ಎಮ್ಮೆಗೆ ಶೇವಿಂಗ್ ಮಾಡುವ ‘ಜಾತಗಾರರು’

ನಮ್ಮ ಆಯೋಗದ ಗಡುವಿನ ಅಂತಿಮ ಕಾಲ ಸಮೀಪಿಸುತ್ತಿತ್ತು.. ಆಯೋಗದಿಂದ ನಡೆಯಬೇಕಿದ್ದ ಜಾತಿವಾರು ಸಮೀಕ್ಷೆಗೆ ಆಯೋಗದ ಮೂರು ವರ್ಷದ ಗಡುವಿನಲ್ಲಿ ಸುಮಾರು ಎರಡುವರೆ ವರ್ಷಗಳನ್ನು ಜಾತಿವಾರು ಸಮೀಕ್ಷೆಯ ಸಿದ್ಧತೆಗಾಗಿ ಕಳೆಯಲಾಗಿತ್ತು. ಆಗಿನ ಬಿಜೆಪಿ ಸಮ್ಮಿಶ್ರ ಸರಕಾರ ಜಾತಿವಾರು ಸಮೀಕ್ಷೆ ಮಾಡಲು ಬಿಡುವುದಿಲ್ಲ ಎಂದು ಅಸಹಕಾರ ತೋರತೊಡಗಿತು. ನಮಗೆ ಲಭ್ಯವಿದ್ದ ಆರು ತಿಂಗಳಲ್ಲಿ ಆಯೋಗದಲ್ಲಿರುವ ಕಡತಗಳನ್ನು ಪರಿಶೀಲಿಸುವುದಲ್ಲದೆ ಅನೇಕ ಜಾತಿ ಜನಾಂಗಗಳ ಬಗೆಗಿನ ಮೇಲೆ ವರದಿ ಸಿದ್ಧಪಡಿಸಬೇಕಿತ್ತು. ಸಮಯ ಅತ್ಯಂತ ಕಡಿಮೆಯಿದ್ದು ಬೆಟ್ಟದಷ್ಟು ಕೆಲಸಗಳು ಬಾಕಿ ಉಳಿದಿದ್ದವು. ಈ ಸಂದರ್ಭದಲ್ಲಿ ನಾನಂತೂ ಯಾರನ್ನೂ ನೋಡಲು ತಯಾರಿರಲಿಲ್ಲ. ಯಾವುದೇ ಜಾತಿಯ ಹೊಸ ಅರ್ಜಿಗಳನ್ನು ಹೊಸದಾಗಿ ಪಡೆದು ಪರಿಶೀಲಿಸುವ ಸ್ಥಿತಿಯಲ್ಲಿರಲಿಲ್ಲ. ಒಮ್ಮೊಮ್ಮೆ ಬೆಳಗ್ಗೆ ಎಂಟರಿಂದ ರಾತ್ರಿ ಹತ್ತರ ತನಕ ಆಫೀಸಲ್ಲಿ ಕೂರುವ ಅನಿವಾರ್ಯತೆ ಒದಗುತ್ತಿತ್ತು. ಹೀಗಾಗಿ ನನ್ನನ್ನು ಭೇಟಿ ಮಾಡಲು ಬರುವವರನ್ನು ವಿಚಾರಿಸಿ ನಿಜಕ್ಕೂ ಕೆಲಸವಿದ್ದರೆ ಮಾತ್ರ ನನ್ನ ಛೇಂಬರ್‌ಗೆ ಬರಬೇಕೆಂದು, ಇಲ್ಲದಿದ್ದರೆ ವಿನಾಕಾರಣ ಕಾಲಹರಣ ಮಾಡುವವರನ್ನು ಒಳಕ್ಕೆ ಬಿಡಬಾರದೆಂದು ನನ್ನ ಸಹಾಯಕರಿಗೆ ತಾಕೀತು ಮಾಡಿದುದ್ದರ ಪರಿಣಾಮ ಕಡ್ಡಾಯವಾಗಿ ಯಾರನ್ನೂ ನನ್ನ ಛೇಂಬರ್ ಒಳಕ್ಕೆ ಬಿಡುತ್ತಿರಲಿಲ್ಲ.
