ಕೊಡಗು: ಎಂಟು ವರ್ಷಗಳಲ್ಲಿ 50 ಕಿಶೋರ, 22 ಬಾಲ ಕಾರ್ಮಿಕರು ಪತ್ತೆ

ಸಾಂದರ್ಭಿಕ ಚಿತ್ರ
ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ 2017ರಿಂದ 2025ರ ಮೇ ತಿಂಗಳವರೆಗೆ 22 ಬಾಲ ಕಾರ್ಮಿಕರು ಹಾಗೂ 50 ಕಿಶೋರ ಕಾರ್ಮಿಕರು ಪತ್ತೆಯಾಗಿದ್ದಾರೆ. ಇದರಲ್ಲಿ 61 ಬಾಲಕರು ಹಾಗೂ 11 ಬಾಲಕಿಯರು ಎಂದು ತಿಳಿದು ಬಂದಿದೆ.
ಕೊಡಗನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಸೊಸೈಟಿಯ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2017ರಿಂದ 2025ರವರೆಗೆ ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ 2,974 ತಪಾಸಣೆಗಳನ್ನು ಮಾಡಲಾಗಿದೆ. ಹೋಟೆಲ್, ಗ್ಯಾರೇಜ್, ತೋಟದ ಲೈನ್ ಮನೆಗಳಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ ಯಿಂದ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ವಿಶೇಷ ತಪಾಸಣೆ ಕಾರ್ಯಮಾಡಲಾಗಿದೆ.
ಕಳೆದ ಎಂಟು ವರ್ಷಗಳಲ್ಲಿ ಜಿಲ್ಲೆಯ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ 72 ಮಕ್ಕಳಲ್ಲಿ 32 ಮಕ್ಕಳನ್ನು ರಕ್ಷಣೆ ಮತ್ತು ಪೋಷಣೆಯ ಉದ್ದೇಶದಿಂದ ಮಕ್ಕಳ ಕಲ್ಯಾಣ ಸಮಿತಿ ಮೂಲಕ ಸರಕಾರಿ ಬಾಲ ಮಂದಿರಗಳಲ್ಲಿ ಪುನರ್ ವಸತಿ ನೀಡಲಾಗಿದೆ. ಉಳಿದ 40 ಮಕ್ಕಳನ್ನು ಪೋಷಕರ ವಶಕ್ಕೆ ನೀಡಲಾಗಿದೆ.
ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಲ್ಲಿ ಪತ್ತೆಯಾಗಿರುವ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಮಕ್ಕಳು ಜೀತ ಕಾರ್ಮಿಕ ಹಾಗೂ ಬಾಲ್ಯ ವಿವಾಹಕ್ಕೆ ಒಳಗಾಗಿರುವುದಿಲ್ಲ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಜಿಲ್ಲಾಧಿಕಾರಿಗೆ ನೀಡಿದ ಮಾಹಿತಿಯಲ್ಲಿ ಉಲ್ಲೇಖಿಸಿದ್ದಾರೆ.
ಏಕ ಪೋಷಕರು, ಬಡತನ ಕಾರಣ:
ಕೊಡಗು ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಲ್ಲಿ ಪತ್ತೆಯಾಗಿರುವ ಬಾಲ ಕಾರ್ಮಿಕರಲ್ಲಿ ಬಹುತೇಕ ಮಕ್ಕಳಿಗೆ ಏಕ ಪೋಷಕರು ಇರುವುದು ಕಂಡು ಬಂದಿದೆ. ಮನೆಯಲ್ಲಿ ಬಡತನದಿಂದ ವಿದ್ಯೆಯಿಂದ ವಂಚಿತರಾಗಿ, ಬಾಲ್ಯಾವಸ್ಥೆಯಲ್ಲೇ ಅನಿವಾರ್ಯವಾಗಿ ದುಡಿಮೆಗೆ ಇಳಿದಿದ್ದಾರೆ. 14 ವರ್ಷದ ಕೆಳಗಿನ ಮಕ್ಕಳನ್ನು ದುಡಿಸಿಕೊಳ್ಳಬಾರದು ಎಂಬ ನಿಯಮ ಇದ್ದರೂ, ಮಕ್ಕಳಿಗೆ ಕಡಿಮೆ ಸಂಬಳ ಕೊಟ್ಟರೆ ಸಾಕು ಎಂಬ ನೆಪವೊಡ್ಡಿ ಮಕ್ಕಳನ್ನು ದಿನಸಿ ಅಂಗಡಿ, ಹೋಟೆಲ್ ಹಾಗೂ ತೋಟಗಳಲ್ಲಿ ದುಡಿಸಿಕೊಳ್ಳುತ್ತಿದ್ದಾರೆ. ಅದಲ್ಲದೆ ಕೊಡಗು ಜಿಲ್ಲೆಯಲ್ಲಿ ಬಾರ್ನಲ್ಲೂ ಬಾಲ ಕಾರ್ಮಿಕರು ದುಡಿಯುತ್ತಿರುವುದು ಪತ್ತೆಯಾಗಿದೆ. ಬಹುತೇಕ ವಲಸೆ ಕಾರ್ಮಿಕರ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಬಾಲ್ಯಾವಸ್ಥೆಯಲ್ಲಿ ಮಕ್ಕಳು ಶಾಲೆ ಬಿಟ್ಟು ದುಡಿಮೆಯತ್ತ ಕಾಲಿಡುತ್ತಿರುವುದರಿಂದ ಸಣ್ಣ ಪ್ರಾಯದಲ್ಲೇ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಬಾರ್ನಲ್ಲಿ ಪತ್ತೆಯಾಗಿದ್ದ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರು ಮದ್ಯಪಾನದ ಚಟಕ್ಕೆ ದಾಸರಾಗಿದ್ದರು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಕೊಡಗು ಜಿಲ್ಲೆಯಲ್ಲಿ ಮಕ್ಕಳನ್ನು ಕಾರ್ಮಿಕರನ್ನಾಗಿ ಬಳಸಿಕೊಳ್ಳುತ್ತಿರುವವರ ವಿರುದ್ಧ ಜಿಲ್ಲಾ ಕಾರ್ಮಿಕ ಇಲಾಖೆ ಪ್ರಕರಣ ದಾಖಲಿಸಿದ್ದು, ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರ ಪುನರ್ವಸತಿ ಕಲ್ಯಾಣ ನಿಧಿ ಯೋಜನೆಯಡಿ ಅರ್ಹ ಮಕ್ಕಳ ಹೆಸರಿನಲ್ಲಿ 35,000 ರೂ.ಗಳಂತೆ ಸ್ಥಿರ ಠೇವಣಿ ಕೂಡ ಇರಿಸಲಾಗಿದೆ. ಎಸ್ಸಿಎಸ್ಪಿ ಟಿಎಸ್ಪಿ ಯೋಜನೆಯಡಿ 27 ಮಕ್ಕಳಿಗೆ ಕಲಿಕಾ ಸಾಮಗ್ರಿ ಹಾಗೂ ಆಹಾರ ಕಿಟ್ ಕೂಡ ಜಿಲ್ಲಾ ಕಾರ್ಮಿಕ ಇಲಾಖೆಯಿಂದ ನೀಡಲಾಗಿದೆ.
►ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ಅನ್ವಯ ಎಲ್ಲ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿ ಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಹಾಗೂ ಸಂಜ್ಞೆಯ (ವಾರೆಂಟ್ ರಹಿತ ಬಂಧಿಸಬಹುದಾದ) ಅಪರಾಧವಾಗಿದೆ.
► ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರಂತೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ಮಾಲಕರಿಗೆ 6 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 20,000ರೂ.ಯಿಂದ 50,000 ರೂ.ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ. ಪೋಷಕರಾಗಿದ್ದಲ್ಲಿ ಲಘು ಶಿಕ್ಷಾ ಪ್ರಾವಧಾನವಿದ್ದು, ಪುನರಾವರ್ತಿತ ಅಪರಾಧಕ್ಕೆ 10,000 ರೂ.ಗಳ ದಂಡವನ್ನು ವಿಧಿಸಬಹುದಾಗಿರುತ್ತದೆ.
► ಸರ್ವೋಚ್ಚ ನ್ಯಾಯಾಲಯವು ರಿಟ್ ಅರ್ಜಿ (ಸಿವಿಲ್) ಸಂಖ್ಯೆ 465/1986ರಲ್ಲಿ ನೀಡಿರುವ ನಿರ್ದೇಶನದನ್ವಯ ತಪ್ಪಿತಸ್ಥ ಮಾಲಕರು ತಾವು ನಿಯೋಜಿಸಿಕೊಂಡ ಪ್ರತಿ ಮಗುವಿಗೆ 20,000ರೂ.ಗಳನ್ನು ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆ ಕಾರ್ಮಿಕರ ಪುನರ್ವಸತಿ ಕಲ್ಯಾಣ ನಿಧಿ ಯೋಜನೆಗೆ ಪಾವತಿಸಬೇಕಾಗುತ್ತದೆ.
ಜಿಲ್ಲಾ, ತಾಲೂಕು ಮಟ್ಟಗಳಲ್ಲಿ ಟಾಸ್ಕ್ ಫೋರ್ಸ್ ವಿಶೇಷ ತಂಡಗಳನ್ನು ರಚಿಸಿ ಜಿಲ್ಲೆಯಲ್ಲಿನ ಅಂಗಡಿ, ಹೋಟೆಲ್, ಗ್ಯಾರೇಜ್, ಕಲ್ಲು ಕ್ವಾರೆ, ಕೈಗಾರಿಕೆ, ತೋಟಗಳು, ಮನೆ ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳಲ್ಲಿ ನಿರಂತರವಾಗಿ ತಪಾಸಣೆಗಳನ್ನು ಕೈಗೊಳ್ಳಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಬಾಲ್ಯಾವಸ್ಥೆಯ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡಲ್ಲಿ ಅಂತವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದೇವೆ. ಕೊಡಗನ್ನು ‘ಬಾಲ ಕಾರ್ಮಿಕ ಮುಕ್ತ’ ಜಿಲ್ಲೆಯನ್ನಾಗಿ ಮಾಡಲು ಇಲಾಖೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.
-ಆರ್.ಶೀರಾಝ್ ಅಹ್ಮದ್, ಯೋಜನಾ ನಿರ್ದೇಶಕ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಕೊಡಗು ಜಿಲ್ಲೆ.







