ಕೊಪ್ಪಳ: ಹಾರ್ಮೋನಿಯಂ ನಾದದಲ್ಲಿ ಭಾವೈಕ್ಯದ ರಾಗ
ಪುರಾಣ ಪ್ರವಚನಕ್ಕೆ ಖಾಸಿಮ್ ಸಾಬ್ ಸಾಥ್: ಕಟ್ಟಡ ಕಾರ್ಮಿಕನ ಕಲಾಸೇವೆ

ಕೊಪ್ಪಳ: ಧರ್ಮಗಳು ಬೇರೆ ಬೇರೆಯಾಗಿದ್ದರೂ ಕಲೆ, ಸಂಸ್ಕೃತಿ ಮತ್ತು ಮಾನವೀಯತೆ ಜನರನ್ನು ಒಂದಾಗಿಸಬಲ್ಲವು ಎಂಬುದಕ್ಕೆ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಕಂಪ್ಲಿ ಪ್ರದೇಶದ ಬನಶಂಕರಿ ದೇವಸ್ಥಾನ ಸಾಕ್ಷಿಯಾಗಿದೆ.
ನವರಾತ್ರಿಯ ಒಂಬತ್ತು ದಿನಗಳ ಕಾಲ ದೇವಸ್ಥಾನದಲ್ಲಿ ನಡೆಯುವ ಪುರಾಣ ಪ್ರವಚನಕ್ಕೆ ಅದೇ ಗ್ರಾಮದ ಮುಸ್ಲಿಮ್ ಕಲಾವಿದ ಖಾಸಿಮ್ ಸಾಬ್ ನದಾಫ್ ಹಾರ್ಮೋನಿಯಂ ನುಡಿಸುವ ಮೂಲಕ ಸಾಥ್ ನೀಡುತ್ತಿದ್ದಾರೆ. ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಪರಂಪರೆ ಹಿಂದೂ-ಮುಸ್ಲಿಮ್ ಭಾವೈಕ್ಯತೆ ಮತ್ತು ಪರಸ್ಪರ ಗೌರವದ ಸಂದೇಶ ಸಾರುತ್ತಿದೆ.
ಪುರಾಣ ಪ್ರವಚನಕಾರ ಹನುಮಂತ ಗೌಡ ಗಾಳಿ ಅವರ ಪ್ರವಚನಕ್ಕೆ ಖಾಸಿಮ್ ಸಾಬ್ ಹಾರ್ಮೋನಿಯಂ ಮೂಲಕ ಸಂಗೀತದ ಮೆರುಗು ನೀಡುತ್ತಾರೆ. ಧಾರ್ಮಿಕ ಕಾರ್ಯಕ್ರಮಕ್ಕೆ ಸೇವೆ ಸಲ್ಲಿಸುವ ಕಲಾವಿದನನ್ನು ಗ್ರಾಮಸ್ಥರು ತಮ್ಮ ಮನೆಯ ಸದಸ್ಯನಂತೆ ಕಾಣುತ್ತಿದ್ದು, ಒಂಬತ್ತು ದಿನಗಳಲ್ಲೂ ಅವರನ್ನು ಆತ್ಮೀಯವಾಗಿ ಆಹ್ವಾನಿಸಿ ಔತಣ ನೀಡುತ್ತಾರೆ.
ಬನಶಂಕರಿ ದೇವಸ್ಥಾನದಲ್ಲಿ ಪುರಾಣ ಪ್ರವಚನ ನಡೆಯುವ ಸಂದರ್ಭದಲ್ಲಿ ಖಾಸಿಮ್ ಸಾಬ್ ಅವರ ಮನೆಯಲ್ಲಿಯೂ ವಿಶೇಷ ಶಿಸ್ತು ಪಾಲಿಸಲಾಗುತ್ತದೆ. ಪ್ರವಚನ ಆರಂಭಕ್ಕೂ ಮುನ್ನ ಮನೆಯನ್ನು ಸ್ವಚ್ಛಗೊಳಿಸುವ ಅವರು, ಕಾರ್ಯಕ್ರಮ ಮುಗಿಯುವವರೆಗೆ ಮಾಂಸಾಹಾರ ಅಡುಗೆ ಮಾಡುವುದಿಲ್ಲ ಹಾಗೂ ಸೇವಿಸುವುದಿಲ್ಲ. ಗ್ರಾಮದ ಧಾರ್ಮಿಕ ಪರಂಪರೆ ಮತ್ತು ಜನರ ಭಾವನೆಗಳಿಗೆ ಅವರು ನೀಡುವ ಗೌರವಕ್ಕೆ ಇದು ನಿದರ್ಶನವಾಗಿದೆ.
