ಪ್ರಾಕೃತಿಕ ಸೌಂದರ್ಯದಿಂದ ಪ್ರವಾಸಿಗರ ಕಣ್ಮನ ಸೆಳೆಯುವ ಕುದುರೆಮುಖ

ಚಿಕ್ಕಮಗಳೂರು: ಕಾಫಿನಾಡಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕುದುರೆಮುಖವೂ ಒಂದು. ಹಿಂದೆ ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪೆನಿ ಇದ್ದ ಕಾರಣಕ್ಕೆ ರಾಜ್ಯ ಹಾಗೂ ದೇಶದ ಗಮನ ಸೆಳೆದಿತ್ತು. ರಾಜ್ಯದ ಪ್ರಮುಖ ಪ್ರವಾಸಿ ತಾಣವೂ ಆಗಿತ್ತು. ಪರಿಸರ ನಾಶದ ಕಾರಣಕ್ಕೆ ಕಂಪೆನಿ ತನ್ನ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿ ಹಲವು ದಶಕಗಳೇ ಕಳೆದಿವೆ. ಆದರೆ ಕುದುರೆಮುಖದ ರಮಣೀಯ ಪ್ರಾಕೃತಿಕ ಸೌಂದರ್ಯ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.
ಪಶ್ಚಿಮಘಟ್ಟ ಗಿರಿಶ್ರೇಣಿಗಳ ಸಾಲಿಗೆ ಸೇರಿರುವ ಕುದುರೆಮುಖ ಹಚ್ಚ ಹಸಿರಿನ ನುಣುಪಾದ ಬೆಟ್ಟಗುಡ್ಡಗಳ ಗಿರಿಶ್ರೇಣಿಗಳ ತಾಣವಾಗಿದೆ. ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾಣ ಸಿಗುವ ಬೆಟ್ಟಗುಡ್ಡಗಳ ಸಾಲು ನೋಡುಗರ ಮನಸೂರೆಗೊಳ್ಳುತ್ತಿದೆ. 70ರ ದಶಕದಲ್ಲಿ ಕುದುರೆಮುಖ ಅದಿರು ಕಂಪೆನಿ ಆರಂಭವಾದ ಸಂದರ್ಭ ಕಬ್ಬಿಣದ ಅದಿರು ಸಂಸ್ಕರಿಸಿದ ತ್ಯಾಜ್ಯವನ್ನು ಸಂಗ್ರಹಿಸುವ ಉದ್ದೇಶದಿಂದ ಕುದುರೆಮುಖದಲ್ಲಿ ಸಣ್ಣದಾದ ಲಕ್ಯಾ ಡ್ಯಾಂ ನಿರ್ಮಿಸಲಾಗಿತ್ತು. ಈ ಡ್ಯಾಂನಲ್ಲಿ ಸದ್ಯ ಕಬ್ಬಿಣದ ಅದಿರಿನ ಹೂಳು ಸಂಗ್ರಹವಾಗಿದ್ದು, ಒಂದಷ್ಟು ಭಾಗದ ನೀರು ಆವರಿಸಿಕೊಂಡಿದೆ. ಈ ಡ್ಯಾಮ್ ಕೂಡ ಸದ್ಯ ಕುದುರೆಮುಖದ ಆಕರ್ಷಣೆಯಾಗಿದ್ದು, ಡ್ಯಾಂನ ಆರಂಭದಲ್ಲಿ ಕಾಣಸಿಗುವ ಹೂಳು ಮತ್ತು ಅದರ ಹಿಂದೆ ಕಾಣುವ ನೀರು ಮತ್ತು ಇಡೀ ಡ್ಯಾಂನ ಹಿನ್ನೆಲೆಯಲ್ಲಿ ಕಂಡು ಬರುವ ನುಣುಪಾದ ಗಿರಿಶ್ರೇಣಿಗಳ ಸಾಲು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಸುಮಾರು 5 ದಶಕಗಳ ಇತಿಹಾಸ ಹೊಂದಿರುವ ಲಕ್ಯಾ ಡ್ಯಾಂ ಹಾಗೂ ಅದರ ಹಿನ್ನೆಲೆಯಲ್ಲಿ ಕಂಡು ಬರುವ ಸುಂದರ ಪರಿಸರ ಅನೇಕ ಸಿನೆಮಾಗಳ ಶೂಟಿಂಗ್‌ಗೆ ಹೇಳಿ ಮಾಡಿಸಿದ ತಾಣವಾಗಿದ್ದು, ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿದಂತೆ ಅನೇಕ ಸಿನೆಮಾಗಳ ಹಲವಾರು ದೃಶ್ಯಗಳು, ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಸಿನೆಮಾ ಶೂಟಿಂಗ್ ಇಲ್ಲಿ ಸಾಮಾನ್ಯವಾಗಿದ್ದು, ಇದಕ್ಕೆ ಕಾರಣ ಇಲ್ಲಿನ ಮನಮೋಹಕ ಪರಿಸರವಾಗಿದೆ.
