ಇಸ್ರೇಲ್‌ನ ಮೃತ್ಯು ನರ್ತನ

ಹುಚ್ಚು, ಕೊಳಕು, ದುರ್ನಾತ ಬೀರುವ ಹಂದಿಯೊಂದು ಈಗಷ್ಟೇ ಚರಂಡಿಯಿಂದ ಮೇಲೆದ್ದು ಬಂದು ಪರಿಸರದಲ್ಲಿ ಹಾವಳಿಯೆಬ್ಬಿಸಿದೆ ಎಂದು ಊಹಿಸಿಕೊಳ್ಳಿ; ಇಸ್ರೇಲ್ ಈಗ ಪಶ್ಚಿಮ ಏಶ್ಯದಲ್ಲಿ ಇದನ್ನೇ ಮಾಡುತ್ತಿದೆ. ಒಂದು ಲಕ್ಷಕ್ಕೂ ಅಧಿಕ ಫೆಲೆಸ್ತೀನಿಗಳನ್ನು ಕೊಂದು, ಲೆಬನಾನಿಗಳು ಮತ್ತು ಯಮನಿಗಳ ಮೇಲೆ ದಾಳಿ ನಡೆಸಿ ಅಂಗವಿಕಲಗೊಳಿಸಿದ ಬಳಿಕ ಅದು ಈಗ ಇರಾನ್‌ನತ್ತ ತನ್ನ ಕೆಂಗಣ್ಣನ್ನು ಬೀರಿದೆ. ಬೆಂಜಮಿನ್ ನೆತನ್ಯಾಹು ಮತ್ತು ಅವರ ತೀವ್ರ ಬಲಪಂಥೀಯ ಮಿತ್ರದೇಶಗಳು ಯಾವಾಗಲೂ ಇರಾನ್‌ನಲ್ಲಿ ಆಡಳಿತ ಬದಲಾವಣೆಯ ಕನಸನ್ನು ಕಾಣುತ್ತಿರುವುದು ಜಗತ್ತಿನ ಪ್ರತಿಯೊಬ್ಬರಿಗೂ ಗೊತ್ತಿದೆ.
ನೆತನ್ಯಾಹು ಐತಿಹಾಸಿಕವಾಗಿ ಯುದ್ಧಪಿಪಾಸುವಾಗಿದ್ದಾರೆ. ಅಮೆರಿಕದಲ್ಲಿ 9/11ರ ಭಯೋತ್ಪಾದಕ ದಾಳಿಯ ಬಳಿಕ ‘ದಾಳಿಯಿಂದ ಇಸ್ರೇಲ್‌ಗೆ ಲಾಭವಾಗಿದೆ’ ಎಂದು ಅವರು ಹೇಳಿದ್ದರು. 2002ರಲ್ಲಿ ‘ನೀವು ಸದ್ದಾಂನನ್ನು ತೆಗೆದರೆ ಅದು ಈ ಪ್ರದೇಶದ ಮೇಲೆ ಅಗಾಧವಾದ ಸಕಾರಾತ್ಮಕ ಪರಿಣಾಮಗಳನ್ನುಂಟು ಮಾಡುತ್ತದೆ ಎಂದು ನಾನು ನಿಮಗೆ ಖಾತರಿ ನೀಡಬಲ್ಲೆ’ ಎಂದೂ ಅವರು ಅಮೆರಿಕಕ್ಕೆ ಹೇಳಿದ್ದರು. ಅಮೆರಿಕ ಮಧ್ಯಪ್ರವೇಶದ ಬಳಿಕ ಇರಾಕ್, ಅಫ್ಘಾನಿಸ್ತಾನ ಮತ್ತು ಲಿಬಿಯಾಗಳ ಗತಿ ಏನಾಯಿತು ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಈ ದೇಶಗಳಲ್ಲಿ ಪ್ರಜಾಪ್ರಭುತ್ವವು ದೂರದ ಮರೀಚಿಕೆಯಾಗಿಯೇ ಉಳಿದಿದ್ದು,ಅಂದಿನ ನಾಯಕರಿಗೆ ಬದಲಾಗಿ ಸಂಪೂರ್ಣ ಅರಾಜಕತೆ ಸೃಷ್ಟಿಯಾಗಿತ್ತು. ಇರಾನ್ ಈವರೆಗೂ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಆರ್ಥಿಕ-ಸಾಮ್ರಾಜ್ಯಶಾಹಿ ದಾಳಿಯಿಂದ ಬದುಕುಳಿದಿದೆ.
