ನ್ಯಾಯಮೂರ್ತಿ ಯಶವಂತ್ ವರ್ಮಾ ಪ್ರಕರಣ : ಕಪಿಲ್ ಸಿಬಲ್ ಎತ್ತಿರುವ ಗಂಭೀರ ಪ್ರಶ್ನೆಗಳಿಗೆ ಉತ್ತರವಿದೆಯೇ?

ನ್ಯಾಯಮೂರ್ತಿ ಯಶವಂತ್ ವರ್ಮಾ ನಿವಾಸದಲ್ಲಿ ನಗದು ಪತ್ತೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಸಭೆ ಸದಸ್ಯ ಹಾಗೂ ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಕಪಿಲ್ ಸಿಬಲ್ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಇಷ್ಟು ದೊಡ್ಡ ಆರೋಪದಲ್ಲಿ ಸಾಕ್ಷ್ಯ ಎಲ್ಲಿದೆ ಎಂದು ಸಿಬಲ್ ಕೇಳುತ್ತಿದ್ದಾರೆ.
ನ್ಯಾಯಮೂರ್ತಿ ವರ್ಮಾ ಅವರ ನಿವಾಸದಲ್ಲಿ ಒಂದೇ ಒಂದು ನೋಟು ಕಂಡುಬಂದಿಲ್ಲ ಎಂದಿರುವ ಸಿಬಲ್, ಸುಟ್ಟ ನೋಟುಗಳನ್ನು ತನಿಖೆಗಾಗಿ ಹಾಜರುಪಡಿಸಬೇಕಿತ್ತಲ್ಲವೆ ಎಂದು ಕೇಳಿದ್ದಾರೆ. ಅಧಿಕಾರಿಗಳು ಯಾರನ್ನಾದರೂ ರಕ್ಷಿಸುತ್ತಿದ್ದಾರೆಯೇ? ಎಸ್‌ಐಟಿ ಅಥವಾ ದಿಲ್ಲಿ ಪೊಲೀಸರು ಕರೆನ್ಸಿ ನೋಟು ಸಂಖ್ಯೆಗಳಂತಹ ವಿವರಗಳನ್ನು ಏಕೆ ಹಂಚಿಕೊಂಡಿಲ್ಲ ಎಂಬ ಗಂಭೀರ ಪ್ರಶ್ನೆಯನ್ನು ಸಿಬಲ್ ಅವರು ಮುಂದಿಟ್ಟಿದ್ದಾರೆ.
ನ್ಯಾಯಮೂರ್ತಿ ವರ್ಮಾ ಪ್ರಕರಣದಲ್ಲಿ ಅವರ ವಿರುದ್ಧ ವಾಗ್ದಂಡನೆ ನಿಲುವಳಿ ಮಂಡಿಸಲು ಸರಕಾರ ನಿರ್ಧರಿಸಿದೆ ಎಂದು ಇತ್ತೀಚೆಗೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿಕೆ ನೀಡಿದ್ದರು. ಕಪಿಲ್ ಸಿಬಲ್ ಎತ್ತಿರುವ ಪ್ರಶ್ನೆಗಳು ಈ ಹಿನ್ನೆಲೆಯಲ್ಲಿ ಬಹಳ ಪ್ರಮುಖವಾಗುತ್ತಿವೆ.
ನ್ಯಾಯಮೂರ್ತಿ ವರ್ಮಾ ಪ್ರಕರಣದಲ್ಲಿ ಸರಕಾರದ ಉದ್ದೇಶ ಸ್ಪಷ್ಟವಾಗಿದೆ ಎಂದು ಸಿಬಲ್ ಹೇಳಿದ್ದಾರೆ.
ಅವರ ವಿರುದ್ಧ ಇನ್ನೂ ದೋಷಾರೋಪಕ್ಕೆ ಪ್ರಸ್ತಾವ ಸಲ್ಲಿಸದೇ ಇರುವಾಗ, ಆಂತರಿಕ ವಿಚಾರಣೆಯ ಗೌಪ್ಯ ವರದಿಯನ್ನು ಸಂಸತ್ತಿನಲ್ಲಿ ಇಡುವ ಬಗ್ಗೆ ಸಚಿವ ರಿಜಿಜು ಮಾತಾಡುತ್ತಾರೆ ಮತ್ತು ಅದರ ಆಧಾರದ ಮೇಲೆ ನ್ಯಾಯಮೂರ್ತಿ ವರ್ಮಾ ಅವರನ್ನು ಪದಚ್ಯುತಗೊಳಿಸಲು ಪ್ರಯತ್ನಿಸುವುದಾಗಿ ಹೇಳುತ್ತಾರೆ.
