ಕಥಾ ಸಂಗಮ - ಲೋಗೋ

ಸಾಂದರ್ಭಿಕ ಚಿತ್ರ | Photo Credit : gemini AI
ಮಗನ ಮಾತು ಶ್ರೀಲಕ್ಷ್ಮಿಯ ನೆಮ್ಮದಿಗೆ ಭಂಗ ತಂದಿತ್ತು. ಏಕೋ ಏನೋ ಈತ ಎಂದಿನಂತೆ ಲವಲವಿಕೆಯಿಂದಿಲ್ಲ, ಸೇಂಟ್ ಜಾನ್ಸ್ ಶಾಲೆಗೆ ಹೋಗುವಾಗ ಇರುತ್ತಿದ್ದ ನಿತ್ತ್ಯೋತ್ಸಾಹ ಶಾರದಾ ಪರಿಷತ್ ಶಾಲೆಗೆ ಸೇರಿಸಿದ ಮೇಲೆ ಕಡಿಮೆಯಾಗಿದೆ ಎಂಬ ಆಕೆಯ ಶಂಕೆಯನ್ನು ದೃಢೀಕರಿಸಿದಂತಿತ್ತು; ಆತ ಆಡಿದ ಬಾಲನುಡಿ! ಏನು ಕಂದಾ..? ಹಾಗೇಕೆ ಹೇಳುತ್ತೀಯೇ.. ? ನೆನ್ನೆಯೂ ಹಾಗೇ ಹೇಳಿದೆಯಲ್ಲಾ..! ಏನಾಯಿತು ನಿನಗೇ..? ಅವಳ ಆತಂಕಭರಿತ ಪ್ರಶ್ನೆಗಳಿಗೆ ಖಿನ್ನವದನವೇ ಉತ್ತರವಾಗಿತ್ತು. ಮುದ್ದುಮಾಡಿ ರಮಿಸಿ ಆತನ ಮನದಾಳದಲ್ಲಿ ಏನಿದೆಯೆಂಬುದನ್ನು ಕೆದಕಿ ತಿಳಿದುಕೊಳ್ಳಲು ಮರುಪ್ರಶ್ನೆ ಕೇಳುವುದರೊಳಗೆ ಶಾಲೆಯ ಬಸ್ಸು ಬಂದುದರಿಂದ ಬಸ್ಸತ್ತಿಸಿ ಕಳುಹಿಸಿದಳು. ಭಾರವಾದ ಹೆಜ್ಜೆಯಿಡುತ್ತಾ ಮನೆಗೆ ಬಂದು ಸೋಫಾದ ಮೇಲೆ ಕುಳಿತು ನಿಟ್ಟುಸಿರುಬಿಟ್ಟಳು.
ಏನಾಯಿತು ಇವನಿಗೆ? ಶಾಲೆಯಲ್ಲಿ ಏನಾದರೂ ತೊಂದರೆಯೇ? ಶಿಕ್ಷಕರಿಂದ ಏನಾದರೂ ತಂಟೆಯೇ? ವಿನಯವಂತ ಹುಡುಗ. ಗುರುಹಿರಿಯರೊಡನೆ ಭಯಭಕ್ತಿಯಿಂದ ನಡೆದುಕೊಳ್ಳುವನು. ತಪ್ಪದೇ ಹೋಂ ವರ್ಕ್ ಮಾಡಿಕೊಂಡು ಹೋಗುವನು. ಚೆನ್ನಾಗಿ ಓದುವನು. ಆಟೋಟಗಳಲ್ಲಿ ಮುಂದಿರುವನು. ಶಿಕ್ಷಕರೇಕೆ ತಂಟೆ ಮಾಡುವರು? ಇಲ್ಲ; ಆ ರೀತಿ ಏನೂ ಇರಲಾರದು. ಜೊತೆಯ ಮಕ್ಕಳಿಂದ ಏನಾದರೂ ಕಿರುಕುಳವೇ? ಅಂತಹ ಮಕ್ಕಳು ಯಾರೂ ಇಲ್ಲವಲ್ಲಾ.. ಎಲ್ಲರೂ ಖುಷಿಯಿಂದ ಇರುವರಲ್ಲಾ ಇವನ ಜೊತೆಗೆ.. ಏನಾಗಿರಬಹುದು? ತಿಂಡಿ ತಿಂದು, ಸಮವಸ್ತ್ರ ತೊಟ್ಟು, ಬೆನ್ನಿಗೆ ಬ್ಯಾಗೇರಿಸಿಕೊಂಡು, ಕೈಯಲ್ಲಿ ಊಟದ ಬ್ಯಾಗಿಡಿದು, ಬಸ್ಸು ಕಂಡೊಡನೆ ಚಂಗನೆ ಜಿಗಿದೋಡುತ್ತಿದ್ದ ಹುಡುಗ ಈಗೇಕೆ ಇದ್ದಕ್ಕಿದ್ದಂತೆ ಬದಲಾಗಿ ಹೋದ? ಹೊಸ ಶಾಲೆಯ ವಾತಾವರಣ ಹಿಡಿಸದಾಯಿತೇ? ಆಲೋಚಿಸಿದಷ್ಟೂ ಉತ್ತರ ದೂರ ದೂರ ಹೋಗುತ್ತಿರುವಂತೆ ಭಾಸವಾಯಿತು. ಮನದ ಬೇಸರಕ್ಕೆ ಸಣ್ಣದಾಗಿ ತಲೆಬಿಸಿಯಾದಂತಾಗಿ ಬಿಸಿಬಿಸಿ ಟೀ ಮಾಡಿಕೊಂಡು ಕುಡಿದಳು. ಟವೆಲ್ ಎತ್ತಿ ಹೆಗಲಿಗೆ ಹಾಕಿಕೊಂಡು ಸ್ನಾನದ ಮನೆಯತ್ತ ಹೆಜ್ಜೆ ಹಾಕಿದಳು.
