Kanakagiri | ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಮಾಲಿಯ ಮಗಳ ಸಾಧನೆ

ಕನಕಗಿರಿ: ಟ್ಯೂಷನ್ ಹೋಗದೆ ಮನೆಯಲ್ಲಿ ಓದಿ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಹಮಾಲಿ ಕಾರ್ಮಿಕನ ಮಗಳು ಅಪ್ರತಿಮ ಸಾಧನೆ ಮಾಡಿ ತಂದೆಯ ಬೆವರಿಗೆ ತಕ್ಕ ಫಲಿತಾಂಶ ನೀಡಿದ್ದಾಳೆ.
ಗಂಗಾವತಿಯ ಎಪಿಎಂಸಿ ಗಂಜ್ ಹಾಗೂ ವಿದ್ಯಾನಗರದ ಅಕ್ಕಿ ಗಿರಣಿಯಲ್ಲಿ ಹಮಾಲಿಗಾಗಿ ದುಡಿಯುವ ವಲಿಸಾಬ ಎಂ. ಜೂಲಕೇರಿ ಪುತ್ರಿ ಮೌಲಾಬಿ ಮನೆಯಲ್ಲೇ ಓದಿ 625ಕ್ಕೆ 604 ಅಂಕ ಪಡೆದು ಎಲ್ಲರ ಗಮನ ಸೆಳೆದಿದ್ದಾಳೆ.
ಕೂಲಿ ನಡುವೆ ಕನಸಿನ ಓದು :
ಕನಕಗಿರಿಯ ಜೂಲಕೇರಿ ಓಣಿಯ ಪುಟ್ಟ ಬಾಡಿಗೆ ಮನೆಯಲ್ಲಿರುವ ವಲಿಸಾಬ ಬೆಳಗ್ಗೆ ಸೈಕಲ್ ತುಳಿದುಕೊಂಡು ಗಂಗಾವತಿಗೆ ಹೋದರೆ ಬರುವುದು ರಾತ್ರಿ 8ಕ್ಕೆ. ದಿನದ ಕೂಲಿ 400-500 ರೂ. ತಾಯಿ ಗೃಹಿಣಿ. ಇಬ್ಬರು ತಮ್ಮಂದಿರು. ಅಪ್ಪ ಗಿರಣಿಯಲ್ಲಿ 50 ಕೆ.ಜಿ. ಅಕ್ಕಿ ಮೂಟೆ ಹೊತ್ತು ಹೊತ್ತು ಸುಸ್ತಾಗಿ ಬರುತ್ತಿದ್ದರು. ಆದರೂ ‘ನೀನು ಚೆನ್ನಾಗಿ ಓದು ಮಗಳೇ, ನಮ್ತರ ಆಗಬಾರದು’ ಅಂತಿದ್ರು. ಅದೇ ನನಗೆ ಸ್ಫೂರ್ತಿ ಎನ್ನುತ್ತಾಳೆ ಮಗಳು ಮೌಲಾಬಿ.
ಬೆಳಗ್ಗೆ 5 ಗಂಟೆಗೆ ಎದ್ದು ಮನೆ ಕೆಲಸ ಮುಗಿಸಿ, 2 ಗಂಟೆ ಓದಿ ಶಾಲೆಗೆ ಹೋಗುತ್ತಿದ್ದೆ. ರಾತ್ರಿ 10ರಿಂದ 12ರವರೆಗೆ ಮತ್ತೆ ಓದುತ್ತಿದ್ದೆ. ಟ್ಯೂಷನ್‌ಗೆ ದುಡ್ಡು ಇರಲಿಲ್ಲ. ಯೂಟ್ಯೂಬ್ ಮೂಲಕ ಸಂದೇಹ ನಿವಾರಿಸಿಕೊಂಡೆ. ಶಾಲೆಯ ಶಿಕ್ಷಕರು ಈ ವಿಷಯದಲ್ಲಿ ನೆರವಾದರು ಎನ್ನುತಾರೆೆ ಗಂಗಾವತಿಯ ಮೌಲಾನಾ ಆಜಾದ್ ಮಾದರಿ ಶಾಲೆಯ ವಿದ್ಯಾರ್ಥಿನಿ ಮೌಲಾಬಿ.
ಇಂಜಿನಿಯರ್ ಆಗುವ ಆಸೆ :
ಪಿಯುಸಿಯಲ್ಲಿ ವಿಜ್ಞಾನ ಆಯ್ಕೆ ಮಾಡಿಕೊಳ್ಳುತ್ತೇನೆ. ಮುಂದೆ ಇಂಜಿನಿಯರ್ ಆಗಿ ಅಪ್ಪನಿಗೆ ಕೂಲಿ ಕೆಲಸ ಬಿಡಿಸಬೇಕು. ನಮ್ಮ ಓಣಿಯ ಮಕ್ಕಳಿಗೆಲ್ಲ ಉಚಿತ ಟ್ಯೂಷನ್ ಹೇಳಿಕೊಡಬೇಕು ಎಂದು ಮೌಲಾಬಿ ತಿಳಿಸಿದ್ದಾರೆ.
ನನ್ನ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯ ರಫೀಕ್, ಕ್ಲಾಸ್ ಟೀಚರ್ ಫಾತಿಮಾ ಮತ್ತು ಅಪ್ಪ-ಅಮ್ಮ ಕಾರಣ ಎಂದು ನೆನೆದಿದ್ದಾರೆ.
ತಂದೆಯ ಕಣ್ಣಲ್ಲಿ ನೀರು, ಊರಿಗೆ ಹೆಮ್ಮೆ :
ನಾನು 5ನೇ ಕ್ಲಾಸ್ ಫೇಲ್. ಆದ್ರೆ ಮಗಳು ಇಡೀ ಓಣಿಗೆ ಹೆಸರು ತಂದಳು. ಅವಳ ಸಾಧನೆ ನನಗೆ ಖುಷಿ ನೀಡಿದೆ ಎನ್ನುತ್ತಾರೆ ಮೌಲಾಬಿ ತಂದೆ ವಲಿಸಾಬ.
ವಿದ್ಯಾರ್ಥಿನಿ ಮೌಲಾಬಿ ತುಂಬಾ ಶ್ರದ್ಧೆಯಿಂದ ಓದುತ್ತಿದ್ದಳು. ಬಡತನದ ನಡುವೆಯೂ ಛಲ ಬಿಡಲಿಲ್ಲ. ಅವಳು ಸಾಧನೆ ಮೂಲಕ ಎಲ್ಲ ಹುಡುಗಿಯರಿಗೆ ಮಾದರಿಯಾಗಿದ್ದಾಳೆ.
-ರಫೀಕ್, ಶಾಲಾ ಮುಖ್ಯೋಪಾಧ್ಯಾಯ






