ವಿಜಯಪುರ ಜಿಲ್ಲೆಯಲ್ಲಿ ಸಕಾಲಕ್ಕೆ ನಡೆಯದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

ವಿಜಯಪುರ: ಸರಕಾರದ ಕಾರ್ಯ ಯೋಜನೆಗಳ ಅನುಷ್ಠಾನ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಹಂತ, ಅಧಿಕಾರಿಗಳ ಕಾರ್ಯದಕ್ಷತೆ ಮೌಲ್ಯಮಾಪನ ಹೀಗೆ ಹಲವಾರು ಉದ್ದೇಶಗಳನ್ನಿಟ್ಟುಕೊಂಡು ಮೂರು ತಿಂಗಳಿಗೊಮ್ಮೆ ನಡೆಯುವ ತ್ರೈಮಾಸಿಕ ಕೆಡಿಪಿ ಸಭೆಗಳು ಸಕಾಲಕ್ಕೆ ನಡೆಯದಿರುವುದಕ್ಕೆ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸುವಂತಾಗಿದೆ.
ಕೆಡಿಪಿ ಸಭೆಗಳು ಸರಕಾರಿ ಮಟ್ಟದಲ್ಲಿ ಮಹತ್ವ ಪಡೆದಿದ್ದು, ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆಯಬೇಕಿರುವ ಕೆಡಿಪಿ ಸಭೆಗಳು ಸಕಾಲಕ್ಕೆ ನಡೆಯದಿರುವುದು ಆಡಳಿತ ಪಕ್ಷದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸ್ಥಳೀಯರ ಆರೋಪವಾಗಿದೆ.
ಜಿಲ್ಲೆಯ ಪ್ರಗತಿ ಬಗ್ಗೆ ಅಪಾರ ಕಾಳಜಿ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅತ್ಯಂತ ಮುತವರ್ಜಿ ವಹಿಸಿ ಸಭೆ ನಡೆಸುತ್ತಿದ್ದರು, ಆದರೆ ಅವರು ಸಹ ಈ ಬಾರಿ ಕೆಡಿಪಿ ಸಭೆಗಳಿಗೆ ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ.ಪ್ರತಿಪಕ್ಷಗಳು ಈ ವಿಷಯವನ್ನೇ ಮುಂದಿಟ್ಟುಕೊಂಡು ಸರಕಾರದ ಮೇಲೆ ಟೀಕಾ ಪ್ರಹಾರ ನಡೆಸುತ್ತಿವೆ.
ವಿಜಯಪುರ ಜಿಲ್ಲೆಯಲ್ಲಿ ಅರಣ್ಯಭೂಮಿ ಹೆಚ್ಚಾಗಲು ಈ ಕೆಡಿಪಿ ಸಭೆಯೇ ಕಾರಣ, ಒಂದೊಮ್ಮೆ ಕೆಡಿಪಿ ಸಭೆಯಲ್ಲಿ ಜಿಲ್ಲೆಯಲ್ಲಿ ಅರಣ್ಯ ಭೂಮಿ ಪ್ರಮಾಣ ಅತ್ಯಂತ ಕಡಿಮೆ ಇರುವ ವಿಷಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲರ ಗಮನಕ್ಕೆ ಬಂದಿತ್ತು. ತಕ್ಷಣವೇ ವೃಕ್ಷೋಥಾನ್ ಕಾರ್ಯಕ್ರಮ ರೂಪಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ ಪರಿಣಾಮ ವಿಜಯಪುರ ಜಿಲ್ಲೆ ಇಂದು ಹಸಿರಾಗಿದೆ. ಈ ರೀತಿಯ ಮಹತ್ವದ ಸಭೆ ನಡೆಯದೇ ಇರುವುದು ಅನೇಕ ಯೋಜನೆಗಳ ಅನುಷ್ಠಾನಕ್ಕೂ ಹಿನ್ನೆಡೆಯಾಗುತ್ತಿರುವುದಂತೂ ಸತ್ಯ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಮಂತ್ರಿಗಳು ಹಾಗೂ ತಾಲೂಕು ಮಟ್ಟದಲ್ಲಿ ಕ್ಷೇತ್ರ ಪ್ರತಿನಿಧಿಸುವ ವಿಧಾನ ಸಭೆ ಸದಸ್ಯರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಯವರು ನಾಮನಿರ್ದೇಶನ ಮಾಡುವ ಸಚಿವರು, ಜಿಲ್ಲೆಯ ಭಾಗಗಳನ್ನು ಪ್ರತಿನಿಧಿಸುವ, ಜಿಲ್ಲೆಯಲ್ಲಿ ವಾಸವಾಗಿರುವ ರಾಜ್ಯ ಸಭೆ ಮತ್ತು ಲೋಕ ಸಭೆ ಸದಸ್ಯರು, ತಾಲೂಕು ಮಟ್ಟದಲ್ಲಿ ತಾಲೂಕು ಆಯಾ ತಾಲೂಕಿನಲ್ಲಿ ವಾಸವಾಗಿರುವ ವಿಧಾನ ಪರಿಷತ್ ಸದಸ್ಯರು ಮತ್ತು ಸಂಸತ್ ಸದಸ್ಯರು ಸದಸ್ಯರಾಗಿರುತ್ತಾರೆ. ಇದಲ್ಲದೇ 5 - ವಿವಿಧ ವರ್ಗಗಳು ಅಂದರೆ ಪರಿಶಿಷ್ಟ ಜಾತಿ-ಪರಿಶಿಷ್ಟ 5 ಪಂಗಡದ 1, ಹಿಂದುಳಿದ ವರ್ಗ-1, ಸಾಮಾನ್ಯ ವರ್ಗ-1 ಅಲ್ಪಸಂಖ್ಯಾತ-1 ಹಾಗೂ ಮಹಿಳಾ-1 ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಲು ಅವಕಾಶ ಇರುತ್ತದೆ.
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ಕೆಡಿಪಿ ಸಭೆ ನಡೆಸಲಾಗುತ್ತದೆ. ಅದೇ ರೀತಿ ಜಿಲ್ಲೆಯಲ್ಲಿಯೂ ಸಭೆ ನಡೆಯಲಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ತ್ರೈಮಾಸಿಕ ಸಭೆ ನಡೆಸಲಾಗುತ್ತದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಸಕಾಲಕ್ಕೆ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆಸಿಲ್ಲದಿರುವುದು ಅಭಿವೃದ್ಧಿ ಪರವಾದ ನಿಷ್ಕಾಳಜಿ, ನಿರ್ಲಕ್ಷ್ಯ್ಯಕ್ಕೆ ಹಿಡಿದ ಕೈಗನ್ನಡಿ ಎಂಬುದು ಪ್ರತಿಪಕ್ಷಗಳ ಆರೋಪ. ಜಿಲ್ಲೆಯಲ್ಲಿ ಎರಡು ವರ್ಷದಲ್ಲಾಗಿದ್ದು ಕೇವಲ ಎರಡು ತೈಮಾಸಿಕ ಸಭೆಗಳು ಮಾತ್ರ. 2024ರಲ್ಲಿ ಜೂ.15 ರಂದು ಮತ್ತು 2025ರಲ್ಲಿ ಫೆ. 15 ರಂದು ತ್ರೈಮಾಸಿಕ ಸಭೆ ನಡೆಸಲಾಗಿದೆ. ಇನ್ನು ತಾಲೂಕು ಮಟ್ಟದಲ್ಲಿಯೂ ಸಕಾಲಕ್ಕೆ ಕೆಡಿಪಿ ಸಭೆಗಳನ್ನು ಆಯೋಜಿಸಿಲ್ಲ. ಇದರಿಂದಗಿ ನಮ್ಮ ಸಮಸ್ಯೆಗಳ ಬಗ್ಗೆ ತಿಳಿಸಲು ಜನಪ್ರತಿನಿಧಿಗಳು ಕೈಗೆ ಸಿಗುತ್ತಿಲ್ಲ ಎನ್ನುವ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿವೆೆ.
