ಕೊಡಗು: ಪ್ರಸಕ್ತ ಸಾಲಿನಲ್ಲಿ ಆರು ಸರಕಾರಿ ಶಾಲೆಗಳಿಗೆ ಬೀಗ

ಮಡಿಕೇರಿ: ಸರಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಲು ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗವನ್ನು (ದ್ವಿ-ಭಾಷಾ ಶಾಲೆ) ತೆರೆದರೂ ವರ್ಷದಿಂದ ವರ್ಷಕ್ಕೆ ಕೊಡಗು ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಶೂನ್ಯ ದಾಖಲಾತಿಯಿಂದ ಆರು ಸರಕಾರಿ ಶಾಲೆಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದೆ.ಒಂದು ಬಾರಿ ಸರಕಾರಿ ಶಾಲೆಗಳಿಗೆ ಬೀಗ ಬಿದ್ದರೆ ಪುನಃ ಆ ಶಾಲೆಗಳಿಗೆ ಮಕ್ಕಳನ್ನು ಪೋಷಕರು ದಾಖಲಿಸುವುದು ಅನುಮಾನ.
ಜಿಲ್ಲೆಯ ಮಡಿಕೇರಿ ತಾಲೂಕಿನ ಚೇರಂಬಾಣೆ ಸಮೀಪದ ಯರವನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೋಮವಾರಪೇಟೆ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಶನಿವಾರಸಂತೆ ಸಮೀಪದ ದುಂಡಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಂಡ್ಲಿ ಸಮೀಪದ ಮೂದ್ರವಳ್ಳಿ ಬಿ.ಕಿರಿಯ ಪ್ರಾಥಮಿಕ ಶಾಲೆ, ಶಾಂತಳ್ಳಿ ಸಮೀಪದ ಮಲ್ಲಿಕಾರ್ಜುನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿದ್ದಲಿಂಗಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶೂನ್ಯ ದಾಖಲಾತಿಯಿಂದ ಶಾಲೆಗಳನ್ನು ಮುಚ್ಚಲ್ಪಟ್ಟಿದೆ.
ಐದು ವರ್ಷಗಳಲ್ಲಿ ಕೊಡಗಿನಲ್ಲಿ 27 ಸರಕಾರಿ ಶಾಲೆಗಳಿಗೆ ಬೀಗ!
ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ 27 ಸರಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ. ಇಂಗ್ಲಿಷ್ ವ್ಯಾಮೋಹ ಹಾಗೂ ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಎಂಬಿತ್ಯಾದಿ ಕಾರಣಗಳಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ದಾಖಲು ಮಾಡುತ್ತಿದ್ದಾರೆ.
ಕೊಡಗು ಜಿಲ್ಲೆಯಲ್ಲಿ 2019ರಲ್ಲಿ 2, 2022ರಲ್ಲಿ 9, 2023ರಲ್ಲಿ 4 ,2024 ರಲ್ಲಿ 6 ಹಾಗೂ ಪ್ರಸಕ್ತ 2025-26ನೇ ಸಾಲಿನಲ್ಲಿ 6 ಸರಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ. 2019 ರಿಂದ 2025ರವರೆಗೆ ಕೊಡಗು ಜಿಲ್ಲೆಯಲ್ಲಿ 27 ಸರಕಾರಿ ಶಾಲೆಗಳು ಮುಚ್ಚಲ್ಪಟ್ಟಿದೆ. 2019 ರಿಂದ 2025ರವರೆಗೆ ಮುಚ್ಚಲ್ಪಟ್ಟಿರುವ ಸರಕಾರಿ ಶಾಲೆಗಳಲ್ಲಿ 18 ಹಿರಿಯ ಪ್ರಾಥಮಿಕ ಹಾಗೂ 9 ಕಿರಿಯ ಪ್ರಾಥಮಿಕ ಶಾಲೆಗಳು ಸೇರಿಕೊಂಡಿವೆ.
2019 ರಿಂದ 2025ರವರೆಗೆ ಮಡಿಕೇರಿ ತಾಲೂಕಿನಲ್ಲಿ 7, ಸೋಮವಾರಪೇಟೆ ತಾಲೂಕಿನ 17 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 3 ಸರಕಾರಿ ಶಾಲೆಗಳಿಗೆ ಶೂನ್ಯ ದಾಖಲಾತಿಯಿಂದ ಬೀಗ ಜಡಿಯಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಪ್ರತೀ ವರ್ಷ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ. ಶೂನ್ಯ ದಾಖಲಾತಿಯಾಗಿರುವ ಕಾರಣದಿಂದ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದೆ. ವಿದ್ಯಾರ್ಥಿಗಳು ದಾಖಲಾದರೆ ಶಾಲೆಗಳನ್ನು ರೀ ಓಪನ್ ಮಾಡಲಾಗುವುದು. ಈ ಹಿಂದೆ ಮುಚ್ಚಲ್ಪಟ್ಟಿದ್ದ ಭಾಗಮಂಡಲ ಸಮೀಪದ ಸರಕಾರಿ ಶಾಲೆಗಳಿಗೆ ಐದು ವಿದ್ಯಾರ್ಥಿಗಳು ದಾಖಲಾಗಿದ್ದು, ಶಾಲೆಯನ್ನು ಮತ್ತೆ ಓಪನ್ ಮಾಡಿದ್ದೇವೆ.
-ರಂಗಧಾಮಪ್ಪ ಸಿ., ಡಿಡಿಪಿಐ ಕೊಡಗು ಜಿಲ್ಲೆ
2025-26ನೇ ಸಾಲಿನಲ್ಲಿ ಸೋಮವಾರಪೇಟೆ ತಾಲೂಕಿನ ಮೋದೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಸ.ಹಿ.ಪ್ರಾ ಶಾಲೆ ದುಂಡಳ್ಳಿ ಹಾಗೂ ಸ.ಕಿ.ಪ್ರಾ ಶಾಲೆ ಮಲ್ಲಿಕಾರ್ಜುನ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇರುವ ಪ್ರತಿ ಶಾಲೆಯಲ್ಲಿರುವ ಶಿಕ್ಷಕರನ್ನು ಅಗತ್ಯವಿರುವ ಶಾಲೆಗಳಿಗೆ ನಿಯೋಜನೆ ಮಾಡಲಾಗಿದೆ. ತಾತ್ಕಾಲಿಕವಾಗಿ ಸೋಮವಾರಪೇಟೆ ತಾಲೂಕಿನ ಆರು ಸರಕಾರಿ ಶಾಲೆಗಳು ಮುಚ್ಚಲ್ಪಟ್ಟಿದೆ. ಶೂನ್ಯ ದಾಖಲಾತಿಯಿಂದ ಶಾಲೆಗಳನ್ನು ಮುಚ್ಚಲ್ಪಟ್ಟಿದ್ದು, ಕನಿಷ್ಠ ಒಂದು ಶಾಲೆಗೆ ಐದು ವಿದ್ಯಾರ್ಥಿಗಳು ದಾಖಲಾದರೆ ಇಂದಿನಿಂದಲೇ ಶಾಲೆ ತೆರೆಯಲಾಗುವುದು.
-ಭಾಗ್ಯಮ್ಮ, ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ







