ಅಳಿವಿನಂಚಿನಲ್ಲಿರುವ ಕೊಡಗಿನ ಆದಿವಾಸಿಗಳ ಬದುಕಿಗೆ ಮಿಡಿಯಬೇಕಿದೆ: ಅಬ್ದುಲ್ ರಶೀದ್

ಮಡಿಕೇರಿ: ಸುಂಟಿಕೊಪ್ಪದಲ್ಲಿ ಮೇ 29 ಮತ್ತು 30ರಂದು ಆಯೋಜಿಸಲಾಗಿರುವ ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ, ಕವಿ ಹಾಗೂ ಕಥೆಗಾರ ಅಬ್ದುಲ್ ರಶೀದ್ ಅವರೊಂದಿಗೆ ‘ವಾರ್ತಾ ಭಾರತಿ’ ನಡೆಸಿದ ಸಂದರ್ಶನ
ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..
ಅಬ್ದುಲ್ ರಶೀದ್: ಈ ಹಿಂದೆಯೇ ಎರಡು ಬಾರಿ ಸರ್ವಾಧ್ಯಕ್ಷನಾಗಲು ಅವಕಾಶ ಬಂದಿತ್ತು. ಆದರೆ ನಾನು ಆಕಾಶವಾಣಿಯಲ್ಲಿ ಉದ್ಯೋಗದಲ್ಲಿದ್ದೆ. ಇದೊಂದು ಕೇಂದ್ರ ಸರಕಾರಿ ಉದ್ಯೋಗವಾದ ಕಾರಣ ಸಮ್ಮೇಳನಾಧ್ಯಕ್ಷನಾಗಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.
ಈ ವಿಚಾರಕ್ಕಿಂತ ಹೆಚ್ಚಾಗಿ ನನಗೆ ಮೆರವಣಿಗೆ, ಶಾಲು, ಪೇಟ, ಸನ್ಮಾನ ಇವುಗಳ ಬಗ್ಗೆ ಸಂಕೋಚವಿತ್ತು. ಈ ಎರಡು ಕಾರಣಗಳಿಂದ ಎರಡು ಬಾರಿ ಬಂದ ಅವಕಾಶವನ್ನು ಬಿಟ್ಟಿದ್ದೇನೆ. ಇದೀಗ ನಾನು ನಿವೃತ್ತಿಯಾಗಿದ್ದು, ಸುಂಟಿಕೊಪ್ಪದಲ್ಲಿ ನಡೆಯುವ ಸಮ್ಮೇಳನದ ಸರ್ವಾಧ್ಯಕ್ಷನಾಗಿ ಪಾಲ್ಗೊಳ್ಳುತ್ತಿದ್ದೇನೆ.
ಸಮ್ಮೇಳನದ ಸರ್ವಾಧ್ಯಕ್ಷನಾಗಿ ಆಯ್ಕೆಯಾದ ಬಗ್ಗೆ ನನಗೆ ಅತೀವ ಸಂತೋಷವಾಗುತ್ತಿದೆ. ಕಾರಣ ಸುಂಟಿಕೊಪ್ಪ ನನ್ನ ಹುಟ್ಟೂರು, ನನ್ನ ಪೋಷಕರು, ಸ್ನೇಹಿತರು, ಪ್ರೀತಿ ಪಾತ್ರರು ಇರುವ ಊರಿನಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಪಾಲ್ಗೊಳ್ಳುತ್ತಿರುವುದು ಖುಷಿ ತಂದಿದೆ, ಜನ ನನ್ನನ್ನು, ನನ್ನ ಸಾಹಿತ್ಯ ಸಾಧನೆಯನ್ನು ಗುರುತಿಸುತ್ತಾರೆ ಎನ್ನುವ ಸಂತೋಷವೂ ಇದೆ.
ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮತ್ತು ಕನ್ನಡ ನಾಡಿಗೆ ಕೊಡುಗೆ ನೀಡುವಲ್ಲಿ ಯಶಸ್ವಿಯಾಗುತ್ತಿದೆಯೇ ?
