ನೆಹರೂ ಎಂಬ ದೇಶ ಕಟ್ಟಿದ ನೀಲನಕ್ಷೆಯ ಧೀಮಂತ

ಏಕಕಾಲಕ್ಕೆ ದುರ್ಭರ ಆರ್ಥಿಕ ಆದಾಯದ ಸನ್ನಿವೇಶವನ್ನೂ ನಿಭಾಯಿಸುತ್ತಾ, ಬಡತನ, ನಿರಕ್ಷರತೆ, ಆರೋಗ್ಯ ಪೀಡೆಗಳಿಂದ ತತ್ತರಿಸುತ್ತಿದ್ದ ದೇಶವನ್ನು ಇಂಚಿಂಚೇ ಸಂಭಾಳಿಸಬೇಕು, ಆಗಾಗ ಪುಟಿದೇಳುವ ದೇಶೀಯ ಭಾವನಾತ್ಮಕ ಸಂಗತಿಗಳನ್ನು ಸಂವಾದ, ಸಮಾಲೋಚನೆಗಳ ಮೂಲಕವೇ ನಿಭಾಯಿಸಬೇಕು; ಅಂತರ್ರಾಷ್ಟ್ರೀಯವಾಗಿ ಸ್ವಾಯತ್ತ ನಿಲುಮೆ ಉಳಿಸಿಕೊಳ್ಳಲು ಹಗ್ಗದ ನಡಿಗೆಯಲ್ಲಿರಬೇಕು. ಜೊತೆಗೆ ಸಂವಿಧಾನದ ಪಾರಮ್ಯವನ್ನು ಅದರ ಧರ್ಮ ನಿರಪೇಕ್ಷ ಲಕ್ಷಣವನ್ನು ಉಳಿಸಿ ಬೆಳೆಸಬೇಕು.
ನೆಹರೂ ಮುಖ್ಯವಾಗುವುದು ಇವನ್ನೆಲ್ಲಾ ನಿರ್ವಹಿಸಿದ ರೀತಿಗೆ.
ಮಲಬದ್ಧತೆ ಆದರೂ, ಭೇದಿಯಾದರೂ ನೆಹರೂ ಅವರನ್ನು ಮೋದಿ ದೂರುವ ಕಾಲ ಇದು. ಅವರ ಕಣ್ಸನ್ನೆಯ ಆಣತಿಯ ಮೇಲೆ ಬಿಜೆಪಿಯ ಟ್ರೋಲ್ ಆರ್ಮಿಗೆ ನೆಹರೂ ಅವರನ್ನೂ ಗಾಂಧಿಯನ್ನೂ ಚಾರಿತ್ರ್ಯ ವಧೆ ಮಾಡುವುದು ಪೂರ್ಣಾವಧಿ ಕೆಲಸವಾಗಿದೆ.
ಈ ಚಾರಿತ್ರ್ಯ ವಧೆಯನ್ನು ಆರೆಸ್ಸೆಸ್ ಮೌನವಾಗಿ ಪ್ರೋತ್ಸಾಹಿಸಿ ವಿಕೃತ ತೃಪ್ತಿ ಪಡೆಯುತ್ತಿದೆ. ಇದಕ್ಕೆ ಕಾರಣ ಸರಳ. ಇಡೀ ಹಿಂದುತ್ವದ ವಿಕೃತ ರಾಷ್ಟ್ರವಾದದ ತರ್ಕವನ್ನು ಎದುರಿಸಿ ಸಂವಿಧಾನವನ್ನು ಮುಂಚೂಣಿಗೆ ತಂದ ನೆಹರೂ, ಆರೆಸ್ಸೆಸ್ ಮತ್ತು ಅದರ ಸಹ ಸಂಸ್ಥೆಗಳ ರಾಜಕೀಯ ಅಜೆಂಡಾಕ್ಕೆ ಬಲುದೊಡ್ಡ ತಡೆಗೋಡೆಯಾಗಿದ್ದರು.
ಆದರೆ ನೆಹರೂ ಅವರ ಕೊಡುಗೆ-ಕಾಣ್ಕೆ ಬಗ್ಗೆ ಸಮರ್ಥಿಸಿಕೊಳ್ಳಬೇಕಾದ ಕಾಂಗ್ರೆಸ್ ತುಂಬಾ ಚುನಾವಣಾ ರಾಜಕೀಯದ ಅಮಲಿನಲ್ಲಿರುವ ಗುಂಡು ಗೋವಿ ಅಜ್ಞಾನಿಗಳೇ ತುಂಬಿದ್ದಾರೆ.
ಕಾಂಗ್ರೆಸ್ನ ಮಟ್ಟಿಗೆ ಈ ದೇಶದ ಇತಿಹಾಸ ಮತ್ತು ತನ್ನ ಆಡಳಿತದ ಇತಿಹಾಸಗಳೆರಡೂ ಒಂದಕ್ಕೊಂದು ಹೆಣೆದುಕೊಂಡಿದೆ, ಈ ಚರಿತ್ರೆಯ ಗುಣಾತ್ಮಕ ಅಂಶಗಳು ಪರಂಪರೆಯ ಪ್ರಜ್ಞೆಯ ಭಾಗ ಎಂದು ಕಾಂಗ್ರೆಸ್ ಮಂದಿಗೆ ಅನ್ನಿಸಿಯೇ ಇಲ್ಲ.
ಈಗ ನಡೆಯುತ್ತಿರುವ ನೆಹರೂ ಚಾರಿತ್ರ್ಯಹನನದ ಹಿಂದೆ 60ರ ದಶಕದಲ್ಲಿ ಅಂದು ವಿರೋಧ ಪಕ್ಷದ ಸ್ಪೇಸ್ ತುಂಬಿಕೊಂಡಿದ್ದ ಸಮಾಜವಾದಿ ನಾಯಕರ ಕೊಡುಗೆ ಯಥೇಚ್ಛವಾಗಿದೆ. ಅಡಿಗರ ‘ನೆಹರೂ ನಿವೃತ್ತರಾಗುವುದಿಲ್ಲ’ ಕವನ ಈ ಬಗೆಯ ಮಳೆ ನೀರು ಇಂಗಿ ಝರಿಯಾದ ಪ್ರಕ್ರಿಯೆಯ ಉದಾಹರಣೆ. ಶೇ. 10ಕ್ಕೆ ಮೋಸವಿಲ್ಲ ಎಂದು ಅಡಿಗರೂ ಕಟಕಿಯಾಡುತ್ತಾರೆ.
ದೇಶದ ಪರಂಪರೆ ಸಂವಿಧಾನದ ಆಶಯಗಳ ಸೌಧಗಳನ್ನೇ ಬಾಬರಿ ಮಸಿದಿ ಕೆಡವಿದಷ್ಟೇ ನಿಷ್ಕರುಣೆಯಿಂದ ಕೆಡವಿ ಧೂಳೆಬ್ಬಿಸುತ್ತಿರುವ ಭಾಜಪ ಮತ್ತು ಅದರ ಅಂಗ ಸಂಸ್ಥೆಗಳ ಕಾರುಬಾರಿನಲ್ಲಿ ನೆಹರೂ ಘಾಸಿಗೊಂಡ ಯೋಧನಂತೆ ಕಾಣಿಸುತ್ತಿದ್ದಾರೆ. ಒಂದು ಚಾರಿತ್ರಿಕ ಸಂದರ್ಭದಲ್ಲಿ ನೋಡುವ ಕಾಮನ್ ಸೆನ್ಸ್ ಮಾಯವಾದರೆ ನೆಹರೂ ಸಹಿತ ಎಲ್ಲಾ ಧೀಮಂತರೂ ಹಲ್ಲೆಗೊಳಗಾಗುತ್ತಾರೆ. ಇನ್ನು ಹಿಂದುತ್ವ ಪರಿವಾರದ ತಂತ್ರಗಾರಿಕೆ ಸರಳ. ಏನೋ ಒಂದು ಸಾಂದರ್ಭಿಕ ವಿವರವನ್ನು ಅದರ ಸಂದರ್ಭದಿಂದ ಕಿತ್ತು ಅದನ್ನು ಹೀನಾಯವಾಗಿ ಬಿಂಬಿಸುವ ತಂತ್ರ ಇದು. ಈ ಡೀಪ್ ಫೇಕ್ ಕಾಲದಲ್ಲಿ ಇದು ಸಲೀಸು.
ನೆಹರೂ ಕುರಿತಂತೆ ಸುಮ್ಮನೆ ಕೆಲವು ಚಾರಿತ್ರಿಕ ಅಂಶಗಳನ್ನು ಗಮನಿಸುತ್ತಾ ಹೋಗೋಣ
ಜಗತ್ತು ಕಂಡ ಘೋರ ಆಘಾತಗಳಲ್ಲೊಂದಾದ ದೇಶ ವಿಭಜನೆಯ ಹಿಂಸೆ, ಸಂಕಷ್ಟಗಳ ಭಾರ ಹೊತ್ತೇ ನೆಹರೂ ಮತ್ತು ಅವರ ತಂಡ ದೇಶ ಕಟ್ಟುವ ಕೆಲಸಕ್ಕಿಳಿಯಬೇಕಾಯಿತು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾವನಾತ್ಮಕ ಕನಸುಗಳ ಉಡ್ಡಯನ ಅನಿವಾರ್ಯ. ಆದರೆ ಸ್ವಾತಂತ್ರ್ಯ ದಕ್ಕಿದ ಮೇಲೆ ತಮಗೆ ತಾವೇ ಜವಾಬುದಾರರು ಎಂಬ ಪ್ರಜ್ಞೆ ಆವರಿಸಬೇಕು. ದೇಶದ ಏಕೀಕರಣ ಒಂದು ನಡೆಯಾದರೆ ಸಂವಿಧಾನದ ರಚನೆ ಇನ್ನೊಂದು ಮಜಲು.
ಗಮನಿಸಿ:
► ಸ್ವಾತಂತ್ರ್ಯ ಸಿಕ್ಕಿದಾಗ ದೇಶದ ಬಜೆಟ್ ಗಾತ್ರ ಕೇವಲ ರೂ.197 ಕೋಟಿ (ಹೌದು ತಪ್ಪಾಗಿ ಬರೆದಿಲ್ಲ!!) ಅದು ನಾಲ್ಕಂಕಿ ದಾಟಲು ನಾಲ್ಕು ವರ್ಷ ಬೇಕಾಯಿತು.
► ಇಡೀ ದೇಶದ ಉತ್ಪಾದಕ ವ್ಯವಸ್ಥೆಯನ್ನೇ ವಸಾಹತು ಶಾಹಿ ನಾಶ ಮಾಡಿತ್ತು. ದೇಶಿಯ ಸಂಸ್ಥಾನಗಳ ಅವಸ್ಥೆ ಇದಕ್ಕೆ ಕೊಡುಗೆ ನೀಡಿದೆ. ಇಂದಿನಂತೆ ಅಂದೂ ಉತ್ತರದ ಭಾಗಗಳು ರೋಗಗ್ರಸ್ಥವಾಗಿ ಸಮಸ್ಯೆಗಳ ಕೂರೆ ಕೂಪಗಳಾಗಿ ಕುಳಿತಿದ್ದವು. ದೇಶವನ್ನು ಎಲ್ಲಿಂದ ಕಟ್ಟಲು ಶುರು ಮಾಡುವುದು? ಯಾವ ಕ್ಷೇತ್ರಗಳಿಗೆ ಎಷ್ಟು ಹೂಡಿಕೆ ಮಾಡುವುದು?
► ನೆಹರೂ ಕೃಷಿ ಮತ್ತು ಕೈಗಾರಿಕಾ ಮೂಲ ಸಂರಚನೆ ಬಗ್ಗೆ ಆದ್ಯತೆ ನೀಡಿದರು. ಆದ್ದರಿಂದಲೇ ಉಕ್ಕಿನ ಕಾರ್ಖಾನೆಗಳು, ರಾಸಾಯನಿಕ ಗೊಬ್ಬರದ ಸ್ಥಾವರಗಳು ಸ್ಥಾಪಿತವಾದವು. ದೈತ್ಯ ಅಣೆಕಟ್ಟುಗಳು ನಿರ್ಮಾಣವಾದವು. ಇಂದು ನೆಹರೂ ಅವರನ್ನು ಬೈದು ತಿರುಗಾಡುತ್ತಿರುವ ಒಬ್ಬೊಬ್ಬನ ಬದುಕಿನಲ್ಲೂ ನೆಹರೂ ಕಟ್ಟಿದ ಸಂಗತಿಗಳ ಮುದ್ರೆ ಇದೆ. ನೀರಾವರಿಯಿಂದ ಹಿಡಿದು ಶಾಲೆಗಳ ವರೆಗೆ. ಈ ಮೂಲ ಸಂರಚನೆಗೆ ಬೇಕಾದ ಆರ್ಥಿಕ ಮತ್ತು ಮಾನವ ಸಂಪನ್ಮೂಲ ನೆನೆದರೆ ಎದೆ ಹಾರುತ್ತದೆ.
► ಈಗಷ್ಟೇ ಸ್ವತಂತ್ರಗೊಂಡ ದೇಶಕ್ಕೆ ಬೇಕಾದ ಸಂಸ್ಥೆಗಳೇನು ಎಂಬ ಬಗ್ಗೆ ನೆಹರೂಗೆ ಇದ್ದ ಕಾಣ್ಕೆ 20ನೇ ಶತಮಾನದ ಯಾವ ದೇಶದ ಯಾವ ನಾಯಕನಿಗೂ ಇರಲಿಲ್ಲ.
► ಆಹಾರ ತಂತ್ರಜ್ಞಾನದಿಂದ ಹಿಡಿದು ವಾಕ್ ಶ್ರವಣ ಸಂಶೋಧನೆವರೆಗೆ ಇದು ವ್ಯಾಪಿಸುತ್ತದೆ. ಹೊಸ ನಾಡು ಕಟ್ಟಲು ಆಹಾರ ತಂತ್ರಜ್ಞಾನ, ವಾಕ್ ಶ್ರವಣ ಸಂಸ್ಥೆ, ಭಾಷಾ ಸಂಸ್ಥೆ ಸಹಿತ ಏನೇನು ಬೇಕಾಗಬಹುದೆಂಬ ಚಿಂತನೆಯೇ ಅದ್ಭುತ.
► ಸಾಹಿತ್ಯ ಸಂಸ್ಕೃತಿಯ ಕೇಂದ್ರ ಅಕಾಡಮಿಗಳು, ವಿಜ್ಞಾನ ತಂತ್ರಜ್ಞಾನ ಸಂಶೋಧನಾ ಸಂಸ್ಥೆಗಳು ಕೃಷಿ ಸಂಶೋಧನಾ ಸಂಸ್ಥೆ ಹೀಗೆ ಈ ಪಟ್ಟಿ ಸಾಗುತ್ತದೆ.
► ನಾಲ್ವಡಿ ಬಿಟ್ಟರೆ ಇಷ್ಟು ವ್ಯಾಪಕ ಸಮಗ್ರ ಕಲ್ಪನೆಯ ಸಾಂಸ್ಥಿಕ ರಚನೆಗಳು ನೆಹರೂ ಕನಸಿನಿಂದಲೇ ಹುಟ್ಟಿದ್ದು. ನೆಹರೂ ಎದುರಿದ್ದ ಸಮಸ್ಯೆ, ಸವಾಲುಗಳ ಸಂಕಷ್ಟ ನಾಲ್ವಡಿಯವರಿಗೆ ಇರಲಿಲ್ಲ.
► ನೆಹರೂ ಅವಧಿಯಲ್ಲಿ ಸ್ಥಾಪಿತವಾದ ಸಂಸ್ಥೆಗಳ ಪಟ್ಟಿಯನ್ನು ಬರೆದರೆ ಅದು ಐವತ್ತಾರು ಇಂಚು ಉದ್ದದ ಕಾಗದವಾದೀತು!!