ಪಾಶ್ಚಾತ್ಯ ದೇಶಗಳು ಮಧ್ಯಸ್ಥಿಕೆ ವಹಿಸಿದ್ದ ಪರಮಾಣು ಒಪ್ಪಂದವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಹಿಂದೆ ಮೂಲೆಗುಂಪು ಮಾಡಿದ್ದರು. ಇಸ್ರೇಲ್, ವಿಶೇಷವಾಗಿ ನೆತನ್ಯಾಹು, ಟ್ರಂಪ್ ಅವರ ಈ ನಿರ್ಲಕ್ಷ್ಯದಲ್ಲಿ ಒಂದು ಅವಕಾಶವನ್ನು ಕಂಡಿದ್ದರು. ಒಪ್ಪಂದದ ಪ್ರಕಾರ ಇರಾನ್ ತನ್ನ ಯುರೇನಿಯಂ ಸಂವರ್ಧನೆಯನ್ನು ಶೇ. 3.67ಕ್ಕೆ ಇಳಿಸಬೇಕಿತ್ತಾದರೂ ಅದು 2015ರಲ್ಲಿ ತನ್ನ ಕಡೆಯಿಂದ ಯುರೇನಿಯಂ ಸಂವರ್ಧನೆಯನ್ನು ಶೇ. 3.50ಕ್ಕೆ ತಗ್ಗಿಸುವ ಮೂಲಕ ಒಪ್ಪಂದವನ್ನು ಗೌರವಿಸಿತ್ತು. ಟ್ರಂಪ್ ಒಪ್ಪಂದದಿಂದ ಹೊರಬಂದ ಬಳಿಕ ಅಮೆರಿಕದ ಐರೋಪ್ಯ ಪಾಲುದಾರರು ಹಾಗೂ ರಶ್ಯ, ಚೀನಾ ಮತ್ತು ಇರಾನ್ ಒಪ್ಪಂದದ ಪಕ್ಷಗಳಾಗಿ ಉಳಿದಿದ್ದವು. ಟ್ರಂಪ್ ಹಿಂದೆ ಸರಿದ ಬಳಿಕ ಇರಾನ್ ಒಪ್ಪಂದದಲ್ಲಿ ವಿಧಿಸಲಾಗಿದ್ದ ಸಂವರ್ಧನೆ ಮಿತಿಗಳನ್ನು ನಿಧಾನವಾಗಿ ಅತಿಕ್ರಮಿಸಿದ್ದರೂ ಅಮೆರಿಕದ ಆಡಳಿತವು ಮತ್ತೆ ಒಪ್ಪಂದಕ್ಕೆ ಮರಳಬಹುದು ಎಂದು ಆಶಿಸಿದ್ದ ಅದು ಒಪ್ಪಂದದಿಂದ ಸಂಪೂರ್ಣವಾಗಿ ವಿಮುಖಗೊಂಡಿರಲಿಲ್ಲ.
ಇಸ್ರೇಲ್ ಇರಾನ್‌ನಾದ್ಯಂತ 100 ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದಾಗ ‘ಬುದ್ಧಿವಂತಿಕೆ’ ಪ್ರದರ್ಶಿಸಿದ್ದ ಅಮೆರಿಕ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಅವರು, ಇರಾನ್ ಏಕಪಕ್ಷೀಯವಾಗಿ ವರ್ತಿಸಿದೆ ಮತ್ತು ಅದರಲ್ಲಿ ಅಮೆರಿಕದ ಯಾವುದೇ ಪಾತ್ರವಿಲ್ಲ ಎಂದು ಘೋಷಿಸಿದ್ದರು. ಯಾವಾಗ ಹೇಗೆ ವರ್ತಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲದ ಐಲು ವ್ಯಕ್ತಿ ಟ್ರಂಪ್ ಮರುದಿನವೇ ‘ಅಲ್ಲಿ ಎಲ್ಲ ನಾಶವಾಗುವ ಮುನ್ನ ಇರಾನ್ ಒಪ್ಪಂದವನ್ನು ಮಾಡಿಕೊಳ್ಳಲೇಬೇಕು’ ಎಂದು ಹೇಳುವ ಮೂಲಕ ತನ್ನ ವಿದೇಶಾಂಗ ಸಚಿವರಿಗೇ ಉಲ್ಟಾ ಹೊಡೆದಿದ್ದರು. ಇಸ್ರೇಲ್ ಇನ್ನೂ ಹೆಚ್ಚು ಕ್ರೂರ ದಾಳಿಗಳನ್ನು ನಡೆಸಬಹುದು ಎಂದೂ ಅವರು ಹೇಳಿದ್ದರು.
