ಕೃಷ್ಣಾನಗರ ಕೋಟೆ: ಸಾಂಸ್ಕೃತಿಕ ಸಾಮರಸ್ಯದ ಪ್ರತೀಕ

ಸಂಡೂರು: ಜಿಲ್ಲೆಯ ಸಂಡೂರು ಪಟ್ಟಣದಿಂದ ಬಳ್ಳಾರಿ ಮಾರ್ಗದಲ್ಲಿ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಕೃಷ್ಣಾನಗರ ಕೋಟೆ, ಕರ್ನಾಟಕದ ಐತಿಹಾಸಿಕ ಕೋಟೆಗಳಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿರುವ ಅಪರೂಪದ ಕೋಟೆಯಾಗಿದೆ. ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಆಳ್ವಿಕೆಯ ಕಾಲದಲ್ಲಿ ನಿರ್ಮಾಣಗೊಂಡ ಈ ಕೋಟೆ ಕೇವಲ ರಕ್ಷಣಾ ಕಟ್ಟಡವಾಗಿ ಮಾತ್ರವಲ್ಲದೆ ಯುದ್ಧತಂತ್ರ, ವಾಸ್ತುಶಿಲ್ಪ, ಆಡಳಿತಾತ್ಮಕ ದೂರದೃಷ್ಟಿ ಹಾಗೂ ಸಾಂಸ್ಕೃತಿಕ ಸಾಮರಸ್ಯದ ಪ್ರತೀಕವಾಗಿ ಇಂದಿಗೂ ಹೆಮ್ಮೆಯಿಂದ ತಲೆಯೆತ್ತಿ ನಿಂತಿದೆ.
ಕೃಷ್ಣಾನಗರವು ಸಂಡೂರಿನ ಈಶಾನ್ಯ ದಿಕ್ಕಿನಲ್ಲಿ, ದೋಣಿಮಲೈ (ಎನ್‌ಎಂಡಿಸಿ) ಕಬ್ಬಿಣದ ಅದಿರು ಪ್ರದೇಶ, ಕುಮಾರಸ್ವಾಮಿ ಬೆಟ್ಟ ಹಾಗೂ ದೌಲತಾಬಾದ್ ಕೋಟೆಯಂತಹ ಐತಿಹಾಸಿಕ ಮತ್ತು ಭೌಗೋಳಿಕ ಮಹತ್ವದ ಪ್ರದೇಶಗಳ ಮಧ್ಯೆ ನೆಲೆಗೊಂಡಿದೆ. ಈ ಪ್ರದೇಶವು ಅಪಾರ ಪ್ರಮಾಣದ ಕಬ್ಬಿಣದ ಅದಿರು ಸಂಪತ್ತನ್ನು ಹೊಂದಿದ್ದು, ಇಂದಿಗೂ ಇಲ್ಲಿಂದ ಸಾವಿರಾರು ಟನ್‌ಗಳಷ್ಟು ಕಬ್ಬಿಣದ ಅದಿರು ದೇಶ-ವಿದೇಶಗಳಿಗೆ ರಫ್ತಾಗುತ್ತಿದೆ. ಸಮುದ್ರ ಮಟ್ಟದಿಂದ ಸುಮಾರು 2,400 ಅಡಿ ಎತ್ತರದಲ್ಲಿರುವ ಕುಮಾರಸ್ವಾಮಿ ಬೆಟ್ಟ, ದಟ್ಟ ಅರಣ್ಯ ಮತ್ತು ನೈಸರ್ಗಿಕ ಭೌಗೋಳಿಕ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡೇ ಈ ಕೋಟೆಯನ್ನು ನಿರ್ಮಿಸಲಾಗಿದೆ ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.