ಅದೆ ವೇಳೆ, ನ್ಯಾಯಮೂರ್ತಿ ಶೇಖರ್ ಯಾದವ್ ವಿಷಯದಲ್ಲಿ ಬಾಕಿ ಇರುವ ವಾಗ್ದಂಡನೆ ಪ್ರಸ್ತಾವಕ್ಕೆ ಆರು ತಿಂಗಳಿನಿಂದಲೂ ಸಹಿ ಹಾಕಿಲ್ಲ. ಅವರು ಬಹಿರಂಗವಾಗಿಯೇ ಕೋಮುವಾದಿ ಹೇಳಿಕೆ ನೀಡಿದ್ದರು. ರಿಜಿಜು ಅದರ ಬಗ್ಗೆ ಏನನ್ನೂ ಹೇಳುವುದಿಲ್ಲ.
ಆರೋಪ ನಿಜವಾಗಿರುವಲ್ಲಿ ಅಂಥ ನ್ಯಾಯಾಧೀಶರನ್ನು ರಕ್ಷಿಸಲಾಗುತ್ತಿದೆ. ಆರೋಪದಲ್ಲಿ ಯಾವುದೇ ಸತ್ಯವಿಲ್ಲದಿರುವಾಗ, ಆ ಆರೋಪದ ಮೇಲೆ ವರ್ಮಾ ಅವರ ವಿರುದ್ಧ ಕ್ರಮ ಕೈಗೊಳ್ಳಲು ಬಯಸುತ್ತಾರೆ ಎಂದು ಸಿಬಲ್ ತಕರಾರು ಎತ್ತಿದ್ದಾರೆ.
ಇಲ್ಲಿ ಕಪಿಲ್ ಸಿಬಲ್ ಉಲ್ಲೇಖಿಸಿರುವ ನ್ಯಾ. ಶೇಖರ್ ಯಾದವ್ ಅಲಹಾಬಾದ್ ಹೈಕೋರ್ಟ್‌ನ ಜಡ್ಜ್.
ಹೈಕೋರ್ಟ್‌ನ ಸಭಾಂಗಣದಲ್ಲೇ ವಿಹಿಂಪ ಆಯೋಜಿಸಿದ ಕಾರ್ಯಕ್ರಮದಲ್ಲಿ ತೀರಾ ಪ್ರಚೋದನಕಾರಿ ಹಾಗೂ ಕೋಮುವಾದಿ ಹೇಳಿಕೆ ನೀಡಿದ್ದರು ಈ ನ್ಯಾ. ಶೇಖರ್ ಯಾದವ್. ಆಮೇಲೆ ಅದನ್ನು ಸಮರ್ಥಿಸಿಕೊಂಡಿದ್ದರು ಕೂಡ.
ನ್ಯಾಯಾಧೀಶರ ನೇಮಕಾತಿ ಹೇಗಾದರೂ ತನ್ನ ಕೈಗೆ ಬರಬೇಕು ಎಂಬುದು ಸರಕಾರದ ಏಕೈಕ ಉದ್ದೇಶ. ಸರಕಾರ, ಕೊಲಿಜಿಯಂ ವ್ಯವಸ್ಥೆ ರದ್ದುಗೊಳಿಸಿ, ನ್ಯಾಯಾಧೀಶರ ನೇಮಕಾತಿಯನ್ನು ತನ್ನ ಕೈಗೆ ತೆಗೆದುಕೊಳ್ಳಲು ಬಯಸುತ್ತಿದೆ ಎಂದು ಸಿಬಲ್ ಆಕ್ಷೇಪಿಸಿದ್ದಾರೆ.
