Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕನ್ನಡ ಕಾವ್ಯ: ನುಡಿ ನಾಡು ನಡಿಗೆ

ಕನ್ನಡ ಕಾವ್ಯ: ನುಡಿ ನಾಡು ನಡಿಗೆ

ಡಾ. ರವಿ ಎಂ ಸಿದ್ಲಿಪುರಡಾ. ರವಿ ಎಂ ಸಿದ್ಲಿಪುರ4 Nov 2025 12:22 PM IST
share
ಕನ್ನಡ ಕಾವ್ಯ: ನುಡಿ ನಾಡು ನಡಿಗೆ

ಭಾಗ - 2

ಹಂತ 3: ನವನಿರ್ಮಾಣದ ಕನಸು ಮತ್ತು ವಾಸ್ತವದ ಸಂಘರ್ಷ

ಏಕೀಕರಣದ ನಂತರ ‘ಹೆಸರಾಯಿತು ಕರ್ನಾಟಕ, ಮುಂದೇನು?’ ಎಂಬ ಪ್ರಶ್ನೆ ಎದುರಾದಾಗ, ನಾಡು ಕಟ್ಟುವ ಬಗೆಗೆ ವಿಭಿನ್ನ ದೃಷ್ಟಿಕೋನಗಳು ಮೂಡಿದವು. ಚೆನ್ನವೀರ ಕಣವಿಯವರು ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂದು ಸೌಮ್ಯ, ರಚನಾತ್ಮಕ ಮಾರ್ಗವನ್ನು ಸೂಚಿಸಿದರು. ಆದರೆ, ಎಂ. ಗೋಪಾಲಕೃಷ್ಣ ಅಡಿಗರು ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಅಡಿಗರು ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನೇ ಕೆಡವಿ ‘ಹೊಸ ನಾಡೊಂದನ್ನು’ ಕಟ್ಟಲು ಸಂಕಲ್ಪ ತೊಡುತ್ತಾರೆ. ಅವರ ದೃಷ್ಟಿಯಲ್ಲಿ, ನಿಜವಾದ ಶತ್ರುಗಳು ಹೊರಗಿಲ್ಲ; ಬದಲಾಗಿ ‘ಜಾತಿ ಮತ ಭೇದಗಳ ಕಂದಕ’, ‘ರೂಢಿರಾಕ್ಷಸ’ ಮತ್ತು ‘ಅನ್ನದ ಅನ್ಯಾಯದ ದಾವಾಗ್ನಿ’ಯ ರೂಪದಲ್ಲಿ ನಮ್ಮೊಳಗೇ ಇದ್ದಾರೆ. ‘ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು’ ಎಂಬ ಅವರ ಸಾಲುಗಳು, ನಾಡಿನ ವೈಭವದ ಕಥನಗಳಿಗೆ ಪ್ರತಿಯಾಗಿ, ಸಾಮಾಜಿಕ ನ್ಯಾಯವಿಲ್ಲದ ಸ್ವಾಭಿಮಾನಕ್ಕೆ ಅರ್ಥವಿಲ್ಲವೆಂದು ನೇರವಾಗಿ ಸಾರುತ್ತವೆ. ಇದು ಕನ್ನಡ ಪ್ರಜ್ಞೆಯು ತನ್ನದೇ ಕಠೋರ ವಾಸ್ತವಕ್ಕೆ ಮುಖಾಮುಖಿಯಾದ ಆತ್ಮಾವಲೋಕನದ ಕ್ಷಣವಾಗಿತ್ತು.

ಹಂತ 4: ಆತ್ಮವಿಮರ್ಶೆ ಮತ್ತು ಅಸ್ಮಿತೆಯ ಮರುವ್ಯಾಖ್ಯಾನ

ಅಡಿಗರು ತೆರೆದಿಟ್ಟ ಆತ್ಮವಿಮರ್ಶೆಯ ಹಾದಿಯಲ್ಲಿ ಸಾಗಿದ ಕನ್ನಡ ಪ್ರಜ್ಞೆಯು ಇನ್ನಷ್ಟು ಪ್ರಬುದ್ಧವಾಯಿತು. ಈ ಹಂತದಲ್ಲಿ, ಕನ್ನಡದ ದೈವೀಕರಣ ಮತ್ತು ಶಿಷ್ಟ ಪರಂಪರೆಯ ಪರಿಕಲ್ಪನೆಗಳು ಪ್ರಶ್ನೆಗೊಳಗಾದವು.