ಯುದ್ಧಗಳ ನಡುವೆ ಹುಟ್ಟಿದ ಬಲಿಷ್ಠ ಕೋಟೆ :
ಕ್ರಿ.ಶ. 1767-69ರ ಮೊದಲ ಆಂಗ್ಲ-ಮೈಸೂರು ಯುದ್ಧದ ನಂತರ ಹೈದರ್ ಅಲಿ ತನ್ನ ರಾಜ್ಯವನ್ನು ಉತ್ತರದ ಕಡೆಗೆ ವಿಸ್ತರಿಸಿ ಸವಣೂರು, ಕರ್ನೂಲು, ಕಡಪ ಹಾಗೂ ಸಂಡೂರು ಪ್ರದೇಶಗಳನ್ನು ತನ್ನ ಅಧೀನಕ್ಕೆ ತೆಗೆದುಕೊಂಡನು. ಉತ್ತರ ಗಡಿಯನ್ನು ಭದ್ರಪಡಿಸಲು ಮತ್ತು ಗೆದ್ದ ಪ್ರದೇಶಗಳನ್ನು ರಕ್ಷಿಸಲು ಬಲಿಷ್ಠ ಕೋಟೆಗಳ ಅಗತ್ಯವನ್ನು ಮನಗಂಡ ಹೈದರ್ ಅಲಿ, ಸುಮಾರು ಕ್ರಿ.ಶ. 1776ರಲ್ಲಿ ಕೃಷ್ಣಾನಗರ ಕೋಟೆಯ ನಿರ್ಮಾಣ ಆರಂಭಿಸಿದನೆಂದು ಐತಿಹಾಸಿಕ ಉಲ್ಲೇಖಗಳು ತಿಳಿಸುತ್ತವೆ.
ಕ್ರಿ.ಶ. 1779ರಲ್ಲಿ ಚಿತ್ರದುರ್ಗವನ್ನು ವಶಪಡಿಸಿಕೊಂಡ ಬಳಿಕ ಮೈಸೂರು ಸಾಮ್ರಾಜ್ಯ ಧಾರವಾಡ ಮತ್ತು ಬಳ್ಳಾರಿವರೆಗೆ ವಿಸ್ತರಿಸಿತು. ಈ ವಿಸ್ತಾರವಾದ ರಾಜ್ಯದ ರಕ್ಷಣೆಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಸೇನಾ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಕೃಷ್ಣಾನಗರ ಕೋಟೆಯಲ್ಲಿ ವಿಶೇಷ ಮದ್ದುಗುಂಡಿನ ಉಗ್ರಾಣಗಳನ್ನು ನಿರ್ಮಿಸಲಾಯಿತು.
ಆದರೆ ಎರಡನೇ ಆಂಗ್ಲ-ಮೈಸೂರು ಯುದ್ಧ ಆರಂಭವಾದ ಕಾರಣ ಕೋಟೆ ನಿರ್ಮಾಣ ಕೆಲಕಾಲ ಸ್ಥಗಿತಗೊಂಡಿತು. ಹೈದರ್ ಅಲಿಯ ಮರಣದ ನಂತರ ಟಿಪ್ಪು ಸುಲ್ತಾನ್ ಆಡಳಿತಕ್ಕೆ ಬಂದನು. ಮರಾಠರೊಂದಿಗಿನ ಸಂಘರ್ಷಗಳು ಹಾಗೂ ನಂತರದ ಮೂರನೇ ಆಂಗ್ಲ-ಮೈಸೂರು ಯುದ್ಧಕ್ಕೂ ಮುನ್ನ, ಅಂದರೆ ಸುಮಾರು ಕ್ರಿ.ಶ. 1790ರ ಒಳಗೆ ಕೋಟೆ ನಿರ್ಮಾಣ ಪೂರ್ಣಗೊಂಡಿರಬಹುದೆಂದು ಇತಿಹಾಸದ ಅಧ್ಯಯನಗಳು ಸೂಚಿಸುತ್ತವೆ.