ಮತ್ತೆ ತಿಪ್ಪರಲಾಗ ಹಾಕಿದ ಟ್ರಂಪ್, ಇರಾನ್ ಮೇಲೆ ಇಸ್ರೇಲ್ ದಾಳಿಗಳಿಗೂ ಅಮೆರಿಕಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಘೋಷಿಸಿದರು. ನೆತನ್ಯಾಹು ಬಳಸಿಕೊಳ್ಳುತ್ತಿರುವುದು ಇದೇ ಹುಂಬತನವನ್ನು. ರಶ್ಯ-ಉಕ್ರೇನ್ ನಡುವೆ ಕದನ ವಿರಾಮವನ್ನು ಏರ್ಪಡಿಸುವಲ್ಲಿ ಮತ್ತು ಚೀನಾವನ್ನು ಹೆದರಿಸುವಲ್ಲಿ ಟ್ರಂಪ್ ವೈಫಲ್ಯ, ಎಲಾನ್ ಮಸ್ಕ್‌ರಂತಹ ತನ್ನ ನಿಕಟವರ್ತಿಗಳೊಂದಿಗೆ ಟ್ರಂಪ್ ಅವರ ಬಹಿರಂಗ ಕಚ್ಚಾಟ ಇವೆಲ್ಲವನ್ನು ನೆತನ್ಯಾಹು ಸಾರ್ವಜನಿಕ ದೃಷ್ಟಿಯಲ್ಲಿ ನೋಡುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅಮೆರಿಕದ ಅಧ್ಯಕ್ಷರ ಓವಲ್ ಕಚೇರಿಯು ‘ಅತ್ಯಧಿಕ ಬಿಡ್‌ದಾರ’ರಿಗೆ ಹಿಂದೆಂದಿಗಿಂತಲೂ ಹೆಚ್ಚು ಮುಕ್ತವಾಗಿದೆ ಎನ್ನುವುದನ್ನು ನೆತನ್ಯಾಹು ಅರ್ಥ ಮಾಡಿಕೊಂಡಿದ್ದಾರೆ. ಝಿಯೋನಿಸ್ಟ್ ಲಾಬಿ ಗುಂಪು ಅಮೆರಿಕನ್ ಇಸ್ರೇಲಿ ಪಬ್ಲಿಕ್ ಆ್ಯಕ್ಷನ್ ಕಮಿಟಿ(ಎಐಪಿಎಸಿ)ಗೆ ಟ್ರಂಪ್ ಅವರು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಲು ಹಣದ ಕೊರತೆಯಿಲ್ಲ. ಇಸ್ರೇಲಿ ಪರ ಗುಂಪುಗಳು ಟ್ರಂಪ್ ಮತ್ತು ಅವರ ರಾಜಕೀಯ ಪ್ರಚಾರಕ್ಕೆ 230 ಮಿಲಿಯನ್ ಡಾಲರ್‌ಗೂ ಅಧಿಕ ದೇಣಿಗೆಗಳನ್ನು ನೀಡಿವೆ ಎಂದು ಅಂದಾಜಿಸಲಾಗಿದೆ.
ಈ ಪ್ರದೇಶದಲ್ಲಿ ತಾನು ಎಷ್ಟೇ ಅವ್ಯವಸ್ಥೆಗಳನ್ನುಂಟು ಮಾಡಿದರೂ ಅಮೆರಿಕವು ತನ್ನನ್ನು ಬೆಂಬಲಿಸುತ್ತದೆ ಮತ್ತು ಯುದ್ಧದ ವೆಚ್ಚವನ್ನು ಭರಿಸುತ್ತದೆ ಎನ್ನುವುದೂ ನೆತನ್ಯಾಹುಗೆ ತಿಳಿದಿದೆ. ಅಕ್ಟೋಬರ್ 2023ರಿಂದ ಸೆಪ್ಟಂಬರ್ 2024ರವರೆಗೆ ಅಮೆರಿಕವು ಶಸ್ತ್ರಾಸ್ತ್ರಗಳ ರೂಪದಲ್ಲಿ ಸುಮಾರು 18 ಶತಕೋಟಿ ಡಾಲರ್‌ಗಳನ್ನು ಇಸ್ರೇಲ್‌ಗೆ ಒದಗಿಸಿತ್ತು, ಜೊತೆಗೆ ಪೆಂಟಗಾನ್ ಮಧ್ಯಪ್ರಾಚ್ಯದಲ್ಲಿ ತನ್ನ ಸ್ವಂತ ಮಿಲಿಟರಿ ಚಟುವಟಿಕೆಗಳಿಗಾಗಿ ಇನ್ನೂ 4.9 ಶತಕೋಟಿ ಡಾಲರ್‌ಗಳನ್ನು ವ್ಯಯಿಸಿತ್ತು. ಅಮೆರಿಕದ ಒಟ್ಟು 22.9 ಶತಕೋಟಿ ಡಾಲರ್ ಹಣದಿಂದ ನೆತನ್ಯಾಹುಗೆ ಗಾಝಾದಲ್ಲಿ ಇಸ್ರೇಲ್‌ನ ನರಮೇಧವನ್ನು ಮುಂದುವರಿಸಲು ಸಾಧ್ಯವಾಯಿತು. ಇತ್ತೀಚೆಗೆ ಟ್ರಂಪ್ ಇಸ್ರೇಲ್‌ಗೆ ಎಂಟು ಶತಕೋಟಿ ಡಾಲರ್‌ಗಳ ಶಸ್ತ್ರಾಸ್ತ್ರ ಮಾರಾಟಕ್ಕೂ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.