ಕೃಷ್ಣಪ್ರಸಾದ್ ಮೂಲತಃ ಕ್ರಿಶ್ಚಿಯನ್ ಶಾಲೆಯ ವಿದ್ಯಾರ್ಥಿ. ಸೇಂಟ್ ಜಾನ್ಸ್ ಕಾನ್ವೆಂಟಿನ ಇಂಗ್ಲಿಷ್ ಮೀಡಿಯಂನಲ್ಲಿ ಏಳನೆಯ ತರಗತಿಯಲ್ಲಿ ಕಲಿಯುತ್ತಿದ್ದ ಹುಡುಗ. ನರ್ಸರಿಯಿಂದಲೂ ಅದೇ ಶಾಲೆಯಲ್ಲಿ ಕಲಿಯುತ್ತಿದ್ದನಾದ್ದರಿಂದ ಅಲ್ಲಿನ ಪರಿಸರಕ್ಕೆ ಚೆನ್ನಾಗಿ ಒಗ್ಗಿಕೊಂಡಿದ್ದನು. ಶಾಲೆಯ ಶಿಸ್ತುಬದ್ಧ ಶೈಕ್ಷಣಿಕ ವಾತಾವರಣ ಆತನ ಕಲಿಕಾ ಸಾಮರ್ಥ್ಯವನ್ನು ಬಹಳವಾಗಿ ಪ್ರಭಾವಿಸಿತ್ತು. ಮಾಸಿಕ ವಾರ್ಷಿಕ ಪರೀಕ್ಷೆಯೆನ್ನದೆ ಪ್ರತಿಯೊಂದು ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸುತ್ತಿದ್ದನು. ಬಹಳ ಚೂಟಿಯಾದ ಹುಡುಗ. ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದನು. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ "ಆಧುನಿಕ ಕಾಲಘಟ್ಟದಲ್ಲಿ ಗಾಂಧಿ ಹೆಸರೇಕೆ ಮಸುಕಾಗುತ್ತಿದೆ?" ಎಂಬ ವಿಷಯದ ಮೇಲೆ ಅದೆಷ್ಟು ನಿರರ್ಗಳವಾಗಿ ಮಾತಾಡಿದ್ದನೆಂದರೆ ಅದೊಂದು ಪ್ರೌಢ ಚಿಂತಕನ ಪ್ರಬುದ್ಧ ಭಾಷಣದಂತಿತ್ತು! ಶಿಕ್ಷಕವೃಂದ ಬೆರಗಿನಿಂದ ಆಲಿಸಿತ್ತು! ಪ್ರತಿಭಾನ್ವಿತ ವಿದ್ಯಾರ್ಥಿ ಎಂಬ ಕಾರಣಕ್ಕಾಗಿ ಎಲ್ಲಾ ಶಿಕ್ಷಕರ ಮೆಚ್ಚುಗೆ ಗಳಿಸಿದ್ದನು. ಮುಖ್ಯ ಶಿಕ್ಷಕಿ ಸ್ಟೆಲ್ಲಾ ಮೇರಿ, ಕೃಷ್ಣಪ್ರಸಾದ್ ಚೆನ್ನಾಗಿ ಓದಿ ಉತ್ತಮ ಸಾಧನೆಗೈದು ಮುಂದೊಂದು ದಿನ ತಮ್ಮ ಶಾಲೆಯ ಕೀರ್ತಿಯನ್ನು ಎತ್ತರಕ್ಕೆ ಏರಿಸುವನೆಂದು ಮುಂಗನಸು ಕಂಡಿದ್ದರು. ತಮ್ಮ ಮಗನ ಶೈಕ್ಷಣಿಕ ಪ್ರಗತಿಯನ್ನು ಕಂಡು ಶ್ರೀಲಕ್ಷ್ಮಿ ಮತ್ತು ವಿಷ್ಣುಪ್ರಸಾದ್ ಗೆ ಹಿಗ್ಗೋ ಹಿಗ್ಗು! ಅಲ್ಲಿನ ಶಿಕ್ಷಕರನ್ನು ಹಾಡಿ ಹೊಗಳಿದ್ದೇ ಹೊಗಳಿದ್ದು. ಆಡಳಿತ ಮಂಡಳಿಯನ್ನು ಕೊಂಡಾಡಿದ್ದೇ ಕೊಂಡಾಡಿದ್ದು. ಅಂಥ ಶಾಲೆಯಲ್ಲಿ ತಮ್ಮ ಮಗ ಕಲಿಯುತ್ತಿರುವುದೇ ಹೆಚ್ಚುಗಾರಿಕೆ ಎಂದು ಸಂಭ್ರಮಿಸುತ್ತಿದ್ದರು. ಬೆಳೆವ ಸಿರಿಯನ್ನು ಮೊಳಕೆಯಲ್ಲಿಯೇ ಕಂಡು ಮಗನ ಬಗ್ಗೆ ದೊಡ್ಡ ಕನಸನ್ನು ಕಟ್ಟಿಕೊಂಡಿದ್ದರು. ಅಂತಹ ಹುಡುಗ ಇದ್ದಕ್ಕಿದ್ದಂತೆ "ನನಗೆ ಶಾಲೆಗೆ ಹೋಗಲು ಇಷ್ಟವಿಲ್ಲ" ಎಂದು ಹೇಳಿದರೆ ಯಾವ ತಾಯಿಗೆತಾನೆ ಆಘಾತವಾಗುವುದಿಲ್ಲ?
ಶ್ರೀಲಕ್ಷ್ಮಿ, ಸ್ನಾನ ಮುಗಿಸಿ ಮಡಿಬಟ್ಟೆ ಉಟ್ಟು ಶ್ರದ್ಧಾಭಕ್ತಿಯಿಂದ ದೇವರ ಕೋಣೆಗೆ ಬಂದಳು. ಮಗನ ಮಾತು ಕಿವಿಯಂಚಿನಲ್ಲಿ ಇನ್ನೂ ಗುಂಯ್ಗುಡುತ್ತಲೇ ಇತ್ತು. ಮನಸ್ಸು ದುಗುಡದಿಂದ ಪರಿತಪಿಸುತ್ತಿತ್ತು. ಅದರ ಪರಿಣಾಮವಾಗಿ ಆಕೆಯ ಅಂತರಾತ್ಮ ಎಂದಿಗಿಂತ ಇಂದು ದೈವಾನುಗ್ರಹಕ್ಕಾಗಿ ಹೆಚ್ಚು ಹಂಬಲಿಸುತ್ತಿತ್ತು. ಆತ ಕಳೆದುಕೊಂಡಿರಬಹುದಾದ ಶಾಲೆಯ ಮೇಲಿನ ಒಲವನ್ನು ಮತ್ತೆ ದೊರಕಿಸಿಕೊಡಲು ದೈನ್ಯದಿಂದ ಮೊರೆಯಿಡುತ್ತಾ, ನಿತ್ಯ ನೇಮನಿಷ್ಠೆಯಿಂದ ಪೂಜಿಸುವ ದೇವರ ಪೋಟೋಗಳಿಗೆ ಹೂ ಮುಡಿಸುವಾಗ, ಮನೆದೇವ ಮಹಾವಿಷ್ಣು ಅವಳ ಕಣ್ಣೊಟಕ್ಕೆ, ಯುದ್ಧಭೂಮಿಗೆ ಬೆನ್ನು ತೋರಿ ಪಲಾಯನಗೈಯುತ್ತಿದ್ದ ಅರ್ಜುನನಿಗೆ ವಿಶ್ವರೂಪವನ್ನು ತೋರಿಸಿದ ಶ್ರೀಕೃಷ್ಣಪರಮಾತ್ಮನಂತೆ ಮಹೋನ್ನತ ಶರೀರವುಳ್ಳವನಾಗಿ ಕಂಡನು. ಭಕ್ತಿಭಾವದಿಂದ ತುಪ್ಪದ ದೀಪ ಹಚ್ಚಿ ಶಿರಬಾಗಿ ಕೈಮುಗಿದಳು. ದೇವರ ಪದತಲದಿಂದ ಬಿಡಿ ಹೂವೊಂದನ್ನು ಎತ್ತಿಕೊಂಡು ಮುಡಿಗೆ ಇರಿಸಿಕೊಂಡಳು. ನಂತರ ಅಡಿಗೆ ಕೋಣೆಗೆ ಬಂದು ತಟ್ಟೆಗಷ್ಟು ಗೊಜ್ಜವಲಕ್ಕಿ ಹಾಕಿಕೊಂಡು ನೀರಿನ ಲೋಟ ಹಿಡಿದುಕೊಂಡು ಹಜಾರಕ್ಕೆ ಬಂದಳು. ತಿಂಡಿತಿನ್ನುತ್ತಲೇ ಗಂಡನಿಗೆ ಫೋನ್ ಮಾಡಿದಳು.