ಮೂರು ಹಂತದ ಪ್ರವೇಶ-ಶತ್ರುಗಳಿಗೆ ದುರ್ಗಮ ರಕ್ಷಣಾ ವ್ಯವಸ್ಥೆ :
ಕೃಷ್ಣಾನಗರ ಕೋಟೆಯ ಅತ್ಯಂತ ವಿಶಿಷ್ಟ ಲಕ್ಷಣವೆಂದರೆ ಅದರ ಮೂರು ಹಂತದ ಪ್ರವೇಶ ವ್ಯವಸ್ಥೆ. ಪೂರ್ವ ದಿಕ್ಕಿನ ಮುಖ್ಯ ಕಮಾನಿನ ಬಾಗಿಲನ್ನು ದಾಟಿದ ಬಳಿಕ ಇನ್ನೆರಡು ಪ್ರತ್ಯೇಕ ಆವರಣ ಹಾಗೂ ಒಳಬಾಗಿಲುಗಳನ್ನು ದಾಟಿದಾಗ ಮಾತ್ರ ಕೋಟೆಯ ಕೇಂದ್ರ ಭಾಗಕ್ಕೆ ಪ್ರವೇಶ ಸಾಧ್ಯವಾಗುತ್ತದೆ. ಶತ್ರುಗಳು ಒಂದೇ ದಾಳಿಯಲ್ಲಿ ಕೋಟೆಯನ್ನು ವಶಪಡಿಸಿಕೊಳ್ಳದಂತೆ ರೂಪಿಸಲಾದ ಈ ವಿನ್ಯಾಸ, ಆ ಕಾಲದ ಅತ್ಯಾಧುನಿಕ ಸೇನಾ ತಂತ್ರಜ್ಞಾನದ ಉದಾಹರಣೆಯಾಗಿದೆ.
ಮುಖ್ಯ ಪ್ರವೇಶ ದ್ವಾರವು ಸುಮಾರು 15 ಅಡಿ ಅಗಲ ಮತ್ತು 20 ಅಡಿ ಎತ್ತರ ಹೊಂದಿದ್ದು, ಇಟ್ಟಿಗೆ ಹಾಗೂ ಸುಣ್ಣದ ಗಾರೆಯಿಂದ ನಿರ್ಮಿಸಲಾಗಿದೆ. ಅದರ ಮೇಲ್ಭಾಗದಲ್ಲಿ ಕಾವಲು ತೆನೆಗಳು, ಅಂಬುಗಂಡಿಗಳು ಹಾಗೂ ರಕ್ಷಣಾತ್ಮಕ ವಿನ್ಯಾಸಗಳನ್ನು ಕಾಣಬಹುದು.
ಕಲಾತ್ಮಕ ಕೆತ್ತನೆಗಳಿಂದ ಕಂಗೊಳಿಸುವ ಒಳಬಾಗಿಲುಗಳು :
ಒಳಬಾಗಿಲುಗಳು ವಾಸ್ತುಶಿಲ್ಪದ ದೃಷ್ಟಿಯಿಂದ ಅತ್ಯಂತ ಗಮನಾರ್ಹವಾಗಿವೆ. ಬಾಗಿಲಿನ ಕಲ್ಲಿನ ಚೌಕಟ್ಟುಗಳ ಮೇಲೆ ಪುಷ್ಪಾಲಂಕಾರ, ವ್ಯಾಳ, ಆನೆಯ ಸೊಂಡಿಲು, ಬಾಳೆಯ ಮೊಗ್ಗು, ವಜ್ರಾಕೃತಿ ವಿನ್ಯಾಸಗಳು ಹಾಗೂ ಸುರುಳಿ ಕೆತ್ತನೆಗಳನ್ನು ಅಚ್ಚುಕಟ್ಟಾಗಿ ಕೆತ್ತಲಾಗಿದೆ.
