Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸರಕಾರಿ ಹುದ್ದೆಗಳಿಗೆ ನಿವೃತ್ತ...

ಸರಕಾರಿ ಹುದ್ದೆಗಳಿಗೆ ನಿವೃತ್ತ ನ್ಯಾಯಾಧೀಶರ ನೇಮಕಾತಿ ಸಮರ್ಥನೀಯ ಕ್ರಮವೇ?

ಹರೀಶ್ ಕುಮಾರ್ ಕುಡ್ತಡ್ಕಹರೀಶ್ ಕುಮಾರ್ ಕುಡ್ತಡ್ಕ3 Aug 2025 9:59 AM IST
share
ಸರಕಾರಿ ಹುದ್ದೆಗಳಿಗೆ ನಿವೃತ್ತ ನ್ಯಾಯಾಧೀಶರ ನೇಮಕಾತಿ ಸಮರ್ಥನೀಯ ಕ್ರಮವೇ?

ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿಯವರು ಕಾರ್ಯಕ್ರಮ ವೊಂದರಲ್ಲಿ ಮಾತನಾಡುತ್ತ, ‘‘ನಾನು ಈ ಹುದ್ದೆಯಿಂದ ನಿವೃತ್ತಿಯಾದ ಬಳಿಕ ಯಾವುದೇ ಸರಕಾರಿ ಹುದ್ದೆಯನ್ನು ಒಪ್ಪಿ ಕೊಳ್ಳುವುದಿಲ್ಲ.’’ ಎಂದು ತಿಳಿಸಿದ್ದಾರೆ. ಅವರು ಈ ಹಿಂದೆಯೂ ಇದೇ ಮಾತನ್ನು ಆಡಿದ್ದರು. ಮುಖ್ಯ ನ್ಯಾಯಾಧೀಶರು ಈ ವಿಚಾರದಲ್ಲಿ ಖಚಿತ ನಿಲುವು ಹೊಂದಿದ್ದಾರೆ ಎಂಬುದು ಸ್ಪಷ್ಟ. ದೇಶದ ಪ್ರಜಾತಂತ್ರ ವ್ಯವಸ್ಥೆಯ ಆರೋಗ್ಯಕ್ಕೆ ಇಂತಹದ್ದೊಂದು ನಿಲುವು ಅಗತ್ಯವಾಗಿ ಬೇಕು. ನಾಡಿನ ಚಿಂತಕರು, ಪ್ರಜ್ಞಾವಂತರು ಅನೇಕ ಸಂದರ್ಭಗಳಲ್ಲಿ ಈ ಬಗ್ಗೆ ಚಿಂತನೆ ನಡೆಸಿ ಆತಂಕಿತರಾಗಿದ್ದೂ ಇದೆ. ಇದು ಮಹತ್ವಪೂರ್ಣವೂ ಸ್ವಾಗತಾರ್ಹವೂ ಆದ ಸಕಾಲಿಕ ನಿಲುವು.

ಇಂದು ಸರ್ವೊಚ್ಚ ನ್ಯಾಯಾಲಯದ ನ್ಯಾಯಾಧೀಶ ಹುದ್ದೆಯಿಂದ ನಿವೃತ್ತಿ ಹೊಂದಿದ ಬಳಿಕ ಅನೇಕ ಮಂದಿ ವಿವಿಧ ಸರಕಾರಿ ಹುದ್ದೆಗಳನ್ನು ವಹಿಸಿ ಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಅವರು ರಾಜ್ಯಪಾಲ, ರಾಷ್ಟೀಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥ, ಹಸಿರು ನ್ಯಾಯ ಮಂಡಳಿ ಮುಖ್ಯಸ್ಥ, ರಾಜ್ಯಸಭೆಯ ಸದಸ್ಯ, ಹೀಗೆ ವಿವಿಧ ಸರಕಾರಿ ಹುದ್ದೆಗಳನ್ನು ವಹಿಸಿ ಕೊಂಡಿರುವುದು ಕಂಡು ಬರುತ್ತಿದೆ. ಇಂತಹ ನೇಮಕಾತಿಗಳನ್ನು ಸರಕಾರ ಯೋಗ್ಯತೆ, ಅರ್ಹತೆಗಳ ಮೇಲೆ ಸದುದ್ದೇಶದಿಂದ ಮಾಡುತ್ತದೆ ಎಂದು ನಂಬಲು ಸಾಧ್ಯವೇ? ಒಂದು ಪಕ್ಷ ಹಾಗೆಯೇ ಆಯ್ಕೆ ಮಾಡಿದ್ದರೂ ಇಂದಿನ ಪರಿಸ್ಥಿತಿಯಲ್ಲಿ ಈ ಕುರಿತು ವಿಶ್ವಾಸ ಮೂಡುವುದು ಕಷ್ಟವೆಂದೇ ಹೇಳಬಹುದು. ಯಾಕೆಂದರೆ ಇಂದು ರಾಜಕೀಯ ನಾಯಕರ ನಡೆ-ನುಡಿಗಳು ಜನರಲ್ಲಿ ವಿಶ್ವಾಸದ ಬದಲು ಸಂದೇಹ, ಅನುಮಾನಗಳನ್ನಷ್ಟೇ ಹುಟ್ಟಿಸುವಂತಿವೆ. ಈ ಹಿನ್ನೆಲೆಯಲ್ಲೇ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ನಿಲುವು ಮಹತ್ವಪೂರ್ಣವೆನಿಸಿ ಕೊಳ್ಳುವುದು.