"ಹೇಳು ಲಕ್ಷ್ಮಿ"
"ಪ್ರಸಾದ ಇಂದು ಕೂಡ ಹಾಗೇ ಅಂದ"
"ಏನಂದ?"
"ಸ್ಕೂಲಿಗೆ ಹೋಗಲು ಇಷ್ಟವಿಲ್ಲ ಅಂದ"
"ಹೌದಾ! ಏನಾಯಿತು ಅವನಿಗೆ? ಹೋಗೊಲ್ಲ ಅಂತ ಹಠ ಮಾಡಿದನೇ?"
"ಹಠ ಮಾಡಲಿಲ್ಲ. ಹೋಗೋಕ್ಕೆ ಇಷ್ಟವಿಲ್ಲ ಅಂದ. ಯಾರಿಗೆ ಗೊತ್ತು; ನಾಳೆ ಹಠ ಮಾಡಿದರೂ ಮಾಡಬಹುದು"
"ಆಯ್ತು,; ನೋಡೋಣ ತಾಳು. ಸಂಜೆ ಮನೆಗೆ ಬಂದಾಗ ಮಾತಾಡೋಣ"
ಶ್ರೀಲಕ್ಷ್ಮಿ, ಬೆಳಿಗ್ಗೆಯಿಂದ ತನ್ನ ತಲೆಯಲ್ಲಿ ಮುಲುಮುಲು ಹರಿಯುತ್ತಿದ್ದ ಚಿಂತೆಯ ಹುಳಗಳನ್ನು ಗಂಡನ ತಲೆಗೂ ಹರಿಯಬಿಟ್ಟಳು. ಆತ, ತನಿಖೆಗೆಂದು ಮೇಲಧಿಕಾರಿಗಳು ಬರುವ ಸಂಭವ ಇದ್ದುದರಿಂದ ಪೂರ್ವಸಿದ್ದತೆ ಮಾಡಿಕೊಳ್ಳುವ ಸಲುವಾಗಿ ಇಂದು ಕಛೇರಿಗೆ ಬೇಗ ಬಂದಿದ್ದನು. ಆದರೆ, ತನಿಖಾ ತಂಡದ ಭೇಟಿ ಕಾರ್ಯಕ್ರಮ ದಿಢೀರ್ ರದ್ದಾದುದರಿಂದ ನಿರುಮ್ಮಳವಾಗಿ ಕೆಲಸ ಮಾಡುತ್ತಿದ್ದನು. ಹೆಂಡತಿಯ ಫೋನ್ ಕರೆಯಿಂದ ಆತ ದಿಢೀರನೆ ನಿರುತ್ಸಾಹಗೊಂಡನು. ಶಾಲೆ ಬದಲಾಯಿಸಿ ತಾನೇ ತಪ್ಪುಮಾಡಿದೆನೇ? ಎಂದು ಪ್ರಶ್ನಿಸಿಕೊಂಡನು. ಜೀವನದಲ್ಲಿ ಈ ತನಕ ಯಾವುದೇ ದೊಡ್ಡ ಸಮಸ್ಯೆಗೆ ಹೆಗಲುಕೊಡದ ಆತನಿಗೆ, ಮಗನ ಕಲಿಕೆಗೆ ಸಂಬಂಧಿಸಿದ ಸಣ್ಣ ಸಮಸ್ಯೆಯೊಂದು ಪೆಡಂಬೂತದಂತೆ ಹೆಗಲೇರಿ ಕುಳಿತಿತು. ಕಛೇರಿಯಲ್ಲಿ ಕೆಲಸ ಮುಂದುವರೆಸಲು ಮನಸು ಸಹಕರಿಸದಾಯಿತು. ಅದಾಗಲೇ ಊಟದ ಸಮಯ ಸಮೀಪಿಸಿದ್ದುದರಿಂದ ಮಧ್ಯಾಹ್ನದ ಮೇಲೆ ಅರ್ಧದಿನ ರಜೆ ಹಾಕಿ ಸಪ್ಪೆಮೋರೆ ಹೊತ್ತುಕೊಂಡು ಮಹಡಿ ಇಳಿದು ಬರುತ್ತಿದ್ದನು. ತಳಮಹಡಿಯಿಂದ ಕೈಯಲ್ಲೊಂದು ಫೈಲ್ ಹಿಡಿದು ಮೇಲತ್ತಿ ಬರುತ್ತಿದ್ದ ಹಿರಿಯ ಸಹೋದ್ಯೋಗಿ ಪ್ರಭುಶಂಕರ್ "ಯಾಕ್ರೀ ಇಷ್ಟು ಬೇಗ ಲಂಚ್ ಬ್ಯಾಗ್ ಸಮೇತ ಕೆಳಗಿಳಿಯುತ್ತಿದ್ದೀರಿ?" ಆಶ್ಚರ್ಯದಿಂದ ಕೇಳಿದನು. ವಿಷ್ಣು ಪ್ರಸಾದ್ "ಅರ್ಧದಿನ ಸಿ ಎಲ್ ಹಾಕಿದ್ದೇನೆ" ಎನ್ನುತ್ತಾ ರಜೆ ಹಾಕಬೇಕಾದ ಸಂದರ್ಭಸೃಷ್ಟಿಗೆ ಕಾರಣವಾದ ವಿಷಯವನ್ನು ಆತನೊಡನೆ ಹಂಚಿಕೊಂಡನು. "ಪ್ರಾಬಬಲಿ ಅವನಿಗೆ ಹೊಸ ಸ್ಕೂಲು ಅಡ್ಜಷ್ಟ್ ಅಗಿಲ್ಲ ಅನ್ನಿಸುತ್ತೆ. ನಾನು ಅವತ್ತೇ ಹೇಳಿದೆ ನಿಮಗೆ; ಇಂಥ ಸಣ್ಣ ವಿಷಯಕ್ಕೆಲ್ಲ ಮಿಡ್ಲ್ ಆಫ್ ದಿ ಇಯರ್ ಸ್ಕೂಲ್ ಬದಲಾಯಿಸುವುದು ಬೇಡ ಎಂದು. ನೀವು ನನ್ನ ಮಾತು ಕೇಳಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಸಾಧ್ಯವಾದರೆ ಮತ್ತೆ ಅದೇ ಸ್ಕೂಲಿಗೆ ಸೇರಿಸಿ. ಎಲ್ಲಾ ಸರಿಯಾಗುತ್ತೆ" ಎನ್ನುತ್ತಾ ಮೆಟ್ಟಲೇರಿ ಹೋದನು.
