ಕರ್ನಾಟಕ ಎಸ್‌ಐಆರ್ | ಅಂತಿಮ ಪಟ್ಟಿ ಸಾಬೀತು ಮಾಡಿರುವ 6 ಪ್ರಮುಖ SIR ಕುತಂತ್ರಗಳು

ಕರ್ನಾಟಕದ SIR ಅಂತಿಮ ಪಟ್ಟಿ ಬಿಡುಗಡೆಯಾಗಿದೆ. SIR ಎಂಬುದು ಮೋದಿ ಸರಕಾರ ಮತ್ತು ಚುನಾವಣಾ ಆಯೋಗ ಕರ್ನಾಟಕದ ಮತ್ತು ದೇಶದ ದಲಿತ, ದಮನಿತ ಮತ್ತು ಅಲ್ಪಸಂಖ್ಯಾತರನ್ನು ಮತದಾನ ಮತ್ತು ನಾಗರಿಕತ್ವದಿಂದ ಹೊರದಬ್ಬಲು ನಡೆಸಿರುವ ಮಹಾ ಕುತಂತ್ರವೆಂಬುದನ್ನು ಸಾಕ್ಷಿ ಸಮೇತ ಸಾಬೀತು ಮಾಡಿದೆ.
ಹಾಗೂ SIR ಸಂಪೂರ್ಣ ರದ್ದಾಗದೆ ಈ ಅನ್ಯಾಯ ತಡೆಯಲು ಸಾಧ್ಯವಾಗದು ಎಂಬುದನ್ನು ಮತ್ತೊಮ್ಮೆ ಕಿವುಡರಿಗೂ ಕೇಳಿಸುವಷ್ಟು ಸ್ಪಷ್ಟಪಡಿಸಿದೆ.
1.ಒಂದು ಕೋಟಿ ಮತದಾರರು ಡಿಲೀಟ್:
ಅಂತಿಮ ಪಟ್ಟಿಯ ಪ್ರಕಾರ ಕರ್ನಾಟಕದಲ್ಲಿ ಒಂದು ಕೋಟಿ ಮತದಾರರು (99.3 ಲಕ್ಷ) ಹೊರದಬ್ಬಲ್ಪಟ್ಟಿದ್ದಾರೆ. ಇದು ಭಾರತದ 24 ದೊಡ್ಡ ರಾಜ್ಯಗಳ ಡಿಲೀಟ್ ಸಂಖ್ಯೆಗೆ ಹೋಲಿಸಿದರೆ ದೇಶದಲ್ಲೇ ಅತಿ ಹೆಚ್ಚು.
ಸಣ್ಣ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ ಅಂತಿಮವಾಗಿ 22% ಡಿಲೀಟ್ ಆದದ್ದನ್ನು ಬಿಟ್ಟರೆ, 18%ರಷ್ಟು ಡಿಲೀಟ್ ಆಗಿರುವ ಕರ್ನಾಟಕದಲ್ಲಿ ಅತಿ ಹೆಚ್ಚು ಅರ್ಹ ಮತದಾರರನ್ನು ಹೊರಹಾಕಲಾಗಿದೆ.
2. ಪತ್ತೆಯಾದ ವಿದೇಶಿ ಮತದಾರರೆಷ್ಟು?
SIR ನಡೆಸಲು ಆಯೋಗ ಮತ್ತು ಮೋದಿ ಸರಕಾರ ಮುಂದಿಟ್ಟ ಬಹುದೊಡ್ಡ ಸಬೂಬಿದು.