ಮಾರ್ಚ್ ತಿಂಗಳ ಯಾವುದೋ ದಿನಾಂಕವಿರಬಹುದು, ಮಧ್ಯಾಹ್ನ ಮೂರು ಅಥವಾ ನಾಲ್ಕು ಗಂಟೆ, ಛೇಂಬರ್‌ನ ಕಡತಗಳ ಮತ್ತು ರೆಫರೆನ್ಸ್ ಪುಸ್ತಕಗಳ ನಡುವೆ ಮುಳುಗಿಹೋಗಿದ್ದೆ. ನನ್ನ ಸಹಾಯಕ ಸತ್ಯಂ ನಾಕಾರು ಬಾರಿ ಒಳಕ್ಕೆ ಬಂದು ನನ್ನ ನೋಡಿ ಹೊರಕ್ಕೆ ಹೋದ. ನಾನು ಕೆಲಸದಲ್ಲಿದ್ದರೂ ಆತ ಬಂದು ಹೋಗುತ್ತಿದ್ದುದು ನನ್ನ ಗಮನಕ್ಕೆ ಬಂದು ‘‘ಏನು ಸತ್ಯಂ?’’ ಅಂದೆ. ಸತ್ಯಂ ಭಯ ಮಿಶ್ರಿತ ವಿನಯದಿಂದ ‘‘ಅದ್ಯಾರೊ ಇಬ್ಬರು ಬಂದಿದ್ದಾರೆ ಸರ್. ಅದೆಷ್ಟು ಹೇಳಿದರೂ ಕೇಳುತ್ತಿಲ್ಲ, ಸುಮಾರು ಒಂದೆರಡು ಗಂಟೆಗಳಿಂದ ನಿಮ್ಮನ್ನು ನೋಡಲೇಬೇಕೆಂದು ಹಠ ಹಿಡಿದಿದ್ದಾರೆ. ಒಂದು ಕ್ಷಣ ನೋಡಿ ಹೋಗುತ್ತೇವೆಂದು ಅಂಗಲಾಚುತ್ತಿದ್ದಾರೆ’’ ಅಂದ. ಯಾಕೋ ಮನ ಕರಗಿ ‘‘ಒಳಕ್ಕೆ ಬರಲಿಕ್ಕೆ ಹೇಳಿ’’ ಎಂದೆ. ನೋಡಿದ ತಕ್ಷಣ ಉತ್ತರ ಕರ್ನಾಟಕದವರೆಂದು ಹೇಳಬಹುದಾದ ವೇಷಭೂಷಣ, ಅತ್ಯಂತ ಕೊಳೆಯಾದ ಬಿಳಿ ಷರ್ಟು, ಧೋತಿ ಮತ್ತು ಅಷ್ಟೇ ಕೊಳೆಯಾದ ಗಾಂಧಿ ಟೋಪಿಗಳೊಂದಿಗೆ ಒಳಬಂದರು. ಅವರು ಇದ್ದ ಸ್ಥಿತಿ ಕಂಡರೆ ಅವರು ಊರು ಬಿಟ್ಟು ಬಂದು ಅನೇಕ ದಿನಗಳಾಗಿದ್ದು, ದೇಹಕ್ಕೆ ನೀರನ್ನು ತೋರಿಸಿರಬಹುದಾದ ಸುಳಿವೇ ಇರಲಿಲ್ಲ.
