ಕೆಪಿಟಿಸಿಎಲ್‌ನಿಂದ ಪರಿಸರ ಸ್ನೇಹಿ ‘ಥೀಮ್ ಪಾರ್ಕ್’ ನಿರ್ಮಾಣ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಪ್ರಸರಣದ ಜವಾಬ್ದಾರಿ ಹೊತ್ತಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ತನ್ನ ಸಾಮಾಜಿಕ ಹೊಣೆಗಾರಿಕೆ ಯಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದೀಗ ಥೀಮ್ ಪಾರ್ಕ್ ಮೂಲಕ ಪರಿಸರ ಸಂರಕ್ಷಣೆ ಬಗ್ಗೆಯೂ ಕಾಳಜಿ ತೋರಿಸುತ್ತಿದೆ.
ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರತಿನಿಧಿಸುವ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಎಚ್‌ಬಿಆರ್ ಲೇಔಟ್‌ನಲ್ಲಿ ಪರಿಸರದ ಕಾಳಜಿ ಜತೆಗೆ ನಾಗರಿಕರ ಸಮುದಾಯ ಚಟುವಟಿಕೆಗಳಿಗೆ ಉತ್ತೇಜನ ನೀಡಲು ತನ್ನದೇ ಸ್ಥಳದಲ್ಲಿ ಥೀಮ್ ಪಾರ್ಕ್ ಸ್ಥಾಪಿಸಲು ನೀಲನಕ್ಷೆ ಸಿದ್ದಪಡಿಸಿ, ತ್ವರಿತಗತಿಯಲ್ಲಿ ಹಸಿರು ಪಥ ನಿರ್ಮಿಸಲಾಗುತ್ತಿದೆ.
ಸುಮಾರು 4.50 ಕೋಟಿ ರೂ.ವೆಚ್ಚದಲ್ಲಿ ಥೀಮ್‌ಪಾರ್ಕ್ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಸಾಲಿನ ಜನವರಿ ಅಥವಾ ಫೆಬ್ರವರಿ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ ಈ ಥೀಮ್ ಪಾರ್ಕ್ ಅನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಎಚ್‌ಬಿಆರ್ ಬಡಾವಣೆಯಲ್ಲಿರುವ ಕೆಪಿಟಿಸಿಎಲ್‌ನ 220/66/11 ಕೆವಿ ಜಿಐಎಸ್ ಉಪಕೇಂದ್ರದ ಪಕ್ಕದ ಸುಮಾರು ಒಂದೂ ಮುಕ್ಕಾಲು ಎಕರೆ ಖಾಲಿ ಜಾಗದಲ್ಲಿ ಥೀಮ್ ಪಾರ್ಕ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಮೊದಲು ನಿರ್ಲಕ್ಷಿತ ಪರಿಸರವಾಗಿ ಹಾವು ಚೇಳುಗಳು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿದ್ದ ಈ ಜಾಗ ಈಗ ಹೊಸರೂಪ ಪಡೆಯುತ್ತಿದೆ.
ಹಸಿರಿನ ಕುರಿತ ಕಾಳಜಿಯೊಂದಿಗೆ ಮಹತ್ವದ ಈ ಥೀಮ್ ಪಾರ್ಕ್ ಯೋಜನೆಯು ಕೇವಲ ಮನರಂಜನೆಯಷ್ಟೇ ಅಲ್ಲ, ಬದಲಾಗಿ ನೈಸರ್ಗಿಕ ಸಂರಕ್ಷಣೆ, ಆರೋಗ್ಯಕರ ಜೀವನಶೈಲಿ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗೆ ವೇದಿಕೆಯಾಗಲಿದೆ. ಪಾರ್ಕ್ ನಲ್ಲಿ ತ್ರಿಭುಜಾಕಾರದ ವಾಕ್ ಪಾಥ್(ನಡಿಗೆ ಪಥ), ಬಯಲು ರಂಗ ವೇದಿಕೆ, ಪ್ಯಾರಾಗೋಲಾ (ಗಜೀಬೊ), ಪನ್ ಜಿಮ್ ಸಹಿತ ಹಲವಾರು ಸೌಲಭ್ಯಗಳನ್ನು ಒಳಗೊಳ್ಳಲಿದೆ.