"ಬಾಂಗ್ಲಾದೇಶದಿಂದ ಲಕ್ಷ ಲಕ್ಷ ಅಕ್ರಮ ವಲಸಿಗರು ಭಾರತಕ್ಕೆ ನುಸುಳಿ ಬರುತ್ತಿದ್ದಾರೆ. ಇದರಿಂದ ಭಾರತದ ಭದ್ರತೆಗೆ ಆಪತ್ತು ಬರುತ್ತಿದೆ. SIR ಮೂಲಕ ಅವರನ್ನು ಪತ್ತೆಹಚ್ಚಿ, ಮತಪಟ್ಟಿಯಲ್ಲಿ ಅವರ ಹೆಸರನ್ನು ಅಳಿಸಿ ಹೊರಹಾಕಲಾಗುವುದು. ಆದ್ದರಿಂದ ದೇಶದ ಭದ್ರತೆಗೆ SIR ಅಗತ್ಯ" ಇತ್ಯಾದಿ.
ಅದರ ಭಾಗವಾಗಿಯೇ ಕರ್ನಾಟಕದಲ್ಲೂ, ಅದರಲ್ಲೂ ಬೆಂಗಳೂರಿನಲ್ಲೇ 20 ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶಿ ನುಸುಳುಕೋರರಿದ್ದಾರೆ. ಅವರನ್ನು ಪತ್ತೆಹಚ್ಚಲು SIR ಅಗತ್ಯ ಎಂದು ಬಿಜೆಪಿ ಹಾಗೂ ಸಂಘಿಗಳು ಪ್ರಚಾರ ಮಾಡಿದ್ದರು.
ಪ್ರಾರಂಭದಲ್ಲಿ ಸಾಕ್ಷಾತ್ ಕಾಂಗ್ರೆಸ್ ಮುಖ್ಯಮಂತ್ರಿ ಡಿಕೆಶಿ ಕೂಡ ಅದಕ್ಕೆ ದನಿಗೂಡಿಸಿದ್ದರು. ಹಾಗಿದ್ದಲ್ಲಿ SIR ಪ್ರಕ್ರಿಯೆ ಮುಗಿದ ನಂತರ ಕರ್ನಾಟಕದಲ್ಲಿ ಪತ್ತೆಯಾದ ಬಾಂಗ್ಲಾದೇಶಿ ನುಸುಳುಕೋರರು ಎಷ್ಟು? ದೇಶದ ಭದ್ರತೆಗೆ ಅತಿ ಮುಖ್ಯವಾದ ಈ ವಿಷಯದ ಬಗ್ಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯವರು ಬಿಡುಗಡೆ ಮಾಡಿರುವ ಅಧಿಕೃತ ವಿವರಗಳಲ್ಲಿ ಕಿಂಚಿತ್ತೂ ಮಾಹಿತಿಯಿಲ್ಲ.
ಆದರೆ ಇಂದಿನ ಬಹುಪಾಲು ಪತ್ರಿಕಾ ವರದಿಗಳ ಪ್ರಕಾರ ಪ್ರಶ್ನೆಯೊಂದಕ್ಕೆ ಮೌಖಿಕವಾಗಿ ಉತ್ತರಿಸಿರುವ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ವಿದೇಶಿಗರ ಸಂಖ್ಯೆ ಸಾವಿರಕ್ಕಿಂತ ಕಡಿಮೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಪತ್ರಿಕೆಯೊಂದರ ಮುಖಪುಟದ ವರದಿಯ ಪ್ರಕಾರ ರಾಜ್ಯದಲ್ಲಿ 771 ವಿದೇಶಿ ಪ್ರಜೆಗಳು ಪತ್ತೆಯಾಗಿದ್ದು, ಅದರಲ್ಲಿ 685 ಜನ ನೇಪಾಳಿಗಳು. ಬೆಂಗಳೂರು ಉತ್ತರ ಜಿಲ್ಲೆಯೊಂದರಲ್ಲೇ 580 ವಿದೇಶಿ ಪ್ರಜೆಗಳು ಪತ್ತೆಯಾಗಿದ್ದು, 542 ನೇಪಾಳಿಗಳು. ಇದಲ್ಲದೆ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತಿತರ ಪಾಶ್ಚಿಮಾತ್ಯ ದೇಶಗಳ ಪ್ರಜೆಗಳೇ ನೇಪಾಳಿಗಳನ್ನು ಬಿಟ್ಟರೆ ಪತ್ತೆಯಾಗಿರುವ ವಿದೇಶೀಯರು.