ಜಿ.ಪಿ. ರಾಜರತ್ನಂ ಅವರ ‘ಕನ್ನಡ್ ಪದಗೊಳ್’ ಈ ನಿಟ್ಟಿನಲ್ಲಿ ಒಂದು ಮಹತ್ವದ ತಿರುವನ್ನು ನೀಡಿತು. ಇಲ್ಲಿ ಕನ್ನಡ ಪ್ರೇಮವು ಕೇವಲ ಪಂಡಿತರ ಗಂಭೀರ ಸ್ವತ್ತಾಗಿ ಉಳಿಯದೆ, ಹೆಂಡ-ಹೆಂಡತಿಯನ್ನೂ ಬಿಟ್ಟುಕೊಡಲು ಸಿದ್ಧನಿರುವ ಸಾಮಾನ್ಯ ಕುಡುಕನೊಬ್ಬನ ಸ್ವಾಭಿಮಾನದ ದನಿಯಾಗಿ ಮಾರ್ಪಟ್ಟಿತು. ‘ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ... ಮೂಗ್ನಲ್ ಕನ್ನಡ್ ಪದವಾಡ್ತೀನಿ!’ ಎನ್ನುವ ಅವನ ಹಠ, ಕನ್ನಡವನ್ನು ಪಾಂಡಿತ್ಯದ ಪೀಠದಿಂದ ಕೆಳಗಿಳಿಸಿ, ಜನಸಾಮಾನ್ಯರ ಜೀವಂತ ಅನುಭವವಾಗಿಸಿತು.

ಈ ಮರುವ್ಯಾಖ್ಯಾನಕ್ಕೆ ಅಡಿಗರು ತಮ್ಮ ‘ಕನ್ನಡವೆಂದರೆ’ ಕವಿತೆಯಲ್ಲಿ ತಾತ್ವಿಕ ಚೌಕಟ್ಟನ್ನು ಒದಗಿಸಿದರು. ‘ಕನ್ನಡವೆಂದರೆ ತಾಯಿಯೆ, ದೇವಿಯೆ?’ ಎಂದು ಕೇಳುವ ಮೂಲಕ, ಅವರು ಗೋವಿಂದ ಪೈಗಳ ದೈವೀಕರಣದ ಕಲ್ಪನೆಯನ್ನು ನೇರವಾಗಿ ಪ್ರಶ್ನಿಸಿದರು. ಕನ್ನಡವೆಂದರೆ ಕೇವಲ ‘ಪಂಪ ಕುಮಾರವ್ಯಾಸರ’ ಭಾಷೆಯಲ್ಲ, ಅದು ‘ತಿಮ್ಮನ, ಬೋರನ, ಈರಗಮಾರರ ಹೃದಯದ ಸಹಜ ತರಂಗ’ ಹಾಗೂ ‘ಜನಮನದೊಳಗೂಡಿ ತುಡಿತ ಕಡಿತಗಳ ಪ್ರತಿಕೃತಿ’ ಎಂದು ಪ್ರತಿಪಾದಿಸಿದರು.

ಈ ಮೂಲಕ, ಕುವೆಂಪು ಅವರ ನಾಡಗೀತೆಯಲ್ಲಿ ವರ್ಣಿತವಾದ ಶಿಷ್ಟ, ಪೌರಾಣಿಕ, ಚಾರಿತ್ರಿಕ ಪರಂಪರೆಗೆ ಪ್ರತಿಯಾಗಿ, ಜನಪದರ ಮತ್ತು ಅಂಚಿನ ಸಮುದಾಯಗಳ ಜೀವಂತ ಭಾಷೆಯಾಗಿ ಕನ್ನಡವನ್ನು ಪುನರ್‌ಸ್ಥಾಪಿಸುವ ಪ್ರಯತ್ನ ನಡೆಯಿತು.