ಅಬ್ದುಲ್ ರಶೀದ್: ಕನ್ನಡ ಸಾಹಿತ್ಯ ಪರಿಷತ್ ಹಿರಿಯ ಸಾಹಿತಿಗಳನ್ನು ಸಂಘಟಿಸಿ ಕನ್ನಡ ಸಾಹಿತ್ಯ ಮತ್ತು ಕನ್ನಡ ನುಡಿಯ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಿದೆ. ಕರ್ನಾಟಕ ಏಕೀಕರಣ ಮತ್ತು ಕನ್ನಡ ಭಾಷೆಯ ಪ್ರಶ್ನೆ ಬಂದಾಗ ಸಾಹಿತಿಗಳ ಭಾಷಣಗಳು ಹೆಚ್ಚು ಪರಿಣಾಮ ಬೀರಿವೆ. 1971ರಲ್ಲಿ ನಾನು ಪ್ರೌಢ ಶಾಲೆಯಲ್ಲಿ ಓದುತ್ತಿದ್ದಾಗ ಸಾಹಿತ್ಯ ಸಮ್ಮೇಳನದಲ್ಲಿ ಶಂಭಾ ಜೋಷಿ ಅವರನ್ನು ನೋಡಲೆಂದು ಹೋಗಿದ್ದೆ. ಆ ಸಮ್ಮೇಳನ ನನಗೆ ಸಾಹಿತ್ಯದ ಸ್ಫೂರ್ತಿಯನ್ನು ತುಂಬಿತು. ಸಮ್ಮೇಳನಗಳು ಬರಹಗಾರರನ್ನು ಪರಿಚಯಿಸಿಕೊಳ್ಳಲು, ಪುಸ್ತಕಗಳ ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ಸಾಹಿತ್ಯದ ಆಕರ್ಷಣೆ ಕಡಿಮೆ ಇದೆ, ಕ್ರೀಡಾಸಕ್ತಿ ಹೆಚ್ಚು ಇದೆ, ಜಿಲ್ಲೆಯಲ್ಲಿ ಮೌಲ್ಯಕ್ಕೆ ಬೆಲೆ ಇದೆ.
ಇಂದಿನ ಸಾಹಿತ್ಯ ಸಮ್ಮೇಳನಗಳಲ್ಲಿ ದಶಕದ ಹಿಂದಿನ ಶಕ್ತಿ ಉಳಿದುಕೊಂಡಿದೆಯೇ ಅಥವಾ ಸಮ್ಮೇಳನ ಹೀಗೆ ಬಂದು ಹಾಗೆ ಹೋಗುತ್ತಿದೆಯೇ ?
ಅಬ್ದುಲ್ ರಶೀದ್: ನಾನು ಪತ್ರಕರ್ತನಾಗಿ ಸಾಹಿತ್ಯ ಸಮ್ಮೇಳನಗಳನ್ನು ನೋಡಿದ್ದೇನೆ, ಇತ್ತೀಚೆಗೆ ಸಮ್ಮೇಳನ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತಾಗಿರುವುದು ನಿಜ. ಆದರೆ ಇದರ ನಡುವೆಯೇ ಕನ್ನಡ ನಾಡು, ನುಡಿ, ಸಾಹಿತ್ಯದ ಬೆಳವಣಿಗೆಯ ಚರ್ಚೆಗಳು ನಡೆಯುತ್ತದೆ. ಸಮ್ಮೇಳನದ ಬಗ್ಗೆ ಟೀಕೆಗಳು ವ್ಯಕ್ತವಾದಾಗ ಚರ್ಚೆಗೆ ಅವಕಾಶ ಸಿಗುತ್ತದೆ. ಸಮ್ಮೇಳನಗಳ ಬಗೆಗಿನ ಟೀಕೆಗಳು ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾಗಿದೆ. ಪರ್ಯಾಯ ವ್ಯವಸ್ಥೆಗಳ ಕುರಿತು ಚರ್ಚೆಗೆ ಅವಕಾಶ ಸಿಗುತ್ತದೆ. ಪುಸ್ತಕಗಳ ಪ್ರಕಟಣೆ ಮತ್ತು ನಿಗಂಟುಗಳ ರಚನೆಗೆ ಸರಕಾರದ ಸಹಾಯ ಧನ ದೊರೆಯುತ್ತದೆ, ಇದು ಸಾಹಿತಿಗಳಿಗೆ ಪ್ರೋತ್ಸಾಹದಾಯಕವಾಗಿದೆ.
