರ್ವಹಿಸಿತು. ಆಧಾರ್-ಪಾವತಿ, ಇಲೆಕ್ಟ್ರಾನಿಕ್ ಮಸ್ಟರ್ ರೋಲ್, ಎನ್‌ಎಂಎಂಎಸ್ ಮುಂತಾದ ತಾಂತ್ರಿಕ ರೂಪಾಂತರಗಳೆಲ್ಲ ಎನ್‌ಡಿಎ ಅವಧಿಯಲ್ಲಿಯೇ ಆಯಿತು. ಈ ತಂತ್ರಜ್ಞಾನಗಳ ಉದ್ದೇಶ ಭ್ರಷ್ಟಾಚಾರ ನಿಗ್ರಹವಾದರೂ ಅನುಷ್ಠಾನ ಹಲವು ಗೊಂದಲಗಳಿಂದ ಕೂಡಿತ್ತು. ವಿಬಿ-ಜಿ ರಾಮ್‌ಜಿ ಇದೇ ತಾಂತ್ರಿಕ ರೂಪುರೇಷೆಗಳನ್ನು ಮುಂದುವರಿಸುತ್ತಿದೆ. ತಜ್ಞರು ಉದ್ಯೋಗ ಖಾತರಿ ಯೋಜನೆಯ ಪರಿಷ್ಕರಣೆಗೆ ನೀಡಿದ ಪ್ರಮುಖ ಸಲಹೆಗಳಾದ 1) ಹಣದುಬ್ಬರಕ್ಕೆ ಅನುಗುಣವಾದ ವೇತನ, 2) ಕೆಲಸ ಪಡೆಯುವ ಪ್ರಕ್ರಿಯೆಯನ್ನು ಸರಾಗಗೊಳಿಸುವುದು, 3) ಹೆಚ್ಚು ಕುಟುಂಬಗಳು ಹೆಚ್ಚಿನ ದಿನಗಳ ಕೆಲಸ ಪಡೆಯುವಂತೆ ಮಾಡುವುದು, 4) ತಂತ್ರಜ್ಞಾನದ ತೊಡರುಗಳನ್ನು ನಿವಾರಿಸುವುದು ಮತ್ತು 5) ಸಮುದಾಯದ ಮೇಲುಸ್ತುವಾರಿಯನ್ನು ಬಲಪಡಿಸುವುದು, ಈ ಯಾವ ವಿಚಾರಗಳಲ್ಲೂ ಸ್ಪಷ್ಟ ನಿಲುವನ್ನು ತಾಳದೆ ವಿಬಿ-ಜಿ ರಾಮ್‌ಜಿಯು ಹಳೆಯ ಆಸ್ಪಷ್ಟತೆಯನ್ನೇ ಉಳಿಸಿಕೊಂಡಿದೆ.

ಗಂಭೀರ ಸಾರ್ವಜನಿಕ ಚರ್ಚೆಯಿಲ್ಲದೆ ಈ ಕಾಯ್ದೆಯನ್ನು ಚಾಲನೆಗೆ ತಂದ ರೀತಿ ಮತ್ತು ನೀತಿನಿಯಮಗಳಲ್ಲಿರುವ ತಾಂತ್ರಿಕ ಅಂಶಗಳನ್ನು ಗಮನಿಸಿದರೆ, ಇದರ ಉದ್ದೇಶ ತಾಂತ್ರಿಕತೆಯ ಮೂಲಕ ಅಧಿಕಾರ ಕೇಂದ್ರೀಕರಣ ಮತ್ತು ಉದ್ಯೋಗದ ಹೆಸರಿನಲ್ಲಿ ತಾಂತ್ರಿಕ ಮೂಲಸೌಕರ್ಯಗಳಿಗೆ ಆದ್ಯತೆ ಕೊಡುವುದೇ ಎನ್ನುವ ಸಂದೇಹ ಗಾಢವಾಗುತ್ತದೆ. ಉದ್ಯೋಗದ ಭರವಸೆ ತಾಂತ್ರಿಕ ಮರೀಚಿಕೆಯಾಗದೆ, ಶ್ರಮಿಕರ ಕೈಹಿಡಿಯುವುದು ಇಂದಿನ ತುರ್ತು. ಇದು ಈಡೇರದಿದ್ದರೆ ವಿಬಿ-ಜಿ ರಾಮ್ ಜಿಯು ಈಗಾಗಲೇ ತೊಂದರೆಯಲ್ಲಿರುವ ಬಡ ಕಾರ್ಮಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವುದರಲ್ಲಿ ಸಂಶಯವಿಲ್ಲ.

Tags

VB-G RAM Gemploymentguaranteeconfusion
share
ಶ್ಯಾಮ್ ಎನ್. ಕಶ್ಯಪ್
ಶ್ಯಾಮ್ ಎನ್. ಕಶ್ಯಪ್
Next Story
X