ಕೆಲವು ಗೋಡೆಗಳ ಮೇಲೆ ಕಾಮನಿರತ ಮಾನವ-ಪ್ರಾಣಿ ಶಿಲ್ಪಗಳು, ಮೀನು, ನವಿಲು, ಪಾರಿವಾಳ ಹಾಗೂ ಮಾನವಾಕೃತಿಗಳ ಉಬ್ಬುಶಿಲ್ಪಗಳು ಇಂದಿಗೂ ಸ್ಪಷ್ಟವಾಗಿ ಕಾಣುತ್ತವೆ. ಇವು ಹೈದರ್-ಟಿಪ್ಪು ಕಾಲದ ಕಲಾತ್ಮಕ ನೈಪುಣ್ಯವನ್ನು ಪ್ರತಿಬಿಂಬಿಸುತ್ತವೆ.
ರಹಸ್ಯ ದಿಡ್ಡಿ ಬಾಗಿಲು :
ಕೋಟೆಯ ದಕ್ಷಿಣ ಭಾಗದಲ್ಲಿರುವ ಕಿರಿದಾದ ದಿಡ್ಡಿ ಬಾಗಿಲು ವಿಶೇಷ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ. ಯುದ್ಧಕಾಲದಲ್ಲಿ ಮುಖ್ಯ ಬಾಗಿಲು ಶತ್ರುಗಳ ಮುತ್ತಿಗೆಯಲ್ಲಿದ್ದಾಗ ಸೈನಿಕರು ಅಥವಾ ನಾಗರಿಕರು ಸುರಕ್ಷಿತವಾಗಿ ಹೊರಬರಲು ಇದನ್ನು ಬಳಸುತ್ತಿದ್ದರೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಇಂದಿಗೂ ಸ್ಥಳೀಯರು ಈ ಮಾರ್ಗವನ್ನು ಬಳಸುತ್ತಿರುವುದು ಇದರ ಉಪಯುಕ್ತತೆಯನ್ನು ಸಾರುತ್ತದೆ.
19 ಕೊತ್ತಳಗಳು-ಸುತ್ತಮುತ್ತಲಿನ ಪ್ರದೇಶದ ಮೇಲಿನ ಸಂಪೂರ್ಣ ನಿಗಾ :
ಕೋಟೆಯ ಗೋಡೆಯುದ್ದಕ್ಕೂ ಒಟ್ಟು 19 ಬೃಹತ್ ಕೊತ್ತಳಗಳನ್ನು ನಿರ್ಮಿಸಲಾಗಿದೆ. ಪ್ರತಿಯೊಂದು ಕೊತ್ತಳದಲ್ಲೂ ಬಂದೂಕು ಹಾಗೂ ತೋಪುಗಳಿಗಾಗಿ ವಿಶೇಷ ಕಿಂಡಿಗಳು ಮತ್ತು ಸಂದಿಗಳಿವೆ. ಈಶಾನ್ಯ ಭಾಗದ ಒಂದು ಕೊತ್ತಳದಲ್ಲಿ ಆಂಜನೇಯನ ಉಬ್ಬುಶಿಲ್ಪವೂ ಕಂಡುಬರುತ್ತದೆ.
ಪಶ್ಚಿಮ ದಿಕ್ಕಿನ ಪ್ರಮುಖ ಕೊತ್ತಳ ಸುಮಾರು 70 ಅಡಿ ಎತ್ತರದಲ್ಲಿದ್ದು, ಅದರ ಮೇಲಿಂದ ಇಡೀ ಕೋಟೆ ಹಾಗೂ ಸುತ್ತಮುತ್ತಲಿನ ಪ್ರದೇಶ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಕೊತ್ತಳದ ಕೆಳಭಾಗದಲ್ಲಿರುವ ಆಯತಾಕಾರದ ಕಟ್ಟಡವನ್ನು ಸ್ಥಳೀಯರು ಮದ್ದುಗುಂಡಿನ ಉಗ್ರಾಣವೆಂದು ಗುರುತಿಸುತ್ತಾರೆ.
