ನ್ಯಾ.ರೋಹಿಣಿ ವರದಿ : ಜಾರಿಗೆ ನಿಧಾನ ದ್ರೋಹ..

ಬಿ.ಪಿ.ಮಂಡಲ್ ಆಯೋಗ ಹಿಂದುಳಿದ ವರ್ಗಗಳಿಗೆ ಶೇಕಡ 27ರಷ್ಟು ಮೀಸಲಾತಿ ನಿಗದಿಪಡಿಸಿ ನೀಡಿದ ವರದಿಯನ್ನು ಕೇಂದ್ರ ಸರಕಾರ ಅನುಷ್ಠಾನಗೊಳಿಸಿ ಸುಮಾರು 25 ವರ್ಷ ಕಳೆದರೂ ಕೆಲವೇ ಕೆಲವು ಪ್ರಬಲ ಜಾತಿಗಳು ಹೆಚ್ಚಿನ ಪಾಲು ಪಡೆಯುತ್ತಿವೆ ಎಂಬ ಆರೋಪಕ್ಕೆ ಉತ್ತರ ಕಂಡುಕೊಳ್ಳಲು ಕೇಂದ್ರ ಸರಕಾರ ನ್ಯಾ.ಜಿ.ರೋಹಿಣಿ ಆಯೋಗವನ್ನು ನೇಮಿಸಿತು. ಮೀಸಲಾತಿ ಪ್ರಯೋಜನಗಳು ಎಲ್ಲಾ ಸಮುದಾಯಗಳಿಗೆ ಸಮಾನವಾಗಿ ತಲುಪುತ್ತಿಲ್ಲ ಎಂಬ ಅಸಮತೋಲನವನ್ನು ಸರಿಪಡಿಸುವ ಉದ್ದೇಶ ಕೇಂದ್ರ ಸರಕಾರದ ಮುಂದಿರಬಹುದು. 2017ರಲ್ಲಿ ಸಂವಿಧಾನದ ವಿಧಿ 340 ರ ಅನ್ವಯ ರಚನೆಯಾದ ಆಯೋಗವು ಸುದೀರ್ಘ ಅವಧಿ ವ್ಯಯಿಸಿ, 2023ರಲ್ಲಿ ವರದಿ ಸಲ್ಲಿಸಿತು.
ಆರು ವರ್ಷ ತಪಸ್ಸು, 13ಬಾರಿ ಗಡುವು ವಿಸ್ತರಣೆ, ಕೋಟ್ಯಂತರ ರೂಪಾಯಿ ಖರ್ಚು- ಕೊನೆಗೂ ಆಯೋಗದ ವರದಿ ಸುರಕ್ಷಿತವಾಗಿ ಕೇಂದ್ರ ಸರಕಾರದ ಕಪಾಟು ಸೇರಿಕೊಂಡಿದೆ. ಇಂಥ ವಿಳಂಬ ಪ್ರಕ್ರಿಯೆ ಸಾಮಾಜಿಕ ನ್ಯಾಯಕ್ಕೆ ಬಗೆದ ದೊಡ್ಡ ದ್ರೋಹವಲ್ಲವೇ? ಎಂಬ ಮಾತು ಕೇಳಿ ಬಂದಿದೆ. ಇರಲಿ, ವಿಳಂಬಕ್ಕೆ ಕೆಲವು ಕಾರಣಗಳಿವೆಯಂತೆ! ಏನವು? - ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ದತ್ತಾಂಶಗಳ ಕೊರತೆ ಮತ್ತು ರಾಜ್ಯಗಳಿಂದ ಸೂಕ್ತ ಮಾಹಿತಿಗಳು ಬಾರದಿರುವುದು ಹಾಗೂ ಕೊರೋನ ಅವಧಿಯಲ್ಲಿ ಕೆಲಸದ ವಿಳಂಬ ಎಂಬವುಗಳನ್ನು ಹೇಳಲಾಗಿದೆ.
ಕೇವಲ ಆಯೋಗ ರಚನೆ ಮಾಡಿ ಹಿಂದುಳಿದ ವರ್ಗಗಳ ಉಪ ವರ್ಗೀಕರಣ ಮಾಡಲು ಪರಿಶೀಲನಾಂಶಗಳನ್ನು ನೀಡಿದರಷ್ಟೇ ಸರಕಾರದ ಜವಾಬ್ದಾರಿ ಮುಗಿಯಿತು ಎಂದೇನು ಭಾವಿಸಬೇಕಾಗಿಲ್ಲ. ಆಯೋಗಕ್ಕೆ ಬೇಕಾದ ಎಲ್ಲಾ ಮಾಹಿತಿ ಮತ್ತು ದತ್ತಾಂಶಗಳನ್ನು ಒದಗಿಸುವುದು ಸರಕಾರದ ಆದ್ಯ ಕರ್ತವ್ಯ. ಮಾವಿನ ಕಾಯಿ ಉದುರಿಸಲು ಆಯೋಗದ ಬಳಿ ಮಂತ್ರದಂಡವಿಲ್ಲ ಎಂಬುದು ಸರಕಾರಕ್ಕೆ ಗೊತ್ತಿರಬೇಕಾಗಿತ್ತು. ಉಪವರ್ಗೀಕರಣ ಅಥವಾ ಪ್ರಸ್ತುತ ಚಾಲ್ತಿಯಲ್ಲಿರುವ, ನುಡಿಗಟ್ಟಿನಲ್ಲಿ ಹೇಳಬೇಕೆಂದರೆ ಅದು ಒಳ ಮೀಸಲಾತಿ. ಒಳ ಮೀಸಲಾತಿ ಕಲ್ಪಿಸಬಾರದು ಎಂಬ ಉದ್ದೇಶ ಈಗಾಗಲೇ ಮೀಸಲಾತಿಗೆ ಒಳಪಟ್ಟಿರುವ ಬಹು ಸಂಖ್ಯಾತ ಬಲಿಷ್ಠ ಜಾತಿಗಳು ಮತ್ತು ಅಂಥಾ ಜಾತಿಗಳ ಬಿಗಿ ಮುಷ್ಟಿಯಲ್ಲಿ ಸಿಲುಕಿಕೊಂಡಿರುವ ರಾಜ್ಯ ಸರಕಾರಗಳು ಮಾಹಿತಿ ನೀಡಲು ಹಿಂದೇಟು ಹಾಕಿರಲೂ ಸಾಧ್ಯ. ಅಂತೂ ದೀರ್ಘಕಾಲದ ನಂತರ ಆಯೋಗ ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸಿ ಮೂರು ವರ್ಷ (31 ಜುಲೈ, 2023) ತುಂಬಲು ಇನ್ನು ಕೆಲವೇ ದಿನಗಳು ಬಾಕಿ ಇವೆ.
ವಿಳಂಬ ಎನ್ನಬಹುದಾದರೂ ಕೊನೆಗೂ ಆಯೋಗ ಪರಿಪೂರ್ಣ ಹಾಗೂ ಮೌಲ್ಯಯುತ ವರದಿ ನೀಡಿದೆ ಎಂಬ ಮಾತೂ ಕೇಳಿ ಬಂದಿದೆ. ಸರಕಾರ ಆಯೋಗದ ವರದಿಯನ್ನು ಸ್ವೀಕರಿಸಿದ ನಂತರ ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸುವ ಕರ್ತವ್ಯದಿಂದ ವಿಮುಖವಾಗಿದೆ. ಅಷ್ಟೇ ಅಲ್ಲ ಸಾರ್ವಜನಿಕ ಅವಗಾಹನೆಗೆ ತರುವುದರಲ್ಲಿಯೂ ವಿಫಲವಾಗಿದೆ. ಇಷ್ಟಾದರೂ, ವರದಿಯ ಕೆಲವೊಂದು ಪ್ರಮುಖ ಮಾಹಿತಿಗಳು ಸಾಮಾಜಿಕ ಜಾಲತಾಣ ಮತ್ತಿತರ ಮಾಧ್ಯಮಗಳಲ್ಲಿ ಹರಿದಾಡಿವೆ.