*
ಸೇಂಟ್ ಜಾನ್ಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ತಮ್ಮ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮೊದಲಿನಿಂದಲೂ ಆಕಾಶನೀಲಿ ಬಣ್ಣದ ಟೀ ಶರ್ಟ್ ಮತ್ತು ಕಡುನೀಲಿ ಬಣ್ಣದ ಪ್ಯಾಂಟನ್ನು ಸಮವಸ್ತ್ರವೆಂದು ನಿಗದಿಗೊಳಿಸಿದ್ದರು. ಪೋಷಕರಿಂದ ಸಮವಸ್ತ್ರಕ್ಕೆಂದೇ ನಿಗದಿಗೊಳಿಸಿದ ಹಣವನ್ನು ಪಡೆದು ಮಕ್ಕಳಿಗೆಲ್ಲ ಉತ್ತಮ ಗುಣಮಟ್ಟದ ಸಮವಸ್ತ್ರವನ್ನು ತಾವೇ ಹೊಲಿಸಿ ಕೊಡುತ್ತಿದ್ದರು. ಇಲ್ಲಿಯ ತನಕ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಪೋಷಕರಿಂದ ಯಾವುದೇ ತಂಟೆ ತಕರಾರು ಬಂದಿರಲಿಲ್ಲ. ಈ ವರ್ಷ ಆಡಳಿತ ಮಂಡಳಿಯವರು ಇದ್ದಕ್ಕಿದ್ದಂತೆ ಯೂನಿಫಾರಂನಲ್ಲಿ ಸಣ್ಣದೊಂದು ಬದಲಾವಣೆ ಮಾಡಿದರು. ಅದರಂತೆ ಟೀ ಶರ್ಟಿನ ಹಿಂಬದಿಯಲ್ಲಿ, ವೃತ್ತಾಕಾರದಲ್ಲಿ ಶಾಲೆಯ ಹೆಸರನ್ನೂ, ವೃತ್ತದ ಮಧ್ಯದಲ್ಲಿ ಕ್ರೈಸ್ತರ ಧಾರ್ಮಿಕ ಚಿಹ್ನೆಯಾದ ಶಿಲುಬೆಯ ಗುರುತನ್ನು ಮುದ್ರಿಸಿ ವಿತರಿಸಿದರು.
ಅದೊಂದು ದಿನ ವಿಷ್ಣುಪ್ರಸಾದ್ ಹೆಂಡತಿಯೊಡನೆ ಲೋಕಾಭಿರಾಮವಾಗಿ ಮಾತಾಡುತ್ತಾ ಕುಳಿತಿದ್ದನು. ಕೃಷ್ಣಪ್ರಸಾದ ಲಗುಬಗೆಯಿಂದ ಬಸ್ಸಿಳಿದು ಬಂದು, ಶಾಲೆಯಿಂದ ತಂದ ಹೊಸ ಸಮವಸ್ತ್ರ ಇರಿಸಿದ್ದ ಪ್ಲಾಸ್ಟಿಕ್ ಬ್ಯಾಗನ್ನು ಖುಷಿಯಿಂದ ಅಮ್ಮನ ಕೈಗಿಡುತ್ತಾ "ಶುಕ್ರವಾರ ಹಾಕೊಂಡು ಹೋಗಬೇಕಮ್ಮ. ಕ್ಲಾಸ್ ಟೀಚರ್ ಹೇಳಿದ್ದಾರೆ" ಎಂದನು. ಮಾತಿನ ಎಳೆಯಲ್ಲಿ ಬಾಲಸಂಭ್ರಮ ಎದ್ದುಕಾಣುತ್ತಿತ್ತು. ಶ್ರೀಲಕ್ಷ್ಮಿ ನೀಟಾಗಿ ಮಡಚಿದ್ದ ಸಮವಸ್ತ್ರವನ್ನು ಬ್ಯಾಗಿನಿಂದ ಹೊರತೆಗೆದು ಬಟ್ಟೆಯ ಗುಣಮಟ್ಟವನ್ನು ಪರೀಕ್ಷಿಸುವವಳಂತೆ ದೃಷ್ಟಿನೆಟ್ಟು ನೋಡಿದಳು. ಶರ್ಟಿನ ಹಿಂಬದಿಯಲ್ಲಿ ಮುದ್ರಿಸಿದ್ದ ಶಾಲೆಯ ಹೆಸರು ಮತ್ತು ಶಿಲುಬೆಯ ಗುರುತಿನ ಮೇಲೆ ಕಣ್ಣಾಡಿಸಿ, ಇದೇನಿದು; ಮೊದಲೆಲ್ಲ ಏನೂ ಇರಲಿಲ್ಲ, ಈಗ ಶಾಲೆಯ ಹೆಸರನ್ನು ಬರೆಸಿದ್ದಾರಲ್ಲ? ಶಿಲುಬೆಯ ಗುರುತು ಬೇರೇ ಇದೆ!ಎನ್ನುತ್ತಾ ಆಶ್ಚರ್ಯಚಕಿತಳಾಗಿ ಗಂಡನ ಮುಖ ನೋಡಿದಳು. ವಿಷ್ಣುಪ್ರಸಾದ್ ಹೆಂಡತಿಯ ಕೈಯಿಂದ ಬಟ್ಟೆಯನ್ನು ಸರಕ್ಕನೆ ಕಸಿದುಕೊಂಡು ಶಾಲೆಯ ಲೋಗೋವನ್ನು ತದೇಕಚಿತ್ತದಿಂದ ನೋಡಿದನು. ಮೊದಲೇ ಸಿಡುಕು ಸ್ವಭಾವದ ಮನುಷ್ಯ. ನೋಡ ನೋಡುತ್ತಿದ್ದಂತೆಯೇ ಕೋಪೋದ್ರಿಕ್ತನಾಗಿ ಬಟ್ಟೆಯನ್ನು ಮುದುಡಿ ನೆಲೆದಮೇಲೆ ಎಸೆದು ಮುಖ್ಯ ಶಿಕ್ಷಕಿ ಸ್ಟೆಲ್ಲಾ ಮೇರಿಯವರ ಮೊಬೈಲ್ ನಂಬರಿಗೆ ಫೋನ್ ಮಾಡಿ ಏರಿದ ಧ್ವನಿಯಲ್ಲಿ ಮಾತಾಡಲು ಶುರುಮಾಡಿದನು. ಪೋಷಕರ ಗಮನಕ್ಕೆ ತರದೆ ಮಕ್ಕಳ ಸಮವಸ್ತ್ರದಲ್ಲಿ ಧಾರ್ಮಿಕ ಚಿಹ್ನೆಯನ್ನು ಮುದ್ರಿಸಿದ್ದೀರಿ. ಮಕ್ಕಳ ಬಟ್ಟೆಯ ಮೇಲೆ ಯಾವುದೇ ಧರ್ಮದ ಚಿಹ್ನೆಯನ್ನು ಮುದ್ರಿಸಬಾರದು. ಹಾಗೆ ಮಾಡುವುದರಿಂದ ಮಕ್ಕಳನ್ನು ಮತಾಂತರಕ್ಕೆ ಪ್ರೋತ್ಸಾಹಿಸಿದಂತಾಗುತ್ತದೆ. ನೀವೇನು ಮಕ್ಕಳಿಗೆ ಪಾಠ ಮಾಡಲು ಬರುತ್ತೀರೋ ಅಥವಾ ಧರ್ಮಪ್ರಚಾರ ಮಾಡುವುದಕ್ಕೆ ಬರುತ್ತಿರೋ? ಎಂದು ತರಾಟೆಗೆ ತೆಗೆದುಕೊಂಡನು. ಅತ್ಯಂತ ಶಾಂತ ಸ್ವಾಭಾವದ ಮೇರಿಯವರಿಗೆ ವಿಷ್ಣುಪ್ರಸಾದನ ಮಾತು ಕಸಿವಿಸಿ ಉಂಟುಮಾಡಿತು. ಫೋನಿನಲ್ಲಿ ಮಾತು ಮುಂದುವರೆಸುವುದು ಉಚಿತವಲ್ಲವೆಂದು ಭಾವಿಸಿ ಶಾಲೆಗೆ ಖುದ್ದಾಗಿ ಬಂದು ಮಾತಾಡಲು ಹೇಳಿ ಕರೆಯನ್ನು ತುಂಡರಿಸಿದರು.