ಹೀಗೆ, ಈ ಹಂತದಲ್ಲಿ ಕನ್ನಡ ಪ್ರಜ್ಞೆಯು ಕೇವಲ ಗತವೈಭವವನ್ನು ಕೊಂಡಾಡುವುದನ್ನು ನಿಲ್ಲಿಸಿ, ತನ್ನ ಆತ್ಮವಿಸ್ಮತಿಯ ಕಟು ವಾಸ್ತವವನ್ನು ಎದುರಿಸಿತು. ‘ಪರರ ನುಡಿಗೆ ಮಿಡುಕುವ’(ಕನ್ನಡಿಗರ ತಾಯಿ, ಪೈ) ಮತ್ತು ‘ಹೊರಮನೆಯ ಬಾಣಸಿಗರು’ (ನಾಡಿನ ಹಾಡು, ಗೋಕಾಕ್) ಆಗಿ ಬದುಕುತ್ತಿರುವ ತನ್ನ ದ್ವಂದ್ವ ಸ್ಥಿತಿಯನ್ನು ಇದು ಮುಖಾಮುಖಿಯಾಗಿಸಿತು.

ಹಂತ 5: ಸಮನ್ವಯ ಮತ್ತು ನಿತ್ಯೋತ್ಸವದ ದೃಷ್ಟಿ

ಪ್ರೇಮ, ಪೂಜೆ, ಹೋರಾಟ ಮತ್ತು ಆತ್ಮವಿಮರ್ಶೆಯ ಹಂತಗಳನ್ನು ದಾಟಿ ಬಂದ ಕನ್ನಡ ಪ್ರಜ್ಞೆಯು, ಅಂತಿಮವಾಗಿ ಒಂದು ಪ್ರಬುದ್ಧ ಸಮನ್ವಯದ ನೆಲೆಯನ್ನು ತಲುಪುತ್ತದೆ. ಕೆ.ಎಸ್. ನಿಸಾರ್ ಅಹಮದ್ ಅವರ ‘ನಿತ್ಯೋತ್ಸವ’ ಕವಿತೆಯು ಈ ಸಮನ್ವಯದ ಶ್ರೇಷ್ಠ ಅಭಿವ್ಯಕ್ತಿಯಾಗಿದೆ. ಇದರಲ್ಲಿ ಅವರು ನಾಡಿನ ಪ್ರಕೃತಿ ಸೌಂದರ್ಯ(‘ಜೋಗದ ಸಿರಿ’), ಇತಿಹಾಸದ ಹೆಗ್ಗುರುತು (‘ಶಾಸನಗಳ ಸಾಲು’) ಮತ್ತು ಸಾಂಸ್ಕೃತಿಕ ಹಿರಿಮೆಯನ್ನು ಒಂದೆಡೆ ಸೇರಿಸುತ್ತಾರೆ. ಆದರೆ, ಅವನ್ನು ಕೇವಲ ಸ್ಮರಣೀಯ ಸಂಗತಿಗಳಾಗಿಸದೆ, ನಿರಂತರವಾಗಿ ಆಚರಿಸಬೇಕಾದ ‘ನಿತ್ಯೋತ್ಸವ’ವನ್ನಾಗಿ ಪರಿವರ್ತಿಸುತ್ತಾರೆ. ‘ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ’ ಎಂಬ ಸಾಲುಗಳು, ಭೇದಗಳನ್ನು ಮೀರಿದ ಆಧುನಿಕ, ಜಾತ್ಯತೀತ ಕರ್ನಾಟಕದ ಆದರ್ಶವನ್ನು ಬಿಂಬಿಸುತ್ತವೆ.

ಅಚ್ಚರಿಯ ಸಂಗತಿಯೆಂದರೆ, ಈ ಆಧುನಿಕ ಆದರ್ಶದ ಬೀಜವು ದಶಕಗಳ ಹಿಂದೆಯೇ ಕುವೆಂಪು ಅವರ ನಾಡಗೀತೆಯಲ್ಲಿ ಬಿತ್ತಲ್ಪಟ್ಟಿತ್ತು. ಕುವೆಂಪು ಅವರು ನಾಡನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಕರೆದಾಗಲೇ ಈ ಸಮನ್ವಯದ ದೃಷ್ಟಿಗೆ ಅಡಿಪಾಯ ಹಾಕಿದ್ದರು.