ಕನ್ನಡ ಸಾಹಿತ್ಯ ಸಮ್ಮೇಳನಗಳ ಜವಾಬ್ದಾರಿ ಏನು ?
ಅಬ್ದುಲ್ ರಶೀದ್: ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ದೊಡ್ಡ ಜವಾಬ್ದಾರಿ ಸಾಹಿತ್ಯ ಸಮ್ಮೇಳನಗಳ ಮೇಲಿದೆ. ನಾಡು ನುಡಿಯ ರಕ್ಷಣೆಯ ಬಗ್ಗೆ ತೀವ್ರ ಚರ್ಚೆಗಳಾಗಬೇಕು. ಜಿಲ್ಲಾ ಮಟ್ಟದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಜಾಗೃತಿ ಮೂಡಿಸಿದರೆ ಪ್ರತಿಯೊಬ್ಬರಿಗೂ ಸಮ್ಮೇಳನದ ಉದ್ದೇಶದ ಅರಿವಾಗುತ್ತದೆ. ಆಗ ಸಮ್ಮೇಳನ ಸಾರ್ಥಕವಾಗುತ್ತದೆ.
ಜನರಲ್ಲಿ ಕನ್ನಡ ನುಡಿ ಮತ್ತು ಸಾಹಿತ್ಯದ ಬಗ್ಗೆ ಸ್ಫೂರ್ತಿ ತುಂಬುವ ಸಮ್ಮೇಳನಾಧ್ಯಕ್ಷರ ಹೊಣೆ ಹೇಗಿರಬೇಕು ?
ಅಬ್ದುಲ್ ರಶೀದ್: ಹಿಂದೆ ಕನ್ನಡ ಭಾಷೆ ಅಪಾಯದಲ್ಲಿದ್ದಾಗ ಕನ್ನಡವನ್ನು ಉಳಿಸಲು ಸಮ್ಮೇಳನಾಧ್ಯಕ್ಷರ ಜವಾಬ್ದಾರಿ ದೊಡ್ಡದೇ ಇತ್ತು, ದಿಟ್ಟ ಧ್ವನಿಯ ಭಾಷಣದ ಮೂಲಕ ಕನ್ನಡಿಗರನ್ನು ಎಚ್ಚರಿಸುವ ಕಾರ್ಯ ನಡೆಯುತ್ತಿತ್ತು.
ಆದರೆ ಈಗ ಕನ್ನಡವೇ ನಮ್ಮನ್ನು ಉಳಿಸುತ್ತಿದೆ, ಕನ್ನಡ ಭಾಷೆ ಬೆಳೆದಿದೆ, ಕನ್ನಡ ಸಾಹಿತ್ಯ ಬೆಳೆದಿದೆ. ಒಳ್ಳೆಯ ಪುಸ್ತಕಗಳು ರಚನೆಯಾಗುತ್ತಿವೆ. ಆದ್ದರಿಂದ ಸಮ್ಮೇಳನಾಧ್ಯಕ್ಷರು ಕನ್ನಡ ನಾಡು ನುಡಿಯ ಬಗ್ಗೆ ಮತ್ತಷ್ಟು ಜನಜಾಗೃತಿ ಮೂಡಿಸುವ ಕಾರ್ಯ ವನ್ನು ಮಾಡ ಬಹುದು.
ಸಮ್ಮೇಳನಗಳಲ್ಲಿ ಹೊಸ ಚಿಂತನೆಯ ಅಗತ್ಯ ಇದೆಯಾ ?
ಅಬ್ದುಲ್ ರಶೀದ್: ಖಂಡಿತಾ ಅಗತ್ಯವಿದೆ, ಸಮ್ಮೇಳನಗಳು ನಡೆಯುವ ಎಲ್ಲ ಕಡೆಯೂ ಒಂದೇ ರೀತಿಯ ಗೋಷ್ಠಿಗಳು, ಚರ್ಚೆಗಳು ನಡೆಯುತ್ತವೆ. ಮಾತು ಗಾರರು ಕೂಡ ಕಾಣುತ್ತಾರೆ, ಇದಕ್ಕಿಂತ ಆಯಾ ಜಿಲ್ಲೆಯ ಪ್ರತಿಭಾವಂತರನ್ನು ಆಹ್ವಾನಿಸಿ ಸ್ಥಳೀಯ ವಿಚಾರಗಳ ಕುರಿತು ಚರ್ಚೆ ನಡೆಯಬೇಕು, ಗೋಷ್ಠಿಗಳು ಆಯೋಜನೆಗೊಳ್ಳಬೇಕು. ಇದು ಹೆಚ್ಚು ಪರಿಣಾಮಕಾರಿಯಾಗುತ್ತದೆ.
