ಇದು ಕೇಂದ್ರ ತನಿಖಾ ಏಜನ್ಸಿಗಳ ಇಬ್ಬಂದಿತನವಲ್ಲವೇ?

ಬಿಹಾರದ ಪ್ರಭಾವಿ ಸಚಿವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗುತ್ತಿದೆ. ಶಂಕಿತ ಭ್ರಷ್ಟಾಚಾರ, ವಂಚನೆ ಮತ್ತು ಪಾರದರ್ಶಕತೆ ಕೊರತೆಯ ಆರೋಪಗಳು ಸುತ್ತಿಕೊಳ್ಳುತ್ತಿವೆ.
ಬಿಹಾರದ ಹಿರಿಯ ಸಚಿವರ ವಿರುದ್ಧ ಮಾಜಿ ರಾಜಕೀಯ ತಂತ್ರಜ್ಞ, ಹಾಲಿ ರಾಜಕಾರಣಿ ಪ್ರಶಾಂತ್ ಕಿಶೋರ್ ಅವರ ಇತ್ತೀಚಿನ ಆರೋಪಗಳು ಸಣ್ಣವಲ್ಲ. ಅವು ಕೇವಲ ಸ್ಥಳೀಯ ಮಟ್ಟದ ಚಕಮಕಿಗಳೂ ಅಲ್ಲ. ಅದು ನಮ್ಮ ಪ್ರಜಾಪ್ರಭುತ್ವದ ಆದರ್ಶಗಳ ಮುಖಕ್ಕೆ ಹಿಡಿದಿರುವ ಒಂದು ಕಹಿ ಚಿತ್ರ.
ಅಧಿಕಾರದಲ್ಲಿರುವವರ ಅಕ್ರಮ ಸಂಪತ್ತು, ಅಕ್ರಮ ಟ್ರಸ್ಟ್‌ಗಳಿಗೆ ಸಂಶಯಾಸ್ಪದ ಮೂಲಗಳ ಹಣ, ಶೈಕ್ಷಣಿಕ ಅರ್ಹತೆಗಳ ಸುತ್ತ ಅವರು ಆತಂಕಕಾರಿ ಪ್ರಶ್ನೆಗಳನ್ನು ಎತ್ತಿದ್ದಾರೆ.
ಫ್ಲ್ಯಾಟ್‌ಗಳ ಖರೀದಿ, ಆಂಬುಲೆನ್ಸ್ ಹಗರಣ ಮತ್ತು ಸಂಶಯಾಸ್ಪದ ರೀತಿಯ ಭೂಸ್ವಾಧೀನಗಳ ಕುರಿತು ಹೇಳಲು ಬಿಹಾರ ಸಚಿವ ಅಶೋಕ್ ಚೌಧರಿಗೆ ಪ್ರಶಾಂತ್ ಕಿಶೋರ್ ಸವಾಲು ಹಾಕಿದ್ದಾರೆ. ಬಿಹಾರದ ಒಬ್ಬ ಸಚಿವರ ಬಗ್ಗೆ ಮಾತ್ರವಲ್ಲ, ಅಧಿಕಾರದಲ್ಲಿರುವ ಎಲ್ಲರೂ ಬೇರೆ ಬೇರೆ ನಿಯಮಗಳ ನೆರಳಲ್ಲಿ ಸ್ವಹಿತಾಸಕ್ತಿಯನ್ನು ಪೋಷಿಸಿಕೊಳ್ಳುವುದರಲ್ಲೇ ತೊಡಗಿರುವ ಬಗ್ಗೆ ಎತ್ತಲಾಗಿರುವ ಪ್ರಶ್ನೆಗಳು ಇವು.
ಸರಕಾರದಲ್ಲಿರುವವರು ಸಾಮಾನ್ಯವಾಗಿ ಕಾನೂನುಬದ್ಧ ಗಳಿಕೆಯನ್ನು ಮೀರಿ ಸಂಪತ್ತನ್ನು ಸಂಗ್ರಹಿಸುವುದು ಮತ್ತು ಅಂತಹ ಸಂಪತ್ತಿನ ಮೂಲಗಳು ನಿಗೂಢವಾಗಿಯೇ ಉಳಿದುಬಿಡುವುದರ ಬಗ್ಗೆ ಈ ಪ್ರಶ್ನೆಗಳು ಬೆರಳು ತೋರಿಸುತ್ತವೆ.