ಪ್ರತಿಯೊಬ್ಬ ವ್ಯಕ್ತಿ ಯಾವುದೇ ಹುದ್ದೆ, ಸ್ಥಾನದಲ್ಲಿರಲಿ ಅವನಿಗೆ ವೈಯಕ್ತಿಕ ಅಭಿರುಚಿ, ಆಸಕ್ತಿ, ನಂಬಿಕೆ, ರಾಜಕೀಯ ಒಲವು ಇತ್ಯಾದಿಗಳು ಇರುತ್ತವೆ. ಇವುಗಳಿಗೂ ವೃತ್ತಿಗೂ ಯಾವುದೇ ಸಂಬಂಧವಿರಬೇಕಾಗಿಲ್ಲ. ಈ ಅಂಶ ನ್ಯಾಯಾಧೀಶ ಹುದ್ದೆಗಳನ್ನು ನಿಭಾಯಿಸುವವರಿಗೆ ನಿರ್ಣಾಯಕವಾಗುತ್ತದೆ. ನ್ಯಾಯಾಧೀಶರಾದವರು ಇದನ್ನೆಲ್ಲ ಬದಿಗಿಟ್ಟು ನ್ಯಾಯ ನಿಷ್ಠುರತೆ, ನಿಷ್ಪಕ್ಷತೆ, ಪ್ರಾಮಾಣಿಕತೆಯಿಂದ ಯಾವುದೇ ರಾಗ-ದ್ವೇಷವಿಲ್ಲದೆ ತಮ್ಮ ಕರ್ತವ್ಯವನ್ನು ನಿರ್ವಹಿಸುವುದು ಅಗತ್ಯ. ಇಂತಹ ಭರವಸೆ ಮತ್ತು ನಿರೀಕ್ಷೆ ಜನರಲ್ಲಿರುತ್ತವೆ ಕೂಡಾ. ಹೀಗಾಗಿ ನ್ಯಾಯದಾನವೆಂಬುದು ಅತ್ಯಂತ ಮಹತ್ವದ ಹೊಣೆಗಾರಿಕೆ. ಇಂತಹ ಪಾವಿತ್ರ್ಯ ಈ ಹುದ್ದೆಗಿರುವುದರಿಂದ ನ್ಯಾಯಾಧೀಶರು ಸಮಾಜದಲ್ಲಿ ಅತ್ಯಂತ ಎತ್ತರದ ಸ್ಥಾನ ಪಡೆಯುತ್ತಾರೆ. ಆದರೆ ಅವರು ನಿವೃತ್ತಿಯಾದ ಬಳಿಕ ಸರಕಾರಿ ನೇಮಕಾತಿಯನ್ನು ಒಪ್ಪಿಕೊಳ್ಳುತ್ತಾರೆ ಎಂದರೆ ಹಿತಾನುಭವ ನೀಡಲಾರದು.