ಪಾರ್ಕ್‌ನ ವಿನ್ಯಾಸದಲ್ಲಿ ಈಗಿರುವ ಮರಗಳನ್ನು ಉಳಿಸಿ, ನೈಸರ್ಗಿಕ ಸೌಂದರ್ಯವನ್ನು ಕಾಪಾಡುವಲ್ಲಿ ವಿಶೇಷ ಕಾಳಜಿ ವಹಿಸಲಾಗಿದೆ. ಮಕ್ಕಳ ನೆಚ್ಚಿನ ಉಯ್ಯಾಲೆ, ಜಾರುಬಂಡೆ ಹಾಗೂ ಆಟದ ಉಪಕರಣಗಳೂ ಇರಲಿದೆ. ಹಿರಿಯರಿಗಾಗಿ ವಿಶ್ರಾಂತಿ ಸ್ಥಳಗಳು, ಕುಳಿತುಕೊಳ್ಳಲು ಕಲ್ಲಿನ ಆಸನಗಳನ್ನು ಅಳವಡಿಸಲಾಗುತ್ತಿದೆ. ಆರೋಗ್ಯ ಕಾಪಾಡಿಕೊಳ್ಳಲು ಈಗಾಗಲೆ ಜಿಮ್ ಉಪಕರಣಗಳನ್ನು ಅಳವಡಿಸಲಾಗಿದೆ. ಥೀಮ್ ಪಾರ್ಕ್ ನಲ್ಲಿ ಶೌಚಾಲಯ ವ್ಯವಸ್ಥೆ, ನಂದಿನಿ ಮಿಲ್ಕ್ ಬೂತ್ ಮತ್ತು ಹಾಪ್‌ಕಾಮ್ಸ್ ಮಾರಾಟ ಮಳಿಗೆಯ ಸೌಲಭ್ಯವನ್ನು ಕಲ್ಪಿಸುವ ಉದ್ದೇಶವಿರುವುದರಿಂದ ಪಾರ್ಕ್ ಬಳಕೆದಾರರಿಗೆ ಅಗತ್ಯ ವಸ್ತುಗಳು ಸುಲಭವಾಗಿ ಸಿಗುವಂತಾಗಲಿದೆ.
ಪಾರ್ಕ್ ನಿರ್ಮಾಣ ಕಾರ್ಯವು ಪ್ರಸಕ್ತ ಸಾಲಿನ ಫೆಬ್ರವರಿಯಲ್ಲಿ ಆರಂಭಗೊಂಡಿದ್ದು, ಉದ್ಘಾಟನೆ ಬಳಿಕ ಶಾಶ್ವತವಾಗಿ ಈ ಸ್ಥಳವು ಸಮುದಾಯಕ್ಕೆ ಮನೋರಂಜನೆ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗೆ ಕೇಂದ್ರ ಬಿಂದುವಾಗಲಿದೆ. ಪರಿಸರ ಸಂರಕ್ಷಣೆಯ ಗುರಿಯನ್ನೂ ಥೀಮ್‌ಪಾರ್ಕ್ ನಿರೂಪಿಸಲಿದೆ.
ರಾಜ್ಯದ ವಿದ್ಯುತ್ ಪ್ರಸರಣದಲ್ಲಿ ಪರಿಸರ ಪೂರಕ ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂದಿರುವ ನಿಗಮ, ಪರಿಸರ ಕಾಳಜಿಯ ಬದ್ಧತೆಯ ಭಾಗವಾಗಿ ಹಸಿರು ಥೀಮ್ ಪಾರ್ಕ್ ನಿರ್ಮಿಸುತ್ತಿದೆ. ಕೇವಲ ಉದ್ಯಾನ ಅಷ್ಟೇ ಅಲ್ಲದೇ ಕಲಾ ಚಟುವಟಿಕೆಗಳಿಗೂ ವೇದಿಕೆ ಕಲ್ಪಿಸುವ ಮೂಲಕ ಸಮುದಾಯ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.
-ಪಂಕಜ್ ಕುಮಾರ್ ಪಾಂಡೆ, ವ್ಯವಸ್ಥಾಪಕ ನಿರ್ದೇಶಕ, ಕೆಪಿಟಿಸಿಎಲ್
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಟಿಸಿಎಲ್ ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಥೀಮ್ ಪಾರ್ಕ್ ನಿರ್ಮಿಸುತ್ತಿದ್ದು, ಹಸಿರು ಪರಿಸರದ ಪರಿಕಲ್ಪನೆಯಲ್ಲಿ ಇದನ್ನು ಸ್ಥಾಪಿಸಲಾಗುತ್ತಿದೆ. ಕ್ಷೇತ್ರದ ಜನರಿಗೆ ಅನುಕೂಲ ಮಾಡಿಕೊಡುವುದರೊಂದಿಗೆ ಸಮಾಜಕ್ಕೆ ಹಸಿರಿನ ಮಹತ್ವವನ್ನು ತಿಳಿಸುವುದು ಈ ಥೀಮ್ ಪಾರ್ಕ್ ಸ್ಥಾಪಿಸುವ ಉದ್ದೇಶವಾಗಿದೆ.
-ಕೆ.ಜೆ.ಜಾರ್ಜ್, ಇಂಧನ ಸಚಿವ







