Kalaburagi | ನಿರ್ಲಕ್ಷ್ಯಕ್ಕೆ ಒಳಗಾದ ಶೋರ್ ಗುಂಬಜ್ ಸ್ಮಾರಕ !
ಸ್ಮಾರಕ ಪಕ್ಕದಲ್ಲೇ ಭೂಮಿ ಅಗೆತ; ಅತಿಕ್ರಮಣದ ಆರೋಪ: ಪುರಾತತ್ವ ಇಲಾಖೆ ಗಪ್‌ಚುಪ್

ಕಲಬುರಗಿ: ಬಹಮನಿ ಸಾಮ್ರಾಜ್ಯದ ವೈಭವದ ಕೊಡುಗೆಯಾಗಿರುವ ಕಲಬುರಗಿಯ ಅಪರೂಪದ ಐತಿಹಾಸಿಕ ಸ್ಮಾರಕ ಶೋರ್ ಗುಂಬಜ್ ಸಂರಕ್ಷಣೆಯಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಸ್ಮಾರಕದ ಸುತ್ತಮುತ್ತ ಭೂಮಿ ಅಗಿಯುವುದು, ಅತಿಕ್ರಮಿಸುವುದು ಹಾಗೂ ಮನೆಗಳ ನಿರ್ಮಿಸುವುದರ ಆರೋಪ ಕೇಳಿಬಂದಿದ್ದರೂ, ರಾಜ್ಯ ಪುರಾತತ್ವ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
ನಗರದ ಆಳಂದ ರಸ್ತೆಯಲ್ಲಿನ ಎತ್ತರದ ಪ್ರದೇಶದಲ್ಲಿರುವ ಈ ಸ್ಮಾರಕ ರಸ್ತೆ ಅಥವಾ ರೈಲಿನ ಮೂಲಕ ನಗರ ಪ್ರವೇಶಿಸುವವರಿಗೆ ಕೆಲವು ಕಿಲೋಮೀಟರ್ ದೂರದಿಂದಲೇ ಕಾಣಿಸುತ್ತದೆ. ಬೀದರ್ ಮತ್ತು ಸೊಲ್ಲಾಪುರ ಮಾರ್ಗದಿಂದ ಬರುವಾಗಲಂತೂ ಇದರ ಭವ್ಯ ರೂಪ ಗಮನ ಸೆಳೆಯುತ್ತದೆ. ಕಲಬುರಗಿ ಕೋಟೆಯಿಂದ 3.5 ಕಿಲೋಮೀಟರ್ ದೂರದಲ್ಲಿರುವ ಶೋರ್ ಗುಂಬಜ್, ಬಹಮನಿ ಕಾಲದ ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ಧ್ವನಿ ವಿಜ್ಞಾನಕ್ಕೆ ಅಪೂರ್ವ ಸಾಕ್ಷಿಯಾಗಿದೆ. ಆದರೆ ಇಂತಹ ಅಮೂಲ್ಯ ಸ್ಮಾರಕ ನಿರ್ಲಕ್ಷ್ಯದ ಚಿತ್ರಣ ಕಂಡುಬರುತ್ತಿದೆ.
