Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕನ್ನಡ ಕಾವ್ಯ: ನುಡಿ ನಾಡು ನಡಿಗೆ

ಕನ್ನಡ ಕಾವ್ಯ: ನುಡಿ ನಾಡು ನಡಿಗೆ

ಡಾ. ರವಿ ಎಂ ಸಿದ್ಲಿಪುರಡಾ. ರವಿ ಎಂ ಸಿದ್ಲಿಪುರ3 Nov 2025 11:59 AM IST
share
ಕನ್ನಡ ಕಾವ್ಯ: ನುಡಿ ನಾಡು ನಡಿಗೆ

ಭಾಗ - 1

ಭಾಷೆಯೆಂಬುದು ಕೇವಲ ಸಂವಹನದ ಸಾಧನವಲ್ಲ; ಅದೊಂದು ಜನಾಂಗದ ಸಾಂಸ್ಕೃತಿಕ ಸ್ಮತಿ, ಸಾಮೂಹಿಕ ಪ್ರಜ್ಞೆ ಮತ್ತು ಅಸ್ಮಿತೆಯ ಜೀವಂತ ರೂಪ. ಒಂದು ನಾಡಿನ ಚರಿತ್ರೆಯುದ್ದಕ್ಕೂ ಅದರ ಜನರು ತಮ್ಮನ್ನು ತಾವು ಕಂಡುಕೊಂಡ ಬಗೆ. ನಾಡಿನೊಂದಿಗೆ ಸ್ಥಾಪಿಸಿಕೊಂಡ ಸಂಬಂಧ ಮತ್ತು ಭವಿಷ್ಯದ ಕುರಿತು ಕಂಡ ಕನಸುಗಳು ಆಯಾ ಕಾಲದ ಸಾಹಿತ್ಯದಲ್ಲಿ, ವಿಶೇಷವಾಗಿ ಕಾವ್ಯದಲ್ಲಿ, ಸ್ಪಷ್ಟವಾಗಿ ಅರಳಿಕೊಳ್ಳುತ್ತವೆ. ಈ ನಿಟ್ಟಿನಲ್ಲಿ, ನಮ್ಮ ಕವಿಗಳು ಕನ್ನಡಿಗರ ಹೃದಯಬಡಿತವನ್ನು ಅಕ್ಷರಕ್ಕಿಳಿಸಿದ್ದಲ್ಲದೆ, ತಮ್ಮ ಕಾವ್ಯದ ಮೂಲಕ ನಾಡಿನ ಪ್ರಜ್ಞೆಯನ್ನೇ ರೂಪಿಸಿ, ಮುನ್ನಡೆಸಿದ್ದಾರೆ. ಕನ್ನಡದ ಅಸ್ಮಿತೆ ಎಂಬುದು ಸ್ಥಿರವಾದ ಶಿಲ್ಪವಲ್ಲ; ಅದು ನಿರಂತರವಾಗಿ ಹರಿಯುವ, ರೂಪಾಂತರಗೊಳ್ಳುವ ಜೀವಂತ ಚೇತನ ಎಂಬುದನ್ನು ಸಾರಿದ್ದಾರೆ.

ಕನ್ನಡ ಪ್ರಜ್ಞೆ ಹುಟ್ಟಿದ್ದು ಹೇಗೆ? ಅದು ಕೇವಲ ರಾಜಕೀಯ ಆಂದೋಲನದ ಫಲವೇ? ಖಂಡಿತ ಅಲ್ಲ. ಹರಿದು ಹಂಚಿಹೋಗಿದ್ದ ಒಂದು ಜನಾಂಗದ ಎದೆಯಲ್ಲಿ ‘ನಾವೆಲ್ಲ ಒಂದು’ ಎಂಬ ಕಿಡಿಯನ್ನು ಹೊತ್ತಿಸಿ, ಅದನ್ನು ಸ್ವಾಭಿಮಾನದ ಜ್ವಾಲೆಯಾಗಿ ರೂಪಿಸಿದ್ದು ನಮ್ಮ ಕವಿಗಳ ಕಾವ್ಯವಾಣಿ. ಈ ಪ್ರಜ್ಞೆಯ ವಿಕಾಸದ ಹೆಜ್ಜೆ ಗುರುತುಗಳು ಗೋವಿಂದ ಪೈಗಳಿಂದ ಹಿಡಿದು ನಿಸಾರ್ ಅಹಮದ್‌ವರೆಗಿನ ಮಹಾನ್ ಕವಿಗಳ ಕಾವ್ಯಗಳಲ್ಲಿ ಅಚ್ಚಳಿಯದಂತೆ ದಾಖಲಾಗಿವೆ.