‘ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ’ ಎಂದು ಸ್ಪಷ್ಟವಾಗಿ ನಮೂದಿಸುವ ಮೂಲಕ, ಅವರು ಎಲ್ಲ ಧರ್ಮೀಯರನ್ನೂ ಒಳಗೊಳ್ಳುವ ಬಹುತ್ವದ ಕರ್ನಾಟಕದ ಕನಸನ್ನು ಕಂಡಿದ್ದರು. ‘ನಾನಕ ರಮಾನಂದ ಕಬೀರರ’ ಹೆಸರನ್ನು ಸ್ಮರಿಸುವ ಮೂಲಕ, ಕನ್ನಡ ಪ್ರಜ್ಞೆಯು ಕೇವಲ ಪ್ರಾದೇಶಿಕವಲ್ಲ, ಅದೊಂದು ರಾಷ್ಟ್ರೀಯ, ಸೌಹಾರ್ದಯುತ ಪ್ರಜ್ಞೆ ಎಂಬುದನ್ನು ಸಾರಿದ್ದರು. ಹೀಗಾಗಿ, ನಿಸಾರ್ ಅಹಮದರ ‘ನಿತ್ಯೋತ್ಸವ’ವು ಕುವೆಂಪು ಅವರ ‘ವಿಶ್ವಮಾನವ’ ಸಂದೇಶದ ಮತ್ತು ’ಸರ್ವಜನಾಂಗದ ಶಾಂತಿಯ ತೋಟ’ದ ಸಹಜ, ಆಧುನಿಕ ವಿಸ್ತರಣೆಯಾಗಿದೆ.

ಜೀವಂತ ಚೇತನದ ನಿರಂತರ ಪಯಣ

ಕನ್ನಡ ನಾಡು-ನುಡಿಯ ಕಾವ್ಯ ಪರಂಪರೆಯು ಒಂದೇ ದಿಕ್ಕಿನಲ್ಲಿ ಹರಿಯುವ ಪ್ರವಾಹವಲ್ಲ; ಅದು ತನ್ನ ಕಾಲದ ಅಗತ್ಯಗಳಿಗೆ ತಕ್ಕಂತೆ ನಿರಂತರವಾಗಿ ರೂಪಾಂತರಗೊಳ್ಳುತ್ತಾ, ವಿಕಾಸ ಹೊಂದುತ್ತಾ ಬಂದಿರುವ ಒಂದು ಜೀವಂತ ಚೇತನದ ಪಯಣ. ಆನಂದಕಂದರ ವೈಯಕ್ತಿಕ ಪ್ರೇಮವು ಗೋವಿಂದ ಪೈಗಳಲ್ಲಿ ಐತಿಹಾಸಿಕ ಅಸ್ಮಿತೆಯಾಗಿ ರೂಪುಗೊಂಡರೆ; ಹುಯಿಲಗೋಳರ ರಾಜಕೀಯ ಘೋಷಣೆಯು ಮಾಸ್ತಿಯವರಲ್ಲಿ ಆರ್ತ ನೋವಿನ ಅಭಿವ್ಯಕ್ತಿಯಾಯಿತು; ಬೇಂದ್ರೆಯವರ ಜಾಗೃತಿಯ ಕರೆಯು ಕುವೆಂಪು ಅವರಲ್ಲಿ ಆಧ್ಯಾತ್ಮಿಕ ಆಜ್ಞೆಯಾಗಿ ಮೊಳಗಿತು; ಕಣವಿಯವರ ರಚನಾತ್ಮಕ ಚಿಂತನೆಗೆ ಅಡಿಗರ ಕ್ರಾಂತಿಕಾರಿ ಆಕ್ರೋಶವು ಪ್ರತಿವಾದವಾಗಿ ನಿಂತಿತು.

