ಕಡಗಂಚಿ ಬಾಲಕಿಯರ ವಸತಿಶಾಲೆ ಆಳಂದಕ್ಕೆ ಸ್ಥಳಾಂತರ
ಕಲಬುರಗಿ: ಪ್ರವೇಶಾತಿ ಕೊರತೆ ನೆಪ ನೀಡಿ ಕಡಗಂಚಿ ಬಾಲಕಿಯರ ವಸತಿ ಶಾಲೆಯ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಆಳಂದಕ್ಕೆ ಸ್ಥಳಾಂತರ ಮಾಡಿ ವಸತಿಶಾಲೆಯನ್ನು ರದ್ದು ಮಾಡುವ ಮತ್ತು ಬಾಲಕರ ವಸತಿ ಶಾಲೆಯಾಗಿ ಪರಿವರ್ತಿಸುವ ಹುನ್ನಾರ ನಡೆದಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬಾಲಕಿಯರ ವಸತಿ ಶಾಲೆ ಕಾರ್ಯನಿರ್ವಹಿಸುತ್ತಿದೆ. ಲಾಡಚಿಂಚೋಳಿಯ ಬಿ.ಇಡ್, ಕಡಗಂಚಿಯ ಪಿಯು, ಪದವಿ ಕಾಲೇಜು ಮತ್ತು ಕಲ್ಯಾಣ ಕರ್ನಾಟಕದ ಕಲಬುರಗಿ, ರಾಯಚೂರು, ಬೀದರ್, ಯಾದಗಿರಿ, ಕೊಪ್ಪಳ, ಹೊಸಪೇಟೆ, ಹಾವೇರಿ, ವಿಜಯಪುರ ಜಿಲ್ಲೆಗಳಿಂದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುವ ಈ ಭಾಗದ ನೂರಾರು ವಿದ್ಯಾರ್ಥಿನಿಯರಿಗೆ ವಸತಿ ಶಾಲೆ ವರದಾನವಾಗಿದೆ.
ಹಿಂದಿನ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಲಾ, ಫಾರ್ಮಸಿ, ಇಂಜಿನಿಯರಿಂಗ್ ಬಿ.ಇಡ್, ಎಂ.ಎ ಸೇರಿದಂತೆ ಅನೇಕ ವಿದ್ಯಾರ್ಥಿನಿಯರು ವಸತಿನಿಲಯಕ್ಕಾಗಿ ಅರ್ಜಿ ಹಾಕಿದ್ದರೂ ಅಯ್ಕೆ ಮಾಡಿ ಪ್ರವೇಶಾತಿ ನೀಡಿಲ್ಲ. ಈ ವರ್ಷ 50ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು, ನಿಗದಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಸತಿನಿಲಯದಲ್ಲಿ ಪ್ರವೇಶಾತಿ ಪಡೆದಿರುವುದರಿಂದ ಸ್ಥಾನಗಳ ಸಂಖ್ಯೆ ಭರ್ತಿಯಾಗಿದೆ ಎನ್ನುವ ಹಾಸ್ಟೆಲ್ ವಾರ್ಡನ್ ಮತ್ತು ಇಲಾಖೆ ಅಧಿಕಾರಿಗಳ ಧೋರಣೆ ವಿರುದ್ಧ ಸ್ಥಳೀಯ ವಿದ್ಯಾರ್ಥಿನಿಯರು ಮತ್ತು ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ವಿದ್ಯಾರ್ಥಿನಿಯರಿಗೆ ಪ್ರವೇಶಾತಿ ಕೊರತೆ ನೆಪವೊಡ್ಡಿ ಆಳಂದಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಹಾಸ್ಟೆಲ್ ವಾರ್ಡನ್ ವಿರುದ್ಧ ವಿದ್ಯಾರ್ಥಿನಿಯರು ಗಂಭೀರ ಆರೋಪ ಮಾಡಿದ್ದಾರೆ.