ಅಪ್ಪನ ಅನುಚಿತ ನಡವಳಿಕೆ ಕೃಷ್ಣಪ್ರಸಾದನ ಎಳೆಯ ಮನಸ್ಸನ್ನು ಘಾಸಿಗೊಳಿಸಿತು. ಶಾಲೆಯಿಂದ ಮನೆಗೆ ಬರುವತನಕ ಏನೋ ಒಂದು ಬಗೆಯ ಬೆಚ್ಚನೆಯ ಅನುಭವ ನೀಡಿದ್ದ ಸಮವಸ್ತ್ರವನ್ನು ತನ್ನ ಕಣ್ಣೆದುರಿಗೇ ರೋಷದಿಂದ ಮುದುಡಿ ನೆಲಕ್ಕೆ ಬಿಸಾಡಿದುದು ಆತನನ್ನು ವಿಚಲಿತಗೊಳಿಸಿತ್ತು. ದೈಹಿಕವಾಗಿ ಆತನನ್ನೇ ಹಿಡಿದೆತ್ತಿ ನೆಲಕ್ಕೆ ಕುಕ್ಕಿದಂತಾಗಿತ್ತು! ಅಪ್ಪನ ಹಠಾತ್ ಮಾನಸಿಕ ಕ್ಷೋಭೆಗೆ ಕಾರಣವಾದ ಅಂಶ ಯಾವುದು? ಸಮವಸ್ತ್ರದ ಮೇಲೆ ಬರೆದಿರುವ ಚಿಹ್ನೆಗೂ ಅಪ್ಪನ ಕೋಪಕ್ಕೂ ಏನು ಸಂಬಂಧ? ಇಂತಹ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲು ಆತನ ಮನ ಹಂಬಲಿಸಿತಾದರೂ ಹಾಗೆ ಗ್ರಹಿಸುವುದು ಅವನ ಬಾಲವಿವೇಕಕ್ಕೆ ನಿಲುಕದ ವಿಚಾರವಾಗಿತ್ತು. ಮುಖ್ಯ ಶಿಕ್ಷಕಿ ಜೊತೆಗೆ ಮಾತನಾಡುವಾಗ ವಿಷ್ಣುಪ್ರಸಾದನ ಮಾತಿನಲ್ಲಿ ನುಸುಳಿದ್ದ ಧಾರ್ಮಿಕಚಿಹ್ನೆ ಮತ್ತು ಧರ್ಮಪ್ರಚಾರ ಎಂಬ ಪದಗಳು ಆತನ ತಿಳುವಳಿಕೆ ವ್ಯಾಪ್ತಿಯ ಆಚೆಗೆ ಉಳಿದು ಕುತೂಹಲ ಕೆರಳಿಸಿದವು. ಮಗನ ಮಾನಸಿಕ ತೊಳಲಾಟವನ್ನು ಮುಖ ಲಕ್ಷಣದಿಂದಲೇ ಗ್ರಹಿಸಿದ ಶ್ರೀಲಕ್ಷ್ಮಿ ಗಂಡನ ಅನಪೇಕ್ಷಿತ ನಡವಳಿಕೆಗೆ ಕಾರಣವಾದ ಅಂಶಗಳನ್ನು ಆತನ ಅನುಪಸ್ಥಿತಿಯಲ್ಲಿ ಮಗನಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದಳು.
"ನೀನಿನ್ನೂ ಚಿಕ್ಕವನು. ನಮ್ಮ ಧರ್ಮ, ಆಚಾರ-ವಿಚಾರಗಳ ಬಗ್ಗೆ ನಿನಗೆ ತಿಳುವಳಿಕೆ ಸಾಲದು. ತಿಳಿದುಕೊಳ್ಳುವ ವಯಸ್ಸೂ ಅಲ್ಲ ನಿನ್ನದು. ದೊಡ್ಡವನಾದ ಮೇಲೆ ಎಲ್ಲಾ ಗೊತ್ತಾಗುತ್ತದೆ. ಅಪ್ಪ ಏಕೆ ಆ ರೀತಿ ನಡೆದುಕೊಂಡರು ಎಂಬುದರ ಬಗ್ಗೆ ಒಂದೆರಡು ಮಾತನ್ನಷ್ಟೇ ಹೇಳುತ್ತೇನೆ. ಮೊದಲು ನಿನ್ನಪ್ಪ ಹಿಂದೂ ಸಂಘಟನೆಯ ಕಾರ್ಯಕರ್ತ. ಸರ್ಕಾರಿ ನೌಕರಿಗೆ ಸೇರಿದ ಮೇಲೆ ಸಂಘಟನೆಯಿಂದ ದೂರ ಉಳಿದರು. ಆದರೆ, ಧರ್ಮ ಮತ್ತು ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಈಗಲೂ ಬಹಳ ಕಟ್ಟುನಿಟ್ಟಿನ ಮನುಷ್ಯ! ನಿನಗೆ ತಿಳಿದಿರಲಿ, ನಮ್ಮ ಧರ್ಮ ಹಿಂದೂ ಧರ್ಮ. ನೀನು ಓದುತ್ತಿರುವ ಸೇಂಟ್ ಜಾನ್ಸ್ ಸ್ಕೂಲು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು ನಡೆಸುವ ಸ್ಕೂಲು. ಪ್ರತಿಯೊಂದು ಧರ್ಮಕ್ಕೂ ಒಂದು ಧಾರ್ಮಿಕ ಚಿಹ್ನೆ ಅಂತ ಇರುತ್ತದೆ. ಶಿಲುಬೆಯನ್ನು ಕ್ರಿಶ್ಚಿಯನ್ನರು ತಮ್ಮ ಧಾರ್ಮಿಕ ಚಿಹ್ನೆ ಎಂದು ನಂಬಿರುವರು. ನಿನ್ನ ಟೀ ಶರ್ಟಿನ ಹಿಂಬದಿಯಲ್ಲಿ ಮುದ್ರಿಸಿದ್ದಾರಲ್ಲ; ಅದನ್ನೇ ಶಿಲುಬೆ ಎಂದು ಕರೆಯುವುದು. ಹಾಗೇನೆ, ನಾವು, ಅಂದರೆ ಹಿಂದೂಗಳು ಸಂಸ್ಕೃತದ ಓಂ ಅಕ್ಷರವನ್ನು ಧಾರ್ಮಿಕ ಚಿಹ್ನೆ ಎಂದು ನಂಬಿದ್ದೇವೆ. ಅಪ್ಪನ ನಿಲುವು ಏನೆಂದರೆ, ಶಾಲಾ ಮಕ್ಕಳ ಸಮವಸ್ತ್ರದ ಮೇಲೆ ಯಾವುದೇ ಧಾರ್ಮಿಕ ಚಿಹ್ನೆಗಳನ್ನು ಮುದ್ರಿಸಬಾರದು, ಹಾಗೆ ಮಾಡುವುದರಿಂದ ಮಕ್ಕಳನ್ನು ಪರೋಕ್ಷವಾಗಿ ಮತಾಂತರಕ್ಕೆ ಪ್ರಚೋದಿಸಿದಂತಾಗುತ್ತದೆ ಎಂಬುದು. ಹಿಂದೂ ಕಾರ್ಯಕರ್ತನಾಗಿ ಮತಾಂತರ ವಿರೋಧಿ ಆಂದೋಲನಗಳಲ್ಲಿ ಭಾಗವಹಿಸುತ್ತಿದ್ದುದರಿಂದ ಅವರು ಆ ರೀತಿಯಾಗಿ ಆಲೋಚಿಸುತ್ತಾರೆ. ನೀನು ಅದನ್ನೆಲ್ಲ ತಲೆಗೆ ಹಚ್ಚಿಕೊಳ್ಳಬೇಡ. ಸ್ಕೂಲಿಗೆ ಬಂದು ಮಾತನಾಡುತ್ತಾರೆ. ಎಲ್ಲವೂ ಸರಿಯಾಗುತ್ತದೆ."