ಭಯಭೀತರಾಗಿ ಒಳ ಬಂದರು. ನಾನು ಅವರನ್ನು ಕೂರಲಿಕ್ಕೆ ಹೇಳಿ ಕುರ್ಚಿ ತೋರಿಸಿದೆ. ಕೂರಲು ಹಿಂಜರಿದರು, ನಾನು ಬಲವಂತವಾಗಿ ಹೇಳಿದ ನಂತರ ಕುರ್ಚಿಯ ತುದಿಯಲ್ಲಿ ಕೂತರು. ಏನೂ ಕೇಳದೆ ‘‘ನಮ್ಮ ಜಾತಿಯನ್ನು ಪಟ್ಟಿಯಲ್ಲಿ ಸೇರಿಸಬೇಕು’’ ಅಂದರು. ‘‘ಯಾವ ಜಾತಿ’’ ಕೇಳಿದೆ, ‘‘ನಾವು ಜಾತಗಾರರು’’ ಅಂದರು. ‘‘ಜಾತಗಾರರೇ, ನಾನು ಕೇಳೇ ಇಲ್ಲವಲ್ಲ? ಈವರೆಗೂ ಯಾವ ಪಟ್ಟಿಯಲ್ಲಿದ್ದೀರಿ?’’ ಎಂದು ಕೇಳಿದೆ. ‘‘ಯಾವ ಪಟ್ಟಿಯಲ್ಲೂ ಇಲ್ಲ, ತಹಶೀಲ್ದಾರ ಸರ್ಟಿಫಿಕೇಟ್ ಕೊಡಲು ಒಲ್ಲೆ ಅಂತಾನೆ’’ ಅಂದರು. ನಾನು ‘‘ಚಾ ಕುಡಿತೀರ?’’ ಕೇಳಿದೆ. ‘‘ಬ್ಯಾಡ್ರಿ’’ ಅಂದರು. ‘‘ಊಟ ಮಾಡ್ತೀರ?’’ ಎಂದು ಕೇಳಿದೆ. ಸುಮ್ಮನಿದ್ದರು. ನನಗೆ ಅರ್ಥವಾಯಿತು, ಆಗಲೇ ನಾಲ್ಕು ಗಂಟೆ ಆಗ್ತಿದೆ, ಇನ್ಯಾವಾಗ ತಿನ್ನುತ್ತಾರೆ ಅಂತ ಸತ್ಯಂನ ಕರೆದು ‘ರವೆ ಇಡ್ಲಿ’ ತರಿಸಿದೆ. ನಾಚಿಕೊಂಡು ತಿಂದು ಚಾ ಕುಡಿದರು.. ‘‘ಹಿಂದೆ ಆಯೋಗಕ್ಕೆ ಅರ್ಜಿ ಕೊಟ್ಟಿದ್ದೀರ?’’ ಎಂದು ಕೇಳಿದೆ. ‘‘ಕೊಟ್ಟೀವ್ರಿ’’ ಅಂದರು. ನಾನು ನಮ್ಮ ಕಡತಗಳಲ್ಲಿ ಹುಡುಕಿಸಿದೆ, ಅರ್ಜಿಯ ಸುಳಿವು ಸಿಗಲಿಲ್ಲ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಹುಡುಕಿದೆ, ಜಾತಗಾರರ ಹೆಸರಿರಲಿಲ್ಲ. ಎಸ್‌ಸಿ/ಎಸ್‌ಟಿ ಪಟ್ಟಿಯಲ್ಲಿ ಹುಡುಕಿದೆ ಇವರ ಹೆಸರಿರಲಿಲ್ಲ. ಕಡೆಗೆ ‘‘ಮೋಸ್ಟ್ ಬ್ಯಾಕ್ ವರ್ಡ್’’ ಎಂದಿದ್ದ ಪಟ್ಟಿಯಲ್ಲಿ ‘ಬಿ’ ಸಮೂಹದ ಕ್ರಮ ಸಂಖ್ಯೆ 47ರ ಗಣಿಕ (ಕುಲಾವಂತ, ಸಾನಿ) ಜಾತಿಗಳೊಂದಿಗೆ ಜಾತಗಾರ ಎಂಬ ಉಪಜಾತಿಯನ್ನು ನಮೂದಿಸುವುದು ಗಮನಕ್ಕೆ ಬಂತು. ಹಾವನೂರ ವರದಿಯಲ್ಲೂ ಜಾತಗಾರ ಹೆಸರು ಸಿಗಲಿಲ್ಲ ಮತ್ತು ವೆಂಕಟಸ್ವಾಮಿ ಆಯೋಗದ ವರದಿಯಲ್ಲಿ ‘ಜಾತಿಗೇರ’ ಎಂಬ ಹೆಸರಲ್ಲಿ ಕಾಣಿಸಿಕೊಂಡಿತು. ಜಸ್ಟೀಸ್ ಚಿನ್ನಪ್ಪ ರೆಡ್ಡಿ ವರದಿಯಲ್ಲಿ ಮತ್ತೆ ಮಾಯವಾದ ‘ಜಾತಗಾರ’ರು ಮುಸ್ಲಿಮ್ ಉಪಜಾತಿಗಳ ಪಟ್ಟಿಯಲ್ಲಿ ‘ಜಾತಿಗೇರ’ ಎಂಬ ಹೆಸರಲ್ಲಿ ಕಾಣಿಸಿಕೊಂಡರು. ಮಿಕ್ಕಂತೆ ದಕ್ಷಿಣ ಭಾರತದ ಜಾತಿವರ್ಗಗಳನ್ನು ಮೊದಲಿಗೆ ಗುರುತಿಸಿ ಪಟ್ಟಿಮಾಡಿದ ಎಡ್ಗರ್ ಥರ್ಸ್ಟಿಸ್ ರವರ ‘ಕ್ಯಾಸ್ಟ್ ಆಂಡ್ ಟ್ರೈಬ್ಸ್ ಆಫ್ ಸದರನ್ ಇಂಡಿಯಾ’ದಲ್ಲಾಗಲಿ, ನಂಜುಂಡಯ್ಯ ಮತ್ತು ಅಯ್ಯರ್‌ರವರ ‘ದಿ ಮೈಸೂರು ಟ್ರೈಬ್ಸ್ ಆಂಡ್ ಕಾಸ್ಟ್’ ಗ್ರಂಥಗಳಲ್ಲೂ ‘ಜಾತಗಾರ’ ಜಾತಿ ಕಾಣಿಸಿಕೊಂಡಿಲ್ಲ. ಈ ಜಾತಗಾರರನ್ನು ಕುಲಶಾಸ್ತ್ರೀಯ ಗ್ರಂಥಗಳಲ್ಲಿ ಹುಡುಕುವುದು ಕಷ್ಟವೆಂದು ಅರಿವಾದ ಮೇಲೆ ಅವರನ್ನೇ ಕೇಳತೊಡಗಿದೆ. ಅವರು ಹೇಳಿದಂತೆ ಅವರು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡುಚಿ ಬಳಿಯ ಯಾವುದೋ ಹಳ್ಳಿಯಿಂದ ಬಂದವರೆಂದು ಹೇಳಿದರು. ‘‘ನಿಮ್ಮ ಕುಲವೃತ್ತಿ ಏನು?’’ ಕೇಳಿದೆ. ಅವರು ತಲೆಬಾಗಿ ಹೇಳಲು ಹಿಂಜರಿದರು. ಕಡೆಗೆ ನಾಲ್ಕಾರು ಬಾರಿ ಕೇಳಿದ ಮೇಲೆ ‘‘ನಾವು ಎಮ್ಮೆಗೆ ಶೇವಿಂಗ್ ಮಾಡುವವರು’’ ಎಂದರು. ನನಗೆ ಆಶ್ಚರ್ಯವಾಯಿತು, ‘‘ಎಮ್ಮೆಗೆ ಶೇವಿಂಗ್ ಮಾಡಲಿಕ್ಕೂ ಈ ದೇಶದಲ್ಲಿ ಒಂದು ಜಾತಿ ಇದೆಯೇ..?’’ ಈ ಸಂದರ್ಭದಲ್ಲೂ ತಮಾಷೆ ಮಾಡಿದೆ. ‘‘ಅಲ್ಲ ಕಣಯ್ಯ ಮನುಷ್ಯರಿಗೆ ಶೇವಿಂಗ್ ಮಾಡುವವರ ಸಮಸ್ಯೆನೇ ಇನ್ನೂ ಬಗೆಹರಿದಿಲ್ಲ ಹೀಗಿರುವಾಗ ಎಮ್ಮೆಗೆ ಶೇವಿಂಗ್ ಮಾಡುವವರ ಸಮಸ್ಯೆಯನ್ನು ಯಾವಾಗ ಪರಿಹರಿಸಬೇಕು?’’ ಎಂದು ನನ್ನೊಳಗೆ ನಾನೇ ಗೊಣಗಿದೆ. ‘‘ಇಷ್ಟಕ್ಕೂ ಎಮ್ಮೆಗೆ ಶೇವಿಂಗ್ ಯಾಕೆ ಮಾಡಬೇಕು?’’ ಎಂದೆ. ‘‘ಎಮ್ಮೆಗೆ ಹೇನು ಬೀಳ್ತಾವಲ್ರಿ, ಆಗ ಸ್ವಾಮ್ಯೇರು ನಮ್ಮನ್ನ ಕರೆದು ಎಮ್ಮೆಗೆ ಕೂದಲು ಕೆರಸ್ತಾರ’’ ಅಂದರು. ಉತ್ತರ ಕರ್ನಾಟಕದ ಪಳಪಳ ಶೈನಿಂಗ್ ಹೊಡೆಯುವ ಎಮ್ಮೆಗಳು ಆಗ ನನ್ನ ಕಣ್ಣ ಮುಂದೆ ಬಂದವು. ಈಚೆಗೆ ಅದ್ಯಾವುದೋ ಕ್ರೀಮು ತಗೊಂಡು ಒರೆಸಿದರೆ ಎಮ್ಮೆಗಳ ಮೈಮೇಲಿನ ಕೂದಲು ಉದುರಿ ಮೈ ನುಣ್ಣಗಾಗುತ್ತದಂತೆ. ಆದ್ದರಿಂದ ಈಚೀಚೆಗೆ ಸ್ವಾಮ್ಯೇರು ಜಾತಗಾರರನ್ನು ಕರೆಯುತ್ತಿಲ್ಲವಂತೆ, ಇದರಿಂದಾಗಿ ಎಮ್ಮೆಗೆ ಶೇವಿಂಗ್ ಮಾಡುವ ಕುಲವೃತ್ತಿಯನ್ನೂ ಕಳೆದುಕೊಂಡ ಜಾತಗಾರರು ಈಚೆಗೆ ಭಿಕ್ಷೆ ಮತ್ತು ಕೂಲಿನಾಲಿ ಮಾಡುತ್ತಾರಂತೆ. ಕೊನೆಗೆ ಬಂದಿದ್ದವರ ಹೆಸರು ಕೇಳಿದೆ, ಆತ ‘‘ಹಾಜಿಸಾಬ ರಾಜಸಾಬ ಜಾತಗಾರ’’ ಎಂದ ಆತನೇ ಅವರ ಸಂಘದ ಅಧ್ಯಕ್ಷನಂತೆ. ಆಗಷ್ಟೇ ನನಗೆ ಅರ್ಥವಾದದ್ದು ಜಾತಗಾರರು ಮುಸ್ಲಿಮರೊಳಗಿನ ಯಾವುದೋ ಉಪಜಾತಿ ಎಂಬುದು.
