ಕಲಬುರಗಿ | 55 ವಾರ್ಡ್ಗಳಲ್ಲಿ ನಾಮಫಲಕಗಳೇ ಇಲ್ಲ!
ವಿಳಾಸ ಪತ್ತೆಗೆ ಪರದಾಟ; ತುರ್ತು ಸೇವೆಗಳಿಗೂ ಸಂಕಷ್ಟ

ಸಾಂದರ್ಭಿಕ ಚಿತ್ರ
ಕಲಬುರಗಿ : ಮಹಾನಗರ ಪಾಲಿಕೆಯಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಳೆದಿರುವ ಕಲಬುರಗಿ ನಗರದಲ್ಲಿ 55 ವಾರ್ಡ್ಗಳ ಹಲವು ಬಡಾವಣೆ, ಕ್ರಾಸ್ ಹಾಗೂ ಬೀದಿಗಳಿಗೆ ನಾಮಫಲಕಗಳಿಲ್ಲದೆ ಸಾರ್ವಜನಿಕರು ವಿಳಾಸ ಪತ್ತೆಗಾಗಿ ಪರದಾಡು
ವಂತಾಗಿದೆ. ಆಂಬ್ಯುಲೆನ್ಸ್, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಗೂ ನಿಖರ ಸ್ಥಳವನ್ನು ತಲುಪುವುದು ಸವಾಲಾಗಿದ್ದು, ನಗರದಲ್ಲಿ ಸಮರ್ಪಕ ವಿಳಾಸ ವ್ಯವಸ್ಥೆ ಕಲ್ಪಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಕಲಬುರಗಿ ನಗರವು 1965ರ ಜೂನ್ 15ರಂದು ಪುರಸಭೆಯಾಗಿ ಅಸ್ತಿತ್ವಕ್ಕೆ ಬಂದಿದ್ದು, 1982ರ ಅಕ್ಟೋಬರ್ 2ರಂದು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದೆ. ಪ್ರಸ್ತುತ 55 ವಾರ್ಡ್ಗಳನ್ನು ಹೊಂದಿರುವ ನಗರದಲ್ಲಿ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಿವೆ. ಇಷ್ಟೊಂದು ವರ್ಷಗಳ ನಗರಾಡಳಿತದ ಬಳಿಕವೂ ಹಲವು ಬಡಾವಣೆಗಳ ಹೆಸರು, ವಾರ್ಡ್ ಸಂಖ್ಯೆ, ಕ್ರಾಸ್ ಮತ್ತು ಬೀದಿಗಳನ್ನು ಗುರುತಿಸುವ ನಾಮಫಲಕಗಳ ಕೊರತೆ ಮುಂದುವರಿದಿದೆ.
ತುರ್ತು ಸೇವೆಗಳಿಗೂ ವಿಳಾಸ ಪತ್ತೆ ಸವಾಲು :
ವಾರ್ಡ್ ಸಂಖ್ಯೆ, ಬಡಾವಣೆಗಳ ಹೆಸರು ಹಾಗೂ ಕ್ರಾಸ್ಗಳ ವಿವರ ಸೂಚಿಸುವ ಫಲಕಗಳಿಲ್ಲದಿರುವುದರಿಂದ ಸಾರ್ವಜನಿಕರ ಜತೆಗೆ ತುರ್ತು ಸೇವೆಗಳ ಸಿಬ್ಬಂದಿಯೂ ಸಮಸ್ಯೆ ಎದುರಿಸುವಂತಾಗಿದೆ. ಆರೋಗ್ಯ ಸಮಸ್ಯೆ ಎದುರಾದಾಗ 108 ಆಂಬ್ಯುಲೆನ್ಸ್ ಗೆ ಕರೆ ಮಾಡಿದವರು ನಿಖರ ವಿಳಾಸ ತಿಳಿಸಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ಇದೆ. ಮೊಬೈಲ್ ಲೊಕೇಶನ್ ಕಳುಹಿಸಿ, ಕರೆ ಮಾಡಿದವರೇ ಮುಖ್ಯ ರಸ್ತೆಗೆ ಬಂದು ವಾಹನಕ್ಕೆ ದಾರಿ ತೋರಿಸಬೇಕಾದ ಸಂದರ್ಭಗಳೂ ಎದುರಾಗುತ್ತಿವೆ ಎನ್ನಲಾಗಿದೆ.