ಪ್ರತಿಧ್ವನಿಯ ಗುಂಬಜ್‌ಗೆ ಮೌನದ ಕಾಟ! :
ಶೋರ್ ಎಂಬುದು ಉರ್ದು ಪದ. ಅದರ ಅರ್ಥ ಗದ್ದಲ ಅಥವಾ ಶಬ್ದ. ಈ ಗುಂಬಜ್‌ಗೆ ಆ ಹೆಸರು ಬರಲು ಕಾರಣ ಅದರ ವಿಶಿಷ್ಟ ಪ್ರತಿಧ್ವನಿ ವ್ಯವಸ್ಥೆ ಎನ್ನಲಾಗಿದೆ. ಕಾಲಕ್ರಮೇಣ ಸ್ಥಳೀಯರಿಂದ ರೂಢಿಗತವಾಗಿ ಚೋರ್ ಗುಂಬಜ್ ಆಗಿ ಹೆಸರು ಪಡೆದಿದೆ. ಮೊದಲು ಗುಂಬಜ್ ಒಳಭಾಗದಲ್ಲಿ ಕೂಗಿದರೆ 16 ಬಾರಿ ಪ್ರತಿಧ್ವನಿ ಕೇಳಿಸುತ್ತಿತ್ತು. ಆದರೆ ಸೂಕ್ತ ನಿರ್ವಹಣೆ ಇಲ್ಲದ ಪರಿಣಾಮ ಈಗ ಎರಡು-ಮೂರು ಬಾರಿ ಮಾತ್ರ ಪ್ರತಿಧ್ವನಿ ಕೇಳಿಸುತ್ತಿದೆ ಎನ್ನಲಾಗಿದೆ. ಪ್ರತಿಧ್ವನಿಗೆ ಹೆಸರಾಗಿದ್ದ ಸ್ಮಾರಕ ಇಂದು ಮೌನವಾಗಿದೆ.
ಕಾವಲು ಗೋಪುರವಾಗಿತ್ತೇ? :
14ನೇ ಶತಮಾನದಲ್ಲಿ ಬಹಮನಿ ಅರಸರ ಕಾಲದಲ್ಲಿ ನಿರ್ಮಾಣ ಗೊಂಡ ಈ ಇಂಡೋ-ಇಸ್ಲಾಮಿಕ್ ಸಂಸ್ಕೃತಿಯ ಸ್ಮಾರಕವು ಬಹಮನಿ ಕೋಟೆಯ ವಾಯವ್ಯ ಭಾಗದಲ್ಲಿದೆ. ಮೇಲ್ಛಾವಣಿಯ ನಾಲ್ಕೂ ಮೂಲೆಗಳಲ್ಲಿರುವ ಗುಮ್ಮಟಾಕಾರದ ಕಾವಲು ಗೋಪುರಗಳಲ್ಲಿ ಸೈನಿಕರು ನಿಂತು ಹೊರಗಿನ ಚಟುವಟಿಕೆಗಳನ್ನು ಗಮನಿಸುತ್ತಿದ್ದಿರಬಹುದು. ಶತ್ರುಗಳ ಚಲನವಲನ ಕಂಡುಬಂದರೆ ಕೂಗಿ ಕೋಟೆಯಲ್ಲಿದ್ದವರಿಗೆ ಎಚ್ಚರಿಕೆ ನೀಡಲು ಈ ಎತ್ತರದ ಪ್ರದೇಶ ಅನುಕೂಲವಾಗಿರಬಹುದೆಂಬ ಊಹಿಸಲಾಗಿದೆ.
40 ಕಮಾನುಗಳ ವಿಶಿಷ್ಟ ವಿನ್ಯಾಸ :
ಶೋರ್ ಗುಂಬಜ್ನ ನಾಲ್ಕೂ ಹೊರಗೋಡೆಗಳು ಎರಡು ಪದರಗಳಲ್ಲಿ ನಿರ್ಮಿಸಲ್ಪಟ್ಟಿವೆ. ಪ್ರತಿಯೊಂದು ಗೋಡೆಯಲ್ಲೂ ಹತ್ತು ಎತ್ತರವಾದ ಕಮಾನುಗಳಿದ್ದು, ಒಟ್ಟು 40 ಕಮಾನುಗಳು ಕಟ್ಟಡದ ಭವ್ಯತೆಯನ್ನು ಹೆಚ್ಚಿಸುತ್ತವೆ. ಪೂರ್ವ ದಿಕ್ಕಿನಲ್ಲಿ, ಬಹಮನಿ ಕೋಟೆಯತ್ತ ಮುಖ ಮಾಡಿರುವ ಪ್ರಮುಖ ಪ್ರವೇಶದ್ವಾರವಿದೆ.
