ಕಾರ್ಟೂನಿಸ್ಟರ ಕುರಿತು ಹೀಗೊಂದು ಹೊಟ್ಟೆಕಿಚ್ಚು!

ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕೆಂದರೆ ಒಬ್ಬ ಪತ್ರಕರ್ತನಾಗಿ ನನಗೆ ಈ ಪೊಲಿಟಿಕಲ್ ಕಾರ್ಟೂನಿಸ್ಟರನ್ನು ಕಂಡರೆ ವಿಪರೀತ ಹೊಟ್ಟೆಕಿಚ್ಚು. ಒಂದು ಪ್ರಚಲಿತ ರಾಜಕೀಯ ವಿದ್ಯಮಾನವನ್ನು ಜನರಿಗೆ ತಲುಪಿಸಬೇಕೆಂದರೆ ಪತ್ರಕರ್ತರಾದ ನಾವು ಸಿಕ್ಕಾಪಟ್ಟೆ ರಿಸರ್ಚ್ ಮಾಡಿ, ಹಲವರನ್ನು ಮಾತಾಡಿಸಿ, ಮೂಲಗಳಿಂದ ಮಾಹಿತಿ ಸಂಗ್ರಹ ಮಾಡ್ತೀವಿ. ಅದಾದ ಮೇಲೆ, ಆ ರಿಸರ್ಚಿನ ಫೈಂಡಿಂಗ್‌ಗಳನ್ನು ಸಾವಿರ ಪದಗಳ ಒಂದು ಚೆಂದನೆಯ ಲೇಖನವಾಗಿ ಡೆವಲಪ್ ಮಾಡುವುದರೊಳಗೆ ಸಾಕುಸಾಕಾಗುತ್ತದೆ. ಅಷ್ಟಾದರೂ ಓದುಗರ ಆಸಕ್ತಿಯನ್ನು ಹಿಡಿದಿಟ್ಟುಕೊಂಡು ಆ ಲೇಖನ ಸಂಪೂರ್ಣವಾಗಿ ಓದಿಸಿಕೊಳ್ಳುತ್ತದೆ ಎಂಬ ಖಾತ್ರಿ ಇರುವುದಿಲ್ಲ. ಆದರೆ ಈ ಕಾರ್ಟೂನಿಸ್ಟರು ಕೇವಲ ಐದಾರು ಗೆರೆಗಳಲ್ಲಿ ಅಷ್ಟೂ ಸಾರಾಂಶವನ್ನು ನೋಡುಗರಿಗೆ ದಾಟಿಸಿಬಿಡುತ್ತಾರೆ. ಕೇವಲ ನಾಲ್ಕೈದು ಸೆಕೆಂಡುಗಳ ನೋಟದಲ್ಲಿ ಓದುಗನ ಮುಖದ ಮೇಲೆ ಮುಗುಳ್ನಗೆಯ ಸಮೇತ ತಮ್ಮ ಕಾರ್ಯಸಾಧಿಸಿಬಿಡುತ್ತಾರೆ. ಹೊಟ್ಟೆಕಿಚ್ಚು ಮೂಡದೆ ಇದ್ದೀತೆ?
ಒಂದುಕಡೆ, ಕೆಲವೇ ಗೆರೆಗಳಲ್ಲಿ ಗಂಭೀರ ವಿಷಯಗಳನ್ನು ಸಲೀಸಾಗಿ ಹೇಳಿಮುಗಿಸುವ ಅವರ ಟ್ಯಾಲೆಂಟ್ ನಮ್ಮಂತಹವರ ಹೊಟ್ಟೆ ಉರಿಸಿದರೆ; ಮತ್ತೊಂದೆಡೆ, ಸತ್ಯಕ್ಕೆ ಬದ್ಧವಾದ ಅವರ ಕಮಿಟ್‌ಮೆಂಟ್ ನಮ್ಮ ನೈತಿಕತೆಯನ್ನು ತಿವಿದು ಗಾಯಗೊಳಿಸುತ್ತಿದೆ. ಇವತ್ತಿನ ಪತ್ರಕರ್ತರಲ್ಲಿ ಬಹುಪಾಲು ಮಂದಿ ಹಣಕ್ಕೋ, ಜನವಿರೋಧಿ ಕೋಮುವಾದಿ ಸಿದ್ಧಾಂತಕ್ಕೋ ತಮ್ಮನ್ನು ಅಡವಿಟ್ಟುಕೊಂಡು ನಿರುಮ್ಮಳವಾಗಿ ಬದುಕುತ್ತಿರುವಾಗ ಈ ಕಾರ್ಟೂನಿಸ್ಟುಗಳು ಮಾತ್ರ ಸತ್ಯಕ್ಕೆ ಮತ್ತು ಜನತೆಗೆ ಮಾತ್ರ ನಾವು ಬದ್ಧ ಎಂದು ಬಾಳುತ್ತಿರುವುದಿದೆಯಲ್ಲ ಅದು ನಮ್ಮನ್ನು ಇನ್ನಿಲ್ಲದಂತೆ ಟ್ರಿಗರ್ ಮಾಡುತ್ತದೆ. ಇವತ್ತಿನ ವಾತಾವರಣ ಹೇಗಿದೆಯೆಂದರೆ ಪತ್ರಿಕೆಯಲ್ಲಿರಲಿ, ನಮ್ಮ ಖಾಸಗಿ ಸೋಷಿಯಲ್ ಮೀಡಿಯಾ ಅಕೌಂಟುಗಳಲ್ಲಿರಲಿ ಒಂದೆರಡು ನಿಷ್ಠುರ ಅಭಿಪ್ರಾಯಗಳನ್ನು ಬರೆದುಹಾಕಿದರೆ ದಾಳಿಗಳು ಶುರುವಾಗುತ್ತವೆ. ಅದು ಕೇವಲ ಸೋಷಿಯಲ್ ಮೀಡಿಯಾದ ಕಮೆಂಟುಗಳಿಗೆ ಸೀಮಿತವಾದ ದಾಳಿಗಳಲ್ಲ, ರಾಜಕೀಯ ಪ್ರೇರಿತ ದಾಳಿಗಳೂ ಗುರಿಗಟ್ಟಿರುತ್ತವೆ. ಇತ್ತೀಚಿನ ಉದಾಹರಣೆ ನೋಡುವುದಾದರೆ, ಇಂಡಿಯಾ-ಪಾಕಿಸ್ತಾನ ನಡುವಿನ ಸಂಘರ್ಷದ ಸಂದರ್ಭದಲ್ಲಿ ಕೇಂದ್ರ ಸರಕಾರ ಮಾಡಿಕೊಂಡ ಯುದ್ಧವಿರಾಮ ಒಪ್ಪಂದವನ್ನು ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಿದ ಮಾತ್ರಕ್ಕೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿಯವರ ಮೇಲೆ ಸೈಬರ್ ದಾಳಿ ಮಾಡಲಾಯಿತು. ಅಂತಹ ಉನ್ನತ ಅಧಿಕಾರಿ, ಈ ದಾಳಿಯಿಂದ ಬಚಾವಾಗಲು ತನ್ನ ಖಾತೆಗೇ ಬೀಗ ಜಡಿದು ಬಂದೋಬಸ್ತ್ ಮಾಡಿಕೊಳ್ಳಬೇಕಾಯಿತು. ಅಂದರೆ, ಸತ್ಯದ ವಿರುದ್ಧದ ದಾಳಿಗಳು ಕೇವಲ ರ್ಯಾಂಡಮ್ ಅನಿಸಿಕೆಗಳಲ್ಲ, ಅವುಗಳು ವ್ಯವಸ್ಥಿತ ಸಂಚಿನ ವ್ಯಾಪಕ ಜಾಲದ ಸಂಘಟಿತ ಯತ್ನ ಎಂಬುದು ಇಲ್ಲಿ ಮನದಟ್ಟಾಗುತ್ತದೆ. ಸರಕಾರದ ಅಧಿಕಾರಿಯ ವಿರುದ್ಧದ ಈ ದಾಳಿಯನ್ನು ತಡೆಯಲು ಸರಕಾರವೇ ಮುಂದಾಗಲಿಲ್ಲ. ಪರಿಸ್ಥಿತಿ ಇಷ್ಟು ವಿಷಮಯವಾಗಿದೆ. ಅಂತಹದ್ದರಲ್ಲಿ ಈ ಕಾರ್ಟೂನಿಸ್ಟುಗಳು ಯಾವುದಕ್ಕೂ ಅಂಜದೆ, ದಿಟ್ಟವಾಗಿ ಗೆರೆಗಳ ಮೂಲಕ ಮಾತಾಡುವುದಿದೆಯಲ್ಲ ಅದನ್ನು ಬಹುಶಃ ಚರಿತ್ರೆ ವಿಶೇಷವಾಗಿ ದಾಖಲಿಸಿಡಬೇಕು ಅನ್ನಿಸುತ್ತದೆ.