ಅವುಗಳ ಅಧ್ಯಯನವು ಕೇವಲ ಕವಿಗಳ ಪಟ್ಟಿಯಲ್ಲ ಅಥವಾ ಕವಿತೆಗಳ ವಿಶ್ಲೇಷಣೆಯಲ್ಲ. ಬದಲಿಗೆ, ಕನ್ನಡಿಗರು ತಮ್ಮನ್ನು ತಾವು ಮರುವ್ಯಾಖ್ಯಾನಿಸಿಕೊಂಡ ಬಗೆಗಿನ ಬೌದ್ಧಿಕ ಚರಿತ್ರೆ. ಇಲ್ಲಿ ಕಾವ್ಯವು ಕನ್ನಡ ಪ್ರಜ್ಞೆಯ ಬಹುಧ್ವನಿಗಳ ಸಂಕಥನವಾಗಿ ಅನಾವರಣಗೊಳ್ಳುತ್ತದೆ.

ಈ ಮೂಲಕ, ನುಡಿಯ ಸೌಂದರ್ಯಕ್ಕೆ ಮೈಮರೆತ ವೈಯಕ್ತಿಕ ಪ್ರೇಮದಿಂದ ಹಿಡಿದು, ಅದನ್ನು ತಾಯಿಯ ಸ್ಥಾನದಲ್ಲಿಟ್ಟು ಪೂಜಿಸಿದ ಭಕ್ತಿಯವರೆಗೆ; ಹಂಚಿಹೋದ ನಾಡನ್ನು ಒಂದುಗೂಡಿಸಲು ಮೊಳಗಿದ ರಾಜಕೀಯ ಜಾಗೃತಿಯಿಂದ ಹಿಡಿದು, ಏಕೀಕರಣದ ನಂತರದ ವಾಸ್ತವದ ಸಂಘರ್ಷದವರೆಗೆ; ಗತವೈಭವದ ಕೊಂಡಾಟದಿಂದ ಹೊರಬಂದು ಕಠೋರ ಆತ್ಮವಿಮರ್ಶೆಯಲ್ಲಿ ತೊಡಗುವುದರಿಂದ ಹಿಡಿದು, ಸರ್ವರನ್ನೂ ಒಳಗೊಂಡ, ಬಹುತ್ವದ ನೆಲೆಯಲ್ಲಿ ನಿತ್ಯೋತ್ಸವವನ್ನು ಆಚರಿಸುವ ಪ್ರಬುದ್ಧತೆಯವರೆಗೆ- ಸಾಗಿಬಂದ ಸುದೀರ್ಘ ಹಾಗೂ ಸಂಕೀರ್ಣ ಪಯಣವನ್ನು ಐದು ಹಂತಗಳಲ್ಲಿ ಈ ಬರಹವು ಅನಾವರಣಗೊಳಿಸುತ್ತದೆ.