ವಸತಿ ಶಾಲೆ ಸ್ಥಳಾಂತರ ಆದೇಶವನ್ನು ರದ್ದು ಮಾಡುವಂತೆ ಜಿಲ್ಲಾಧಿಕಾರಿಗೆ ವಿದ್ಯಾರ್ಥಿನಿಯರು ಮನವಿ ಮಾಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿನಿಯರಿಗೆ ಸಾರಿಗೆ, ಮಧ್ಯಾಹ್ನದ ಊಟ, ಬೆಳಗ್ಗಿನ ಕಾಲೇಜಿನ ಹಾಜರಾತಿಯಂತಹ ಕಾರ್ಯಗಳ ಮೇಲೆ ತೊಂದರೆಯಾಗಿ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಲಿದೆ ಎಂದು ವಸತಿ ಶಾಲೆಯ ವಿದ್ಯಾರ್ಥಿನಿ ವಾರ್ತಾಭಾರತಿಗೆ ಜೊತೆ ಮಾತನಾಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ತಕ್ಷಣ ಸ್ಥಳಾಂತರ ಆದೇಶ ರದ್ದು ಮಾಡುವಂತೆ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್, ಜಿಲ್ಲಾಧಿಕಾರಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಕುರಿತು ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಇರಪ್ಪ ಆಶಾಪುರ ಅವರನ್ನು ಸಂಪರ್ಕಿಸಿದಾಗ ಕರೆ ಸ್ವೀಕರಿಸಿಲ್ಲ.
ವಿದ್ಯಾರ್ಥಿನಿಯರಿಗೆ ಅಧಿಕಾರಿಗಳಿಂದ ಬೆದರಿಕೆ ಕಡಗಂಚಿ ಬಾಲಕಿಯರ ವಸತಿ ನಿಲಯದ ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿನಿ ಮಾತನಾಡಿ, ಮೊದಲು ವಸತಿ ಶಾಲೆಯಲ್ಲಿ 50, ಈಗ 100 ವಿದ್ಯಾರ್ಥಿನಿಯರಿಗೆ ಮಾತ್ರ ಪ್ರವೇಶವಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಪ್ರವೇಶ ಪಡೆಯಲು ಬಂದವರಿಗೆ ಪ್ರವೇಶ ನೀಡಿಲ್ಲ. ವಸತಿ ಶಾಲೆಗೆ ಶಾಸಕರು ಭೇಟಿ ನೀಡಿದ್ದಾಗ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆಯಿ ಎಂದು ತೋರಿಸಿದ್ದಾರೆ.
ಈಗ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಹೊಂದಿರುವ ವಸತಿನಿಲಯವನ್ನು ಆಳಂದಕ್ಕೆ ಸ್ಥಳಾಂತರಿಸಲಾಗುವುದು ಎನ್ನುತ್ತಿದ್ದಾರೆ. ವಿರೋಧ ವ್ಯಕ್ತಪಡಿಸಿದರೆ ಸುಳ್ಳು ಆರೋಪ ಮಾಡಿ ಕ್ರಮಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಸ್ಥಳಾಂತರದಿಂದ ಶೈಕ್ಷಣಿಕವಾಗಿ ನಮಗೆ ತೀವ್ರ ಸಮಸ್ಯೆ ಆಗುತ್ತದೆ. ತಕ್ಷಣ ಸ್ಥಳಾಂತರ ಆದೇಶ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಶಾಸಕರು ಕ್ರಮ ವಹಿಸಲಿ
ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕಾರ್ಯದರ್ಶಿ ಬಿ.ಎಂ ರಾವೂರ್ ಮಾತನಾಡಿ, ವಿದ್ಯಾರ್ಥಿನಿಯರ ವಸತಿಶಾಲೆಗಳು ಬೇಡಿಕೆಗನುಗುಣವಾಗಿ ಹೆಚ್ಚಾಗಬೇಕು ಹೊರತು ಕಡಿಮೆ ಆಗಬಾರದು. ಆ ವಿವೇಚನೆ ಅಧಿಕಾರಿಗಳಿಗೆ ಇರಬೇಕು. ಇದರಿಂದ ವಿದ್ಯಾರ್ಥಿನಿಯರಿಗೆ ಅನ್ಯಾಯವಾಗಬಾರದು. ಬಿ.ಆರ್ ಪಾಟೀಲ್ ಕ್ಷೇತ್ರದಲ್ಲಿ ಈ ರೀತಿ ವಿದ್ಯಾರ್ಥಿನಿಯರಿಗೆ ಅನ್ಯಾಯವಾಗುತ್ತಿದೆ. ಶಾಸಕರು ಅಗತ್ಯ ಕ್ರಮ ಕೈಗೊಂಡು ವಿದ್ಯಾರ್ಥಿನಿಯರಿಗೆ ಅನುಕೂಲ ಕಲ್ಪಿಸಬೇಕು. ಬಾಲಕರ ವಸತಿ ಶಾಲೆ ಅಗತ್ಯ ಅನಿಸಿದರೆ ಕೆಕೆಆರ್‌ಡಿಬಿ ಅನುದಾನ ಬಳಸಿಕೊಂಡು ನಿರ್ಮಿಸಬೇಕು. ಬಾಲಕಿಯರ ವಸತಿ ಶಾಲೆಯನ್ನು ಯಥಾಸ್ಥಿತಿ ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.
ವಸತಿ ನಿಲಯಕ್ಕೆ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ ಮಾಡಿದ್ದೇವೆ. ಶಾಸಕರನ್ನು ಭೇಟಿ ಮಾಡಿ ಸ್ಥಳಾಂತರ ಮಾಡದಂತೆ ಒತ್ತಾಯಿಸಿದ್ದಕ್ಕೆ ಸಕಾರಾತ್ಮಕವಾಗಿ ಭರವಸೆ ನೀಡಿದ್ದರು. ಎರಡು ದಿನ ಹಿಂದೆ ಹಾಸ್ಟೆಲ್ ವಾರ್ಡನ್ ಹಾಸ್ಟೆಲ್ ತೊರೆಯಬೇಕು ಎನ್ನುತ್ತಿದ್ದಾರೆ. ಸ್ಥಳಾಂತರ ರದ್ದು ಮಾಡುವಂತೆ ಜಿಲ್ಲಾಧಿಕಾರಿಗೂ ಮನವಿ ಮಾಡಿದ್ದೇವೆ.
-ಹೆಸರು ಹೇಳದ, ಹಾಸ್ಟೆಲ್‌ನಲ್ಲಿರುವ ಸಿಯುಕೆ ಸಂಶೋಧನಾ ವಿದ್ಯಾರ್ಥಿನಿ
50 ವಿದ್ಯಾರ್ಥಿನಿಯರ ಕಡಗಂಚಿ ಬಾಲಕಿಯರ ವಸತಿಶಾಲೆಗೆ ಇಲಾಖೆಯ ಅಧಿಕಾರಿಯೊಂದಿಗೆ ರಾತ್ರಿ 8 ಗಂಟೆಗೆ ಭೇಟಿ ನೀಡಿದಾಗ, ಕೇವಲ 17 ಬಾಲಕಿಯರಿದ್ದರು. ಅದು ಸಹ ಖಾಸಗಿ ಪದವಿ ಕಾಲೇಜು ಮತ್ತು ಸಿಯುಕೆಯಲ್ಲಿ ಓದುವ ಕೆಲವು ವಿದ್ಯಾರ್ಥಿನಿಯರು. ವಸತಿ ಶಾಲೆಯಲ್ಲಿ ಪ್ರವೇಶಾತಿ ಸಂಖ್ಯೆ ಕಡಿಮೆ ಇರುವ ಕಾರಣ ವಸತಿ ಶಾಲೆ ಆಳಂದಗೆ ಸ್ಥಳಾಂತರಿಸಲಾಗುತ್ತಿದೆ.
-ಬಿ.ಆರ್. ಪಾಟೀಲ್, ಶಾಸಕ ಆಳಂದ