ಹಾಗಿದ್ದಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ನುಸುಳಿದವರು ಎಷ್ಟು? ಬಲ್ಲ ಮೂಲಗಳಿಂದ ಪಡೆದುಕೊಂಡಿರುವ ದಾಖಲೆಗಳ ಪ್ರಕಾರ ಉತ್ತರ ಕನ್ನಡದಲ್ಲಿ ಮಾತ್ರ. ಒಬ್ಬ ಬಾಂಗ್ಲಾ ಹಾಗೂ ಒಬ್ಬ ಪಾಕಿಸ್ತಾನಿ ಪ್ರಜೆ ಪತ್ತೆಯಾಗಿದ್ದಾರೆ.
ಇದರಿಂದ ಎರಡು ವಿಷಯಗಳು ಸ್ಪಷ್ಟವಾಗುತ್ತವೆ. ಒಂದು, ಸಂಘಿಗಳದ್ದು ದುಷ್ಟ ಪ್ರಚಾರ ಸುಳ್ಳೆಂಬುದು ಸ್ಪಷ್ಟ. ಎರಡನೆಯದು, ದಲಿತ ದಮನಿತರನ್ನು ಅಥವಾ ಬಿಜೆಪಿಗೆ ಮತ ಹಾಕದ ಈ ದೇಶದ ಮೂಲನಿವಾಸಿಗಳ ಓಟಿನ ಹಕ್ಕನ್ನು ರದ್ದುಗೊಳಿಸಲು ವಿದೇಶಿ ನುಸುಳುಕೋರರನ್ನು ಪತ್ತೆಹಚ್ಚಲು SIR ಎಂಬ ಕುತಂತ್ರವನ್ನು ಮೋದಿ ಸರಕಾರ ಹೆಣೆದಿತ್ತು.
ಈ ನಿಲುವಿಗೆ ಬರಲು ಇನ್ನೂ ಎರಡು ಮುಖ್ಯ ಕಾರಣಗಳಿವೆ.
ಕಳೆದ ಮೇ 27ರಂದು SIR ಬಗ್ಗೆ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನಲ್ಲಿ SIR ಪ್ರಕ್ರಿಯೆ ಮುಗಿದ ರಾಜ್ಯಗಳು ತಮ್ಮ ರಾಜ್ಯದಲ್ಲಿ ಪತ್ತೆಹಚ್ಚಲಾದ ಅನುಮಾನಿತ ವಿದೇಶೀಯರ ಪಟ್ಟಿಯನ್ನು ನಾಲ್ಕು ವಾರಗಳೊಳಗೆ ಗೃಹ ಸಚಿವಾಲಯದ "ಸಕ್ಷಮ ಪ್ರಾಧಿಕಾರಕ್ಕೆ" ಸಲ್ಲಿಸಬೇಕು.
ಈ ತೀರ್ಪು ಬಂದು ನಾಲ್ಕು ವಾರಗಳಲ್ಲ, ಐದು ತಿಂಗಳಾಗಿವೆ. ಸುಪ್ರೀಂ ತೀರ್ಪು ಬರುವ ಮುನ್ನವೇ 13 ರಾಜ್ಯಗಳಲ್ಲಿ SIR ಮುಗಿದಿತ್ತು. ಹಾಗಿದ್ದ ಮೇಲೆ ಈ ರಾಜ್ಯಗಳು ಜೂನ್ ತಿಂಗಳ ಅಂತ್ಯದೊಳಗೆ "ತಮ್ಮ ತಮ್ಮ ರಾಜ್ಯದಲ್ಲಿ ಪತ್ತೆಹಚ್ಚಲಾದ ವಿದೇಶಿ ನುಸುಳುಕೋರರ ಪಟ್ಟಿಯನ್ನು ಗೃಹ ಸಚಿವಾಲಯದ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬೇಕಿತ್ತಲ್ಲವೇ?"