ಬಿಹಾರದಲ್ಲಿನ ವೈಭವ್ ವಿಕಾಸ್ ಟ್ರಸ್ಟ್ ಹಣಕಾಸು ವ್ಯವಹಾರ ಪಾರದರ್ಶಕವಾಗಿಲ್ಲ, ಒಂದು ವರ್ಷದೊಳಗೆ ಪಾಟ್ನಾದಲ್ಲಿ 100 ಕೋಟಿ ರೂ. ಮೌಲ್ಯದ ಭೂಮಿಯನ್ನು ಈ ಟ್ರಸ್ಟ್ ಸ್ವಾಧೀನಪಡಿಸಿಕೊಂಡಿದೆ ಎಂಬುದು ಪ್ರಶಾಂತ್ ಕಿಶೋರ್ ಹೇಳಿಕೆ.
ಮುಖ್ಯ ಕಾರ್ಯದರ್ಶಿಯ ಅತ್ತೆಯಂತಹ ಪ್ರಬಲ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಇಂಥ ಟ್ರಸ್ಟ್‌ಗಳೊಂದಿಗೆ ಇದ್ದಾರೆ ಎನ್ನುವುದು ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕುತ್ತದೆ.
ಟ್ರಸ್ಟ್‌ಗಳು, ಶೆಲ್ ಕಂಪೆನಿಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಹಣ ಅಕ್ರಮ ವರ್ಗಾವಣೆಗೆ ಬಳಸುವುದು ಅಥವಾ ನಿಜವಾದ ಮಾಲಕತ್ವ ಮರೆಮಾಚಲು ಬಳಸುವುದು ಕಾಣಿಸುತ್ತದೆ.
ಅಂತಹ ಸಂಸ್ಥೆಗಳು ಹೆಚ್ಚಿನ ಪರಿಶೀಲನೆಗೆ ಒಳಪಡಬೇಕಾದ ಅಗತ್ಯದ ಬಗ್ಗೆಯೂ ಇದು ಒತ್ತಿಹೇಳುತ್ತದೆ.
ಇನ್ನು, ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ವಿರುದ್ಧ ತೀವ್ರ ಗೊಂದಲಕಾರಿ ಆರೋಪಗಳಿವೆ.
1995ರ ಕೊಲೆ ಪ್ರಕರಣದಲ್ಲಿ ಅವರನ್ನು ಆರೋಪಿ ಎಂದು ಪ್ರಶಾಂತ್ ಕಿಶೋರ್ ನೇರವಾಗಿ ಆರೋಪಿಸಿದ್ದಾರೆ.
ಅಪರಾಧದ ಸಮಯದಲ್ಲಿ ತಾನು ಅಪ್ರಾಪ್ತ ವಯಸ್ಕ ಎಂದು ಸುಳ್ಳು ಹೇಳಿಕೊಳ್ಳುವ ಮೂಲಕ ಅವರು ನ್ಯಾಯದಿಂದ ತಪ್ಪಿಸಿಕೊಂಡಿದ್ದಾರೆ ಎಂಬ ಆರೋಪಗಳು ಇನ್ನೂ ಆಘಾತಕಾರಿಯಾಗಿವೆ. ಅವರ ನಿಜವಾದ ವಯಸ್ಸು, ಅವರ ನಂತರದ ಅಫಿಡವಿಟ್‌ಗಳ ಆಧಾರದ ಮೇಲೆ ಬೇರೆಯದನ್ನೇ ಹೇಳುತ್ತಿವೆ. ಇದು ರಾಜಕೀಯ ಅಧಿಕಾರವನ್ನು ಕಾನೂನನ್ನೇ ತನ್ನ ಪರವಾಗಿಸಲು ಬಳಸಿಕೊಂಡ ತಪ್ಪನ್ನೂ ಒಳಗೊಳ್ಳುವುದರಿಂದ, ಇದು ಕೊಲೆ ಆರೋಪವನ್ನೂ ಮೀರಿ ಸಂಕೀರ್ಣವಾಗಿದೆ.