ದೇಶದ ಶಾಸಕಾಂಗ, ಆಡಳಿತಾಂಗ ಮತ್ತು ನ್ಯಾಯಾಂಗ ಗಳೆಲ್ಲ ಒಂದು ಕಾಲಘಟ್ಟದವರೆಗೆ ನೈತಿಕ ಮೌಲ್ಯಗಳು ಮತ್ತು ನೈತಿಕತೆಯ ಭದ್ರ ಬುನಾದಿಯ ಚೌಕಟ್ಟಿನಲ್ಲಿ ಸುರಕ್ಷಿತವಾಗಿಯೇ ಇತ್ತು. ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆನಿಸಿಕೊಂಡಿರುವ ಪತ್ರಿಕಾ ರಂಗವೂ ಹೀಗೆಯೇ ಇತ್ತು ಎನ್ನಬಹುದು. ಇಂದು ಅಧಿಕಾರ ವ್ಯಾಮೋಹ, ಸೈದ್ಧಾಂತಿಕ ವ್ಯಸನ, ಹಣ-ಸಂಪತ್ತಿನ ದಾಹ ಹೆಚ್ಚಾದಂತೆ ಸ್ವಾರ್ಥ, ಪಕ್ಷಪಾತ, ಸಾಮಾಜಿಕ ಅನಿಷ್ಟಗಳು ಪ್ರಜಾತಂತ್ರದ ಎಲ್ಲ ಅಂಗಗಳಿಗೂ ಪ್ರವೇಶ ಪಡೆದು ಕೊಂಡಿವೆ. ಇದು ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಾದ ವಿಚಾರವಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಂದು ವ್ಯಕ್ತಿಗತವಾದ ನೈತಿಕತೆ, ಪ್ರಾಮಾಣಿಕತೆಯಲ್ಲಿ ಹೆಚ್ಚು ಭರವಸೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದಲೇ ಇಂದಿನ ದಿನಮಾನದಲ್ಲಿ ನಿವೃತ್ತ ನ್ಯಾಯಾಧೀಶರನ್ನು ಸರಕಾರಿ ಹುದ್ದೆಗಳಿಗೆ ಆರಿಸುವುದು ಸಂದೇಹಗಳಿಗೆ ಎಡೆಮಾಡಿ ಕೊಡುತ್ತದೆ. ಇದರೊಂದಿಗೆ ಇಂತಹ ನಿವೃತ್ತ ನ್ಯಾಯಾಧೀಶರ ವ್ಯಕ್ತಿತ್ವದ ಸಮಗ್ರತೆ; ಅವರು ಮತ್ತು ಅವರನ್ನೊಳಗೊಂಡಿದ್ದ ಪೀಠವು ಸೂಕ್ಷ್ಮ ಹಾಗೂ ಮಹತ್ವದ ಪ್ರಕರಣಗಳಲ್ಲಿ ನೀಡಿದಂತಹ ತೀರ್ಪುಗಳು; ಅವರು ನಿವೃತ್ತಿ ಹೊಂದಿದ ಬಳಿಕ ಪಡೆದ ಪ್ರತಿಫಲ; ಆಡಳಿತ ಪಕ್ಷದ ಪ್ರಾಮಾಣಿಕತೆ ಮತ್ತು ಕಾರ್ಯ ವೈಖರಿ ಇವೇ ಮುಂತಾದ ಪ್ರಶ್ನೆಗಳು ಮೇಲೆದ್ದು ಚರ್ಚೆಗೆ ಕಾರಣವಾಗುವುದಿದೆ.