ನೀವು ವಿಚಾರಣೆ ಏಕೆ ನಡೆಸುತ್ತಿದ್ದೀರಿ? ಹಣವನ್ನು ಅಲ್ಲಿ ಯಾರು ಇಟ್ಟಿದ್ದಾರೆಂದು ಕಂಡುಹಿಡಿದಿಲ್ಲ. ಅದರ ಬಗ್ಗೆ ವಿಚಾರಿಸಲಿಲ್ಲ ಅಥವಾ ಅಗ್ನಿಶಾಮಕ ಠಾಣೆಯನ್ನೂ ಕೇಳಲಿಲ್ಲ. ಆ ಔಟ್‌ಹೌಸ್‌ನಲ್ಲಿ ಫ್ಯಾನ್ ಮತ್ತು ಟ್ಯೂಬ್ ಲೈಟ್ ಇತ್ತು. ಅದರ ಶಾರ್ಟ್ ಸರ್ಕ್ಯೂಟ್‌ನಿಂದ ಇಷ್ಟು ದೊಡ್ಡ ಸ್ಫೋಟ ಸಂಭವಿಸುವುದಿಲ್ಲ ಎಂಬ ತರ್ಕವನ್ನು ಸಿಬಲ್ ಮುಂದಿಟ್ಟಿದ್ದಾರೆ.
15 ಕೋಟಿ ರೂ. ಪತ್ತೆಯಾಗಿದೆ ಎಂದು ಸಮಿತಿ ಹೇಳಿತು. ಒಂದೇ ಒಂದು ನೋಟು ಬೇಕಿತ್ತು. ಒಂದು ನೋಟು ಸಿಕ್ಕಿದ್ದರೆ, ಅದರ ಸರಣಿ ಸಂಖ್ಯೆ ತಿಳಿದಿದ್ದರೆ, ಆ ನೋಟು ಯಾವ ಬ್ಯಾಂಕಿನಿಂದ ಬಂದಿದೆ ಎಂದು ತಿಳಿಯುತ್ತಿತ್ತು. ಹಾಗಾದರೆ ದಿಲ್ಲಿ ಪೊಲೀಸರು ಏನು ಮಾಡುತ್ತಿದ್ದರು?
ಅವರು ಯಾರನ್ನು ರಕ್ಷಿಸುತ್ತಿದ್ದರು? ಅವರು ಅಲ್ಲಿಂದ ಏಕೆ ಹೊರಟರು? ಅವರು ಎಫ್‌ಐಆರ್ ಏಕೆ ದಾಖಲಿಸಲಿಲ್ಲ? ಎಂದು ಸಾಲು ಸಾಲು ಪ್ರಶ್ನೆಗಳನ್ನು ಸಿಬಲ್ ಎತ್ತಿದ್ದಾರೆ.
ಮಾರ್ಚ್ 14ರಂದು ರಾತ್ರಿ ಆ ಸ್ಫೋಟ ಆದಾಗ, ವರ್ಮಾ ಅವರ ಮಗಳು ಮತ್ತು ಮನೆ ನಿರ್ವಹಣೆಗೆ ಇದ್ದ ವ್ಯಕ್ತಿ ಅಲ್ಲಿಗೆ ಹೋಗಿ ಬಾಗಿಲು ತೆರೆದರು ಮತ್ತು ಬೆಂಕಿ ಹೊತ್ತಿಕೊಂಡಿತ್ತು.
ಆ ಸಮಯದಲ್ಲಿ ಸಿಆರ್‌ಪಿಎಫ್‌ನವರಾಗಲಿ ಅಥವಾ ಮನೆಯ ಸಿಬ್ಬಂದಿಯಾಗಲಿ ಏನೂ ಮಾಡಲಿಲ್ಲ.
ಅವರೇ ಅಗ್ನಿಶಾಮಕ ಠಾಣೆಗೆ ಫೋನ್ ಮಾಡಿದರು.
ಅಗ್ನಿಶಾಮಕ ದಳದವರು ಬಂದಾಗ, ಬೆಂಕಿ ಇರುವುದರಿಂದ ದೂರದಲ್ಲಿರುವಂತೆ ಹೇಳಿದ್ದರಿಂದ ವರ್ಮಾ ಅವರ ಮಗಳು 20-30 ಮೀಟರ್ ದೂರದಲ್ಲಿದ್ದರು. ಒಳಗೆ ಏನಿದೆ, ಏನಿಲ್ಲ ಎಂದು ಅವರಿಗೆ ಗೊತ್ತಿರಲಿಲ್ಲ.
ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಅಲ್ಲಿಂದ ಹೊರಟರು. ಅಷ್ಟರಲ್ಲಿ ದಿಲ್ಲಿ ಪೊಲೀಸರು ಬಂದು, ನೋಡಿ ಹೊರಟುಹೋದರು.