ವಿಷ್ಣುಪ್ರಸಾದ ಮುಖ್ಯ ಶಿಕ್ಷಕಿಯ ಆಣತಿಯಂತೆ ಶಾಲೆಗೆ ಬಂದು ಮುಖತಃ ಮಾತಾಡಿದನು. ಆದರೆ, ಆತನ ಮಾತುಕತೆ ವ್ಯರ್ಥ ಆಲಾಪವಾಯಿತೇ ವಿನಃ ಯಾವುದೇ ಫಲ ನೀಡಲಿಲ್ಲ. ಶಾಲಾ ಸಮವಸ್ತ್ರ ಯಾವುದೇ ಧರ್ಮದ ಚಿಹ್ನೆಯನ್ನು ಹೊಂದಿರಬಾರದು, ಅದರಿಂದ ಮಕ್ಕಳನ್ನು ಮತಾಂತರಕ್ಕೆ ಪ್ರೇರೇಪಿಸಿದಂತಾಗುತ್ತದೆ, ಆದಕ್ಕಾಗಿ ಸಮವಸ್ತ್ರದ ಮೇಲೆ ಶಿಲುಬೆಯ ಗುರುತು ಮುದ್ರಿಸುವ ನಿರ್ಧಾರವನ್ನು ಹಿಂಪಡೆಯಬೇಕೆಂಬ ಆತನ ಬೇಡಿಕೆಯನ್ನು ಮುಖ್ಯ ಶಿಕ್ಷಕಿ ನಿರಾಕರಿಸಿದರು. ಶಾಲಾ ಆಡಳಿತ ಮಂಡಳಿಯ ನಿರ್ಧಾರವನ್ನು ಈಗಾಗಲೇ ಕಾರ್ಯರೂಪಕ್ಕೆ ತರಲಾಗಿದೆ. ಈ ಹಂತದಲ್ಲಿ ನಿರ್ಧಾರವನ್ನು ಬದಲಿಸಲು ಸಾಧ್ಯವಿಲ್ಲ. ನೀವೊಬ್ಬರ ವಿನಃ ಬೇರಾವ ಪೋಷಕರು ತಕರಾರು ಮಾಡಿಲ್ಲ. ಅದೂ ಅಲ್ಲದೆ, ಸಮವಸ್ತ್ರದ ಮೇಲೆ ಶಿಲುಬೆ ಮುದ್ರಿಸುವ ಪರಿಪಾಠ ಹೊಸದೇನಲ್ಲ. ಕ್ರಿಶ್ಚಿಯನ್ ಸಂಸ್ಥೆಗಳು ನಡೆಸುವ ಶಾಲೆಗಳಲ್ಲಿ ಇದೊಂದು ಸಾಮಾನ್ಯ ನಿಯಮ. ನಮ್ಮ ಶಾಲೆಯಲ್ಲಿ ಈಗಷ್ಟೇ ಅಳವಡಿಸಿಕೊಂಡಿದ್ದೇವೆ. ಹಾಗಾಗಿ, ನಿಮ್ಮ ಬೇಡಿಕೆಯನ್ನು ಪರಿಗಣಿಸಲು ಸಾಧ್ಯವಿಲ್ಲವೆಂದು ಖಡಾಖಂಡಿತವಾಗಿ ಹೇಳಿದರು. ಇದರಿಂದ ಕುಪಿತನಾದ ವಿಷ್ಣುಪ್ರಸಾದ್ ನಿಂತನಿಲುವಿನಲ್ಲಿ ತನ್ನ ಮಗನನ್ನು ಬೇರೆ ಶಾಲೆಗೆ ಸೇರಿಸುವ ನಿರ್ಧಾರ ತೆಗೆದುಕೊಂಡನು.
"ಸರಿ; ಹಾಗಾದರೆ ಟಿ ಸಿ ಕೊಟ್ಟುಬಿಡಿ. ಬೇರೆ ಶಾಲೆಗೆ ಸೇರಿಸುತ್ತೇನೆ. ನಿಮ್ಮ ಶಾಲೆಯ ಸಹವಾಸವೇ ಬೇಡ"
"ಮೊದಲು ಯಾವ ಶಾಲೆಯೆಂದು ನಿರ್ಧರಿಸಿ, ಆ ಶಾಲೆಯ ಮುಖ್ಯೋಪಾಧ್ಯಾಯರನ್ನು ಭೇಟಿಮಾಡಿ ಮಾತಾಡಿ. ಅವರು ಒಪ್ಪಿದರೆ ಟಿ ಸಿ ಕೊಡುತ್ತೇನೆ."
"ಶಾರದಾ ಪರಿಷತ್ ಶಾಲೆಗೆ ಸೇರಿಸುತ್ತೇನೆ. ಅಲ್ಲಿನ ಮುಖ್ಯ ಶಿಕ್ಷಕರು ನನಗೆ ಗೊತ್ತಿದ್ದಾರೆ. ತೊಂದರೆ ಏನಿಲ್ಲಾ. ಟಿ ಸಿ ಕೊಟ್ಟುಬಿಡಿ"
"ಅಲ್ಲಿನ ಸಮವಸ್ತ್ರದಲ್ಲೂ ಧಾರ್ಮಿಕ ಚಿನ್ಹೆ ಇದೆಯಲ್ಲ?"