ಇದು ಇವತ್ತು ನಿನ್ನೆಯದಲ್ಲ, ಹಿಂದೂಸ್ತಾನ್ ಟೈಮ್ಸ್‌ನ ಕೆ.ಶಂಕರ್ ಪಿಳ್ಳೈ ಅವರ ಕಾಲದಿಂದಲೂ ಭಾರತದಲ್ಲಿ ಕಾರ್ಟೂನಿಸ್ಟುಗಳು ಇಂತಹ ಪರಂಪರೆಯಲ್ಲಿ ಮುಂದುವರಿದುಕೊಂಡು ಬಂದಿದ್ದಾರೆ. ದಶಕಗಳ ಕಾಲ ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಕೆಲಸ ಮಾಡಿದ ಶಂಕರ್ ಪಿಳ್ಳೈಯವರು ಕಾರಣಾಂತರದಿಂದ ಪತ್ರಿಕೆ ತೊರೆಯುವ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರು ಒಂದು ಮಾತು ಕೇಳಿದರಂತೆ, ‘‘ನಿಜ ಹೇಳು ಶಂಕರ್ ಪಿಳ್ಳೈ, ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಿಂದಾಗಿ ನಿನಗೆ ಖ್ಯಾತಿ ಬಂತೋ ಅಥವಾ ನಿನ್ನ ಕಾರ್ಟೂನುಗಳಿಂದಾಗಿ ಪತ್ರಿಕೆಗೆ ಇಷ್ಟು ಖ್ಯಾತಿ ಸಿಕ್ಕಿತೊ?’’ ಎಂದು. ಶಂಕರ್ ಏನನ್ನೂ ಉತ್ತರಿಸಲಿಲ್ಲವಾದರೂ, ಗಾಂಧಿಯವರ ಪ್ರಶ್ನೆ ತೂಕದ್ದಾಗಿತ್ತು. ಯಾಕೆಂದರೆ, ಶಂಕರ್ ಅವರ ಕಾರ್ಟೂನುಗಳು ಅಷ್ಟೊಂದು ಜನಪ್ರಿಯವಾಗಿರುತ್ತಿದ್ದವು ಮತ್ತು ಪರಿಣಾಮಕಾರಿಯಾಗಿರುತ್ತಿದ್ದವು.
ಅವರು ಹಿಂದೂಸ್ತಾನ್ ಪತ್ರಿಕೆ ತೊರೆಯಬೇಕಾಗಿ ಬಂದದ್ದು ಕೂಡಾ ಅವರ ಕಮಿಟ್‌ಮೆಂಟ್ ಕಾರಣಕ್ಕೆ ಎನ್ನಬಹುದು. ಆಗ ದೇವದಾಸ್ ಗಾಂಧಿ, ಅಂದರೆ ಮಹಾತ್ಮಾ ಗಾಂಧಿಯವರ ಮಗ, ಪತ್ರಿಕೆಯ ಸಂಪಾದಕರಾಗಿದ್ದರು. ಹಿರಿಯ ಕಾಂಗ್ರೆಸಿಗ ಮತ್ತು ದೇವದಾಸ್ ಅವರ ಮಾವ ರಾಜಗೋಪಾಲಾಚಾರಿಯವರನ್ನು ಟೀಕಿಸಿ ಶಂಕರ್ ಒಂದೆರಡು ಕಾರ್ಟೂನ್ ಬರೆದರು. ಆಗ ಸಂಪಾದಕೀಯ ಮಂಡಳಿ ಕಡೆಯಿಂದ ಬರೆಯದಂತೆ ಒತ್ತಡ ಬಂತು. ಆಗ ಪತ್ರಿಕೆಯನ್ನೇ ತೊರೆದು ಬಂದರು.