ಸಾಹಿತ್ಯ ಸಮ್ಮೇಳನಗಳಿಗೆ ಸರಕಾರದಿಂದ ಏನು ಬಯಸುವಿರಿ ?
ಅಬ್ದುಲ್ ರಶೀದ್: ಸಾಹಿತ್ಯ ಸಮ್ಮೇಳನದಲ್ಲಿ ಸರಕಾರದ ಹಸ್ತಕ್ಷೇಪವಾಗಬಾರದು, ಹಸ್ತಕ್ಷೇಪವಾದರೆ ಅಧಿಕಾರಿಶಾಹಿಗಳ ಮುಂದೆ ಅನುದಾ ನಕ್ಕಾಗಿ ಕೈಯೊಡ್ಡುವ ಪರಿಸ್ಥಿತಿ ನಿರ್ಮಾಣ ವಾಗಬಹುದು, ಪ್ರಭಾವಿಗಳು ಅಥವಾ ಓಲೈಕೆ ಮಾಡುವವರು ಅನುದಾನ ತರುವಲ್ಲಿ ಶಕ್ತರಾಗಬಹುದು. ಸಮ್ಮೇಳನದ ಸಂಘಟಕರು ಮರ್ಜಿಗೆ ಒಳಗಾಗಬಹುದು, ಮುಲಾಜಿಲ್ಲದ ಸಾಹಿತಿಗಳು ಈ ವ್ಯವಸ್ಥೆ ಕಡೆಗೆ ತಲೆ ಹಾಕಲ್ಲ. ಆದ್ದರಿಂದ ಸರಕಾರದ ನೆರವಿಗೆ ಕಾಯದೆ ಜನರ ದುಡ್ಡಿನಿಂದಲೇ ಸಾಹಿತ್ಯ ಸಮ್ಮೇಳನಗಳು ನಡೆದರೆ ಅರ್ಥಪೂರ್ಣವಾಗಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದೆ.
ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಯುವ ಜನತೆಯ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆಯೇ, ಯುವ ಜನರನ್ನು ಸೆಳೆಯುವ ರೀತಿ ಹೇಗೆ, ಸಾಹಿತ್ಯಾಸಕ್ತಿ ಮೂಡಿಸುವುದು ಹೇಗೆ?
ಅಬ್ದುಲ್ ರಶೀದ್: 20 ವರ್ಷದೊಳಗಿನ ಮಕ್ಕಳನ್ನು ಯುವ ಜನತೆ ಎಂದು ಗುರುತಿಸಿ ಸಮ್ಮೇಳನಗಳಿಗೆ ಎಳೆದು ತಂದರೆ ಖುರ್ಚಿ ತುಂಬಿಸುವ ಕೆಲಸವಾಗಬಹುದು. ಈ ವಯಸ್ಸಿನ ಮಕ್ಕಳು ಅವರದ್ದೇ ಲೋಕದಲ್ಲಿರುತ್ತಾರೆ. ಸಾಹಿತ್ಯದ ಬಗ್ಗೆ ಅಷ್ಟು ಆಸಕ್ತಿ ಇರುವುದಿಲ್ಲ. ಸ್ವಇಚ್ಛೆಯಿಂದ ಯುವ ಸಮೂಹ ಸಮ್ಮೇಳನಗಳಿಗೆ ಬರುವಂತಾ ಗಬೇಕು. 40 ವರ್ಷದೊಳಗಿನ ಸಾಹಿತ್ಯಾಸಕ್ತರು ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವುದನ್ನು ನಾನು ಕಂಡಿದ್ದೇನೆ. ಶಾಲಾ ಕಾಲೇಜುಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ವಾತಾವರಣ ಸೃಷ್ಟಿಯಾದರೆ ಯುವ ಜನತೆ ಸ್ಫೂರ್ತಿಗೊಂಡು ಸಾಹಿತ್ಯ ರಚನೆಗೆ ಮುಂದಾಗಬಹುದು.