"ಪರವಾಗಿಲ್ಲ. ಅದು ನಮ್ಮ ಧರ್ಮದ್ದು; ನಡೆಯುತ್ತದೆ"
"ಆಯ್ತು; ನಿಮ್ಮಿಷ್ಟ" ಎನ್ನುತ್ತಾ ಸ್ಟೆಲ್ಲಾ ಮೇರಿ ಶಾರದಾ ಪರಿಷತ್ ಶಾಲೆಯ ಮುಖ್ಯೋಪಾದ್ಯಾಯ ಶಶಿಧರಮೂರ್ತಿಯವರಿಗೆ ಪೋನ್ ಮಾಡಿ ಔಪಚಾರಿಕವಾಗಿ ಮಾತನಾಡುತ್ತಾ "ನಮ್ಮ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಯೊಬ್ಬ ನಿಮ್ಮ ಶಾಲೆಗೆ ಬರುತ್ತಿದ್ದಾನೆ. ಅವನನ್ನು ಬಿಟ್ಟುಕೊಡಲು ಬಹಳ ಬೇಸರವಾಗುತ್ತದೆ. ಕಾರಣಾಂತರದಿಂದ ಆತನ ಪೋಷಕರು ನಿಮ್ಮ ಶಾಲೆಗೆ ದಾಖಲಿಸಲು ಬಯಸಿದ್ದಾರೆ. ದಯವಿಟ್ಟು ಅವಕಾಶ ಮಾಡಿಕೊಡಿ" ಎಂದು ವಿನಂತಿಸಿಕೊಂಡರು. ಆನಂತರ, ಕೃಷ್ಣಪ್ರಸಾದನಂತ ಬುದ್ಧಿವಂತ ವಿದ್ಯಾರ್ಥಿಯನ್ನು ಬಿಟ್ಟುಕೊಡಬೇಕಲ್ಲ ಎಂಬ ಬೇಸರದಿಂದಲೇ ಅಲ್ಮೇರಾದಿಂದ ಟಿ ಸಿ ಪುಸ್ತಕ ತೆಗೆದು, ಕಣ್ಣಿಗೆ ಕನ್ನಡಕ ಸಿಕ್ಕಿಸಿಕೊಂಡು ಬರೆಯಲು ಪ್ರಾರಂಭಿಸಿದರು.
*
ಶಾಲೆಯ ಬಸ್ಸು ಬರುವ ಸಮಯ ಸಮೀಪಿಸಿತ್ತು. ಮಗನನ್ನು ಖುದ್ದಾಗಿ ಕರೆದುಕೊಂಡು ಹೋಗಲು ವಿಷ್ಣುಪ್ರಸಾದ ಶಾಲೆಯ ಬಸ್ಸು ನಿಲ್ಲುವ ಸ್ಥಳದಲ್ಲಿ ಕಾದು ನಿಂತಿದ್ದನು. ಸ್ವಲ್ಪ ಹೊತ್ತಿನಲ್ಲೇ ಬಸ್ಸು ಬಂತು. ಬಸ್ಸಿನ ಬಾಗಿಲಲ್ಲೇ ನಿಂತಿದ್ದ ಸಹಾಯಕ ಕೃಷ್ಣಪ್ರಸಾದನನ್ನು ಜೋಪಾನವಾಗಿ ಕೆಳಗಿಳಿಸಿ ರೈಟ್ ಹೇಳಿದನು. ವಿಷ್ಣುಪ್ರಸಾದ್ ಮಗನ ಬೆನ್ನಿನ ಮೇಲಿದ್ದ ಮಣಭಾರದ ಬ್ಯಾಗನ್ನು ತನ್ನ ಎಡಭುಜಕ್ಕೆ ಸಿಕ್ಕಿಸಿಕೊಂಡು ಬಲಗೈಯಿಂದ ಮಗನ ಸುಕೋಮಲ ಎಡ ಮುಂಗೈಯನ್ನು ಹಿಡಿದುಕೊಂಡು ಮನೆಯತ್ತ ಹೆಜ್ಜೆಹಾಕಿದನು. ತನ್ನನ್ನು ಕರೆದುಕೊಂಡು ಬರಲು ಅಪರೂಪಕ್ಕೆ ಅಪ್ಪ ಬಂದದ್ದು ಕೃಷ್ಣಪ್ರಸಾದನಿಗೆ ಆಶ್ಚರ್ಯ ತಂದಿತು. ಹಾಗಾಗಿಯೇ ಕೇಳಿದನು: "ಆಫೀಸಿಗೆ ಹೋಗಿರಲಿಲ್ಲವೇ ಅಪ್ಪಾ ಇಂದು?" "ಅರ್ಧದಿನ ರಜಾ ಹಾಕಿದ್ದೇ ಕೃಷ್ಣ. ಮಧ್ಯಾಹ್ನವೇ ಮನೆಗೆ ಬಂದೆ"
"ರಜಾ ಹಾಕಿದ್ದಿರಾ! ಏಕೆ?"
"ಸ್ವಲ್ಪ ಕೆಲಸ ಇತ್ತು.." ಹೀಗೆ ಮಾತಾಡಿಕೊಳ್ಳುತ್ತಾ ಇಬ್ಬರೂ ಮನೆಗೆ ಬಂದರು. ಶ್ರೀಲಕ್ಷ್ಮಿ, ಅತಿಥಿ ಕಿಶೋರನೊಬ್ಬ ಮೊದಲ ಬಾರಿಗೆ ಮನೆಗೆ ಬರುತ್ತಿರುವನೇನೋ ಎಂಬಂತೆ ಮುದ್ದಿನ ಮಗನನ್ನು ಉಪಚರಿಸಲು ಆತನಿಗೆ ಇಷ್ಟವಾದ ವೆಜಿಟೆಬಲ್ ಪಫ್ಸ್ ತಯಾರಿಸಿದ್ದಳು. ಲಗುಬಗೆಯಿಂದ ಮಗನ ಸಮವಸ್ತ್ರವನ್ನು ಬದಲಿಸಿ, ಬೇರೆ ಉಡುಗೆಯನ್ನು ತೊಡಿಸಿ, ಕೈಕಾಲು ಮುಖ ತೊಳೆಸಿದಳು. ಅತ್ಯಾಪ್ತ ಭಾವದಿಂದ ಆತನ ಮುಖವನ್ನು ಒರೆಸಿ, ಡೈನಿಂಗ್ ಟೇಬಲ್ಲಿನ ಮುಂದೆ ಕೂರಿಸಿ ತಿನ್ನಲು ಪಫ್ಸ್ ಕೊಟ್ಟಳು. ಗಂಡ ಹೆಂಡಿತಿ ಇಬ್ಬರೂ ಮಗನ ಎಡಬಲದಲ್ಲಿ ಕುಳಿತುಕೊಂಡರು. ಕೃಷ್ಣಪ್ರಸಾದನಿಗೆ ಅಪ್ಪ ಅಮ್ಮನ ಉಪಚಾರದಲ್ಲಿ ಏನೋ ಒಂದು ಬಗೆಯ ಹೊಸತನ ಕಂಡರೂ ಹಾಗೇಕೆ ಎಂದು ಅರಿಯದಾದನು. ಶಾಲೆಗೆ ಹೋಗಲು ಇಷ್ಟವಿಲ್ಲ ಎಂಬ ತನ್ನ ಹೇಳಿಕೆಗೆ ಸೂಕ್ತ ವಿವರಣೆ ಕೇಳಲು ಪೀಠಿಕೆ ಹಾಕುತ್ತಿರುವ ವಿಷಯ ಎಳೆಯ ಹುಡುಗನಿಗೆ ತಿಳಿಯುವುದಾದರೂ ಹೇಗೆ? ವಿಷ್ಣುಪ್ರಸಾದ್ ಸಕ್ಕರೆ ಪಾಕದಿಂದ ಜಿಲೇಬಿಯನ್ನು ಅದ್ದಿ ತೆಗೆಯುವಂತೆ, ಹೃದಯಬಟ್ಟಲಿನ ಪ್ರೇಮ ಪಾಕದಿಂದ ಒಂದೊಂದೇ ಪ್ರಶ್ನೆಯನ್ನು ಅದ್ದಿ ತೆಗೆದ:
"ಹೊಸ ಸ್ಕೂಲಿನಲ್ಲಿ ಏನಾದರೂ ತೊಂದರೆಯೇ ಕೃಷ್ಣ ನಿನಗೆ?