ಐದು ಮದ್ದುಗುಂಡಿನ ಉಗ್ರಾಣಗಳು-ಯುದ್ಧಕಾಲದ ಎಚ್ಚರಿಕೆಯ ವಾಸ್ತುಶಿಲ್ಪ :
ಕೋಟೆಯೊಳಗೆ ನಾಲ್ಕು ಪ್ರಮುಖ ಮದ್ದಿನ ಮನೆಗಳು ಇಂದಿಗೂ ಉಳಿದಿದ್ದು, ಐದು ಉಗ್ರಾಣಗಳ ನಿರ್ಮಾಣದ ಉಲ್ಲೇಖಗಳು ದೊರೆಯುತ್ತವೆ. ಇವುಗಳನ್ನು ಸ್ಥಳೀಯವಾಗಿ ಲದಾವಿ ಎಂದು ಕರೆಯುತ್ತಾರೆ.
ಪ್ರತಿ ಉಗ್ರಾಣವೂ ದಪ್ಪಗೋಡೆ, ಕಿರಿದಾದ ಕಮಾನಿನ ಬಾಗಿಲು, ಸಣ್ಣ ಕಿಟಕಿಗಳು ಹಾಗೂ ಇಳಿಜಾರು ಛಾವಣಿಯೊಂದಿಗೆ ನಿರ್ಮಾಣಗೊಂಡಿದೆ. ಒಂದು ಉಗ್ರಾಣದಲ್ಲಿ ಬೆಂಕಿ ಕಾಣಿಸಿಕೊಂಡರೂ ಅದು ಮತ್ತೊಂದಕ್ಕೆ ಹರಡದಂತೆ ವಿಶೇಷ ವಾಸ್ತು ವಿನ್ಯಾಸ ರೂಪಿಸಲಾಗಿದೆ. ಇದು ಹೈದರ್‌ಅಲಿಯ ಸೇನಾ ದೂರದೃಷ್ಟಿಯನ್ನು ತೋರಿಸುತ್ತದೆ.
ಕೋಟೆಯ ರಕ್ಷಣಾ ತಂತ್ರಜ್ಞಾನ :
ಸುಮಾರು ಎರಡು ಕಿಲೋಮೀಟರ್ ಸುತ್ತಳತೆ ಹೊಂದಿರುವ ಕೋಟೆಯ ಸುತ್ತ 35 ಅಡಿ ಅಗಲ ಹಾಗೂ 15 ಅಡಿ ಆಳದ ಅಗಳನ್ನು ನಿರ್ಮಿಸಲಾಗಿದೆ. ಕೋಟೆಯ ಗೋಡೆಗಳು 20ರಿಂದ 30 ಅಡಿ ಎತ್ತರವಾಗಿದ್ದು, ಹೊರಭಾಗವನ್ನು ಇಳಿಜಾರಾಗಿ ನಿರ್ಮಿಸಿರುವುದರಿಂದ ಶತ್ರುಗಳ ಗುಂಡುಗಳು ಹಾಗೂ ತೋಪಿನ ದಾಳಿಯ ಪರಿಣಾಮ ಕಡಿಮೆಯಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಕೋಟೆಯ ಗೋಡೆಗಳಲ್ಲಿ ಮೂರು ದಿಕ್ಕಿಗೆ ಗುಂಡು ಹಾರಿಸಲು ಅನುಕೂಲವಾಗುವ ಅಂಬುಗಂಡಿಗಳು ಹಾಗೂ ತೋಪಿನ ಸಂದಿಗಳನ್ನು ನಿರ್ಮಿಸಿರುವುದು ಆ ಕಾಲದ ರಕ್ಷಣಾ ತಂತ್ರಜ್ಞಾನದ ಗುಣಮಟ್ಟವನ್ನು ತೋರಿಸುತ್ತದೆ.
