ಇತಿಹಾಸದ ಮೂರು ಸಾಮ್ರಾಜ್ಯಗಳ ಸಂಗಮ ‘ಕಲಬುರಗಿ’
ನಿರ್ಲಕ್ಷ್ಯದ ನೆರಳಿನಲ್ಲಿ ಸ್ಮಾರಕಗಳು, ಬೇಕಿದೆ ಕಾಯಕಲ್ಪ!

ಕಲಬುರಗಿ: ರಾಷ್ಟ್ರಕೂಟರ ವೈಭವೋಪೇತ ಆಡಳಿತ, ಬಹಮನಿ ಸುಲ್ತಾನರ ವಾಸ್ತುಶಿಲ್ಪದ ವಿಶಿಷ್ಟತೆ ಹಾಗೂ ಹೈದರಾಬಾದ್ ನಿಜಾಮರ ಆಡಳಿತ ಶೈಲಿ..ಹೀಗೆ ಮೂರು ಪ್ರಮುಖ ರಾಜಸಂಸ್ಥಾನಗಳ ಐತಿಹಾಸಿಕ ಹಿನ್ನೆಲೆಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಹೆಮ್ಮೆಯ ನಾಡು ಕಲಬುರಗಿ. ಆದರೆ, ಪ್ರತಿವರ್ಷ ‘ವಿಶ್ವ ಪ್ರವಾಸೋದ್ಯಮ ದಿನ’ ಬಂದಾಗ ಮಾತ್ರ ನೆನಪಾಗುವ ಈ ಐತಿಹಾಸಿಕ ತಾಣಗಳು, ಸೂಕ್ತ ಪ್ರೋತ್ಸಾಹ ಮತ್ತು ನಿರ್ವಹಣೆಯಿಲ್ಲದೆ ಇಂದು ‘ಖಂಡರ್’ (ಹಾಳು ಕೊಂಪೆ) ಆಗುತ್ತಿರುವುದು ವಿಪರ್ಯಾಸ.
ವೈಭವದ ಇತಿಹಾಸ, ಇಂದಿನ ವಾಸ್ತವ :
ಕಲಬುರಗಿಯ ಕೋಟೆ, ಬೃಹತ್ ಜಾಮಿಯಾ ಮಸೀದಿ, ಹಫ್ತ ಗುಂಬಜ್, ಬುದ್ಧ ವಿಹಾರ, ಖಾಜಾ ಬಂದಾನವಾಝ್ ದರ್ಗಾ, ಶರಣಬಸವೇಶ್ವರ ದೇವಾಲಯ, ಸನ್ನತಿಯ ಬೌದ್ಧ ಸ್ಮಾರಕಗಳು, ಪ್ರವಾಸಿ ರಾಯಭಾರಿಗಳು, ರಾಷ್ಟ್ರಕೂಟರ ಆಡಳಿತದ ಕುರುಹುಗಳು ಮತ್ತು ಬಹಮನಿ ಸುಲ್ತಾನರ ಕಾಲದ ಇಂಡೋ-ಸಾರಸೇನಿಕ್ ವಾಸ್ತುಶಿಲ್ಪಗಳು ಜಗತ್ತಿನ ಗಮನ ಸೆಳೆಯುವ ಸಾಮರ್ಥ್ಯ ಹೊಂದಿವೆ. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ ಇಂದು ಅಳಿವಿನಂಚಿಗೆ ಸರಿದು, ಕಳೆಗುಂದುತ್ತಿವೆ.
ಸ್ಥಳೀಯ ಕಲೆ ಮತ್ತು ಕಸೂತಿಗೆ ಉತ್ತೇಜನ :
ಜಿಲ್ಲೆಯ ಪ್ರವಾಸಿ ತಾಣಗಳ ಆವರಣದಲ್ಲಿ ಸ್ಥಳೀಯ ಕಲೆ, ಸಾಂಪ್ರದಾಯಿಕ ಕಸುತಿ ಉತ್ಪನ್ನಗಳು, ಕರಕುಶಲ ವಸ್ತುಗಳು ಹಾಗೂ ಹೈದರಾಬಾದ್-ಕರ್ನಾಟಕ ಭಾಗದ ವಿಶಿಷ್ಟ ಖಾದ್ಯಗಳನ್ನು ಮಾರಾಟ ಮಾಡಲು ಸ್ಥಳೀಯರಿಗೆ ಉದ್ಯಮ ಸ್ಟಾಲ್‌ಗಳ ಅವಕಾಶ ನೀಡಬೇಕು. ಇದರಿಂದ ಪ್ರವಾಸೋದ್ಯಮ ಬೆಳೆಯುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶವೂ ಸಿಗುತ್ತದೆ.
ಮೂಲಭೂತ ಸೌಕರ್ಯಗಳ ಕೊರತೆ :
ಬಹುತೇಕ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಗೃಹ ಹಾಗೂ ರಸ್ತೆ ಸಂಪರ್ಕದ ಕೊರತೆ ಎದ್ದು ಕಾಣುತ್ತಿದೆ. ಪ್ರಮುಖವಾಗಿ ಶುಚಿತ್ವ ಮತ್ತು ನೈರ್ಮಲ್ಯಕ್ಕೆ ಮೊದಲ ಆದ್ಯತೆ ನೀಡಬೇಕಿದೆ.
ಸ್ಥಳೀಯ ಸಂಸ್ಕೃತಿಯ ಪ್ರದರ್ಶನ :
ಪ್ರವಾಸಿ ತಾಣಗಳಲ್ಲಿ ವಾರಾಂತ್ಯದಲ್ಲಿ ಸ್ಥಳೀಯ ಜಾನಪದ ಕಲೆ, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಅಲ್ಲದೆ ಕಲಬುರಗಿಯ ಪ್ರವಾಸೋದ್ಯಮಕ್ಕೆ ಮರುಜೀವ ನೀಡಲು ಮತ್ತು ವಿದೇಶಿ ಹಾಗೂ ದೇಶೀಯ ಪ್ರವಾಸಿಗರನ್ನು ಆಕರ್ಷಿಸಲು ಕೆಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಕೇವಲ ದಿನಾಚರಣೆಗೆ ಮಾತ್ರ ಸೀಮಿತವಾಗದೆ, ಸರಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಕಲಬುರಗಿಯ ಸ್ಮಾರಕಗಳ ಜೀರ್ಣೋದ್ಧಾರಕ್ಕೆ ವಿಶೇಷ ಅನುದಾನ ನೀಡಬೇಕಿದೆ. ಐತಿಹಾಸಿಕ ಮೂರು ಸಂಸ್ಥಾನಗಳ ಕಥೆ ಹೇಳುವ ಈ ಮಣ್ಣಿನ ವೈಭವವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡಲು ತಕ್ಷಣದ ‘ಕಾಯಕಲ್ಪ’ ಅಗತ್ಯವಾಗಿದೆ.