ಮಂಡಲ್ ವರದಿಯಲ್ಲಿ ದೇಶಾದ್ಯಂತ 2,633 ಜಾತಿಗಳು ಹಿಂದುಳಿದ ವರ್ಗಕ್ಕೆ ಸೇರಿವೆ ಎಂದು ಗುರುತಿಸಲಾಗಿತ್ತು. ಮಂಡಲ್ ಆಯೋಗ ಹಿಂದುಳಿದ ಜಾತಿಗಳನ್ನು ಉಪವರ್ಗೀಕರಣ ಮಾಡಲು ಇದ್ದ ನಿಬಂಧನೆ ಎಂದರೆ 1962ರಲ್ಲಿ ಸರ್ವೋಚ್ಛ್ಛ ನ್ಯಾಯಾಲಯ ಎಂ.ಆರ್. ಬಾಲಾಜಿ ಪ್ರಕರಣದಲ್ಲಿ ನೀಡಿದ ನಿರ್ದೇಶನ ಇರಬಹುದು. ಆ ತೀರ್ಪಿನಲ್ಲಿ ಹಿಂದುಳಿದ ವರ್ಗಗಳನ್ನು ಅತ್ಯಂತ ಹಿಂದುಳಿದ, ಅತಿ ಹಿಂದುಳಿದ ಮತ್ತು ಹಿಂದುಳಿದ ಎಂಬಂತೆ ಉಪ ವರ್ಗೀಕರಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಅದನ್ನು ಅನುಸರಿಸಿಯೇ ಮಂಡಲ್ ಆಯೋಗ ಹಿಂದುಳಿದ ವರ್ಗಗಳನ್ನು ಒಂದೇ ಪ್ರವರ್ಗವೆಂದು ಪರಿಗಣಿಸಿ, ಶೇಕಡ 52ರಷ್ಟು ಇದ್ದ ಹಿಂದುಳಿದ ವರ್ಗಗಳಿಗೆ, ಶೇಕಡ 27ರಷ್ಟು ಮೀಸಲಾತಿಯನ್ನು ನಿಗದಿಗೊಳಿಸಿತ್ತು. ಎಲ್ಲಾ ಜಾತಿಗಳು ಒಂದೇ ಪ್ರವರ್ಗದಲ್ಲಿ ಇದ್ದ ಕಾರಣ ಹುದ್ದೆ ಅಥವಾ ನೇಮಕಾತಿಯಲ್ಲಿ ಎಲ್ಲಾ ಜಾತಿಗಳಿಗೂ ಅನ್ವಯಿಸುವಂತೆ ಸಮಾನ ಪ್ರಾತಿನಿಧ್ಯ ಇರಲಿಲ್ಲ. ಆ ನಿಮಿತ್ತವೇ ಆಯೋಗ ರಚನೆ ಆದದ್ದು. ಕೆಲವು ಮಾಧ್ಯಮಗಳ ವರದಿಯ ಪ್ರಕಾರ ಆಯೋಗ 2013- 2018 ರವರೆಗೆ ಕೇಂದ್ರ ಸರಕಾರದ ನೌಕರಿ, IIT, IIM, ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಹಿಂದುಳಿದ ವರ್ಗಗಳ ನೇಮಕಾತಿ/ ಪ್ರವೇಶದ 1.3 ಲಕ್ಷ ದಾಖಲೆಗಳನ್ನು ಪರಿಶೀಲಿಸಿದೆ. ಅದರ ವಿವರ ಹೀಗಿದೆ-2,633 ಹಿಂದುಳಿದ ಜಾತಿಗಳಲ್ಲಿ , ತೀವ್ರ ನೋವಿನ ಸಂಗತಿ ಎಂದರೆ 983 ಜಾತಿಗಳಿಗೆ ಹುದ್ದೆ ಅಥವಾ ನೇಮಕಾತಿಯ ಪ್ರಾತಿನಿಧ್ಯವೇ ಇಲ್ಲ. ಅಷ್ಟೂ ಜಾತಿಗಳು ಯಾವುದೇ ರೀತಿಯ ಹುದ್ದೆ ಅಥವಾ ನೇಮಕಾತಿ ಪಡೆಯುವಲ್ಲಿ ವಿಫಲಗೊಂಡಿವೆ. ಮತ್ತೆ 994 ಜಾತಿಗಳಿಗೆ ಕೇವಲ ಶೇಕಡ 2.68 ರಷ್ಟು ಪ್ರಾತಿನಿಧ್ಯ ಮಾತ್ರ ದೊರಕಿದೆ. 25 ಪ್ರಬಲ ಜಾತಿಗಳಷ್ಟೇ ಪಡೆದ ಪ್ರಾತಿನಿಧ್ಯ ಅಂದಾಜು ಶೇಕಡ 24ರಷ್ಟಿದೆ. ಅಂದರೆ ಹಿಂದುಳಿದ ವರ್ಗಗಳ ಕೋಟಾದಲ್ಲಿ ‘ಕೆಲವೇ ಜಾತಿಗಳ ಏಕಸ್ವಾಮ್ಯ’ ಇದೆ ಎಂದು ಆಯೋಗ ಕಂಡುಕೊಂಡಿದೆ. ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ನುಂಗಿದ ಪ್ರಕರಣದಂತೆ ಕಾಣುತ್ತಿದೆ ಇದು. ಮೀಸಲಾತಿ ಇದ್ದರೂ ಅಸಮಾನತೆ ಇಷ್ಟೊಂದು ಅಗಾಧವಾಗಿದೆ ಎಂದರೆ ಮೀಸಲಾತಿಯ ಅಸ್ತಿತ್ವವನ್ನೇ ಅಣಕಿಸಿದಂತಾಗಿದೆ.
ಹೆಚ್ಚು ಲಾಭ ಪಡೆದ 25 ಜಾತಿಗಳು ಎಂದರೆ ಉತ್ತರ ಭಾರತದ ಯಾದವ, ಕುರ್ಮಿ,ಲೋದ್, ಕೊಯಿರಿ, ಜಾಟ್ ,ಮಹಾರಾಷ್ಟ್ರದ ಕುಣಬಿ, ಮಾಲಿ, ದಕ್ಷಿಣ ಭಾರತದ ತಮಿಳುನಾಡಿನ ವನ್ನಿಯಾರ್, ನಾಡಾರ್, ಆಂಧ್ರದ ಕಾಪು, ತೆಲಂಗಾಣದ ಮುನ್ನೂರು ಕಾಪು, ಕರ್ನಾಟಕದ ಗ್ರಾಮಾಂತರ ಒಕ್ಕಲಿಗ, ಕುರುಬ, ಈಡಿಗ ಇತ್ಯಾದಿ.
