Kalaburagi | ಭಿಕ್ಷೆ ಬೇಡುತ್ತಲೇ ಎಸೆಸೆಲ್ಸಿ ಪರೀಕ್ಷೆಯಲ್ಲಿ 529 ಅಂಕಗಳಿಸಿದ ಸುಜಾತಾ

ಆಳಂದ : ಹೊಟ್ಟೆಪಾಡಿಗಾಗಿ ಮನೆಮನೆಗೆ ತೆರಳಿ ಭಿಕ್ಷೆ ಬೇಡುತ್ತಾ, ಜ್ಞಾನದ ಹಸಿವು ತೀರಿಸಿಕೊಂಡ ತಾಲೂಕಿನ ಮಾದನ ಹಿಪ್ಪರಗಾ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂಬ ನುಡಿಗೆ ಜೀವಂತ ಉದಾಹರಣೆಯಾಗಿದ್ದಾಳೆ.
ರಾಜ್ಯದ ಪ್ರಸಕ್ತ ಸಾಲಿನ ಎಸೆಸೆಲ್ಸಿ ಫಲಿತಾಂಶ 2026ರಲ್ಲಿ ಪಾಸ್ ಪ್ರಮಾಣ 94.1 ಶೇಕಡವಾಗಿದ್ದು, ಕಲಬುರಗಿ ಜಿಲ್ಲೆಯೂ ಗಮನಾರ್ಹ ಸಾಧನೆ ಮಾಡಿದೆ. ಈ ನಡುವೆ ಸಾಮಾನ್ಯ ಕುಟುಂಬದ ವಿದ್ಯಾರ್ಥಿನಿಯೊಬ್ಬಳ ಅಸಾಧಾರಣ ಸಾಧನೆ ರಾಜ್ಯದ ಗಮನ ಸೆಳೆದಿದೆ.
ಆಳಂದ ತಾಲೂಕಿನ ಮಾದನ ಹಿಪ್ಪರಗಾ ಸರ್ಕಾರಿ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸುಜಾತಾ ಭೀಮಶಾ ಗೊಲ್ಲರ್ ಅವರು ಒಟ್ಟು 625 ಅಂಕಗಳಲ್ಲಿ 529 ಅಂಕಗಳನ್ನು ಪಡೆದು 84.64 ಶೇಕಡಾ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ಮೂಲತಃ ಅಲೆಮಾರಿ ಜನಾಂಗಕ್ಕೆ ಸೇರಿದ ಗೊಲ್ಲರ್ ಸಮುದಾಯದ ಸುಜಾತಾ, ಅನಕ್ಷರಸ್ಥ ಹಾಗೂ ಕಡು ಬಡತನದ ಕುಟುಂಬದಲ್ಲಿ ಜನಿಸಿದವರು. ತಂದೆ ಭೀಮಶಾ ಗೊಲ್ಲರ್ ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೆ ಹೊಟ್ಟೆಪಾಡಿಗಾಗಿ ಮನೆಮನೆಗೆ ತೆರಳಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಸುಜಾತಾ ಜ್ಞಾನದ ಹಸಿವಿನಿಂದ ಶಾಲೆಗೆ ತೆರಳಿ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ.
ಕುಟುಂಬದ ಆರ್ಥಿಕ ಸಂಕಷ್ಟ, ದಿನನಿತ್ಯದ ಕಷ್ಟಗಳ ನಡುವೆಯೂ ಶಿಕ್ಷಣದ ಹಂಬಲ ಕೈಬಿಡದೇ ಓದಿನಲ್ಲಿ ತೊಡಗಿದ್ದ ಆಕೆಯ ಪರಿಶ್ರಮಕ್ಕೆ ಇದೀಗ ಫಲ ಸಿಕ್ಕಿದೆ.
“ನಾನು ಏನಾದರೂ ಸಾಧಿಸಬೇಕು” ಎಂಬ ದೃಢ ನಿಶ್ಚಯದೊಂದಿಗೆ ಬಡತನವನ್ನು ಮೆಟ್ಟಿ ನಿಂತು, ಎಲ್ಲರಂತೆ ಶಿಕ್ಷಣ ಪಡೆಯಬೇಕೆಂಬ ಛಲದಿಂದ ಸುಜಾತಾ ಈ ಸಾಧನೆ ಮಾಡಿದ್ದಾರೆ.
ಇಂದಿನ ಸಮಾಜದಲ್ಲಿ ಬಡವರಿಗೆ ಶಿಕ್ಷಣವೇ ದೊಡ್ಡ ಸವಾಲಾಗಿರುವ ಸಂದರ್ಭದಲ್ಲಿ, ಸುಜಾತಾಳ ಸಾಧನೆ ಅಲೆಮಾರಿ ಸಮುದಾಯದಲ್ಲಿ ಅರಳಿದ ಅಪರೂಪದ ಪ್ರತಿಭೆಯಾಗಿದೆ. ಇದು ಕೇವಲ ಒಬ್ಬ ವಿದ್ಯಾರ್ಥಿನಿಯ ಸಾಧನೆಯಲ್ಲ, ಬಡತನದ ಕತ್ತಲಲ್ಲಿ ಶಿಕ್ಷಣದ ಬೆಳಕನ್ನು ಹೊತ್ತಿಸುವ ಶಕ್ತಿಯ ಸಂಕೇತವಾಗಿದೆ. ಈ ವಿಶೇಷ ಸಾಧನೆಗಾಗಿ ಮಾದನಹಿಪ್ಪರಗಾದ ಸ್ಥಳೀಯ ಶಿಕ್ಷಣಪ್ರೇಮಿ ಬಳಗವು ಸುಜಾತಾಳನ್ನು ಸನ್ಮಾನಿಸಿದೆ.
ಶಾಲೆಯಲ್ಲಿ ಶೈಕ್ಷಣಿಕ ಪ್ರವಾಸಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯಿಂದ 500 ರೂಪಾಯಿ ಸಂಗ್ರಹಿಸುತ್ತಿದ್ದಾಗ, ಸುಜಾತಾಳಿಗೂ ಅದೇ ಮೊತ್ತ ಕೇಳಲಾಯಿತು. ಆಗ ಆಕೆ “ಈಗ ತಾನೇ ಭಿಕ್ಷೆ ಬೇಡಿ ಊಟಕ್ಕೆ ರೊಟ್ಟಿ ತಂದಿದ್ದೇನೆ, 500 ರೂಪಾಯಿ ಎಲ್ಲಿಂದ ಕೊಡಲಿ?” ಎಂದು ನೋವಿನಿಂದ ಹೇಳಿದ್ದಾಳೆ. ಈ ಮಾತು ಅಲ್ಲಿದ್ದವರ ಮನಸ್ಸು ಮಿಡಿಯುವಂತೆ ಮಾಡಿತು. ಈ ವೇಳೆ ಶಾಲೆಯ ಶಿಕ್ಷಕರು ಆಕೆಯ ಪರಿಸ್ಥಿತಿಯನ್ನು ಮನಗಂಡು, ಪ್ರವಾಸದ ಸಂಪೂರ್ಣ ವೆಚ್ಚವನ್ನು ತಮ್ಮಿಂದಲೇ ಭರಿಸಿದರು. ಜೊತೆಗೆ ಆಕೆಯ ಶಿಕ್ಷಣಾಸಕ್ತಿಯನ್ನು ಗುರುತಿಸಿ ಅಗತ್ಯವಿರುವ ಎಲ್ಲ ರೀತಿಯ ನೆರವು ಹಾಗೂ ಪ್ರೋತ್ಸಾಹ ನೀಡಿದರು.






