ಕಲಬುರಗಿ | ಕಾಚಾಪೂರ ಮಾದರಿ ಶಾಲೆಯ ಮಕ್ಕಳಿಗೆ ಬಯಲೇ ವಿದ್ಯಾಲಯ

ಕಲಬುರಗಿ ಜಿಲ್ಲೆಯ ಕಾಚಾಪೂರ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ಮಕ್ಕಳು ಬಯಲಲ್ಲೇ ಕುಳಿತು ಪಾಠ ಕೇಳಬೇಕಾದ ಸಂದರ್ಭ ಬಂದೊದಗಿದೆ.
ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೂ ಒಟ್ಟು 296 ವಿದ್ಯಾರ್ಥಿಗಳು ಇದ್ದಾರೆ. ಒಂದು ಕೊಠಡಿಯಲ್ಲಿ 50-60 ವಿದ್ಯಾರ್ಥಿಗಳು ಕುಳಿತು ಪಾಠ ಕೇಳಬೇಕಾದ ದುಃಸ್ಥಿತಿ ಇದೆ. ಒಂದೇ ಕೊಠಡಿಯಲ್ಲಿ ಎರಡೆರಡು ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲಾಗುತ್ತಿದ್ದು ಮಕ್ಕಳು ಕಿರಿಕಿರಿ ಅನುಭವಿಸುತ್ತಿದ್ದಾರೆ. ಶಿಕ್ಷಕರು ಮಾಡಿದ ಪಾಠವನ್ನು ಮಕ್ಕಳು ಮನನ ಮಾಡಿಕೊಳ್ಳಲು ಸಮಸ್ಯೆ ಎದುರಿಸುತ್ತಿದ್ದಾರೆ.
6 ಕೊಠಡಿ ಶಿಥಿಲ: ಶಾಲೆಯಲ್ಲಿ ಒಟ್ಟು 9 ಕೊಠಡಿಗಳಿವೆ. ಆದರೆ 6 ಕೊಠಡಿಗಳು ಶಿಥಿಲಗೊಂಡಿವೆ. ಇವುಗಳನ್ನು 6 ತಿಂಗಳುಗಳಿಂದ ಮುಚ್ಚಲಾಗಿದೆೆ.
ಮಕ್ಕಳ ಸಂಖ್ಯೆಗೆ ಅನುಗುಣವಾಗಿ 8-12 ಕೊಠಡಿಗಳ ಅವಶ್ಯಕತೆ ಇದೆ. ಆದರೆ, ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಗಾಳಿ, ಬಿಸಿಲು, ಧೂಳು ಲೆಕ್ಕಿಸದೆ ಗಿಡದ ನೆರಳಿನಲ್ಲಿ ಕುಳಿತು ಪಾಠ ಕೇಳುವಂತಾಗಿದೆ.
ಶಿಕ್ಷಕರ ಕೊರತೆ :
ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರೇ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಮಕ್ಕಳ ಸಂಖ್ಯೆಗನುಗುಣವಾಗಿ ಕೊಠಡಿ ನಿರ್ಮಿಸುವುದರ ಜತೆಗೆ ಶಿಕ್ಷಕರನ್ನು ನಿಯೋಜಿಸಬೇಕು ಎನ್ನುವುದು ಶಿಕ್ಷಣ ಪ್ರೇಮಿಗಳ ಒತ್ತಾಯ.
ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು ಇಲ್ಲ. ಹೀಗಾಗಿ ಮಕ್ಕಳಿಗೆ ಗಿಡದ ನೆರಳಲ್ಲಿ ಬೋಧನೆ ಮಾಡಲಾಗುತ್ತಿದೆ. ಹೊಸ ಕೊಠಡಿಗಳನ್ನು ನಿರ್ಮಿಸುವಂತೆ ಶಾಲೆಯ ವತಿಯಿಂದ ಶಾಸಕರಿಗೆ ಮನವಿ ಮಾಡಿದ್ದೇವೆ.
<ಪ್ರೇಮ ಸಿಂಗ್ ಚವ್ಹಾಣ
ಮುಖ್ಯಶಿಕ್ಷಕ, ಕಾಚಾಪೂರ
ಮಕ್ಕಳು ಬಿಸಿಲು, ಮಳೆ, ಚಳಿಯೆನ್ನದೆ ಬಯಲಲ್ಲೇ ಪಾಠ ಕೇಳುತ್ತಿದ್ದಾರೆ. ಕಲಿಕೆಗೆ ಎಲ್ಲಕ್ಕಿಂತ ಮುಖ್ಯವಾಗಿ ಇರಬೇಕಾಗಿರುವುದು ಉತ್ತಮ ಪರಿಸರ. ಆದರೆ ಈ ಶಾಲೆಯ ಮಕ್ಕಳಿಗೆ ಕನಿಷ್ಠ ಸೌಕರ್ಯವಾದ ಕೊಠಡಿಯೂ ಇಲ್ಲ. ಇದರಿಂದಾಗಿ ಮಕ್ಕಳು ಏಕಾಗ್ರತೆಯಿಂದ ಕಲಿಯಲು ಆಗುವುದಿಲ್ಲ. ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸಲು ಆದಷ್ಟು ಬೇಗ ಸರಕಾರ ಕೊಠಡಿ ಸೌಕರ್ಯ ಒದಗಿಸಬೇಕು.
<ನಿಂಗಪ್ಪ, ಕಾಚಾಪೂರ, ಗ್ರಾಮಸ್ಥ