ಹಿಂದೂ-ಮುಸ್ಲಿಮ್ ವಾಸ್ತುಶೈಲಿಯ ಸಂಗಮ :
ಕೋಟೆಯೊಳಗೆ ರಾಮಸ್ವಾಮಿ, ಈಶ್ವರ, ಊರಮ್ಮ ಹಾಗೂ ತಾಯಮ್ಮ ದೇವಾಲಯಗಳು, ದರ್ಗಾಗಳು ಮತ್ತು ಮಸೀದಿಗಳು ಅಸ್ತಿತ್ವದಲ್ಲಿವೆ. ಇದು ವಿವಿಧ ಧರ್ಮಗಳ ಜನರು ಒಂದೇ ಕೋಟೆಯೊಳಗೆ ಸಹಬಾಳ್ವೆ ನಡೆಸಿದ ಐತಿಹಾಸಿಕ ಸಾಕ್ಷಿಯಾಗಿದೆ.
ನೀರಿನ ವ್ಯವಸ್ಥೆಗೂ ಆದ್ಯತೆ :
ಕೋಟೆಯ ಪೂರ್ವ ದ್ವಾರದ ಸಮೀಪ ಆಯತಾಕಾರದ ಬಾವಿಯನ್ನು ನಿರ್ಮಿಸಲಾಗಿದೆ. ಉತ್ತರ ದಿಕ್ಕಿನಿಂದ ಮೆಟ್ಟಿಲುಗಳ ಮೂಲಕ ಬಾವಿಗೆ ಇಳಿಯುವ ವ್ಯವಸ್ಥೆ ಇದ್ದು, ದೀರ್ಘಕಾಲದ ಮುತ್ತಿಗೆಯ ಸಂದರ್ಭದಲ್ಲಿಯೂ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಯೋಜಿಸಲಾಗಿತ್ತು.
ಇಂದಿನ ಸ್ಥಿತಿ :
ಕೋಟೆಯೊಳಗಿನ ಕೆಲವು ಮದ್ದಿನ ಮನೆಗಳನ್ನು ಸಾರ್ವಜನಿಕರಿಗೆ ಬಾಡಿಗೆ ಆಧಾರದ ಮೇಲೆ ನೀಡಲಾಗುತ್ತಿದೆ. ಕೆಲವೆಡೆ ಅವುಗಳನ್ನು ದವಸಧಾನ್ಯ ಸಂಗ್ರಹ, ಮೇವು ಇಡುವುದು ಹಾಗೂ ದನಕರುಗಳನ್ನು ಕಟ್ಟಲು ಬಳಸಲಾಗುತ್ತಿದೆ. ಇಂತಹ ಬಳಕೆಯಿಂದ ಐತಿಹಾಸಿಕ ಕಟ್ಟಡಗಳ ಸಂರಕ್ಷಣೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಇತಿಹಾಸಾಸಕ್ತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಪ್ರವಾಸೋದ್ಯಮದ ಅಪಾರ ಸಾಧ್ಯತೆ :
ಶ್ರೀರಂಗಪಟ್ಟಣ, ಮಂಜರಾಬಾದ್, ಚನ್ನರಾಯದುರ್ಗ ಹಾಗೂ ದೇವನಹಳ್ಳಿ ಕೋಟೆಗಳ ಅನೇಕ ವಾಸ್ತು ಲಕ್ಷಣಗಳನ್ನು ಕೃಷ್ಣಾನಗರ ಕೋಟೆಯಲ್ಲಿ ಕಾಣಬಹುದಾಗಿದೆ. ಆದರೂ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಈ ಕೋಟೆಗೆ ಇನ್ನೂ ಸಲ್ಲಬೇಕಾದ ಸ್ಥಾನ ದೊರೆತಿಲ್ಲ. ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಸಮನ್ವಯದಿಂದ ವೈಜ್ಞಾನಿಕ ಸಂರಕ್ಷಣೆ, ಮಾಹಿತಿ ಕೇಂದ್ರ, ಮಾರ್ಗದರ್ಶಕರ ವ್ಯವಸ್ಥೆ, ಬೆಳಕು ಅಲಂಕಾರ, ಸ್ವಚ್ಛತೆ ಹಾಗೂ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದರೆ ಕೃಷ್ಣಾನಗರ ಕೋಟೆ ರಾಜ್ಯದ ಪ್ರಮುಖ ಐತಿಹಾಸಿಕ ಪ್ರವಾಸಿ ತಾಣವಾಗಿ ರೂಪುಗೊಳ್ಳುವ ಎಲ್ಲ ಸಾಧ್ಯತೆಗಳಿವೆ.