"ಇಲ್ಲ"
"ನಿನ್ನ ಜೊತೆಯವರು ಯಾರಾದರೂ ಕೀಟಲೆ ಮಾಡುವರೇ?
"ಇಲ್ಲ"
"ಶಿಕ್ಷಕರು ಯಾರಾದರೂ ಕಿರುಕುಳ ಕೊಡುವರೇ?
"ಇಲ್ಲ" ಎನ್ನುತ್ತ ಅಪ್ಪನ ಪ್ರಶ್ನೆಮಾಲಿಕೆಯನ್ನು ತುಂಡರಿಸಲೋ ಎಂಬಂತೆ ತಾನೇ ಮರುಪ್ರಶ್ನಿಸಿದನು.
"ಯಾಕಪ್ಪಾ ಈ ರೀತಿ ಕೇಳುತ್ತಿದ್ದೀರಿ?"
"ಏನಿಲ್ಲಾ.. ಬೆಳಿಗ್ಗೆ ಶಾಲೆಗೆ ಹೋಗಲು ಇಷ್ಷವಿಲ್ಲ ಅಂದೆಯಂತಲ್ಲಾ.. ಅದಕ್ಕೇ ಕೇಳಿದೆ. ಹೌದು.. ಹಾಗೇಕೆ ಹೇಳಿದೆ?"
"ಓ. ಅದಾ.." ಎನ್ನುತಾ, ಆಗತಾನೇ ಸೋಫಾ ಸೆಟ್ಟಿನ ಮೇಲೆ ಬಿಚ್ಚಿಟ್ಟಿದ್ದ ಸಮವಸ್ತ್ರವನ್ನು ಎತ್ತಿಕೊಂಡು ಬಂದು ಅದರ ಹಿಂಬದಿಯಲ್ಲಿ ಮುದ್ರಿಸಿದ್ದ ಸಂಸ್ಕೃತದ ಓಂ ಚಿಹ್ನೆಯ ಮೇಲೆ ಬೆರಳಿಟ್ಟು:"ಇದೇನಪ್ಪಾ?" ಎಂದು ಪ್ರಶ್ನಿಸಿದನು. ಬಾಲಕನ ಎಳೆಪ್ರಶ್ನೆ ವಿಷ್ಣುಪ್ರಸಾದನನ್ನು ವಿಚಲಿತಗೊಳಿಸಿತು. ತುಟಿಗಳು ಬಿಗಿಹಿಡಿದಂತಾಗಿ ಮಾತು ಹೊರಡಲಿಲ್ಲ. ಗಂಡನ ಮನಸ್ಥಿತಿಯನ್ನು ಅರ್ಥಮಾಡಿಕೊಂಡ ಶ್ರೀಲಕ್ಷ್ಮಿ ಮಧ್ಯೆ ಬಾಯಾಕಿ "ಅದು ನಮ್ಮ ಧರ್ಮದ ಚಿಹ್ನೆ ಕಂದ. ಇದ್ದರೆ ತಪ್ಪೇನಿಲ್ಲ" ಎಂದು ಸಮಜಾಯಿಸಿದಳು. ಅಮ್ಮನ ಮಾತನ್ನು ಒಪ್ಪದ ಕೃಷ್ಣಪ್ರಸಾದ್ "ಮತ್ತೆ.. ಆ ಹೊತ್ತು ಅಪ್ಪ ಹೇಳಿದ್ದರು; ಮಕ್ಕಳ ಸಮವಸ್ತ್ರದ ಮೇಲೆ ಯಾವ ಧರ್ಮದ ಚಿಹ್ನೆಯೂ ಇರಬಾರದು. ಇದ್ದರೆ ಅದು ಮಕ್ಕಳನ್ನು ಮತಾಂತರಕ್ಕೆ ಪ್ರೋತ್ಸಾಹಿಸಿದಂತೆ ಆಗುತ್ತದೆ ಎಂದು?" ಮಗನ ಮನದ ಗೊಂದಲ ನಿವಾರಿಸಲು "ಹಿಂದೂ ಹುಡುಗ ಹಿಂದೂ ಧರ್ಮದ ಚಿನ್ಹೆಯಿರುವ ಬಟ್ಟೆ ಧರಿಸಿದರೆ ಮತಾಂತರದ ಪ್ರಶ್ನೆಯೇ ಬರುವುದಿಲ್ಲ ಕಂದ" ಎಂದಳು. ಮರುಗಳಿಗೆಯೇ "ನನ್ನ ಕ್ಲಾಸ್ಮೇಟ್ ಜಾನ್ಸನ್ ಧರಿಸಿದರೇ?" ಮಗನ ಪ್ರಶ್ನೆಗೆ ಉತ್ತರಿಸಲು ಶ್ರೀಲಕ್ಷ್ಮಿ ತಿಣುಕಾಡತೊಡಗಿದಾಗ ವಿಷ್ಣುಪ್ರಸಾದನಿಗೆ ತಾನು ಎಸಗಿದ ತಪ್ಪಿನ ಅರಿವಾಯಿತು. ಒಡನೆಯೇ ಆತನ ಚಿತ್ತ ಹಿರಿಯ ಸಹೋದ್ಯೋಗಿ ಪ್ರಭುಶಂಕರ್ ಹೇಳಿದ ಮಾತಿನತ್ತ ಹರಿಯಿತು: "ಈಗಲೂ ಕಾಲ ಮಿಂಚಿಲ್ಲ. ಸಾಧ್ಯವಾದರೆ ಮತ್ತೆ ಅದೇ ಸ್ಕೂಲಿಗೆ ಸೇರಿಸಿ. ಎಲ್ಲಾ ಸರಿಯಾಗುತ್ತೆ"