ಈ ಬಗ್ಗೆ CHRI ನಿರ್ದೇಶಕ ವೆಂಕಟೇಶ್ ಮತ್ತು RTI ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರು ಆಗಸ್ಟ್ ತಿಂಗಳಲ್ಲೇ ಗೃಹ ಸಚಿವಾಲಯಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ಮಾಹಿತಿ ಕೋರಿ ಅರ್ಜಿ ಹಾಕಿದ್ದರು.
ಅವರಿಗೆ ಅಕ್ಟೋಬರ್‌ನಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವಾಲಯ: ತಮ್ಮಲ್ಲಿ "ಸಕ್ಷಮ ಪ್ರಾಧಿಕಾರ"ದ ಅಥವಾ ವಿದೇಶಿ ಅನುಮಾನಿತರ ಪಟ್ಟಿಯಿಲ್ಲವೆಂದು ಉತ್ತರಿಸಿದ್ದರೆ....
ಚುನಾವಣಾ ಆಯೋಗವು SIR ಮೂಲಕ ಯಾವ ಯಾವ ರಾಜ್ಯಗಳಲ್ಲಿ ಎಷ್ಟು ಅನುಮಾನಿತ ವಿದೇಶಿಯರು ಪತ್ತೆಯಾದರು ಎಂಬ ವರದಿ ತಮ್ಮ ಕಚೇರಿಯಲ್ಲಿ ಇಲ್ಲ ಎಂದು ಉತ್ತರಿಸಿದೆ!!!
ಹಾಗಿದ್ದ ಮೇಲೆ ವಿದೇಶಿ ನುಸುಳುಕೋರರು ಎಂಬ ಪ್ರಚಾರ ಮತ್ತು SIR ಎರಡೂ ಸಂಘಿಗಳ ದುರುದ್ದೇಶಿತ ಯೋಜನೆಯೇ ಅಲ್ಲವೇ? ಆ ಕಾರಣಕ್ಕೂ SIR ಸಂಪೂರ್ಣ ರದ್ದಾಗಬೇಕು. ಇದಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು.
3. ಹಿಂದುಳಿದವರು, ಮುಸ್ಲಿಮರು ಮತ್ತು ದಲಿತರು ಹೆಚ್ಚಿರುವ ಕ್ಷೇತ್ರಗಳಲ್ಲಿ ಡಿಲೀಟ್ ಹೆಚ್ಚು:
ಬೆಂಗಳೂರಿನಲ್ಲಿ ಪ್ರತಿ ಎರಡನೇ ಮತದಾರರನ್ನು ಹೊರದಬ್ಬಲಾಗಿದೆ. ಬೆಂಗಳೂರನ್ನು ಬಿಟ್ಟರೆ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಹಾಗೂ ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಖ್ಯೆ ಹೆಚ್ಚಿರುವ ಮೈಸೂರು, ಬೆಳಗಾವಿ, ವಿಜಯಪುರ, ಗುಲ್ಬರ್ಗ, ಬೀದರ್ ಜಿಲ್ಲೆಗಳ ಅಸೆಂಬ್ಲಿ ಕ್ಷೇತ್ರಗಳಲ್ಲಿ ರಾಜ್ಯದ ಸರಾಸರಿಗಿಂತಲೂ ಹೆಚ್ಚಿನ ಮತದಾರರನ್ನು, ಅಂದರೆ 20-30%ರಷ್ಟು ಮತದಾರರನ್ನು ಹೊರಹಾಕಲಾಗಿದೆ. ಒಟ್ಟಾರೆ ಕರ್ನಾಟಕದಲ್ಲಿ 135 ಅಸೆಂಬ್ಲಿ ಕ್ಷೇತ್ರಗಳಲ್ಲಿ 10%ಕ್ಕಿಂತಲೂ ಹೆಚ್ಚು ಮತದಾರರನ್ನು ಹೊರಹಾಕಲಾಗಿದ್ದರೆ, ಸುಮಾರು 32 ಕ್ಷೇತ್ರಗಳಲ್ಲಿ ಹೊರದಬ್ಬಿರುವ ಸಂಖ್ಯೆ 30%ಕ್ಕಿಂತ ಹೆಚ್ಚು.