ಒಳಗಿನ ಗೋಡೆಗಳ ಮೇಲ್ಭಾಗದಲ್ಲಿ ಅರೇಬಿಕ್ ಧಾರ್ಮಿಕ ಲಿಪಿ ಹಾಗೂ ಅಲಂಕಾರಿಕ ವಿನ್ಯಾಸಗಳು ಗಮನ ಸೆಳೆಯುತ್ತವೆ. ಗುಮ್ಮಟದ ಮೇಲ್ಛಾವಣಿ, ಕಮಾನುಗಳು ಮತ್ತು ಗೋಡೆಗಳ ಮೇಲೆ ಕಾಣುವ ಸೂಕ್ಷ್ಮ ಸ್ಟುಕೋ ಅಲಂಕಾರಗಳು ಆ ಕಾಲದ ಶಿಲ್ಪಿಗಳ ಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿವೆ. ಆದರೆ ಇಂದು ಗುಂಬಜ್ ಒಳಗಿನ ಕಲೆಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ.
ಮಾಸುತ್ತಿರುವ 700 ವರ್ಷಗಳ ವರ್ಣಚಿತ್ರ :
ಶೋರ್ ಗುಂಬಜ್‌ನ ಮತ್ತೊಂದು ವಿಶೇಷತೆ ಎಂದರೆ ಒಳಭಾಗದ ಮೇಲ್ಛಾವಣಿಯಲ್ಲಿ ಕಾಣುವ ಪ್ರಾಚೀನ ವರ್ಣಚಿತ್ರಗಳು. ನೈಸರ್ಗಿಕ ವರ್ಣದ್ರವ್ಯಗಳಿಂದ ಕೂಡಿದ ಈ ಚಿತ್ರಗಳಲ್ಲಿ ನೀಲಿ, ಹಸಿರು, ಕೆಂಪು ಮತ್ತು ಹಳದಿ ಬಣ್ಣಗಳ ಛಾಯೆಗಳು ಇಂದಿಗೂ ಕೆಲವೆಡೆ ಗೋಚರಿಸುತ್ತವೆ. ಸುಮಾರು 7 ಶತಮಾನಗಳ ಹಿಂದಿನ ಕಲಾಕೃತಿಗಳೆಂದು ಹೇಳಲಾಗುವ ಈ ಚಿತ್ರಗಳು ಮಳೆ, ತೇವಾಂಶ ಮತ್ತು ಉಷ್ಣತೆಯ ಪರಿಣಾಮದಿಂದ ನಿಧಾನವಾಗಿ ಮಾಸುತ್ತಿವೆ. ವೈಜ್ಞಾನಿಕ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಣ್ಮರೆಯಾಗುವ ಆತಂಕವಿದೆ ಎನ್ನುತ್ತಾರೆ ಕಲಾವಿದ ರೆಹಮಾನ್ ಪಟೇಲ್.
ಗೋಳಗುಮ್ಮಟಕ್ಕೂ ಮುನ್ನವೇ ಪ್ರತಿಧ್ವನಿಯ ವೈಭವ? :
ವಿಜಯಪುರದ ಗೋಳಗುಮ್ಮಟದೊಂದಿಗೆ ಶೋರ್ ಗುಂಬಜ್ ಹೋಲಿಕೆ ಮಾಡುವುದು ಸಾಮಾನ್ಯ. ಗೋಳಗುಮ್ಮಟದ ಪ್ರತಿಧ್ವನಿ ವ್ಯವಸ್ಥೆ ವಿಶ್ವಪ್ರಸಿದ್ಧವಾದರೆ, ಅದಕ್ಕೂ ಮೊದಲು ಕಟ್ಟಿಸಿದ ಶೋರ್ ಗುಂಬಜ್‌ನಲ್ಲಿಯೂ ಅತ್ಯಂತ ವಿಶಿಷ್ಟ ಧ್ವನಿ ಪ್ರತಿಧ್ವನಿ ವ್ಯವಸ್ಥೆ ಇದೆ. ಆದರೆ ನಿರ್ಲಕ್ಷ್ಯಕ್ಕೊಳಗಾಗಿದೆ.