ಒಂದು ಅಫಿಡವಿಟ್‌ನಲ್ಲಿ ಮೆಟ್ರಿಕ್ ಫೇಲ್, ಇನ್ನೊಂದರಲ್ಲಿ 7ನೇ ಇಯತ್ತೆ ಪಾಸ್ ಎಂದಿದೆ ಮತ್ತು ಅಂತರ್‌ರಾಷ್ಟ್ರೀಯ ವಿಶ್ವವಿದ್ಯಾನಿಲಯದಿಂದ ಪ್ರಶ್ನಾರ್ಹ ಡಿ.ಲಿಟ್. ಪದವಿ ಬಗ್ಗೆ ಹೇಳಲಾಗಿದೆ. ಇವೆಲ್ಲವೂ ಅವರ ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆಗಳಲ್ಲಿನ ವ್ಯತ್ಯಾಸಗಳನ್ನು ತೋರಿಸುತ್ತವೆ.
ವಿಶೇಷವಾಗಿ ಅಪರಾಧ ಇತಿಹಾಸ ಮತ್ತು ಶೈಕ್ಷಣಿಕ ವಂಚನೆಯನ್ನು ಒಳಗೊಂಡ ಗಂಭೀರ ಆರೋಪಗಳು ಉನ್ನತ ಹುದ್ದೆಯಲ್ಲಿರುವವರ ವಿರುದ್ಧ ಬಂದಾಗ, ಇಡೀ ಪ್ರಜಾಪ್ರಭುತ್ವ ಪ್ರಕ್ರಿಯೆ ಮೇಲೆ ಅದರ ನೆರಳು ಕವಿಯುತ್ತದೆ.
ನಾಮನಿರ್ದೇಶನಗಳ ಸಮಯದಲ್ಲಿ ನಮ್ಮ ಪರಿಶೀಲನಾ ಕಾರ್ಯವಿಧಾನಗಳು ಎಷ್ಟು ಬಲಿಷ್ಠವಾಗಿವೆ? ಚುನಾವಣಾ ಅಫಿಡವಿಟ್‌ಗಳಲ್ಲಿ ಹೇಳಲಾಗಿರುವುದನ್ನು ಎಷ್ಟು ಪರಿಣಾಮಕಾರಿಯಾಗಿ ಪರಿಶೀಲಿಸಲಾಗಿದೆ?
ಆಡಳಿತ ಪಕ್ಷದ ಸಚಿವರ ಮೇಲೆ ಆರೋಪಗಳು ಬಂದಾಗ ಕೆಲ ಮಡಿಲ ಮಾಧ್ಯಮಗಳು ಹೆಚ್ಚು ವ್ಯಾವಹಾರಿಕ ರೀತಿಯಲ್ಲಿ ನಡೆದುಕೊಳ್ಳುತ್ತವೆ ಎಂಬುದನ್ನು ರವೀಶ್ ಕುಮಾರ್ ತಮ್ಮ ವೀಡಿಯೊದಲ್ಲಿ ಪ್ರಶ್ನಿಸುತ್ತಾರೆ.
ವಿರೋಧ ಪಕ್ಷದ ವ್ಯಕ್ತಿಗಳ ವಿರುದ್ಧ ಇದೇ ರೀತಿಯ ಆರೋಪಗಳು ಬಂದಾಗ ಇವೇ ಮಡಿಲ ಮಾಧ್ಯಮಗಳು ಉನ್ಮಾದ ತೋರಿಸುತ್ತವೆ. ಕೇಂದ್ರ ಏಜೆನ್ಸಿಗಳು ತಕ್ಷಣ ಕ್ರಮಕ್ಕೆ ಮುಂದಾಗುವಂತೆ ಪ್ರಚೋದಿಸಲಾಗುತ್ತದೆ.
ಈ ಸೆಲೆಕ್ಟಿವ್ ಆದ ಅಬ್ಬರಿಸುವಿಕೆ ಭಾರತದಾದ್ಯಂತ ಕಂಡುಬರುವ ಒಂದು ವಿದ್ಯಮಾನವಾಗಿದೆ.