ಕಡೆಗೆ ಅರ್ಜಿ ಕೊಡಿ ಎಂದೆ, ಇಬ್ಬರು ಮುಖ ಮುಖ ನೋಡಿಕೊಂಡರು. ನನಗೆ ಅರ್ಥವಾಯಿತು. ನಮ್ಮ ಗುಮಾಸ್ತರಾಗಿದ್ದ ನಾಗರಾಜ್ ರಾವ್‌ರನ್ನು ಕರೆದು ಅವರು ಬರೆದಂತೆ ನಾನೇ ಡಿಕ್ಟೇಷನ್ ಕೊಟ್ಟು ಅರ್ಜಿ ತಯಾರಿಸಿ ಅವರಿಬ್ಬರ ಹೆಬ್ಬೆಟ್ಟು ಗುರುತು ಪಡೆದು ಆಯೋಗದ ಅಧ್ಯಕ್ಷನಾಗಿ ಅರ್ಜಿ ಸ್ವೀಕರಿಸಿ ಅದನ್ನು ದಾಖಲಿಸಿ ಬಹಿರಂಗ ವಿಚಾರಣೆಗೆ ಬರುವಂತೆ ಅವರನ್ನು ತಯಾರು ಮಾಡಿ ಕಳಿಸಿಕೊಟ್ಟೆ.
ಜಾತಗಾರರ ಬಗ್ಗೆ ನನ್ನ ಚಿಂತೆ ಮತ್ತು ‘ಸಂಶೋಧನೆ’ ಆರಂಭವಾಯಿತು. ಅಷ್ಟರಲ್ಲಿ ಆಗಿನ ರಾಯಭಾಗದ ಶಾಸಕ ಘಾಟಕೆಯವರು ಜಾತಗಾರರನ್ನು ಹಿಂದುಳಿದ ಪಟ್ಟಿಗೆ ಸೇರಿಸುವಂತೆ ನನಗೆ ಪತ್ರ ಬರೆದರು.
ಜಾತಗಾರರು ಮುಸ್ಲಿಮ್ ಜನಾಂಗವಾಗಿದ್ದು ಅವರು ತಮ್ಮ ಅಸ್ಮಿತೆಗಾಗಿ ಹೋರಾಡುತ್ತಿರುವುದು ನನ್ನ ಗಮನಕ್ಕೆ ಬಂತು. ಉತ್ತರ ಕರ್ನಾಟಕದ ಬೆಳಗಾವಿ, ರಾಯಚೂರು, ಗುಲ್ಬರ್ಗಾ, ಬೀದರ್ ಪ್ರದೇಶಗಳ ಗ್ರಾಮಗಳಲ್ಲಿ ಅಲ್ಲಲ್ಲಿ ಜಾತಗಾರರದು ನಾಲ್ಕಾರು ಮನೆಗಳಿವೆ. ಇವರ ಜನಸಂಖ್ಯೆ ಕರ್ನಾಟಕದಲ್ಲೆಲ್ಲ ನೋಡಿದಾಗ ಹತ್ತಿಪತ್ತು ಸಾವಿರ ಮೀರಿರಲಾರರು. ಇವರಲ್ಲಿ ವಿದ್ಯಾವಂತರ ಸಂಖ್ಯೆ ಒಂದು ಪರ್ಸೆಂಟ್ ಕೂಡ ಇರಲಾರದು. ಒಬ್ಬರೂ ಸರಕಾರಿ ಉದ್ಯೋಗದಲ್ಲಿಲ್ಲ. ಇವರು ‘ಜಾತಿಗಾರ’ ಎಂದು ಹೇಳುವ ಕಾರಣಕ್ಕೆ ಯಾವ ಪಟ್ಟಿಯಲ್ಲೂ ಇಲ್ಲದ ಕಾರಣಕ್ಕೆ, ಇವರಿಗೆ ಜಾತಿ ಸರ್ಟಿಫಿಕೆಟ್ ಸಿಗುತ್ತಿಲ್ಲ. ಜಾತಗಾರರು ಮುಸ್ಲಿಮ್ ಸಮುದಾಯಕ್ಕೆ ಬರುವರೆಂಬ ಪರಿಜ್ಞಾನ ತಹಶೀಲ್ದಾರರಿಗೆ ಇಲ್ಲದ ಕಾರಣ ಮುಸ್ಲಿಮ್ ಜನಾಂಗದಡಿಯೂ ಸರ್ಟಿಫಿಕೇಟ್ ಸಿಗುವುದಿಲ್ಲ. ಆ ಕಾರಣಕ್ಕೆ ಅತಂತ್ರವಾಗಿರುವ ಈ ನತದೃಷ್ಟ ಜಾತಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲಾಗದೆ ಅಲೆಮಾರಿಗಳಾಗಿ, ಭಿಕ್ಷಾಟನೆ, ಕೂಲಿ-ನಾಲಿ ಮಾಡುತ್ತ ಅತಂತ್ರರಾಗಿದ್ದಾರೆ. ಎಮ್ಮೆಗೆ ಶೇವಿಂಗ್ ಮಾಡುವ ಕಾಯಕವನ್ನು ಈಚೆಗೆ ಬಂದ ಹೇರ್ ರಿಮೂವಿಂಗ್ ಕ್ರೀಮ್‌ಗಳು ಕಿತ್ತುಕೊಂಡಿವೆ.
ಹಿಂದುಳಿದ ವರ್ಗದ ಪ್ರವರ್ಗ 1ರಲ್ಲಿ ಬರುವ ಮುಸ್ಲಿಮ್ ಉಪಜಾತಿಗಳಾದ ಚಪ್ಪರ್ ಬಂದ್, ಪಿಂಜಾರ, ದರ್ವೇಶಿ, ನದಾಫ್‌ಗಳೊಂದಿಗೆ ಈ ಜಾತಿಯನ್ನು ಸೇರಿಸಿ ಪ್ರವರ್ಗ 1ರಲ್ಲಿ ಈ ಜಾತಿಗೆ ಅಸ್ಮಿತೆ ನೀಡಬೇಕೆಂದು ಲೆಕ್ಕಾಚಾರ ಹಾಕಿ ಬಹಿರಂಗ ವಿಚಾರಣೆ, ಸ್ಥಳ ಪರಿಶೀಲನೆ ಮುಂತಾದ ಪ್ರಕ್ರಿಯೆಗಳನ್ನೆಲ್ಲ ಇದಕ್ಕೆ ಅನುಕೂಲವಾಗುವಂತೆ ಸಿದ್ಧತೆ ಮಾಡಿಕೊಂಡೆ. ಆದರೆ ಜಾತಗಾರರು ಮುಸ್ಲಿಮರಾದ್ದರಿಂದಲೂ ಮುಸ್ಲಿಮ್ ಉಪಜಾತಿಗಳಾದ ಚಪ್ಪರ್ ಬಂದ್, ಪಿಂಜಾರ ಮುಂತಾದ ಎಂಟು ಜಾತಿಗಳು ಈಗಾಗಲೇ ಪ್ರವರ್ಗ 1ರಲ್ಲಿ ಶೇ. 5 ಸವಲತ್ತು ಪಡೆಯುತ್ತಿದ್ದುದು ಜೊತೆಗೆ ಪ್ರವರ್ಗ 2(ಬಿ)ಯಲ್ಲಿ ಶೇ. 4 ಸವಲತ್ತು ಪಡೆಯುತ್ತಿರುವುದರ ಕಾರಣ ನೀಡಿ ನನ್ನ ಆಯೋಗದ ಕೆಲ ಸದಸ್ಯರು ಜಾತಗಾರರನ್ನು ಪಟ್ಟಿಗೆ ಸೇರಿಸಲು ಒಪ್ಪಲಿಲ್ಲ. ಇನ್ನೂ ಇಂತಹ ಅನೇಕ ಜಾತಿವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡಬೇಕೆಂಬ ಆಶಯ ಮತ್ತು ಕಾಳಜಿ ಇದ್ದುದರಿಂದ ಮತ್ತೂ ಇನ್ನಷ್ಟು ದಿಕ್ಕಿಲ್ಲದ ಸಮುದಾಯಗಳ ಕೆಲಸಗಳಿದ್ದುದರಿಂದ ಇವರ್ಯಾರನ್ನೂ ಎದುರು ಹಾಕಿಕೊಳ್ಳುವ ಧೈರ್ಯ ತೋರಲಿಲ್ಲ. ಅದರಲ್ಲೂ ಬಿಜೆಪಿ ಸರಕಾರವೇ ನನ್ನ ಎದುರಿತ್ತು. ಜಾತಗಾರರು ಪ್ರವರ್ಗ 1 ಮತ್ತು ಪ್ರವರ್ಗ 2(ಬಿ) ಯಲ್ಲಿ ಜಾತಿ ಪ್ರಮಾಣಪತ್ರ ಪಡೆಯಲಾಗದೆ ಒದ್ದಾಡುತ್ತಿದ್ದುದನ್ನು ವಿವರಿಸಿ ಹೇಳಿದರೂ ಯಾರೂ ಅರ್ಥಮಾಡಿಕೊಳ್ಳುವ ಪರಿಸ್ಥಿತಿಯಲ್ಲಿರಲಿಲ್ಲ. ಇವರು ಮುಸ್ಲಿಮ್ ಜನಾಂಗದವರಾಗಿದ್ದೇ ನಮ್ಮವರ ಪೂರ್ವಾಗ್ರಹಕ್ಕೆ ಕಾರಣವಾಗಿತ್ತು. ಬಾಬಾಸಾಹೇಬರು ಸಂವಿಧಾನದ ಪರಿಚ್ಛೇದ 15(4)ರಲ್ಲಿ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಅಥವಾ ಪ್ರಾತಿನಿಧ್ಯ ನೀಡಬೇಕೆಂದು ಉಲ್ಲೇಖ ನೀಡಿದ್ದರು. ಈ ಕಾರಣಕ್ಕಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಈ ಜಾತಗಾರರು ಮೀಸಲಾತಿಗೆ ಅಥವಾ ಪ್ರಾತಿನಿಧ್ಯಕ್ಕೆ ಅರ್ಹರಾಗಿದ್ದರೂ ಸಂದರ್ಭಗಳು ಈ ಎಲ್ಲವನ್ನೂ ನಿರಾಕರಿಸುತ್ತಿದ್ದವು. ನಾನೂ ಅಸಹಾಯಕನಾಗಿದ್ದು ಅತ್ಯಂತ ಸಣ್ಣ ನಿರ್ಗತಿಕ ಸಮುದಾಯವೊಂದಕ್ಕೆ ಸಾಮಾಜಿಕ ನ್ಯಾಯ ಕೊಡಲು ಸಾಧ್ಯವಾಗಲಿಲ್ಲವಲ್ಲ ಎಂಬ ನೋವು, ಅಸಹಾಯಕತೆಯಿಂದ ನರಳಿದೆ. ಕಡೆಗೆ ಜಾತಗಾರರಿಗೆ ಸರಕಾರದಿಂದ ‘ವಿಶೇಷ ಪ್ಯಾಕೇಜ್’ ನೀಡಬೇಕೆಂದು ಸಲಹೆ ನೀಡಿ ಕೈತೊಳೆದುಕೊಂಡೆ.
ಜಾತಗಾರರಿಗೆ ಸಾಮಾಜಿಕ ನ್ಯಾಯ ನೀಡಲಾಗಲಿಲ್ಲವಲ್ಲ ಎಂಬ ‘ಗಿಲ್ಟ್’ ಬಹುಶಃ ನಾನು ಸಾಯುವವರೆಗೂ ಹೋಗಲಾರದೆನಿಸುತ್ತದೆ.