ಈ ನಿಟ್ಟಿನಲ್ಲಿ 2013ರಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಅರುಣ್ ಜೇಟ್ಲಿಯವರು ಸದನದಲ್ಲಿ ನೀಡಿದಂತಹ ಹೇಳಿಕೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು: ‘‘...In some cases, the pre-retirement judicial conduct of a judge is influenced by the desire to get a post-retirement assignment. It is a threat to the independence of judiciary’’. ಅಂದರೆ ‘‘ನಿವೃತ್ತಿಯ ಬಳಿಕದ ನೇಮಕಾತಿಯ ಬಯಕೆ, ನ್ಯಾಯಾಧೀಶರೊಬ್ಬರ ನಿವೃತ್ತಿ ಪೂರ್ವದ ಅವರ ನ್ಯಾಯಾಂಗದ ನಡವಳಿಕೆಯನ್ನು ಪ್ರಭಾವಿಸುತ್ತದೆ. ಅದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಗಂಡಾಂತರವನ್ನು ಉಂಟು ಮಾಡುತ್ತದೆ.’’ ಅರುಣ್ ಜೇಟ್ಲಿಯವರು ನಮ್ಮ ನಡುವೆ ಇಲ್ಲ. ಆದರೆ ಅವರ ಈ ಹೇಳಿಕೆ ಯೂಟ್ಯೂಬ್‌ನಲ್ಲಿ ಇಂದಿಗೂ ಲಭ್ಯ. ಅರುಣ್ ಜೇಟ್ಲಿಯವರು ಸುಪ್ರಿಂ ಕೋರ್ಟ್‌ನ ಹಿರಿಯ ನ್ಯಾಯವಾದಿಯಾಗಿದ್ದು ನ್ಯಾಯಾಂಗ ಮತ್ತು ಆಡಳಿತಾಂಗ, ಇವೆರಡರ ಆಳ-ಅಗಲವನ್ನು ಚೆನ್ನಾಗಿ ಬಲ್ಲವರಾಗಿದ್ದರು ಎಂಬುದರಲ್ಲಿ ಸಂದೇಹವೇನೂ ಇಲ್ಲ. ಆದ್ದರಿಂದ ಅವರ ಆಭಿಪ್ರಾಯ ಮಹತ್ವದ್ದೆನಿಸಿಕೊಳ್ಳುತ್ತದೆ. ಆದರೆ ಅವರ ಪಕ್ಷ ಆಡಳಿತಕ್ಕೆ ಬಂದ ಬಳಿಕ ಸುಪ್ರಿಂ ಕೋರ್ಟ್‌ನ ನಿವೃತ್ತ ನಾಯಾಧೀಶರನ್ನು ಸಾಂವಿಧಾನಿಕ ಹುದ್ದೆಗಳಿಗೆ ನೇಮಕ ಮಾಡಿ ಕೊಂಡಿದೆ. ಇದೆಂತಹ ವಿಪರ್ಯಾಸ!

ಅರುಣ್ ಜೇಟ್ಲಿಯವರ ಆತಂಕವನ್ನು ಸಮರ್ಥಿಸುವಂತೆ ನ್ಯಾಯಾಲಯಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ 2018ರಲ್ಲಿ ಘಟಿಸಿದ ಬಿಕ್ಕಟ್ಟೊಂದನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕು. 2018ರಲ್ಲಿ ಸುಪ್ರಿಂ ಕೋರ್ಟ್‌ನ ನಾಲ್ಕು ನ್ಯಾಯಾಧೀಶರುಗಳಾದ ಜೆ. ಚಲಮೇಶ್ವರ್, ರಂಜನ್ ಗೊಗೊಯಿ, ಮದನ್ ಲೋಕೂರ್ ಮತ್ತು ಕುರಿಯನ್ ಜೋಸೆಫ್ ಪತ್ರಿಕಾ ಗೋಷ್ಠಿಯನ್ನು ನಡೆಸಿ ಮುಖ್ಯ ನಾಯಾಧೀಶರಾಗಿದ್ದ ದೀಪಕ್ ಮಿಶ್ರಾರವರ ಆಡಳಿತ ರೀತಿ ಕ್ರಮಬದ್ಧವಾಗಿಲ್ಲವೆಂದೂ ಅವರು ಕೋರ್ಟ್ ಸಂಪ್ರದಾಯ, ಪರಂಪರೆ, ಪದ್ಧತಿಗೆ ವಿರುದ್ಧವಾಗಿ ದೂರಗಾಮಿ ಪರಿಣಾಮ ಬೀರಬಲ್ಲಂತಹ ಮಹತ್ವದ ಆಯ್ದ ಪ್ರಕರಣಗಳನ್ನು ಕಿರಿಯ ನ್ಯಾಯಾಧೀಶರಿಗೆ ಒಪ್ಪಿಸುತ್ತಿದ್ದಾರೆ ಎಂದೂ ಗಂಭೀರ ಆರೋಪ ಮಾಡುತ್ತಾರೆ. ಜೊತೆಗೆ ಮುಖ್ಯ ನ್ಯಾಯಾಧೀಶರೊಂದಿಗೆ ಚರ್ಚಿಸಿ ಈ ಕುರಿತು ಮನವರಿಕೆ ಮಾಡಿದರೂ ಅವರು ನಿಲುವನ್ನು ಬದಲಾಯಿಸದಿರುವುದರಿಂದ ದೇಶದ ಜನತೆಗೆ ಇದನ್ನು ತಿಳಿಸಬೇಕಾಯಿತೆಂಬ ವಿವರಣೆ ನೀಡುತ್ತಾರೆ. ಮುಂದುವರಿದು ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಉಳಿಯಲು ನ್ಯಾಯಾಂಗವು ಸ್ವತಂತ್ರ ಮತ್ತು ನಿಷ್ಪಕ್ಷವಾಗಿ ಇರುವುದು ಅಗತ್ಯವೆಂಬ ಕಾಳಜಿ ಯನ್ನೂ ವ್ಯಕ್ತ ಪಡಿಸುತ್ತಾರೆ. ತರುವಾಯ ಈ ಘಟನೆ ಯಾವುದೇ ತಾರ್ಕಿಕ ಅಂತ್ಯ ಕಾಣದಂತೆ ಅಲ್ಲಿಗೆ ತಣ್ಣಗಾಗುತ್ತದೆ. ಆದರೆ ಈ ಘಟನೆ ದೇಶದ ಉನ್ನತ ನ್ಯಾಯಾಲಯದೊಳಗೆ ಎಲ್ಲವೂ ಸರಿಯಿಲ್ಲ ಎಂಬ ಸಂದೇಶವನ್ನು ನೀಡಿದೆ ಎಂಬುದಂತೂ ಸತ್ಯ.