ಸಾಮಾನ್ಯವಾಗಿ ಒಂದು ನಿರ್ದಿಷ್ಟ ರಾಜಕೀಯ ಪಕ್ಷವನ್ನು ಇನ್ನೊಂದಕ್ಕಿಂತ ಹೆಚ್ಚು ಬೆಂಬಲಿಸುವ ನಿರೂಪಣೆಗಳು ಮಡಿಲ ಮಾಧ್ಯಮಗಳಲ್ಲಿ ಕಾಣುತ್ತವೆ. ಇದು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ಮಾಧ್ಯಮದ ಅಡಿಪಾಯದ ಪಾತ್ರದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಮಾಧ್ಯಮ ಇಲ್ಲಿ ಕಾವಲುಗಾರನಾಗಿ ಕೆಲಸ ಮಾಡದೆ, ರಾಜಕೀಯ ಅಜೆಂಡಾಗಳನ್ನು ಮುಂದೆ ಮಾಡುವ ಸಾಧನವಾಗುವ ಅಪಾಯ ಇದೆ.
ಇನ್ನು, ಆಡಳಿತ ಪಕ್ಷದ ಸದಸ್ಯರನ್ನು ಒಳಗೊಂಡ ಪ್ರಕರಣಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗಳಾದ ಈ.ಡಿ., ಐಟಿ ಮತ್ತು ಸಿಬಿಐನ ನಿಷ್ಕ್ರಿಯತೆ ಕಳವಳಕಾರಿಯಾಗಿದೆ.
ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡಾಗ ಈ ಸಂಸ್ಥೆಗಳು ಬಹಳ ಚುರುಕಾಗಿ ದಾಳಿ ನಡೆಸುತ್ತವೆ, ಬಂಧಿಸುತ್ತವೆ.ಆದರೆ ಅಧಿಕಾರದಲ್ಲಿರುವವರ ವಿರುದ್ಧ ಆರೋಪಗಳು ಬಂದಾಗ ಅವು ಕಾಣಿಸುವುದೇ ಇಲ್ಲ ಎಂದು ರವೀಶ್ ಕುಮಾರ್ ಹೇಳುತ್ತಾರೆ.
ನ್ಯಾಯ ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಾದರೆ, ಕಾನೂನನ್ನು ನಿಷ್ಪಕ್ಷವಾಗಿ ಕಾಯಬೇಕಾದ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಗೆ ತೀವ್ರವಾಗಿ ಧಕ್ಕೆಯಾಗುತ್ತದೆ.
ಈ ಸಂಸ್ಥೆಗಳ ಕ್ರಮಗಳು ಅಥವಾ ನಿಷ್ಕ್ರಿಯತೆಯ ಹಿಂದೆ ಎಂಥದೋ ರಾಜಕೀಯ ಇರುವುದು ಕಾಣುತ್ತದೆ.
ನಿಜವಾಗಿಯೂ ‘ನಾ ಖಾಯೆಂಗೆ, ನಾ ಖಾನೆ ದೇಂಗೇ’ ಎಂಬುದು ಪ್ರಾಮಾಣಿಕ ಘೋಷಣೆಯಾಗಿದ್ದರೆ ಬಿಹಾರದ ಎನ್‌ಡಿಎ ಸರಕಾರದ ಸಚಿವರ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಗಳ ಸಮಗ್ರ, ನಿಷ್ಪಕ್ಷ ತನಿಖೆ ಆಗಬೇಕು.
ಆದರೆ ಹಾಗಾಗುತ್ತಿದೆಯೇ?
ವಿಪಕ್ಷ ನಾಯಕರ ವಿರುದ್ಧ ಆರೋಪಗಳನ್ನು ಹುಡುಕಿ ಹುಡುಕಿ ದಾಳಿ ಮಾಡುವ ಈ.ಡಿ., ಐಟಿ ಇಲಾಖೆಗಳು ಈಗೆಲ್ಲಿವೆ?