ಹಿಂದೆ ಪುಸ್ತಕ ಮತ್ತು ಪತ್ರಿಕೆಗಳ ಮೂಲಕ ಅಕ್ಷರ ಬಲ ಹೆಚ್ಚಾಗುತ್ತಿತ್ತು, ಇಂದು ಸಾಮಾಜಿಕ ಜಾಲತಾಣ, ಡಿಜಿಟಲ್ ಯುಗವಿದೆ. ಬದಲಾದ ಪರಿಸ್ಥಿತಿಗೆ ಹೊಂದಿಕೆಯಾಗುವ ಹಾಗೆ ಸಾಹಿತ್ಯವನ್ನು ಹೇಗೆ ಬೆಳೆಸಬಹುದು? ಓದುಗರನ್ನು ಆಕರ್ಷಿಸುವುದು ಹೇಗೆ ?
ಅಬ್ದುಲ್ ರಶೀದ್: ಇಂದು ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಕ್ಷೇತ್ರ ತುಂಬಾ ಪರಿಣಾಮಕಾರಿಯಾಗಿದೆ. ನಾನು ಸೇರಿದಂತೆ ಬಹುತೇಕರು ಸಾಮಾಜಿಕ ಜಾಲತಾಣಗಳನ್ನೇ ಅವಲಂಬಿಸಿದ್ದಾರೆ. ನನ್ನ ಪುಸ್ತಕಗಳನ್ನು ಓದಿ ಪ್ರತಿಕ್ರಿಯೆ ನೀಡುವ ಓದುಗರಿಗಿಂತ ಸಾಮಾಜಿಕ ಜಾಲತಾಣದಲ್ಲಿ ನಾನು ಬರೆದ ಲೇಖನಗಳನ್ನು ಓದಿ ಪ್ರತಿಕ್ರಿಯೆ ನೀಡುವವರ ಸಂಖ್ಯೆಯೇ ದೊಡ್ಡದಿದೆ. ಸಾಮಾಜಿಕ ಜಾಲತಾಣದ ಸಾಹಿತ್ಯವನ್ನು ಹೆಚ್ಚು ಜನ ಓದುತ್ತಾರೆ. ಆದ್ದರಿಂದ ಪರಿಸ್ಥಿತಿ ಬದಲಾದಂತೆ ಸಾಹಿತಿಗಳು ಕೂಡ ಬದಲಾಗಬೇಕಾಗುತ್ತದೆ.
ಬಹಳ ಹಿಂದೆ ತಾಳೆಗರಿಯಲ್ಲಿ ಬರೆಯಲಾಗುತ್ತಿತ್ತು, ನಂತರ ಪತ್ರಿಕೆ, ಪುಸ್ತಕಗಳು ಬಂದವು. ಹಿರಿಯ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಬರವಣಿಗೆಯ ನಂತರ ಛಾಯಾಗ್ರಹಣಕ್ಕೆ ಆದ್ಯತೆ ನೀಡಿದರು. ಸಾಹಿತಿಗಳು ಹೊಸತನಕ್ಕೆ ತುಡಿಯಬೇಕು ಮತ್ತು ಹೊಂದಿಕೊಳ್ಳಬೇಕು.
ಇಂದಿನ ಯುವ ಸಾಹಿತಿಗಳಿಗೆ ನಿಮ್ಮ ಕಿವಿಮಾತು ಏನು ?
ಅಬ್ದುಲ್ ರಶೀದ್: ಯುವ ಸಾಹಿತಿಗಳು ತಾವು ಬರೆದದ್ದೇ ಸಾಹಿತ್ಯವೆಂದು ತಿಳಿದುಕೊಳ್ಳಬಾರದು, ಖ್ಯಾತ ಹಿರಿಯ ಸಾಹಿತಿಗಳ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಬೇಕು. ಕನ್ನಡದ ಪುಸ್ತಕಗಳನ್ನು ಓದಿ ಭಾಷಾ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳಬೇಕು.
ಶಾಲಾ ಕಾಲೇಜುಗಳಲ್ಲಿ ಸಾಹಿತ್ಯಾಭಿರುಚಿ ಮೂಡಿಸುವ ಅಗತ್ಯವಿದೆಯೇ ?
ಅಬ್ದುಲ್ ರಶೀದ್: ಖಂಡಿತಾ ಇದೆ, ಶಾಲೆಯಲ್ಲಿ ಸಾಹಿತ್ಯಾಭಿರುಚಿ ಮೂಡಿಸಿದ್ದರಿಂದಲೇ ನನಗೆ ಸಾಹಿತ್ಯದ ಮೇಲೆ ಒಲವು ಬಂತು. ನಾನು ಸಂಪಾಜೆ ಮತ್ತು ಮಾದಾಪುರ ಶಾಲೆಗಳಲ್ಲಿ ಓದುತ್ತಿದ್ದಾಗ ಅಲ್ಲಿನ ಶಿಕ್ಷಕರು ನನಗೆ ಬರೆಯಲು ಪ್ರೋತ್ಸಾಹ ನೀಡಿದರು. ತಪ್ಪುಗಳನ್ನು ತಿದ್ದಿದರು, ಸಾಹಿತ್ಯ ರಚನೆಗೆ ಪ್ರೇರಣೆಯಾದರು. ಆದ್ದರಿಂದ ಶಾಲಾ ಕಾಲೇಜುಗಳಲ್ಲೇ ಕನ್ನಡ ಭಾಷೆ ಮತ್ತು ಸಾಹಿತ್ಯಾಭಿಮಾನವನ್ನು ಮೂಡಿಸಬೇಕು, ಬರವಣಿಗೆಗೆ ಪ್ರೋತ್ಸಾಹ ನೀಡಬೇಕು.
ಸಾಹಿತ್ಯ ಸಮ್ಮೇಳನಗಳಲ್ಲಿ ತೆಗೆದುಕೊಳ್ಳುವ ನಿರ್ಣಯಗಳ ಬಗ್ಗೆ ನಿಮಗೆ ನಂಬಿಕೆ ಇದೆಯೇ ? ನಿರ್ಣಯಗಳು ಈಡೇರದೆ ಇರಲು ಕಾರಣವೇನು ?
ಅಬ್ದುಲ್ ರಶೀದ್: ಇತ್ತೀಚಿನ ದಿನಗಳಲ್ಲಿ ಸಮ್ಮೇಳನಗಳ ನಿರ್ಣಯಗಳು ಯಾಂತ್ರಿಕವಾಗುತ್ತಿದೆ. ಬಹುತೇಕ ನಿರ್ಣಯಗಳು ಅನುಷ್ಠಾನಗೊಳ್ಳುತ್ತಿಲ್ಲ, ತೆಗೆದುಕೊಂಡ ನಿರ್ಣಯ ಈಡೇರುವವರೆಗೆ ಅದರ ಹಿಂದೆ ಬೀಳುವ ನಿಷ್ಠುರವಾದದ ನಾಯಕತ್ವ ಬೇಕಾಗಿದೆ. ನಿರ್ಣಯಗಳಿಗೆ ದೃಢ ಸಂಕಲ್ಪ ಬೇಕು.
ಕೊಡಗಿನೊಂದಿಗೆ ನಿಮ್ಮ ನಂಟಿನ ಬಗ್ಗೆ ಹೇಳಿ? ಇಲ್ಲಿನ ಸಾಹಿತ್ಯ ಲೋಕ ಹೇಗಿದೆ ?