ಆಯೋಗ ಈ ಅಂಕಿ ಅಂಶಗಳ ಆಧಾರದ ಮೇಲೆ 4 ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಅದರಂತೆ 4 ಉಪ ವರ್ಗಗಳನ್ನು ರಚನೆ ಮಾಡಿ, ಹಿಂದುಳಿದ ವರ್ಗಗಳು ಪಡೆದ ಪ್ರಾತಿನಿಧ್ಯದ ಆಧಾರದಲ್ಲಿ 4 ಗುಂಪುಗಳಾಗಿ ವಿಂಗಡಿಸಿದೆ. ಶೇಕಡ 27ರಷ್ಟು ಕೋಟಾವನ್ನು ಕ್ರಮವಾಗಿ ಶೇ.10+ಶೇ.8+ ಶೇ.6+ ಶೇ.3 ಎಂಬಂತೆ ವಿಭಾಗಿಸಿದೆ ಎಂದು ತಿಳಿದು ಬಂದಿದೆ. ನಾಲ್ಕನೇ ಗುಂಪಿನಲ್ಲಿರುವ ಜಾತಿಗಳ ಸಂಖ್ಯಾಬಲ ಮತ್ತು ಅವುಗಳ ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಅವುಗಳ ನಡುವೆ ತೀವ್ರ ಸ್ಪರ್ಧೆ ಇರುವಂತೆ ಕಾಣುತ್ತದೆ. ದೇಶದ ಎಲ್ಲಾ ಪ್ರಬಲ ಹಿಂದುಳಿದ ಜಾತಿಗಳಾದ ಯಾದವ, ಕುರ್ಮಿ, ಜಾಟ್, ನಾಯರ್, ರೆಡ್ಡಿ , ಕಮ್ಮ ,ಪಟೇಲ್ ಮುಂತಾದವು ಈ ಗುಂಪಿನಲ್ಲಿವೆ. ಹಾಗಾಗಿ ಸ್ಥಾನ ಕಡಿಮೆ ಇದ್ದು ಸ್ಪರ್ಧೆ ಹೆಚ್ಚಿರುತ್ತದೆ ಎನ್ನಲಾಗಿದೆ. ಕರ್ನಾಟಕದ ಅತಿ ಹಿಂದುಳಿದ ಮತ್ತು ಕೇಂದ್ರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿರುವ ಗೊಲ್ಲ, ಬೆಸ್ತ, ಉಪ್ಪಾರ, ಮಡಿವಾಳ, ಸವಿತಾ , ಅಗಸ, ತಿಗಳ, ಬೈಲಪತರ್, ದೊಂಬಿ ದಾಸ, ಹೆಳವ, ಗೋಣಿಗ, ಹೂವಾಡಿಗ, ಕೋಟೆ ಕ್ಷತ್ರಿಯ, ಕುಂಬಾರ, ದರ್ಜಿ, ನೇಯ್ಗಿ , ದೇವಾಡಿಗ, ಮುಂತಾದ ಜಾತಿಗಳು ಮತ್ತು ಇನ್ನಿತರ 100ಕ್ಕೂ ಹೆಚ್ಚು ಸಣ್ಣ- ಸಣ್ಣ ಜಾತಿಗಳಿಗೆ ಮೊದಲನೇ ಗುಂಪಿನಲ್ಲಿ ಪ್ರತ್ಯೇಕ ಕೋಟಾ ಸಿಗುವ ಸಾಧ್ಯತೆ ಇದೆ. ಅಂಥಾ ಸಾಧ್ಯತೆ ಇದ್ದಲ್ಲಿ ಈ ಗುಂಪಿಗೆ ಮೊದಲ ಬಾರಿಗೆ ಕೇಂದ್ರ ಸರಕಾರದ ಹುದ್ದೆ -ನೇಮಕಾತಿಯಲ್ಲಿ ಹೆಚ್ಚಿನ ಅವಕಾಶ ಸಿಗುವ ಸಂಭವ ಇದೆ. ವೇದನೆ ತರುವ ಸಂಗತಿ ಎಂದರೆ, ಕರ್ನಾಟಕದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿರುವ ಸುಮಾರು 72 ಜಾತಿ - ಉಪಜಾತಿಗಳಿಗೆ ಕರ್ನಾಟಕದಲ್ಲಿಯೂ ಕೂಡ ಯಾವುದೇ ಹುದ್ದೆ ಮತ್ತು ನೇಮಕಾತಿ ದಕ್ಕಿರುವುದಿಲ್ಲ. ಕರ್ನಾಟಕದ ಮೀಸಲಾತಿ ಪಟ್ಟಿಯಲ್ಲಿ ಇರುವ ಈ ಜಾತಿಗಳೊಳಗೆ ಅಲೆಮಾರಿ -ಅರೆ ಅಲೆಮಾರಿ ಜಾತಿಗಳು ಸೇರಿಕೊಂಡಿವೆ. ದುರಂತವೆಂದರೆ ಈ 72 ಜಾತಿ - ಉಪಜಾತಿಗಳು ಕೇಂದ್ರದ ಮೀಸಲಾತಿ ಪಟ್ಟಿಯಲ್ಲಿ ಸೇರಿಯೇ ಇಲ್ಲ. ಈ ನಿಟ್ಟಿನಲ್ಲಿ ಕಳೆದ 5 ವರ್ಷಗಳ ಹಿಂದೆಯೇ ಹಿಂದುಳಿದ ವರ್ಗಗಳ ಸಂಘಟನೆಯೊಂದು, ಕರ್ನಾಟಕ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ, ಸರಕಾರ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸು ಮಾಡದೆ ಕ್ರೌರ್ಯ ಮೆರೆದಿದೆ. ಈ 72 ಜಾತಿ- ಉಪಜಾತಿಗಳು ಕೇಂದ್ರ ಮೀಸಲಾತಿ ಪಟ್ಟಿಯಲ್ಲಿ ಸೇರಿದಲ್ಲಿ ಹುದ್ದೆ ಅಥವಾ ನೇಮಕಾತಿ ಪಡೆಯದ ಜಾತಿಗಳ ಸಂಖ್ಯೆ ಹೆಚ್ಚಾಗುತ್ತದೆ.
ಕೇಂದ್ರ ಮೀಸಲಾತಿ ಪಟ್ಟಿಯಲ್ಲಿ, ಕರ್ನಾಟಕದ ಗ್ರಾಮಾಂತರ ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯದಲ್ಲಿ ಕುಲಕಸುಬುಗಳನ್ನು ಹೊಂದಿರುವ ಉಪಜಾತಿಗಳನ್ನು ಮಾತ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಗಾಣಿಗ ಲಿಂಗಾಯತ, ಕುಂಬಾರ ಲಿಂಗಾಯಿತ, ಬಡಿಗೇರ ಲಿಂಗಾಯತ ಕಮ್ಮಾರ ಲಿಂಗಾಯತ, ಉಪ್ಪಾರ ಲಿಂಗಾಯತ, ದೇವಾಂಗ ಲಿಂಗಾಯತ, ಹಡಪದ ಲಿಂಗಾಯತ ಹೀಗೆ ಮುಂತಾದವು. ಇಡಿಯಾಗಿ ಲಿಂಗಾಯತ ಸಮುದಾಯವನ್ನು ಕೇಂದ್ರ ಮೀಸಲಾತಿ ಪಟ್ಟಿಯಲ್ಲಿ ಸೇರಿಸಿಲ್ಲ. ಆಯೋಗ ಶಿಫಾರಸು ಮಾಡಿರುವ 4 ಉಪ ವರ್ಗಗಳಲ್ಲಿ ಗ್ರಾಮಾಂತರ ಒಕ್ಕಲಿಗ ಮತ್ತು ಲಿಂಗಾಯತ ಉಪಜಾತಿಗಳನ್ನು ‘ಗುಂಪು- 4’ ಅಂದರೆ ತುಲನಾತ್ಮಕವಾಗಿ ಮುಂದುವರಿದ ಹಿಂದುಳಿದ ವರ್ಗಗಳ ಗುಂಪಿಗೆ ಸೇರಿಸುವ ಸಾಧ್ಯತೆ ಇದೆ.