ವಿಪಕ್ಷಗಳ ಸರಕಾರದಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದರೆ ಅದನ್ನು ಭಯಂಕರ ವೈಭವೀಕರಣ ಮಾಡುವ ಮಡಿಲ ಮೀಡಿಯಾಗಳು ಈಗ ನಾಪತ್ತೆಯಾಗಿವೆ.
ನಿತೀಶ್ ಕುಮಾರ್ ಸರಕಾರದ ಅಡಿಯಲ್ಲಿ ಭ್ರಷ್ಟ ಅಧಿಕಾರಿಗಳ ಸಂಬಂಧದ ವಿರುದ್ಧ ತೇಜಸ್ವಿ ಯಾದವ್ ಕೂಡ ಆರೋಪಿಸಿದ್ದಾರೆ.
ಪಾಟ್ನಾದಲ್ಲಿ ಸರಕಾರಿ ಕಟ್ಟಡಗಳನ್ನು ಸ್ವಚ್ಛಗೊಳಿಸಲು 700 ಕೋಟಿ ರೂ. ವೆಚ್ಚವಾಗಿದೆ ಎಂದು ಹೇಳಲಾಗುತ್ತಿರುವುದು ಕೇವಲ ಒಂದು ಅಂಕಿ ಅಂಶವಲ್ಲ.
ಇದು ಸಾರ್ವಜನಿಕ ಹಣವನ್ನು ವ್ಯವಸ್ಥಿತ ದುಷ್ಕೃತ್ಯಗಳಿಗೆ ಹೇಗೆ ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ತೋರಿಸುತ್ತದೆ.
ಇದು ಭಾರತದಾದ್ಯಂತ ಪುರಸಭೆಗಳು ಮತ್ತು ರಾಜ್ಯ ಇಲಾಖೆಗಳಲ್ಲಿ ವಿವಿಧ ರೂಪಗಳಲ್ಲಿ ನಡೆಯುತ್ತಿದೆ.
ಪ್ರಶಾಂತ್ ಕಿಶೋರ್ ತಮ್ಮ ಸ್ವಂತ ಗಳಿಕೆಯ ಬಗ್ಗೆ ಸ್ಪಷ್ಟವಾಗಿ ಬಹಿರಂಗಪಡಿಸಿದ್ದಾರೆ.
ಅವರು ಸಲಹಾ ಶುಲ್ಕವಾಗಿ 241 ಕೋಟಿ ರೂ. ಗಳಿಸಿರುವುದು, ಜಿಎಸ್‌ಟಿ ಮತ್ತು ಆದಾಯ ತೆರಿಗೆ ಪಾವತಿಸಿರುವುದು ಮತ್ತು ಅವರ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿರುವ ವಿವರಗಳ ಬಗ್ಗೆ ಬಹಿರಂಗಪಡಿಸಿದ್ದಾರೆ ಮತ್ತದು ಇವತ್ತಿನ ಎಲ್ಲವನ್ನೂ ಮರೆಮಾಚುವ ವಾತಾವರಣದಲ್ಲಿ ಬಹಳ ನಿರ್ಣಾಯಕ ಎನ್ನಿಸುತ್ತದೆ.
ಅವರ ಘೋಷಣೆಗಳ ಬಗ್ಗೆ ಸ್ವತಂತ್ರ ಪರಿಶೀಲನೆ ಅಗತ್ಯವಿದ್ದರೂ, ಅವರ ಹಣಕಾಸಿನ ವಿವರಗಳನ್ನು ಸಾರ್ವಜನಿಕ ವಲಯದಲ್ಲಿ ಬಹಿರಂಗಪಡಿಸುವುದು ಒಂದು ಒಳ್ಳೆಯ ಮಾದರಿಯಾಗುತ್ತದೆ.
ಇತರರ ಬಗ್ಗೆ ಮಾತಾಡುವಾಗ, ಸ್ವತಃ ಪಾರದರ್ಶಕವಾಗಿರುವ ರೀತಿಯಾಗಿ ಅದು ಮಹತ್ವ ಪಡೆಯುತ್ತದೆ. ಸಾರ್ವಜನಿಕ ಹುದ್ದೆಯಲ್ಲಿರುವವರು ಅಥವಾ ರಾಜಕೀಯ ಸಂವಾದವನ್ನು ರೂಪಿಸಲು ಬಯಸುವವರು ಆರ್ಥಿಕ ಪ್ರಾಮಾಣಿಕತೆ ತೋರಿಸಬೇಕಾದ ಅಗತ್ಯವನ್ನು ಅದು ಹೇಳುತ್ತದೆ.