4. ಫಾರಂ 6ರ ಮೂಲಕ ಮತದಾರರ ಮರುಸೇರ್ಪಡೆ ಎಂಬ ದೊಡ್ಡ ಸುಳ್ಳು
ಕರಡು ಮತಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ಅರ್ಹ ಮತದಾರರು ಕ್ಲೈಮ್ ಮತ್ತು ಅಬ್ಜೆಕ್ಷನ್ ಅವಧಿಯಲ್ಲಿ ಮರುಸೇರ್ಪಡೆ ಮಾಡಿಕೊಳ್ಳುವುದಕ್ಕೆ ಆಯೋಗವು ಅಭಿಯಾನ ನಡೆಸುತ್ತದೆ ಎಂದೆಲ್ಲಾ ಆಯೋಗ ಕೊಚ್ಚಿಕೊಂಡಿತ್ತು.
ಆದರೆ ಅದೆಲ್ಲವೂ ಸುಳ್ಳು ಮತ್ತು ಪರಿಣಾಮ ಶೂನ್ಯ ಎಂದು ಅಂತಿಮ ಪಟ್ಟಿ ಸ್ಪಷ್ಟಪಡಿಸುತ್ತದೆ.
ಕರಡು ಪಟ್ಟಿಯಲ್ಲಿ 1.08 ಕೋಟಿ ಮತದಾರರು ಹೊರಹಾಕಲ್ಪಟ್ಟಿದ್ದರು. ಆ ನಂತರ ಎರಡು ತಿಂಗಳು ಕ್ಲೈಮ್ ಅವಧಿಯಿತ್ತು. ಆಯೋಗವು ಎರಡು ಅಭಿಯಾನ ನಡೆಸಿದೆ ಎಂದು ಕೂಡ ಹೇಳಿಕೊಂಡಿದೆ. ಆದರೆ ಅಂತಿಮವಾಗಿ ಪಟ್ಟಿಯಲ್ಲಿ 99.32 ಲಕ್ಷ ಜನ ಹೊರಗುಳಿದಿದ್ದಾರೆ. ಅಂದರೆ ಸೇರ್ಪಡೆಯಾಗಿರುವುದು ಕೇವಲ 8 ಲಕ್ಷ. ಆದರೆ ಇದರಲ್ಲಿ ಹೊಸದಾಗಿ 18 ವರ್ಷ ತುಂಬಿ ಸೇರಿದ ಮತದಾರರೂ ಇರುತ್ತಾರೆ. ಆಯೋಗವು ಫಾರಂ 6ರ ಸೇರ್ಪಡೆಯಲ್ಲಿ ಡಿಲೀಟ್ ಆಗಿ ಮರುಸೇರ್ಪಡೆಯಾದವರ ವಿಭಜನೆಯ ವಿವರಗಳನ್ನು ಕೊಟ್ಟಿಲ್ಲ.
ಹೀಗಾಗಿ ಬಿಟ್ಟುಹೋದವರನ್ನು ಫಾರಂ 6ರ ಮೂಲಕ ಮರುಸೇರ್ಪಡೆ ಯಶಸ್ವಿಯಾಗಿದೆ ಎಂಬುದು ದೊಡ್ಡ ಸುಳ್ಳು.