ಇದಕ್ಕೂ ಮೊದಲು ಮುಸ್ಲಿಮ್ ಲೀಗ್‌ನ ಮುಹಮ್ಮದ್ ಅಲಿ ಜಿನ್ನಾ ಅವರನ್ನು ಟೀಕಿಸಿ ಶಂಕರ್ ಪಿಳ್ಳೈ ಬರೆದ ಒಂದು ಕಾರ್ಟೂನಿಗೆ ಖುದ್ದು ಮಹಾತ್ಮಾ ಗಾಂಧಿಯವರೇ ಆಕ್ಷೇಪಿಸಿ ಒಂದು ಪತ್ರ ಬರೆದಿದ್ದರು. ‘‘ಕಲೆಯ ಆಯಾಮದಿಂದ ನಿಮ್ಮ ವ್ಯಂಗ್ಯಚಿತ್ರಗಳು ಅದ್ಭುತವಾಗಿರುತ್ತವೆ. ಆದರೆ ಅವು ವಾಸ್ತವವನ್ನು ನಿಖರವಾಗಿ ಹೇಳದೆ ಹೋದರೆ ಅಥವಾ ಮನನೋಯಿಸದ ರೀತಿಯಲ್ಲಿ ವ್ಯಂಗ್ಯ ಮಾಡುವಲ್ಲಿ ಸೋತುಹೋದರೆ, ನೀವು ಕಾರ್ಟೂನಿಸ್ಟಾಗಿ ಎತ್ತರಕ್ಕೆ ಏರಲಾರಿರಿ. ವಿಚಾರದ ಬಗ್ಗೆ ನೀವು ಆಳವಾಗಿ ತಿಳಿದುಕೊಂಡಿದ್ದೀರಿ ಎಂಬುದು ನಿಮ್ಮ ಕೃತಿಗಳ ಮೂಲಕ ವ್ಯಕ್ತವಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅವು ಯಾವತ್ತೂ ಅಸಭ್ಯವಾಗಿರಬಾರದು ಮತ್ತು ನಿಮ್ಮ ವ್ಯಂಗ್ಯ ಆಳ ಗಾಯವನ್ನುಂಟುಮಾಡಬಾರದು’’ ಎಂದು ಮಹಾತ್ಮಾ ಆ ಪತ್ರದಲ್ಲಿ ಹೇಳಿದ್ದರು. ಬಹುಶಃ ಶಂಕರ್ ಅದನ್ನು ಗಂಭೀರವಾಗಿ ಅಳವಡಿಸಿಕೊಂಡಿದ್ದರಿಂದಲೇ ತಮ್ಮ ವ್ಯಂಗ್ಯಚಿತ್ರಗಳ ನಿಖರತೆಯ ಬಗ್ಗೆ, ಅವುಗಳ ಸಭ್ಯತೆಯ ಮಿತಿಯ ಬಗ್ಗೆ ಅವರಿಗೆ ಹೆಮ್ಮೆ ಮತ್ತು ಬದ್ಧತೆ ಇತ್ತು ಅನ್ನಿಸುತ್ತದೆ. ಅದೇ ಕಾರಣಕ್ಕೆ ಗಾಂಧಿಯವರ ಮಗ ಎಂಬುದನ್ನೂ ಲೆಕ್ಕಿಸದೆ ಪತ್ರಿಕೆಯ ಕೆಲಸಕ್ಕೆ ರಿಸೈನ್ ಮಾಡಿ ಹೊರಬಂದರು.
ಆಗಿನ ಕಾಲದಲ್ಲಿ ಕಾರ್ಟೂನಿಸ್ಟುಗಳಿಗೆ ಎಂತಹ ಬೆಲೆ ಇತ್ತೆಂದರೆ, ಸ್ವತಃ ನೆಹರೂ ತಮ್ಮ ಮಿತ್ರರಾದ ಶಂಕರ್‌ಗೆ ‘‘ನನ್ನನ್ನೂ ಬಿಡಬೇಡ ಶಂಕರ್ ಹಿಟ್ ಹಿಟ್ ಹಿಟ್ ಹಾರ್ಡ್ ಮಿ ವಿತ್ ಯುವರ್ ಕಾರ್ಟೂನ್ಸ್’’ ಎಂದು ಹೇಳುತ್ತಿದ್ದರು. ಶಂಕರ್ ಪಿಳ್ಳೈ ನೆಹರೂ ಅವರನ್ನು ಬಿಟ್ಟಿರಲಿಲ್ಲ ಅನ್ನುವುದು ಬೇರೆ ಸಂಗತಿ! ಮುಂದೆ, ತಮ್ಮ ಪ್ರಿಯಮಿತ್ರನ ಮಗಳು ಇಂದಿರಾಗಾಂಧಿ ಪ್ರಧಾನಿಯಾಗಿ ಹೇರಿದ ತುರ್ತು ಪರಿಸ್ಥಿತಿ ಸಂದರ್ಭದಲ್ಲೇ ಶಂಕರ್ ಪಿಳ್ಳೈಯವರು ತಮ್ಮ ಶಂಕರ್ ವೀಕ್ಲಿ ವ್ಯಂಗ್ಯಚಿತ್ರ ಪತ್ರಿಕೆಯನ್ನು ಶಾಶ್ವತವಾಗಿ ಮುಚ್ಚಬೇಕಾದದ್ದು ವಿಪರ್ಯಾಸ. ತಮ್ಮ ಪತ್ರಿಕೆಯ ಕೊನೆಯ ಸಂಚಿಕೆಯ ಸಂಪಾದಕೀಯದಲ್ಲಿ ಶಂಕರ್ ಹೀಗೆ ಬರೆದಿದ್ದರು, ‘‘ಸರ್ವಾಧಿಕಾರಿಗಳು ನಗುವನ್ನು ಸಹಿಸಿಕೊಳ್ಳಲಾರರು, ಯಾಕೆಂದರೆ ನಾಳೆ ಜನ ತನ್ನನ್ನೇ ನೋಡಿ ನಕ್ಕುಬಿಟ್ಟರೆ!? ಹಾಗಾಗುವುದನ್ನು ಅವರು ಇಷ್ಟಪಡುವುದಿಲ್ಲ’’.