ಇರಾನ್‌ನಲ್ಲಿ ಆಡಳಿತ ಬದಲಾವಣೆ ಇಸ್ರೇಲ್‌ನ ಮುಖ್ಯ ಉದ್ದೇಶವಾಗಿದೆ. ಅಮೆರಿಕ ಮತ್ತು ಅದರ ಐರೋಪ್ಯ ಮಿತ್ರರಾಷ್ಟ್ರಗಳು ಇಸ್ರೇಲ್‌ನ ಬೇಡಿಕೆಗಳನ್ನು ಸ್ವಇಚ್ಛೆಯಿಂದ ಒಪ್ಪಿಕೊಂಡಿವೆ. ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ, ವಿಶೇಷವಾಗಿ ಗಾಝಾ ಕದನ ವಿರಾಮ ನಿರ್ಣಯದ ಪರವಾಗಿ ಮತ ಚಲಾಯಿಸಿದಾಗ(ಭಾರತವು ಮತದಾನದಿಂದ ದೂರವಿತ್ತು) ಟ್ರಂಪ್ ಮತ್ತು ನೆತನ್ಯಾಹು ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಗಮನಾರ್ಹ ರಾಜತಾಂತ್ರಿಕ ಅವಕಾಶವನ್ನು ಹೊಂದಿದ್ದವು ಮತ್ತು ಈ ಮೂರು ದೇಶಗಳಲ್ಲಿ ಶಾಂತಿಗಾಗಿ ಕರೆಗಳು ತೀವ್ರಗೊಂಡಿದ್ದವು. ಅದರ ಬದಲಿಗೆ ಅವು ಮತ್ತೊಮ್ಮೆ ಅಮೆರಿಕ ಮತ್ತು ಇಸ್ರೇಲ್‌ನ ಕೈಗೊಂಬೆಗಳಾಗಿ ಕಾರ್ಯ ನಿರ್ವಹಿಸುವುದನ್ನು ಆಯ್ಕೆ ಮಾಡಿಕೊಂಡಿದ್ದವು. ಇನ್ನೂ ಕೆಟ್ಟದ್ದೆಂದರೆ ಇರಾನ್ ದಾಳಿಗಳನ್ನು ಹೆಚ್ಚಿಸಿದರೆ ಇಸ್ರೇಲ್‌ಗೆ ಮಿಲಿಟರಿ ಬೆಂಬಲವನ್ನು ಒದಗಿಸುವ ಬದ್ಧತೆಯನ್ನೂ ಅವು ವ್ಯಕ್ತಪಡಿಸಿವೆ. ಈ ಮೂರೂ ಐರೋಪ್ಯ ದೇಶಗಳ ಸರಕಾರಗಳ ಮುಖ್ಯಸ್ಥರು ‘ಇಸ್ರೇಲ್‌ಗೆ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಇದೆ’ ಎಂಬ ಅದೇ ಅಸಂಬದ್ಧ ವಾದವನ್ನು ಪ್ರತಿಧ್ವನಿಸುತ್ತಿದ್ದಾರೆ. ಹೀಗೆ ಮಾಡುವ ಮೂಲಕ ಅವರು ಪ್ರಪಂಚದ ದೃಷ್ಟಿಯಲ್ಲಿ ನಗೆಪಾಟಲಿಗೀಡಾಗಿದ್ದಾರೆ.
ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕದ ದಾಳಿಯ ಬಳಿಕ ಇಡೀ ಸನ್ನಿವೇಶವು ಹೆಚ್ಚು ಜಟಿಲಗೊಂಡಿದೆ. ಇರಾನಿಗೆ ನೀಡಿದ್ದ ಎರಡು ವಾರಗಳ ಗಡುವಿನಿಂದ ಹಿಂದೆ ಸರಿದ ಬಳಿಕ ಟ್ರಂಪ್ ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ಬಾಂಬ್ ದಾಳಿ ನಡೆಸಿದರು. ಇದನ್ನು ಅವರು ಸ್ವದೇಶದಲ್ಲಿಯ ನವ-ಸಂಪ್ರದಾಯವಾದಿಗಳ ಒತ್ತಡದಿಂದ ಮಾಡಿದ್ದಲ್ಲ, ತನ್ನ ಚುನಾವಣಾ ಪ್ರಚಾರಕ್ಕಾಗಿ ಯಹೂದಿಗಳ ಹಣವನ್ನು ಕಳೆದುಕೊಳ್ಳುವ ಭೀತಿಯಿಂದ ಮಾಡಿದ್ದರು. ಇರಾನ್ ಮೇಲೆ ಬಾಂಬ್ ದಾಳಿಯ ಬಳಿಕ ಮಧ್ಯಪ್ರಾಚ್ಯದಲ್ಲಿ ಅಸಮಾನವಾಗಿ ಹರಡಿಕೊಂಡಿರುವ ಅಮೆರಿಕದ ಪಡೆಗಳ ವಿರುದ್ಧ ಇರಾನ್‌ನ ಪ್ರತೀಕಾರಕ್ಕೆ ಹೆದರಿದ ಟ್ರಂಪ್ ಇರಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮವನ್ನು ಮಾಡಿಸಲು ಧಾವಿಸಿದರು. ನಿರೀಕ್ಷೆಯಂತೆಯೇ ಇಸ್ರೇಲ್ ಒಂದೇ ದಿನದಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದ್ದು ಟ್ರಂಪ್‌ಗೆ ಭೀತಿಯನ್ನುಂಟು ಮಾಡಿತ್ತು. ಅಸಹಾಯಕ ಟ್ರಂಪ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಇಸ್ರೆಲ್‌ಅನ್ನು ದೂಷಿಸಿದ್ದರು. ಇದು ಟ್ರಂಪ್‌ರಂತಹ ನಾಯಕರಡಿ ಆಧುನಿಕ ಯುಗದ ರಾಜತಾಂತ್ರಿಕತೆಯು ಹೈಸ್ಕೂಲ್ ವಿದ್ಯಾರ್ಥಿಗಳ ಎರಡು ಗ್ಯಾಂಗ್‌ಗಳ ನಡುವಿನ ಸಾಮಾಜಿಕ ಮಾಧ್ಯಮ ಯುದ್ಧಕ್ಕಿಂತ ಹೆಚ್ಚೇನಲ್ಲ ಎನ್ನುವುದನ್ನು ತೋರಿಸುತ್ತದೆ.
ಅಮೆರಿಕದ ಸಾಮಾಜ್ಯಶಾಹಿ ರಣಹದ್ದು ಬಹಳ ಸಮಯದಿಂದ ಅರಬ್ ಜಗತ್ತಿನ ಮೇಲೆ ತನ್ನ ರೆಕ್ಕೆಗಳನ್ನು ಹರಡಿಕೊಂಡಿದೆ. ಅಮೆರಿಕದ ಆರ್ಥಿಕ ಶಕ್ತಿಯ ಆಧಾರವಾಗಿ ಮಧ್ಯಪ್ರಾಚ್ಯ ಮತ್ತು ಅದರ ತೈಲ ಸಂಪತ್ತನ್ನು ನಿಯಂತ್ರಿಸುವ ಹಾಗೂ ಐಎಂಎಫ್, ವಿಶ್ವಬ್ಯಾಂಕ್ ಮತ್ತು ಇತರ ಅಂತರ್‌ರಾಷ್ಟ್ರೀಯ ಸಂಸ್ಥೆಗಳಿಂದ ಅಮೆರಿಕ ಕೇಂದ್ರಿತ ನವ ಉದಾರವಾದಿ ಕ್ರಮದಿಂದ ದೂರವಾಗಿ ತಮ್ಮದೇ ಆದ ಸ್ವಾಯತ್ತತೆಯನ್ನು ಸೃಷ್ಟಿಸಿಕೊಳ್ಳಲು ಇತರ ದೇಶಗಳು ಮುಂದಾಗುವುದನ್ನು ತಡೆದು ತನ್ನನ್ನು ಇನ್ನಷ್ಟು ಬಲಗೊಳಿಸಿಕೊಳ್ಳುವ ಅಮೆರಿಕದ ಪ್ರಯತ್ನವು ಅಪಾಯದಲ್ಲಿದೆ ಎಂದು ಅಮೆರಿಕನ್ ಮಾರ್ಕ್ಸ್‌ವಾದಿ ಅರ್ಥಶಾಸ್ತ್ರಜ್ಞ ಮೈಕಲ್ ಹಡ್ಸನ್ ವಾದಿಸಿದ್ದಾರೆ.