ಅಗ್ನಿಶಾಮಕ ಠಾಣೆಯ ಸಿಬ್ಬಂದಿಯಾಗಲಿ ಅಥವಾ ದಿಲ್ಲಿ ಪೊಲೀಸರಾಗಲಿ ಅಥವಾ ಸಿಆರ್‌ಪಿಎಫ್‌ನವರಾಗಲಿ ಅಲ್ಲಿ ನಗದು ಕಂಡುಬಂದಿದೆ ಎಂದು ಕುಟುಂಬದವರಿಗೆ ಹೇಳಲಿಲ್ಲ. ನಾವು ಕುಟುಂಬಕ್ಕೆ ಹೇಳಿದ್ದೇವೆ ಎಂದು ಯಾರೂ ಹೇಳಲಿಲ್ಲ.
ಅವರ ಮಗಳು ಮಧ್ಯಪ್ರದೇಶದಲ್ಲಿದ್ದ ಮತ್ತು ಫೋನ್ ಸೌಲಭ್ಯವಿಲ್ಲದ ಸ್ಥಳದಲ್ಲಿದ್ದ ತನ್ನ ತಂದೆಗೆ ಕರೆ ಮಾಡುತ್ತಿದ್ದರು. ಮಧ್ಯರಾತ್ರಿ 1 ಗಂಟೆಗೆ ತಂದೆಯೊಂದಿಗೆ ಮಾತನಾಡುವುದು ಸಾಧ್ಯವಾಯಿತು. ಬೆಂಕಿ ಅನಾಹುತದ ಬಗ್ಗೆ ತಿಳಿಸಿದರು ಎಂದು ಸಿಬಲ್ ಅವತ್ತಿನ ಸನ್ನಿವೇಶವನ್ನು ವಿವರಿಸಿದ್ದಾರೆ.
ವರ್ಮಾ ಅವರೊಂದಿಗೆ ಮಗಳು 230 ಸೆಕೆಂಡುಗಳಷ್ಟು ಮಾತನಾಡಿದರು ಎಂದು ಈಗ ಮುಖ್ಯವಾಹಿನಿಯ ಮಾಧ್ಯಮ ಹೇಳುತ್ತಿದೆ. 230 ಸೆಕೆಂಡುಗಳು ಎಂದರೆ ನಾಲ್ಕು ನಿಮಿಷಗಳಿಗಿಂತ ಕಡಿಮೆ.
ಮುಖ್ಯವಾಹಿನಿಯ ಮಾಧ್ಯಮಗಳು 15 ಕೋಟಿ ರೂ. ಕಂಡುಬಂದಿದೆ, ನಾಲ್ಕು ಗೋಣಿಗಳಲ್ಲಿ ಹಣವಿತ್ತು ಎಂದು ಹೇಳುತ್ತವೆ. 15 ಕೋಟಿ ರೂ. ಕಂಡುಬಂದಿದೆ ಎಂದು ಅವುಗಳಿಗೆ ಹೇಗೆ ಗೊತ್ತು? ಆಂತರಿಕ ವಿಚಾರಣಾ ಸಮಿತಿ ಅದನ್ನು ಹೇಳಿದೆಯೇ? ಅವುಗಳನ್ನು ಯಾರು ಎಣಿಸಿದರು ಎಂದು ಸಿಬಲ್ ಪ್ರಶ್ನಿಸಿದ್ದಾರೆ. ಅದು ನಿಜವಾಗಿಯೂ ನಡೆದಿದ್ದಲ್ಲಿ ಎಫ್‌ಐಆರ್ ದಾಖಲಿಸಲಾಗುತ್ತದೆ.
ಅಗ್ನಿಶಾಮಕ ದಳದವರು ಸಹ ಶಿಷ್ಟಾಚಾರ ಪಾಲಿಸಲಿಲ್ಲ.
ಆದ್ದರಿಂದ ಅಲ್ಲಿ ಹಣ ವಶಪಡಿಸಿಕೊಂಡಿಲ್ಲ ಅಥವಾ ಸಮಿತಿ ಅದರ ಬಗ್ಗೆ ಏನನ್ನೂ ಹೇಳಿಲ್ಲ.