ಇಂತಹ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈಗಿನ ಮುಖ್ಯ ನ್ಯಾಯಾಧೀಶರ ನಿಲುವನ್ನು ಬಹಳ ಸ್ಪಷ್ಟವಾಗಿ ಅರ್ಥ ಮಾಡಿ ಕೊಳ್ಳಬಹುದು. ಜೊತೆಗೆ ಆ ನಿಲುವಿನ ಮಹತ್ವವನ್ನು ಅರಿತು ಕೊಳ್ಳಲೂ ಸಾಧ್ಯ. ಹಾಗೆ ನೋಡಿದರೆ ನ್ಯಾಯಾಲಯವೆಂಬುದು ಅದರದೇ ಆದ ಸ್ವಾತಂತ್ರ್ಯ, ಪಾರಮ್ಯವನ್ನು ಹೊಂದಿರುವ ಸಂಸ್ಥೆ. ನ್ಯಾಯಾಲಯದ ಕಲಾಪದಲ್ಲಿ ಯಾರಿಗೂ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ. ಹೀಗಾಗಿ ನ್ಯಾಯಾಧೀಶರಾದವರು ಅವರ ಕಾರ್ಯಕ್ಷೇತ್ರದಲ್ಲಿ ಸರ್ವ ಸ್ವತಂತ್ರರು. ಅವರು ಯಾರದ್ದೇ ಅಡಿಯಾಳಲ್ಲ. ಯಾರ ಹಂಗಿಗೂ ಒಳಗಾಗುವ ಅಗತ್ಯವಿಲ್ಲ. ಸುಪ್ರಿಂ ಕೋರ್ಟಿನ ನ್ಯಾಯಾಧೀಶ ಹುದ್ದೆಗೆ ಇರುವಂತಹ ಘನತೆ, ಗೌರವಗಳಿಗೆ ಅದೇ ಸಾಟಿ ಎನ್ನಬಹುದು. ವಸ್ತುಸ್ಥಿತಿ ಹೀಗಿದ್ದೂ ನಿವೃತ್ತಿ ಹೊಂದಿದ ಬಳಿಕ ಸರಕಾರ ಅಥವಾ ಆಡಳಿತ ಪಕ್ಷದ ಅಧೀನದಲ್ಲಿ ಕಾರ್ಯ ನಿರ್ವಹಿಸಲು ನ್ಯಾಯಾಧೀಶರಾದವರು ಅದು ಯಾಕೆ ತಯಾರಾಗುತ್ತಾರೋ ಗೊತ್ತಿಲ್ಲ. ಇದು ಅವರ ಸದುದ್ದೇಶದಿಂದ ಕೂಡಿದ ನಿರ್ಧಾರವೇ ಅಥವಾ ಅಧಿಕಾರ, ಸವಲತ್ತು ಇತ್ಯಾದಿಗಳ ವ್ಯಾಮೋಹವೇ?