‘ಜಯ ಹೇ ಕರ್ನಾಟಕ ಮಾತೆ’ಯು ಈ ಪಯಣದಲ್ಲಿ ಕೇವಲ ಒಂದು ಮೈಲಿಗಲ್ಲಲ್ಲ; ಅದೊಂದು ಆಧಾರಸ್ತಂಭ ಮತ್ತು ಮಾರ್ಗದರ್ಶಿ ನಕ್ಷತ್ರ. ಅದು ನಾಡಿನ ವೈಭವವನ್ನು ಪೂಜಿಸುವ, ಏಕೀಕರಣಕ್ಕೆ ಜಾಗೃತಿ ಮೂಡಿಸುವ ಮತ್ತು ಸರ್ವರನ್ನೂ ಒಳಗೊಳ್ಳುವ ಸಮನ್ವಯದ ಆದರ್ಶವನ್ನು ಬಿತ್ತುವ ಬಹುಮುಖಿ ಕಾರ್ಯವನ್ನು ಏಕಕಾಲಕ್ಕೆ ನಿರ್ವಹಿಸುತ್ತದೆ.

ಕೆಲವು ಮಿತಿಗಳಾಚೆಗೆ, ಈ ಮಹಾನ್ ಪರಂಪರೆಯು ನಮಗೆ ನೀಡುವ ನಿಜವಾದ ಸ್ಫೂರ್ತಿಯೆಂದರೆ, ಕವಿಗಳು ತಮ್ಮ ಕಾಲದ ಬಿಕ್ಕಟ್ಟುಗಳಿಗೆ ಸ್ಪಂದಿಸಿದಂತೆ, ನಾವೂ ನಮ್ಮ ಕಾಲದ ಸವಾಲುಗಳಿಗೆ ಸೃಜನಶೀಲವಾಗಿ ಮತ್ತು ವಿಮರ್ಶಾತ್ಮಕವಾಗಿ ಮುಖಾಮುಖಿಯಾಗಬೇಕು. ಏಕೆಂದರೆ, ಜಾಗತೀಕರಣ, ತಂತ್ರಜ್ಞಾನ, ಪ್ರಾದೇಶಿಕ ಅಸಮತೋಲನ, ವಲಸೆ ಮತ್ತು ಸಾಮಾಜಿಕ ನ್ಯಾಯದಂತಹ ಇಂದಿನ ಸಂಕೀರ್ಣ ಪ್ರಶ್ನೆಗಳಿಗೆ, ಕೇವಲ ಹಳೆಯ ವೈಭವದ ಹಾಡುಗಳು ಉತ್ತರವಾಗಲಾರವು.

ತಾಳಿಕೋಟೆಯ ಸೋಲು ನಮ್ಮ ಇತಿಹಾಸದ ಕೊನೆಯಲ್ಲ; ‘ಸೋತು ನೀನೆ ಗೆದ್ದೆಯಲ್ಲ’(ಪೈ) ಎಂಬ ಛಲ ನಮ್ಮ ಚೈತನ್ಯ. ಈ ಮಹಾನ್ ಪರಂಪರೆಯು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ನಾವು ಕಟ್ಟಬೇಕಾದದ್ದು ಕೇವಲ ಭಾವನಾತ್ಮಕ ಘೋಷಣೆಗಳ ನಾಡನ್ನಲ್ಲ. ಬದಲಿಗೆ, ಜ್ಞಾನ, ವಿಜ್ಞಾನ ಮತ್ತು ಎಲ್ಲರನ್ನೂ ಒಳಗೊಳ್ಳುವ ಮಾನವೀಯತೆಯ ತಳಹದಿಯ ಮೇಲೆ ‘ಉಸಿರಾಗಲಿ ಕನ್ನಡ’ ಎಂಬ ಕನಸನ್ನು ನನಸು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಕವಿವಾಣಿಗಳೇ ಆ ದಿಟ್ಟ ಹೆಜ್ಜೆಗೆ ಬೇಕಾದ ಅನನ್ಯ ಸ್ಫೂರ್ತಿಯ ಸೆಲೆಯಾಗಿ ಸದಾ ನಮ್ಮನ್ನು ಮುನ್ನಡೆಸಲಿ.

share
ಡಾ. ರವಿ ಎಂ ಸಿದ್ಲಿಪುರ
ಡಾ. ರವಿ ಎಂ ಸಿದ್ಲಿಪುರ
Next Story
X