Kanakagiri | ಸ್ವಂತ ಕಟ್ಟಡದಲ್ಲಿಲ್ಲ ಹಲವು ಅಂಗನವಾಡಿ ಕೇಂದ್ರಗಳು
ಬಾಡಿಗೆ ಶೆಡ್ಡಿನಲ್ಲಿ ಯಾತನೆ ಅನುಭವಿಸುತ್ತಿರುವ ಮಕ್ಕಳು!

ಕನಕಗಿರಿ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ಕಟ್ಟಡದಲ್ಲಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಸುಮಾರು 2-3 ವರ್ಷಗಳಿಂದ ಪಟ್ಟಣ ಹಾಗೂ ಗ್ರಾಮೀಣದಲ್ಲಿ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿದ್ದು, ಈ ಬಾಡಿಗೆ ಮನೆ ತಗಡಿನ ಮೇಲ್ಛಾವಣಿ ಹೊಂದಿದೆ. ಮಕ್ಕಳು ಸರಿಯಾದ ಗಾಳಿ, ಬೆಳಕು ಇಲ್ಲದೆ ಪರಿತಪಿಸುವಂತಾಗಿದೆ. ಇಕ್ಕಟ್ಟಾದ ಸ್ಥಳದಲ್ಲೇ ಒಂದು ಮೂಲೆಯಲ್ಲಿ ಅಡುಗೆ ಮಾಡಿದರೆ, ಇನ್ನೊಂದು ಮೂಲೆಯಲ್ಲಿ ಸಾಮಗ್ರಿ, ಮಕ್ಕಳ ಕಲಿಕೆಗೆ ಅಗತ್ಯವಾದ ಪರಿಕರ ಇಡಲು ಬಳಸಲಾಗುತ್ತಿದೆ.
ಕೇಂದ್ರದ ಮಕ್ಕಳು, ಗರ್ಭಿಣಿಯರು ಮಧ್ಯಾಹ್ನ ಊಟ ಮಾಡಲು ಸ್ಥಳಾವಕಾಶ ಇಲ್ಲದಂತಾಗಿದೆ. ಹೀಗಾಗಿ ಊಟವನ್ನು ಗರ್ಭಿಣಿಯರು ಮನೆಗಳಿಗೆ ಕೊಂಡೊಯ್ಯುತ್ತಿದ್ದಾರೆ. 20 ಕ್ಕೂ ಹೆಚ್ಚು ಮಕ್ಕಳು ದನದ ಕೊಟ್ಟಿಗೆಯಂತಹ ಕೊಠಡಿಯಲ್ಲಿ ಇರುವಂತಾಗಿದೆ. ಸಂಬಂಧಪಟ್ಟವರು ಅಂಗನವಾಡಿ ಕೇಂದ್ರಕ್ಕೆ ಉತ್ತಮ ಕಟ್ಟಡ ಒದಗಿಸಲು ಕ್ರಮ ಕೈಗೊಳ್ಳಬೇಕಿದೆ.
ತಾಲೂಕಿನ ಅಂಗನವಾಡಿ ಸ್ಥಿತಿಗತಿ :
ಕನಕಗಿರಿ ತಾಲೂಕಿನಲ್ಲಿ ಒಟ್ಟು 172 ಅಂಗನವಾಡಿ ಕೇಂದ್ರಗಳಿದ್ದು, ಅವುಗಳ ಪೈಕಿ ಪಟ್ಟಣದಲ್ಲಿ 17 ಮತ್ತು ಗ್ರಾಮೀಣ ಭಾಗದಲ್ಲಿ 108 ಕೇಂದ್ರಗಳು ಸ್ವಂತ ಕಟ್ಟಡ ಹೊಂದಿವೆ. ಪಟ್ಟಣದಲ್ಲಿ 17, ಗ್ರಾಮೀಣ ಭಾಗದಲ್ಲಿ 22 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. ಗ್ರಾಮೀಣ ಭಾಗದಲ್ಲಿ 7 ಸಮುದಾಯ ಭವನದಲ್ಲಿ, 4 ಶಾಲಾ ಕಟ್ಟಡದಲ್ಲಿ, 1 ಪಂಚಾಯತ್ ಕಟ್ಟಡದಲ್ಲಿ ಮತ್ತು 2 ಇತರೆ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಶೌಚಾಲಯವೇ ಕಸದ ತೊಟ್ಟಿ! :
ಕನಕಗಿರಿ ತಾಲೂಕಿನ ಸುಳೇಕಲ್ ಗ್ರಾಪಂ ವ್ಯಾಪ್ತಿಯ ಕಲಕೇರಿ ಗ್ರಾಮದ ಕನಕದಾಸ ವೃತ್ತದಲ್ಲಿರುವ ಎರಡನೇ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಅದು ಸಂಪೂರ್ಣ ಹಾಳಾಗಿ, ಕಸಕಡ್ಡಿ ತುಂಬಿ, ಬಳಕೆಗೆ ಯೋಗ್ಯವಿಲ್ಲದೆ ದುರ್ನಾತ ಬೀರುತ್ತಿದೆ. ಮಕ್ಕಳಿಗೆ ಕುಡಿಯಲು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದಂತಾಗಿದೆ.
ಕೆಲವು ಅಂಗನವಾಡಿ ಕೇಂದ್ರಗಳ ಕಾಮಗಾರಿ ಪ್ರಗತಿಯಲ್ಲಿವೆ. ಕೆಲವು ಕಡೆ ಜಾಗದ ಕೊರತೆ ಇದೆ. ಹೀಗಾಗಿ ಬಾಡಿಗೆ ಕಟ್ಟದಲ್ಲಿ ಅಂಗವನಾಡಿ ಕೇಂದ್ರಗಳು ನಡೆಯುತ್ತಿವೆ. ಅಂಗನವಾಡಿ ಕೇಂದ್ರಕ್ಕೆ ಜಾಗ ನೀಡಲು ಪಟ್ಟಣ ಪಂಚಾಯತ್‌ಗೆ ಈ ಹಿಂದೆ ಎರಡ್ಮೂರು ಬಾರಿ ಮನವಿ ಸಲ್ಲಿಸಲಾಗಿದೆ.
-ವಿಜಯಲಕ್ಷ್ಮೀ ಹಿರೇಮಠ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕನಕಗಿರಿ






