ಉತ್ತರ ಕರ್ನಾಟಕದ ಸಹ್ಯಾದ್ರಿ ‘ಕಪ್ಪತ್ತಗುಡ್ಡ’

ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ, ಆಯುರ್ವೇದದ ಸಸ್ಯಕಾಶಿ, ವನ್ಯಧಾಮ, ಅಪಾರ ಸಂಪತ್ತನ್ನು ಹೊಂದಿದ ‘ಕಪ್ಪತ್ತಗುಡ್ಡ’ ಇನ್ನು ಪರಿಸರ ಸೂಕ್ಷ್ಮ ವಲಯವಾಗಿದ್ದು, ಪರಿಸರವಾದಿ ಹಾಗೂ ಪರಿಸರ ಪ್ರೇಮಿಗಳಿಗೆ ಸಂತಸ ಮೂಡಿಸಿದೆ.
ಏಶ್ಯ ಖಂಡದಲ್ಲಿಯೇ ಅತಿಹೆಚ್ಚು ಗಾಳಿ ಬೀಸುವ ಪರ್ವತಗಳನ್ನು ಹೊಂದಿರುವ ಹಾಗೂ ದೇಶದಲ್ಲಿಯೇ ಶುದ್ಧಗಾಳಿಗೆ ಹೆಸರುವಾಸಿಯಾಗಿರುವ ಕಪ್ಪತ್ತಗುಡ್ಡ ವನ್ಯಧಾಮದಲ್ಲಿ ಅಪರೂಪದ ವನ್ಯಜೀವಿಗಳು ಹಾಗೂ ನೂರಾರು ಹೆಕ್ಟೇರ್ ಪ್ರದೇಶದಲ್ಲಿ 500ಕ್ಕೂ ಹೆಚ್ಚು ವಿವಿಧ ಅಪರೂಪದ ಔಷಧೀಯ ಸಸ್ಯಗಳ ಸಂಗ್ರಹಣೆಗೆ ಮೀಸಲಿಡಲಾಗಿದೆ.
ಕಪ್ಪತ್ತಗುಡ್ಡ ಮುಂಡರಗಿ ತಾಲೂಕಿನ ಸಿಂಗಟಾಲೂರಿನಿಂದ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದವರೆಗೆ ಹರಡಿದೆ. ಕಪ್ಪತ್ತಗುಡ್ಡ ವನ್ಯಜೀವಿಧಾಮದ 322 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ನಿಗದಿಪಡಿಸಿ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ಕರಡು ಅಧಿಸೂಚನೆ ಹೊರಡಿಸಿದೆ. ಆಕ್ಷೇಪ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿತ್ತು, ಬಳಿಕ ಅಂತಿಮ ಅಧಿಸೂಚನೆ ಹೊರಡಿಸಿದೆ.
ಪರಿಸರ ಸೂಕ್ಷ್ಮಪ್ರದೇಶದಲ್ಲಿ ಕಂದಾಯ ಗ್ರಾಮಗಳ 298.89 ಚದರ ಕಿ.ಮೀ. ಹಾಗೂ ಅಧಿಸೂಚಿತ ಅರಣ್ಯ ಪ್ರದೇಶಗಳ 23.80 ಕಿ.ಮೀ. ಸೇರಿವೆ. ಈ ಪ್ರದೇಶದಲ್ಲಿ 62 ಗ್ರಾಮಗಳು ಬರಲಿವೆ. ಪರಿಸರ ಸೂಕ್ಷ್ಮ ಪ್ರದೇಶವನ್ನು ಕನಿಷ್ಠ ಒಂದು ಕಿ.ಮೀ. ಯಿಂದ ಗರಿಷ್ಠ 4.30 ಕಿ.ಮೀ. ವರೆಗೆ ಗುರುತಿಸಲಾಗಿದೆ. ಉತ್ತರ ದಿಕ್ಕಿನಲ್ಲಿ 1 ಕಿ.ಮೀ.ಯಿಂದ 3.25 ಕಿ.ಮೀ ವರೆಗೆ, ಪಶ್ಚಿಮ ದಿಕ್ಕಿನಲ್ಲಿ 1 ಕಿ.ಮೀ.ಯಿಂದ 4.30 ಕಿ.ಮೀ ವರೆಗೆ, ವಾಯವ್ಯ ದಿಕ್ಕಿನಲ್ಲಿ 1.96 ಕಿ.ಮೀ. ವರೆಗೆ ಪರಿಸರ ಸೂಕ್ಷ್ಮ ಪ್ರದೇಶವೆಂದು ನಿಗದಿಪಡಿಸಲಾಗಿದ್ದು, ಉಳಿದ ದಿಕ್ಕುಗಳಲ್ಲಿ 1 ಕಿ.