ಇನ್ನು ಈ ವಿಚಾರದಲ್ಲಂತೂ ಸರಕಾರದ ನಿರ್ಧಾರಗಳ ಉದ್ದೇಶವನ್ನು ನಿಖರವಾಗಿ ಅರಿಯಲು ಸಾಧ್ಯವಾಗಲಾರದು. ಕೇವಲ ಕೆಲವು ಬೆಳವಣಿಗೆ, ಅಂದಾಜು ಊಹೆ ಇತ್ಯಾದಿ ಆಧಾರದಲ್ಲಿ ಆರೋಪ ಹೊರಿಸುವುದು ತಪ್ಪಾಗುತ್ತದೆ. ಬಲವಾದ ಆಧಾರ, ದಾಖಲೆಗಳಿಲ್ಲದೆ ಯಾವುದೇ ಆರೋಪ ಹೊರಿಸುವುದು ಆಡಳಿತಾಂಗ ಮತ್ತು ನ್ಯಾಯಾಂಗದ ಘನತೆ, ಗೌರವಗಳಿಗೆ ಧಕ್ಕೆ ಉಂಟು ಮಾಡಿದಂತೆ. ಹಾಗಂತ ಈಗಿನ ವ್ಯವಸ್ಥೆಯನ್ನು ಸಮರ್ಥಿಸಿ ಕೊಳ್ಳುವುದು ದೇಶದ ಪ್ರಜಾತಂತ್ರ ವ್ಯವಸ್ಥೆಗೆ ತಕ್ಕುದಾದ ನಡೆಯಾಗಲಾರದು. ಹಿಂದೆ ಸಮಾಜದಲ್ಲಿ ಮೌಲ್ಯಗಳ ಬಗ್ಗೆ ಬಹುತೇಕ ಮನ್ನಣೆಯಿದ್ದುದರಿಂದ ಸಂವಿಧಾನ ನಿರ್ಮಾತೃಗಳು ಇಂತಹ ಅವಕಾಶಗಳ ನಕಾರಾತ್ಮಕ ಬೆಳವಣಿಗೆಗಳನ್ನು ಅಂದಾಜಿಸಲಾರರು. ಆದರೆ ಇಂದಿನ ರಾಜಕಾರಣ ನೈತಿಕವಾಗಿ ಕುಸಿದು ಪಾತಾಳ ಕಂಡಿರುವುದರಿಂದ ಸದುದ್ದೇಶದ ಕ್ರಮಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಹೀಗಾಗಿ ದೇಶದ ಪ್ರಜಾತಂತ್ರ ವ್ಯವಸ್ಥೆಯ ಹಿತದೃಷ್ಟಿಯಿಂದ ಸೂಕ್ತ ಕಾನೂನು ಅಥವಾ ಈಗಿರುವ ಸಂಬಂಧ ಪಟ್ಟ ಕಾನೂನಿಗೆ ತಿದ್ದುಪಡಿ ತಂದು ನಿವೃತ್ತ ನ್ಯಾಯಾಧೀಶರನ್ನು ಸರಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವಂತಹ ಕ್ರಮವನ್ನು ನಿರ್ಬಂಧಿಸುವುದೇ ಲೇಸು. ಇದರಿಂದ ನ್ಯಾಯಾಂಗ ಹಾಗೂ ನ್ಯಾಯಾಧೀಶರ ಘನತೆ, ಗೌರವಗಳನ್ನು ಕಾಯ್ದು ಕೊಳ್ಳಲು ಸಾಧ್ಯ. ಸರಕಾರವು ಅನಗತ್ಯ ವಿವಾದಗಳಿಗೆ ಗುರಿಯಾವುದೂ ತಪ್ಪುತ್ತದೆ.

share
ಹರೀಶ್ ಕುಮಾರ್ ಕುಡ್ತಡ್ಕ
ಹರೀಶ್ ಕುಮಾರ್ ಕುಡ್ತಡ್ಕ
Next Story
X