ಕುದುರೆಮುಖ ಅದಿರು ಕಂಪೆನಿ ಕಾರಣದಿಂದಾಗಿ ದೇಶಾದ್ಯಂತ ಖ್ಯಾತಿ ಗಳಿಸಿದ್ದ ಕುದುರೆಮುಖದಲ್ಲಿ ಸದ್ಯ ಕಂಪೆನಿ ತನ್ನ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿದ್ದರೂ ಪ್ರವಾಸಿಗರಿಂದ ಕುದುರೆಮುಖ ಇನ್ನೂ ದೂರವಾಗಿಲ್ಲ. ಪ್ರತಿನಿತ್ಯ ಇಲ್ಲಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತ ಕಂಪೆನಿಯ ಗತಕಾಲದ ಕುರುಹುಗಳನ್ನು ಕಾಣುವುದರೊಂದಿಗೆ ಮುಗಿಲೆತ್ತರದ ಗಿರಿಶ್ರೇಣಿಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಕುದುರೆಮುಖ ಪೀಕ್ ರಾಜ್ಯದ ಎರಡನೇ ಎತ್ತರ ಗಿರಿಶ್ರೇಣಿ ಎಂಬ ಖ್ಯಾತಿಗೆ ಪಾತ್ರವಾಗಿದ್ದು, ಕುದುರೆಮುಖ ಪೀಕ್‌ಗೆ ಚಾರಣಕ್ಕೆ ಅರಣ್ಯ ಇಲಾಖೆ ಅವಕಾಶ ಕಲ್ಪಿಸುತ್ತಿದೆ. ಇಲ್ಲಿಗೆ ಚಾರಣಕ್ಕೆ ಹೋಗುವವರು ಮುಂಚಿತವಾಗಿ ಅರಣ್ಯ ಇಲಾಖೆಯಲ್ಲಿ ನೋಂದಾಯಿಸಿಕೊಂಡು ಹೋಗಬಹುದಾಗಿದೆ. ಚಾರಣದೊಂದಿಗೆ ಅಪರೂಪದ ವನ್ಯಜೀವಿಗಳು, ಸುಂದರ ಗಿರಿಶ್ರೇಣಿಗಳಲ್ಲಿನ ಮಳೆ ನೀರು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯದ ಹುಲ್ಲುಗಾವಲು, ವೈವಿಧ್ಯಮಯ ಗಿಡ ಮರಗಳನ್ನು ಕಾಣಬಹುದಾಗಿದೆ. ಹಚ್ಚ ಹಸಿರಿನ ನಿಸರ್ಗ ತಾಣವಾಗಿರುವ ಕುದುರೆಮುಖ ಕರ್ನಾಟಕದ ಊಟಿ ಎಂದರೆ ತಪ್ಪಾಗಲಾರದು.