ಮೀ. ಮಾತ್ರ ಇದೆ. ಇದರಿಂದ ಗಣಿಗಾರಿಕೆ, ಕಲ್ಲು ಮತ್ತು ಮರಳು ಗಣಿಗಾರಿಕೆಯನ್ನು ಪೂರ್ಣ ನಿಷೇಧಿಸಲಾಗುತ್ತದೆ ಅಲ್ಲದೆ ಹೋಟೆಲ್, ರೆಸಾರ್ಟ್ ಸೇರಿದಂತೆ ವನ್ಯಜೀವಿಗಳಿಗೆ ತೊಂದರೆಯಾಗುವ ಎಲ್ಲ ಚಟುವಟಿಕೆಗಳಿಗೆ ಕಡಿವಾಣ ಬಿದ್ದಂತಾಗಿದೆ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿನ ಚಟುವಟಿಕೆಗಳನ್ನು ನಿಯಂತ್ರಿಸಲಾಗುತ್ತದೆ ಮತ್ತು ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲಾಗುತ್ತದೆ.
ಹಚ್ಚಹಸಿರಿನಿಂದ ಕಂಗೊಳಿಸುವ ಸ್ವಚ್ಛಂದ ವಾತಾವರಣ ಕಪ್ಪತ್ತಗುಡ್ಡ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಅರಣ್ಯ ಇಲಾಖೆಯಿಂದ ಪ್ರವಾಸಿಗರಿಗೆ ಟ್ರೆಕ್ಕಿಂಗ್ ಅವಕಾಶ ಕಲ್ಪಿಸಲಾಗಿದೆ ಹಾಗೂ ಸಾಕಷ್ಟು ಸೌಲಭ್ಯ ನೀಡಲಾಗಿದೆ.
ಕಪ್ಪತ್ತಗುಡ್ಡ ಒಡಲಿನಲ್ಲಿ ಹಾಗೂ ಸುತ್ತಮುತ್ತ ಹೆಮಟೈಟ್, ಲಿಮೋನೈಟ್, ತಾಮ್ರ, ಮ್ಯಾಂಗನೀಸ್ ಮತ್ತು ಚಿನ್ನ ಸೇರಿದಂತೆ ಹಲವು ಖನಿಜ ಸಂಪನ್ಮೂಲಗಳಿವೆ. ಅಲ್ಲದೆ ಸುತ್ತಮುತ್ತ ಕಲ್ಲಿನ ಗುಡ್ಡಗಳು ಹೆಚ್ಚಾಗಿ ಕಂಡು ಬರುತ್ತವೆ. ತುಂಗಭದ್ರಾ ನದಿ ಕಪ್ಪತ್ತಗುಡ್ಡ ಹೊಂದಿಕೊಂಡು ಹರಿಯುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಮರಳು ಇಲ್ಲಿ ಸಿಗುತ್ತದೆ. ಈ ಎಲ್ಲ ಸಂಪತ್ತಿನ ಮೇಲೆ ಹಿಂದಿನಿಂದಲೂ ಗಣಿಧಣಿಗಳ ಕಣ್ಣುಬಿದ್ದಿತ್ತು. ಕಪ್ಪತ್ತಗುಡ್ಡವನ್ನು ಸಂರಕ್ಷಿಸಲು ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಮಠದ ಮಠಾಧೀಶರು, ಹೋರಾಟಗಾರರು, ಚಿಂತಕರು, ಪರಿಸರ ಪ್ರೇಮಿಗಳು, ಜನಪರ, ಕನ್ನಡಪರ ಸಂಘಟನೆಗಳು ಒಗ್ಗೂಡಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಆ ಹೋರಾಟದ ಫಲವಾಗಿ ಕರ್ನಾಟಕ ಸರಕಾರದಿಂದ ಕಪ್ಪತ್ತಗುಡ್ಡ ವನ್ಯಜೀವಿಧಾಮ ಎಂದು 2019ರ ಮೇ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿತ್ತು.