ದೊಡ್ಡಾಟಗಳಿಗೂ ಸಂಗೀತ: ಖಾಸಿಮ್ ಸಾಬ್ ಅವರ ಕಲಾಸೇವೆ ಬನಶಂಕರಿ ದೇವಸ್ಥಾನದ ಪುರಾಣ ಪ್ರವಚನಕ್ಕೆ ಮಾತ್ರ ಸೀಮಿತವಾಗಿಲ್ಲ. ಅಳವಂಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುವ ಪೌರಾಣಿಕ ದೊಡ್ಡಾಟಗಳಲ್ಲೂ ಅವರು ಹಾರ್ಮೋನಿಯಂ ನುಡಿಸುತ್ತಾರೆ. ‘ದೇವಿ ಮಹಾತ್ಮೆ’, ‘ಲವ-ಕುಶ ಕಾಳಗ’ ಸೇರಿದಂತೆ ಹಲವು ಪೌರಾಣಿಕ ದೊಡ್ಡಾಟಗಳಿಗೆ ಸಂಗೀತ ನಿರ್ದೇಶನ ನೀಡುತ್ತಾರೆ. ಗ್ರಾಮೀಣ ಜನಪದ ರಂಗಕಲೆಯ ಉಳಿವಿನಲ್ಲೂ ಇಂತಹ ಕಲಾವಿದರ ಕೊಡುಗೆ ಮಹತ್ವದ್ದಾಗಿದೆ.
ಕಟ್ಟಡ ಕಾರ್ಮಿಕನಿಂದ ಕಲಾಸೇವೆ: ಖಾಸಿಮ್ ಸಾಬ್ ಮೂಲತಃ ಕಟ್ಟಡ ಕಾರ್ಮಿಕರು. ದಿನನಿತ್ಯ ದುಡಿದು ಜೀವನ ಸಾಗಿಸುತ್ತಲೇ ಸಂಗೀತದ ಮೇಲಿನ ಆಸಕ್ತಿಯನ್ನು ಉಳಿಸಿಕೊಂಡಿದ್ದಾರೆ. ದುಡಿಮೆಯ ನಡುವೆಯೂ ಪುರಾಣ ಪ್ರವಚನ, ಜಾತ್ರೆ ಹಾಗೂ ಪೌರಾಣಿಕ ದೊಡ್ಡಾಟಗಳಿಗೆ ಸಂಗೀತ ಸೇವೆ ಸಲ್ಲಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳ ಇಂತಹ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ, ಆರ್ಥಿಕ ನೆರವು ಮತ್ತು ಸೂಕ್ತ ವೇದಿಕೆಗಳು ದೊರೆಯಬೇಕಿದೆ. ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ಸಾಂಸ್ಕೃತಿಕ ವೇದಿಕೆಗಳು ಅವರನ್ನು ಗುರುತಿಸಿ ಗೌರವಿಸುವ ಅಗತ್ಯವಿದೆ.
ಧಾರ್ಮಿಕ ಭಿನ್ನತೆಗಳ ನಡುವೆಯೂ ಪರಸ್ಪರರ ನಂಬಿಕೆಗಳಿಗೆ ಗೌರವ ನೀಡುತ್ತಾ ಬದುಕಬಹುದು ಎಂಬುದನ್ನು ಅಳವಂಡಿಯ ಈ ಪರಂಪರೆ ತೋರಿಸುತ್ತದೆ. ಇಲ್ಲಿ ಕಲಾವಿದನ ಧರ್ಮಕ್ಕಿಂತ ಆತನ ಕಲೆಗೆ ಮನ್ನಣೆ ದೊರೆಯುತ್ತಿದೆ.
‘ಖಾಸಿಮ್ ಸಾಬ್ ಒಬ್ಬ ಒಳ್ಳೆಯ ವ್ಯಕ್ತಿ. ಪ್ರತಿವರ್ಷ ನಮ್ಮ ಬನಶಂಕರಿ ದೇವಸ್ಥಾನದಲ್ಲಿ ಪುರಾಣ ಪ್ರವಚನ ನಡೆಯುತ್ತದೆ. ಅವರು ಕೂಡ ಅಲ್ಲಿಗೆ ಬಂದು ಒಳ್ಳೆಯ ಮನಸ್ಸಿನಿಂದ ಸೇವೆ ಮಾಡುತ್ತಾರೆ. ಇದು ಭಾವೈಕ್ಯತೆಯ ಸಂಕೇತವಾಗಿದೆ’ ಎಂದು ಗ್ರಾಮದ ಹಿರಿಯ ಮುಖಂಡ ಹನುಮಂತ ಗೌಡ ಗಾಳಿ ಹೇಳಿದ್ದಾರೆ.