ಬೆಂಕಿ ಅವಘಡದಂತಹ ತುರ್ತು ಸಂದರ್ಭಗಳಲ್ಲಿ ಸ್ಥಳ ಪತ್ತೆಹಚ್ಚಲು ವಿಳಂಬವಾದರೆ ಜೀವ ಮತ್ತು ಆಸ್ತಿ ಹಾನಿಯ ಅಪಾಯ ಹೆಚ್ಚುತ್ತದೆ. ಹೀಗಾಗಿ ಸ್ಪಷ್ಟ ವಿಳಾಸ ವ್ಯವಸ್ಥೆ ಕಲ್ಪಿಸುವುದು ಕೇವಲ ಸಾರ್ವಜನಿಕರ ಅನುಕೂಲಕ್ಕೆ ಸೀಮಿತವಾಗದೆ, ತುರ್ತು ಸೇವೆಗಳ ತ್ವರಿತ ಕಾರ್ಯಾಚರಣೆಗೂ ಅಗತ್ಯವಾಗಿದೆ.
ಹಳೆಯ ಬಡಾವಣೆಗಳಲ್ಲೂ ಫಲಕಗಳ ಕೊರತೆ :
ನಗರದ ಹಳೆಯ ಹಾಗೂ ಹೊಸ ಬಡಾವಣೆಗಳ ಹಲವು ಪ್ರದೇಶಗಳಲ್ಲಿ ವ್ಯವಸ್ಥಿತ ನಾಮಫಲಕಗಳಿಲ್ಲ. ಕೆಲವೆಡೆ ಇದ್ದ ಫಲಕಗಳೂ ಹಾಳಾಗಿವೆ ಎಂಬುದು ಸಾರ್ವಜನಿಕರ ದೂರಾಗಿದೆ. ಹೊರಗಿನಿಂದ ಬರುವ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಕೊರಿಯರ್ ಸಿಬ್ಬಂದಿ ಹಾಗೂ ಆನ್ಲೈನ್ ವಿತರಣಾ ಪ್ರತಿನಿಧಿಗಳು ವಿಳಾಸ ಹುಡುಕಲು ಸಮಯ ವ್ಯಯಿಸಬೇಕಾಗಿದೆ.
ತಾರಫೈಲ್ ಮತ್ತು ಸಂಗತ್ರಾಶ್ವಾಡಿಯ ಜಿಡಿಎ ಲೇಔಟ್ ಸೇರಿದಂತೆ ಬೆರಳೆಣಿಕೆಯ ಬಡಾವಣೆಗಳಲ್ಲಿ ಮಾತ್ರ ನಾಮಫಲಕಗಳು ಕಾಣಸಿಗುತ್ತವೆ. ಉಳಿದ ಪ್ರದೇಶಗಳಲ್ಲೂ ವಾರ್ಡ್ ಸಂಖ್ಯೆ, ಕ್ರಾಸ್ ಹಾಗೂ ಬಡಾವಣೆಗಳ ಹೆಸರು ಸೂಚಿಸುವ ಫಲಕಗಳನ್ನು ಅಳವಡಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಸ್ಮಾರ್ಟ್ ಸಿಟಿ ಪರಿಕಲ್ಪನೆಗೆ ವಿಳಾಸ ವ್ಯವಸ್ಥೆಯೂ ಮುಖ್ಯ :
ನಗರಾಭಿವೃದ್ಧಿ ಯೋಜನೆಗಳ ಮೂಲಕ ವಿವಿಧ ಕಾಮಗಾರಿಗಳು ನಡೆಯುತ್ತಿರುವ ಸಂದರ್ಭದಲ್ಲಿ, ನಾಗರಿಕರಿಗೆ ತಮ್ಮ ಮನೆ ಹಾಗೂ ಬೀದಿಗಳನ್ನು ಸುಲಭವಾಗಿ ಗುರುತಿಸಲು ನೆರವಾಗುವ ನಾಮಫಲಕಗಳ ಅಳವಡಿಕೆಗೂ ಆದ್ಯತೆ ನೀಡಬೇಕಿದೆ. ರಸ್ತೆಗಳು ಮತ್ತು ಕಟ್ಟಡಗಳ ಅಭಿವೃದ್ಧಿಯ ಜತೆಗೆ ವ್ಯವಸ್ಥಿತ ವಿಳಾಸ ವ್ಯವಸ್ಥೆ, ಡಿಜಿಟಲ್ ಮ್ಯಾಪಿಂಗ್ ಹಾಗೂ ಬೀದಿ ಗುರುತಿನ ಫಲಕಗಳು ನಗರಾಡಳಿತದ ಪ್ರಮುಖ ಅಗತ್ಯಗಳಾಗಿವೆ.