ಗುಂಬಜ್ ಪಕ್ಕದಲ್ಲೇ ಭೂಮಿ ಅಗೆತ; ಇಲಾಖೆ ನಿರ್ಲಕ್ಷ್ಯ :
ಸ್ಮಾರಕದ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಅಗೆದಿರುವುದು ಕಂಡುಬರುತ್ತಿದ್ದು, ಇದರಿಂದ ಎತ್ತರದ ಪ್ರದೇಶದಲ್ಲಿರುವ ಗುಂಬಜ್ ಅಡಿಪಾಯ ಮತ್ತು ರಚನೆಯ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದೆ. ಸ್ಮಾರಕದ ಸುತ್ತಲಿನ ಜಾಗವನ್ನು ಅತಿಕ್ರಮಿಸಿ ಮನೆಗಳನ್ನು ನಿರ್ಮಿಸಲಾಗಿದೆ. ಐತಿಹಾಸಿಕ ಸ್ಮಾರಕದ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ನಡೆದರೆ ತಕ್ಷಣ ಪರಿಶೀಲಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕಾದ ಹೊಣೆ ಪುರಾತತ್ವ ಇಲಾಖೆಯ ಮೇಲಿದೆ. ಆದರೆ ಅಧಿಕಾರಿಗಳು ಮೌನವಾಗಿದ್ದಾರೆ ಎಂಬುದು ಪ್ರವಾಸಿಗರ ಆರೋಪವಾಗಿದೆ.
ಸ್ಮಾರಕದ ಸುತ್ತಲಿನ ಪ್ರದೇಶವನ್ನು ಸಂರಕ್ಷಿಸುವುದರ ಜೊತೆಗೆ, ಸೂಕ್ತ ಬೇಲಿ, ಭದ್ರತಾ ಸಿಬ್ಬಂದಿ, ಬೆಳಕಿನ ವ್ಯವಸ್ಥೆ, ಪ್ರವಾಸಿಗರಿಗೆ ಮೂಲಸೌಕರ್ಯ ಹಾಗೂ ಮಾಹಿತಿ ಫಲಕಗಳನ್ನು ಅಳವಡಿಸಬೇಕಿದೆ ಎನ್ನುತ್ತಾರೆ ಪ್ರವಾಸಿಗರು.
ಜಿಲ್ಲೆಯ ಐತಿಹಾಸಿಕ ತಾಣಗಳನ್ನು ಅಭಿವೃದ್ಧಿಪಡಿಸಲು ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಇತ್ತೀಚೆಗೆ ಶೋರ್ ಗುಂಬಜ್‌ಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ವರ್ಷದ ಕೊನೆಯೊಳಗೆ ಕಲಬುರಗಿ ಕೋಟೆ, ಶೋರ್ ಗುಂಬಜ್ ಸೇರಿದಂತೆ ಇತರೆ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರಗಳನ್ನಾಗಿ ಮಾಡಲಾಗುವುದು.
-ಇಕ್ರಮ್ ಶರೀಫ್ ಜಿಲ್ಲಾಧಿಕಾರಿ, ಕಲಬುರಗಿ
ಜಿಲ್ಲಾಡಳಿತ ಮತ್ತು ಪುರಾತತ್ವ ಇಲಾಖೆ ಕೂಡಲೇ ಗಮನಹರಿಸಿ ವೈಜ್ಞಾನಿಕ ಸಂರಕ್ಷಣಾ ಕ್ರಮಗಳನ್ನು ಕೈಗೊಂಡರೆ ಶೋರ್ ಗುಂಬಜ್ ತನ್ನ ವೈಭವವನ್ನು ಮರಳಿ ಪಡೆಯಬಹುದು. ಸ್ಮಾರಕದ ಮೂಲ ವಿನ್ಯಾಸಕ್ಕೆ ಧಕ್ಕೆಯಾಗದಂತೆ ಭದ್ರತಾ ವ್ಯವಸ್ಥೆ, ಸೂಕ್ತ ಬೆಳಕಿನ ವ್ಯವಸ್ಥೆ ಹಾಗೂ ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಐತಿಹಾಸಿಕ ಸ್ಮಾರಕ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
-ಡಾ. ರೆಹಮಾನ್ ಪಟೇಲ್, ಸಂಶೋಧಕ, ಕಲಾವಿದ