► ಆಂತರಿಕವಾಗಿ ಪ್ರಜಾಸತ್ತೆಯ ಮೂಲ ಮೌಲ್ಯಗಳ ಬಗ್ಗೆ ನೆಹರೂ ಎಷ್ಟು ಪ್ರಜ್ಞಾಶೀಲವಾಗಿದ್ದರು ಅಂದರೆ ಪ್ರತೀ 15 ದಿನಗಳಿಗೊಮ್ಮೆ ಅವರು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತಿದ್ದರು. ನೆಹರೂ ಈ ಪತ್ರಗಳಲ್ಲಿ ಚರ್ಚಿಸಿದ ಆಶಯ ಮತ್ತು ವಿಚಾರಗಳ ಬಾಹುಳ್ಯವೇ ಒಂದು ದೇಶ ಕಟ್ಟುವ ಸೂಚಿ ಲೇಖವಾದೀತು.
► ತಾನು ಬಿಟ್ಟರೆ ಬೇರೆ ಪರ್ಯಾಯವಿಲ್ಲ ಎಂಬ ಸತ್ಯ ಸ್ವತಃ ನೆಹರೂಗೆ ಗೊತ್ತಿತ್ತು. ಈ ಆತ್ಮವಿಶ್ವಾಸವೇ ಅವರನ್ನು ಕೆಲವು ತಪ್ಪು ನಿರ್ಣಯಗಳಿಗೂ ದೂಡಿರಬಹುದು. ಆದರೆ ಅದು ಆ ಕಾಲದ ಆಯ್ಕೆ.
ಈಗ ಮೋದಿ ತಡವರಿಸಿ ದೇಶವನ್ನೇ ಅಪಾಯಕ್ಕೆ ದೂಡುತ್ತಿರುವ ವಿದೇಶಾಂಗ ನೀತಿಯಲ್ಲಿ ನೆಹರೂ ಸಾಧನೆಯನ್ನು ಗಮನಿಸಿ:
► ರಶ್ಯ-ಅಮೆರಿಕಗಳ ಪೈಪೋಟಿಯ ಯುಗವನ್ನು ಶೀತಲ ಸಮರದ ಕಾಲವೆಂದು ಇತಿಹಾಸ ಹೇಳಿದೆಯಷ್ಟೆ. ಒಂದೋ ಅತ್ತ, ಇಲ್ಲಾ ಇತ್ತ ಎಂಬ ಸ್ಥಿತಿ ಜಾಗತಿಕವಾಗಿದ್ದಾಗ ನೆಹರೂ ಅಲಿಪ್ತ ನೀತಿಯನ್ನು ಮುಂದೊತ್ತಿದರು. ಭಾರತದ ನೆಹರೂ, ಈಜಿಪ್ಟ್ನ ನಾಸಿರ್ ಹಾಗೂ ಅಂದಿನ ಯುಗೋಸ್ಲಾವಿಯಾದ ಮಾರ್ಶಲ್ ಟಿಟೋ ಈ ಸಮಾನ ದೂರ ಕಾಪಾಡಿಕೊಳ್ಳುವ ರಾಷ್ಟ್ರಗಳ ವೇದಿಕೆಯನ್ನು ಸೃಷ್ಟಿಸಿದರು. ಇದು ಎರಡು ದಶಕಗಳ ಕಾಲ ತಕ್ಕಮಟ್ಟಿಗೆ ಪ್ರಭಾವಿಯಾಗಿತ್ತು ಎಂಬುದು ನೆಹರೂ ದೃಷ್ಟಾರತನಕ್ಕೆ ಸಾಕ್ಷಿ.
ಧಮಕಿ ಹಾಕಿದರೆ ಹೆದರಿ ಶರಣಾಗುವ ಮೋದಿ ಸರಕಾರದ ವಿಲಕ್ಷಣ ಪುಕ್ಕಲ ನೀತಿಯನ್ನು ಗಮನಿಸಿದಾಗ ನೆಹರೂ ಅವರ ಎರಡು ಸಾಹಸಗಳು ಅಸದೃಶವಾಗಿ ಕಾಣಿಸುತ್ತವೆ.