5. ಅಂತಿಮ ಪಟ್ಟಿಯಲ್ಲಿ ಹೊರಗುಳಿದಿರುವ 75 ಲಕ್ಷ ಅರ್ಹ ಮತದಾರರನ್ನು ಒಳಗೊಳ್ಳುವ ಕಾರ್ಯಕ್ರಮವೇ ಆಯೋಗಕ್ಕಿಲ್ಲ!
ಅಂತಿಮ ಪಟ್ಟಿಯ ಪ್ರಕಾರ ಹೊರದಬ್ಬಲ್ಪಟ್ಟಿರುವ 99.32 ಲಕ್ಷ ಮತದಾರರಲ್ಲಿ 16.41 ಲಕ್ಷ ಮೃತರು, 7.1 ಲಕ್ಷ ಡುಪ್ಲಿಕೇಟ್. ಇದರಲ್ಲಿ ಮೃತರ ಸಂಖ್ಯೆ ಉತ್ಪ್ರೇಕ್ಷಿತ. ಏಕೆಂದರೆ ಕರ್ನಾಟಕದ ಸರಾಸರಿ ವಾರ್ಷಿಕ ಮರಣ ಸಂಖ್ಯೆ 4 ಲಕ್ಷ. ಅದರ ನಾಲ್ಕು ಪಟ್ಟು ಮೃತರಾಗಿದ್ದಾರೆ. ಮಾತ್ರವಲ್ಲ, ಹಲವಾರು ಕಡೆ ಬದುಕಿದ್ದವರನ್ನು ಸತ್ತಂತೆ ವರದಿ ಮಾಡಿರುವ ಉದಾಹರಣೆಗಳು ಹಲವು ವರದಿಯಾಗಿವೆ. ಆದರೂ ಆಯೋಗಕ್ಕೆ ಈ ವಿಷಯದಲ್ಲಿ ವಿನಾಯಿತಿ ಕೊಟ್ಟು ಇಷ್ಟು ಜನ ಮತಪಟ್ಟಿಗೆ ಸೇರಲು ಅನರ್ಹರೆಂದು ಒಪ್ಪಿಕೊಂಡರೂ...
ಅಂತಿಮ ಪಟ್ಟಿಯ ಪ್ರಕಾರವೇ ಉಳಿದಂತೆ ಸುಮಾರು 65.4 ಲಕ್ಷ ಶಾಶ್ವತವಾಗಿ ಸ್ಥಳಾಂತರಗೊಂಡವರು ಮತ್ತು 19 ಲಕ್ಷ ಜನರು BLOಗಳು ಹೋದಾಗ Absent ಆಗಿದ್ದವರು. ಅಂದರೆ ಇವೆರಡೂ, Absent ಮತ್ತು permanently Shifted ಎರಡೂ ಸೇರಿ 75 ಲಕ್ಷ.
ಆಯೋಗದ ವ್ಯಾಖ್ಯಾನದ ಪ್ರಕಾರವೇ ಇವರೆಲ್ಲರೂ ಅರ್ಹ ಮತದಾರರೇ. ಏಕೆಂದರೆ ಇವರು ಮೃತರಲ್ಲ, ಡುಪ್ಲಿಕೇಟ್ ಅಲ್ಲ, ವಿದೇಶೀಯರಲ್ಲ. ಇವರನ್ನು ಒಳಗೊಳ್ಳುವ ಜವಾಬ್ದಾರಿ ಆಯೋಗದ್ದೇ ವಿನಾ ಹೊರಗುಳಿಸಲ್ಪಟ್ಟವರದ್ದಲ್ಲ.
ಏಕೆಂದರೆ ಆಯೋಗವು ಫಾರಂ 6 ತುಂಬಿ ಮತ್ತೆ ಸೇರ್ಪಡೆ ಮಾಡಿಕೊಳ್ಳಿ ಎಂದು ಕರೆಕೊಟ್ಟು ಸೇರ್ಪಡೆಯಾಗುವ ಜವಾಬ್ದಾರಿಯನ್ನು SIR ಸಂತ್ರಸ್ತರ ಮೇಲೆಯೇ ವರ್ಗಾಯಿಸುತ್ತಾ ಸಂವಿಧಾನವಿರೋಧಿಯಾಗಿ ನಡೆದುಕೊಳ್ಳುತ್ತಿದೆ.