ತನ್ನ ಮಿತ್ರನ ಮಗಳಾಗಿದ್ದರೂ, ತನ್ನ ಪತ್ರಿಕೆಯನ್ನು ನಿಲ್ಲಿಸಬೇಕಾದ ಒತ್ತಡವಿದ್ದರೂ, ಸತ್ಯನಿಷ್ಠ ಅನಿಸಿಕೆ ಹೇಳುವುದರಿಂದ ಅವರು ಹಿಂದೇಟು ಹಾಕಲಿಲ್ಲ. ಇಂತಹ ಪರಂಪರೆ ನಮ್ಮ ಕಾರ್ಟೂನಿಸ್ಟ್‌ಗಳದ್ದು. ಇಲ್ಲಿ ಶಂಕರ್ ಪಿಳ್ಳೈಯವರನ್ನೇ ನಿದರ್ಶನವಾಗಿ ತೆಗೆದುಕೊಳ್ಳಲು ಕಾರಣವಿದೆ. ಅವರನ್ನು ನಮ್ಮ ಆಧುನಿಕ ಭಾರತದ ರಾಜಕೀಯ ವ್ಯಂಗ್ಯಚಿತ್ರ ಪಿತಾಮಹ ಎಂದು ಗುರುತಿಸಲಾಗುತ್ತದೆ. ಇವರ ಹಾದಿಯಲ್ಲಿ ಆರ್.ಕೆ. ಲಕ್ಷ್ಮಣ್, ಅಬು ಅಬ್ರಹಾಂ, ಮರಿಯೋ ಮಿರಾಂಡ, ಸುಧೀರ್ ಧರ್, ನರೇಂದ್ರ, ಇ.ಪಿ. ಉನ್ನಿ ಇಂತಹವರ ಸಾಲು ಮುಂದುವರಿಯುತ್ತದೆ. ಈಗ ಪಿ. ಮಹಮ್ಮದ್, ದಿನೇಶ್ ಕುಕ್ಕುಜಡ್ಕ, ಸತೀಶ್ ಆಚಾರ್ಯ ಈ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಯಾವುದೇ ರಾಜಿಯಿಲ್ಲದೆ, ಮುಲಾಜಿಲ್ಲದೆ, ಸತ್ಯಕ್ಕೆ ಬದ್ಧವಾಗಿ ವ್ಯವಹರಿಸುವ ಇವರ ಟ್ಯಾಲೆಂಟ್ ಮತ್ತು ಕಮಿಟ್‌ಮೆಂಟ್ ನೋಡಿ ಹೊಟ್ಟೆ ಉರಿದುಕೊಳ್ಳದೆ ಇರಲು ಹೇಗೆ ಸಾಧ್ಯ ನೀವೇ ಹೇಳಿ. ಹಾಗಂತ ಎಲ್ಲಾ ಕಾರ್ಟೂನಿಸ್ಟರೂ ಸತ್ಯಕ್ಕೆ ಮತ್ತು ಜನಪರತೆಗೆ ಬದ್ಧರಾಗಿದ್ದಾರೆ ಎಂದು ಹೇಳಲಾಗದು. ಕೆಲವು ಕಾರ್ಟೂನಿಸ್ಟರು ಹಣಕ್ಕೋ, ಜನವಿರೋಧಿ ಸಿದ್ಧಾಂತಕ್ಕೋ ಮೈಮರೆತು ಪತ್ರಿಕೋದ್ಯಮಕ್ಕೆ ದ್ರೋಹಗೈಯುತ್ತಿರುವ ಉದಾಹರಣೆಗಳೂ ಉಂಟು. ಆದರೆ ಅವರ ಪ್ರಮಾಣ ಕಡಿಮೆ ಎನ್ನಬಹುದು. ನೆನಪಿರಲಿ, ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಕಟ್ಟಿಬೆಳೆಸಿ ಕೋಮುರಾಜಕಾರಣವನ್ನು ಬಲಿಷ್ಠಗೊಳಿಸಿ ಹೋದ ಬಾಳಾಸಾಹೇಬ್ ಠಾಕ್ರೆ ಕೂಡಾ ಒಂದು ಕಾಲದಲ್ಲಿ ಕಾರ್ಟೂನಿಸ್ಟ್ ಆಗಿದ್ದಂತಹವರು. ಆದರೆ ಶಂಕರ್ ಪಿಳ್ಳೈ, ಆರ್.ಕೆ. ಲಕ್ಷ್ಮಣ್, ಅಬು ಅಬ್ರಹಾಂ ತರಹದವರ ಕಾರ್ಟೂನಿಸ್ಟರ ಮುಂದೆ ಠಾಕ್ರೆ ತರಹದವರ ಸಂಖ್ಯೆ ಕಡಿಮೆ ಎನಿಸಿಬಿಡುತ್ತದೆ. ಈ ಕಾಲದ ಕಾರ್ಟೂನಿಸ್ಟರೂ ಇದನ್ನು ಕಾಯ್ದುಕೊಳ್ಳಲು ಯಶಸ್ವಿಯಾಗಿರುವುದು ಈ ದೇಶದ ಸೌಭಾಗ್ಯ ಎನ್ನಬಹುದು.