ಅಬ್ದುಲ್ ರಶೀದ್: ನಾನು ಹುಟ್ಟಿ ಬೆಳೆದ ಮತ್ತು ವೃತ್ತಿ ಜೀವನ ನಡೆಸಿದ ಕೊಡಗು ಜಿಲ್ಲೆಯ ಬಗ್ಗೆ ಅತೀವ ಅಭಿಮಾನವಿದೆ, ಮರೆಯಲಾಗದ ನಂಟಿದೆ. ಕೊಡಗಿನ ಸಾಹಿತ್ಯ ಲೋಕದ ಬಗ್ಗೆ ಚಿಂತನೆ ಮಾಡುವ ಮೊದಲು ಇಲ್ಲಿನ ಆದಿವಾಸಿಗಳ ಬದುಕಿನ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ. ಯಾಕೆಂದರೆ ಸಾಹಿತ್ಯಕ್ಕಿಂತ ಬದುಕು ದೊಡ್ಡದು, ಆದಿವಾಸಿ ಬುಡಕಟ್ಟು ಜನಾಂಗಕ್ಕೆ ಸೇರಿದ ಸಮುದಾಯ ಇಂದು ಅಳಿವಿನಂಚಿನಲ್ಲಿದೆ. ಇವರ ಜನಸಂಖ್ಯೆ ಕ್ಷೀಣಿಸುತ್ತಿದೆ, ಮದ್ಯವ್ಯಸನಿಗಳಾಗಿ, ಅನಾರೋಗ್ಯ ಪೀಡಿತರಾಗಿ ಸಣ್ಣ ವಯಸ್ಸಿನಲ್ಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಆದಿವಾಸಿಗಳನ್ನು ಹೆಚ್ಚು ದುಡಿಸಿಕೊಳ್ಳಲಾಗುತ್ತಿದೆ, ಹೆಚ್ಚಿನ ಅವಧಿಯ ದುಡಿಮೆಗೆ ಕೂಲಿಗೆ ಬದಲಾಗಿ ಕಳಪೆ ಗುಣಮಟ್ಟದ ಮದ್ಯವನ್ನು ನೀಡಲಾಗುತ್ತಿದೆ. ಇದು ಆದಿವಾಸಿಗಳ ಜೀವನ ಕ್ರಮದ ಮೇಲೆ ಪರಿಣಾಮ ಬೀರುತ್ತಿದೆ. ಆದಿವಾಸಿಗಳು ಸೌಲಭ್ಯ ವಂಚಿತರಾಗಿದ್ದಾರೆ, ರಾಜಕೀಯ ಬಲವೂ ಇವರಿಗಿಲ್ಲ. ಆದಿವಾಸಿಗಳ ಕುರಿತು ಗಂಭೀರವಾಗಿ ಯೋಚನೆ ಮಾಡಬೇಕಾಗಿದೆ.
ನಿವೃತ್ತಿ ಜೀವನದಲ್ಲಿ ತಾವು ಕೃಷಿಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ಏನು ?
ಅಬ್ದುಲ್ ರಶೀದ್: ಪ್ರಕೃತಿಯೊಂದಿಗೆ ಜೀವನ ಕಳೆಯುವುದು ಖುಷಿ ಕೊಡುತ್ತದೆ. ಪ್ರಾಣಿ, ಪಕ್ಷಿ, ಗಿಡ, ಮರ, ನೀರು, ಹಸಿರು ಇದರೊಂದಿಗೆ ಜೀವನ ನಡೆಸಬೇಕು. ಇವುಗಳಿಂದ ಹೊಸ ವಿಚಾರ ಕಲಿತುಕೊಳ್ಳಬೇಕು ಎನ್ನುವ ಉದ್ದೇಶವೇ ಹೊರತು ಕೃಷಿ ಕಾರ್ಯ ಹೊಟ್ಟೆಪಾಡಿಗಾಗಿ ಅಲ್ಲ.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡಿಗರಿಗೆ ಹಾಗೂ ಕೊಡಗಿನವರಿಗೆ ನೀಡುವ ಸಂದೇಶ ಏನು ?
ಅಬ್ದುಲ್ ರಶೀದ್: ಮೇ 29 ಮತ್ತು 30ರಂದು ಸುಂಟಿಕೊಪ್ಪದಲ್ಲಿ ನಡೆಯುವ ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವರೂ ಆಗಮಿಸಿ ಯಶಸ್ವಿಗೊಳಿಸಿ, ಕನ್ನಡ ನಾಡು, ನುಡಿ, ಸಾಹಿತ್ಯವನ್ನು ಶ್ರೀಮಂತಗೊಳಿಸೋಣ.
ಪರಿಚಯ
ಎಚ್.ಎಂ.ಇಸ್ಮಾಯಿಲ್, ಫಾತಿಮಾ ದಂಪತಿಯ ಪುತ್ರನಾಗಿರುವ ಅಬ್ದುಲ್ ರಶೀದ್ ಅವರು ಸುಂಟಿಕೊಪ್ಪ, ಸಂಪಾಜೆ, ಮಾದಾಪುರ ಮತ್ತು ಮೈಸೂರಿನಲ್ಲಿ ಶಿಕ್ಷಣವನ್ನು ಪಡೆದಿದ್ದಾರೆ. ಇವರ ಕಾದಂಬರಿ, ಕಥಾ ಸಂಕಲನ, ಕವನ ಸಂಕಲನಗಳು ಕನ್ನಡದಲ್ಲಿ ಪ್ರಕಟಗೊಂಡಿವೆ.