ಸಂರಕ್ಷಣೆಯೇ ಮುಂದಿನ ಪೀಳಿಗೆಗೆ ಕೊಡುವ ನಿಜವಾದ ಕಾಣಿಕೆ :
ಸುಮಾರು ಎರಡು ಶತಮಾನಗಳ ಇತಿಹಾಸವನ್ನು ತನ್ನೊಳಗೆ ಹೊತ್ತಿರುವ ಕೃಷ್ಣಾನಗರ ಕೋಟೆ ವಿಜಯನಗರ ಜಿಲ್ಲೆಯ ಹೆಮ್ಮೆ ಮಾತ್ರವಲ್ಲ, ಕರ್ನಾಟಕದ ಸೇನಾ ಇತಿಹಾಸ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ಆಸ್ತಿಯಾಗಿದೆ. ಈ ಐತಿಹಾಸಿಕ ಸ್ಮಾರಕವನ್ನು ವೈಜ್ಞಾನಿಕವಾಗಿ ಸಂರಕ್ಷಿಸಿ, ಪ್ರವಾಸೋದ್ಯಮದ ನಕ್ಷೆಯಲ್ಲಿ ಪ್ರಮುಖ ಸ್ಥಾನ ಕಲ್ಪಿಸುವುದು ಸರಕಾರ, ಪುರಾತತ್ವ ಇಲಾಖೆ ಹಾಗೂ ಸಾರ್ವಜನಿಕರ ಸಮಾನ ಜವಾಬ್ದಾರಿಯಾಗಿದೆ. ಕೃಷ್ಣಾನಗರ ಕೋಟೆಯ ಸಂರಕ್ಷಣೆ ಎಂದರೆ ಕಲ್ಲಿನ ಗೋಡೆಗಳನ್ನು ಉಳಿಸುವುದಷ್ಟೇ ಅಲ್ಲ, ಕರ್ನಾಟಕದ ವೈಭವಯುತ ಇತಿಹಾಸವನ್ನು ಮುಂದಿನ ಪೀಳಿಗೆಗೆ ಜೀವಂತವಾಗಿ ತಲುಪಿಸುವ ಕಾರ್ಯವೂ ಆಗಿದೆ.