ಸಮಿತಿ ಯಾವುದೇ ತೀರ್ಮಾನ ಕೊಟ್ಟಿಲ್ಲ. ಹಾಗಿರುವಾಗ, ಯಾವ ಆಧಾರದ ಮೇಲೆ ಅದು ನ್ಯಾಯಾಧೀಶರ ಹಣ ಎಂದು ಹೇಳುತ್ತೀರಿ ಎಂದು ಸಿಬಲ್ ಕೇಳಿದ್ದಾರೆ.
ಸಮಿತಿ ಸಹ ಇದು ನ್ಯಾಯಾಧೀಶರ ಹಣ ಎಂದು ಹೇಳಿಲ್ಲ. ಈ ಹಣ ನ್ಯಾಯಾಧೀಶರ ಮನೆಯ ಔಟ್‌ಹೌಸ್‌ನಲ್ಲಿ ಕಂಡುಬಂದಿದೆ ಎಂದು ಸಮಿತಿ ಹೇಳಿದೆ.
ಗೋಡೆಯ ಇನ್ನೊಂದು ಬದಿಯಲ್ಲಿ ಔಟ್‌ಹೌಸ್ ಇದೆ ಮತ್ತು ಆ ಔಟ್‌ಹೌಸ್‌ನ ಕೀಲಿಗಳು ಹೆಚ್ಚಾಗಿ ಬೇರೆಯವರ ಬಳಿ ಇರುತ್ತವೆ ಎಂದು ಸಮಿತಿ ಹೇಳುತ್ತದೆ. ಅಂದರೆ ಅವರ ಮೇಲೆ ಮನೆಯವರ ಯಾವುದೇ ನಿಯಂತ್ರಣ ಇರಲಿಲ್ಲ. ಆ ಕೀಲಿಗಳಿಗೆ ಅವರ ಒಪ್ಪಿಗೆ ಅಗತ್ಯವಿರಲಿಲ್ಲ. ಯಾರಾದರೂ ಅದನ್ನು ತೆರೆಯಬಹುದಿತ್ತು.
ಅಲ್ಲಿ ಇದ್ದ ಮದ್ಯದ ಬೀರು ಲಾಕ್ ಆಗಿತ್ತು.
ಆದರೆ ನಗದು ಬಹಿರಂಗವಾಗಿ ತೆರೆದಿತ್ತು ಎನ್ನಲಾಗಿದ್ದನ್ನು ಗಮನಿಸಬೇಕು. ಇದು ತಮಾಷೆಯೇ ಎಂದು ಸಿಬಲ್ ಕೇಳಿದ್ದಾರೆ.
ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಇಂತಹ ಅಪಪ್ರಚಾರ ಹರಡುತ್ತಿದ್ದೀರಿ. ಮುಖ್ಯವಾಹಿನಿಯ ಮಾಧ್ಯಮಗಳು ಯಾವುದೇ ಸತ್ಯಾಂಶಗಳಿಲ್ಲದ ವಿಷಯವನ್ನು ಪ್ರಚಾರ ಮಾಡುತ್ತಿವೆ.
ಏಕೆಂದರೆ ಒಂದು ಅಜೆಂಡಾ ಇದ್ದರೆ, ಅದನ್ನು ಸಾಧಿಸುವುದು ಉದ್ದೇಶ ಎಂದು ಸಿಬಲ್ ಟೀಕಿಸಿದ್ದಾರೆ.
ಮಾರ್ಚ್ 15ರಂದು ನ್ಯಾಯಾಧೀಶ ವರ್ಮಾ ಹಿಂದಿರುಗಿ ತನ್ನ ತಾಯಿಯ ಬಳಿಗೆ ಹೋದರು. ಸಹಜವಾಗಿಯೇ ಎಲ್ಲರೂ ಆತಂಕಕ್ಕೊಳಗಾಗಿದ್ದರು. ಅಲ್ಲಿ ಯಾವುದೇ ನಗದು ಪತ್ತೆಯಾಗಿದೆ ಎಂದು ಅವರಿಗೆ ತಿಳಿದಿರಲಿಲ್ಲ. ಮಗಳಿಗೂ ತಿಳಿದಿರಲಿಲ್ಲ ಅಥವಾ ಮನೆಯಲ್ಲಿ ಯಾವುದೇ ಕುಟುಂಬ ಸದಸ್ಯರಿಗೂ ತಿಳಿದಿರಲಿಲ್ಲ.