► ಇಂಡೋನೇಶ್ಯದ ಸುಕಾರ್ಣೋ ಅವರನ್ನು ಡಚ್ ಸೇನಾ ದಾಳಿಯಿಂದ ಪಾರು ಮಾಡಿ ಕರೆದುಕೊಂಡು ಬಂದಿದ್ದು. ವಿಮಾನವನ್ನು ನೇರ ಇಂಡೋನೇಶ್ಯದ ಜಕಾರ್ತಾ ವಿಮಾನ ನಿಲ್ದಾಣದಲ್ಲಿ ಇಳಿಸಿ ಅಲ್ಲಿ ಜಪಾನ್ ಸೈನ್ಯ ಬಿಟ್ಟು ಹೋಗಿದ್ದ ಇಂಧನವನ್ನು ತರಾತುರಿಯಲ್ಲಿ ತುಂಬಿಸಿಕೊಂಡು ಒಂದು ಡಕೋಟಾ ವಿಮಾನದಲ್ಲಿ ಸುಕಾರ್ಣೋ ಅವರನ್ನು ಹತ್ತಿಸಿಕೊಂಡು ವಿಮಾನ ಹೊಡೆದುರುಳಿಸುವ ಡಚ್ ಬೆದರಿಕೆಯನ್ನೂ ಲೆಕ್ಕಿಸದೆ ದಿಲ್ಲಿಗೆ ಕರೆದುಕೊಂಡು ಬಂದ ಸಾಹಸ ಸಿನಿಮೀಯ. ಈ ಸಾಹಸ ಮಾಡಿದ್ದು ನೆಹರೂ ಅವರಿಗೆ ಪ್ರಿಯನಾಗಿದ್ದ ಬಿಜು ಪಟ್ನಾಯಕ್ ಎಂಬ ಸಾಹಸಿ ಯುವಕ. ಡಚ್ ವಸಾಹತುಶಾಹಿ ವಿರುದ್ಧ ಹೋರಾಡುತ್ತಿದ್ದ ಸುಕಾರ್ಣೋ ಪರವಾಗಿ ತರುವಾಯ ಅಪೂರ್ವ ಬೆಂಬಲ ಬಂದ ಕಾರಣಕ್ಕೆ 1947ರ ಡಿಸೆಂಬರ್ನಲ್ಲಿ ಡಚ್ಚರು ಇಂಡೋನೇಶ್ಯ ಬಿಟ್ಟು ತೊಲಗಬೇಕಾಯಿತು.
► ಚೀನಾ ಟಿಬೇಟನ್ನು ಆಕ್ರಮಿಸಿಕೊಂಡಾಗ ದಲಾಯಿ ಲಾಮಾ ಮತ್ತು ಅವರ ಬೆಂಬಲಿಗರಿಗೆ ಭಾರತದಲ್ಲಿ ಆಶ್ರಯ ಕೊಟ್ಟಿದ್ದಲ್ಲದೆ ಅವರ ಜೀವನೋಪಾಯಕ್ಕೂ ಸಹಾಯ ಮಾಡಿದ ನೈತಿಕ ಸ್ಥೈರ್ಯ ಅಂತರ್ರಾಷ್ಟ್ರೀಯವಾಗಿ ಅಪೂರ್ವ. ಈಗಲೂ ಈ ಟಿಬೇಟಿಯನ್ನರು ನಮ್ಮ ನಡುವೆ ಇದ್ದಾರೆ. ಮೊನ್ನೆ ಮೊನ್ನೆ ದಲಾಯಿ ಲಾಮಾರ ಪರವಾಗಿ ಕೇಂದ್ರ ಸಚಿವರೊಬ್ಬರು ಟ್ವೀಟ್ ಮಾಡಿ ಚೀನಾ ಕೆಂಗಣ್ಣು ಮಾಡಿ, ಅದರ ಒತ್ತಡಕ್ಕೆ ಕಿರಣ್ ರಿಜಿಜು ಎಂಬ ಸಚಿವ ದಯನೀಯವಾಗಿ ತನ್ನ ಹೇಳಿಕೆಯನ್ನೇ ಡಿಲೀಟ್ ಮಾಡಬೇಕಾಗಿ ಬಂತು!! ಇದನ್ನು ನೆಹರೂ ನಿರ್ಧಾರದ ಜೊತೆ ಹೋಲಿಸಿ ನೋಡಿ. ಆಗಲೂ ಜಗತ್ತಿನ ಪ್ರಭಾವಿ ದೇಶವಾಗಿದ್ದ ಚೀನಾವನ್ನು ಎದುರು ಹಾಕಿಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದು ಅಪೂರ್ವ. ಈ ಕಾರಣಕ್ಕಾಗಿಯೇ ಚೀನಾದ ಧಾಳಿಯನ್ನು ಭಾರತ ಅನುಭವಿಸಬೇಕಾಯಿತು.
► ವಸಾಹತು ಶಾಹಿಯಿಂದ ಬಿಡುಗಡೆಗೊಂಡ ಮೊದಲ ಮುಂಚೂಣಿ ರಾಷ್ಟ್ರ ಭಾರತ. ಈ ಪರಿಣಾಮ ಹೇಗಿತ್ತೆಂದರೆ ಮುಂದಿನ ವರ್ಷಗಳಲ್ಲಿ ಹತ್ತು ಹಲವು ರಾಷ್ಟ್ರಗಳು ವಸಾಹತುಶಾಹಿ ನೊಗದಿಂದ ಬಿಡುಗಡೆ ಹೊಂದಿದವು. ಈ ಸರಣಿ ಸ್ವಾತಂತ್ರ್ಯಗಳ ಹಿಂದೆ ನೆಹರೂ ಪ್ರಭಾವ, ವ್ಯಕ್ತಿತ್ವ ಮಾದರಿಯಾಗಿ ಕೆಲಸ ಮಾಡಿತ್ತು.