1970ರ ದಶಕವು ನೂತನ ಅಂತರ್‌ರಾಷ್ಟ್ರೀಯ ಆರ್ಥಿಕ ವ್ಯವಸ್ಥೆ(ಎನ್‌ಐಇಒ)ಯನ್ನು ಸೃಷ್ಟಿಸುವ ಕುರಿತು ಹೆಚ್ಚಿನ ಚರ್ಚೆಗಳಿಗೆ ಸಾಕ್ಷಿಯಾಗಿತ್ತು. ಇದು ತಮ್ಮ ದೇಶದ ಆರ್ಥಿಕ ಪ್ರಾಬಲ್ಯಕ್ಕೆ ಬೆದರಿಕೆ ಎಂದು ಅಮೆರಿಕದ ತಂತ್ರಜ್ಞರು ಪರಿಗಣಿಸಿದ್ದರು. ಈ ಅವಧಿಯಲ್ಲಿ ಹಡ್ಸನ್‌ರನ್ನು, ಇತರ ದೇಶಗಳು ಅಮೆರಿಕದ ನಿಯಂತ್ರಣದಿಂದ ಪ್ರತ್ಯೇಕಗೊಳ್ಳುತ್ತವೆ ಎಂದು ಅವರು ಹೇಗೆ ಭಾವಿಸಿದ್ದಾರೆ ಎಂಬ ಬಗ್ಗೆ ವಿವರಿಸಲು ಆಹ್ವಾನಿಸಲಾಗಿತ್ತು. ಆಗ ಹಡ್ಸನ್ ಅವರು ಹರ್ಮನ್ ಕಾನ್ ಜೊತೆ ಕೆಲಸ ಮಾಡುತ್ತಿದ್ದರು. 1974 ಅಥವಾ 1975ರಲ್ಲಿ, ಇರಾನನ್ನು ಕಿತ್ತೊಗೆಯಲು ಮತ್ತು ಅದನ್ನು ಜನಾಂಗೀಯ ಭಾಗಗಳನ್ನಾಗಿ ವಿಭಜಿಸಲು ಅದಾಗಲೇ ರೂಪಿಸಲಾಗುತ್ತಿದ್ದ ಯೋಜನೆಗಳ ಕುರಿತು ಮಿಲಿಟರಿ ವ್ಯೆಹಾತ್ಮಕ ಚರ್ಚೆಗಳಲ್ಲಿ ಭಾಗಿಯಾಗಲು ಹಡ್ಸನ್‌ರನ್ನು ಕಾನ್ ಕರೆತಂದಿದ್ದರು. ಪಾಕಿಸ್ತಾನದೊಂದಿನ ಇರಾನ್ ಗಡಿಯಲ್ಲಿರುವ ಬಲೂಚಿಸ್ತಾನ ಅತ್ಯಂತ ದುರ್ಬಲ ಸ್ಥಳವೆಂದು ಹರ್ಮನ್ ಕಂಡುಕೊಂಡಿದ್ದರು. ಕುರ್ದ್‌ಗಳು, ತಜಿಕ್‌ಗಳು ಮತ್ತು ಟರ್ಕಿಷ್ ಅಜೆರಿಗಳು ಇತರ ಜನಾಂಗಗಳಾಗಿದ್ದು, ಅವುಗಳನ್ನು ಪರಸ್ಪರ ಎತ್ತಿ ಕಟ್ಟಲು ಯೋಜಿಸಲಾಗಿತ್ತು. ಇದು ಅಗತ್ಯವಾದರೆ ಇರಾನಿ ಮತ್ತು ಪಾಕಿಸ್ತಾನಿ ರಾಜಕೀಯ ದೃಷ್ಟಿಕೋನವನ್ನು ಮರುರೂಪಿಸಲು ಅಮೆರಿಕದ ರಾಜತಾಂತ್ರಿಕತೆಗೆ ಸಂಭಾವ್ಯ ಸರ್ವಾಧಿಕಾರವನ್ನು ಒದಗಿಸಲಿತ್ತು. ಮೂರು ದಶಕಗಳ ಬಳಿಕ 2003ರಲ್ಲಿ, ಇರಾಕ್ ಮತ್ತು ಸಿರಿಯಾದಿಂದ ಆರಂಭಿಸಿ ಲೆಬನಾನ್, ಲಿಬಿಯಾ, ಸೊಮಾಲಿಯಾ, ಸುಡಾನ್‌ಗಳ ಬಳಿಕ ಇರಾನ್‌ಅನ್ನು ಹಿಡಿತಕ್ಕೆ ತೆಗೆದುಕೊಳ್ಳುವುದು ಪಶ್ಚಿಮ ಏಶ್ಯದ ಅಮೆರಿಕವು ಪ್ರಾಬಲ್ಯ ಸಾಧಿಸಲು ಇರಾನ್ ಮೂಲಾಧಾರವಾಗಿದೆ ಎಂದು ಜನರಲ್ ವೆಸ್ಲಿ ಕ್ಲಾರ್ಕ್ ಬೆಟ್ಟು ಮಾಡಿದ್ದರು. ಆದರೆ ಇರಾನ್ ಆಕ್ರಮಣವು ಅದರೊಂದಿಗೆ ಗುರುತಿಸಿಕೊಂಡಿದ್ದ ಮಿಲಿಟರಿ ಅಪಾಯಗಳಿಂದಾಗಿ ದೂರದ ಕನಸಾಗಿಯೇ ಉಳಿಯಿತು. ಇದರೊಂದಿಗೆ ಇರಾನ್ ಮೇಲೆ ಆಕ್ರಮಣ ನಡೆಸಿದರೆ ಅಮೆರಿಕದ ಯೋಧರ ಶವಪೆಟ್ಟಿಗೆಗಳು ಸ್ವದೇಶಕ್ಕೆ ಮರಳುವುದರೊಂದಿಗೆ ದೇಶಿಯ ಆಕ್ರೋಶದ ಬಗ್ಗೆ ಅಮೆರಿಕದ ರಾಜಕಾರಣಿಗಳಲ್ಲಿ ಭಯವಿತ್ತು.
ಈಗ ಮತ್ತೆ ಪ್ರಚಲಿತಕ್ಕೆ ಬರೋಣ. ಇರಾನ್‌ನಲ್ಲಿ ಅಮೆರಿಕದ ಯುದ್ಧವು ತನ್ನ ಭೌಗೋಳಿಕ-ಆರ್ಥಿಕ ಶಕ್ತಿಯನ್ನು ಬಲಗೊಳಿಸಿಕೊಳ್ಳುವ ಅದರ ಭೂ-ರಾಜಕೀಯ ಪ್ರಯತ್ನವಲ್ಲದೆ ಬೇರೇನೂ ಅಲ್ಲ. ಇರಾನ್ ಅಮೆರಿಕದ ರಾಜಕೀಯ ಮತ್ತು ಡಾಲರ್ ಪ್ರಾಬಲ್ಯಕ್ಕೆ ಎರಡು ಪ್ರಮುಖ ಪ್ರತಿಸ್ಪರ್ಧಿಗಳಾಗಿರುವ ರಶ್ಯ ಮತ್ತು ಚೀನಾಗಳ ಮಿತ್ರದೇಶವಾಗಿದೆ. ಡಾಲರ್‌ನಿಂದ ದೂರ ಸರಿಯುವ ಮೂಲಕ ತನ್ನ ಪ್ರಾಬಲ್ಯವನ್ನು ಪ್ರಶ್ನಿಸುವ ಯಾವುದೇ ಪ್ರಯತ್ನವು ಭಯಾನಕ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂಬ ಸ್ವಷ್ಟ ಸಂದೇಶವನ್ನು ವಿಶ್ವಕ್ಕೆ ರವಾನಿಸಲು ಅಮೆರಿಕ ಬಯಸಿದೆ. ತನ್ನ ದೇಶದಲ್ಲಿ (ಮತ್ತು ಇತರ ಪಾಶ್ಚಾತ್ಯ ದೇಶಗಳಲ್ಲಿ) ಇತರ ಅರಬ್ ರಾಜಪ್ರಭುತ್ವಗಳು ಮತ್ತು ಸರ್ವಾಧಿಕಾರಗಳ ಹೂಡಿಕೆಗಳ ಮೂಲಕ ಅಮೆರಿಕವು ಅವುಗಳನ್ನು ಒತ್ತೆಯಾಳುಗಳಾಗಿಸಿಕೊಂಡಿದೆ. 2022ರಲ್ಲಿ ಪಾಶ್ಚಾತ್ಯ ದೇಶಗಳಲ್ಲಿಯ ರಶ್ಯದ 300 ಶತಕೋಟಿ ಡಾಲರ್‌ಗಳ ವಿತ್ತೀಯ ಉಳಿತಾಯವನ್ನು ಕಬಳಿಸಿದಂತೆ ಈ ಹೂಡಿಕೆಗಳನ್ನು ಅಮೆರಿಕವು ಕಸಿದುಕೊಳ್ಳಬಹುದು. ಇದು ಇಂದಿನ ಸಂಘರ್ಷದಲ್ಲಿ ಫೆಲೆಸ್ತೀನಿಗಳು ಅಥವಾ ಇರಾನಿಗಳನ್ನು ಬೆಂಬಲಿಸಲು ಈ ದೇಶಗಳು ಏಕೆ ಹಿಂದೇಟು ಹೊಡೆಯುತ್ತಿವೆ ಎನ್ನುವುದನ್ನು ವಿವರಿಸುತ್ತದೆ.