ಮಾರ್ಚ್ 17ರಂದು ದಿಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ವರ್ಮಾ ಅವರಿಗೆ ಕರೆ ಮಾಡಿ ಟೇಪ್ ತೋರಿಸಿದರು. ನ್ಯಾಯಾಧೀಶರಿಗೆ ಅಚ್ಚರಿಯಾಯಿತು.
ಅದಾದ ನಂತರ ಮಾರ್ಚ್ 21ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಆ ಟೇಪ್ ಅನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದರು.
ಆ ಸಮಯದಲ್ಲಿ ಯಾವುದೇ ವಿಚಾರಣೆ ಇರಲಿಲ್ಲ. ಆಂತರಿಕ ಕಾರ್ಯವಿಧಾನವೂ ಇರಲಿಲ್ಲ ಮತ್ತು ಟೇಪ್ ಅನ್ನು ಪ್ರದರ್ಶಿಸಿದ ನಂತರ, ಅವರು ವರ್ಮಾ ಅವರನ್ನು ಅಲಹಾಬಾದ್‌ಗೆ ವರ್ಗಾಯಿಸಿದರು.
ಅಂದರೆ ಈಗಾಗಲೇ ಯಾವುದೇ ವಿಚಾರಣೆಯಿಲ್ಲದೆ ನ್ಯಾ. ವರ್ಮಾ ಶಿಕ್ಷೆಗೊಳಗಾಗಿದ್ದಾರೆ ಎಂದು ಸಿಬಲ್ ವಿವರಿಸಿದ್ದಾರೆ.
ಅಂತಹ ಟೇಪ್ ಅನ್ನು ಮುಖ್ಯ ನ್ಯಾಯಮೂರ್ತಿ ಬಿಡುಗಡೆ ಮಾಡಿದರೆ, ಸಾರ್ವಜನಿಕರು ಏನು ಯೋಚಿಸುತ್ತಾರೆ ಎಂಬ ಪ್ರಶ್ನೆಯನ್ನು ಕೂಡ ಸಿಬಲ್ ಎತ್ತಿದ್ದಾರೆ.
ಮುಖ್ಯವಾಹಿನಿಯ ಚಾನೆಲ್‌ನ ವರದಿಗಾರ ಒಂಭತ್ತು ದಿನಗಳ ನಂತರ ರಸ್ತೆಯಲ್ಲಿ ನೋಟು ಸಿಕ್ಕಿದೆ ಎಂದು ಹೇಳಿದರು.
ನಂತರ ಮುಖ್ಯ ನ್ಯಾಯಮೂರ್ತಿ ನೇಮಿಸಿದ ಆಂತರಿಕ ವಿಚಾರಣಾ ಸಮಿತಿಯ ನ್ಯಾಯಾಧೀಶರು ಪೊಲೀಸರನ್ನು, ಅಗ್ನಿ ಶಾಮಕ ದಳದವರನ್ನು ವಿಚಾರಣೆ ಮಾಡದೇ 27ರಂದು ತಮ್ಮ ವರದಿ ಬರೆಯಲು ಪ್ರಾರಂಭಿಸಿದರು.
ಘೋಷಿತ ಕಾರ್ಯವಿಧಾನದ ನಂತರ, ಎಪ್ರಿಲ್ 25ರಂದು, ಆಂತರಿಕ ಕಾರ್ಯವಿಧಾನ ಪ್ರಾರಂಭವಾಯಿತು.
ಆಶ್ಚರ್ಯಕರ ಸಂಗತಿಯೆಂದರೆ, ದಿಲ್ಲಿ ಪೊಲೀಸರು ಅಲ್ಲಿಂದ ಏಕೆ ಹೊರಟುಹೋದರು ಎಂದು ಆಂತರಿಕ ವಿಚಾರಣೆಯಲ್ಲಿ ಕಂಡುಹಿಡಿಯಲು ಆಗಲಿಲ್ಲ.
ದಿಲ್ಲಿ ಪೊಲೀಸರು ಏಕೆ ಎಫ್‌ಐಆರ್ ದಾಖಲಿಸಲಿಲ್ಲ? ಯಾರಾದರೂ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆಯೇ? ಅಲ್ಲಿ ನಗದು ಇದೆ ಎಂದು ಪೊಲೀಸರು ಅವರಿಗೆ ಹೇಳಿದ್ದಾರೆಯೇ? ಯಾವುದೇ ಕ್ರಮವಿಲ್ಲ. ಯಾವುದೇ ವಿಚಾರಣೆ ಇಲ್ಲ ಮತ್ತು ವಿಚಾರಣಾ ವರದಿ ಏನು ಹೇಳುತ್ತದೆ ಎಂದು ನಿಮಗೆ ತಿಳಿದಿದೆಯೇ ಎಂದು ಸಿಬಲ್ ಪ್ರಶ್ನಿಸಿದ್ದಾರೆ.