► ವರದಿಯ ಸ್ಥಿತಿಯೇನು?: ವರದಿ ಸರಕಾರದ ಬಳಿ ಇದೆ. ಅದನ್ನು ಇನ್ನೂ ಸಾರ್ವಜನಿಕಗೊಳಿಸಿಲ್ಲ; ಜಾರಿಯೂ ಆಗಿಲ್ಲ. ಇದಕ್ಕಾಗಿಯೇ ಕರ್ನಾಟಕ, ಬಿಹಾರ, ತೆಲಂಗಾಣ ರಾಜ್ಯಗಳು ವರದಿ ಜಾರಿ ಮಾಡಿ, ಜೊತೆಗೆ ಜಾತಿಗಣತಿಯನ್ನೂ ಮಾಡಿ ಅಂತ ಕೇಂದ್ರವನ್ನು ಒತ್ತಾಯಿಸುತ್ತಿವೆ. ಬಹುಶಃ ಕೇಂದ್ರ ಸರಕಾರದ ದೃಷ್ಟಿಯಲ್ಲಿ ಇದೊಂದು ರಾಜಕೀಯ ಸೂಕ್ಷ್ಮ ವಿಷಯವಾಗಿರಬಹುದು. ಆದ್ದರಿಂದ ಸರಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
► ವರದಿ ಜಾರಿಗೆ ಬಂದರೇ? : ಕೇಂದ್ರ ಸರಕಾರದ ನೌಕರಿಯಲ್ಲಿ ಬದಲಾವಣೆ ಯಾಗುವ ಸಂಭವವಿದೆ. ಬ್ಯಾಂಕು, ರೈಲ್ವೆ, IIT- NIT, ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಕರ್ನಾಟಕದ ಅಭ್ಯರ್ಥಿಗಳಿಗೆ ಹೊಸ ಗುಂಪು-4 ಮೀಸಲಾತಿಗೆ ಅನ್ವಯ ಆಗುವುದು. ಉಪವರ್ಗೀಕರಣದಲ್ಲಿ ಅತಿ ಹಿಂದುಳಿದ ಗುಂಪಿಗೆ ಸೇರಿದ ಜಾತಿಗಳಿಗೆ ಪ್ರತ್ಯೇಕ ಕೋಟಾ ಸಿಗುತ್ತದೆ.
983 ಶೂನ್ಯ ಪ್ರಾತಿನಿಧ್ಯ ಜಾತಿಗಳು: ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಕರ್ನಾಟಕದ ಸುಮಾರು 100+ ಸಣ್ಣ ಜಾತಿಗಳಿಗೆ ಇದುವರೆಗೂ ಕೇಂದ್ರ ನೌಕರಿ ಸಿಕ್ಕೇ ಇಲ್ಲ. ಉದಾ: ಗೊಲ್ಲ, ಉಪ್ಪಾರ, ಗಾಣಿಗ, ಅಗಸ, ಕುಂಬಾರ ಮುಂತಾದ ಕುಲಕಸುಬು ಹೊಂದಿರುವ ಜಾತಿಗಳು. ಇವುಗಳಿಗೆ ಹೊಸದಾಗಿ ರಚಿಸಿರುವ ಗುಂಪಿನಲ್ಲಿ ಅವಕಾಶ ಸಿಗುವ ಸಂಭವವಿದೆ.
ರಾಜಕೀಯ ಸೂಕ್ಷ್ಮತೆ: ರಾಜಕೀಯ ಸೂಕ್ಷ್ಮತೆಯ ಕಾರಣದಿಂದ ನ್ಯಾ. ರೋಹಿಣಿ ವರದಿ ಜಾರಿ ಕಷ್ಟ ಆಗುತ್ತಿದೆ ಎನ್ನಲಾಗಿದೆ. ಒಕ್ಕಲಿಗ, ಯಾದವ, ಕುರುಮಿ ತರಹದ ಪ್ರಬಲ ಸಮುದಾಯಗಳು ನಮ್ಮ ಕೋಟಾ ಕಡಿಮೆಯಾಗುತ್ತೆದೆ ಎಂದು ವಿರೋಧಿಸುವ ಸಾಧ್ಯತೆ ಇದೆ. ಆದರೆ 983 ಜಾತಿಗಳಿಗೆ ಶೂನ್ಯ ಪ್ರಾತಿನಿಧ್ಯ ಇರುವುದು ಕೂಡ ಸಾಮಾಜಿಕ ನ್ಯಾಯದ ಪ್ರಶ್ನೆ ಅಲ್ಲವೇ?