ಈ ಕಾರ್ಟೂನಿಸ್ಟುಗಳ ನೆನಪಿನಲ್ಲಿ ಈಗ ಹೊಟ್ಟೆ ಉರಿಸಿಕೊಳ್ಳುತ್ತಿರುವುದಕ್ಕೆ ಒಂದು ಕಾರಣವಿದೆ. ಕಳೆದ ಕೆಲ ತಿಂಗಳ ಹಿಂದೆ ನಮ್ಮ ಪ್ರಧಾನಿ ಮೋದಿಯವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ತಮಿಳಿನ ವಿಕಟನ್ ವೆಬ್ ಪತ್ರಿಕೆ ಒಂದು ಕಾರ್ಟೂನ್ ಪ್ರಕಟಿಸಿತ್ತು. ಡೊನಾಲ್ಡ್ ಟ್ರಂಪ್ ಮುಂದೆ ಕೂತಿರುವ ಮೋದಿಯವರ ಕೈ ಕಾಲುಗಳಿಗೆ ಸರಪಳಿಯಿಂದ ಬಿಗಿದು ಅಸಹಾಯಕರಂತೆ ತೋರಿಸಿದ್ದ ಕಾರ್ಟೂನ್ ಅದು. ಅದನ್ನು ಪ್ರಕಟಿಸಿದ್ದಕ್ಕಾಗಿ ಕೇಂದ್ರ ಸರಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವೆಬ್‌ಸೈಟ್ ಅನ್ನು ಬ್ಲಾಕ್ ಮಾಡಿತ್ತು. ಕೊನೆಗೆ ಮದ್ರಾಸ್ ಹೈಕೋರ್ಟ್ ಆ ನಿಷೇಧವನ್ನು ತೆರವುಗೊಳಿಸಿತು.
ಶಂಕರ್ ಪಿಳ್ಳೈ
ಆದರೆ ಈಗಿನ ಪರಿಸ್ಥಿತಿಗಳನ್ನು ವಿಶ್ಲೇಷಿಸಿದಾಗ, ವಿಕಟನ್ ಅಂದು ಪ್ರಕಟಿಸಿದ್ದ ಕಾರ್ಟೂನ್ ಅಕ್ಷರಶಃ ಸತ್ಯ ಎಂಬುದು ಸಾಬೀತಾಗುತ್ತಿದೆ. ಕಾಶ್ಮೀರದ ವಿಚಾರವಾಗಿ ಭಾರತ-ಪಾಕ್ ನಡುವಿನ ಸಂಘರ್ಷ ಹಲವು ದಶಕಗಳಷ್ಟು ಹಳೆಯದ್ದು. ಆದರೆ ಇದುವರೆಗೆ ಉಭಯ ರಾಷ್ಟ್ರಗಳ ನಡುವೆ ಮೂಗು ತೂರಿಸಲು ಮೂರನೇ ದೇಶಕ್ಕೆ ಯಾವತ್ತೂ ಅವಕಾಶ ನೀಡಿರಲಿಲ್ಲ. ಮೂರನೇ ದೇಶ ಮಧ್ಯಸ್ಥಿಕೆ ವಹಿಸಬೇಕೆನ್ನುವುದು ಪಾಕ್ ಬೇಡಿಕೆಯಾಗಿತ್ತಾದರೂ, ಭಾರತ ಅದನ್ನು ನಿರಾಕರಿಸುತ್ತಾ ಬಂದಿದ್ದರಿಂದ ಮೂರನೇ ರಾಷ್ಟ್ರಕ್ಕೆ ಅವಕಾಶ ನೀಡಿರಲಿಲ್ಲ. ಯಾಕೆಂದರೆ, ಹಾಗೆ ಮಾಡಿದ ತಕ್ಷಣ ಕಾಶ್ಮೀರ ವಿಚಾರ ಒಂದು ಅಂತರ್‌ರಾಷ್ಟ್ರೀಯ ಸಂಘರ್ಷವಾಗಿ ರೂಪತಳೆಯುತ್ತದೆ. ಹಾಗಾದಾಗ ಚೀನಾ, ಅಮೆರಿಕದಂತಹ ಜಾಗತಿಕ ಹಿತಾಸಕ್ತಿಗಳು ಮಧ್ಯಪ್ರವೇಶಿಸಿ, ಆರ್ಥಿಕ ಮತ್ತು ರಾಜತಾಂತ್ರಿಕ ಒತ್ತಡದ ವಾತಾವರಣ ಸೃಷ್ಟಿಸುತ್ತವೆ. ಪಾಕಿಸ್ತಾನವನ್ನು ಜಾಗತಿಕ ಹಿತಾಸಕ್ತಿಗಳಿಂದ ಐಸೊಲೇಟ್ ಮಾಡಿ ಏಕಾಂಗಿಯಾಗಿಸುವ ಮತ್ತು ಆ ಮೂಲಕ ಕಾಶ್ಮೀರ ವಿಚಾರದಲ್ಲಿ ಅದನ್ನು ದುರ್ಬಲವಾಗಿಸುವಲ್ಲಿ ಇದುವರೆಗಿನ ಭಾರತದ ಆಡಳಿತಗಾರರು ಯಶಸ್ವಿಯಾಗುತ್ತಾ ಬಂದಿದ್ದರು. ಅಷ್ಟರಮಟ್ಟಿಗೆ ಭಾರತ ಮೇಲುಗೈ ಸಾಧಿಸಿಕೊಂಡು ಬಂದಿತ್ತು. ಆದರೆ ಈಗ ದಿಢೀರ್ ಅಮೆರಿಕ ಮೂಗು ತೂರಿಸಿದೆ. ಅಂದರೆ ಪಾಕಿಸ್ತಾನದ ಬೇಡಿಕೆಯಾಗಿದ್ದ ಮೂರನೇ ದೇಶ ಮಧ್ಯಸ್ಥಿಕೆ ವಹಿಸಬೇಕೆನ್ನುವ ಅದರ ಇಷ್ಟುದಿನಗಳ ಬೇಡಿಕೆಗೆ ಈಗ ಮನ್ನಣೆ ಸಿಕ್ಕಂತಾಗಿದೆ.
ಅಷ್ಟೇ ಅಲ್ಲ, ಅಧಿಕೃತವಾಗಿ ಭಾರತ ಯುದ್ಧವಿರಾಮ ಘೋಷಿಸುವುದಕ್ಕೂ ಮೊದಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿ, ‘ಯುದ್ಧ ವಿರಾಮವನ್ನು’ ಘೋಷಿಸುತ್ತಾರೆ ಮತ್ತು ಭಾರತ-ಪಾಕಿಸ್ತಾನ ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತಾರೆ; ಕಾಮನ್‌ಸೆನ್ಸ್ ಪಾಠ ಬೋಧಿಸುತ್ತಾರೆ. ಉದ್ವಿಗ್ನತೆಗೆ ಕಾರಣವಾದ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ಅಪ್ಪಿತಪ್ಪಿಯೂ ಪ್ರಸ್ತಾಪಿಸದೆ ಪಾಕಿಸ್ತಾನವನ್ನು ಭಾರತದ ಸಮಬಲ ದೇಶವೆಂದು ಮಾನ್ಯತೆ ನೀಡುತ್ತಾರೆ. ಇದಕ್ಕೆಲ್ಲ ಪ್ರತಿರೋಧ ತೋರಬೇಕಿದ್ದ, ಅಸಮ್ಮತಿಯನ್ನು ವ್ಯಕ್ತಪಡಿಸಬೇಕಿದ್ದ, ಪ್ರತಿಭಟನೆ ದಾಖಲಿಸಬೇಕಿದ್ದ ನಮ್ಮ ಪ್ರಧಾನಿ ಮೋದಿಯವರು ಅದರ ಬಗ್ಗೆ ಚಕಾರವೆತ್ತದೆ ಮಾತು ಮುಗಿಸುತ್ತಾರೆ. ಅಂದರೆ ಟ್ರಂಪ್ ಮುಂದೆ ಮೋದಿಯವರು ಅಸಹಾಯಕರಾಗಿದ್ದಾರಾ? ಅನ್ನುವ ಅನುಮಾನ ಮೂಡುತ್ತದೆ. ಇನ್‌ಫ್ಯಾಕ್ಟ್ ಇದನ್ನೇ ಅಲ್ಲವೇ ಅವತ್ತು ವಿಕಟನ್ ಪತ್ರಿಕೆ ತನ್ನ ಕಾರ್ಟೂನ್ ಮೂಲಕ ಪ್ರತಿಪಾದಿಸಿದ್ದು.