ಪಶ್ಚಿಮಕ್ಕೆ ರೈಲ್ವೆ ಸಾರಿಗೆಗಾಗಿ ಹೊಸ ಸಿಲ್ಕ್ ರೋಡ್‌ಗೆ ಚೀನಾದ ಬೆಲ್ಟ್ ಆಂಡ್ ರೋಡ್ ಕಾರ್ಯಕ್ರಮಕ್ಕೆ ಇರಾನ್ ಪ್ರಮುಖ ಕೊಂಡಿಯಾಗಿದೆ. ಅಮೆರಿಕವು ಇರಾನ್ ಸರಕಾರವನ್ನು ಪದಚ್ಯುತಗೊಳಿಸಿದರೆ ಅದು ಚೀನಾ ಈಗಾಗಲೇ ನಿರ್ಮಿಸಿರುವ ಮತ್ತು ಇನ್ನಷ್ಟು ಪಶ್ಚಿಮಕ್ಕೆ ವಿಸ್ತರಿಸಲು ಆಶಿಸಿರುವ ಸುದೀರ್ಘ ಸಾರಿಗೆ ಕಾರಿಡಾರ್‌ಗೆ ಅಡ್ಡಿಯನ್ನುಂಟು ಮಾಡಲಿದೆ.
ಹಿಂದೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಬಲಿಪಶುಗಳಾಗಿ ನಾವು ಅಮೆರಿಕ ಸಾಮ್ರಾಜ್ಯಶಾಹಿಯ ಆಕ್ರಮಣದ ವಿರುದ್ಧ ಇರಾನ್‌ಗೆ ಬೆಂಬಲವಾಗಿ ನಿಲ್ಲಬೇಕು. ಇರಾನ್‌ನಲ್ಲಿಯ ಧರ್ಮಗುರುಗಳ ಆಡಳಿತವನ್ನು ನಾವು ಬೆಂಬಲಿಸಲೇಬೇಕು ಎನ್ನುವುದು ಇದರ ಅರ್ಥವಲ್ಲ. ಸಾಮ್ರಾಜ್ಯಶಾಹಿಗಳಿಂದ ಭಿನ್ನವಾಗಿ, ತಮ್ಮ ಆಡಳಿತಗಾರರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದು ಒಂದು ದೇಶದ ಜನರ ಹೊಣೆಗಾರಿಕೆಯಾಗಿದೆ ಎಂದು ನಾವು ನಂಬಿದ್ದೇವೆ.
ಪ್ರಸ್ತುತ ಕಾಲಘಟ್ಟದಲ್ಲಿ ಇರಾನ್ ಮಧ್ಯ ಪ್ರಾಚ್ಯದಲ್ಲಿ ಫೆಲೆಸ್ತೀನಿಗಳ ಏಕೈಕ ರಕ್ಷಕ ಮತ್ತು ಬೆಂಬಲಿಗನಾಗಿದೆ. ಇಸ್ರೇಲಿ ದಾಳಿಯ ಬೆನ್ನಲ್ಲೇ ಜೂ.15ರಂದು ಗಾಝಾದಲ್ಲಿ ಐವತ್ತು ಕತ್ತೆಗಳ ಗಮನಾರ್ಹ ಮೆರವಣಿಗೆ ನಡೆದಿತ್ತು. ಈ ಕತ್ತೆಗಳಿಗೆ ಹಾರಗಳನ್ನು ಹಾಗೂ ರೇಷ್ಮೆ ಮತ್ತು ಸ್ಯಾಟಿನ್ ಉಡುಪುಗಳನ್ನು ತೊಡಿಸಲಾಗಿತ್ತು. ಅವು ಬೀದಿಗಳಲ್ಲಿ ಹಾದು ಬರುತ್ತಿದ್ದರೆ ಮಕ್ಕಳು ಅವುಗಳನ್ನು ನಿಜವಾದ ಪ್ರೀತಿಯಿಂದ ತಟ್ಟುತ್ತಿದ್ದರು. ಏಕೆ? ಸಂಘಟಕರು ವಿವರಿಸಿರುವಂತೆ, ‘ಎಲ್ಲ ಅರಬ್ ದೇಶಗಳಿಗಿಂತ ಹೆಚ್ಚಿನ ಸಹಾಯವನ್ನು ಈ ಕತ್ತೆಗಳು ನಮಗೆ ಮಾಡಿವೆ’.