► ಗೋವಾ ವಿಮೋಚನೆ ಆ ಕಾಲದ ಪರಮ ಸಾಹಸದ ದಿಟ್ಟ ಕಾರ್ಯಾಚರಣೆಯಾಗಿತ್ತು. ಯುರೋಪಿನ ವಸಾಹತು ಶಾಹಿ ಶಕ್ತಿಗಳು ಪರಸ್ಪರರ ಅಳಿದುಳಿದ ವಸಾಹತುಗಳನ್ನು ಉಳಿಸಿಕೊಳ್ಳಲು ಪರಸ್ಪರ ಸಹಕಾರದ ನೆಟ್ವರ್ಕ್ ಹೊಂದಿದ್ದವು. ಈ ಹಿನ್ನೆಲೆಯಲ್ಲಿ ಮಿಲಿಟರಿ ದಾಳಿ ಮೂಲಕ ಗೋವಾವನ್ನು ವಿಮೋಚನೆಗೊಳಿಸಿದ್ದು ಅಭೂತಪೂರ್ವ. ಈ ವಿಮೋಚನಾ ದಾಳಿಯಲ್ಲಿ 30ಕ್ಕೂ ಮಿಕ್ಕಿ ಪೋರ್ಚುಗೀಸ್ ಸೈನಿಕರು ಸತ್ತು 4,500 ಪೋರ್ಚುಗೀಸ್ ಸೈನಿಕರು ಸೆರೆಯಾಳುಗಳಾದರು.
► ನಮ್ಮ ಮೋದಿ ಯುಗದ ಧೂರ್ತತನ ಎಂದರೆ ಹೈದರಾಬಾದ್ ವಿಮೋಚನೆಯನ್ನು ವೈಭವೀಕರಿಸುವ ಭಾಜಪ ಗೋವಾ ವಿಮೋಚನೆ ಬಗ್ಗೆ ಮಾತೇ ಆಡುವುದಿಲ್ಲ. ಇಂದು ಬಿಜೆಪಿಯ ಆಡುಂಬೊಲವಾಗಿರುವ ಗೋವಾದ ಭಾಜಪ ನಾಯಕರಾಗಲೀ, ಕಾಂಗ್ರೆಸ್ ನಾಯಕರಾಗಲೀ ನೆಹರೂ ಅವರ ಈ ಕಾರ್ಯಾಚರಣೆಯ ಬಗ್ಗೆ ಮಾತಾಡುವುದಿಲ್ಲ. ಗಾತ್ರ ಮತ್ತು ಸವಾಲುಗಳ ದೃಷ್ಟಿಯಿಂದ ಗೋವಾ ವಿಮೋಚನೆ ಆ ಕಾಲದ ದಿಟ್ಟ ಕಾರ್ಯ. 1982ರಲ್ಲಿ ಅರ್ಜೆಂಟೀನಾ ತನ್ನದೇ ತುಣುಕಾದ ಫಾಕ್ ಲಾಂಡ್ ದ್ವೀಪಗಳನ್ನು ವಶಪಡಿಸಿಕೊಂಡಾಗ ಬ್ರಿಟನ್ ಯುದ್ಧ ಸಾರಿ ಈ ದ್ವೀಪಗಳನ್ನು ಮರು ವಶ ಮಾಡಿಕೊಂಡಿತು. ಇದಕ್ಕೆ ಹೋಲಿಸಿದರೆ ಗೋವಾ ವಿಮೋಚನೆ ಕಂಡು ಕೇಳರಿಯದ ಸಾಧನೆ.
► ನೆಹರೂ ಬಗ್ಗೆ ಬಾಯಿಗೆ ಬಂದಂತೆ ಅಸಭ್ಯ ಅಪಮಾಹಿತಿ ಹರಡುತ್ತಿರುವ ಮಂದಿಗೆ ದೇಶ ಕಟ್ಟುವ ಕಾಣ್ಕೆಯಾಗಲೀ ಅಂತರ್ರಾಷ್ಟ್ರೀಯ ಸಂದರ್ಭವಾಗಲೀ ಕಾಣುವುದೇ ಇಲ್ಲ.
► ಕಾಂಗ್ರೆಸ್ಗೂ ಕಾಣುತ್ತಿಲ್ಲ!!
► ನೆಹರೂ ಬರೆದ ಕೃತಿಗಳ ದಾರ್ಶನಿಕತ್ವ ಭಾಷಾ ಪಾಂಡಿತ್ಯ ಮತ್ತು ಒಳನೋಟಗಳನ್ನು ನೋಡಿದರೆ ಈ ನೆಹರೂ ಎಂಥಾ ಪಂಡಿತ ಎಂದು ಗೊತ್ತಾಗುತ್ತದೆ. ಸದ್ಯದ ಮೋದಿ ಮತ್ತು ಅವರ ಪಡೆ ನೆಹರೂ ಬರೆದದ್ದನ್ನು ಉಗ್ಗದೇ ಓದಿದರೂ ಸಾಕು!! ಅದೇ ಸಾಧನೆ.
ಸಾರ್ವಜನಿಕ ಉದ್ದಿಮೆಗಳನ್ನು ನೆಹರೂ ಸೃಷ್ಟಿ ಮಾಡಿ ಅವುಗಳ ಮೂಲಕ ರಾಜ್ಯಪ್ರಭುತ್ವದ ಪ್ರಭಾವವನ್ನು ಉತ್ಪಾದಕ ಕ್ಷೇತ್ರದಲ್ಲಿ ಹೆಚ್ಚಿಸಿದ ಮಾದರಿ ಅರ್ಥವಾಗುವುದು ಈಗ ಮೋದಿ ಇವುಗಳನ್ನೆಲ್ಲಾ ಮಾರಲು ಹೊರಟಾಗ-
► ಮೂರು ದಶಕಗಳ ಹಿಂದೆ ಎಚ್ಎಂಟಿ ವಾಚು ಎಷ್ಟು ಸ್ಪರ್ಧಾತ್ಮಕವಾಗಿತ್ತು, ನೆನಪಿಸಿಕೊಳ್ಳಿ.