ಇಷ್ಟಕ್ಕೇ ಸುಮ್ಮನಾಗದ ಟ್ರಂಪ್, ‘‘ಯುದ್ಧ ವಿರಾಮಕ್ಕೆ ಒಪ್ಪದಿದ್ದರೆ, ನಾವು ನಿಮ್ಮ ಜೊತೆ ವ್ಯಾಪಾರ ವಹಿವಾಟು ನಡೆಸುವುದಿಲ್ಲ ಎಂದು ಬೆದರಿಕೆ ಹಾಕಿದ್ದೆ. ಅದಕ್ಕೆ ಮಣಿದು ಎರಡು ರಾಷ್ಟ್ರಗಳು ಒಪ್ಪಿಕೊಂಡಿವೆ’’ ಎಂದು ಟ್ವೀಟ್ ಮಾಡುತ್ತಾರೆ. ಅಂದರೆ ಇಷ್ಟುದಿನ ಯಾರ ಬೆದರಿಕೆಗೂ ಜಗ್ಗದೆ ಅಲಿಪ್ತ ನೀತಿಯ ಭಾಗವಾಗಿ ಸ್ವತಂತ್ರ ನಿಲುವಿಗೆ ಬದ್ಧವಾಗಿದ್ದ ಭಾರತವನ್ನೂ ಅಮೆರಿಕ ಬೆದರಿಕೆ ಮೂಲಕ ಮಣಿಸಿದೆ ಎನ್ನುವುದು ಅರ್ಥವಾಗುತ್ತದೆ. ಹಿಂದೊಮ್ಮೆ, ಇದೇ ಅಮೆರಿಕದ ಅಧ್ಯಕ್ಷನಾಗಿದ್ದ ಲಿಂಡನ್ ಜಾನ್ಸನ್ ಭಾರತದ ಇಂದಿರಾ ಗಾಂಧಿಯವರ ಮೇಲೆ ಇದೇ ರೀತಿ ಬೆದರಿಕೆ ಹಾಕಲು ಮುಂದಾಗಿದ್ದರು. ನೀವು ನಮ್ಮ ಮಾತಿಗೆ ಒಪ್ಪದೆ ಹೋದರೆ, ಫುಡ್ ಫಾರ್ ಪೀಸ್ ಒಪ್ಪಂದದಡಿ ನೀಡುವ ಆಹಾರದಾಸ್ತಾನು ಪೂರೈಕೆ ನಿಲ್ಲಿಸುತ್ತೇವೆ ಎಂದು ಆತ ಬೆದರಿಕೆ ಹಾಕಿದ್ದರು. ಅದಕ್ಕೆ ಜಗ್ಗದ ಇಂದಿರಾ ಗಾಂಧಿ, ವಿಯೆಟ್ನಾಂ ಮೇಲೆ ಅಮೆರಿಕ ನಡೆಸುತ್ತಿರುವ ಮಾನವಹಕ್ಕು ಉಲ್ಲಂಘನೆಯ ವಿರುದ್ಧದ ಘೋಷಣಾ ಪತ್ರಕ್ಕೆ ಸಹಿ ಮಾಡಿ ತಿರುಗೇಟು ಕೊಟ್ಟರು, ಮಾತ್ರವಲ್ಲ ಹಸಿರುಕ್ರಾಂತಿಯನ್ನು ಸಾಧಿಸುವ ಮೂಲಕ ಭಾರತ ಬೇರೆ ದೇಶಗಳಿಗೂ ಆಹಾರ ಧಾನ್ಯ ರಫ್ತು ಮಾಡುವಷ್ಟು ಸ್ವಾವಲಂಬನೆ ಸಾಧಿಸಿ ತೋರಿದ್ದರು. ಆದರೆ ಈಗ ಅಮೆರಿಕ ಅಧ್ಯಕ್ಷರ ಎದುರು ಮೋದಿಯವರು ಅಸಹಾಯಕರಂತೆ ಕಂಡುಬರುತ್ತಿದ್ದಾರೆ. ಇದನ್ನೇ ಅಲ್ಲವೇ ವಿಕಟನ್ ಪತ್ರಿಕೆ ಐದಾರು ತಿಂಗಳು ಮೊದಲೇ ಹೇಳಿದ್ದು!!!







