ಸೈಬರ್ ಅಪರಾಧಗಳಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ

ಬೆಂಗಳೂರು : ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, 2024ರಲ್ಲಿ ದೇಶಾದ್ಯಂತ 1,01,928 ಸೈಬರ್ ಅಪರಾಧಗಳು ದಾಖಲಾಗಿದೆ. 2023ರಲ್ಲಿ ದಾಖಲಾದ ಸೈಬರ್ ಅಪರಾಧಗಳಿಗೆ ಹೋಲಿಕೆ ಮಾಡಿಕೊಂಡರೆ, 2024ರಲ್ಲಿ ಶೇ.17.9ರಷ್ಟು ಪ್ರಕರಣಗಳು ಹೆಚ್ಚಾಗಿದೆ. ಸೈಬರ್ ಅಪರಾಧಗಳಲ್ಲಿ ಕರ್ನಾಟಕವು ಎರುಡನೇ ಸ್ಥಾನದಲ್ಲಿದೆ.
2024ರ ಅವಧಿಯಲ್ಲಿ ದಾಖಲಾದ ಸೈಬರ್ ಅಪರಾಧ ಪ್ರಕರಣಗಳ ಪೈಕಿ ಶೇ.72.6ರಷ್ಟು ಅಂದರೆ 73,987 ಪ್ರಕರಣಗಳು ವಂಚನೆಯ ಉದ್ದೇಶದ ಪ್ರಕರಣಗಳಾಗಿವೆ. ಶೇ.3.1 ಅಂದರೆ 3,190 ಪ್ರಕರಣಗಳು ಆನ್‌ಲೈನ್ ಲೈಂಗಿಕ ಶೋಷಣೆ ಪ್ರಕರಣ ಮತ್ತು ಶೇ.2.5 ಅಂದರೆ 2,536 ಪ್ರಕರಣಗಳು ಸುಲಿಗೆ ಪ್ರಕರಣಗಳಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ) ವರದಿಯು ಬಹಿರಂಗಪಡಿಸಿದೆ.
ತೆಲಂಗಾಣದಲ್ಲಿ 27,230 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ, ಕರ್ನಾಟಕದಲ್ಲಿ 21,993, ಉತ್ತರ ಪ್ರದೇಶ 11,073, ಮಹಾರಾಷ್ಟ್ರ 9,922, ಬಿಹಾರ 6,380, ತಮಿಳುನಾಡು 5,793, ಕೇರಳ 2,962 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ.
ಆಂಧ್ರಪ್ರದೇಶದಲ್ಲಿ 2,528 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ, ಅರುಣಾಚಲ ಪ್ರದೇಶ 78, ಅಸ್ಸಾಂ 408, ಛತ್ತೀಸ್‌ಗಡ 660, ಗೋವಾ 77, ಗುಜರಾತ್ 1,592, ಹರ್ಯಾಣ 1,815, ಹಿಮಾಚಲ ಪ್ರದೇಶ 148, ಜಾರ್ಖಂಡ್ 1,423, ಮಧ್ಯಪ್ರದೇಶ 1,081 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ.
ಮಣಿಪುರ 3, ಮೇಘಾಲಯ 97, ಮಿಜೋರಾಂ 50, ನಾಗಾಲ್ಯಾಂಡ್ 14, ಒಡಿಶಾ 2,501, ಪಂಜಾಬ್ 888, ರಾಜಸ್ಥಾನ 1,527, ಸಿಕ್ಕಿಂ 15, ತ್ರಿಪುರಾ 33, ಉತ್ತರಾಖಂಡ 543, ಪಶ್ಚಿಮ ಬಂಗಾಳ 282 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 28 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಚಂಡಿಗಡ 116, ದಾದ್ರ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು 5, ಜಮ್ಮು ಮತ್ತು ಕಾಶ್ಮೀರ 114, ಲಡಾಖ್ 1, ದಿಲ್ಲಿ 404, ಪುದುಚೇರಿ 142 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಲಕ್ಷದ್ವೀಪದಲ್ಲಿ ಯಾವುದೇ ಸೈಬರ್ ಅಪರಾಧ ಪ್ರಕರಣ ದಾಖಲಾಗಿಲ್ಲ ಎಂದು ಎನ್‌ಸಿಆರ್‌ಬಿ ವರದಿ ಹೇಳಿದೆ.
ಶೇ.31ರಷ್ಟು ಪ್ರಕರಣಗಳಲ್ಲಿ ಮಾತ್ರ ಚಾರ್ಜ್‌ಶೀಟ್
ದೇಶದಲ್ಲಿ ಅತ್ಯಧಿಕ ಸೈಬರ್ ಅಪರಾಧಗಳು ದಾಖಲಾಗುತ್ತಿರುವ ರಾಜ್ಯಗಳಾದ ತೆಲಂಗಾಣದಲ್ಲಿ ಶೇ.16.2ರಷ್ಟು, ಕರ್ನಾಟಕದಲ್ಲಿ ಶೇ.22.1ರಷ್ಟು, ಉತ್ತರ ಪ್ರದೇಶದಲ್ಲಿ ಶೇ.54ರಷ್ಟು, ಮಹಾರಾಷ್ಟ್ರದಲ್ಲಿ ಶೇ.32.7ರಷ್ಟು, ಬಿಹಾರದಲ್ಲಿ ಶೇ.61.9ರಷ್ಟು ಸೈಬರ್ ಅಪರಾಧ ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ಗಳನ್ನು ಸಲ್ಲಿಕೆ ಮಾಡಲಾಗಿದೆ.
10 ವರ್ಷದಲ್ಲಿ ಶೇ.900ರಷ್ಟು ಪ್ರಕರಣ ಹೆಚ್ಚಳ
ಒಂದೇ ದಶಕದಲ್ಲಿ ದೇಶಾದ್ಯಂತ ಶೇ.900ರಷ್ಟು ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಳವಾಗಿವೆ. 2014ರಲ್ಲಿ 9,622 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ, 2015ರಲ್ಲಿ 11,592, 2016ರಲ್ಲಿ 12,317, 2017ರಲ್ಲಿ 21,796, 2018ರಲ್ಲಿ 27,248, 2019ರಲ್ಲಿ 44,735, 2020ರಲ್ಲಿ 50,035, 2021ರಲ್ಲಿ 52,974, 2022ರಲ್ಲಿ 65,893, 2023ರಲ್ಲಿ 86,420 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ.