ಕಾದಂಬರಿ: ಹೂವಿನಕೊಲ್ಲಿ
ಕಥಾ ಸಂಕಲನಗಳು: ಹಾಲು ಕುಡಿದ ಹುಡುಗ, ಪ್ರಾಣಪಕ್ಷಿ, ಸಂಪೂರ್ಣ ಪಾರಿಜಾತ, ಹೊತ್ತುಗೊತ್ತಿಲ್ಲದ ಕಥೆಗಳು, ಲಾರ್ಡ್ ಕಾರ್ನ್‌ವಾಲಿಸ್ ಮತ್ತು ಕ್ವೀನ್ ಎಲಿಜಬೆತ್, ಅಂತರ್ ರಾಷ್ಟ್ರೀಯ ಕುಂಬಳಕಾಯಿ
ಕವನ ಸಂಕಲನಗಳು: ನನ್ನ ಪಾಡಿಗೆ ನಾನು, ನರಕದ ಕೆನ್ನಾಲಿಗೆಯಂತಹ ನಿನ್ನ ಬೆನ್ನ ಹುರಿ.
ಅಂಕಣ-ಬರಹಗಳು: ಕಾಲುಚಕ್ರ, ಮೈಸೂರು ಪೋಸ್ಟ್, ಅಲೆಮಾರಿಯ ದಿನಚರಿ, ಮಾತಿಗೂ ಆಚೆ - ಸೃಜನಾತ್ಮಕ ಪ್ರಬಂಧಗಳು ಮತ್ತು ಅಂಕಣ ಬರಹಗಳು, ಲಕ್ಷದ್ವೀಪ ಡೈರಿ ಮಲಯಾಳದಲ್ಲಿ.
ಅನುವಾದಗಳು ಮತ್ತು ಸಾಹಿತ್ಯಿಕ ಕೊಡುಗೆ
ಕಥೆ, ಕವನಗಳು ಹಾಗೂ ಕಾದಂಬರಿಯ ಭಾಗಗಳು ಇಂಗ್ಲಿಷ್, ಸ್ವೀಡಿಷ್, ಜರ್ಮನ್, ಹಿಂದಿ ಹಾಗೂ ಇತರ ಪ್ರಮುಖ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಅಂಕಣ ಬರಹಗಾರರಾಗಿದ್ದು, ಮುಂಗಾರು, ಲಂಕೇಶ್ ಪತ್ರಿಕೆ, ಕನ್ನಡ ಪ್ರಭ, ವಿಜಯ ಕರ್ನಾಟಕ ಮತ್ತು ಉದಯವಾಣಿ ಪತ್ರಿಕೆಗಳಿಗೆ ವಾರಾಂತ್ಯ ಲೇಖನಗಳನ್ನು ಬರೆದಿದ್ದಾರೆ. ಜಗತ್ತಿನ ಪ್ರಸಿದ್ಧ ಲೇಖಕರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದು, ಹೆಮಿಂಗ್ವೇ, ರಿಲ್ಕೆ, ಕಾಮ್ಯೂ, ರೂಮಿ, ಪುಷ್ಕಿನ್ ಮುಂತಾದವರ ಕವಿತೆಗಳ ಅನುವಾದ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.
ಪ್ರಶಸ್ತಿಗಳು
ಅಬ್ದುಲ್ ರಶೀದ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಪ್ರಶಸ್ತಿ (1990), ಕರ್ನಾಟಕ ಸಾಹಿತ್ಯ ಅಕಾಡಮಿ ಸಾಹಿತ್ಯ ಶ್ರೀ ಪ್ರಶಸ್ತಿ(1990), ವರ್ಧಮಾನ ಪ್ರಶಸ್ತಿ (1990), ಲಂಕೇಶ್ ಪ್ರಶಸ್ತಿ (1997) ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಸ್ವರ್ಣ ಮಹೋತ್ಸವ ಪ್ರಶಸ್ತಿ (2004) ಲಭಿಸಿವೆ.