ಆದರೆ ಸಂವಿಧಾನದ 324-326ನೇ ಕಲಮಿನ ಪ್ರಕಾರ ಅರ್ಹ ಮತದಾರರನ್ನು ಒಳಗೊಳ್ಳುವ ಕರ್ತವ್ಯ ಆಯೋಗದ್ದು. ಮತದಾರರದ್ದಲ್ಲ.
ಏಕೆಂದರೆ ಇವರಲ್ಲಿ ಬಹುಜನರು ವಲಸೆ ಕಾರ್ಮಿಕರು, ಅನಕ್ಷರಸ್ಥರು ಮತ್ತು ಈ SIR ಪ್ರಕ್ರಿಯೆಯ ಬಗ್ಗೆಯೇ ಅರಿವಿಲ್ಲದವರು. ಆದ್ದರಿಂದಲೇ 1.08 ಕೋಟಿ ಜನರನ್ನು ಕರಡು ಪಟ್ಟಿಯಲ್ಲಿ ಹೊರದಬ್ಬಿದ್ದರೂ ಅದರಲ್ಲಿ ಮರುಸೇರ್ಪಡೆ ಅವಧಿಯಲ್ಲಿ ಮುಂದೆ ಬರಲು ಸಾಧ್ಯವಾದದ್ದು ಕೆಲವು ಲಕ್ಷ ಜನರಿಗೆ ಮಾತ್ರ ಎಂಬುದನ್ನು ಅಂತಿಮ ಪಟ್ಟಿಯ ಅಂಕಿಅಂಶಗಳೇ ಸಾಬೀತು ಮಾಡುತ್ತಿವೆ.
ನಿನ್ನೆಯ ಪತ್ರಿಕಾಗೋಷ್ಠಿಯಲ್ಲೂ ಈ ಅರ್ಹ 75 ಲಕ್ಷ ಜನರನ್ನು ಪತ್ತೆಹಚ್ಚಿ ಸೇರಿಸಿಕೊಳ್ಳುವ ಯಾವ ಕಾರ್ಯಕ್ರಮವನ್ನೂ ಆಯೋಗ ಘೋಷಿಸಿಲ್ಲ. ಆಯೋಗದಿಂದ ಅದು ಸಾಧ್ಯವೂ ಇಲ್ಲ. ಆದ್ದರಿಂದ ಅರ್ಹ ಮತದಾರರನ್ನು ಹೊರದಬ್ಬುವ ಈ SIR ಪ್ರಕ್ರಿಯೆ ಆಮೂಲಾಗ್ರವಾಗಿ ರದ್ದಾಗಬೇಕು. ಹಳೆಯ SSR ಪದ್ಧತಿಗೆ ಮರಳಬೇಕು.
6. ಕರ್ನಾಟಕದಲ್ಲಿ ವಯಸ್ಕ-ಮತದಾರ ಪ್ರಮಾಣ (EPR) ಕುಸಿದಿದ್ದೇಕೆ?