ಹಂತ 1: ಪ್ರೇಮದಿಂದ ಪೂಜೆಗೆ - ಅಸ್ಮಿತೆಯ ಭಾವನಾತ್ಮಕ ಅಡಿಪಾಯ

ಕನ್ನಡ ಪ್ರಜ್ಞೆಯ ಜಾಗೃತಿಯ ಮೊದಲ ಹಂತವು ನುಡಿಯ ಮೇಲಿನ ಸಹಜ ಪ್ರೇಮ ಮತ್ತು ಅದರ ಸೌಂದರ್ಯದ ಆರಾಧನೆಯಿಂದ ಆರಂಭವಾಗುತ್ತದೆ. ಆನಂದಕಂದರು ‘ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು!’ ಎಂದು ಹಾಡಿದಾಗ, ಇಲ್ಲಿ ಕನ್ನಡವು ವೀಣೆಯ ನಾದ, ಕೃಷ್ಣನ ಮುರಲಿಯ ಗಾನ, ಗಿಳಿಯ ಮೆಲುಮಾತಿನಂತಹ ನಿರ್ಮಲ ಸೌಂದರ್ಯಾನುಭೂತಿಯಾಗಿ ಮೈದಳೆಯುತ್ತದೆ.

ಇದು ಭಾಷೆಯ ಮಾಧುರ್ಯಕ್ಕೆ ಮನಸೋತ ಕವಿಪ್ರೇಮಿಯ ಉದ್ಗಾರವಾಗುತ್ತದೆ. 20ನೇ ಶತಮಾನದ ಆರಂಭದಲ್ಲಿ ಹಂಚಿಹೋಗಿದ್ದ ಕನ್ನಡಿಗರನ್ನು ಒಂದುಗೂಡಿಸಲು, ಕೇವಲ ಈ ಭಾಷೆಯ ಸೌಂದರ್ಯ ಪ್ರೇಮವು ಸಾಕಾಗಲಿಲ್ಲ. ಆಗ ಕನ್ನಡ ಪ್ರಜ್ಞೆಯು ವಿಕಾಸಗೊಂಡು ಮುಂದಿನ ಹಂತವನ್ನು ತಲುಪಿತು; ರಾಷ್ಟ್ರಕವಿ ಗೋವಿಂದ ಪೈಗಳು ಮತ್ತು ಹುಯಿಲಗೋಳ ನಾರಾಯಣರಾಯರು ಈ ಪ್ರೇಮವನ್ನು ‘ಪೂಜೆ’ಯ ಸ್ಥಾಯಿಗೆ ಏರಿಸಿದರು. ಪೈಗಳು ತಮ್ಮ ’ಕನ್ನಡಿಗರ ತಾಯಿ’ ಕವಿತೆಯಲ್ಲಿ ನಾಡನ್ನು ‘ಜನ್ಮದಾತೆ’ಯಾಗಿಯೂ, ನುಡಿಯನ್ನು ‘ತಾಯಿ’ಯಾಗಿಯೂ ದೈವೀಕರಿಸಿದರು.

ಹೀಗೆ ಜನ್ಮದಾತೆ, ಮಾತೆ, ಜನನಿ, ತನುಜಾತೆ, ತಾಯಿ ಎಂದು ಕರೆದುಕೊಳ್ಳುವ ಮೂಲಕ ನಾಡು-ನುಡಿಯೊಂದಿಗಿರುವ ಕರುಳುಬಳ್ಳಿಯ ಸಂಬಂಧವನ್ನು ಪ್ರತಿಪಾದಿಸಿದರು.

ಆನಂದಕಂದರ ಗಿಳಿ-ಕೋಗಿಲೆಗಳ ಜಾಗದಲ್ಲಿ, ಗೋವಿಂದ ಪೈಗಳು ಮತ್ತು ಹುಯಿಲಗೋಳ ನಾರಾಯಣರಾಯರು ಶಾತವಾಹನ, ಚಾಲುಕ್ಯ, ಹೊಯ್ಸಳರಂತಹ ರಾಜವಂಶಗಳನ್ನು; ಪಂಪ, ರನ್ನ, ಜಕ್ಕಣರಂತಹ ಕಲಾಶಿಲ್ಪಿಗಳನ್ನು; ರಾಮ, ಹನುಮರಂತಹ ಪೌರಾಣಿಕ ವ್ಯಕ್ತಿತ್ವಗಳನ್ನು ತಂದು ನಿಲ್ಲಿಸಿದರು. ‘ರಾಜನ್ಯರಿಪು ಪರಶುರಾಮನಮ್ಮನ ನಾಡು’ (ಹುಯಿಲಗೋಳ) ಮತ್ತು ‘ತಾಯೆ ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ’ (ಪೈ) ಎಂಬಂತಹ ಸಾಲುಗಳು ನಾಡಿಗೊಂದು ಅಖಂಡ ಮತ್ತು ವೈಭವಪೂರ್ಣ ಚಾರಿತ್ರಿಕ ಪರಂಪರೆಯೊಂದನ್ನು ಕಟ್ಟಿಕೊಟ್ಟವು.

ಈ ವೈಭವೀಕರಣವು ಆ ಕಾಲದ ಐತಿಹಾಸಿಕ ಅಗತ್ಯವಾಗಿತ್ತು. ಅದು ಕನ್ನಡಿಗರಲ್ಲಿ ‘ನಮಗೊಂದು ಶ್ರೇಷ್ಠ ಇತಿಹಾಸವಿದೆ, ನಾವೆಲ್ಲರೂ ಒಂದು’ ಎಂಬ ಸ್ವಾಭಿಮಾನವನ್ನು ಜಾಗೃತಗೊಳಿಸಿ, ಸಾಮೂಹಿಕ ಅಸ್ಮಿತೆಯನ್ನು ರೂಪಿಸಲು ಭದ್ರ ಬುನಾದಿ ಹಾಕಿತು.

ಈ ಐತಿಹಾಸಿಕ ಪರಂಪರೆಯನ್ನು ಪೂಜಿಸುವ, ನಾಡಿನ ಸಾಂಸ್ಕೃತಿಕ ಮತ್ತು ತಾತ್ವಿಕ ಶ್ರೇಷ್ಠತೆಯನ್ನು ಸಂಭ್ರಮಿಸುವ ಪ್ರಜ್ಞೆಯು ಮತ್ತಷ್ಟು ವಿಸ್ತಾರಗೊಂಡು, ಹಲವು ಕವಿಗಳಲ್ಲಿ ಸಮಗ್ರ ರೂಪವನ್ನು ಪಡೆಯಿತು. ಈ ನಿಟ್ಟಿನಲ್ಲಿ, ಚೆನ್ನವೀರ ಕಣವಿಯವರ ‘ವಿಶ್ವಭಾರತಿಗೆ ಕನ್ನಡದಾರತಿ’ ಕವಿತೆಯು, ಗೋವಿಂದ ಪೈ ಮತ್ತು ಹುಯಿಲಗೋಳರು ಆರಂಭಿಸಿದ ನಾಡಿನ ವೈಭವೀಕರಣದ ಪರಂಪರೆಯನ್ನು ವ್ಯವಸ್ಥಿತವಾಗಿ ಮುಂದುವರಿಸುತ್ತದೆ.