ಅಲ್ಲಿ ನಗದು ಸಿಕ್ಕಿದೆಯೋ ಇಲ್ಲವೋ ಎಂದು ಕಂಡುಹಿಡಿಯುವುದು ಜವಾಬ್ದಾರಿಯಾಗಿತ್ತು. ಹಾಗಾದರೆ ಅದು ಯಾರ ಜವಾಬ್ದಾರಿ? ಯಾರೋ ಕಂಡುಕೊಂಡರು, ಯಾರೋ ತನಿಖೆ ನಡೆಸಿದರು. ಎಪ್ರಿಲ್ 27ರಂದು ವರದಿ ಬರೆಯಲು ಪ್ರಾರಂಭಿಸಿದರು. ನೋಟಿಸ್ ಅನ್ನು ನ್ಯಾಯಾಧೀಶರಿಗೆ ಕಳಿಸಲಾಯಿತು. ಅವರು 30ರಂದು ಉತ್ತರಿಸಿದರು. ನನ್ನ ಊಹೆಯ ಪ್ರಕಾರ, ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮೇ ತಿಂಗಳಲ್ಲಿ ನಿವೃತ್ತರಾಗಲಿದ್ದುದರಿಂದ ಅದಕ್ಕೆ ಮೊದಲು ಸಾಧ್ಯವಾದಷ್ಟು ಬೇಗ ವರದಿ ಸಲ್ಲಿಸಬೇಕೆಂದು ಅವರು ಬಯಸಿದ್ದರು. 4ನೇ ತಾರೀಕಿನಂದು ಅವರು ವರದಿ ಸಲ್ಲಿಸಿದರು ಎಂದು ಸಿಬಲ್ ವಿವರಿಸಿದ್ಧಾರೆ.
ಇಲ್ಲಿ ಘಟನೆಗೆ ಯಾವುದೇ ಎಫ್‌ಐಆರ್ ಇರಲಿಲ್ಲ. ಹಾಗಾದರೆ, ದಿಲ್ಲಿ ಪೊಲೀಸರು ಏಕೆ ತಮ್ಮ ಕರ್ತವ್ಯ ಮಾಡಲಿಲ್ಲ ಎಂದು ಸಿಬಲ್ ಕೇಳಿದ್ದಾರೆ.
‘ಆಪರೇಷನ್ ಸಿಂಧೂರ’ದ ಹೊತ್ತಲ್ಲಿ ಹೇಗೆಲ್ಲ ಮಾಧ್ಯಮಗಳು ತಪ್ಪು ತಪ್ಪಾಗಿ ವರದಿ ಮಾಡಿದವು ಎಂಬುದನ್ನು ಪ್ರಸ್ತಾಪಿಸುವ ಸಿಬಲ್, ಅಂತರ್‌ರಾಷ್ಟ್ರೀಯ ಮಾಧ್ಯಮಗಳಲ್ಲಿ ನಮ್ಮ ಖ್ಯಾತಿಯನ್ನು ಕುಗ್ಗಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಅಂಥದೇ ಕೆಲಸ ನ್ಯಾಯಾಧೀಶ ವರ್ಮಾ ಅವರ ವಿಷಯದಲ್ಲಿಯೂ ಮಾಧ್ಯಮಗಳಿಂದ ಆಗಿದೆ ಎಂದಿದ್ದಾರೆ.