ಸಾಮಾನ್ಯವಾಗಿ ಒಂದು ರಾಜ್ಯ-ದೇಶದಲ್ಲಿ 18 ವರ್ಷ ಮೇಲ್ಪಟ್ಟ ವಯಸ್ಕರ ಪ್ರಮಾಣ ಮತ್ತು ಮತದಾರರ ಪ್ರಮಾಣವು ಆ ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ಮತದಾರರ ನೋಂದಣಿಯಾಗುತ್ತಿದೆ ಎಂಬ ಅಂಕಿಅಂಶವನ್ನು ನೀಡುತ್ತದೆ. ಅದು ಜಾಸ್ತಿಯಿದ್ದಷ್ಟು ಆ ರಾಜ್ಯದಲ್ಲಿ ಮತದಾರರ ನೋಂದಣಿ ಆರೋಗ್ಯಪೂರ್ಣವಾಗಿದೆ ಎಂದರ್ಥ. ಅಂದರೆ ಒಂದು ರಾಜ್ಯದ ಜನಸಂಖ್ಯೆ 100 ಇದ್ದು ಅದರಲ್ಲಿ 18 ವರ್ಷ ಮೇಲ್ಪಟ್ಟವರು 70 ಜನರಿದ್ದಲ್ಲಿ, ಆ ರಾಜ್ಯದಲ್ಲಿ ಮತದಾರರ ಪ್ರಮಾಣವೂ 70ರ ಆಸುಪಾಸಿನಲ್ಲಿರಬೇಕು.
ಭಾರತದಲ್ಲಿ ಅದು ಸರಾಸರಿ ಶೇ. 65ರ ಆಸುಪಾಸಿನಲ್ಲಿದ್ದರೆ ಕರ್ನಾಟಕದಲ್ಲಿ 2025ರಲ್ಲೂ ಅದು 70.1ರಷ್ಟಿತ್ತು.
ಆದರೆ SIR ನಂತರ ಈ EPR ಪ್ರಮಾಣ ಕರ್ನಾಟಕದಲ್ಲಿ 70.1ರಿಂದ 66ಕ್ಕೆ ಇಳಿದುಬಿಟ್ಟಿದೆ. ಆಯೋಗವೇ ಕೊಟ್ಟಿರುವ ಅಂದಾಜು ಜನಸಂಖ್ಯೆ 6.87 ಕೋಟಿಗೆ ಹೋಲಿಸಿದಲ್ಲಿ ಶೇ. 4ರಷ್ಟು ಮತದಾರರ ಕಣ್ಮರೆ! ಅರ್ಥಾತ್ ಕೇವಲ ಈ ಇಳಿಕೆಯೊಂದರಿಂದಲೇ 27 ಲಕ್ಷ ಮತದಾರರನ್ನು ಆಯೋಗ ಗಾಯಬ್ ಮಾಡಿಬಿಟ್ಟಿದೆ.
ಭಾರತದಲ್ಲಿ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ನಿಜವಾದರೆ ವರ್ಷದಿಂದ ವರ್ಷಕ್ಕೆ ವಯಸ್ಕರ ಸಂಖ್ಯೆಯೂ ಹೆಚ್ಚಬೇಕು. ಹೀಗಾಗಿ ಮತದಾರರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಬೇಕೇ ವಿನಾ ಕಡಿಮೆಯಾಗಬಾರದು.
ಆದರೆ SIR ಜನಸಂಖ್ಯೆ ಹೆಚ್ಚುತ್ತಿದ್ದರೂ ವಯಸ್ಕರ ಸಂಖ್ಯೆ ಹೆಚ್ಚಿದರೂ ಮತದಾರರ ಸಂಖ್ಯೆ ಮಾತ್ರ ಕಡಿಮೆಯಾಗಬೇಕು ಎನ್ನುತ್ತಿದೆ. ಆದ್ದರಿಂದಲೂ ಇದು ಅತ್ಯಂತ ಅವೈಜ್ಞಾನಿಕ ಮತ್ತು ಕೂಡಲೇ ರದ್ದಾಗಬೇಕು. ಕರ್ನಾಟಕದ SIR ಅಂತಿಮ ಪಟ್ಟಿ ಈ ಐದೂ ಕಾರಣಗಳಿಂದಾಗಿ SIR ಎಂಬುದೇ ಕುತಂತ್ರಪೂರಿತ, ಅವೈಜ್ಞಾನಿಕ ಮತ್ತು ಅಪ್ರಜಾತಾಂತ್ರಿಕ ಎಂದು ಸಾಬೀತು ಮಾಡುತ್ತಿದೆ.






