ಬಿಡಾಡಿ ದನಗಳ ಹಾವಳಿಯಿಂದ ಬೇಸತ್ತ ಕೆಂಭಾವಿ ಜನತೆ

ಯಾದಗಿರಿ/ಕೆಂಭಾವಿ: ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಈ ಕುರಿತು ಹಲವು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ದನಗಳು ಹಿಂಡು ಹಿಂಡಾಗಿ ರಸ್ತೆ ಮೇಲೆ ಬೀಡು ಬಿಡುತ್ತಿರುವುದರಿಂದ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸುತ್ತಿದೆ. ಅದರಲ್ಲೂ ಪಟ್ಟಣದ ಸರಕಾರಿ ಆಸ್ಪತ್ರೆ ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದನಗಳು ಜಮಾವಣೆಯಾಗುವುದರಿಂದ ರೋಗಿಗಳನ್ನು ತುರ್ತು ಚಿಕಿತ್ಸೆಗೆಂದು ಕರೆತರುವಾಗ ಇಲ್ಲಿನ ದನಗಳ ಹಿಂಡು ತಡೆಯೊಡ್ಡಿಬಿಡುತ್ತದೆ. ಕೆಲವೊಮ್ಮೆ ವಾಹನಗಳು ರಸ್ತೆಗೆ ಅಡ್ಡಲಾಗಿ ಮಲಗಿದ ದನಗಳ ಕಾಲುಗಳ ಮೇಲೆಯೇ ಹಾಯಿಸಿಕೊಂಡು ಹೋದ ಘಟನೆಗಳೂ ನಡೆದಿವೆ.
ದನಕರುಗಳ ಮಾಲಕರು ತಮ್ಮ ತಮ್ಮ ರಾಸುಗಳನ್ನು ಹತೋಟಿಯಲ್ಲಿ ಇಡುತ್ತಿಲ್ಲ. ಪಟ್ಟಣದ ಪ್ರಮುಖ ರಸ್ತೆಗಳ ಮಧ್ಯದಲ್ಲಿ ನಿತ್ಯ ಬೀಡು ಬಿಡುತ್ತಿರುವ ಬಿಡಾಡಿ ದನಗಳ ತಡೆಗೆ ಪುರಸಭೆ ಕ್ರಮಕ್ಕೆ ಮುಂದಾಗದೆ ಜಾಣ ಕುರುಡು ಪ್ರದರ್ಶಿಸುತ್ತಿದೆ.
ಬೈಕ್, ಕಾರು, ಇತ್ಯಾದಿ ವಾಹನಗಳಲ್ಲಿ ಓಡಾಡುವ ಜನತೆ ಸೇರಿದಂತೆ ಪಾದಾಚಾರಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ಮೇಲೆ ಅಡ್ಡಗಟ್ಟಿ ನಿಂತ ದನಗಳ ಪರಿಣಾಮವಾಗಿಯೇ ಅಪಘಾತ ಸಂಭವಿಸಿದ ಘಟನೆಗಳು ಕೂಡ ಹಲವು ಕಡೆ ನಡೆದಿವೆ. ಇನ್ನಾದರೂ ಸ್ಥಳೀಯ ಆಡಳಿತಾಧಿಕಾರಿಗಳು, ಪೊಲೀಸ್ ಇಲಾಖೆ ದನಗಳ ಮಾಲಕರಿಗೆ ನೋಟಿಸ್ ಜಾರಿ ಮಾಡಿ ಬೀದಿ ದನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿ ಎಂಬುವುದು ಸಾರ್ವಜನಿಕರ ಆಗ್ರಹ.
ಬಿಡಾಡಿ ದನಗಳ ಹಾವಳಿ ಕುರಿತು ದೂರುಗಳು ಬಂದಿವೆ. ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
<ಮಹಮ್ಮದ್ ಯೂಸುಫ್
ಕೆಂಭಾವಿ ಪುರಸಭೆ ಮುಖ್ಯಾಧಿಕಾರಿ
ಪಟ್ಟಣದ ಪ್ರಮುಖ ರಸ್ತೆಗಳ ಮೇಲೆ ಬಿಡಾಡಿ ದನಗಳ ಹಾವಳಿ ಹೆಚ್ಚುತ್ತಿದೆ. ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ದನಗಳ ಮಾಲಕರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮಾಲಕರನ್ನು ಗುರುತಿಸಿ ನೋಟಿಸ್ ನೀಡಬೇಕು ಮತ್ತು ದನಗಳನ್ನು ಗೋಶಾಲೆಗೆ ಸೇರಿಸಬೇಕು.
<ಬಸವರಾಜ ಸದಬ, ವಾಹನ ಸವಾರ