‘‘ಈಗ ಅವರು ಒಬ್ಬ ನ್ಯಾಯಾಧೀಶರನ್ನು ನಾಶಮಾಡಲು ಬಯಸುತ್ತಾರೆ. ನಾನು ಕಂಡಿರುವ ಅತ್ಯುತ್ತಮ ನ್ಯಾಯಾಧೀಶರಲ್ಲಿ ಅವರು ಒಬ್ಬರು ಎಂದು ಬಹಳ ಜವಾಬ್ದಾರಿಯಿಂದ ಹೇಳಬಲ್ಲೆ. ಯಾವುದೇ ವಕೀಲರನ್ನು ಕೇಳಬಹುದು. ಹೈಕೋರ್ಟ್‌ನಲ್ಲಿರುವ ಯಾವುದೇ ವಕೀಲರನ್ನು, ಸುಪ್ರೀಂ ಕೋರ್ಟ್‌ನಲ್ಲಿರುವ ಯಾವುದೇ ವಕೀಲರನ್ನು ಕೇಳಬಹುದು. ಈ ನ್ಯಾಯಾಧೀಶರು ತಪ್ಪು ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಅಲಹಾಬಾದ್‌ನಲ್ಲಿರುವ ಯಾವುದೇ ವಕೀಲರನ್ನು ನೀವು ಕೇಳಬಹುದು. ಹೀಗೆ ನ್ಯಾಯಾಧೀಶರನ್ನು ಗುರಿಯಾಗಿಸಿರುವುದು ಆಘಾತಕಾರಿ’’ ಎಂದು ಸಿಬಲ್ ಹೇಳಿದ್ದಾರೆ.
ನೋಟಿಸ್ ನೀಡಿದಾಗ, ನ್ಯಾಯಾಧೀಶರು 30ರಂದು ತಮ್ಮ ಉತ್ತರ ಸಲ್ಲಿಸುತ್ತಾರೆ. ವಿಚಾರಣೆಗೆ ಕೇಳುತ್ತಾರೆ. ಆದರೆ ನಿರಾಕರಿಸಲಾಗುತ್ತದೆ. ಆಂತರಿಕ ವರದಿಯಲ್ಲಿ ಅವರ ಪ್ರತಿಕ್ರಿಯೆಯನ್ನು ಉಲ್ಲೇಖಿಸುವುದಿಲ್ಲ. ವರದಿಯಲ್ಲಿ ಹಣ ಅವರಿಗೆ ಸೇರಿದೆ ಎಂದು ಹೇಳುವುದಿಲ್ಲ ಎಂಬುದರ ಬಗ್ಗೆ ಸಿಬಲ್ ಗಮನ ಸೆಳೆಯುತ್ತಾರೆ.
‘‘ಸರಕಾರದಲ್ಲಿ ಉಪ ಕಾರ್ಯದರ್ಶಿಗೆ ಕೂಡ ಆರೋಪಗಳು ಬಂದಾಗ ಭಾರತದ ಕಾನೂನುಗಳಿಗೆ ಅನುಗುಣವಾಗಿರುವ ಕಾರ್ಯವಿಧಾನ ಅನುಸರಿಸಲಾಗುತ್ತದೆ. ಅಂದರೆ ಆರೋಪ ವಿಚಾರಣೆಯ ವಿಧಿಗಳು ಅನ್ವಯವಾಗುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಈಗ ಹೈಕೋರ್ಟ್ ನ್ಯಾಯಾಧೀಶರ ಸ್ಥಾನ ಭಾರತ ಸರಕಾರದ ಉಪ ಕಾರ್ಯದರ್ಶಿಗಿಂತ ಕೆಟ್ಟದಾಗಿದೆ. ನೀವು ಯಾವುದೇ ತನಿಖೆ ನಡೆಸದೆ ಹಿಂದೆ ಸರಿದಿದ್ದೀರಿ ಮತ್ತು ಅವರು ಅಪರಾಧ ಮಾಡಿದ್ದಾರೆ ಎಂದು ನೀವು ಹೇಳುತ್ತೀರಿ. ನನ್ನ ಪ್ರಕಾರ ಇದು ಆಘಾತಕಾರಿಯಾಗಿದೆ’’ ಎಂದು ಸಿಬಲ್ ಹೇಳಿದ್ದಾರೆ.
ನ್ಯಾಯಾಂಗವನ್ನು ದಿನನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಗುರಿಯಾಗಿಸಲಾಗುತ್ತಿದೆ. ಅದನ್ನು ಈ ಸರಕಾರದ ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವವರೇ ಮಾಡುತ್ತಿದ್ದಾರೆ.
ಈ ದೇಶದ ನ್ಯಾಯಾಂಗದ ಸ್ವಾತಂತ್ರ್ಯ ಅಪಾಯದಲ್ಲಿದೆ ಎಂದು ಸಿಬಲ್ ಎಚ್ಚರಿಸಿದ್ದಾರೆ.







