ಮೊದಲ ದಿನವೇ ಕಡಲೆಕಾಯಿ ಪರಿಷೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ

ಬೆಂಗಳೂರು: ಬಸವನಗುಡಿಯಲ್ಲಿ ಆಯೋಜನೆಗೊಂಡ ಕಡಲೆಕಾಯಿ ಪರಿಷೆಗೆ ಸೋಮವಾರ ಚಾಲನೆ ನೀಡಲಾಗಿದ್ದು, ಅಪಾರ ಸಂಖ್ಯೆಯ ಸಾರ್ವಜನಿಕರು ಕಡಲೆಕಾಯಿ ಪರಿಷೆಗೆ ಬಂದಿದ್ದು, ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನ.21ರವರೆಗೆ ನಡೆಯಲಿರುವ ಕಡಲೆಕಾಯಿ ಪರಿಷೆಯು ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಕಾಲದಿಂದ ಪ್ರಾರಂಭವಾಗಿದ್ದು, ಸುಮಾರು 500ವರ್ಷಗಳು ಸಂದಿವೆ. ಪ್ರತಿ ವರ್ಷ ಕೇವಲ ಮೂರು ದಿನಗಳ ಕಾಲ ನಡೆಯುತ್ತಿದ್ದ ಕಡಲೆಕಾಯಿ ಪ್ರದರ್ಶನ ಈ ಬಾರಿ 5 ದಿನಗಳ ಕಾಲ ನಡೆಯುತ್ತಿರುವುದು ವಿಶೇಷವಾಗಿದೆ.
ಎರಡೂ ರಸ್ತೆಗಳ ಬದಿಯಲ್ಲಿ ಸುತ್ತಮುತ್ತಲಿನ ಹಳ್ಳಿಗಳ ರೈತರು ರಾಶಿ ರಾಶಿ ಕಡಲೆಕಾಯಿಯನ್ನು ತಂದು ಮಾರಾಟ ಮಾಡುತಿದ್ದಾರೆ. ಈ ಬಾರಿಯ ಪರಿಷೆ 5ದಿನಗಳ ಕಾಲ ನಡೆಯುತ್ತಿರುವುದರಿಂದ ಹೆಚ್ಚು ಅನುಕೂಲವಾಗುತ್ತದೆ ಎನ್ನುವುದು ಕಡಲೆಕಾಯಿ ವ್ಯಾಪಾರಿಯೊಬ್ಬರ ಅಭಿಪ್ರಾಯವಾಗಿದೆ.
ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆ ನಡೆಸಲು ಸರಕಾರ ನಿರ್ಧರಿಸಿರುವುದರಿಂದ ಬಹುತೇಕ ವ್ಯಾಪಾರಿಗಳು ಪೇಪರ್ ಕವರ್‌ಗಳನ್ನು ಬಳಸುತ್ತಿದ್ದಾರೆ. ಒಂದು ಲೀಟರ್ ಹಸಿ ಕಡಲೆಕಾಯಿಯನ್ನು ಸುಮಾರು 50ರಿಂದ 70 ರೂ. ವರೆಗೆ, ಬೇಯಿಸಿದ ಅಥವಾ ಹುರಿದ ಕಡಲೆಕಾಯಿಯನ್ನು 80ರೂ.ಗೆ ಮಾರಾಟ ನಡೆಸಲಾಗುತ್ತಿದೆ.
ಬಸವನಗುಡಿ ಕಡಲೆಕಾಯಿ ಪರಿಷೆಯ ಈ ವರ್ಷದ ವಿಶೇಷತೆಯೆಂದರೆ ಈ ಬಾರಿ ಯಾವುದೇ ಶುಲ್ಕವಿಲ್ಲದೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಬುಲ್ ಟೆಂಪಲ್ ರೋಡ್‌ನಲ್ಲಿ ಈಗಾಗಲೇ ಸಾವಿರಾರು ಅಂಗಡಿಗಳು ತೆರೆಯಲಾಗಿದೆ. ಪರಿಷೆಗೆ ಹೆಚ್ಚಿನ ಜನರು ಸೇರುವ ನಿರೀಕ್ಷೆ ಇರುವುದರಿಂದ ಭದ್ರತೆ ದೃಷ್ಠಿಯಿಂದ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸೇಲಂ, ಕುಣಿಗಲ್, ಬೆಳಗಾವಿ, ಧರ್ಮಪುರಿ, ತಮಿಳುನಾಡಿನ ಕಡಲೆಕಾಯಿಗಳನ್ನು ಪರಿಷೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬಾರಿ ವಿವಿಧೆಡೆ ಸುರಿದ ವಿಪರೀತ ಮಳೆಯಿಂದ ಕಡಲೆಕಾಯಿಗಳು ನಾಶವಾದ ಕಾರಣದಿಂದ ರೈತರಿಗೆ ಇಳುವರಿ ಕೂಡ ಕಡೆಮೆಯಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡೆಲೆಕಾಯಿ ಬೆಲೆ ಹೆಚ್ಚಳವಾಗಿದೆ.