ಜಿಲ್ಲಾಡಳಿತ, ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ಹಾಗೂ ಜನಪ್ರತಿನಿಧಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ವಾರ್ಡ್ಗಳಲ್ಲೂ ನಾಮಫಲಕಗಳನ್ನು ಅಳವಡಿಸಬೇಕು. ಹಾಳಾಗಿರುವ ಫಲಕಗಳನ್ನು ದುರಸ್ತಿಪಡಿಸಿ, ಹೊಸ ಬಡಾವಣೆಗಳಲ್ಲಿಯೂ ವಿಳಾಸ ಗುರುತಿಸುವ ವ್ಯವಸ್ಥೆ ಕಲ್ಪಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಡಿಜಿಟಲ್ ಟ್ವಿನ್ ಅತ್ಯಾಧುನಿಕ ಪರಿಕಲ್ಪನೆಯಾಗಿದ್ದು, ಮನೆಮನೆಗಳ ಭೌತಿಕ ಸಮೀಕ್ಷೆ ನಡೆಸಿ ಕಟ್ಟಡಗಳ ಮೂರು ಆಯಾಮದ (3ಡಿ) ನಕ್ಷೆ ಸಿದ್ಧಪಡಿಸಲಾಗುತ್ತದೆ. ಈ ಯೋಜನೆಯಲ್ಲಿ ನಾಮಫಲಕಗಳನ್ನೂ ಒಳಗೊಳ್ಳಲಾಗುತ್ತದೆ. ಯೋಜನೆಗೆ ಟೆಂಡರ್ ಕರೆದು ಆದಷ್ಟು ಬೇಗ ಕಾರ್ಯಗತಗೊಳಿಸಲಾಗುವುದು.
-ಅವಿನಾಶ್ ಶಿಂಧೆ, ಮನಪಾ ಆಯುಕ್ತ, ಕಲಬುರಗಿ
ತಾರಫೈಲ್ ಮತ್ತು ಸಂಗತ್ರಾಶ್ವಾಡಿಯ ಜಿಡಿಎ ಲೇಔಟ್ ಸೇರಿದಂತೆ ಕೆಲವೇ ಬಡಾವಣೆಗಳಲ್ಲಿ ನಾಮಫಲಕಗಳು ಕಾಣಸಿಗುತ್ತವೆ. ಬಹುತೇಕ ಕಡೆ ವಾರ್ಡ್ ಸಂಖ್ಯೆ, ಕ್ರಾಸ್ ಹಾಗೂ ಬಡಾವಣೆಗಳ ಹೆಸರು ಸೂಚಿಸುವ ಫಲಕಗಳಿಲ್ಲದೆ ನಿವಾಸಿಗಳು ವಿಳಾಸ ತಿಳಿಸಲು ಪರದಾಡುತ್ತಿದ್ದಾರೆ. ಎಲ್ಲ ಬಡಾವಣೆಗಳಲ್ಲೂ ಫಲಕ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು.
-ದತ್ತು ಹೆಚ್ ಭಾಸಗಿ, ಸಂಸ್ಥಾಪಕ ರಾಜ್ಯಾಧ್ಯಕ್ಷ, ಜೈ ಕನ್ನಡಿಗರ ಸೇನೆ ಕಲಬುರಗಿ
ಪಾಲಿಕೆ ವ್ಯಾಪ್ತಿಯ ಎಲ್ಲ 55 ವಾರ್ಡ್ಗಳಲ್ಲಿ ನಾಮಫಲಕಗಳ ಕೊರತೆಯಿದೆ. ಪಾಲಿಕೆ ವತಿಯಿಂದಲೇ ವಾರ್ಡ್ ಸದಸ್ಯರ ನೇತೃತ್ವದಲ್ಲಿ ಈ ಕೆಲಸ ನಡೆಯಬೇಕು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಬೇಕು ಎಂಬುದು ನಮ್ಮ ಬೇಡಿಕೆ. ಈ ವಿಚಾರವನ್ನು ಪಾಲಿಕೆಯ ಪ್ರಥಮ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ, ವಿರೋಧ ಪಕ್ಷದ ವತಿಯಿಂದ ನಿರ್ಣಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
-ವಿಶಾಲ್ ದರ್ಗಿ, ಪಾಲಿಕೆ ವಿರೋಧ ಪಕ್ಷದ ಸದಸ್ಯ