ರಾಜಮನೆತನಗಳು, ಮತ-ಧರ್ಮ ಸ್ಥಾಪಕರು, ಶರಣ-ದಾಸರು, ಚಾರಿತ್ರಿಕ ಮತ್ತು ಸಾಹಿತ್ಯಕ ಮಹಿಳೆಯರು(ಈ ವೈಶಿಷ್ಟ್ಯವು ಈ ಬರಹದಲ್ಲಿ ವಿಶ್ಲೇಷಿಸಲಾದ ಉಳಿದ ಪದ್ಯಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವುದಿಲ್ಲ) ಮತ್ತು ಕವಿಶ್ರೇಷ್ಠರವರೆಗಿನ ನಾಡಿನ ಸಮಗ್ರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪಟ್ಟಿಮಾಡುವ ಮೂಲಕ, ಈ ಕವಿತೆಯು ಕನ್ನಡ ಪ್ರಜ್ಞೆಯ ಬೇರುಗಳನ್ನು ಪೂಜಿಸುವ ಭಾವವನ್ನು ಪರಾಕಾಷ್ಠೆಗೆ ಕೊಂಡೊಯ್ಯುತ್ತದೆ. ಆದರೆ ಇದರ ನಿಜವಾದ ಮಹತ್ವವಿರುವುದು, ‘ವಿಶ್ವಭಾರತಿಗೆ ಕನ್ನಡದಾರತಿ’ ಎಂಬ ಶೀರ್ಷಿಕೆ ಮತ್ತು ಅಂತಿಮ ಸಾಲುಗಳಲ್ಲಿ ವ್ಯಕ್ತವಾಗುವ ಸಮನ್ವಯ ದೃಷ್ಟಿಯಲ್ಲಿ. ಇದು ಕನ್ನಡದ ಅಸ್ಮಿತೆಯು ಸಂಕುಚಿತ ಪ್ರಾದೇಶಿಕವಾದವಲ್ಲ, ಬದಲಿಗೆ ಅದು ವಿಶಾಲ ರಾಷ್ಟ್ರೀಯ ಪ್ರಜ್ಞೆಗೆ ಸಲ್ಲಿಸುವ ಒಂದು ಗೌರವಯುತ ಕೊಡುಗೆ ಎಂಬುದನ್ನು ಸಾರುತ್ತದೆ.

ಈ ಹಂತದ ಪರಿಪೂರ್ಣ ಅಭಿವ್ಯಕ್ತಿಯೇ ಕುವೆಂಪು ಅವರ ನಾಡಗೀತೆ. ಇಲ್ಲಿ ಕರ್ನಾಟಕವು ಕೇವಲ ಸುಂದರ ನಾಡಲ್ಲ, ಅದು ‘ಜಯ ಭಾರತ ಜನನಿಯ ತನುಜಾತೆ’. ಈ ಒಂದೇ ಸಾಲು ಕನ್ನಡ ಅಸ್ಮಿತೆಯನ್ನು ರಾಷ್ಟ್ರೀಯ ಪ್ರಜ್ಞೆಯೊಂದಿಗೆ ಬೆಸೆದು ಅದಕ್ಕೊಂದು ಉದಾತ್ತತೆಯನ್ನು ನೀಡುತ್ತದೆ. ಗೋವಿಂದ ಪೈಗಳು ನಾಡನ್ನು ‘ವಿದ್ಯಾರಣ್ಯರ ಹೊನ್ನಗನಿ’ ಎಂದರೆ, ಕುವೆಂಪು ಅದನ್ನು ‘ಭೂದೇವಿಯ ಮಕುಟದ ನವಮಣಿಯೆ, ಗಂಧದ ಚಂದದ ಹೊನ್ನಿನ ಗಣಿಯೆ’ ಎಂದು ಕರೆದು, ಪ್ರಕೃತಿ ಮತ್ತು ಸಂಪತ್ತಿನ ದೈವೀಕರಣ ಮಾಡುತ್ತಾರೆ. ‘ಕಪಿಲ ಪತಂಜಲ ಗೌತಮ ಜಿನನುತ’ ಹಾಗೂ ‘ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರ ಮಧ್ವರ ದಿವ್ಯಾರಣ್ಯ’ ಎಂಬ ಸಾಲುಗಳ ಮೂಲಕ, ನಾಡಿನ ತಾತ್ವಿಕ ಮತ್ತು ಧಾರ್ಮಿಕ ಪರಂಪರೆಯ ಶ್ರೇಷ್ಠತೆಯನ್ನು ಎತ್ತಿ ಹಿಡಿದು, ಕನ್ನಡ ಪ್ರಜ್ಞೆಗೆ ಒಂದು ಬೌದ್ಧಿಕ ಮತ್ತು ಆಧ್ಯಾತ್ಮಿಕ ಬುನಾದಿಯನ್ನು ಹಾಕಿಕೊಡುತ್ತಾರೆ.

ಹಂತ 2: ಜಾಗೃತಿಯ ಕಹಳೆ - ಏಕೀಕರಣದ ರಾಜಕೀಯ ಹೋರಾಟ

ಭಾವನಾತ್ಮಕ ನೆಲೆಗಟ್ಟು ಗಟ್ಟಿಯಾದ ಬಳಿಕ, ಕನ್ನಡ ಚೇತನವು ಏಕೀಕರಣದ ರಾಜಕೀಯ ಗುರಿಯತ್ತ ಸಾಗಿತು. ಹುಯಿಲಗೋಳರ ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಗೀತೆಯು ಕೇವಲ ಹೊಗಳಿಕೆಯ ಹಾಡಾಗಿ ಉಳಿಯದೆ, ಕರ್ನಾಟಕ ಏಕೀಕರಣ ಚಳವಳಿಯ ಪ್ರೇರಕ ಶಕ್ತಿಯಾಯಿತು. ಇದರಲ್ಲಿ ಬರುವ ‘ಬದುಕು ಬಲುವಿನ ನಿಧಿಯು ಸದಭಿಮಾನದ ಗೂಡು’ ಎಂಬ ಸಾಲು, ಏಕೀಕರಣದಿಂದಾಗುವ ಪ್ರಯೋಜನಗಳನ್ನು ಸಾರುವ ಸ್ಪಷ್ಟ ರಾಜಕೀಯ ಘೋಷಣೆಯಾಗಿತ್ತು.

ಆದರೆ, ಈ ಹೋರಾಟದ ಬಹುಮುಖಿ ಭಾವನೆಗಳು ಬೇರೆ ಬೇರೆ ಕವಿಗಳಲ್ಲಿ ವಿಭಿನ್ನವಾಗಿ ವ್ಯಕ್ತಗೊಂಡವು. ಹುಯಿಲಗೋಳರದ್ದು ಭವಿಷ್ಯದ ಕನಸಿಗೆ ನೀಡಿದ ಆಹ್ವಾನವಾದರೆ, ಮಾಸ್ತಿಯವರ ‘ಕನ್ನಡನಾಡಿನ ಸ್ಥಿತಿಯನ್ನು ನೆನೆದು’ ಕವಿತೆಯು ವರ್ತಮಾನದ ನೋವಿನ ಆರ್ತನಾದವಾಗಿತ್ತು. ‘ಹರಿದು ತುಂಡಾಗಿಹುದು ಇಂದು ಕನ್ನಡನಾಡು’ ಎಂದು ಮರುಗುತ್ತಾ, ‘ಸ್ವಾಮಿ ನನ್ನೂರು ಧಾರವಾಡ, ನನ್ನೂರು ಮೈಸೂರು’ ಎನ್ನುವ ಪ್ರತ್ಯೇಕತಾವಾದವೇ ಕನ್ನಡಿಗರ ನಡುವಿನ ನಿಜವಾದ ಸವಾಲೆಂಬುದನ್ನು ಅವರು ಮನಗಾಣಿಸಿದರು.

ಈ ಜಾಗೃತಿಗೆ ರೊಚ್ಚಿನ ಹಾಗೂ ಆಧ್ಯಾತ್ಮಿಕ ಆಯಾಮವನ್ನು ನೀಡಿದವರು ಬೇಂದ್ರೆ ಮತ್ತು ಕುವೆಂಪು. ದ.ರಾ. ಬೇಂದ್ರೆಯವರು ‘ಏಳು ಶೂರರ ಖಣೀ, ಏಳು ಶೂರರ ರಾಣಿ’ ಎಂದು ನಾಡನ್ನು ನಿದ್ದೆಯಿಂದ ಏಳಬೇಕಾದ ರಾಣಿಯಾಗಿ ಚಿತ್ರಿಸಿದರು. ‘ಸತ್ತಿರುವುದೆದೆಸೇರು, ಸುತ್ತಿರುವ ವಿಷ ಹೀರು’ ಎಂದು ಜಡತ್ವವನ್ನು ಕಿತ್ತೊಗೆಯಲು ಕರೆನೀಡಿದರು.