► ಮಾಡರ್ನ್ ಬೇಕರಿಯಂತಹ ಸಾರ್ವಜನಿಕ ಕ್ಷೇತ್ರದ ಬೇಕರಿಯ ಸ್ಥಾಪನೆ ಈ ದೃಷ್ಟಾರತನಕ್ಕೆ ಇನ್ನೊಂದು ನಿದರ್ಶನ. ಇದನ್ನೂ 2000ನೇ ಇಸವಿಯಲ್ಲಿ ಭಾಜಪ ಸರಕಾರ ಹಿಂದುಸ್ತಾನ್ ಲಿವರ್ಗೆ ಮಾರಿತು!
ಇವೆಲ್ಲಾ ಯಾದೃಚ್ಛಿಕ ಉದಾಹರಣೆಗಳು.
ಮೊನ್ನೆ ಮೊನ್ನೆ ಮಮ್ದಾನಿ ನೆಹರೂ ಅವರ ಭಾಷಣವನ್ನು ಉದ್ಧರಿಸಿದ ಉದಾಹರಣೆ ನೆಹರೂ ದಾರ್ಶನಿಕತ್ವಕ್ಕೆ ಸಾಕ್ಷಿ.
ಏಕಕಾಲಕ್ಕೆ ದುರ್ಭರ ಆರ್ಥಿಕ ಆದಾಯದ ಸನ್ನಿವೇಶವನ್ನೂ ನಿಭಾಯಿಸುತ್ತಾ, ಬಡತನ, ನಿರಕ್ಷರತೆ, ಆರೋಗ್ಯ ಪೀಡೆಗಳಿಂದ ತತ್ತರಿಸುತ್ತಿದ್ದ ದೇಶವನ್ನು ಇಂಚಿಂಚೇ ಸಂಭಾಳಿಸಬೇಕು, ಆಗಾಗ ಪುಟಿದೇಳುವ ದೇಶೀಯ ಭಾವನಾತ್ಮಕ ಸಂಗತಿಗಳನ್ನು ಸಂವಾದ, ಸಮಾಲೋಚನೆಗಳ ಮೂಲಕವೇ ನಿಭಾಯಿಸಬೇಕು; ಅಂತರ್ರಾಷ್ಟ್ರೀಯವಾಗಿ ಸ್ವಾಯತ್ತ ನಿಲುಮೆ ಉಳಿಸಿಕೊಳ್ಳಲು ಹಗ್ಗದ ನಡಿಗೆಯಲ್ಲಿರಬೇಕು. ಜೊತೆಗೆ ಸಂವಿಧಾನದ ಪಾರಮ್ಯವನ್ನು ಅದರ ಧರ್ಮ ನಿರಪೇಕ್ಷ ಲಕ್ಷಣವನ್ನು ಉಳಿಸಿ ಬೆಳೆಸಬೇಕು.
ನೆಹರೂ ಮುಖ್ಯವಾಗುವುದು ಇವನ್ನೆಲ್ಲಾ ನಿರ್ವಹಿಸಿದ ರೀತಿಗೆ. ಆ ಕಾಲದಲ್ಲಿ ಸ್ವತಂತ್ರವಾದ ದೇಶಗಳ ಬಹುತೇಕ ನಾಯಕರು ಸರ್ವಾಧಿಕಾರಿಗಳಾಗಿ ದೇಶವನ್ನು ದುರ್ಭರಗೊಳಿಸಿ ಜನರ ಆಕ್ರೋಶಕ್ಕೆ ಬಲಿಯಾದದ್ದನ್ನು ನೆನಪಿಸಿಕೊಂಡರೆ ಭಾರತ ಹಾಗೂ ಹೀಗೂ ಏಕೈಕ ಪ್ರಜಾಸತ್ತಾತ್ಮಕ ದೇಶವಾಗಿ ಉಳಿದ ವಿಸ್ಮಯದ ಹಿಂದೆ ನೆಹರೂ ಸಂಯಮ ಮತ್ತು ಬದ್ಧತೆ ಇದೆ.
ಮೊನ್ನೆ ಮೊನ್ನೆ ನಮ್ಮ ನೆರೆಹೊರೆಯಲ್ಲಿ ಜನಾಕ್ರೋಶ ಆಸ್ಫೋಟಿಸಿದ ಬಗೆಯನ್ನು ನೆನಪಿಸಿಕೊಳ್ಳಿ. ಅಧಿಕಾರದ ಮೋಹ, ಅದು ತರುವ ಕಾಸಿನ ಥೈಲಿಯ ಸಂಬಂಧ ಇವೆಲ್ಲಾ ಸಾಂವಿಧಾನಿಕ ಬದ್ಧತೆಯ ಕನಿಷ್ಠ ಪಾರದರ್ಶಕತೆ ಉಳಿಸಿಕೊಳ್ಳುವುದೂ ಎಷ್ಟು ಸವಾಲಿನದ್ದು ಎಂದು ತೋರಿಸಿಕೊಡುತ್ತದೆ. ಈಗ ಎರಡು ‘ಆನಿ’ಗಳಿಗೆ ದೇಶ ಧಾರೆ ಎರೆಯುತ್ತಾ ದೇಶವನ್ನು ಬಹುಸಂಖ್ಯಾತ ಧಾರ್ಮಿಕ ಮುದ್ರೆಗೆ ತಳ್ಳುವ ಆಳ್ವಿಕೆಯ ತಹತಹ ಗಮನಿಸಿದರೆ ಸಂವಿಧಾನವನ್ನು ಕಾಪಿಟ್ಟ ಮೊದಲ ತಲೆಮಾರಿನ ಕೊಡುಗೆ ಅರ್ಥವಾಗಬೇಕು.