ಪ್ರಶ್ನೆಗಳನ್ನು ಎತ್ತುವವರು ಸಹ ಅದೇ ಮಟ್ಟದ ಪರಿಶೀಲನೆಗೆ ತಮ್ಮನ್ನು ಒಳಪಡಿಸಿಕೊಳ್ಳಲು ಸಿದ್ಧರಿದ್ದರೆ, ಅದು ಅವರ ನೈತಿಕ ಬಲವಾಗಿರುತ್ತದೆ. ಬಿಹಾರದಲ್ಲಿ ನಡೆಯುತ್ತಿರುವ ಘಟನೆಗಳು ಭಾರತ ಎದುರಿಸುತ್ತಿರುವ ದೊಡ್ಡ ಸವಾಲುಗಳ ಸೂಕ್ಷ್ಮರೂಪವಾಗಿದೆ. ನಮ್ಮ ನಾಯಕರು ನಿಜವಾಗಿಯೂ ಹೊಣೆಗಾರರೇ?
ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳು ಭಯ ಅಥವಾ ಯಾರದ್ದೇ ಪರವಾಗಿಲ್ಲದೆ ನ್ಯಾಯ ಖಚಿತಪಡಿಸಿಕೊಳ್ಳುವಷ್ಟು ಬಲಿಷ್ಠವಾಗಿವೆಯೇ? ನಮ್ಮ ಮಾಧ್ಯಮಗಳು ನಿಷ್ಪಕ್ಷವಾಗಿವೆಯೇ ಎಂಬಂಥ ಪ್ರಶ್ನೆಗಳು ಏಳುತ್ತವೆ.
ಇವು ಯಾವುದೇ ಒಂದು ರಾಜ್ಯಕ್ಕೆ, ಅಲ್ಲಿನ ಹಗರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳಾಗಿ ಮಾತ್ರ ಮುಗಿಯುವುದಿಲ್ಲ. ಇಡೀ ದೇಶವೇ ಉತ್ತರಕ್ಕಾಗಿ ಕಾಯುವ ಪ್ರಶ್ನೆಗಳು ಅವಾಗಿವೆ.
ಪಾರದರ್ಶಕತೆ ಮತ್ತು ನ್ಯಾಯದ ಬಗೆಗಿನದು ಪ್ರಾದೇಶಿಕ ಕೂಗು ಮಾತ್ರವಲ್ಲ. ಅದು ರಾಷ್ಟ್ರೀಯ ಹಂಬಲ.
ನಾಗರಿಕರಾಗಿ ನಾವು ಜಾಗೃತರಾಗಿರಬೇಕು, ನಮ್ಮ ಚುನಾಯಿತ ಪ್ರತಿನಿಧಿಗಳಿಂದ ಉತ್ತಮ ಆಡಳಿತಕ್ಕಾಗಿ ಕೇಳಬೇಕು. ನಮ್ಮ ಸಂಸ್ಥೆಗಳು ಸಮಗ್ರತೆಯಿಂದಿರುವ ಬಗ್ಗೆ ಒತ್ತಾಯಿಸುವುದು ಅಗತ್ಯ.
ಅಧಿಕಾರದಲ್ಲಿರುವವರ ಮೌನ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ನಡೆ, ಒಬ್ಬೊಬ್ಬರಿಗೆ ಒಂದೊಂದು ಕಾನೂನು ನಮ್ಮ ಪ್ರಜಾಪ್ರಭುತ್ವದ ಅಡಿಪಾಯದಲ್ಲಿನ ಬಿರುಕುಗಳಾಗಿವೆ. ಈ ಬಿರುಕುಗಳು ಕಂದಕಗಳಾಗಿ ವಿಸ್ತರಿಸದಂತೆ ನೋಡಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ.