983 ಹಿಂದುಳಿದ ವರ್ಗಗಳಲ್ಲಿ ಬರುವ ಜಾತಿಗಳಿಗೆ ಮೀಸಲಾತಿ ಜಾರಿಗೆ ಬಂದು 35 ವರ್ಷವಾದರೂ ಒಂದೇ ಒಂದು ಹುದ್ದೆ ಸಿಕ್ಕಿಲ್ಲ ಎಂಬ ಕಹಿ ಸತ್ಯವನ್ನು ರೋಹಿಣಿ ಆಯೋಗ ಬಯಲು ಮಾಡಿ ವರದಿ ನೀಡಿದ್ದರೂ, ಕೇಂದ್ರ ಸರಕಾರ ವರದಿಯನ್ನು ಜಾರಿ ಮಾಡದೆ ನನೆಗುದಿಗೆ ಬೀಳಿಸಿರುವುದು ವಂಚಿತ ಸಮುದಾಯಗಳಿಗೆ ಮಾಡಿದ ಘೋರ ಅನ್ಯಾಯ.
ಅಸಮಾನತೆ ಸರಿಪಡಿಸಲು ಕೂಡಲೇ ಉಪ ವರ್ಗೀಕರಣದ ವರದಿಯನ್ನು ಸರಕಾರ ಬಚ್ಚಿಡುವ ಮೂಲಕ ಪ್ರಬಲ ಜಾತಿಗಳ ಹಿತ ಕಾಯ್ದು, ದುರ್ಬಲರನ್ನು ತುಳಿಯುತ್ತಿರುವುದು ಖಂಡನೀಯವಲ್ಲವೇ? ವರದಿ ಜಾರಿ ಮಾಡದೆ ಹಿಂದುಳಿದ ವರ್ಗಗಳ ಮತ ಪಡೆದು ಅವರ ಹಕ್ಕನ್ನೇ ಕಸಿಯುವುದು ರಾಜಕೀ
ಯ ದ್ವಿಮುಖ ನೀತಿಯಲ್ಲವೇ? ತೆರಿಗೆದಾರರ ಹಣದಲ್ಲಿ ಆರು ವರ್ಷ ಕೆಲಸ ಮಾಡಿ ಸಲ್ಲಿಸಿದ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೂ ಇಡದಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಅನ್ನಿಸುವುದಿಲ್ಲವೇ? ವರದಿಯಲ್ಲಿ ಏನಿದೆ ಎಂದು ಜನರಿಗೆ ತಿಳಿಯದಂತೆ ಮುಚ್ಚಿಡುವ ಹುನ್ನಾರ ಏಕೆ?
ನ್ಯಾಯಮೂರ್ತಿ ರೋಹಿಣಿ ವರದಿ ಜಾರಿ ವಿಳಂಬವವಲ್ಲ, ಸಾಮಾಜಿಕ ನ್ಯಾಯದ ಸಮಾಧಿ. ಕೇಂದ್ರ ಸರಕಾರ ಕೂಡಲೇ ವರದಿ ಬಹಿರಂಗಪಡಿಸಿ ಉಪ ವರ್ಗೀಕರಣ ಮಾಡಿರುವ ವರದಿ ಜಾರಿ ಮಾಡಿ ತನ್ನ ಬದ್ಧತೆ ಸಾಬೀತುಪಡಿಸಲಿ. ಇಲ್ಲವಾದರೆ ಇತಿಹಾಸ ಇದನ್ನು ಹಿಂದುಳಿದವರಿಗೆ ಬಗೆದ ದ್ರೋಹ ಎಂದೇ ದಾಖಲಿಸುತ್ತದೆ.