ನೆಹರೂ ಈ ತಲೆಮಾರಿನ ಕಿರೀಟ ಪ್ರಾಯ ಉದಾಹರಣೆ. ನೆಹರೂ ಅವರನ್ನು ಸ್ಮರಿಸುವುದೆಂದರೆ ಅವರೊಂದಿಗಿದ್ದ ಇತರರನ್ನೂ ಸ್ಮರಿಸುವುದೇ ಆಗಿದೆ.
ಕಾಂಗ್ರೆಸ್ನಲ್ಲಿ ಸಮಾಜವಾದಿ ಬಣ ಕಟ್ಟಿ ಭೂಪೇಂದ್ರನಾಥ ದತ್ತ (ವಿವೇಕಾನಂದರ ತಮ್ಮ) ಮತ್ತು ಸುಭಾಸ್ ಚಂದ್ರ ಬೋಸ್ ಜೊತೆಗೆ ಇಂಟಕ್ ಕಟ್ಟಿದವರು ನೆಹರೂ. ನೆಹರೂ ಬದುಕಿನ ಹಾದಿ ಹುಡುಕಿದರೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಆಶಯಗಳ ಹಾದಿಯನ್ನು ಮರು ಹುಡುಕಿದ ಹಾಗೆ.
ಮುಗಿಸುವ ಮುನ್ನ ಒಂದು ಚೋದ್ಯದ ಕೊಸರು:
ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ನ ಕಾರ್ಯದರ್ಶಿಯಾಗಿ ಚುನಾವಣಾ ತಂತ್ರಗಾರಿಕೆಯಿಂದ ಹಿಡಿದು ಎಲ್ಲವನ್ನೂ ನಿಭಾಯಿಸಿದ್ದು ಲಾಲ್ ಬಹಾದೂರ್ ಶಾಸ್ತ್ರಿ. ನೆಹರೂ ಅನಾರೊಗ್ಯಕ್ಕೀಡಾದಾಗ ನೆಹರೂ ತನ್ನ ಪರವಾಗಿ ಕಾರ್ಯ ನಿರ್ವಹಿಸಲು ಆರಿಸಿದ್ದು ಇದೇ ಲಾಲ್ ಬಹಾದೂರ್ ಶಾಸ್ತ್ರಿ ಅವರನ್ನು. ನೆಹರೂ ದೇಹಾಂತವಾಗುವವರೆಗೂ ಶಾಸ್ತ್ರಿ ಖಾತಾರಹಿತ ಮಂತ್ರಿಯಾಗಿ ಪ್ರಧಾನಿಯ ಕಡತ ನಿರ್ವಹಿಸುತ್ತಿದ್ದರು.
ಇಂದಿರಾ? ಭೌತಿಕವಾಗಿ ಈಗ ಟ್ರಂಪ್ ಜೊತೆ ಆತನ ಮಗಳು ಇದ್ದ ಹಾಗೆ ನೆಹರೂ ಜೊತೆ ಇಂದಿರಾ ಇದ್ದರು. ನೆಹರೂ ಅವಸಾನವಾದ ಬಳಿಕ ಶಾಸ್ತ್ರಿ ಅವರೇ ಪ್ರಧಾನಿಯಾಗಿದ್ದು. ಅವರ ಅಕಾಲಿಕ ಮರಣದ ಬಳಿಕ ಗೂಂಗಿ ಗುಡಿಯಾ ಎಂದೇ ಪರಿಗಣಿತವಾಗಿದ್ದ ತಾವು ಹೇಳಿದಂತೆ ಕೇಳಬಲ್ಲ ಹೆಣ್ಣುಮಗಳೆಂದೇ ಕಾಮರಾಜ್ ಸಹಿತ ಧುರೀಣರು ಇಂದಿರಾ ಅವರನ್ನು ಆರಿಸಿದ್ದು! ಮೊರಾರ್ಜಿ ಎಂಬ ಹಠಮಾರಿ ಬೇಡ ಎಂಬ ಕಾರಣಕ್ಕೆ. ವಂಶಾಡಳಿತ ಎಂದು ಊಳಿಡುವ ಭಾಜಪದ ಮುಖಕ್ಕೆ ಈ ಐತಿಹಾಸಿಕ ಸತ್ಯವನ್ನೂ ರಾಚುವ ಕಾಮನ್ ಸೆನ್ಸ್ ಈಗಿನ ಕಾಂಗ್ರೆಸ್ಗಿಲ್ಲ. ಯಾಕೆಂದರೆ ಇಂದಿರಾ ತರುವಾಯದ ಕುಟುಂಬ ನಾಯಕತ್ವದ ಲಾಭಕ್ಕೆ ಅವರೆಲ್ಲಾ ಚಂದಾ ಕಟ್ಟಿಯಾಗಿದೆ.