ಕೃಷ್ಣಾನಗರ ಕೋಟೆ ನಮ್ಮ ನಾಡಿನ ಐತಿಹಾಸಿಕ ಪರಂಪರೆ ಮತ್ತು ಮುಂದಿನ ಪೀಳಿಗೆಗೆ ಉಳಿಸಬೇಕಾದ ಅಮೂಲ್ಯ ಸಾಂಸ್ಕೃತಿಕ ಸಂಪತ್ತಾಗಿದೆ. ಈ ಕೋಟೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಭಾರತೀಯ ಪುರಾತತ್ವ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದು, ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು. ಕೋಟೆಯ ಸುತ್ತಮುತ್ತ ನಡೆದಿರುವ ಅತಿಕ್ರಮಣಗಳನ್ನು ತೆರವುಗೊಳಿಸಿ, ಕೋಟೆಯನ್ನು ಮೂಲ ಸ್ವರೂಪದಲ್ಲಿ ಉಳಿಸುವ ಕೆಲಸಕ್ಕೆ ಆದ್ಯತೆ ನೀಡಲಾಗುವುದು. ಕೋಟೆಯನ್ನು ಆವರಿಸಿರುವ ಅಗಳು (ಹಳ್ಳ) ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ, ವೈಜ್ಞಾನಿಕ ರೀತಿಯಲ್ಲಿ ಸಂರಕ್ಷಣೆ ಮಾಡುವ ಕಾರ್ಯವನ್ನು ತ್ವರಿತಗತಿಯಲ್ಲಿ ಆರಂಭಿಸಲು ಅಧಿಕಾರಿಗಳನ್ನು ಸಂಪರ್ಕಿಸಲಾಗುವುದು. ಕೃಷ್ಣಾನಗರ ಕೋಟೆಯನ್ನು ಕೇವಲ ಐತಿಹಾಸಿಕ ಸ್ಮಾರಕವಾಗಿ ಉಳಿಸುವುದಷ್ಟೇ ಅಲ್ಲ, ರಾಜ್ಯದ ಪ್ರಮುಖ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶವೂ ನಮ್ಮದಾಗಿದೆ. ಮುಂದಿನ ಪೀಳಿಗೆಗೆ ನಮ್ಮ ಇತಿಹಾಸವನ್ನು ಅಕ್ಷುಣ್ಣವಾಗಿ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳಲು ನಾನು ಬದ್ಧಳಾಗಿದ್ದೇನೆ.
ಅನ್ನಪೂರ್ಣ ಈ. ತುಕಾರಾಮ್, ಸಂಡೂರು ಶಾಸಕಿ
ಕೃಷ್ಣಾನಗರ ಕೋಟೆ ನಮ್ಮ ಪ್ರದೇಶದ ಅಮೂಲ್ಯ ಐತಿಹಾಸಿಕ ಪರಂಪರೆಯಾಗಿದ್ದು, ಇದರ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ತಾಲೂಕು ಪಂಚಾಯತ್ ಬದ್ಧವಾಗಿದೆ. ಕೋಟೆಯ ಸುತ್ತಲಿನ ಕಂದಕ (ಅಗಳು)ಗಳ ಸ್ವಚ್ಛತೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೈಗೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು. ಇದಕ್ಕಾಗಿ ಭಾರತೀಯ ಪುರಾತತ್ವ ಇಲಾಖೆ ಸೇರಿದಂತೆ ಸಂಬಂಧಿತ ಉನ್ನತ ಮಟ್ಟದ ಇಲಾಖೆಗಳ ಅನುಮತಿ ಪಡೆದು ನಿಯಮಾನುಸಾರ ಕಾಮಗಾರಿ ಆರಂಭಿಸಲಾಗುವುದು. ಗ್ರಾಮ ಪಂಚಾಯತ್ ಅನುದಾನ, ಗಡಿಭಾಗ ಅಭಿವೃದ್ಧಿ ಸೇರಿದಂತೆ ಲಭ್ಯವಿರುವ ವಿವಿಧ ಯೋಜನೆಗಳ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕೋಟೆ ಆವರಣದ ಸ್ವಚ್ಛತೆ, ಕಂದಕಗಳ ಪುನಶ್ಚೇತನ ಹಾಗೂ ಮೂಲಭೂತ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು. ಈ ಐತಿಹಾಸಿಕ ತಾಣದ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ವೈಜ್ಞಾನಿಕ ರೀತಿಯಲ್ಲಿ ಸಂರಕ್ಷಣೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಲು ಅಗತ್ಯ ಕ್ರಮಗಳನ್ನು ಜರುಗಿಸಲಾಗುವುದು.
ಮಡಗಿನಬಸಪ್ಪ, ಸಂಡೂರು ತಾಪಂ ಇಒ