ಇದಕ್ಕೆ ಪ್ರತಿಯಾಗಿ, ಕುವೆಂಪು ಅವರ ‘ಕನ್ನಡ ಡಿಂಡಿಮ’ ಈ ಜಾಗೃತಿಯನ್ನು ಒಂದು ಸಾಮೂಹಿಕ ಕರೆಯ ಹಂತಕ್ಕೆ ಕೊಂಡೊಯ್ಯುತ್ತದೆ. ‘ಬಾರಿಸು ಕನ್ನಡ ಡಿಂಡಿಮವ’ ಎಂಬುದು ಬೇಂದ್ರೆಯವರ ‘ಏಳು’ ಎಂಬ ಕೋರಿಕೆಗಿಂತ ಹೆಚ್ಚು ಆದೇಶಾತ್ಮಕವಾಗಿದೆ. ಅವರ ದೃಷ್ಟಿಯಲ್ಲಿ ಕರ್ನಾಟಕವು ಕೇವಲ ರಾಣಿಯಲ್ಲ, ಅದು ‘ಹೃದಯಶಿವ’. ಶಿವನಂತೆ ತಾಯ್ನಾಡು ಕೂಡ ‘ಶಿವೇತರ’ ವಾದುದನ್ನು(ಅಮಂಗಳಕರವಾದುದನ್ನು) ನಾಶಮಾಡಿ, ‘ಸರ್ವೋದಯ’ದ ಮಂಗಳವನ್ನು ಸ್ಥಾಪಿಸಬೇಕು. ಈ ಮೂಲಕ ಕುವೆಂಪು ಅವರು ಚಳವಳಿಗೆ ಕೇವಲ ರಾಜಕೀಯ ಆಯಾಮವಷ್ಟೇ ಅಲ್ಲದೆ, ಒಂದು ನೈತಿಕ ಮತ್ತು ತಾತ್ವಿಕ ಬಲವನ್ನು ತುಂಬಿದರು.

ನಮ್ಮ ‘ನಾಡಗೀತೆ’ಯು ಈ ಜಾಗೃತಿಯನ್ನು ತನ್ನ ಆಶಯದಲ್ಲಿ ಸ್ಥಾಯಿಗೊಳಿಸುತ್ತದೆ. ‘ತೈಲಪ ಹೊಯ್ಸಳರಾಳಿದ ನಾಡೇ, ಡಂಕಣ ಜಕಣರ ನಚ್ಚಿನ ಬೀಡೆ’ ಎಂದು ಹಾಡುವ ಮೂಲಕ, ಅದು ಹರಿದು ಹಂಚಿಹೋದ ಪ್ರದೇಶಗಳ ಐತಿಹಾಸಿಕ ಏಕತೆಯನ್ನು ನೆನಪಿಸುತ್ತದೆ. ‘ಕೃಷ್ಣ ಶರಾವತಿ ತುಂಗ, ಕಾವೇರಿಯ ವರ ರಂಗ’ ಎಂದು ನದಿಗಳನ್ನು ಹೆಸರಿಸುವ ಮೂಲಕ, ನಾಡಿನ ಭೌಗೋಳಿಕ ಸಮಗ್ರತೆಯ ಕಲ್ಪನೆಯನ್ನು ಜನಮಾನಸದಲ್ಲಿ ಸ್ಥಾಪಿಸುತ್ತದೆ. ಇದು ಕೇವಲ ಹೊಗಳಿಕೆಯಲ್ಲ, ಬದಲಾಗಿ ಏಕೀಕರಣ ಚಳವಳಿಗೆ ಬೇಕಾದ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಭೂಮಿಕೆಯನ್ನು ಸಿದ್ಧಪಡಿಸುವ ಕಾರ್ಯತಂತ್ರವೂ ಹೌದು.

share
ಡಾ. ರವಿ ಎಂ ಸಿದ್ಲಿಪುರ
ಡಾ. ರವಿ ಎಂ ಸಿದ್ಲಿಪುರ
Next Story
X