ಹದಗೆಟ್ಟಿರುವ ಗ್ರಾಮೀಣ ರಸ್ತೆಗಳು, ಪ್ರವಾಹದಿಂದಾಗಿ ಜೀವಹಾನಿ ಬೆಳೆ ನಷ್ಟ, ಶಿಥಿಲಾವಸ್ಥೆಯಲ್ಲಿರುವ ಶಾಲೆ ಕಟ್ಟಡಗಳು, ಸೋರುತ್ತಿರುವ ಅಂಗನವಾಡಿ ಕಟ್ಟಡಗಳು, ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಹೀಗೆ ಅನೇಕ ಜೀವಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೆಡಿಪಿ ಸಭೆ ಯಾವಾಗ ನಡೆಯುವುದೋ ಎಂದು ಸಾರ್ವಜನಿಕರು ಕಾಯುವಂತಾಗಿದೆ.
ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆಯಬೇಕಿರುವ ಕೆಡಿಪಿ ಸಭೆಗಳು ಸಕಾಲಕ್ಕೆ ನಡೆಯುದಿರುವುದರಿಂದ ಶಾಸಕರು ಮತ್ತು ಸಚಿವರು ಜನರ ಕೈಗೆ ಸಿಗುತ್ತಿಲ್ಲ. ರಾಜ್ಯ ಸರಕಾರ ಜನರ ಸಂಕಷ್ಟ ಆಲಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆಗಳನ್ನು ಮರೆತಿದ್ದಾರೆ. ಸಭೆ ಕರೆದರೆ ಜನರ ಸಂಕಷ್ಟಗಳ ಕುರಿತು ಚರ್ಚಿಸಲು ಬೆಕ್ಕು ಇಲಿಗೆ ಕಾಯ್ದು ಕುಳಿತಂತೆ ಕಾಯುತ್ತಾ ಕುಳಿತಿದ್ದೇನೆ. ಆದರೆ, ಕೆಡಿಪಿ ಸಭೆ ಆಗುತ್ತಿಲ್ಲ.
-ರಮೇಶ ಜಿಗಜಿಣಗಿ, ಸಂಸದ, ವಿಜಯಪುರ
ವಿಜಯಪುರ ಜಿಲ್ಲಾ, ತಾಲೂಕು ಮತ್ತು ಗ್ರಾಮಮಟ್ಟದ ಅಧಿಕಾರಿಗಳು ಸಾರ್ವಜನಿಕ ಮತ್ತು ಜನಪ್ರತಿನಿಧಿಗಳೊಂದಿಗೆ ಸ್ಪಂದಿಸುತ್ತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೀಘ್ರದಲ್ಲಿ ಜಿಲ್ಲಾಮಟ್ಟದ ಕೆಡಿಪಿ ಸಭೆ ಜರಗಲಿದೆ.
-ರಿಷಿ ಆನಂದ, ಜಿಪಂ ಸಿಇಒ, ವಿಜಯಪುರ
ಚುನಾಯಿತ ಜನ ಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ನೀಯಮಿತವಾಗಿ ಕೆಡಿಪಿ ಸಭೆಗಳನ್ನು ನಡೆಸಿಕೊಂಡು ಹೋಗಬೇಕಾಗಿತ್ತು. ಕಳೆದ ಹಲವು ತಿಂಗಳಿಂದ ಯಾವುದೇ ರೀತಿಯ ಕೆಡಿಪಿ ಸಭೆಗಳನ್ನು ಕರೆದಿರುವುದಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಭ್ರಷ್ಟಾಚಾರದ ಹುಳುಕು ಹೊರಬೀಳುತ್ತದೆ ಎಂಬ ಭಯವೇ ಇದಕೆ ಮೂಲ ಕಾರಣವಾಗಿದೆ.
-ಶಿವಾನಂದ ಯಡಹಳ್ಳಿ, ರಾಜ್ಯ ಸಂಘಟನಾ ಕಾರ್ಯದರ್ಶಿ, ಕೆಆರ್‌ಎಸ್ ಪಕ್ಷ, ವಿಜಯಪುರ







